For Quick Alerts
ALLOW NOTIFICATIONS  
For Daily Alerts

ಮಧುಮೇಹಿಗಳಿಗೆ ಯಾವ ಪಾನೀಯ ಒಳ್ಳೆಯದು ಯಾವುದು ಒಳ್ಳೆಯದಲ್ಲ

|

ಮಧುಮೇಹದ ಬಗ್ಗೆ ಜನಸಾಮಾನ್ಯರಲ್ಲಿ ಇರುವ ನಂಬಿಕೆ ಎಂದರೆ ಮಧುಮೇಹ ಸಕ್ಕರೆ ತಿನ್ನುವುದರಿಂದ ಬರುತ್ತದೆ ಎಂಬುದಾಗಿದೆ. ವಾಸ್ತವದಲ್ಲಿ, ದೇಹದ ಮೇದೋಜೀರಕ ಗ್ರಂಥಿ ಉತ್ಪಾದಿಸುವ ಇನ್ಸುಲಿನ್ ಕೊರತೆ ಅಥವಾ ಇನ್ಸುಲಿನ್ ಇದ್ದರೂ ಬಳಸಿಕೊಳ್ಳಲಾಗದ ಸ್ಥಿತಿಯಲ್ಲಿ ರಕ್ತದಲ್ಲಿರುವ ಗ್ಲುಕೋಸ್ ಎಂಬ ಸಕ್ಕರೆ ಬಳಸಲ್ಪಡದೇ ಮೂತ್ರದ ಮೂಲಕ ಹೊರಹೋಗುತ್ತದೆ. ಈ ಸ್ಥಿತಿ ಒಂದು ಕಾಯಿಲೆಯಲ್ಲ, ಬದಲಿಗೆ ದೇಹದ ಒಂದು ಶಿಥಿಲ ಅವಸ್ಥೆಯಾಗಿದ್ದು ಈ ಮೂಲಕ ಕೆಲವಾರು ಕಾಯಿಲೆಗಳು ಆವರಿಸುವ ಸಾಧ್ಯತೆ ಹೆಚ್ಚುತ್ತದೆ. ಅಲ್ಲದೇ ಮಧುಮೇಹ ಎದುರಾದ ಬಳಿಕ ಇದನ್ನು ಗುಣಪಡಿಸಲು ಸಾಧ್ಯವಿಲ್ಲ. ಹಾಗಾಗಿ, ಮಧುಮೇಹ ಎದುರಾದ ಬಳಿಕ ಇದನ್ನು ನಿಯಂತ್ರಿಸಿಕೊಂಡು ಬೇರಾವುದೇ ರೋಗಗಳು ಬಾರದಂತೆ ಆರೋಗ್ಯವನ್ನು ಕಾಪಾಡಿಕೊಂಡು ಹೋಗುವುದೇ ಸರಿಯಾದ ಮಾರ್ಗ.

ಮಧುಮೇಹದ ನಿಯಂತ್ರಣದಲ್ಲಿ ಮುಖ್ಯವಾದ ಪಾತ್ರವೆಂದರೆ ಆಹಾರಕ್ರಮದಲ್ಲಿ ಬದಲಾವಣೆ. ಕೆಲವು ಆಹಾರಗಳನ್ನು ಮಿತಗೊಳಿಸಿ ಕೆಲವನ್ನು ಹೆಚ್ಚಿಸಬೇಕಾಗುತ್ತದೆ. ದ್ರವಾಹಾರಗಳೂ ಅಷ್ಟೇ, ಸಕ್ಕರೆ ಇರುವ ಪೇಯಗಳನ್ನು ವರ್ಜಿಸಿ ಇತರ ಪೇಯಗಳನ್ನು ಕುಡಿಯಬೇಕಾಗುತ್ತದೆ. ಅಮೇರಿಕಾದ ಮಧುಮೇಹ ಸಂಸ್ಥೆ -The American Diabetes Association (ADA) ಮಧುಮೇಹಿಗಳು ಕ್ಯಾಲೋರಿಯಿಲ್ಲದ ಅಥವಾ ಕಡಿಮೆ ಕ್ಯಾಲೋರಿಗಳಿರುವ ಪೇಯಗಳನ್ನು ಕುಡಿಯಲು ಶಿಫಾರಸ್ಸು ಮಾಡುತ್ತದೆ. ಇದರ ಮುಖ್ಯ ಉದ್ದೇಶ ರಕ್ತದಲ್ಲಿ ಸಕ್ಕರೆಯ ಮಟ್ಟ ಥಟ್ಟನೇ ಏರುವುದನ್ನು ತಡೆಯುವುದಾಗಿದೆ.

ಇದಕ್ಕಾಗಿ, ಸೂಕ್ತ ಪೇಯಗಳನ್ನು ಆಯ್ದುಕೊಳ್ಳುವ ಮೂಲಕ ಆರೋಗ್ಯವನ್ನು ಕಾಪಾಡಬಹುದು ಹಾಗೂ ಮಧುಮೇಹದ ಲಕ್ಷಣಗಳನ್ನು ನಿಯಂತ್ರಿಸಲು ಮತ್ತು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.

ಮಧುಮೇಹಿಗಳಿಗೆ ಕ್ಯಾಲೋರಿರಹಿತ ಅಥವಾ ಕಡಿಮೆ ಕ್ಯಾಲೋರಿಗಳಿರುವ ಪೇಯಗಳು ಆದರ್ಶಪ್ರಾಯವಾಗಿವೆ. ಸಪ್ಪೆ ಎನಿಸಿದರೆ ಕೊಂಚ ಲಿಂಬೆರಸವನ್ನು ಬೆರೆಸಿ ಕುಡಿಯಬಹುದು. ಆದರೆ ಕಡಿಮೆ ಕ್ಯಾಲೋರಿಗಳಿವೆ ಎಂದಾಕ್ಷಣ ಈ ಪೇಯಗಳನ್ನೂ ಹೆಚ್ಚಿನ ಪ್ರಮಾಣದಲ್ಲಿ ಕುಡಿಯಬಾರದು. ಹಾಲಿನ ಸಹಿತ ಇತರ ಪೇಯಗಳನ್ನೂ ಮಿತಪ್ರಮಾಣದಲ್ಲಿಯೇ ಕುಡಿಯಬೇಕು. ಮನೆಯಲ್ಲಿ ವಹಿಸುವಷ್ಟೇ ಕಾಳಜಿಯನ್ನು ಹೋಟೆಲ್‌, ರೆಸ್ಟಾರೆಂಟ್ ಗಳಲ್ಲಿ ಊಟಕ್ಕೆ ಹೋದಾಗಲೂ ವಹಿಸಬೇಕಾಗುತ್ತದೆ. ಬನ್ನಿ, ಈ ಪೇಯಗಳ ಬಗ್ಗೆ ವಿವರವಾಗಿ ಅರಿಯೋಣ:

