Just In
Don't Miss
- Technology
ಜಿ-ಮೇಲ್ ಬಳಕೆದಾರರಿಗೆ ಹೊಸ ಫಿಚರ್ಸ್ ಪರಿಚಯಿಸಿದ ಗೂಗಲ್!
- Automobiles
ಹೊಸ ಸಿಟಿ ಆರ್ಎಸ್ ಕಾರಿನ ವೀಡಿಯೋ ಬಿಡುಗಡೆಗೊಳಿಸಿದ ಹೋಂಡಾ
- News
ಅನರ್ಹ ಶಾಸಕ ರೋಷನ್ ಬೇಗ್ ಮುಂದಿನ ನಡೆ ಏನು?
- Movies
ನಿರ್ದೇಶನ, ನಿರ್ಮಾಣದ ನಂತರ ವಿತರಕರಾದ ನಾಗತಿಹಳ್ಳಿ ಚಂದ್ರಶೇಖರ್
- Travel
ಬೀಚ್ಗೆ ಹೋಗುವ ಮುನ್ನ ಈ ಸಂಗತಿಗಳು ನೆನಪಿನಲ್ಲಿರಲಿ
- Sports
ಕ್ರಿಕೆಟ್ನಿಂದ ದೂರವಿರುವ ಧೋನಿ ಸೈನಿಕರಿಗಾಗಿ ಮಾಡುತ್ತಿರೋದೇನು!
- Finance
ಗುಡ್ ರಿಟರ್ನ್ ವೃತ್ತಿ ಮಾರ್ಗದರ್ಶಿ: ಅಡುಗೆ ಕಾಂಟ್ರ್ಯಾಕ್ಟ್ ಬಗ್ಗೆ ಇಂಚಿಂಚು ಮಾಹಿತಿ
- Education
HAL Recruitment 2019: ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಮುಂಜಾನೆ ಇಂತಹ ಪಾನೀಯಗಳನ್ನು ಸೇವಿಸಲೇಬಾರದು, ಇಲ್ಲಾಂದ್ರೆ ತೂಕ ಹೆಚ್ಚಾಗುತ್ತದೆ
ನಾವು ತಿನ್ನುವಂತಹ ಆಹಾರ, ಜೀವನಶೈಲಿ ಹಾಗೂ ಕೆಲವೊಂದು ಸಲ ಅನುವಂಶೀಯತೆ ಕಾರಣದಿಂದಾಗಿ ದೇಹದಲ್ಲಿ ಬೊಜ್ಜು ಬೆಳೆಯುವುದು ಸಾಮಾನ್ಯ ವಿಚಾರವಾಗಿದೆ. ಇಂತಹ ಸಮಯದಲ್ಲಿ ಬೊಜ್ಜು ಕಡಿಮೆ ಮಾಡಲು ಇನ್ನಿಲ್ಲದಂತೆ ಪ್ರಯತ್ನ ಮಾಡಲಾಗುತ್ತದೆ. ಯಾಕೆಂದರೆ ಬೊಜ್ಜು ದೇಹವಿದ್ದರೆ ಅದರಿಂದ ಹಲವಾರು ರೀತಿಯ ಸಮಸ್ಯೆಗಳು ಹಾಗೂ ಕಾಯಿಲೆಗಳು ಕಾಡುವುದು. ಕೆಲವರ ದೇಹದಲ್ಲಂತೂ ಅತಿಯಾದ ಬೊಜ್ಜು ಬೆಳೆದಿರುವುದು. ಈ ಕಾರಣದಿಂದಾಗಿ ಅವರಿಗೆ ತಮ್ಮ ದೈನಂದಿನ ಚಟುವಟಿಕೆಗಳನ್ನು ಸರಿಯಾಗಿ ಮಾಡಿಕೊಳ್ಳಲು ಆಗಲ್ಲ. ಹೀಗೆ ಬೊಜ್ಜು ಇಳಿಸುವ ಕ್ರಮವಾಗಿ ಹೆಚ್ಚಿನ ಜನರು ಮೊದಲಾಗಿ ಮಾಡುವುದು ಆಹಾರ ಕ್ರಮದಲ್ಲಿ ಬದಲಾವಣಿ. ಅದರ ಬಳಿಕ ಸರಿಯಾದ ವ್ಯಾಯಾಮ.
