For Quick Alerts
ALLOW NOTIFICATIONS  
For Daily Alerts

ಮಗುವಾದ ಮೇಲೆ ಗಂಡ-ಹೆಂಡತಿ ನಡುವೆ ಕಿತ್ತಾಟ ಹೆಚ್ಚಾಗಲು ಕಾರಣವೇನು ಗೊತ್ತಾ?

|

ವಿವಾಹವಾದ ಒಂದೆರಡು ವರ್ಷ ನನಗೆ ನೀನು, ನಿನಗೆ ನಾನು ಎನ್ನುತ್ತಾ, ಯಾವುದೇ ಹೆಚ್ಚು ಜವಾಬ್ದಾರಿಗಳಿಲ್ಲದೇ, ಬೇಕೆನ್ನುವಾಗ ಮನೆಯಲ್ಲಿ ಅಡುಗೆ ಮಾಡಿ, ಉದಾಸೀನವಾದರೆ ಸ್ವಿಗ್ಗಿ,ಝೋಮ್ಯಾಟೋ, ಡೋಮಿನೋಸ್‌ಗಳಿಂದ ತರಿಸಿಕೊಂಡೋ, ಹೊರಹೋಗುವ ಮನಸ್ಸಾದರೆ ಸ್ಟ್ರೀಟ್‌ ಫುಡ್‌ ತಿಂದುಕೊಂಡು ಇದ್ದ ಮ್ಯಾರೀಡ್‌ ಲೈಫ್‌ನಲ್ಲಿ ಪುಟ್ಟ ಕಂದನ ಆಗಮನವಾದಾಗ ಎಲ್ಲವೂ ಅಲ್ಲೋಲ ಕಲ್ಲೋಲ..! ಇದು ಇಂದಿನ ಸಿಟಿ ಲೈಫ್‌ ನಡೆಸುತ್ತಿರುವ ದಂಪತಿಗಳ ಜೀವನದಲ್ಲಿ ನಡೆಯುವ ಅನಿರೀಕ್ಷಿತ 'ಬಿಗ್‌' ಬದಲಾವಣೆ ಎನ್ನಬಹುದು.

ಅದುವರೆಗೂ ಹಾಯಾಗಿ ತಿಂದುಂಡು ಮಲಗಿದ್ದ ಮನಸ್ಸುಗಳು ಒತ್ತಡದಿಂದ ಯಾವಾಗ ಸ್ಫೋಟವಾಗುವುದೋ ತಿಳಿಯುವುದಿಲ್ಲ. ಒಡಲೊಳಗೆ ಉರಿಯುವ ಬೆಂಕಿಗೆ ತುಪ್ಪ ಸುರಿದಾಗ ಉಂಟಾಗುವುದೇ ಮಾತಿನ ವಾಕ್ಸಮರ..! ''ನಾನು ಬೆಳಗ್ಗೆಯಿಂದ ಮನೆ ಕೆಲಸ ಮಾಡಿ, ಮಗುವನ್ನೂ ನೋಡಿ, ನೀನು ಕೇಳಿದ್ದೆಲ್ಲಾ ತಿನ್ನೋದಿಕ್ಕೆ ಮಾಡಿ ಕೊಟ್ಟು, ರಾತ್ರಿ ಇಡೀ ಮಗುವನ್ನು ನೋಡಿಕೊಂಡು ನಿದ್ದೆ ಕೆಟ್ರೂ ನಿಗ್ಗೆ ಒಂಚೂರು ಕರುಣೆ ಇಲ್ಲ'' ಎನ್ನುವ ಮಾತು ಪತ್ನಿಯ ಕಡೆಯಿಂದ ಬಂದರೆ, ''ನೀನು ಮನೆಕೆಲಸ ಮಾಡುವಾಗ ನಾನು ಮಗುವನ್ನು ನೋಡಿಕೊಳ್ಳೋದು, ಆಟ ಆಡಿಸೋದು ಗೊತ್ತೇ ಆಗಲ್ಲ ನಿನ್ಗೆ.. ಎಲ್ಲಾ ಕೋಪ, ಫ್ರಸ್ಟ್ರೇಷನ್‌ ನನ್ನ ಮೇಲೆ ತೋರಿಸಿಕೋಬೇಡ'' ಎನ್ನುವ ಬಾಣ ಪತಿಯ ಕಡೆಯಿಂದ ಬರುತ್ತದೆ. ಹೀಗೆ ವಾಗ್ದಾಳಿ ಮುಗಿಯುವುದು ಮಗು ಮಲಗಿದಾಗಲೇ..! ಯಾಕೆಂದರೆ ಸದ್ದು ಮಾಡಬಾರದಲ್ಲ..!