ಮಧುಮೇಹಿಗಳಿಗೆ ಈ ಐದು ಪೇಯಗಳು ಅತ್ಯುತ್ತಮವಾಗಿವೆ

1. ನೀರು

1. ನೀರು

ದೇಹದ ಪ್ರತಿ ಕೆಲಸಕ್ಕೂ ನೀರು ಅಗತ್ಯವಾಗಿ ಬೇಕು. ಮಧುಮೇಹಿಗಳಿಗಂತೂ ನೀರು ಅಮೃತಸಮಾನ ದ್ರವವಾಗಿದೆ. ಏಕೆಂದರೆ ನೀರಿನಲ್ಲಿ ಕ್ಯಾಲೋರಿಗಳೂ ಇಲ್ಲ, ಸಕ್ಕರೆಯೂ ಇಲ್ಲ. ಅಲ್ಲದೇ ರಕ್ತದಲ್ಲಿ ಸಕ್ಕರೆಯ ಮಟ್ಟ ಹೆಚ್ಚಿದ್ದಷ್ಟೂ ನಿರ್ಜಲೀಕರಣಕ್ಕೆ ಒಳಗಾಗುವ ಸಾಧ್ಯತೆಯೂ ಹೆಚ್ಚು. ಹಾಗಾಗಿ ಮಧುಮೇಹಿಗಳು ಆದಷ್ಟೂ ಸತತವಾಗಿ, ಸೂಕ್ತ ಪ್ರಮಾಣದಲ್ಲಿ ನೀರನ್ನು ಕುಡಿಯುತ್ತಿರಬೇಕು. ಈ ಮೂಲಕ ಕಾಲಕಾಲಕ್ಕೆ ರಕ್ತದಲ್ಲಿದ್ದ ಹೆಚ್ಚುವರಿ ಗ್ಲೂಕೋಸ್ ಅನ್ನು ಮೂತ್ರದ ಮೂಲಕ ಹೊರಹಾಕಲು ಸಾಧ್ಯವಾಗುತ್ತದೆ. ಪುರುಷ ಮಧುಮೇಹಿಗಳು ದಿನದ ಅವಧಿಯಲ್ಲಿ ಸುಮಾರು ಹದಿಮೂರು ಕಪ್ ನಷ್ಟು ನೀರನ್ನು ಕುಡಿಯಬೇಕು. ಮಹಿಳಾ ಮಧುಮೇಹಿಗಳು ಸುಮಾರು ಒಂಭತ್ತು ಕಪ್ ಕುಡಿಯಬೇಕು.

ಒಂದು ವೇಳೆ ಸಾದಾ ನೀರು ನಿಮಗೆ ಇಷ್ಟವಾಗದೇ ಇದ್ದರೆ ಇದಕ್ಕೆ ಕೊಂಚ ಲಿಂಬೆಯ ರಸ ಅಥವಾ ಕಿತ್ತಳೆಯ ರಸವನ್ನು ಬೆರೆಸಿ ಕುಡಿಯಬಹುದು. ಇನ್ನೂ ಒಳ್ಳೆಯ ವಿಧಾನವೆಂದರೆ ನೀರಿನಲ್ಲಿ ತುಳಸಿ, ಪುದಿನಾ ಅಥವಾ ಹಸಿರುಲಿಂಬೆಯ ಕೊಂಚ ಪ್ರಮಾಣವನ್ನು ಬೆರೆಸಿ ಕುಡಿಯಬಹುದು. ಪರ್ಯಾಯವಾಗಿ ತಣಿಸಿಟ್ಟಿದ್ದ ರಾಸ್ಪೆರಿ ಹಣ್ಣುಗಳನ್ನೂ ಬೆರೆಸಿ ಸೇವಿಸಬಹುದು.

2. ಚಹಾ

2. ಚಹಾ

ಹಸಿರು ಟೀ ಕುಡಿಯುವುದರಿಂದ ಒಟ್ಟಾರೆ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ. ಇದು ಅಧಿಕ ರಕ್ತದೊತ್ತಡವನ್ನೂ ಹಾಗೂ ಕೆಟ್ಟ ಕೊಲೆಸ್ಟ್ರಾಲ್ ಮಟ್ಟಗಳನ್ನು ತಗ್ಗಿಸಲು ನೆರವಾಗುತ್ತದೆ.

