For Quick Alerts
ALLOW NOTIFICATIONS  
For Daily Alerts

ರಂಜಾನ್ ಉಪವಾಸವನ್ನು ಉದ್ಯೋಗಿಗಳು ಹೇಗೆ ಪಾಲಿಸಬೇಕು?

By Arshad
|

ಮುಸ್ಲಿಮರಿಗೆ ಪವಿತ್ರವಾದ ರಂಜಾನ್ ತಿಂಗಳು ಪ್ರತಿವರ್ಷ ಹತ್ತು ದಿನ ಹಿಂದೆ ಬರುತ್ತಾ ಪ್ರತಿ ಮೂವತ್ತಾರು ವರ್ಷಗಳಿಗೊಮ್ಮೆ ಇಂಗ್ಲಿಷ್ ಕ್ಯಾಲೆಂಡರಿನ ಎಲ್ಲಾ ತಿಂಗಳುಗಳಲ್ಲಿ ಹಾದು ಹೋಗುತ್ತದೆ. ಈ ವರ್ಷ ಭಾರತದಲ್ಲಿ ಮಳೆ ಇರುವಾಗ ರಂಜಾನ್ ಬಂದಿದ್ದರೆ ಕೊಲ್ಲಿ ರಾಷ್ಟ್ರಗಳಲ್ಲಿ ಈಗ ಬಿರುಬೇಸಿಗೆ. ಮುಸ್ಲಿಂ ಕ್ಯಾಲೆಂಡರಿನ ಒಂಬತ್ತನೆಯ ತಿಂಗಳಾದ ರಂಜಾನ್ ಪವಿತ್ರ ಕುರಾನ್ ಭೂಮಿಗೆ ಅವತೀರ್ಣಗೊಂಡು ಪ್ರವಾದಿ ಮೊಹಮ್ಮದ್ ರ ಮೂಲಕ ಮನುಕುಲಕ್ಕೆ ಲಭ್ಯವಾದ ತಿಂಗಳೂ ಆಗಿದೆ.

ಮುಸ್ಲಿಮರಿಗೆ ಕಡ್ಡಾಯವಾದ ಐದು ವಿಧಿಗಳಲ್ಲಿ (five pillars of islam) ರಂಜಾನ್ ತಿಂಗಳಲ್ಲಿ ಉಪವಾಸವಿರುವುದೂ ಒಂದು. ಇದು ಎಲ್ಲಾ ಆರೋಗ್ಯವಂತ ವಯಸ್ಕರಿಗೆ ಕಡ್ಡಾಯವಾಗಿದೆ. ಮುಸ್ಲಿಂ ರಾಷ್ಟ್ರಗಳಲ್ಲಿ ಬೇಸಿಗೆಯ ಸಮಯದಲ್ಲಿ ಹೊರಗೆ ಕೆಲಸ ಮಾಡುವವರಿಗೆ ಮಧ್ಯಾಹ್ನದ ಅವಧಿಯಲ್ಲಿ ಕಡ್ಡಾಯವಾದ ವಿರಾಮವಿದೆ. ಈ ಹೊತ್ತಿನಲ್ಲಿ ಕಾರ್ಮಿಕರು ನೆರಳಿನಲ್ಲಿ ಅಥವಾ ಹವಾನಿಯಂತ್ರಣ ಇರುವ ಕೋಣೆಗಳಲ್ಲಿ ವಿಶ್ರಮಿಸಬಹುದು. ಅಂತೆಯೇ ಇತರ ಉದ್ಯೋಗಿಗಳಿಗೂ ನಿತ್ಯದ ಎಂಟು ಗಂಟೆಗಳ ಕೆಲಸವನ್ನು ಎರಡು ಗಂಟೆ ಕಡಿಮೆ ಮಾಡಿ ಆರು ಗಂಟೆಗೆ ಇಳಿಸಲಾಗುತ್ತದೆ. ಇದರಿಂದಾಗಿ ಸುಮಾರು ಹದಿನೈದು ಗಂಟೆ ಉಪವಾಸವಿರಬೇಕಾದವರಿಗೆ ಹೆಚ್ಚು ಕಷ್ಟವಾಗುವುದಿಲ್ಲ. ರಂಜಾನ್ ಮಾಸದಲ್ಲಿ ಖರ್ಜೂರಕ್ಕೆ ಏಕೆ ಅಷ್ಟೊಂದು ಮಹತ್ವ?