ಮಗುವಾಗುವುದಕ್ಕಿಂತ ಮುನ್ನ ಮುದ್ದಾಡುತ್ತಿದ್ದ ಜೋಡಿ, ಮಗುವಾದ ಮೇಲೆ ಕಿತ್ತಾಡುವುದು ಹೆಚ್ಚಾಗುತ್ತಿದೆ. ಇದು ನನ್ನ, ನಿಮ್ಮ ಜೀವನದಲ್ಲೂ ಹೊರತಾಗಿಲ್ಲ ಅಲ್ಲವೇ. ನನ್ನ ಗೆಳತಿಯೊಬ್ಬಳು '' ಮಗುವಾದ ಮೇಲೆ ನಮ್ಗೆ ಜಗಳ ಮಾಡೋಕೆ ಟೈಮ್‌ ಸಿಕ್ತಿಲ್ಲ'' ಅಂದಾಗ ಲಕ್ಕಿ ಅಂದುಕೊಂಡೆ. ಎಲ್ಲರ ಜೀವನದಲ್ಲಿ ಇದು ನಡೆಯುವುದು ಅಪರೂಪ...! ಈಗೀನ ಆಧುನಿಕತೆ, ಒತ್ತಡ, ಕೆಲಸ, ಅದೂ ಗಂಡ ಹೆಂಡತಿ ಇಬ್ಬರೂ ವರ್ಕಿಂಗ್‌ ಆದರೆ ಮುಗಿದೇ ಹೋಯಿತು. ದಿನಬೆಳಗಾದರೆ ಮಗುವನ್ನು ನೋಡಿಕೊಳ್ಳುವ ವಿಚಾರದಲ್ಲಿ ಜಗಳ ನಡೆಯುವುದಂತೂ ನಿತ್ಯದ ದಿನಚರಿ. ಯಾಕೆ ಹೀಗೆ..? ಮಗುವಾದ ಮೇಲೆ ದಾಂಪತ್ಯ ಜೀವನದಲ್ಲಿ ಜಗಳ ಯಾಕೆ ಹೆಚ್ಚಾಗುತ್ತದೆಯೇ..? ಇದಕ್ಕೆ ಕಾರಣವೇನು ಅನ್ನೋದನ್ನ ನೋಡಲು ಹೊರಟರೆ ಕಾರಣಗಳು ಹಲವಾರಿರುತ್ತದೆ..

