For Quick Alerts
ALLOW NOTIFICATIONS  
For Daily Alerts

  ಆಯಾಸಗೊಂಡಿದ್ದಾಗ ಅಪ್ಪಿತಪ್ಪಿಯೂ ಈ 10 ಕಾರ್ಯಗಳನ್ನು ಮಾಡಲೇಬಾರದು!

  |

  ಯಾವುದೇ ಕಾರ್ಯವನ್ನು ಸತತವಾಗಿ ನಿರ್ವಹಿಸುತ್ತಿದ್ದಾಗ ಕೊಂಚ ಹೊತ್ತಿನ ಬಳಿಕ ಇದರ ಗತಿ ಕೊಂಚ ನಿಧಾನಗೊಳ್ಳುತ್ತದೆ. ಕಣ್ಣುಗಳು ತನ್ನಿಂತಾನೇ ಮುಚ್ಚಿಕೊಳ್ಳತೊಡಗುತ್ತವೆ. ನಮ್ಮ ಜೀವಕೋಶಗಳಿಗೆ ಸರಬರಾಜಾದ ಪೋಷಕಾಂಶಗಳು ಖಾಲಿಯಾಗಿ ಮತ್ತೆ ಇಲ್ಲಿ ಶಕ್ತಿ ಪೂರೈಸಲು ರಕ್ತ ಹೊಸ ಪೋಷಕಾಂಶಗಳನ್ನು ತಂದು ಒದಗಿಸಬೇಕು. ಹಾಗಾಗಿ ಏನೂ ಕೆಲಸ ಮಾಡದೇ ಕೊಂಚ ಹೊತ್ತು ಸುಮ್ಮನಿದ್ದರೆ ಶಕ್ತಿ ಮರುಪೂರೈಕೆಗೆ ಅವಕಾಶವಾಗುತ್ತದೆ. ಇದನ್ನೇ ನಾವು ವಿಶ್ರಾಂತಿ ಎಂದು ಕರೆಯುತ್ತೇವೆ. ಆದರೆ ಒಂದು ವೇಳೆ ಹೆಚ್ಚಿನ ಆಯಾಸಕರ ಕೆಲಸ ಮಾಡದೇ ಇದ್ದರೂ ಆಯಾಸವಾಗಿದ್ದರೆ ಹಾಗೂ ರಾತ್ರಿ ನಿದ್ದೆ ಬೇಗನೇ ಆವರಿಸದೇ ಇದ್ದರೆ ಇದು ಯಾವುದೋ ಕಾಯಿಲೆಯ ಸೂಚನೆಯಾಗಿರಬಹುದು ಅಥವಾ ಆರೋಗ್ಯದ ಕೆಲವಾರು ಏರುಪೇರುಗಳನ್ನು ಸೂಚಿಸುತ್ತಿರಬಹುದು.

  ನಮ್ಮ ನಿದ್ದೆ-ಎಚ್ಚರ-ನಿದ್ದೆಯ ಸಮಯಗಳು ಆರೋಗ್ಯಕರವಾಗಿರಲು ಸದಾ ಒಂದೇ ಸಮಯಕ್ಕೆ ನಿದ್ದೆ ಹೋಗುವುದು ಮತ್ತು ಎಚ್ಚರಾಗುವುದು ಅಗತ್ಯ ಹಾಗೂ ಮಲಗುವ ಮುನ್ನ ದೈಹಿಕ ಮತ್ತು ಮಾನಸಿಕವಾಗಿ ಆಯಾಸಗೊಂಡಿದ್ದರೆ ಈ ಆಯಾಸ ಮರುದಿನ ಎಚ್ಚರಾದ ಬಳಿಕವೂ ಮುಂದುವರೆಯಬಹುದು. ಈ ಮೂಲಕ ದೇಹದಲ್ಲಿ ಕೆಲವು ರಸದೂತಗಳು ಅನಗತ್ಯವಾಗಿ ಸ್ರವಿಸಿ ಕೆಲವಾರು ತೊಂದರೆಗಳನ್ನು ಉಂಟುಮಾಡುತ್ತವೆ.