ಕೆಲವು ಸಂಶೋಧನೆಗಳ ಪ್ರಕಾರ, ದಿನಕ್ಕೆ ಸುಮಾರು ಆರು ಕಪ್ ನಷ್ಟು ಹಸಿರು ಟೀ ಸೇವನೆಯ ಮೂಲಕ ಟೈಪ್-2 ವಿಧದ ಮಧುಮೇಹ ಎದುರಾಗದಂತೆ ಕಾಪಾಡಬಹುದು, ಆದರೆ ಈ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ನಡೆಯುವ ಅಗತ್ಯವಿದೆ. ಮಧುಮೇಹಿಗಳು ತಮಗೆ ಇಷ್ಟವಾದ ಹಸಿರು, ಕಪ್ಪು ಅಥವಾ ಗಿಡಮೂಲಿಕೆಗಳ ಟೀ ಸೇವಿಸಬಹುದು ಆದರೆ ಇದರಲ್ಲಿ ಸಿಹಿ ಬೆರೆಸಬಾರದು. ಆದರೆ ಬರಿಯ ಟೀ ಕಹಿಯಾಗಿರುವ ಕಾರಣ ಇದರ ರುಚಿ ಹೆಚ್ಚಿಸಲು ಕೊಂಚ ಲಿಂಬೆ ಪುದಿನಾ ಮೊದಲಾದವುಗಳನ್ನು ಬೆರೆಸಬಹುದು. ಇನ್ನೊಂದು ಆಯ್ಕೆಯ ಪ್ರಕಾರ, ರಾಯ್ಬೋಸ್ ಮೊದಲಾದ ತಣ್ಣನೆಯ ಟೀ ಯಲ್ಲಿ ಕೊಂಚ ಲಿಂಬೆ ಬೆರೆಸಿ ಸೇವಿಸಬಹುದು. ಒಂದು ವೇಳೆ ನಿಮಗೆ ಕೆಫೀನ್ ಇಷ್ಟವಾಗುತ್ತಿದ್ದು ನಿಮ್ಮ ಆರೋಗ್ಯಕ್ಕೆ ತೊಂದರೆಯಿಲ್ಲ ಎಂದಾದರೆ ಅರ್ಲ್ ಗ್ರೇ ಮತ್ತು ಜಾಸ್ಮಿನ್ ಟೀ ಗಳನ್ನೂ ಸೇವಿಸಬಹುದು.

3. ಕಾಫಿ

3. ಕಾಫಿ

2012ರಲ್ಲಿ ನಡೆಸಿದ ಅಧ್ಯಯನವೊಂದ ಪ್ರಕಾರ ಕಾಫಿ ಸೇವನೆಯಿಂದ ಟೈಪ್-2 ಮಧುಮೇಹ ಆವರಿಸುವ ಸಾಧ್ಯತೆ ಕಡಿಮೆಯಾಗುತ್ತದೆ. ಈ ಅಧ್ಯಯನದಲ್ಲಿ ದಿನಕ್ಕೆ ಎರಡರಿಂದ ಮೂರು ಕಪ್ ಕಾಫಿ ಕುಡಿಯುವವರಲ್ಲಿ ಈ ಸಾಧ್ಯತೆ ಇನ್ನಷ್ಟು ಕಡಿಮೆಯಾಗುವುದನ್ನು ಗಮನಿಸಲಾಗಿದೆ. ದಿನಕ್ಕೆ ನಾಲ್ಕು ಅಥವಾ ಹೆಚ್ಚಿನ ಪ್ರಮಾಣದ ಕಾಫಿ ಸೇವಿಸುವವರಲ್ಲಿಯೂ ಇದೇ ಪ್ರಕಾರದ ಮಾಹಿತಿಯನ್ನು ಗಮನಿಸಲಾಗಿದೆ.

ಈ ಕಾಫಿಗಳಲ್ಲಿ ಕೆಫೀನ್ ಇರುವ ಮತ್ತು ಇಲ್ಲದ ಎರಡೂ ಬಗೆಯ ಕಾಫಿಗಳನ್ನು ಕುಡಿಯುವವರ ಆರೋಗ್ಯ ಮಾಹಿತಿಗಳನ್ನು ಆಧರಿಸಿ ಮಧುಮೇಹ ಆವರಿಸುವ ಸಾಧ್ಯತೆಯ ಮೇಲೆ ಕೆಫೀನ್ ಪ್ರಭಾವವಿಲ್ಲವೆಂದು ಕಂಡುಕೊಳ್ಳಲಾಗಿದೆ. ಹಾಗಾಗಿ, ಎಲ್ಲಿಯವರೆಗೆ ಕೆಫೀನ್ ನಿಮಗೆ ಬೇರೆ ಕಾರಣಗಳಿಗಾಗಿ ಬೇಡ ಎಂದಿದ್ದ ಹೊರತು ಕಾಫಿಯನ್ನು ಕೆಫೀನ್ ಸಹಿತವಾಗಿಯೇ ಸೇವಿಸಬಹುದು. ಆದರೆ ಟೀ ಯಂತೆಯೇ ಕಾಫಿ ಸಹಾ ಸಿಹಿರಹಿತವಾಗಿರಬೇಕಾದುದು ಅವಶ್ಯ. ಹಾಗಾಗಿ ಕಪ್ಪು ಕಾಫಿ ಮಾತ್ರವೇ ನಿಮಗೆ ಉತ್ತಮ. ಹಾಲು, ಕ್ರೀಂ, ಸಕ್ಕರೆ ಮೊದಲಾದವುಗಳನ್ನು ಬೆರೆಸಿದಾಗ ಇದರಲ್ಲಿರುವ ಕ್ಯಾಲೋರಿಗಳ ಪ್ರಮಾಣ ನಿಮ್ಮ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ.