ಇದೆರಡನ್ನು ಕ್ರಮಬದ್ಧವಾಗಿ ಮಾಡಿಕೊಂಡು ಹೋದರೆ ಖಂಡಿತವಾಗಿಯೂ ಬೊಜ್ಜು ಕರಗುವುದು. ಆದರೆ ನೀವು ಮಾಡಿರುವಂತಹ ಆಹಾರ ಕ್ರಮದಲ್ಲೇ ಬೊಜ್ಜು ಹೆಚ್ಚಿಸುವಂತಹ ಆಹಾರ ಅಥವಾ ಪಾನೀಯಗಳು ಇದ್ದರೆ, ಆಗ ಖಂಡಿತವಾಗಿಯೂ ನಿಮ್ಮ ಪ್ರಯತ್ನವು ನೀರಿನ ಮೇಲಿನ ಹೋಮದಂತೆ ಆಗುವುದು. ನೀವು ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿದರೆ, ಕೆಲವೊಂದು ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ನೀವು ಬೆಳಗ್ಗೆ ಉಪಾಹಾರಕ್ಕೆ ಯಾವುದಾದರೂ ಜ್ಯೂಸ್ ಅಥವಾ ಕಾಫಿ ಕುಡಿಯಬಹುದು. ಆದರೆ ನೀವು ಕುಡಿಯವಂತಹ ಜ್ಯೂಸ್ ಕೂಡ ನಿಮ್ಮ ದೇಹದ ತೂಕ ಹೆಚ್ಚಳದಲ್ಲಿ ಭಾಗಿಯಾದರೆ ಆಗ ಏನು ಮಾಡುವುದು? ಈ ಲೇಖನದಲ್ಲಿ ದೇಹದ ತೂಕ ಹೆಚ್ಚಿಸುವ ಐದು ಪಾನೀಯಗಳ ಬಗ್ಗೆ ನಾವು ನಿಮಗೆ ತಿಳಿಸಿಕೊಡಲಿದ್ದೇವೆ. ಇದನ್ನು ನೀವು ತಿಳಿಯಿರಿ.

ಸಿಹಿ ಲಸ್ಸಿ
ಉತ್ತರ ಭಾರತೀಯರು ಮತ್ತು ಪೂರ್ವ ಭಾರತದಲ್ಲಿ ಬೆಳಗ್ಗೆ ಉಪಾಹಾರದ ಜತೆಗೆ ಸಿಹಿ ಲಸ್ಸಿ ಕುಡಿಯುವುದು ತುಂಬಾ ಜನಪ್ರಿಯತೆ ಪಡೆದಿದೆ. ಇದು ಮೊಸರು, ನೀರು ಮತ್ತು ಸಕ್ಕರೆ ಮಿಶ್ರಣವಾಗಿದೆ. ಅದರಲ್ಲೂ ಪಂಜಾಬಿಗಳು ಉಪಾಹಾರದಲ್ಲಿ ಪರಾಟ ಜತೆಗೆ ಸಿಹಿ ಲಸ್ಸಿ ಕುಡಿಯುತ್ತಾರೆ. ಒಂದು ಲೋಟ ಸಿಹಿ ಲಸ್ಸಿಯಲ್ಲಿ ಸುಮಾರು 160 ಕ್ಯಾಲರಿ ಇದೆ. ಸಿಹಿ ಲಸ್ಸಿಯಲ್ಲಿ ಹೆಚ್ಚಿನ ಕೊಬ್ಬು ಮತ್ತು ಸಕ್ಕರೆ ಅಂಶವಿದೆ. ಇದನ್ನು ನಿಯಮಿತವಾಗಿ ಸೇವನೆ ಮಾಡುವ ಪರಿಣಾಮ ತೂಕವು ಏರಿಕೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಸುವಾಸನೆಯುಕ್ತ ಹಾಲು
ಹಾಲು ತುಂಬಾ ಪೋಷಕಾಂಶಗಳನ್ನು ಒಳಗೊಂಡಿರುವಂತಹ ಪಾನೀಯ. ಆದರೆ ಹಾಲಿಗೆ ಸಕ್ಕರೆ, ಚಾಕಲೇಟ್ ಇತ್ಯಾದಿಗಳನ್ನು ಹಾಕಿಕೊಂಡು ಸುವಾಸನೆಯುಕ್ತವಾಗಿ ಮಾಡಿದರೆ, ಅದರಿಂದ ಕ್ಯಾಲರಿಯು ಹೆಚ್ಚಾಗುವುದು. ಇದನ್ನು ಕುಡಿದರೆ, ಆಗ ನಿಮಗೆ ತೂಕ ಇಳಿಸಿಕೊಳ್ಳಲು ತುಂಬಾ ಕಷ್ಟವಾಗುವುದು. ಒಂದು ಲೋಟ ಸುವಾಸಿತ ಹಾಲಿನಲ್ಲಿ ಸುಮಾರು 160 ಕ್ಯಾಲರಿ ಒಳಗೊಂಡಿದೆ.

ಕಿತ್ತಳೆ ಹಣ್ಣಿನ ಜ್ಯೂಸ್
ತಾಜಾ ಕಿತ್ತಳೆ ಹಣ್ಣನ್ನು ಸೇವನೆ ಮಾಡುವುದು ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಜ್ಯೂಸ್ ಕುಡಿಯುವುದು ಅಷ್ಟು ಒಳ್ಳೆಯದಲ್ಲ ಎಂದು ಪರಿಗಣಿಸಲಾಗಿದೆ. ಹಣ್ಣಿನಿಂದ ಜ್ಯೂಸ್ ತೆಗೆದ ವೇಳೆ ಅದರ ಪೋಷಕಾಂಶ ಮೌಲ್ಯಗಳು ಕಳೆದು ಹೋಗುವುದು ಮತ್ತು ನಾರಿನಾಂಶ ಕೂಡ ನಾಶವಾಗುವುದು. ಇದರಿಂದ ನೀವು ಪತ್ರಿನಿತ್ಯ ಕಿತ್ತಳೆ ಹಣ್ಣಿನ ಜ್ಯೂಸ್ ಕುಡಿದರೆ ಅದರಿಂದ ತೂಕ ಕಳೆದುಕೊಳ್ಳಲು ಯಾವುದೇ ನೆರವು ಆಗುವುದಿಲ್ಲ. ಇದರಿಂದ ಕ್ಯಾಲರಿಯು ಅತಿಯಾಗಿ ದೇಹ ಸೇರಲಿದೆ. ಒಂದು ಗ್ಲಾಸ್ ಜ್ಯೂಸ್ ನಲ್ಲಿ ಸುಮಾರು 220 ಕ್ಯಾಲರಿ ಇದೆ.