  ಅಲ್ಲದೇ ದೇಹದ ತಾಪಮಾನ, ರೊಗ ನಿರೋಧಕ ಶಕ್ತಿ, ದೇಹದ ತೂಕ ಮೊದಲಾದವು ಪ್ರಭಾವಿತವಾಗುತ್ತವೆ. ಪರಿಣಾಮವಾಗಿ ಶಕ್ತಿಗುಂದುವುದು, ಏಕಾಗ್ರತೆ ಪಡೆಯಲು ಕಷ್ಟವಾಗುವುದು, ಸ್ಮರಣಶಕ್ತಿ ಕುಂದುವುದು ಹಾಗೂ ಮನೋಭಾವ ಕುಸಿಯುವುದು ಮೊದಲಾದವು ಎದುರಾಗಬಹುದು. ಹಾಗಾಗಿ ಅನಿವಾರ್ಯವಾಗಿಯಾದರೂ ಜೀವನಕ್ರಮದಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕಾಗಿ ಬರುತ್ತದೆ. ಕೆಫೀನ್ ಪ್ರಮಾಣದಲ್ಲಿ ಕಡಿಮೆ ಮಾದುವುದು, ಮದ್ಯಪಾನ ವರ್ಜನೆ, ಹೆಚ್ಚು ಪೌಷ್ಟಿಕ ಆಹಾರ ಸೇವನೆ ಹಾಗೂ ವ್ಯಾಯಾಮವನ್ನು ಹೆಚ್ಚಿಸಬೇಕಾಗಬಹುದು. ಇದರ ಹೊರತಾಗಿ ಆಯಾಸ ಆವರಿಸಿದಾಗ ಮಾಡಲೇಬಾರದ ಹತ್ತು ಸಂಗತಿಗಳು ಇಲ್ಲಿವೆ....

  ದಿನದಲ್ಲಿ ಹಲವಾರು ಬಾರಿ ಕಾಫಿ ಕುಡಿಯದಿರಿ

  ದಿನದಲ್ಲಿ ಹಲವಾರು ಬಾರಿ ಕಾಫಿ ಕುಡಿಯದಿರಿ

  ಕಾಫಿ ಚೇತೋಹಾರಿಯಾದರೂ ಇದರ ಪ್ರಮಾಣ ದಿನಕ್ಕೆ ಎರಡು ಕಪ್ ಗೆ ಮೀಸಲಾಗಿಸುವುದು ಉತ್ತಮ. ಹೆಚ್ಚು ಕುಡಿದಷ್ಟೂ ದೇಹ ಇನ್ನಷ್ಟು ಆಯಾಸಗೊಳ್ಳುತ್ತದೆ. ಆಗಾಧ ಪ್ರಮಾಣದಲ್ಲಿ ಆಗಮಿಸುವ ಕೆಫೀನ್ ಅನ್ನು ದೇಹ ತಾಳಲಾರದೇ ಈಗಾಗಲೇ ಆಯಾಸಗೊಂಡಿದ್ದ ದೇಹ ಇನ್ನಷ್ಟು ಬಳಲುತ್ತದೆ. ಒಂದು ಕಪ್ ಕಾಫಿ ಸೇವಿಸಿದ ಬಳಿಕ ಇದರಲ್ಲಿರುವ ಕೆಫೀನ್ ನಮ್ಮ ಹೊಟ್ಟೆಯಲ್ಲಿ ಸುಮಾರು ಐದು ಗಂಟೆಯವರೆಗೆ ಹಾಗೇ ಇದ್ದು ನಿಧಾನವಾಗಿ ತನ್ನ ಪ್ರಭಾವವನ್ನು ತೋರುತ್ತಿರುತ್ತದೆ. ಒಂದು ವೇಳೆ ಈ ಐದು ಘಂಟೆ ಕಳೆಯುವ ಮುನ್ನ ಮತ್ತೊಂದು ಕಾಫಿ ಕುಡಿದರೆ ಇದು ಹೊರಲಾರದ ಹೊರೆಯಾಗಿ ಪರಿಣಮಿಸಿ ರಾತ್ರಿ ನಿದ್ದೆ ಬರದಂತೆ ಮಾಡುತ್ತದೆ.

