ಜಠರಗರುಳಿನ ಉರಿಯೂತಕ್ಕೆ ಹನ್ನೆರಡು ಅತ್ಯುತ್ತಮ ಆಹಾರಗಳು

Posted By: Arshad
Subscribe to Boldsky

ಕೆಲವೊಮ್ಮೆ ಕೆಟ್ಟ ಆಹಾರ ಸೇವನೆ ಅಥವಾ ಇತರ ಯಾವುದಾದರೊಂದು ಕಾರಣದಿಂದ ಹೊಟ್ಟೆಯಲ್ಲಿ ಉರಿ ಎದುರಾಗುತ್ತದೆ. ಈ ಸ್ಥಿತಿಯನ್ನು Stomach flu ಅಥವಾ Viral gastroenteritis (ಜಠರಗರುಳಿನ ಉರಿಯೂತ) ಎಂದು ಕರೆಯುತ್ತಾರೆ. ವೈರಸ್ಸುಗಳ ಧಾಳಿ ಇದಕ್ಕೆ ಪ್ರಮುಖ ಕಾರಣವಾಗಿವೆ. ಕೆಲವೊಮ್ಮೆ ಬ್ಯಾಕ್ಟೀರಿಯಾ ಹಾಗೂ ಇತರ ಪರಾವಲಂಬಿ ಕ್ರಿಮಿಗಳೂ ಇದಕ್ಕೆ ಕಾರಣವಾಗಬಹುದು.

ಈ ಉರಿಯೂತದ ಪ್ರಾರಂಭ ನಡುಕ, ಜ್ವರ, ವಾಕರಿಕೆ, ವಾಕರಿಕೆ ಮುಂದುವರೆಯುತ್ತಾ ವಾಂತಿಯಲ್ಲಿ ಪರ್ಯವಸಾನವಾಗುವುದು, ಅತಿಸಾರ, ಹೊಟ್ಟೆಯಲ್ಲಿ ನೋವು, ಮೈ ಕೈ ನೋವು, ಹಸಿವಿಲ್ಲದಿರುವುದು ಮೊದಲಾದ ತೊಂದರೆಗಳು ಎದುರಾಗುತ್ತದೆ. ಈ ಸೂಚನೆಗಳೆಲ್ಲಾ ವಿಪರೀತವೇ ಆಗಿರುವ ಕಾರಣ ಈ ಹೊಟ್ಟೆನೋವು ರೋಗಿಗೆ ಅಸಹನೀಯವಾಗಿರುತ್ತದೆ.

ಈ ಸ್ಥಿತಿಯಿಂದ ಹೆಚ್ಚುವ ವಾಂತಿ ಹಾಗೂ ಅತಿಸಾರದ ಮೂಲಕ ದೇಹ ಅತಿಹೆಚ್ಚಿನ ನೀರನ್ನು ಕಳೆದುಕೊಳ್ಳುವ ಕಾರಣ ಶೀಘ್ರವೇ ನಿರ್ಜಲೀಕರಣಕ್ಕೆ ಒಳಗಾಗುತ್ತದೆ. ಆದ್ದರಿಂದ ಈ ಸ್ಥಿತಿ ಎದುರಾಗಿದೆ ಎಂದು ತಿಳಿದ ತಕ್ಷಣ ಸತತವಾಗಿ ನೀರನ್ನು ಕುಡಿಯುತ್ತಾ ಇರಬೇಕು. ಇದರಿಂದ ಬಾಯಿ ಒಣಗುವುದು, ಅತಿಯಾದ ಬಾಯಾರಿಕೆ, ತಲೆ ಸುತ್ತುವಿಕೆ ಮೊದಲಾದವುಗಳು ಎದುರಾಗದಂತೆ ನೋಡಿಕೊಳ್ಳಬಹುದು. ಅಲ್ಲದೇ ಈ ಸ್ಥಿತಿಯಲ್ಲಿ ಹೊಟ್ಟೆಗೆ ಘನ ಆಹಾರಗಳನ್ನೂ ಸೇವಿಸಬಾರದು. ಸಿದ್ಧ ಆಹಾರಗಳಂತೂ ಬೇಡವೇ ಬೇಡ. ಬದಲಿಗೆ, ಕೆಳಗೆ ಸೂಚಿಸಿರುವ ಹನ್ನೆರಡು ಸುಲಭ ಆಹಾರಗಳನ್ನು ಮಾತ್ರವೇ ಸೇವಿಸಬಹುದು... 