ಆದರೆ ಭಾರತದಲ್ಲಿ ರಂಜಾನ್ ಎಂದು ಕೆಲಸದ ಅವಧಿಯನ್ನು ಇಳಿಸುವ ಯಾವುದೇ ನೀತಿ ನಮ್ಮ ಸಂವಿಧಾನದಲ್ಲಿಲ್ಲ. ಆದರೆ ಭಾರತದಲ್ಲಿಯೂ ಸುಮಾರು ಹದಿನಾಲ್ಕುವರೆ ಗಂಟೆ ಉಪವಾಸವಿದ್ದು ಕೆಲಸವನ್ನು ನಿರ್ವಹಿಸುವುದು ಕಷ್ಟವೇ ಸರಿ. ಇದನ್ನು ಎದುರಿಸಲಾಗದೇ ಕೆಲವರು ತಮ್ಮಿಂದ ಆಗುವುದಿಲ್ಲ ಎಂದು ಕೈಚೆಲ್ಲಿ ಅಲ್ಲಾಹನು ನೀಡಿರುವ ಈ ಅಮೂಲ್ಯ ಉಡುಗೊರೆಯಿಂದ ವಂಚಿತರಾಗುತ್ತಾರೆ. ಅಥವಾ ಉಪವಾಸವಿದ್ದು ಸುಸ್ತಾಗಿ ಕೆಲಸದಲ್ಲಿ ಅತೀವ ಆಯಾಸವಾಗಿ ಬೇಗನೇ ಮನೆಗೆ ಹೋಗಲು ಅಪ್ಪಣೆ ಕೇಳಿ ಕೇಳಿ ತಮ್ಮ ಔದ್ಯೋಗಿಕ ಬದುಕನ್ನು ಕೆಡಿಸಿಕೊಳ್ಳುತ್ತಾರೆ.

ಆದರೆ ಹೆಚ್ಚಿನವರು ಇದನ್ನು ಒಪ್ಪದೇ ಉಪವಾಸವಿರುವ ಸಂಕಲ್ಪ ತೊಡುತ್ತಾರೆ. ಉದ್ಯೋಗಸ್ಥರು ಕೆಲವು ಸುಲಭವಾದ ವಿಧಾನಗಳನ್ನು ಅಳವಡಿಸಿಕೊಳ್ಳುವುದರಿಂದ ಈ ಉಪವಾಸದ ಹೊರೆಯನ್ನು ಕೊಂಚ ಕಡಿಮೆ ಮಾಡಿಕೊಳ್ಳಬಹುದು. ಸುಲಭವಾಗಿ ಹೊಂದಿಕೊಳ್ಳಬಹುದಾದ ಈ ಪರಿಹಾರಗಳ ಮೂಲಕ ರಮಧಾನ್ ತಿಂಗಳ ಫಲವನ್ನು ಹೆಚ್ಚು ಪಡೆಯುವಂತಾಗುತ್ತದೆ. ಈ ಬಗ್ಗೆ ಕೆಲವು ವಿವರಗಳನ್ನು ಇಲ್ಲಿ ನೀಡಲಾಗಿದೆ...