4. ವಿ-8 ಜ್ಯೂಸ್

4. ವಿ-8 ಜ್ಯೂಸ್

ಬಹುತೇಕ ಎಲ್ಲಾ ಹಣ್ಣುಗಳಲ್ಲಿ ಸಕ್ಕರೆಯ ಅಂಶ ಇದ್ದೇ ಇರುತ್ತದೆ. ಹಾಗಾಗಿ ಇವುಗಳ ಬದಲಿಗೆ ಟೊಮಾಟೋ ಅಥವಾ ನಿಮಗೆ ಇಷ್ಟವಾಗುವ ಇತರ ತರಕಾರಿಗಳ ತಿರುಳನ್ನು ಹಿಂಡಿ ರಸ ಸಂಗ್ರಹಿಸಿ ಕುಡಿಯಬಹುದು. ಇನ್ನೂ ಉತ್ತಮವೆಂದರೆ ದಪ್ಪ ಎಲೆಗಳ ತರಕಾರಿಗಳು, ಸೆಲೆರಿ, ಸೌತೆ ಮತ್ತು ಕೊಂಚ ಬೆರ್ರಿ ಹಣ್ಣುಗಳನ್ನು ಚೆನ್ನಾಗಿ ಗೊಟಾಯಿಸಿ ಸೋಸಿ ರಸ ಸಂಗ್ರಹಿಸಿ ಕುಡಿಯುವುದರಿಂದ ಉತ್ತಮ ಪ್ರಮಾಣದ ವಿಟಮಿನ್ನುಗಳು ಮತ್ತು ಖನಿಜಗಳು ಲಭಿಸುತ್ತವೆ. ಕೆಲವು ಸಂಸ್ಥೆಗಳು ಈ ಅಗತ್ಯತೆಯನ್ನು ವಿ-8 ಜ್ಯೂಸ್ ಎಂಬ ಹೆಸರಿನಲ್ಲಿ ಬಿಡುಗಡೆ ಮಾಡಿವೆ. ಇವುಗಳಲ್ಲಿ ಟೊಮಾಟೋ ಜೊತೆಗೆ ಬೀಟ್ರೂಟ್, ಸೆಲೆರಿ, ಕ್ಯಾರೆಟ್, ಲೆಟ್ಯೂಸ್, ಪಾರ್ಸ್ಲೆ, ಒಂದೆಲಗ (watercress) ಮತ್ತು ಪಾಲಕ್ ಸೊಪ್ಪುಗಳನ್ನು ಸೇರಿಸಿ ಈ ಪೇಯವನ್ನು ತಯಾರಿಸಲಾಗುತ್ತದೆ.

5. ಕಡಿಮೆ ಕೊಬ್ಬಿನ ಹಾಲು

5. ಕಡಿಮೆ ಕೊಬ್ಬಿನ ಹಾಲು

ಡೈರಿ ಉತ್ಪನ್ನಗಳಲ್ಲಿರುವ ಖನಿಜಗಳು ಉಪಯುಕ್ತ ಪ್ರಮಾಣದಲ್ಲಿದ್ದರೂ ಇವು ನಿಮ್ಮ ಆಹಾರದ ಕಾರ್ಬೋಹೈಡ್ರೇಟುಗಳ ಪ್ರಮಾಣವನ್ನು ಹೆಚ್ಚಿಸಬಲ್ಲವು. ಹಾಗಾಗಿ ಇವುಗಳ ಬದಲಿಗೆ ಸಕ್ಕರೆ ಬೆರೆಸದ, ಕೊಬ್ಬು ಕಡಿಮೆ ಇರುವ ಅಥವಾ ಹಾಲಿನ ಪುಡಿಯಿಂದ ತಯಾರಿಸಲ್ಪಟ್ಟ (skimmed) ಹಾಲು ಮತ್ತು ಇತರ ಡೈರಿ ಉತ್ಪನ್ನಗಳನ್ನು ಬಳಸಿ. ಆದರೆ ನಿತ್ಯದ ಹಾಲಿನ ಸೇವನೆಯ ಪ್ರಮಾಣವನ್ನು ಒಂದು ಅಥವಾ ಎರಡು ಲೋಟಗಳಿಗೆ ಮಿತಗೊಳಿಸಿ. ಸಾಧ್ಯವಾದರೆ ಈ ಉತ್ಪನ್ನಗಳನ್ನು ಡೈರಿಯಲ್ಲದ ಮೂಲದ, ಕಡಿಮೆ ಸಕ್ಕರೆ ಇರುವ ಮೂಲಗಳಿಂದ ತಯಾರಿಸಲ್ಪಟ್ಟ ಉತ್ಪನ್ನಗಳಿಗೆ ಬದಲಿಸಿ. ಉದಾಹರಣೆಗೆ ಹಾಲಿನ ಬದಲು ತೆಂಗಿನ ಹಾಲು ಅಥವಾ ಸೋಯಾ ಅವರೆ ಅಥವಾ ಬಾದಾಮಿ ಮೊದಲಾದ ಸಸ್ಯಜನ್ಯ ಹಾಲನ್ನು ಬಳಸಿ. ಆದರೆ, ಇವುಗಳಲ್ಲಿ ಹೆಚ್ಚಿನ ಕಾರ್ಬೋಹೈಡ್ರೇಟುಗಳಿರುವ ಕಾರಣ ಇವುಗಳ ಪ್ರಮಾಣವೂ ಮಿತವಾಗಿರಬೇಕು.

ಮಧುಮೇಹಿಗಳು ಸರ್ವಥಾ ಸೇವಿಸಬಾರದ ಐದು ಪೇಯಗಳು

ಇದರ ಜೊತೆಗೇ ಸಕ್ಕರೆಯನ್ನು ಬೆರೆಸಿರುವ ಯವುದೇ ಪಾನೀಯಗಳು. ಇವುಗಳನ್ನು ಸೇವಿಸಿದ ತಕ್ಷಣವೇ ಇವು ನಿಮ್ಮ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಹೆಚ್ಚಿಸುವುದು ಮಾತ್ರವಲ್ಲ, ನೀವು ದಿನದಲ್ಲಿ ಸೇವಿಸಬಹುದಾದ ಒಟ್ಟಾರೆ ಕ್ಯಾಲೋರಿಗಳ ಪಾಲಿನ ಸಿಂಹಪಾಲನ್ನು ಕಬಳಿಸಿಬಿಡುತ್ತವೆ.

