For Quick Alerts
ALLOW NOTIFICATIONS  
For Daily Alerts

ಮೈ ಕೈ ನೋವೇ? ಹಾಗಾದರೆ ಔಷಧಿಗಳನ್ನು ಪಕ್ಕಕ್ಕೆ ಇಡಿ, ಈ 8 ಟ್ರಿಕ್ಸ್ ಅನುಸರಿಸಿ ಸಾಕು!

|

ಮೈ ಕೈ ನೋವು ಎಂದು ನಾವು ಒಟ್ಟಾರೆಯಾಗಿ ಕರೆಯುವ ಈ ತೊಂದರೆ ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ದಿನ ಬಾಧಿಸಿಯೇ ಇದೆ. ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲದ ಈ ನೋವು ನಿತ್ಯದ ಚಟುವಟಿಕೆಗಳಿಗೆ ತೊಂದರೆ ಒಡ್ಡಬಹುದು. ನೋವು ಎಂದರೆ ಇದಕ್ಕೆ ಗಾಯ, ಕಾಯಿಲೆ, ಸೋಂಕು, ಶಸ್ತ್ರಕ್ರಿಯೆ, ಔಷಧಿಗಳ ಅಡ್ಡ ಪರಿಣಾಮ, ವಿಪರೀತ ಶ್ರಮ ಮೊದಲಾದ ಕಾರಣಗಳಿರಬಹುದು. ನೋವಿಗೆ ನಿಜವಾದ ಕಾರಣ, ಯಾವ ಭಾಗದಲ್ಲಿ ನೋವು ಎದುರಾಗಿದೆ, ವ್ಯಕ್ತಿಯ ಆರೋಗ್ಯ ಸ್ಥಿತಿ ಹೇಗಿದೆ, ವಯಸ್ಸು, ಲಿಂಗ ಮೊದಲಾದ ಅಂಶಗಳನ್ನು ಆಧರಿಸಿ ಈ ನೋವು ಸಹಾ ವ್ಯತ್ಯಾಸಗೊಳ್ಳುತ್ತದೆ.

ಉದಾಹರಣೆಗೆ, ಮೊಣಕಾಲಿಗೆ ಬಿದ್ದು ಆದ ಗಾಯದಿಂದಾದ ನೋವಿಗೂ ಮೈಗ್ರೇನ್ ತಲೆನೋವಿಗೂ ವ್ಯತ್ಯಾಸವಿದೆ. ಆದರೆ ನೋವಿನ ಪ್ರಮಾಣ ಸಮಾನವಾಗಿರಬಹುದು. ಸಾಮಾನ್ಯವಾಗಿ ನೋವು ಈ ಕಾರಣಗಳ ಹೊರತಾಗಿ ಅಂಗಾಂಶ, ಸ್ನಾಯು ಅಥವಾ ನರಗಳ ಉರಿಯೂತದ ಮೂಲಕವೂ ಎದುರಾಗಬಹುದು. ಹಾಗಾಗಿ ನೋವು ಎದುರಾದರೆ ಈ ನೋವನ್ನು ಕಡಿಮೆಗೊಳಿಸಲು ವೈದ್ಯರು ನೋವು ನಿವಾರಕ ಗುಳಿಗೆಗಳನ್ನು ನೀಡಬಹುದು. ವಾಸ್ತವವಾಗಿ ಈ ಮಾತ್ರೆಗಳು ನರಗಳ ಉರಿಯೂತವನ್ನು ಕಡಿಮೆ ಮಾಡುವ ಕೆಲಸವನ್ನು ನಿರ್ವಹಿಸುತ್ತವೆ.