  ವ್ಯಾಯಾಮಶಾಲೆಯಲ್ಲಿ ನಿಮ್ಮ ಶಕ್ತಿಯನ್ನೆಲ್ಲಾ ಪ್ರದರ್ಶಿಸದಿರಿ

  ವ್ಯಾಯಾಮಶಾಲೆಯಲ್ಲಿ ನಿಮ್ಮ ಶಕ್ತಿಯನ್ನೆಲ್ಲಾ ಪ್ರದರ್ಶಿಸದಿರಿ

  ವ್ಯಾಯಾಮಕ್ಕೂ ಶಕ್ತಿ ಅಗತ್ಯವಾಗಿ ಬೇಕು. ಆದರೆ ಈ ಶಕ್ತಿ ಒಂದು ಸಾಮಾನ್ಯಗತಿಯಲ್ಲಿಯೇ ಹೊರಹರಿಯಬೇಕು. ಒಂದು ವೇಳೆ ಅತಿ ಹೆಚ್ಚು ಶ್ರಮಬೇಕಾಗುವ ಅಥವಾ ಸಾಮರ್ಥ್ಯಕ್ಕೂ ಮೀರಿದ ಶಕ್ತಿಯನ್ನು ಬಳಸುವ ವ್ಯಾಯಾಮಗಳಿಂದ ತಕ್ಷಣವೇ ಸ್ನಾಯುಗಳು ಬಳಲಿ ನೋವಿನಿಂದ ಚೀತ್ಕರಿಸುತ್ತವೆ. ಆದ್ದರಿಂದ ಭಾರೀ ತೂಕ ಅಥವಾ ಕಷ್ಟದ ವ್ಯಾಯಾಮಗಳಿಂದ ಇತರರನ್ನು ಮೆಚ್ಚಿಸಲು ಯತ್ನಿಸದೇ ಸುಲಭವಾದ ನಡಿಗೆ, ಸೈಕಲ್ ಸವಾರಿ ಮೊದಲಾದವುಗಳನ್ನು ಮಾಡುವುದೇ ಆರೋಗ್ಯಕ್ಕೆ ಒಳ್ಳೆಯದು. ಇದರಿಂದ ಸ್ನಾಯುಗಳು ಘಾಸಿಗೊಳ್ಳುವುದಿಲ್ಲ ಹಾಗೂ ದಿನವಿಡೀ ಚಟುವಟಿಕೆಯಿಂದಿರಲು ಸಾಧ್ಯ. ವ್ಯಾಯಾಮಶಾಲೆಯಲ್ಲಿ ಕಠಿಣ ವ್ಯಾಯಾಮದ ಮೂಲಕ ದೇಹದ ಎಲ್ಲಾ ಶಕ್ತಿಯನ್ನು ಕಳೆದುಕೊಂಡು ಬಿಟ್ಟರೆ ಬಳಿಕ ದಿನವಿಡೀ ಬಳಲಿಕೆ ಹಾಗೂ ಆಯಾಸ ಕಾಡುತ್ತದೆ.