ಬಾಳೆಹಣ್ಣು

ಬಾಳೆಹಣ್ಣು

ಅತಿಸಾರ ಹಾಗೂ ವಾಂತಿಯಿಂದ ದೇಹ ಕಳೆದುಕೊಳ್ಳುವ ದ್ರವದ ಜೊತೆಗೇ ಪೊಟ್ಯಾಶಿಯಂ ಸಹಾ ಇಲ್ಲವಾಗುತ್ತದೆ. ಬಾಳೆಹಣ್ಣಿನಲ್ಲಿರುವ ಪೊಟ್ಯಾಶಿಯಂ ಈ ಕೊರತೆಯನ್ನು ಸಮರ್ಥವಾಗಿ ಪೂರೈಸುತ್ತದೆ. ವಾಂತಿ ಅಥವಾ ಬೇಧಿಯಾದ ಕೊಂಚ ಹೊತ್ತಿನ ಬಳಿಕ ಒಂದೆರಡು ಬಾಳೆಹಣ್ಣುಗಳನ್ನು ತಿನ್ನುವ ಮೂಲಕ ದೇಹದಲ್ಲಿ ಉಂಟಾಗಿದ್ದ ಪೊಟ್ಯಾಶಿಯಂ ಕೊರತೆಯನ್ನು ಪೂರೈಸಬಹುದು.

ಅನ್ನದ ಗಂಜಿ

ಅನ್ನದ ಗಂಜಿ

ಹೊಟ್ಟೆಯ ಉರಿಯೂತದಿಂದ ನರಳುತ್ತಿದ್ದರೆ ವಾಂತಿ ಬೇಧಿಯಿಂದ ನೀರು ಹಾಗೂ ಅಮೂಲ್ಯ ಪೋಷಕಾಂಶಗಳೂ ನಷ್ಟವಾಗುತ್ತವೆ. ಅನ್ನದಲ್ಲಿರುವ ಸಂಯುಕ್ತ ಕಾರ್ಬೋಹೈಡ್ರೇಟುಗಳು ಈ ಕೊರತೆಯನ್ನು ಸಮರ್ಥವಾಗಿ ಹಾಗೂ ತಕ್ಷಣವೇ ಪೂರೈಸುತ್ತದೆ. ಆದ್ದರಿಂದ ತಕ್ಷಣವೇ ಅನ್ನವನ್ನು ಸೇವಿಸುವ ಮೂಲಕ ದೇಹಕ್ಕೆ ಅತೀವ ಸುಸ್ತಾಗುವುದನ್ನು ತಪ್ಪಿಸಬಹುದು. ಆದರೆ ಅನ್ನವನ್ನು ಯಾವುದೇ ಸಾರು ಅಥವಾ ಮಸಾಲೆಗಳೊಂದಿಗೆ ಬೆರೆಸದೇ ಗಂಜಿಯ ರೂಪದಲ್ಲಿ ಮಾತ್ರವೇ ಸೇವಿಸಬೇಕು.

ಕುರುಕು ಬಿಸ್ಕತ್

ಕುರುಕು ಬಿಸ್ಕತ್

ಸಾಮಾನ್ಯವಾಗಿ ನಾವು ಟೀ ಕಾಫಿಯೊಂದಿಗೆ ಸಂಜೆ ಸೇವಿಸುವ ಕುರುಕು ಬಿಸ್ಕತ್ (crackers) ಸುಲಭವಾಗಿ ಜೀರ್ಣವಾಗುವ, ಸಕ್ಕರೆಯಿಲ್ಲದ ಆಹಾರವಾಗಿದ್ದು ಹೊಟ್ಟೆ ಕೆಟ್ಟಿರುವ ಸಮಯದಲ್ಲಿ ಸೇವಿಸಲು ಸೂಕ್ತವಾದ ಆಹಾರವಾಗಿದೆ. ವಿಶೇಷವಾಗಿ ವಾಂತಿ ಸತತವಾಗಿದ್ದಾಗ ವಾಂತಿ ನಿಲ್ಲಿಸಲು ಈ ಬಿಸ್ಕತ್ತುಗಳು ಉತ್ತಮ ಆಯ್ಕೆಯಾಗಿದೆ. ವಾಂತಿಯ ಬಳಿಕ ಸೇವಿಸಿದಾಗ ದೇಹ ಕಳೆದುಕೊಂಡಿದ್ದ ಪೋಷಕಾಂಶಗಳನ್ನು ಮರುಪೂರೈಸಲು ಸಾಧ್ಯವಾಗುತ್ತದೆ ಹಾಗೂ ವಾಂತಿಯಾಗದಂತೆ ತಡೆಯುತ್ತದೆ.