ಪತಿಯ ಬೆಂಬಲ ಕಡಿಮೆಯಾಗುತ್ತಿದೆ ಎನ್ನುವ ಭಾವನೆ

ಪತಿಯ ಬೆಂಬಲ ಕಡಿಮೆಯಾಗುತ್ತಿದೆ ಎನ್ನುವ ಭಾವನೆ

ಮನೆಯ ಕೆಲಸದೊಂದಿಗೆ ಮಗುವಿಗೆ ಹಾಲುಡಿಸುವುದು, ಡೈಪರ್‌ ಚೇಂಜ್‌ ಮಾಡುವುದು, ಸ್ನಾನ ಮಾಡಿಸುವುದು, ಊಟ ಮಾಡಿಸುವುದು, ಕೊನೆಗೆ ಮಲಗಿಸುವ ಕಾರ್ಯವನ್ನೂ ತಾಯಿಯೇ ಮಾಡಬೇಕಾದಾಗ, ಪತಿ ಇದ್ದೂ ಕೂಡಾ ಏನು ಮಾಡುವುದಿಲ್ಲ. ಮೊಬೈಲ್‌, ಟಿವಿಯಲ್ಲಿ ಮುಳುಗಿರುತ್ತಾನೆ. ನಾನೇ ಎಲ್ಲ ಯಾಕೆ ನಿಭಾಯಿಸಬೇಕು, ಮಗುವನ್ನು ನೋಡಿಕೊಳ್ಳುವುದರಲ್ಲಿ ಪತಿಯದ್ದೂ ಜವಾಬ್ದಾರಿ ಇದೆಯಲ್ಲವೇ ಎಂದೆನಿಸಿದಾಗ ಅಪಸ್ವರ ಬರುವುದು ಸಾಮಾನ್ಯ. ಇಬ್ಬರ ನಡುವಿನ ಜಗಳಕ್ಕೆ ಇದೂ ಒಂದು ಕಾರಣವಾಗಬಹುದು.

ಸಂಬಂಧದಲ್ಲಿ ಆತ್ಮೀಯತೆ ಕಡಿಮೆಯಾಗಿದೆ ಎನಿಸುವುದು

ಸಂಬಂಧದಲ್ಲಿ ಆತ್ಮೀಯತೆ ಕಡಿಮೆಯಾಗಿದೆ ಎನಿಸುವುದು

''ಮಗುವಾದ ಮೇಲೆ ಮಗುವಿನ ಕಡೆಗೆ ಹೆಚ್ಚು ಗಮನ ವಹಿಸುತ್ತೀ, ನನ್ನ ಬಗ್ಗೆ ಗಮನವೇ ಇಲ್ಲ ನಿನಗೆ'' ಎನ್ನುವ ಮಾತು ಕೇಳಿ ಬರುವುದು ಸಾಮಾನ್ಯವೇ. ಈ ಸಮಯದಲ್ಲಿ ತಮ್ಮ ಆದ್ಯತೆಗಳನ್ನು ಬಿಟ್ಟು ಮಗುವಿನ ಕಡೆಗೆಯೇ ಹೆಚ್ಚಿನ ಗಮನ ಹರಿಸಿದಾಗ ಲೈಂಗಿಕತೆಯ ಕಡೆಗೆ ಆಸಕ್ತಿ ಬೆಳೆಯುವುದಿಲ್ಲ. ಬೆಳಗ್ಗೆಯಿಂದ ರಾತ್ರಿಯವರೆಗೂ ಮಗುವನ್ನು ಸಂಭಾಳಿಸಿ ದಣಿಯುವ ತಾಯಿ, ಮಧ್ಯರಾತ್ರಿಯವರೆಗೂ ಎಚ್ಚರವಾಗಿಯೇ ಇರುವ ಮಗುವಿಗೆ ನಿದ್ದೆ ಮಾಡಿಸುವಷ್ಟರಲ್ಲಿ, ಇಬ್ಬರಿಗೂ ನಿದ್ದೆ ಆವರಿಸುವುದೇ ತಿಳಿಯುವುದಿಲ್ಲ. ಹೀಗಾಗಿಯೇ ಆಪ್ತತೆ ಕಡಿಮೆಯಾದಾಗ ನಿರಾಸೆಯಿಂದಾಗಿ ಅಥವಾ ನಿರಾಕರಣೆಯಿಂದಾಗಿ ವೈಮನಸ್ಸುಗಳು ಮೂಡುವುದು ಸಾಮಾನ್ಯ.