ಊಟದ ಅವಧಿಯಲ್ಲಿ ಕೆಲಸ ಮಾಡಿ ಅಷ್ಟು ಹೊತ್ತು ಮುಂಚಿತವಾಗಿ ಹೊರಡಿ

ಊಟದ ಅವಧಿಯಲ್ಲಿ ಕೆಲಸ ಮಾಡಿ ಅಷ್ಟು ಹೊತ್ತು ಮುಂಚಿತವಾಗಿ ಹೊರಡಿ

ಎಲ್ಲರೂ ಊಟದ ಅವಧಿಯಲ್ಲಿ ಊಟದಲ್ಲಿ ವ್ಯಸ್ತರಾಗಿದ್ದರೆ ಆ ಹೊತ್ತಿನಲ್ಲಿ ನೀವು ಬಿಡುವಾಗಿರುತ್ತೀರಿ. ಆದರೆ ಈ ಅವಧಿಯನ್ನು ನಿಮ್ಮ ನಿತ್ಯದ ಕೆಲಸದ ಗಂಟೆಗಳಾಗಿ ಪರಿಗಣಿಸಿ ಸಂಜೆ ಅಷ್ಟು ಹೊತ್ತು ಮುಂಚಿತವಾಗಿ ಮನೆಗೆ ತೆರಳಲು ಒಪ್ಪಿಗೆ ನೀಡುವಂತೆ ನಿಮ್ಮ ಮೇಲಧಿಕಾರಿಗಳಿಗೆ ಸಂಸ್ಥೆಯಲ್ಲಿರುವ ಅಷ್ಟೂ ಮುಸ್ಲಿಂ ಉದ್ಯೋಗಿಗಳ ಪರವಾಗಿ ಮನವಿ ಸಲ್ಲಿಸಿ. ಒಂದು ವೇಳೆ ಇದು ಸಂಸ್ಥೆಯ ನಿಯಮಗಳಿಗೆ ವಿರುದ್ಧವಾಗಿದ್ದರೆ ಊಟದ ಅವಧಿಯಲ್ಲಿ ನಿದ್ರಿಸಿ ಸಾಕಷ್ಟು ವಿರಾಮ ಪಡೆಯುವುದರ ಮೂಲಕ ಉಪವಾಸವನ್ನು ಸಮರ್ಥವಾಗಿ ಎದುರಿಸಬಹುದು.

ಕೆಲಸದ ವೇಳೆಯಲ್ಲಿ ಬಾಯಾರಿಕೆಯಾಗದಂತೆ ತಡೆಯಲು ಹೀಗೆ ಮಾಡಿ

ಕೆಲಸದ ವೇಳೆಯಲ್ಲಿ ಬಾಯಾರಿಕೆಯಾಗದಂತೆ ತಡೆಯಲು ಹೀಗೆ ಮಾಡಿ

ವಿವಿಧ ಚಟುವಟಿಕೆಯ ಕಾರಣ ದೇಹ ನೀರನ್ನು ಸತತವಾಗಿ ಕಳೆದುಕೊಳ್ಳುತ್ತಾ ಹೋಗುತ್ತದೆ. ಇದನ್ನು ತಡೆಯಲು ಸಹರಿ (ಅಂದರೆ ಮುಂಜಾನೆಯ ಊಟದ ಹೊತ್ತು) ಸಮಯದಲ್ಲಿ ಊಟವಾದ ಬಳಿಕ ಹಣ್ಣಿನ ರಸ, ನೀರು ಮತ್ತು ಹಾಲು ಖರ್ಜೂರ ಬೆರೆಸಿ ತಯಾರಿಸಿದ ಜ್ಯೂಸ್ ಕುಡಿಯಿರಿ. ಇದು ದಿನವಿಡೀ ದೇಹಕ್ಕೆ ಅಗತ್ಯವಾದ ನೀರನ್ನು ಒದಗಿಸುತ್ತಾ ಬಾಯಾರಿಕೆಯಾಗುವ ಮತ್ತು ಸುಸ್ತಾಗುವ ಸಂಭವವನ್ನು ಸಾಕಷ್ಟು ಕಡಿಮೆ ಮಾಡುತ್ತದೆ. ನಿಮ್ಮ ಮನೆಯಲ್ಲಿ ಕುಚ್ಚಿಗೆ ಅನ್ನ ಮಾಡುತ್ತಾರಾದರೆ ಅನ್ನ ಬಸಿದ ನೀರನ್ನು ತಣಿಸಿ ಕುಡಿಯುವುದೂ ಉತ್ತಮವಾಗಿದೆ.