ಬಾಳೆಹಣ್ಣಿನ ಮಿಲ್ಕ್ ಶೇಕ್
ಭಾರತೀಯರ ಹೆಚ್ಚಿನ ಮನೆಗಳಲ್ಲಿ ಬಾಳೆಹಣ್ಣನ್ನು ಬೆಳಗ್ಗಿನ ಉಪಾಹಾರದ ವೇಳೆ ಬಳಸಿಕೊಳ್ಳುವರು. ಯಾಕೆಂದರೆ ಇದರಲ್ಲಿ ಹೆಚ್ಚಿನ ನಾರಿನಾಂಶ, ಪೊಟಾಶಿಯಂ, ಒಳ್ಳೆಯ ಕಾರ್ಬೊಹೈಡ್ರೇಟ್ಸ್, ವಿಟಮಿನ್ ಗಳು ಮತ್ತು ಖನಿಜಾಂಶಗಳು ಇವೆ. ಅದಾಗ್ಯೂ, ನಿಮಗೆ ದೇಹದ ತೂಕ ಕಳೆದುಕೊಳ್ಳಬೇಕು ಎಂದಾಗಿದ್ದರೆ, ಆಗ ನೀವು ಬಾಳೆಹಣ್ಣು ಮತ್ತು ಹಾಲನ್ನು ಜತೆಯಾಗಿ ಸೇವನೆ ಮಾಡುವುದನ್ನು ನಿಲ್ಲಿಸಬೇಕು. ಬಾಳೆಹಣ್ಣಿನ ಮಿಲ್ಕ್ ಶೇಕ್ ನಲ್ಲಿ ಸುಮಾರು 160-180 ಕ್ಯಾಲರಿ ಇದೆ. ಇದು ನಿಮ್ಮ ತೂಕವನ್ನು ಎಷ್ಟು ಹೆಚ್ಚಿಸಬಹುದು ಎಂದು ಆಲೋಚನೆ ಮಾಡಿ.

ಸ್ಮೂಥಿಗಳು
ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರುವಂತಹ ಜನರು ಬೆಳಗ್ಗೆ ಒಂದು ಗ್ಲಾಸ್ ಸ್ಮೂಥಿ ಕುಡಿದು ದಿನದ ಆರಂಭ ಮಾಡುವರು. ಆದರೆ ಸ್ಮೂಥಿಯಲ್ಲಿ ಎಷ್ಟು ಕೊಬ್ಬು ಮತ್ತು ಕಾರ್ಬ್ಸ್ ಇದೆ ಎಂದು ನಿಮಗೆ ತಿಳಿದಿದೆಯಾ? ಒಂದು ಗ್ಲಾಸ್ ಸ್ಮೂಥಿ ನೀವು ಕುಡಿದರೆ ಅದು ನಿಮ್ಮ ತೂಕವನ್ನು ಮತ್ತಷ್ಟು ಹೆಚ್ಚಿಸುವುದು ಖಚಿತ. ಯಾಕೆಂದರೆ ಒಂದು ಗ್ಲಾಸ್ ಸ್ಮೂಥಿಯಲ್ಲಿ ಸುಮಾರು 145-160 ಕ್ಯಾಲರಿ ಇದೆ. ಇದರಿಂದ ನೀವು ಬೆಳಗ್ಗಿನ ಉಪಾಹಾರದ ವೇಳೆ ಕುಡಿಯುವಂತಹ ಸ್ಮೂಥಿ ಬಗ್ಗೆ ತುಂಬಾ ಎಚ್ಚರಿಕೆ ವಹಿಸಬೇಕು. ನೀವು ಉಪಾಹಾರದ ವೇಳೆ ಕುಡಿಯುವಂತಹ ಪಾನೀಯಗಳು ಕೂಡ ತೂಕ ಹೆಚ್ಚಿಸಲು ಅಥವಾ ಕಡಿಮೆ ಮಾಡುವಲ್ಲಿ ಪಾತ್ರ ವಹಿಸಬಹುದು. ನಿಮಗೆ ತೂಕ ಇಳಿಸಬೇಕಿದ್ದರೆ ಈ ಮೇಲಿನ ಪಾನೀಯಗಳನ್ನು ಕಡೆಗಣಿಸಿ.