ಪಾಲನೆಯ ವಿಚಾರದಲ್ಲಿ ಚರ್ಚೆ

ಪಾಲನೆಯ ವಿಚಾರದಲ್ಲಿ ಚರ್ಚೆ

ಮಗುವಿಗೆ ಸ್ವಲ್ಪ ಹುಷಾರು ತಪ್ಪಿದಾಗ, ನೀನು ಮಗುವನ್ನು ಸರಿಯಾಗಿ ನೋಡಿಕೊಳ್ತಾ ಇಲ್ಲ, ಮಗುವಿಗೆ ಆಗಬಾರದ್ದು ಏನೋ ತಿನ್ನಿಸಿರಬೇಕು, ಅಲ್ಲಿ ಕರೆದುಕೊಂಡು ಹೋಗ್ಬೇಡ , ಇಲ್ಲಿ ಹೋಗಬೇಡ, ಮನೆಯಲ್ಲಿದ್ದೂ ಮಗು ಕಡೆ ಸ್ವಲ್ಪ ನೋಡಿಕೊಳ್ಳೋಕೆ ಆಗಲ್ವಾ ಎನ್ನುವ ಮಾತು ಹೊಟ್ಟೆ ಉರಿಯುವಂತೆ ಮಾಡಿ ಗಂಡ ಹೆಂಡತಿಯ ಮಧ್ಯೆ ಜಗಳಕ್ಕೆ ಕಾರಣವಾಗುವುದು ಮಾಮೂಲಿ.

ಕೆಲಸಗಳ ಬಗ್ಗೆ ಅರ್ಥಮಾಡಿಕೊಳ್ಳದಿರುವುದು

ಕೆಲಸಗಳ ಬಗ್ಗೆ ಅರ್ಥಮಾಡಿಕೊಳ್ಳದಿರುವುದು

ಆಫೀಸಿಗೆ ಹೋಗುವ ಗಂಡ ಮನೆಯಲ್ಲಿದ್ದು ಮಗುವನ್ನು ನೋಡಿಕೊಳ್ಳುವ ಕೆಲಸವೇ ತುಂಬಾ ಈಸೀ, ಮಗು ಮಲಗಿದಾಗ ನೀನೂ ಮಲ್ಕೋಬೋದು. ರಾತ್ರಿ ನಾನು ನಿದ್ದೆ ಕೆಟ್ಟು ಮಗುವನ್ನು ನೋಡಿಕೊಳ್ಳೋಕಾಗಲ್ಲ, ಆಫೀಸಲ್ಲಿ ನಿದ್ದೆ ತೂಕಡಿಸುತ್ತೆ ಎಂದು ಬೆಡ್‌ಶೀಟ್‌ ಹೊದ್ದು ಮಲಗುತ್ತಾನೆ. ಆತನಿಗೆ ಗೊತ್ತಿಲ್ಲ.. ಮಗು ಮಲಗಿದಾಗ ಬಾಕಿ ಉಳಿದ ಮನೆ ಕೆಲಸವೆಲ್ಲಾ ಮಾಡಿ, ಹನ್ನೆರಡು ಗಂಟೆಗೆ ಇನ್ನೇನು 'ಬ್ರೇಕ್‌ಫಾಸ್ಟ್' ಮಾಡೋಣ ಎಂದು ಕುಳಿತಾಗ, ಮಲಗಿದ್ದ ಮಗು ಮಿಸುಕಾಡಿ ಅತ್ತಾಗ.. ಗಡಿಬಿಡಿಯಲ್ಲಿ ಓಡಿ ಮತ್ತೆ ತಟ್ಟಿ ಮಲಗಿಸಿ ಬಂದಾಗ ಬಿಸಿ ಇದ್ದ ಕಾಫಿಯೂ ತಣ್ಣಗಾಗಿ ಬಿಡುತ್ತದೆ. ದಿನವಿಡೀ ಕೆಲಸದ ಜೊತೆಗೆ ರಾತ್ರಿಯೂ ಪದೇ ಪದೇ ಮಗು ಎದ್ದಾಗ, ಗಂಡನಾದವನೂ ಬೆಚ್ಚಗೆ ಗೊರಕೆ ಹೊಡುತ್ತಾ ಮಲಗಿದ್ದಾಗ ತಾಳ್ಮೆ ಕೆಟ್ಟು ಕಿರುಚುವುದು ಸಾಮಾನ್ಯ.

