For Quick Alerts
ALLOW NOTIFICATIONS  
For Daily Alerts

ಜೀ ಟಿವಿ ಮೇಲೆ ಸ್ವಾರ್ಥಿಗಳ 'ಗೂಂಡಾಗಿರಿ'

By * ಕೆಎನ್ ರಾಜಗೋಪಾಲ, ಬೆಂಗಳೂರು
|

zee-tv-kannada-veer-naari-controversy-why
ಸ್ವಾತಂತ್ರ್ಯ ದಿನದಂದು ಜೀ ಕನ್ನಡ ವಾಹಿನಿ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಸೆಣೆಸಿ ಹುತಾತ್ಮಳಾದ ಝಾನ್ಸಿಯ ರಾಣಿ ಲಕ್ಷ್ಮೀಬಾಯಿಯ ಕುರಿತಂತೆ ಒಂದು ಕಾರ್ಯಕ್ರಮ ಪ್ರಸಾರ ಮಾಡಿತು. ಕಿರುತರೆ ಕಲಾವಿದರು ಮತ್ತು ತಂತ್ರಜ್ಞರ ತಥಾಕಥಿತ ಸಂಘಟನೆಯೊಂದರ ಪ್ರಕಾರ ಇದು 'ಕನ್ನಡ ದ್ರೋಹ'.

ಈ 'ದ್ರೋಹ'ವನ್ನು ಅದು ಪ್ರತಿಭಟಿಸಿದ್ದು ಜೀ ವಾಹಿನಿ ಕಚೇರಿಯ ಮೇಲೆ ದಾಳಿ ನಡೆಸಿ ಅಲ್ಲಿರುವ ವಸ್ತುಗಳನ್ನು ನಾಶ ಮಾಡುವ ಗೂಂಡಾಗಿರಿಯ ಮೂಲಕ! ಈ 'ಪ್ರತಿಭಟನೆ'ಯಿಂದ ಕನ್ನಡದ ಅಸ್ಮಿತೆಗೆ ಲಾಭವೇನೂ ಆಗದಿದ್ದರೂ ಕನ್ನಡಾಭಿಮಾನವೆಂದರೆ ಗೂಂಡಾಗಿರಿ ಎಂದು ಜನರು ಭಾವಿಸುವಂಥ ವಾತಾವರಣ ಸೃಷ್ಟಿಯಾಯಿತು.

ಇಷ್ಟಕ್ಕೂ 'ವೀರ ನಾರಿ...' ಡಬ್ ಮಾಡಲಾದ ಕಾರ್ಯಕ್ರಮವೂ ಅಲ್ಲ. ಇದು ಕಿರುತೆರೆಯ ಪ್ರಮುಖ ಕಲಾವಿದ ಸುಚೇಂದ್ರ ಪ್ರಸಾದ್ ನಿರೂಪಕನಾಗಿ ಝಾನ್ಸಿಯ ರಾಣಿ ಬಾಲ್ಯವನ್ನು ವಿವರಿಸುವ ಒಂದು ಕಾರ್ಯಕ್ರಮ. ಲಕ್ಷ್ಮೀಬಾಯಿ ಬದುಕನ್ನು ಇಲ್ಲಿ ಮರು ಸೃಷ್ಟಿಸಲಾಗಿತ್ತು. ಮರು ಸೃಷ್ಟಿಸಲಾಗಿದ್ದ ಪಾತ್ರಗಳು ಹಿಂದಿಯಲ್ಲಿ ಮಾತನಾಡುವುದನ್ನು ಕನ್ನಡ ಸಬ್ ಟೈಟಲ್ ಜೊತೆ ತೋರಿಸಲಾಗುತ್ತಿತ್ತು.

ಇದು ಹೇಗೆ ಡಬ್ಬಿಂಗ್ ಆಗಲು ಸಾಧ್ಯ?
ಒಂದು ವೇಳೆ ಡಬ್ ಮಾಡಿದ ಕಾರ್ಯಕ್ರಮವನ್ನೇ ಪ್ರಸಾರ ಮಾಡಿದ್ದರೂ ಗೂಂಡಾಗಿರಿಯ ಮೂಲಕ ಅದನ್ನು ತಡೆಯುವ ಅಧಿಕಾರವನ್ನು ಈ ಸಂಘನೆಯವರಿಗೆ ಯಾರು ಕೊಟ್ಟರು?