ಆದರೆ ಅತಿ ಪ್ರಬಲವಾದ ಈ ಮಾತ್ರೆಗಳು ಕೆಲವಾರು ರಾಸಾಯನಿಕಗಳಿಂದ ತಯಾರಿಸಲ್ಪಟ್ಟಿದ್ದು ಆ ಸಮಯದಕ್ಕೆ ನೋವಿನಿಂದ ಮುಕ್ತಿ ನೀಡಿದರೂ ದೀರ್ಘಕಾಲದ ಬಳಕೆಯಿಂದ ದೇಹಕ್ಕೆ ಹಾನಿಯುಂಟುಮಾಡಬಹುದು. ಹಾಗಾಗಿ ನೋವನ್ನು ತಡೆದುಕೊಳ್ಳಲು ಸಾಧ್ಯವೇ ಇಲ್ಲವೆನ್ನುವಷ್ಟು ಪ್ರಬಲವಾಗಿದ್ದರೆ ಮಾತ್ರವೇ ಅನಿವಾರ್ಯವಾಗಿ ಮಾತ್ರೆಗಳ ನೆರವನ್ನು ಪಡೆಯಬಹುದೇ ಹೊರತು ಇತರ ಸಾಮಾನ್ಯ ನೋವುಗಳಿಗೆ ನೈಸರ್ಗಿಕ ಉಪಶಮನವೇ ಸಾಕಷ್ಟಾಗುತ್ತದೆ. ಬನ್ನಿ, ನಿಸರ್ಗ ಈ ನೋವುಗಳನ್ನು ನಿವಾರಿಸಲು ನೀಡಿರುವ ಕೆಲವು ವಿಧಾನಗಳ ಬಗ್ಗೆ ಅರಿಯೋಣ..
*ಆಕ್ಯುಪಂಕ್ಚರ್
*ವ್ಯಾಯಾಮ
*ಮೆಡಿಟರೇನಿಯನ್ ಆಹಾರ ವಿಧಾನ
*ಸೆಳೆತದ ವ್ಯಾಯಾಮ
*ವಿಟಮಿನ್ ಡಿ
*ಅರಿವು ವರ್ತನಾ ಚಿಕಿತ್ಸೆ (Cognitive Behavioural Therapy)
*ಅರಿಶಿನ
*ಕಾಫಿ

1. ಆಕ್ಯುಪಂಕ್ಚರ್

1. ಆಕ್ಯುಪಂಕ್ಚರ್

ಕ್ಯಾಲಿಫೋರ್ನಿಯಾದಲ್ಲಿರುವ Scripps Center For Integrative Medicine ಎಂಬ ಸಂಸ್ಥೆಯ ನೋವು ನಿರ್ವಹಣಾ ವಿಭಾಗದಲ್ಲಿ ನಡೆಸಿದ ಅಧ್ಯಯನವೊಂದರಲ್ಲಿ ನೋವನ್ನು ನೈಸರ್ಗಿಕವಾಗಿ ನಿವಾರಿಸಲು ಆಕ್ಯುಪಂಕ್ಚರ್ ವಿಧಾನ ಅತ್ಯಂತ ಸಮರ್ಥ ಎಂದು ವರದಿ ಮಾಡಲಾಗಿದೆ. ಈ ಚಿಕಿತ್ಸೆಯ ಮೂಲಕ ನೋವಿನ ಕಾರಣಕ್ಕೆ ಮೆದುಳು ನೀಡುವ ಪ್ರತಿಕ್ರಿಯೆಗಳ ಮೇಲೆ 'ಅರಿವು ವರ್ತನಾ ಬಗೆ' (cognitive behavioural patterns) ಯನ್ನು ಬದಲಿಸುವ ಮೂಲಕ ನೋವನ್ನು ಇಲ್ಲವಾಗಿಸಲು ಸಾಧ್ಯವಾಗುತ್ತದೆ. ಈ ಚಿಕಿತ್ಸೆಯ ಮೂಲಕ ವ್ಯಕ್ತಿ ತನ್ನ ದೇಹದ ನೋವನ್ನು ಸಹಿಸಲು ಸಾಧ್ಯವಾಗುವಷ್ಟು ಮಾನಸಿಕವಾಗಿ ದೃಢರಾಗುತ್ತಾರೆ.

2. ವ್ಯಾಯಾಮ

2. ವ್ಯಾಯಾಮ

ನಿಯಮಿತವಾಗಿ ಮಾಡುವ ಯಾವುದೇ ವ್ಯಾಯಾಮ ಆರೋಗ್ಯಕ್ಕೆ ಒಳ್ಳೆಯದು ಹಾಗೂ ಇದರಿಂದ ಹಲವಾರು ಕಾಯಿಲೆಗಳನ್ನು ದೂರವಿಡಬಹುದು. ಇದರಲ್ಲಿ ನೋವು ಸಹಾ ಒಂದು. ನೋವು ನಿವಾರಕವಾಗಿ ಕೆಲವು ಸುಲಭ ವ್ಯಾಯಾಮ ಮತ್ತು ಯೋಗಾಸನಗಳನ್ನು ಅನುಸರಿಸಬಹುದು. ಉದಾಹರಣೆಗೆ ಏರೋಬಿಕ್ಸ್ ವ್ಯಾಯಾಮದ ಮೂಲಕ ದೇಹದ ಸ್ನಾಯುಗಳಿಗೆ ಸಂಬಂಧಿಸಿದ ನೋವು ಕಡಿಮೆಯಾಗುತ್ತದೆ. ಅಲ್ಲದೇ ಈ ಸಮಯದಲ್ಲಿ ಮೆದುಳಿನಲ್ಲಿ ಬಿಡುಗಡೆಯಗುವ ಎಂಡಾರ್ಫಿನ್ ಎಂಬ ರಸದೂತಗಳು ಸಹಾ ನೋವು ಮತ್ತು ಉರಿಯೂತವನ್ನು ಕಡಿಮೆಗೊಳಿಸಬಲ್ಲವು. ದೈಹಿಕ ವ್ಯಾಯಾಮ ಮೈ ಮನಸ್ಸಿಗೆ ಹಿತಕಾರಿ