ಮನೆಯ ಖರ್ಚು ಸರಿತೂಗಿಸುವುದು

ಮನೆಯ ಖರ್ಚು ಸರಿತೂಗಿಸುವುದು

ಮಗುವಾದ ಮೇಲೆ ಜವಾಬ್ದಾರಿಗಳು ಹೆಚ್ಚಾದಂತೆ, ಖರ್ಚುಗಳೂ ಹೆಚ್ಚಾಗುತ್ತದೆ. ನಾನು ದುಡಿವ ದುಡ್ಡೆಲ್ಲಾ ಬರೀ ಡೈಪರ್‌ಗೇ ಖರ್ಚಾಗತ್ತೆ. ತಿಂಗಳಾಂತ್ಯದಲ್ಲಿ ಕೈ ಖಾಲಿಯಾಗಿರುತ್ತದೆ ಎನ್ನುವ ಮಾತನ್ನು ನೀವೂ ಕೇಳಿರಬಹುದು. ಇಬ್ಬರು ದುಡಿದರೂ ಖರ್ಚುಗಳನ್ನು ಸರಿತೂಗಿಸಿಕೊಂಡು ಹೋಗೋದು ಕೆಲವೊಮ್ಮೆ ಅಸಾಧ್ಯವಾಗುತ್ತದೆ. ಹೀಗಾದಾಗ ಮನಸ್ಸು ಒಂಥರಾ ಒತ್ತಡ, ಕೋಪದಿಂದ ಕೂಡಿರುವಾಗ ಸಣ್ಣ ಮಾತಿಗೂ ಕೋಪ ಉಕ್ಕಿ ಬಂದು ಜಗಳವಾಗುತ್ತದೆ.

ಒಟ್ಟಿಗೆ ಸಮಯ ಕಳೆಯಲಾಗುತ್ತಿಲ್ಲ ಎನ್ನುವ ಭಾವನೆ

ಒಟ್ಟಿಗೆ ಸಮಯ ಕಳೆಯಲಾಗುತ್ತಿಲ್ಲ ಎನ್ನುವ ಭಾವನೆ

ಮಗು ಜೀವನದಲ್ಲಿ ಬರುವುದಕ್ಕೂ ಮುನ್ನ, ಸಿನಿಮಾ, ಶಾಪಿಂಗ್ ಎಂದು ಸುತ್ತಾಡುತ್ತಿದ್ದ ಜೋಡಿಗೆ ಮಗುವಾದ ಮೇಲೆ ಜೊತೆಯಲ್ಲೇ ಹೋಗಿ ತರಕಾರಿ ತರೋದಿಕ್ಕೂ ಪುರುಸೊತ್ತಿರುವುದಿಲ್ಲ. ನಿಮ್ಮ ನೆಚ್ಚಿನ ಹವ್ಯಾಸವಾಗಲಿ, ವರ್ಕ್‌ ಔಟ್‌ ಮಾಡುವುದಾಗಲಿ, ಅಥವಾ ನಿಮಗೆ ಇಷ್ಟವಾದ ಕೆಲಸ ಮಾಡುವುದಕ್ಕೂ ಸಮಯ ಇರುವುದಿಲ್ಲ. ಹೀಗಾದಾಗ ಹತಾಶೆ ಆವರಿಸಿಬಿಡುತ್ತದೆ. ಮನೆಯಲ್ಲೇ ಇದ್ದು ಮಗುವನ್ನು ನೋಡಿಕೊಳ್ಳುವುದರಲ್ಲೇ ಸಮಯ ಸರಿದಾಗ ಮನಸ್ಸು ಒಂಥರಾ ಒಂದೇ ದಿನಚರಿಯಿಂದ ಹುಚ್ಚು ಹಿಡಿದು ಹೋಗಿರುತ್ತದೆ.