ಪ್ರತಿಭಟನೆಯಲ್ಲಿ ಪಾಲ್ಗೊಂಡ ಮಹನೀಯರ ಹಿನ್ನೆಲೆಯನ್ನು ನೋಡಿದರೆ ಇವರೆಲ್ಲಾ ತಮ್ಮ ಲಾಭದ ಪ್ರಮಾಣ ಕುಸಿಯುತ್ತದೆ ಎಂದು ಗೂಂಡಾಗಿರಿಗಿಳಿದಿದ್ದರೇ ಹೊರತು ಕನ್ನಡ ಉಳಿಸುವ ಕಾಳಜಿಯಿಂದಲ್ಲ ಎಂಬುದು ಸ್ಪಷ್ಟ.

ಡಬ್ ಮಾಡಿದ ಧಾರಾವಾಹಿಗಳಿಂದ ಕನ್ನಡಕ್ಕೆ ತೊಂದರೆಯಾಗುತ್ತದೆ ಎನ್ನುವವರು ಕನ್ನಡದಲ್ಲೇ ಉತ್ತಮ ಧಾರಾವಾಹಿಗಳು ಸೃಷ್ಟಿಯಾದರೆ ಅದು ಇತರ ಭಾಷೆಗಳಿಗೆ ಡಬ್ ಆಗುತ್ತದೆಯಷ್ಟೇ ಅಲ್ಲದೆ ಡಬ್ಬಿಂಗ್ ಧಾರಾವಾಹಿಗಳ ಹಾವಳಿಯೂ ಇರುವುದಿಲ್ಲ ಎಂಬುದನ್ನು ಮರೆಯುವುದೇಕೆ? ಎಲ್ಲದಕ್ಕಿಂತ ಹೆಚ್ಚಾಗಿ ಡಬ್ಬಿಂಗ್ ಅನ್ನು ನಮ್ಮ ದೇಶದ ಯಾವ ಕಾನೂನೂ ನಿಷೇಧಿಸಿಲ್ಲ.

ಗುಣಮಟ್ಟದ ಧಾರಾವಾಹಿಗಳನ್ನು ನಿರ್ಮಿಸುವ ಮೂಲಕ ಸ್ಪರ್ಧೆಯನ್ನು ಎದುರಿಸುವ ಬದಲಿಗೆ ಗೂಂಡಾಗಿರಿಯ ಮೂಲಕ ಲಾಭ ಸಾಧಿಸಲು ಹೊರಟವರ ವಿರುದ್ಧ ಕಠಿಣ ಕಾನೂನು ಕ್ರಮದ ಅಗತ್ಯವಿದೆ. ಯಾವುದೇ ಉದ್ಯಮ ಲಾಭಕೋರ ಸ್ವಾರ್ಥಿ ಸಂಘಟನೆಗಳ ಅಡಿಯಾಳಾಗುವುದು ಬಹಳ ಕೆಟ್ಟದ್ದು. ಇದನ್ನು ಮೊಳಕೆಯಲ್ಲೇ ಚಿವುಟುವ ಅಗತ್ಯವಿದೆ.

English summary

Zee TV Kannada serial Veer Naari controversy why, Zansi Ki Rani dubbing ಝಾನ್ಸಿ ಕಿ ರಾಣಿ ಡಬ್ಬಿಂಗ್ ವಿವಾದ, ಜೀ ಟಿವಿ ಮೇಲೆ ಸ್ವಾರ್ಥಿಗಳ 'ಗೂಂಡಾಗಿರಿ'

KN Rajgopal from Bangalore has questioned the attack on Zee Kannada Chennel recently in Bangalore. He has come down heavily on Kannada TV artists who oppose dubbing and says controversy over the serial is unnecessary. 
Story first published: Wednesday, August 17, 2011, 12:47 [IST]
X
Desktop Bottom Promotion