 3. ಮೆಡಿಟರೇನಿಯನ್ ಆಹಾರ ವಿಧಾನ

3. ಮೆಡಿಟರೇನಿಯನ್ ಆಹಾರ ವಿಧಾನ

Brazilian researchers ಎಂಬ ಸಂಶೋಧನಾ ಸಮೂಹ ಒಂದು ಅಧ್ಯಯನದಲ್ಲಿ ಕಂಡುಕೊಂಡಿರುವ ಪ್ರಕಾರ ಮೆಡಿಟರೇನಿಯನ್ ಆಹಾರ ವಿಧಾನವನ್ನು ಅನುಸರಿಸುವ ಮೂಲಕ ನೋವನ್ನು ನೈಸರ್ಗಿಕವಾಗಿ ಕಡಿಮೆ ಮಾಡಬಹುದು. ಈ ಆಹಾರದಲ್ಲಿ ಸಾಕಷ್ಟು ಪ್ರಮಾಣದ ಹಸಿ ತರಕಾರಿ, ಹಣ್ಣುಗಳು, ಆಲಿವ್ ಎಣ್ಣೆ, ಒಣಫಲಗಳು ಹಾಗೂ ಮೀನು ಇರುತ್ತದೆ. ಈ ಆಹಾರದಲ್ಲಿ ಸಕ್ಕರೆ ಅತಿ ಕಡಿಮೆ ಪ್ರಮಾಣದಲ್ಲಿದ್ದು ಒಮೆಗಾ ೩ ಕೊಬ್ಬಿನ ಆಮ್ಲಗಳು ಹೆಚ್ಚಿನ ಪ್ರಮಣದಲ್ಲಿರುತ್ತವೆ. ಈ ಎರಡು ಅಂಶಗಳು ದೇಹದಲ್ಲಿ ನೋವನ್ನು ಕಡಿಮೆ ಮಾಡಲು ಪ್ರಮುಖ ಪಾತ್ರ ವಹಿಸುತ್ತವೆ.

4. ಸೆಳೆತದ ವ್ಯಾಯಾಮ

4. ಸೆಳೆತದ ವ್ಯಾಯಾಮ

ಕೆಲವು ನಿರ್ದಿಷ್ಟ ನೋವುಗಳಿಗೆ ಸುಲಭ ಸೆಳೆತದ ವ್ಯಾಯಾಮಗಳೇ ನೋವು ನಿವಾರಕವಾಗಿ ಕೆಲಸ ಮಾಡುತ್ತವೆ. ಸ್ನಾಯುಗಳ ಸೆಡೆತ, ಮೂಳೆಗಳ ಸಂಧುಗಳಿಗೆ ಆದ ಪೆಟ್ಟು, ಉಳುಕು, ಸಂಧಿವಾತ ಮೊದಲಾದ ನೋವುಗಳಿಗೆ ಆ ನೋವನ್ನು ಕೊಂಚವೇ ಹೆಚ್ಚಿಸುವಂತೆ ನಿಧಾನವಾಗಿ ಸೆಳೆಯುವಂತೆ ಮಾಡುವ ಸರಳ ವ್ಯಾಯಾಮಗಳ ಮೂಲಕ ನೋವನ್ನು ಕಡಿಮೆ ಮಾಡಬಹುದು. ಸೆಳೆತದ ಸಮಯದಲ್ಲಿ ಕೊಂಚ ನೋವು ಹೆಚ್ಚಿದರೂ ಸರಿ, ನಿತ್ಯವೂ ಕೊಂಚ ಕೊಂಚವಾಗಿ ಹೀಗೇ ಮುಂದುವರೆಸಿಕೊಂಡು ಹೋದರೆ ಕೆಲವೇ ದಿನಗಳಲ್ಲಿ ಉರಿಯೂತ ಕಡಿಮೆಯಾಗಿ ಸೆಳೆತ ಮತ್ತು ಸೆಡೆತವೂ ಕಡಿಮೆಯಾಗುತ್ತದೆ ಹಾಗೂ ನೋವು ನೈಸರ್ಗಿಕವಾಗಿ ಇಲ್ಲವಾಗುತ್ತದೆ.