   ದಿನದ ಅವಧಿಯಲ್ಲಿ ಅತಿ ದೀರ್ಘಕಾಲದವರೆಗೆ ನಿದ್ರಿಸದಿರಿ

  ದಿನದ ಅವಧಿಯಲ್ಲಿ ಅತಿ ದೀರ್ಘಕಾಲದವರೆಗೆ ನಿದ್ರಿಸದಿರಿ

  ದಿನದ ಅವಧಿಯಲ್ಲಿ, ವಿಶೇಷವಾಗಿ ಮದ್ಯಾಹ್ನದ ಬಳಿಕ ನಿದ್ರಿಸುವ ಅಭ್ಯಾಸವಿದ್ದರೆ ಈ ನಿದ್ದೆ ಚಿಕ್ಕದಾಗಿರುವಂತೆ ನೋಡಿಕೊಳ್ಳಿ. ಎಷ್ಟು ಚಿಕ್ಕದು ಎಂದರೆ ಇಪ್ಪತ್ತರಿಂದ ಮೂವತ್ತು ನಿಮಿಷ ಬೇಕಾದಷ್ಟಾಯಿತು. ಏಕೆಂದರೆ ಈ ನಿದ್ದೆ ದೀರ್ಘವಾದರೆ ರಾತ್ರಿಯ ನಿದ್ದೆಗೆ ತೊಂದರೆಯಾಗಬಹುದು. ಅಲ್ಲದೇ ಮರುದಿನ ಎದ್ದಾಗ ಅತೀವ ಸುಸ್ತು ಕಾಡಬಹುದು. ಚಿಕ್ಕ ನಿದ್ದೆಯಿಂದ ದಿನದ ಉಳಿದ ಅವಧಿಯನ್ನು ಚಟುವಟಿಕೆಯಿಂದ ಮತ್ತು ಚುರುಕುತನದಿಂದ ಕಳೆಯಲು ಸಾಧ್ಯವಾಗುತ್ತದೆ.

  ನಿತ್ಯದ ನಿದ್ದೆಯ ಸಮಯವನ್ನು ಬದಲಿಸಬೇಡಿ

  ನಿತ್ಯದ ನಿದ್ದೆಯ ಸಮಯವನ್ನು ಬದಲಿಸಬೇಡಿ

  ಒಂದು ವೇಳೆ ನಿಮಗೆ ಆಯಾಸವಾಗಿದ್ದರೂ ನಿಮ್ಮ ನಿತ್ಯದ ನಿದ್ದೆಯಿಂದೇಳುವ ಸಮಯವನ್ನು ಬದಲಿಸಬೇಡಿ. ನಿದ್ದೆಯ ಸಮಯವನ್ನು ಹೆಚ್ಚಿಸುವುದು ಅಥವಾ ಕಡಿಮೆ ಮಾಡುವ ಮೂಲಕ ಆಯಾಸ ಇನ್ನಷ್ಟು ಹೆಚ್ಚುತ್ತದೆ ಹಾಗೂ ನಿದ್ದೆಯ ಗುಣಮಟ್ಟವೂ ಬಾಧೆಗೊಳಗಾಗುತ್ತದೆ. ಒಂದು ವೇಳೆ ಮುಂಜಾನೆ ಎಂದಿಗಿಂತಲೂ ಅರ್ಧ ಘಂಟೆ ತಡವಾಗಿ ಎದ್ದರೆ ಮಲಗುವ ಸಮಯವೂ ತಡವಾಗಿ ಮುಂದಿನ ದಿನವೂ ಎಚ್ಚರಾಗುವುದು ತಡವಾಗುತ್ತಾ ಹೋಗುತ್ತದೆ ಹಾಗೂ ಇದು ಹೀಗೇ ಮುಂದುವರೆದು ಅನಾರೋಗ್ಯಕರ ಅಭ್ಯಾಸ ಆವರಿಸುತ್ತದೆ.