1. ಸೋಡಾ ಅಥವಾ ಬುರುಗುಬರುವ ಪಾನೀಯಗಳು

1. ಸೋಡಾ ಅಥವಾ ಬುರುಗುಬರುವ ಪಾನೀಯಗಳು

ನಿಮಗೆ ಸೋಡಾ ಅಥವಾ ಬುರುಗು ಬರುವ ಯಾವುದೇ ಪಾನೀಯಗಳು (carbonated beveages) ನಿಷಿದ್ಧವಾಗಿವೆ. ಕೆಲವರು ಇದರಲ್ಲಿ ಕಪ್ಪು ಬಣ್ಣದ್ದನ್ನು ಕುಡಿಯಬಾರದು, ನೀರಿನಂತಿರುವುದನ್ನು ಕುಡಿಯಬಹುದು ಎಂಬ ಅಭಿಪ್ರಾಯವನ್ನು ಹೊಂದಿರುತ್ತಾರೆ. ಬಣ್ಣ, ರುಚಿ ಯಾವುದೇ ಇರಲಿ ಮಧುಮೇಹಿಗಳಿಗೆ ಬುರುಗು ಪಾನೀಯಗಳೇ ಸಲ್ಲದು. ಸರಾಸರಿ ಕುಡಿಯುವ ಒಂದು ಕಪ್ ನಷ್ಟು ಈ ಪಾನೀಯದಿಂದ ನಲವತ್ತು ಗ್ರಾಂ ಕಾರ್ಬೋಹೈಡ್ರೇಟುಗಳೂ ನೂರೈವತ್ತು ಕ್ಯಾಲೋರಿಗಳೂ ಲಭಿಸುತ್ತವೆ. ಇದು ಮಧುಮೇಹಿಗಳಿಗೆ ಏಕಾಏಕಿ ಸಹಿಸಲು ಅಸಾಧ್ಯವಾದ ಪ್ರಮಾಣವಾಗಿದೆ. ಅಲ್ಲದೇ ಇದರಲ್ಲಿ ಅಗಾಧ ಪ್ರಮಾಣದಲ್ಲಿರುವ ಸಕ್ಕರೆ ತೂಕದಲ್ಲಿ ಹೆಚ್ಚಳ ಮತ್ತು ಹಲ್ಲಿನ ಸವೆತಕ್ಕೆ ಕಾರಣವಾಗುತ್ತದೆ. ವಾಸ್ತವವೆಂದರೆ ಈ ಪೇಯಗಳು ಮೂಲತಃ ಕಹಿಯಾಗಿದ್ದು ಈ ಕಹಿಯನ್ನು ಮರೆಸಲೆಂದೇ ಹೆಚ್ಚಿನ ಪ್ರಮಾಣದ ಸಕ್ಕರೆ ಬೆರೆಸಲಾಗಿರುತ್ತದೆ. ಹಾಗಾಗಿ, ಮಧುಮೇಹಿಗಳು ಈ ಉತ್ಪನ್ನಗಳನ್ನು ಕುಡಿಯುವ ಬಗ್ಗೆ ಯೋಚಿಸಲೂಬಾರದು. ಬದಲಿಗೆ ಹಣ್ಣಿನ ರಸ ಬೆರೆಸಿದ ನೀರು ಅಥವಾ ಟೀ ಕುಡಿಯಬಹುದು.

2. ಶಕ್ತಿಪೇಯಗಳು (Energy drinks)

2. ಶಕ್ತಿಪೇಯಗಳು (Energy drinks)

ಈ ಪೇಯಗಳು ಅಪ್ಪಟ ಹಣಮಾಡುವ ತಂತ್ರವಾಗಿದ್ದು ಭಾರೀ ಪ್ರಮಾಣದಲ್ಲಿ ಕೆಫೀನ್ ಮತ್ತು ಕಾರ್ಬೋಹೈಡ್ರೇಟುಗಳನ್ನು ಹೊಂದಿರುತ್ತದೆ. ಅಧ್ಯಯನಗಳಲ್ಲಿ ಈ ಪೇಯಗಳನ್ನು ಕುಡಿಯುವ ಮೂಲಕ ಥಟ್ಟನೇ ರಕ್ತದಲ್ಲಿ ಸಕ್ಕರೆ ಏರುತ್ತದೆ ಹಾಗೂ ದೇಹ ಇನ್ಸುಲಿನ್ ಅನ್ನು ವಿರೋಧಿಸುವ ಸಂಭವವನ್ನು ಹೆಚ್ಚಿಸಬಹುದು. ಈ ಪೇಯಗಳ ಸಂಸ್ಥೆಗಳು ಈ ವಿದ್ಯಮಾನವನ್ನೇ ವೈಭೀಕರಿಸಿ ಆ ಕ್ಷಣದಲ್ಲಿ ಲಭಿಸುವ ಕೊಂಚವೇ ಹೆಚ್ಚಿನ ಶಕ್ತಿಯಿಂದ ಆಟೋಟಗಳಲ್ಲಿ ಹೆಚ್ಚಿನ ಸಾಮರ್ಥ್ಯ ಮೆರೆಯಲು ಸಾಧ್ಯವಾಗುತ್ತದೆ ಎಂದು ಭರ್ಜರಿ ಜಾಹೀರಾತು ನೀಡುತ್ತಾರೆ. ಆದರೆ ಆ ಕ್ಷಣ ದಾಟಿದ ಬಳಿಕ ಈ ವೈಭವವೆಲ್ಲಾ ಕರಗಿ ನಿಮ್ಮ ದೇಹಕ್ಕೆ ಟೈಪ್-2 ಮಧುಮೇಹ ಆವರಿಸುವ ಸಾಧ್ಯತೆ ಹೆಚ್ಚುತ್ತದೆ. ಅತಿಹೆಚ್ಚಿನ ಪ್ರಮಾಣದ ಕೆಫೀನ್ ಸೇವನೆಯಿಂದ ನಡುಕ, ಭೀತಿ, ಅಧಿಕ ರಕ್ತದೊತ್ತಡ ಮೊದಲಾದವು ಹೆಚ್ಚುವುದಲ್ಲದೇ ರಾತ್ರಿ ನಿದ್ದೆ ಬಾರದೇ ನಿದ್ರಾರಾಹಿತ್ಯವೂ ಎದುರಾಗುತ್ತದೆ. ಮಧುಮೇಹಿಗಳಿಗೆ ಮಾತ್ರವಲ್ಲ, ಉಳಿದ ಯಾರಿಗೂ ಇದು ಅನಾರೋಗ್ಯಕರವಾಗಿದ್ದು ಇವುಗಳಿಂದ ದೂರವಿದ್ದು ಆಟದಲ್ಲಿ ದೇಹದ ನೈಜ ಸಾಮರ್ಥ್ಯವನ್ನು ಮಾತ್ರವೇ ಪ್ರದರ್ಶಿಸಿದರೆ ಸಾಕು.