ನಿದ್ದೆಯ ಅಭಾವ

ನಿದ್ದೆಯ ಅಭಾವ

ಮಗುವಾದ ಮೇಲೆ ರಾತ್ರಿ ನಿದ್ದೆಗಂತೂ ಬೈ ಬೈ ಹೇಳಬೇಕಷ್ಟೇ. ಮಗುವಿಗೆ ಎರಡು-ಎರಡೂವರೆ ವರ್ಷದವರೆಗೂ ನಿದ್ದೆಯಿಲ್ಲದ ರಾತ್ರಿ ಅಥವಾ ಪದೇ ಪದೇ ಎದ್ದೇಳಬೇಕಾದ ದಿನಗಳೇ ಹೆಚ್ಚಾಗುತ್ತದೆ. ದಿನವಿಡೀ ದುಡಿದು ದಣಿದ ದೇಹಕ್ಕೆ ನಿದ್ದೆಯಿಲ್ಲದೇ ಹೋದರೆ, ಮಾನಸಿಕವಾಗಿ ಮತ್ತು ದೈಹಿಕವಾಗಿಯೂ ಜರ್ಝರಿತವಾಗುತ್ತೇವೆ. ನಿದ್ರಾಹೀನತೆಯ ಒತ್ತಡಕ್ಕೆ ಕಾರಣವಾಗುತ್ತದೆ, ಇದು ನಮ್ಮ ಮನಃಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಸಣ್ಣ ಕಾರಣಗಳಿಗೂ ತಾಳ್ಮೆ ಕಳೆದುಕೊಂಡು ಸಿಟ್ಟಾಗುವಂತಹ ಪ್ರಸಂಗಗಳು ಎದುರಾಗುತ್ತಲೇ ಇರುತ್ತದೆ.

ದಾಂಪತ್ಯದಲ್ಲಿನ ಈ ಸಣ್ಣ ಪುಟ್ಟ ಜಗಳಗಳೇ ಬೆಳೆದು ದೊಡ್ಡದಾಗುತ್ತದೆ. ನಿಮ್ಮಿಬ್ಬರೊಂದಿಗೆಯೇ ಬೆಳೆಯುತ್ತಿರುವ ಪುಟ್ಟ ಕಂದನ ಮೇಲೆಯೂ ನಿಮ್ಮ ಜಗಳಗಳು ಪ್ರಭಾವಬೀರುತ್ತದೆ. ಹೀಗಾಗದಂತೆ ನೋಡಿಕೊಳ್ಳಲು ಏನು ಮಾಡುವುದು, ಜಗಳವಾಗದಂತೆ ಹೊಂದಾಣಿಕೆ ಮಾಡಿಕೊಂಡು ಹೋಗುವುದು ಹೇಗೆ ಎನ್ನುವುದಾದರೆ ಈ ಕೆಳಗಿನ ಅಂಶಗಳನ್ನು ತಪ್ಪದೇ ಅಳವಡಿಸಿಕೊಳ್ಳಿ

ಒಬ್ಬರಿಗೊಬ್ಬರು ಸಹಾಯ ಮಾಡಿ

ಒಬ್ಬರಿಗೊಬ್ಬರು ಸಹಾಯ ಮಾಡಿ

ಮಗುವಿನ ಕರ್ತವ್ಯ ತಂದೆ ತಾಯಿ ಇಬ್ಬರದ್ದೂ ಆಗಿರುತ್ತದೆ. ಇಲ್ಲಿ ನೀನು ನಾನು ಎನ್ನುವ ಬೇಧಗಳನ್ನು ಮಾಡಲು ಹೋಗದಿರಿ. ನಿಮ್ಮಿಂದಾದ ಪ್ರಯತ್ನವನ್ನು ನೀವೂ, ನಿಮ್ಮ ಸಂಗಾತಿಯೂ ಮಾಡುತ್ತಿದ್ದೀರಿ ಎನ್ನುವ ಭಾವನೆ ಇಬ್ಬರಲ್ಲೂ ಇರಲಿ. ತಾಯಿಯಾಗುವುದು ಹೆಣ್ಣಿನ ಜೀವನದ ದೊಡ್ಡ ತಿರುವು. ಹೆರಿಗೆಯಾದ ಮೇಲೆ ಆಕೆಯ ದೈಹಿಕ ಸ್ಥಿತಿ ಮತ್ತು ಭಾವನೆಗಳ ಮೇಲೂ ಜಗಳಗಳು, ಮನಸ್ತಾಪಗಳು ಪರಿಣಾಮ ಬೀರುತ್ತವೆ ಎನ್ನುವುದು ತಿಳಿದಿರಲಿ. ಜಗಳವನ್ನು ಮಾಡಿದರೂ ಇಬ್ಬರೂ ಕುಳಿತು ಪರಿಹರಿಸಿಕೊಳ್ಳಿ, ಅಥವಾ ಮನಸ್ಸು ಶಾಂತವಾದ ನಂತರ ಕ್ಷಮೆಯಾಚಿಸಿ, ಒಬ್ಬರ ಮೇಲೊಬ್ಬರು ಕಿರುಚಾಡುವ ಅಗತ್ಯವಿಲ್ಲ.