  ಸಿದ್ಧ ಆಹಾರಗಳ ಆಕರ್ಷಣೆಗೆ ಬಲಿಯಾಗದಿರಿ

  ಸಿದ್ಧ ಆಹಾರಗಳ ಆಕರ್ಷಣೆಗೆ ಬಲಿಯಾಗದಿರಿ

  ನಿಮ್ಮ ದೇಹ ಆಯಾಸಗೊಂಡು ಬಳಲಿರುವ ಸಮಯದಲ್ಲಿ ಹೆಚ್ಚು ಕ್ಯಾಲೋರಿಗಳಿರುವ ಸಿದ್ದ ಆಹಾರಗಳು, ಕೊಬ್ಬಿನ ಆಹಾರಗಳನ್ನು ಅಥವಾ ಅವುಗಳ ಚಿತ್ರವನ್ನು ಕಂಡಾಗ ಇವನ್ನು ಸೇವಿಸಬೇಕೆಂಬ ಬಯಕೆ ಅದಮ್ಯವಾಗುತ್ತದೆ. ಹೆಚ್ಚಿನವರು ಈ ಬಯಕೆಗೆ ಬಲಿಯಾಗಿ ಸಿದ್ದ ಆಹಾರಗಳಿಗೆ ತಕ್ಷಣವೇ ಬೇಡಿಕೆ ಸಲ್ಲಿಸಿಬಿಡುತ್ತಾರೆ. ಆದರೆ ಈ ಸಮಯದಲ್ಲಿ ಮನಸ್ಸನ್ನು ಕೊಂಚ ಬಿಗಿಹಿಡಿದು ನಿಮ್ಮ ನಿತ್ಯದ ಪೌಷ್ಟಿಕ ಆಹಾರವನ್ನೇ ಸೇವಿಸಿ. ಕಂದು ಅಕ್ಕಿ, ಬೇಯಿಸಿದ ತರಕಾರಿ ಹಾಗೂ ಕಡಿಮೆ ಕೊಬ್ಬಿನ ಕೋಳಿ ಮಾಂಸ ಮೊದಲಾದವು ಈ ಸಮಯದಲ್ಲಿ ಸೇವನೆಗೆ ಸೂಕ್ತವಾಗಿವೆ. ಇದರಿಂದ ದೇಹಕ್ಕೆ ಸಮತೋಲನದ ಆಹಾರ ಲಭಿಸುತ್ತದೆ ಹಾಗೂ ಚಟುವಟಿಕೆಯಿಂದಿರಲು ನೆರವಾಗುತ್ತದೆ.

  ಸಾಮಾಜಿಕ ತಾಣಗಳತ್ತ ಗಮನ ಹರಿಸದಿರಿ

  ಸಾಮಾಜಿಕ ತಾಣಗಳತ್ತ ಗಮನ ಹರಿಸದಿರಿ

  ಇತ್ತೀಚೆಗೆ ಜಗತ್ತೇ ಸಾಮಾಜಿಕ ಜಾಲತಾಣಗಳ ಗುಲಾಮಗಿರಿಯಲ್ಲಿ ಸಿಲುಕಿಕೊಂಡಿದೆ. ಜಾಲತಾಣದಲ್ಲಿ ಇಣುಕದೇ ಒಂದು ಘಂಟೆ ಸಹಾ ಇರದ ಸ್ಥಿತಿಗೆ ತಲುಪಿಬಿಟ್ಟಿದ್ದೇವೆ. ಆದರೆ ಆಯಾಸಗೊಂಡಿದ್ದಾಗ ಸಾಮಾಜಿಕ ತಾಣಗಳ ಮಾಹಿತಿಯನ್ನು ವಿಶ್ಲೇಷಿಸುತ್ತಾ, ತಾನೇ ಮೊದಲು ಮಾಹಿತಿಯನ್ನು ಮುಂದೆ ರವಾನಿಸಬೇಕು ಎಂಬ ಹಪಾಹಪಿಯಿಂದ ಹೆಚ್ಚು ಹೊತ್ತು ಎಚ್ಚರಾಗಿದ್ದು ಆವರಿಸಬೇಕಾಗಿದ್ದ ನಿದ್ದೆಯನ್ನು ಬಲವಂತವಾಗಿ ಮುಂದೂಡುವಂತಾಗುತ್ತದೆ. ಅಷ್ಟೇ ಅಲ್ಲ, ಮೊಬೈಲಿನ ಬೆಳಕು ಮೆದುಳಿನ ಮೇಲೂ ಪ್ರಭಾವ ಬೀರುತ್ತದೆ ಹಾಗೂ ನಿದ್ದೆಬಾರದಂತೆ ತಡೆಯುತ್ತದೆ. ಇವೆಲ್ಲವೂ ಆಯಾಸವನ್ನು ಇನ್ನಷ್ಟು ಹೆಚ್ಚಿಸುತ್ತವೆ ಹಾಗೂ ಆರೋಗ್ಯವನ್ನೂ ಬಾಧಿಸುತ್ತವೆ.