ಕೋಳಿ ಮಾಂಸದ ಸಾರು

ಕೋಳಿ ಮಾಂಸದ ಸಾರು

ಹೊಟ್ಟೆಯ ಉರಿಯೂತಕ್ಕೆ ಕೊಂಚ ಪ್ರಮಾಣದಲ್ಲಿ ಕೋಳಿ ಮಾಂಸದ ಸಾರು (Chicken Broth) ಸೇವಿಸಲು ಉತ್ತಮ ಆಯ್ಕೆಯಾಗಿದೆ. ಇದರ ಬದಲಿಗೆ ಪ್ರೋಟೀನ್ ಯುಕ್ತ ತರಕಾರಿಗಳನ್ನು ಬೇಯಿಸಿದ ಸಾರು ಸಹಾ ಆಗಬಹುದು. ಇದರಿಂದ ಹೊಟ್ಟೆಗೆ ಭಾರಿಯಾಗದಂತೆ ಪ್ರೋಟೀನ್ ಮತ್ತು ಕೊಬ್ಬುಗಳನ್ನು ಚಿಕ್ಕ ಪ್ರಮಾಣದಲ್ಲಿ ಒದಗಿಸಬಹುದು. ಈ ದ್ರವಾಹಾರವನ್ನು ಮಧ್ಯಾಹ್ನದ ಹಾಗು ರಾತ್ರಿಯೂಟಕ್ಕೆ ಸೇವಿಸುವ ಮೂಲಕ ಶೀಘ್ರವೇ ಉರಿಯೂತ ಇಲ್ಲವಾಗುತ್ತದೆ.

ಟೋಸ್ಟ್

ಟೋಸ್ಟ್

ಟೋಸ್ಟ್ ಅಥವಾ ರಸ್ಕು ಗುಡುಗುಡು ಎನ್ನುವ ಹೊಟ್ಟೆಗೆ ಉತ್ತಮವಾದ ಆಯ್ಕೆಯಾಗಿದೆ. ಹೊಟ್ಟೆಯಲ್ಲಿ ಗುಡುಗುಡು ಇದ್ದಾಗ ಯಾವ ಆಹಾರ ಸೇವಿಸಿದರೂ ಇದರ ಪರಿಣಾಮ ವಿಪರೀತವಾಗಬಹುದು. ರಸ್ಕ್ ಸೇವನೆಯಿಂದ ಹೊಟ್ಟೆ ಅಥವಾ ಜೀರ್ಣಾಂಗ ವ್ಯವಸ್ಥೆಗೆ ಯಾವುದೇ ಅಡ್ಡಿಯುಂಟುಮಾಡದೇ ಆರೋಗ್ಯವನ್ನು ಕಾಪಾಡಬಹುದು.

ಮಂಜುಗಡ್ಡೆ

ಮಂಜುಗಡ್ಡೆ

ಒಂದು ವೇಳೆ ಉರಿಯೂತ ತೀವ್ರವಾಗಿದ್ದರೆ ಹಾಗೂ ತಡೆಯಲೇ ಸಾಧ್ಯವೆನ್ನುವಷ್ಟು ಪ್ರಬಲವಾಗಿದ್ದರೆ ಈ ಸಮಯದಲ್ಲಿ ಯಾವುದೇ ಆಹಾರ ಸೇವನೆ ತಕ್ಷಣ ವಾಂತಿಯಾಗುತ್ತದೆ. ಹಾಗಾಗಿ ದೇಹ ತೀವ್ರ ನೀರಿನ ಕೊರತೆಯನ್ನು ಎದುರಿಸಬಹುದು. ಸುಸ್ತು ಸಹಾ ಹೆಚ್ಚೇ ಇರುತ್ತದೆ. ಈ ಸಮಯದಲ್ಲಿ ಮಂಜುಗಡ್ಡೆಯ ತುಂಡೊಂದನ್ನು ಬಾಯಲ್ಲಿರಿಸಿ ಕರಗಿದ ನೀರನ್ನು ನುಂಗುತ್ತಾ ಹೋಗುವ ಮೂಲಕ ದೇಹದ ನೀರಿನ ಕೊರತೆಯನ್ನು ನೀಗಿಸಬಹುದು ಹಾಗೂ ವಾಂತಿಯಾಗದಂತೆ ನೋಡಿಕೊಳ್ಳಬಹುದು.