ನಿದ್ದೆಗಾಗಿ ಪರಿಹಾರವನ್ನು ಕಂಡುಕೊಳ್ಳಿ

ನಿದ್ದೆಗಾಗಿ ಪರಿಹಾರವನ್ನು ಕಂಡುಕೊಳ್ಳಿ

ತಂದೆ ತಾಯಿ ಇಬ್ಬರಿಗೂ ನಿದ್ದೆ ಅವಶ್ಯಕ. ಇಬ್ಬರೂ ಕರ್ತವ್ಯವನ್ನು ಹಂಚಿಕೊಳ್ಳಿ. ರಾತ್ರಿ ಮಗು ಎದ್ದಾಗ ಮಲಗಿಸುವುದು, ಆಹಾರ ನೀಡುವುದನ್ನು ಸರದಿ ಪ್ರಕಾರ ಅಳವಡಿಸಿಕೊಳ್ಳಿ. ಒಂದು ವಾರ ಅಥವಾ ಒಂದು ದಿನ ಬಿಟ್ಟು ಒಂದು ದಿನ ಒಬ್ಬರು ಸರದಿಯಂತೆ ಮಗುವನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಖುಷಿಯಿಂದ ಒಪ್ಪಿಕೊಳ್ಳಿ.

ಕೆಲಸಗಳನ್ನು ಹಂಚಿಕೊಳ್ಳಿ

ಕೆಲಸಗಳನ್ನು ಹಂಚಿಕೊಳ್ಳಿ

ಎಲ್ಲಾ ಮನೆ ಕೆಲಸವನ್ನು ತಾಯಿಯೇ ಮಾಡಬೇಕಂದಿಲ್ಲ. ನಿಮ್ಮ ಪತ್ನಿಗೂ ಅಡುಗೆ ಕೆಲಸದಲ್ಲಿ ಸಹಾಯ ಮಾಡಿ. ಮನೆ ಸ್ವಚ್ಛಗೊಳಿಸುವುದೋ, ಪಾತ್ರೆ ತೊಳೆಯುವುದೋ ಮುಂತಾದ ಸಣ್ಣ ಪುಟ್ಟ ಕೆಲಸವನ್ನು ಮಾಡಿದಾಗ ನಿಮ್ಮ ಪತ್ನಿಯ ಮನಸ್ಸಿಗೂ ಹಾಯೆನಿಸುವುದು. ಅಸಮಾಧಾನ ನೂರು ಪಟ್ಟು ಕಡಿಮೆಯಾಗುವುದಂತೂ ಸತ್ಯ. ಕೆಲಸದ ವಿಚಾರದಲ್ಲಿ ನಾನು ಹೆಚ್ಚು ಕೆಲಸ ಮಾಡುತ್ತೇನೆ, ನಾನು ಹೆಚ್ಚು ದುಡಿಯುತ್ತೇನೆ ಎನ್ನುವ ಅಹಂ ಇಬ್ಬರ ಮಧ್ಯೆಯೂ ಬರದಂತೆ ನಿರ್ವಹಿಸಿ.