  ಮದ್ಯಪಾನ ಬೇಡವೇ ಬೇಡ

  ಮದ್ಯಪಾನ ಬೇಡವೇ ಬೇಡ

  ಒಂದು ವೇಳೆ ಆಯಾಸಗೊಂಡಿದ್ದರೆ ಮದ್ಯಪಾನಿ ಸ್ನೇಹಿತರು ನೀಡುವ ಉಚಿತ ಮತ್ತು ಸಿದ್ದರೂಪದ ಏಕಮಾತ್ರ ಸಲಹೆ ಎಂದರೆ 'ಒಂದು ಗುಟುಕು ಹಾಕು' ಎಂಬುದಾಗಿದೆ. ಆದರೆ ಈ ಮೂಲಕ ನಿದ್ದೆಗೆ ಜಾರಬಹುದು ಎಂಬುದು ನಿಮ್ಮ ಅನಿಸಿಕೆಯಾಗಿದ್ದರೆ ಇದು ತಪ್ಪು. ನಿದ್ದೆಗೂ ಮುನ್ನ ಸೇವಿಸುವ ಮದ್ಯ ಗಾಢನಿದ್ದೆಯಲ್ಲಿ ಆವರಿಸುವ ಕಣ್ಣುಗುಡ್ಡೆಗಳ ಅತ್ತಿಂದಿತ್ತ ಚಲನೆ (REM -Random Eye movement)ಯನ್ನು ಬಾಧಿಸುತ್ತದೆ ಹಾಗೂ ಮರುದಿನ ಮುಂಜಾನೆ ಎದ್ದ ಬಳಿಕವೂ ಮತ್ತು ಆವರಿಸಿರುತ್ತದೆ ಹಾಗೂ ಮರುದಿನದ ರಾತ್ರಿಯ ನಿದ್ದೆಯೂ ಭಂಗಗೊಳ್ಳುತ್ತದೆ.

  ವಾರಾಂತ್ಯಗಳಲ್ಲಿ ನಿದ್ರಿಸಲು ತಡಮಾಡದಿರಿ

  ವಾರಾಂತ್ಯಗಳಲ್ಲಿ ನಿದ್ರಿಸಲು ತಡಮಾಡದಿರಿ

  ಸಾಮಾನ್ಯವಾಗಿ ನಾವೆಲ್ಲರೂ ವಾರಾಂತ್ಯಗಳಲ್ಲಿ ತಡರಾತ್ರಿಯವರೆಗೆ ಎಚ್ಚರಾಗಿಯೇ ಇರುತ್ತೇವೆ. ಮರುದಿನ ಮದ್ಯಾಹ್ನದವರೆಗೂ ಮಲಗಬಹುದೆಂಬುದೇ ಇದರ ಹಿಂದಿನ ಲೆಕ್ಕಾಚಾರವಾಗಿದೆ. ಆದರೆ ಇದರಿಂದಲೂ ನಿಮ್ಮ ನಿದ್ದೆಯ ಅವಧಿ ಏರುಪೇರುಗೊಳ್ಳುತ್ತದೆ ಹಾಗೂ ಮುಂದಿನ ದಿನವೂ ತಡವಾಗಿ ಮಲಗಿ ತಡವಾಗಿ ಏಳಲು ಪ್ರೇರೇಪಿಸುತ್ತದೆ. ಇದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ! ಏಕೆಂದರೆ ಸೋಮವಾರ ಬೆಳಿಗ್ಗೆ ಎಂದಿನ ಸಮಯಕ್ಕೆ ಏಳಲು ಹಾಗೂ ಕಛೇರಿಗೆ ಸರಿಯಾದ ಸಮಯಕ್ಕೆ ತಲುಪಲು ಅಡ್ಡಿಪಡಿಸುತ್ತದೆ.