5. ವಿಟಮಿನ್ ಡಿ

5. ವಿಟಮಿನ್ ಡಿ

ಉತ್ತಮ ಆರೋಗ್ಯಕ್ಕಾಗಿ ಉತ್ತಮ ಆಹಾರವೂ ಅಗತ್ಯವಾಗಿದ್ದು ವಿವಿಧ ಬಗೆಯ ವಿಟಮಿನ್ನುಗಳೂ ನಮ್ಮ ಆಹಾರದಲ್ಲಿ ಒಳಗೊಂಡಿರಬೇಕು.ನಮ್ಮ ದೇಹದ ಹಲವಾರು ಕಾರ್ಯಗಳಿಗೆ ಅಗತ್ಯವಾದ ವಿಟಮಿನ್ ಡಿ ಅಗತ್ಯವಾಗಿದ್ದು ನೋವು ನಿವಾರಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ವಿಟಮಿನ್ ಡಿ ಯಲ್ಲಿ ಉರಿಯೂತ ನಿವಾರಕ ಗುಣವಿದ್ದು ವಿಶೇಷವಾಗಿ ಮೂಳೆಗಳು ಮತ್ತು ಮೂಳೆಗಳ ಕೀಲುಗಳಲ್ಲಿ ಎದುರಾದ ಉರಿಯೂತವನ್ನು ನಿವಾರಿಸಲು ನೆರವಾಗುತ್ತದೆ. ಈ ಭಾಗ ಹಾಗೂ ದೇಹದ ಪ್ರಮುಖ ಗಂಟುಗಳಲ್ಲಿ ಎದುರಾದ ನೋವಿನಿಂದ ಮುಕ್ತಿ ಪಡೆಯಲು ವಿಟಮಿನ್ ಡಿ ಇರುವ ಆಹಾರಗಳನ್ನು ಹೆಚ್ಚು ಹೆಚ್ಚಾಗಿ ಸೇವಿಸಬೇಕು.

6. ಅರಿವು ವರ್ತನಾ ಚಿಕಿತ್ಸೆ (Cognitive Behavioural Therapy)

6. ಅರಿವು ವರ್ತನಾ ಚಿಕಿತ್ಸೆ (Cognitive Behavioural Therapy)

CBTಎಂಬ ಹೃಸ್ವರೂಪದಲ್ಲಿ ಕರೆಯಲಾಗುವ ಈ ಚಿಕಿತ್ಸೆ ಮಾನಸಿಕಾ ಚಿಕಿತ್ಸೆ (psychotherapeutic) ವಿಧಾನವನ್ನು ಅನುಸರಿಸುತ್ತದೆ ಹಾಗೂ ಈ ಮೂಲಕ ದೇಹ ಮತ್ತು ಮನಸ್ಸಿಗೆ ಸಂಬಂಧಿಸಿದ ತೊಂದರೆಗಳನ್ನು ಸರಿಪಡಿಸಲು ಸಾಧ್ಯವಾಗುತ್ತದೆ. ಈ ಚಿಕಿತ್ಸೆಗೆ ನಿಯಮಿತವಾಗಿ ಒಳಪಡುವ ಮೂಲಕ ನೋವಿನ ಬದಲಾವಣೆಗೆ ಮೆದುಳಿನ ಪ್ರತಿಕ್ರಿಯೆ ಸಹಾ ಬದಲಾವಣೆಗೊಳ್ಳುತ್ತಾ ಹೋಗುತ್ತದೆ. ಸಾಮಾನ್ಯವಾಗಿ ನೋವು ಎಂದರೆ ಮೆದುಳು ಗ್ರಹಿಸುವ ಸಂಕೇತಗಳೇ ಆಗಿದ್ದು CBTಚಿಕಿತ್ಸೆಯಿಂದ ಈ ಸಂಕೇತಗಳನ್ನು ಹೇಗೆ ನಿರ್ವಹಿಸಬೇಕೆಂಬ ತರಬೇತಿಯನ್ನು ಮೆದುಳು ಪಡೆಯುತ್ತದೆ ಹಾಗೂ ದೇಹದ ನೋವನ್ನು ಎದುರಿಸಲು ಹಾಗೂ ಸಹಿಸಿಕೊಳ್ಳಲು ಇನ್ನೂ ಉತ್ತಮವಾಗಿ ಮೆದುಳನ್ನು ಸಿದ್ಧ ಪಡಿಸುವುದು ಈ ಚಿಕಿತ್ಸೆಯ ವಿಧಾನವಾಗಿದೆ.