ನಿಮ್ಮ ಮಾತುಗಳಲ್ಲಿ ಕೋಪ, ಬೈಗುಳ ಬರದೇ ಇರಲಿ

ನಿಮ್ಮ ಮಾತುಗಳಲ್ಲಿ ಕೋಪ, ಬೈಗುಳ ಬರದೇ ಇರಲಿ

ಸಾಮಾನ್ಯವಾಗಿ ಸಹೋದ್ಯೋಗಿಗಳ ನಡುವೆ ಸಲುಗೆ ಬೆಳೆದಂತೆ ಏಕವಚನದಲ್ಲಿ ಕರೆಯುವುದು ಮತ್ತು ಮಾತುಗಳಲ್ಲಿ ಅವಾಚ್ಯ ಶಬ್ದಗಳನ್ನು ಬಳಸುವುದು ಸಾಮಾನ್ಯವಾಗಿದೆ. ಅಂತೆಯೇ ಇತರರಿಂದ ಕೆಲಸ ತೆಗೆದುಕೊಳ್ಳಬೇಕಾದಾಗಲೂ ಈ ಶಬ್ಧಗಳನ್ನು ಬಳಸಬೇಕಾಗುತ್ತದೆ. ಆದರೆ ರಮಧಾನ್ ಅಥವಾ ರಂಜಾನ್ ತಿಂಗಳಲ್ಲಿ ಅವಾಚ್ಯ, ಬೈಗುಳ, ಕೋಪ ಇಂತಹವುಗಳಿಂದ ಸಾಧ್ಯವಾದಷ್ಟು ದೂರವಿರಿ.ನಿಮ್ಮ ಮಾತುಗಳು ಸಾಕಷ್ಟು ನಯವಾಗಿರಲಿ.ನಯವಾದ ಮಾತುಗಳಿಂದಲೂ ಕೆಲಸ ಮಾಡಿಕೊಳ್ಳುವುದು ಸಾಧ್ಯ ಎಂಬುದು ನಿಮಗೆ ಮನದಟ್ಟಾಗುತ್ತದೆ. ಕೋಪದಿಂದ ಏರುವ ರಕ್ತದೊತ್ತಡ ಉಪವಾಸವನ್ನು ಕಷ್ಟಕರವಾಗಿಸುತ್ತದೆ.

ರಾತ್ರಿಯ ಪಾಳಿ ಅಥವಾ ತಡರಾತ್ರಿಯವರೆಗೆ ಇರುವ ಪಾಳಿಗಳನ್ನು ನಿರ್ವಹಿಸದಿರಿ

ರಾತ್ರಿಯ ಪಾಳಿ ಅಥವಾ ತಡರಾತ್ರಿಯವರೆಗೆ ಇರುವ ಪಾಳಿಗಳನ್ನು ನಿರ್ವಹಿಸದಿರಿ

ರಂಜಾನ್‌ನಲ್ಲಿ ರಾತ್ರಿ ನೆರವೇರಿಸುವ ವಿಶೇಷ ಪ್ರಾರ್ಥನೆಗಳು ಇರುವುದರಿಂದ ಮತ್ತು ಸಹರಿಯನ್ನು ಸಹಾ ತಡರಾತ್ರಿಯಲ್ಲಿಯೇ ಸೇವಿಸಬೇಕಾದುದು ಅನಿವಾರ್ಯವಾದುದರಿಂದ ರಾತ್ರಿ ಪಾಳಿ ಅಥವಾ ತಡವಾಗಿ ಮುಕ್ತಾಯಗೊಳ್ಳುವ ಪಾಳಿಯಿಂದ ಈ ತಿಂಗಳ ಮಟ್ಟಿಗೆ ಬದಲಾವಣೆ ನೀಡುವಂತೆ ನಿಮ್ಮ ಮೇಲಧಿಕಾರಿಯನ್ನು ವಿನಂತಿಸಿಕೊಳ್ಳಿ.