ಸೇಬಿನ ಸಾಸ್

ಸೇಬಿನ ಸಾಸ್

ಒಂದು ವೇಳೆ ವಾಕರಿಗೆ ತೀವ್ರವಾಗಿದ್ದು ಇನ್ನೇನು ವಾಂತಿಯಾಗಲಿದೆ ಎನ್ನುವಂತಹ ಅಸಹನೀಯ ಅನುಭವ ಎದುರಾದರೆ ಈ ಸಮಯದಲ್ಲಿ ಸೇವಿಸಲು ಸೇಬಿನ ಸಾಸ್ ಉತ್ತಮ ಆಯ್ಕೆಯಾಗಿದೆ. ಇದರಲ್ಲಿರುವ ಪೆಕ್ಟಿನ್ ಒಂದು ಕರಗುವ ನಾರು ಆಗಿದ್ದು ಹೊಟ್ಟೆಯಲ್ಲಿರುವ ಉರಿಯನ್ನು ಕಡಿಮೆ ಮಾಡುವ ಜೊತೆಗೆ ದೇಹದ ನೀರಿನ ಕೊರತೆಯನ್ನೂ ನೀಗಿಸುತ್ತದೆ. ಅಲ್ಲದೇ ಅತಿಸಾರವನ್ನೂ ತಕ್ಷಣವೇ ಕಡಿಮೆಗೊಳಿಸುತ್ತದೆ.

ಕೋಳಿ ಮಾಂಸ

ಕೋಳಿ ಮಾಂಸ

ಮಸಾಲೆಯಿಲ್ಲದೇ ಬೇಯಿಸಿದ ಕೋಳಿಮಾಂಸ ಹೊಟ್ಟೆಯ ಉರಿಯೂತಕ್ಕೆ ಉತ್ತಮವಾದ ಆಹಾರವಾಗಿದೆ. ಇದರಿಂದ ದೇಹಕ್ಕೆ ಅಗತ್ಯವಾದ ಪ್ರೋಟೀನ್ ದೊರಕುತ್ತದೆ ಹಾಗೂ ಹೊಟ್ಟೆಯಲ್ಲಿ ವಾಯು ಉತ್ಪತ್ತಿಯಾಗುವುದನ್ನು ತಡೆಯುತ್ತದೆ. ಇದನ್ನು ಅನ್ನದ ಗಂಜಿಯೊಂದಿಗೆ ಬೆರೆಸಿಕೊಂಡು ತಿನ್ನುವ ಮೂಲಕ ಅಥವಾ ಅನ್ನದ ಗಂಜಿ ಬೇಯಿಸುವಾಗಲೇ ಬೇಯಿಸಿದ ಮಾಂಸವನ್ನು ಬೆರೆಸಿ ಸೇವಿಸುವುದು ಉತ್ತಮವಾಗಿದೆ.

ಮೃದುವಾದ ಹಣ್ಣುಗಳು

ಮೃದುವಾದ ಹಣ್ಣುಗಳು

ಚೆನ್ನಾಗಿ ಹಣ್ಣಾದ ಕಲ್ಲಂಗಡಿ, ಪೊಪ್ಪಾಯಿ, ಕರಬೂಜ, ಕಿತ್ತಳೆ, ಪೀಚ್, ಮಾವಿನ ಹಣ್ಣು ಮೊದಲಾದ ಮೃದುವಾದ ಹಣ್ಣುಗಳು ದೇಹದಲ್ಲಿ ಉಂಟಾಗಿದ್ದ ಪೋಷಕಾಂಶಗಳ ಕೊರತೆಯನ್ನು ನೀಗಿಸುತ್ತದೆ. ವಿಶೇಷವಾಗಿ ವಾಂತಿ ಬೇಧಿಯ ಬಳಿಕ ದೇಹ ತೀವ್ರವಾಗಿ ಆಯಾಸಗೊಂಡಿದ್ದರೆ ಹಣ್ಣುಗಳು ಉತ್ತಮ ಆಯ್ಕೆಯಾಗಿದೆ. ಹಣ್ಣುಗಳ ತಿರುಳು ಕಡಿಮೆ ಕ್ಷಾರೀಯವಾಗಿದ್ದು ಹೆಚ್ಚಿನ ನೀರಿನ ಅಂಶವಿರುವ ಕಾರಣ ಹೊಟ್ಟೆಯ ಉರಿಯೂತವನ್ನು ತಕ್ಷಣವೇ ಕಡಿಮೆ ಮಾಡಲು ಸಾಧ್ಯವಾಗುತ್ತದೆ.