3. ಡಯೆಟ್ ಸೋಡಾ

3. ಡಯೆಟ್ ಸೋಡಾ

ಡಯೆಟ್ ಎಂಬುದು ಅಪ್ಪಟ ವ್ಯಾಪಾರೀ ಪದವಾಗಿದ್ದು ಇದು ಮಧುಮೇಹಿಗಳ ಮತ್ತು ಈ ಉತ್ಪನ್ನಗಳತ್ತ ಒಲವು ತೋರುವವರ ದಿಕ್ಕು ತಪ್ಪಿಸುತ್ತದೆ. ಏಕೆಂದರೆ ಇವು ಡಯೆಟ್ ಎಂಬ ಪದದ ಮೂಲಕ ಈ ಉತ್ಪನ್ನಗಳಲ್ಲಿ ಸಕ್ಕರೆ ಇಲ್ಲ ಎಂಬ ವಿಷಯವನ್ನೇ ಅತ್ಯಂತ ದೊಡ್ಡದಾಗಿ ಚಿತ್ರಿಸುತ್ತವೆ. ಆದರೆ ಈ ಉತ್ಪನ್ನಗಳಲ್ಲಿ ಸಕ್ಕರೆಗೂ ಭೀಕರವಾದ ಇತರ ಉತ್ಪನ್ನಗಳನ್ನು ಸೇರಿಸುತ್ತವೆ. ಇದರಲ್ಲಿ ಪ್ರಮುಖವಾದುದು aspertame ಎಂಬ ಸಿಹಿಕಾರಕ. ಅಮೇರಿಕಾದಲ್ಲಿ ಈ ಅಂಶವನ್ನು ಹೊಂದಿರುವ ಉತ್ನನ್ನಗಳಿಗೆ ನಿಷೇಧ ಹೇರಲಾಗಿದೆ. ಮೊದಲು ಈ ಉತ್ಪನ್ನವನ್ನು max ಎಂಬ ಹೆಸರಿನೊಂದಿಗೆ ವಿತರಿಸಲಾಗುತ್ತಿತ್ತು. ಯಾವಾಗ ಇದರ ದುಷ್ಪರಿಣಾಮಗಳು ಗೊತ್ತಾದವೋ ಆಗ ಕಾನೂನು ಬಿಗಿಯಾದ ಕಾರಣ ಈ ಸಂಸ್ಥೆಗಳು ಈ ಅಂಶದ ಬದಲಿಗೆ phenylketonuria ಎಂಬ ಸಿಹಿಕಾರಕವನ್ನು ಬೆರೆಸುತ್ತಿವೆ. ಇವು phenylalanine ಎಂಬ ರಾಸಾಯನಿಕಗಳ ವಿಧವಾಗಿದೆ. ತಂಬಾಕು ಉತ್ಪನ್ನಗಳ ಮೇಲೆ 'ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ' ಎಂದು ಬರೆದಿರುತ್ತದೆಯೋ ಹಾಗೇ ಈ ಉತ್ಪನ್ನಗಳ ಮೇಲೂ ಎಚ್ಚರಿಕೆಯನ್ನು ಮುದ್ರಿಸುವುದು ಕಾನೂನಿನ ಅಗತ್ಯ. ಆದರೆ ಇವು ಚಿಕ್ಕ ಅಕ್ಷರಗಳಲ್ಲಿದ್ದು ಹೆಚ್ಚಿನವರು ಓದುವ ಗೋಜಿಗೆ ಹೋಗುವುದಿಲ್ಲ. ಏನೇ ಆದರೂ, ಈ ಉತ್ಪನ್ನಗಳು ಮಧುಮೇಹಿಗಳಿಗಂತೂ ಬೇಡವೇ ಬೇಡ. ಅಂದ ಮಾತ್ರಕ್ಕೆ ಇವು ಉಳಿದವರಿಗೂ ಕ್ಷೇಮ ಎಂದು ಹೇಳಲಾಗದು. 2009 ರ ಒಂದು ಅಧ್ಯಯನದಲ್ಲಿ ಇವುಗಳ ಸೇವನೆ ಜೀವರಾಸಾಯನಿಕ ಕ್ರಿಯೆಯ ತೊಂದರೆ (metabolic syndrome) ಎದುರಾಗಬಹುದು ಎಂದು ತಿಳಿಸಿದೆ. ಅಂದರೆ ಈ ಕೆಳಗಿನ ತೊಂದರೆಗಳು ಆವರಿಸುವ ಸಾಧ್ಯತೆಗಳು ಹೆಚ್ಚುತ್ತವೆ.

* ಅಧಿಕ ರಕ್ತದೊತ್ತಡ

* ಹೆಚ್ಚಿನ ಪ್ರಮಾಣದ ಕೊಲೆಸ್ಟ್ರಾಲ್

* ಹೆಚ್ಚಿನ ಮಟ್ಟದ ಟ್ರೈಗ್ಲಿಸರೈಡ್‌ಗಳು

* ಸ್ಥೂಲಕಾಯ

4. ಸಿಹಿ ಇರುವ ಹಣ್ಣಿನ ರಸಗಳು (Sweetened fruit juices)

4. ಸಿಹಿ ಇರುವ ಹಣ್ಣಿನ ರಸಗಳು (Sweetened fruit juices)