7. ಅರಿಶಿನ

7. ಅರಿಶಿನ

ನಮ್ಮ ಅಡುಗೆಯಲ್ಲಿ ರುಚಿಕಾರಕ ಮಸಾಲೆ ವಸ್ತುವಾಗಿ ಬಳಸಲಾಗುವ ಅರಿಶಿನ ಹಲವಾರು ಕಾಯಿಲೆಗಳಿಗೆ ಸಿದ್ಧರೂಪದ ಔಷಧಿಯೂ ಆಗಿದೆ. ಸಾಮಾನ್ಯ ಫ್ಲೂ ಜ್ವರದಿಂದ ತೊಡಗಿ ಚರ್ಮವ್ಯಾಧಿಗಳ ಚಿಕಿತ್ಸೆಯೂ ಅರಿಶಿನ ಬಳಕೆಯಾಗುತ್ತದೆ. ಅರಿಶಿನವನ್ನು ಸೇವಿಸುವ ಹಾಗೂ ನೋವಿರುವ ಭಾಗಕ್ಕೆ ಲೇಪದ ರೂಪದಲ್ಲಿ ಹಚ್ಚಿಕೊಳ್ಳುವ ಮೂಲಕವೂ ಚಿಕಿತ್ಸೆ ಪಡೆಯಬಹುದು. ಇದರ ಪ್ರಬಲ ಉರಿಯೂತ ನಿವಾರಕ ಗುಣಗಳು ದೇಹದ ವಿವಿಧ ಭಾಗಗಳಲ್ಲಿ ಎದುರಾದ ಉರಿಯೂತವನ್ನು ಶಮನಗೊಳಿಸುವ ಮೂಲಕ ನೋವನ್ನೂ ನಿವಾರಿಸುತ್ತದೆ.

8. ಕಾಫಿ

8. ಕಾಫಿ

'Nature Medicine' ಎಂಬ ವೈದ್ಯಕೀಯ ನಿಯತಕಾಲಿಕೆಯಲ್ಲಿ ಇತ್ತೀಚೆಗೆ ಪ್ರಕಟಿಸಲಾದ ವರದಿಯ ಪ್ರಕಾರ ಕಾಫಿ ಸೇವನೆಯ ಮೇಲೆ ನಡೆಸಲಾದ ಹಲವಾರು ಸಂಶೋಧನೆಗಳಲ್ಲಿ ನಿತ್ಯವೂ ಸಕ್ಕರೆ ಇಲ್ಲದ ಕಾಫಿಯನ್ನು ಕುಡಿದಾಗ ವಯಸ್ಸಿನ ಪರಿಣಾಮವಾಗಿ ಎದುರಾಗುವ ಮೂಳೆಸಂಧುಗಳ ನೋವುಗಳು ಕಡಿಮೆಯಾಗುತ್ತವೆ. ಉದಾಹರಣೆಗೆ ಸಂಧಿವಾತ, ಬೆನ್ನುನೋವು ಮೊದಲಾದವುಗಳಿಗೆ ಕಾರಣವಾದ ಉರಿಯೂತವನ್ನು ಕಾಫಿಯಲ್ಲಿರುವ ಕೆಫೀನ್ ನೈಸರ್ಗಿಕವಾಗಿ ಕಡಿಮೆ ಮಾಡುತ್ತದೆ ಹಾಗೂ ನೋವಿರುವ ಭಾಗದಲ್ಲಿ ಘಾಸಿಗೊಂಡ ಜೀವಕೋಶಗಳು ಮರುಹುಟ್ಟುಪಡೆಯಲು ನೆರವಾಗುತ್ತವೆ.

English summary

8 Ways To Reduce Pain Naturally

If you take a moment and think back about the last time you had some kind of a body ache, you may wince at the feeling of discomfort you went through, right? Well, any kind of physical pain can bring about a lot of discomfort in addition to coming in the way of your daily activities. As we realise, pain is caused by a number of reasons, such as injuries, diseases, infections, surgeries, etc. The degree of pain varies depending on its cause, the region of the body it has affected, the health condition of a person, the age and gender of a person, etc.
X
Desktop Bottom Promotion