ಗಾಳಿಸುದ್ದಿ ಹರಡದಿರಿ

ಗಾಳಿಸುದ್ದಿ ಹರಡದಿರಿ

ಯಾವುದೇ ಕಚೇರಿಯಲ್ಲಿ ಕೊಂಚ ಗಾಳಿಸುದ್ದಿ ಇಲ್ಲದೇ ಇರುವುದಿಲ್ಲ. ಆದರೆ ಗಾಳಿಸುದ್ದಿಯನ್ನು ಹರಡುವವರನ್ನು ಪ್ರವಾದಿಗಳು ಶಪಿಸಿದ್ದಾರೆ. ರಮಧಾನ್ ತಿಂಗಳಲ್ಲಿ ಕೆಲಸದ ನಡುವೆ ಸಿಗುವ ಕೊಂಚ ವಿರಾಮದ ಸಮಯವನ್ನು ಈ ಗಾಳಿಸುದ್ದಿ, ಹರಟೆ, ಕ್ರಿಕೆಟ್ ಮೊದಲಾದ ವಿಷಯಗಳಿಗೆ ವಿನಿಯೋಗಿಸುವ ಬದಲು ಪವಿತ್ರ ಕುರಾನ್ ಅನ್ನು ಓದಿ ಅದನ್ನು ಅರ್ಥೈಸಿಕೊಳ್ಳಲು ಯತ್ನಿಸಿ. ಈಗ ಪವಿತ್ರ ಕುರಾನ್ ಅನ್ನು ಪುಸ್ತಕರೂಪದಲ್ಲಿಯೇ ಕೊಂಡೊಯ್ಯಬೇಕಾಗಿಲ್ಲ. ನಿಮ್ಮ ಸ್ಮಾರ್ಟ್ ಫೋನ್‌ನಲ್ಲಿ ನೂರಾರು ಉಚಿತ, ನಿಮ್ಮ ಭಾಷೆಯ (ಕನ್ನಡದ ಕುರಾನ್ App ಸಹಾ ಲಭ್ಯವಿದೆ) ಪ್ರತಿಗಳನ್ನು ಸ್ಥಾಪಿಸಿ ಇದರ ಪ್ರಯೋಜನ ಪಡೆಯಿರಿ.

ಸಾಕಷ್ಟು ತಾಳ್ಮೆ ವಹಿಸಿರಿ

ಸಾಕಷ್ಟು ತಾಳ್ಮೆ ವಹಿಸಿರಿ

ಕೆಲಸದ ವೇಳೆ ಸಾಕಷ್ಟು ಸಾವಧಾನ ವಹಿಸಿ. ಕೆಲಸದ ಒತ್ತಡದಲ್ಲಿ ಮನಸ್ಸಿನ ಸ್ಥಿಮಿತ ಕಳೆದುಕೊಳ್ಳುವಂತಾದ ಪರಿಸ್ಥಿತಿಯಲ್ಲಿಯೂ ನಿರುಮ್ಮಳರಾಗಿರಲು ಯತ್ನಿಸಿ. ರಂಜಾನ್ ತಿಂಗಳು, ನಾನು ಉಪವಾಸವಿದ್ದೇನೆ, ಈ ಹೊತ್ತಿನಲ್ಲಿ ಶಾಂತನಾಗಿರುವುದು ನನ್ನ ಕರ್ತವ್ಯ ಎಂದು ನಿಮಗೆ ನೀವೇ ಹೇಳಿಕೊಳ್ಳಿ ಹಾಗೂ ಸರ್ವಥಾ ಕೋಪಗೊಳ್ಳಬೇಡಿ ಅಥವಾ ಉದ್ವೇಗಕ್ಕೊಳಗಾಗಬೇಡಿ. ಪರಿಸ್ಥಿತಿಯನ್ನು ನಿಧಾನವಾಗಿ ಎದುರಿಸಿ ಪರಿಹಾರ ಕಂಡುಕೊಳ್ಳಿ. ಏಕೆಂದರೆ ಉದ್ವೇಗ, ಕೋಪ, ಹತಾಷೆ, ಕೂಗಾಡುವುದು ಮೊದಲಾದವು ದೇಹದ ಅತ್ಯಂತ ಹೆಚ್ಚಿನ ಚೈತನ್ಯವನ್ನು ಕಬಳಿಸಿಬಿಡುತ್ತವೆ. ಬಳಿಕ ಉಪವಾಸದ ಇತರ ಅವಧಿಯನ್ನು ಮುಗಿಸಲು ದೇಹ ತುಂಬಾ ಬಳಲುತ್ತದೆ.