  ಅತಿಯಾದ ಶಕ್ತಿ ಬೇಡುವ ಯೋಗಾಸನಗಳನ್ನು ಅನುಸರಿಸದಿರಿ

  ಅತಿಯಾದ ಶಕ್ತಿ ಬೇಡುವ ಯೋಗಾಸನಗಳನ್ನು ಅನುಸರಿಸದಿರಿ

  ಮನಸ್ಸು ಮತ್ತು ದೇಹ ಎರಡನ್ನೂ ಸುಸ್ಥಿತಿಯಲ್ಲಿರಿಸಲು ಹಾಗೂ ನಿರಾಳವಾಗಿರಿಸಲು ಯೋಗಾಭ್ಯಾಸ ಅತ್ಯುತ್ತಮವೆಂದು ನಿಮಗೆ ತಿಳಿದಿದೆ. ಆದರೆ ಕೆಲವು ಯೋಗಾಸನಗಳು ಅತಿ ಹೆಚ್ಚಿನ ಶ್ರಮ ಬೇಡುತ್ತವೆ. ಆದ್ದರಿಂದ ಆಯಾಸಗೊಂಡಿದ್ದಾಗ ಶ್ರಮ ಬೇಡುವ ಯಾವುದೇ ಯೋಗಾಸನಗಳನ್ನು ಅನುಸರಿಸದೇ ಇರುವುದು ಜಾಣತನ. ಬದಲಿಗೆ ಕಡಿಮೆ ಶ್ರಮ ಬೇಡುವ ಶವಾಸನ, ಬಾಲಾಸನ ಹಾಗೂ ಹೃದಯದ ಬಡಿತವನ್ನು ಹೆಚ್ಚಿಸದ ಸುಲಭ ಆಸನಗಳನ್ನು ಮಾತ್ರವೇ ಅನುಸರಿಸಿ.

  ನಡುರಾತ್ರಿಯಲ್ಲಿ ಎಚ್ಚರಾದರೆ ತಿನ್ನಬೇಡಿ

  ನಡುರಾತ್ರಿಯಲ್ಲಿ ಎಚ್ಚರಾದರೆ ತಿನ್ನಬೇಡಿ

  ಒಂದು ವೇಳೆ ಆಯಾಸಗೊಂಡಿದ್ದರೆ ಹಾಗೂ ನಡುರಾತ್ರಿಯವರೆಗೂ ಅನಿವಾರ್ಯವಾಗಿ ಎಚ್ಚರಿರಬೇಕಾಗಿದ್ದರೆ ಅಥವಾ ನಡುರಾತ್ರಿ ಎಚ್ಚರಾದರೆ ಈ ಸಮಯದಲ್ಲಿ ಆಹಾರ ಸೇವಿಸದಿರಿ. ಈ ಸಮಯದಲ್ಲಿ ಆಹಾರವನ್ನು ಜೀರ್ಣಿಸಿಕೊಳ್ಳಲು ದೇಹಕ್ಕೆ ಸಾಧ್ಯವಾಗುವುದಿಲ್ಲ ಹಾಗೂ ರಾತ್ರಿ ಜರುಗುವ ಅನೈಚ್ಛಿಕ ಕಾರ್ಯಗಳಿಗೂ ಭಂಗವುಂಟಾಗಬಹುದು. ಅಲ್ಲದೇ ರಾತ್ರಿ ಮಲಗುವ ಮುನ್ನ ಅತಿ ಹೆಚ್ಚಿನ ಕೊಬ್ಬಿನ ಅಥವಾ ಉಪ್ಪಿನ ಆಹಾರಗಳಾದ ಹ್ಯಾಂ ಬರ್ಗರ್, ಚಿಪ್ಸ್, ಎಣ್ಣೆಯಲ್ಲಿ ಕರಿದ, ಹುರಿದ ತಿಂಡಿಗಳನ್ನು ತಿನ್ನದಿರಿ. ಇದರಿಂದ ಎದೆಯುರಿ ಉಂಟಾಗಬಹುದು ಹಾಗೂ ನಿದ್ದೆ ಆವರಿಸಲು ಕಷ್ಟವಾಗಿಸಬಹುದು.

  English summary

  10 Things You Should Not Do When Tired

  The sleep cycle of the body requires consistency and if you are physically tired but mentally wired when going to bed, it can cause drowsiness again the very next day. This will wreak havoc to all the bodily functions such as hormone release, body temperature, immunity and weight control, and will cause loss of energy, low concentration, poor memory and a bad mood. So, you need to make some lifestyle changes, cut back on caffeine and alcohol, eat more of wholesome foods and exercise often. But apart from this, there are certain things you shouldn't do when you are tired.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more