ಹಣ್ಣಿನ ರಸ ಮಿತಪ್ರಮಾಣದಲ್ಲಿ ಸೇವಿಸಿದರೆ ಆರೋಗ್ಯಕರ ಹೌದು. ಆದರೆ ಹಣ್ಣಿನ ರಸವನ್ನು ತಾಜಾ ರೂಪದಲ್ಲಿ ಹೆಚ್ಚು ಹೊತ್ತು ಸಂಗ್ರಹಿಸಲು ಸಾಧ್ಯವಿಲ್ಲ ಹಾಗೂ ಇದು ಲಾಭಕರವೂ ಅಲ್ಲ. ಹಾಗಾಗಿ ಸಂಸ್ಥೆಗಳು ಇವು ಹೆಚ್ಚು ಹೊತ್ತು ಹಾಳಾಗದಿರುವಂತೆ ಕೆಲವು ವಿಧಾನಗಳನ್ನು ಅನುಸರಿಸುತ್ತವೆ. ಇದೆಂದರೆ ಹಣ್ಣಿನ ರಸದ ಪ್ರಮಾಣ ತಗ್ಗಿಸಿ ಇದರ ಬದಲಿಗೆ ಕೃತಕವಾಗಿ ಸಕ್ಕರೆಯನ್ನು ಬೆರೆಸುವುದು. ಇದನ್ನೇ Sweetened ಎಂದು ಕರೆಯುತ್ತಾರೆ. ಇವುಗಳ ರುಚಿ ತಾಜಾ ಹಣ್ಣಿನಂತೆಯೇ ಇದ್ದರೂ ಇವುಗಳಲ್ಲಿ ಹೆಚ್ಚಿನ ಕಾರ್ಬೋಹೈಡ್ರೇಟುಗಳಿರುತ್ತವೆ. ಮಧುಮೇಹಿಗಳ ಹೊರತಾಗಿ ಇತರರಲ್ಲಿಯೂ ಇದು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತವೆ ಹಾಗೂ ತೂಕದಲ್ಲಿ ಹೆಚ್ಚಳವಾಗುವಂತೆ ಮಾಡುತ್ತವೆ. ಕೆಲವು ಸಂಸ್ಥೆಗಳಂತೂ ಇನ್ನೂ ಮುಂದೆ ಹೋಗಿ ಹಣ್ಣಿನ ರಸದ ಬದಲು ಇದೇ ರುಚಿಯನ್ನು ಹೊಂದಿರುವ ಕೃತಕ ರುಚಿಕಾಕರಗಳನ್ನು ಸೇರಿಸಿ 'ಡ್ರಿಂಕ್' ಎಂಬ ಹೆಸರಿನಲ್ಲಿ ಹಣ್ಣಿನ ರಸದ ಮೂಲಬೆಲೆಗೂ ಎಷ್ಟೋ ಕಡಿಮೆ ಬೆಲೆಗೆ ಮಾರುತ್ತವೆ. ಕಡಿಮೆ ಬೆಲೆಯ ಆಸೆಗೆ ಬಿದ್ದು ಗ್ರಾಹಕರು ಇದು ನಿಜವಾದ ಹಣ್ಣಿನ ರಸವೆಂದೇ ಸೇವಿಸುತ್ತಾರೆ. ಇವೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾಗಿ ಹಣ್ಣಿನ ರಸವನ್ನು ಸ್ವತಃ ಮನೆಯಲ್ಲಿಯೇ ತಯಾರಿಸಿ ಕುಡಿಯುವುದು ಅತ್ಯುತ್ತಮ. ಸಾಧ್ಯವಾಗದಿದ್ದರೆ ಕೊಂಚ ದುಬಾರಿಯಾದರೂ ಸರಿ, ನೂರು ಪ್ರತಿಶತ ಹಣ್ಣಿನ ರಸ ಇರುವ ಉತ್ಪನ್ನಗಳನ್ನು ಅಥವಾ ತಾಜಾ ಹಣ್ಣುಗಳಿಂದ ರಸ ತಯಾರಿಸಿ ಐಸ್ ಅಥವಾ ಸಕ್ಕರೆ ಇಲ್ಲದೇ ನೀಡುವಂತೆ ಜ್ಯೂಸ್ ಅಂಗಡಿಗಳಿಂದ ಖರೀದಿಸಿ ಸೇವಿಸಬಹುದು. ಇನ್ನೂ ಉತ್ತಮವೆಂದರೆ ಸ್ಪಾರ್ಕ್ಲಿಂಗ್ ವಾಟರ್ ಎಂಬ ನೀರಿಗೆ ನಿಮ್ಮ ನೆಚ್ಚಿನ ಹಣ್ಣಿನ ತಿರುಳನ್ನು ಕೊಂಚ ಪ್ರಮಾಣದಲ್ಲಿ ಬೆರೆಸಿ ಸೇವಿಸಬಹುದು.