ಕೆಲಸದ ಅವಧಿಯಲ್ಲಿ ಚುರುಕಾಗಿರಲು ಬೆಳಗ್ಗಿನ ನಮಾಜಿನ ಬಳಿಕ ನಿದ್ರಿಸಿ

ಕೆಲಸದ ಅವಧಿಯಲ್ಲಿ ಚುರುಕಾಗಿರಲು ಬೆಳಗ್ಗಿನ ನಮಾಜಿನ ಬಳಿಕ ನಿದ್ರಿಸಿ

ಬೆಳಗ್ಗಿನ ನಮಾಜು ಮುಗಿದು ಕೆಲಸಕ್ಕೆ ಹಾಜರಾಗಲು ತಗಲುವ ಪ್ರಯಾಣದ ಅವಧಿಯನ್ನು ಪರಿಗಣಿಸಿ ಉಳಿದ ಅವಧಿಯಲ್ಲಿ ಸಾಕಷ್ಟು ನಿದ್ರಿಸಿ.ಇದರಿಂದ ದೇಹಕ್ಕೆ ಮುಂಜಾನೆಯ ಆಹಾರದ ಮೂಲಕ ಸಾಕಷ್ಟು ಚೈತನ್ಯ ದೊರೆತು ಇಡಿಯ ದಿನದ ಚಟುವಟಿಕೆಗಳಿಗೆ ಸನ್ನದ್ಧಗೊಳ್ಳಲು ಸಾಧ್ಯವಾಗುತ್ತದೆ. ಪರಿಣಾಮವಾಗಿ ಇಡಿಯ ದಿನ ನಿದ್ದೆಯ ಗುಂಗಿನಲ್ಲಿರುವುದು ತಪ್ಪುತ್ತದೆ.

ಕಚೇರಿಯಲ್ಲಿಯೇ ಇಫ್ತಾರ್ ವ್ಯವಸ್ಥೆ ಮಾಡಿಕೊಳ್ಳಿ

ಕಚೇರಿಯಲ್ಲಿಯೇ ಇಫ್ತಾರ್ ವ್ಯವಸ್ಥೆ ಮಾಡಿಕೊಳ್ಳಿ

ಒಂದು ವೇಳೆ ಕಚೇರಿಯ ಅವಧಿಯ ಬಳಿಕ ಮನೆ ಸೇರುವ ಮೊದಲೇ ಇಫ್ತಾರ್ ಸಮಯವಾಗುವಂತಿದ್ದರೆ, ಅಥವಾ ಬೇಗನೇ ಸೇರಬೇಕೆಂಬ ಆತುರದಲ್ಲಿ ವಾಹನವನ್ನು ಅತಿವೇಗವಾಗಿ ಚಲಾಯಿಸುವ ಅನಿವಾರ್ಯತೆ ಎದುರಾದರೆ, ಇದಕ್ಕೆ ಕಚೇರಿಯಲ್ಲಿಯೇ ಇತರ ಮುಸ್ಲಿಮರೊಂದಿಗೆ ಕೂಡಿ ಇಫ್ತಾರ್ ವ್ಯವಸ್ಥೆ ಮಾಡಿಕೊಳ್ಳಿ. ನಿಮ್ಮ ಸಹೋದ್ಯೋಗಿಗಳನ್ನೂ ಇಫ್ತಾರ್ ಕೂಟದಲ್ಲಿ ಭಾಗವಹಿಸಲು ಆಮಂತ್ರಿಸುವ ಮೂಲಕ ಸೌಹಾರ್ದತೆಯನ್ನು ಉತ್ತಮಗೊಳಿಸಬಹುದು. ಹತ್ತಿರದಲ್ಲಿ ಮಸೀದಿಯಿದ್ದರೆ ಅಲ್ಲಿ ಒದಗಿಸಲಾಗುವ ವ್ಯವಸ್ಥೆಗಳ ಪ್ರಯೋಜನ ಪಡೆಯಬಹುದು. ಆದರೆ ಸರ್ವಥಾ ನಿಮ್ಮ ಪ್ರಾಣವನ್ನು ಪಣಕ್ಕಿಡಬೇಡಿ.

English summary

Fasting During Ramadan While Working: Rules

Ramadan is a time when Muslims all over the world refrain from eating or drinking between sunrise and sunset. The Muslims stay away from worldly materialism and ask for Allah's forgiveness. Ramadan is also a month when there was revelation of the Holy Qur'an to Prophet Mohammed
X
Desktop Bottom Promotion