ಶುಂಠಿ, ಲಿಂಬೆ ಬೆರೆಸಿದ ಟೀ

ಶುಂಠಿ, ಲಿಂಬೆ ಬೆರೆಸಿದ ಟೀ

ಸಾಮಾನ್ಯವಾಗಿ ಹೊಟ್ಟೆಯಲ್ಲಿ ಉರಿ ಕಾಣಿಸಿಕೊಂಡರೆ ತಕ್ಷಣವೇ ಶುಂಠಿ, ಲಿಂಬೆ ಬೆರೆಸಿದ ಟೀ ಕುಡಿಯುವಂತೆ ಸಲಹೆ ಮಾಡಲಾಗುತ್ತದೆ. ಲಿಂಬೆ, ಶುಂಠಿಯಲ್ಲಿರುವ ಉರಿಯೂತ ನಿವಾರಕ ಹಾಗೂ ಬ್ಯಾಕ್ಟೀರಿಯಾ ನಿವಾರಕ ಗುಣ ಜೀರ್ಣಾಂಗ ವ್ಯವಸ್ಥೆಯನ್ನು ನಿರಾಳಗೊಳಿಸಲು ನೆರವಾಗುತ್ತದೆ.

ಲಿಂಬೆ

ಲಿಂಬೆ

ಹೊಟ್ಟೆಯಲ್ಲಿ ಉರಿಯೂತ ಎದುರಾದಾಗ ಏನೂ ಇಲ್ಲದಿದ್ದರೂ ಲಿಂಬೆಯೊಂದಿದ್ದರೆ ಸಾಕಾಗುತ್ತದೆ. ಇದರ ಹುಳಿಯನ್ನು ಕೇವಲ ನೆಕ್ಕಿದರೂ ಸಾಕು, ಹೊಟ್ಟೆಯ ವಾಕರಿಕೆ ಕಡಿಮೆಯಾಗುತ್ತದೆ. ಅಲ್ಲದೇ ಲಿಂಬೆರಸವನ್ನು ಕೊಂಚ ಬಿಸಿನೀರಿನಲ್ಲಿ ಬೆರೆಸಿ ಸೇವಿಸುವ ಮೂಲಕ ಹೊಟ್ಟೆಯಲ್ಲಿರುವ ರೋಗಕಾರಕ ಪರಾವಲಂಬಿ ಕ್ರಿಮೆಗಳನ್ನು ಕೊಂದು ಬೇಧಿ ಹಾಗೂ ವಾಂತಿಯಾಗದಂತೆ ತಡೆಗಟ್ಟಬಹುದು.

ಪಾಸ್ತಾ

ಪಾಸ್ತಾ

ಒಂದು ವೇಳೆ ಉರಿಯೂತಕ್ಕೆ ಅನ್ನದ ಗಂಜಿ ಮತ್ತು ಕೋಳಿ ಮಾಂಸವನ್ನು ಸೇವಿಸಿ ಬೇಜಾರಾಗಿದ್ದರೆ ಇದಕ್ಕೆ ಪರ್ಯಾಯವಾಗಿ ಪಾಸ್ತಾವನ್ನೂ ಸೇವಿಸಬಹುದು. ಇದರಲ್ಲಿರುವ ಉತ್ತಮ ಪ್ರಮಾನದ ಕರಗುವ ನಾರು ಹೊಟ್ಟೆಯನ್ನು ತುಂಬಿರುವ ಭಾವನೆ ಮೂಡಿಸುತ್ತದೆ ಹಾಗೂ ಉರಿಯೂತವನ್ನು ಕಡಿಮೆ ಮಾಡಲೂ ನೆರವಾಗುತ್ತದೆ. ಆದರೆ ಪಾಸ್ತಾ ತಯಾರಿಸುವಾಗ ಸಾಮಾನ್ಯವಾಗಿ ಬಳಸುವ ಸಾಸ್ ಮತ್ತು ಚೀಸ್ ಗಳನ್ನು ಸೇರಿಸಬಾರದು. ಏಕೆಂದರೆ ಇವು ವಾಂತಿಗೆ ಮತ್ತೊಮ್ಮೆ ಪ್ರಚೋದನೆ ನೀಡಬಹುದು.

English summary

12 Best Foods For Stomach Flu

Stomach flu is also known as viral gastroenteritis. It makes your body suffer from dehydration due to excessive vomiting and diarrhoea.So, you need to increase your intake of water to prevent dry mouth, excessive thirst, and dizziness.
Story first published: Tuesday, January 30, 2018, 7:02 [IST]