5. ಮದ್ಯ ಮತ್ತು ಮದ್ಯದಂಥ ಪಾನೀಯಗಳು

5. ಮದ್ಯ ಮತ್ತು ಮದ್ಯದಂಥ ಪಾನೀಯಗಳು

ಮದ್ಯಪಾನ ಅನಾರೋಗ್ಯಕರ ಎಂದು ಎಲ್ಲರಿಗೂ ಗೊತ್ತು. ಮಧುಮೇಹಿಗಳಿಗೆ ನರಗಳ ದೌರ್ಬಲ್ಯ ಅಥವಾ ಅಧಿಕ ರಕ್ತದೊತ್ತಡವಿದ್ದರೆ ಇವರಿಗೆ ಮದ್ಯಸೇವನೆ ಈಗಿರುವ ಸ್ಥಿತಿ ಇನ್ನಷ್ಟು ಬಿಗಡಾಯಿಸಲು ಕಾರಣವಾಗಬಹುದು. ಹಾಗಾಗಿ ಮಧುಮೇಹಿಗಳು ವ್ಯಸನಿಯಾಗಿದ್ದರೆ ತಮಗೆ ಚಿಕಿತ್ಸೆ ನೀಡುವ ವೈದ್ಯರಲ್ಲಿಯೇ ಎಷ್ಟು ಪ್ರಮಾಣದ ಮದ್ಯ ಸೇವಿಸಬಹುದು ಎಂದು ತಿಳಿದುಕೊಂಡೇ ಆ ಮಿತಿಯೊಳಗಿನ ಪ್ರಮಾಣವನ್ನು ಮಾತ್ರವೇ ಸೇವಿಸಬಹುದು. ಆದರೂ ನಿಧಾನಕ್ಕೆ ಈ ವ್ಯಸನದಿಂದ ಹೊರಬರುವ ಬಗ್ಗೆ ಗಂಭೀರ ಚಿಂತನೆ ನಡೆಸಬೇಕು. 2012 ರಲ್ಲಿ ನಡೆಸಿದ ಸಂಶೋಧನೆಯ ಪ್ರಕಾರ, ಮದ್ಯಸೇವನೆಯ ಅಭ್ಯಾಸವಿರುವ ವ್ಯಕ್ತಿಗಳಿಗೆ ಟೈಪ್-2 ಮಧುಮೇಹ ಎದುರಾಗುವ ಸಾಧ್ಯತೆ ಹೆಚ್ಚು. ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಪೂರ್ವಮಧುಮೇಹ ಅಥವಾ ಟೈಪ್-2 ಮಧುಮೇಹ ಎದುರಾಗುವ ಸಾಧ್ಯತೆಯನ್ನೂ ತಿಳಿಸಿದೆ. ಆದರೆ ವ್ಯತಿರಿಕ್ತವಾಗಿ, ಮಿತಪ್ರಮಾಣದಲ್ಲಿ ಮನೆಯಲ್ಲಿಯೇ ತಯಾರಿಸಿದ ವೈನ್ ಸೇವಿಸುವವರಲ್ಲಿ ಟೈಪ್-2 ಮಧುಮೇಹ ಆವರಿಸುವ ಸಾಧ್ಯತೆ ಕಡಿಮೆಯಾಗಿರುವುದು ಕಂಡುಬಂದಿದ್ದರೂ ಇದನ್ನು ಇನ್ನೂ ಖಚಿತಪಡಿಸಲಾಗಿಲ್ಲ. ಹಾಗಾಗಿ, ಮದ್ಯವ್ಯಸನಿಯಾಗಿರುವ ಮಧುಮೇಹಿಗಳಿಗೆ ಮದ್ಯದ ಬದಲು ಕೆಂಪು ವೈನ್ ಉತ್ತಮ ಪರ್ಯಾಯವಾಗಿದೆ. ಅಲ್ಲದೇ ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಗುಣವಿದ್ದು ಆರೋಗ್ಯಕ್ಕೆ ಪೂರಕವಾಗಿದೆ ಹಾಗೂ ಕಡಿಮೆ ಕಾರ್ಬೋಹೈಡ್ರೇಟುಗಳಿವೆ. ಟೈಪ್ 2 ಮಧುಮೇಹವಿರುವ ವ್ಯಕ್ತಿಗಳು ಸೂಕ್ತ ಅಹಾರಕ್ರಮದ ಜೊತೆಗೇ ಮಿತಪ್ರಮಾಣದಲ್ಲಿ ಕೆಂಪು ವೈನ್ ಸೇವಿಸಿದರೆ ತೂಕ ಹೆಚ್ಚಳವಾಗುವುದಿಲ್ಲ ಅಥವಾ ಜೀವರಾಸಾಯನಿಕ ಕ್ರಿಯೆಯ ತೊಂದರೆ ಹೆಚ್ಚುವುದಿಲ್ಲ.

ಆದರೆ ಮಧುಮೇಹ ಮತ್ತು ಮದ್ಯಸೇವನೆಯ ಬಗ್ಗೆ ಖಚಿತವಾದ ಮಾಹಿತಿಗಳು ಮುಂದಿನ ಸಂಶೋಧನೆಗಳಿಂದಲೇ ದೃಢಗೊಳ್ಳಬೇಕಿದೆ.

ಮಧುಮೇಹಿಗಳು ಎಂದಿಗೂ ನೆನಪಿನಲ್ಲಿಡಿ

ಮಧುಮೇಹಿಗಳು ಎಂದಿಗೂ ನೆನಪಿನಲ್ಲಿಡಿ

ಮಧುಮೇಹಿಗಳಿಗೆ ಕುಡಿಯುವ ಪಾನೀಯದ ಆಯ್ಕೆ ಬಂದಾಗ ಆದಷ್ಟೂ ಇದನ್ನು ಸರಳವಾಗಿರುವಂತೆ ಮನಸ್ಸನ್ನು ಸಿದ್ಧವಾಗಿಟ್ಟುಕೊಳ್ಳುವುದು ಮೇಲು. ನೀರು ಅತ್ಯುತ್ತಮ ಆಯ್ಕೆ. ಸಕ್ಕರೆ ಬೆರೆಸದ ಟೀ ಅಥವಾ ಕಾಫಿ ಮತ್ತು ಹಾಲಿನ ಪುಡಿಯಿಂದ ತಯಾರಿಸಿದ ಹಾಲಿನ ಉತ್ಪನ್ನಗಳು ಮಿತಪ್ರಮಾಣದಲ್ಲಿ ಮುಂದಿನ ಆಯ್ಕೆಯಾಗಿವೆ. ಮಿತಪ್ರಮಾಣದ ತಾಜಾ ಹಣ್ಣಿನ ಸೇವನೆಯೂ ಆಗಬಹುದು. ಒಂದು ವೇಳೆ ಸಿಹಿಗೆ ನೀವು ವ್ಯಸನಿಯಾಗಿದ್ದು ಸಿಹಿಯಿಲ್ಲದೇ ಸಾಧ್ಯವೇ ಇಲ್ಲ ಎಂಬ ಸ್ಥಿತಿ ಇದ್ದರೆ ಸಕ್ಕರೆಯ ಬದಲಿಗೆ ಸಿಹಿಕಾರಕ ಮೂಲಿಕೆಗಳು, ಲಿಂಬೆಯ ಬಿಲ್ಲೆ, ಅಥವ ಕೆಲವು ಬೆರ್ರಿ ಹಣ್ಣುಗಳನ್ನು ಜಜ್ಜಿ ಬೆರೆಸಿ ಸೇವಿಸಿ.

English summary

Best And Worst Drinks For Diabetic Patient

Here we are discussing about best and worst drinks for diabetic patient. Having diabetes means that you have to be aware of everything you eat or drink. Knowing the amount of carbohydrates you ingest and how they may affect your blood sugar is crucial. Choosing the right drinks can help you avoid unpleasant side effects, manage your symptoms, and maintain a healthy weight. Read on.
X