ಮಗುವಿನ ಬಗ್ಗೆ ನಿಮ್ಮ ನಿರೀಕ್ಷೆಗಳನ್ನು ಮುಕ್ತವಾಗಿ ಮಾತನಾಡಿ

ಮಗುವಿನ ಬಗ್ಗೆ ನಿಮ್ಮ ನಿರೀಕ್ಷೆಗಳನ್ನು ಮುಕ್ತವಾಗಿ ಮಾತನಾಡಿ

ಮಗುವನ್ನು ಬೆಳೆಸುವಂತಹ ಜವಾಬ್ದಾರಿ ಇಬ್ಬರದೂ ಆಗಿರುವಾಗ, ಒಬ್ಬರ ಮೇಲೆಯೇ ಎಲ್ಲ ತಪ್ಪುಗಳನ್ನು ಹೊರಿಸುವುದು ಸರಿಯಲ್ಲ. ಇಬ್ಬರೂ ಮಗುವಿನ ಆರೈಕೆ, ಪಾಲನೆಯ ಬಗ್ಗೆ ಮುಕ್ತವಾಗಿ ನಿಮ್ಮ ಅಭಿಪ್ರಾಯ, ಆಲೋಚನೆಗಳನ್ನು ಹಂಚಿಕೊಳ್ಳಿ. ನಿಮ್ಮ ಭಾವನೆಗಳನ್ನು ಸಂಗಾತಿಯ ಮುಂದೆ ಮುಕ್ತವಾಗಿ ತೆರೆದಿಡಿ.. ಯಾಕೆಂದರೆ ಅವರು ನಿಮ್ಮ ಜೀವನ ಸಂಗಾತಿ.. ಮಗುವನ್ನು ಹೇಗೆ ಬೆಳೆಸಬೇಕೆನ್ನುವುದರ ಕುರಿತು, ಭವಿಷ್ಯದ ಯೋಜನೆಗಳ ಕುರಿತು ಮುಕ್ತವಾಗಿ ಮಾತನಾಡಿ.

ವಾದಗಳನ್ನು ಬಗೆಹರಿಸಲು ಪ್ರಯತ್ನಿಸಿ

ವಾದಗಳನ್ನು ಬಗೆಹರಿಸಲು ಪ್ರಯತ್ನಿಸಿ

ಸಣ್ಣ ಮನಸ್ತಾಪಗಳೇ ದಾಂಪತ್ಯ ಜೀವನದಲ್ಲಿ ದೊಡ್ಡ ಅಂತರಕ್ಕೆ ಕಾರಣವಾಗುತ್ತದೆ. ವಿಷಯಗಳು ದೊಡ್ಡದಾಗುವ ಮೊದಲೇ, ಅದನ್ನು ಬಗೆಹರಿಸಿ. ಒಬ್ಬರನ್ನೊಬ್ಬರು ಬೆಂಬಲಿಸಿ, ಅನ್ಯೋನ್ಯತೆಯನ್ನು ಕಾಪಾಡಿಕೊಳ್ಳಿ. ಮಗು ಮಲಗಿರುವಾಗ ಆದಷ್ಟು ಜೊತೆಯಾಗಿ ಕಾಫಿ ಕುಡಿಯುತ್ತಾ ಭಾವನೆಗಳನ್ನು ಹಂಚಿಕೊಳ್ಳುವುದಾಗಲಿ, ಇಬ್ಬರಿಗೂ ಇಷ್ಟವಾಗುವ ಸಿನಿಮಾ ನೋಡುವುದಾಗಲಿ ಮಾಡಿ. ಸಿಗುವಂತಹ ಸಮಯವನ್ನು ಸಾಂಗತ್ಯಕ್ಕಾಗಿ ಬಳಸಿಕೊಳ್ಳಿ.

ನಿಮಗಾಗಿ ಸಮಯವನ್ನು ಯೋಜಿಸಿ

ನಿಮಗಾಗಿ ಸಮಯವನ್ನು ಯೋಜಿಸಿ

ಮನೆಗೆ ಬೇಕಾದ ಅಗತ್ಯ ಸಾಮಾಗ್ರಿಗಳನ್ನು ಇಬ್ಬರೂ ಕುಳಿತುಕೊಂಡು ಚರ್ಚಿಸಿ. ಮಗುವನ್ನು ಅತ್ತೆ ಮಾವನ ಬಳಿಯಲ್ಲೋ, ಅಥವಾ ಪಕ್ಕದಲ್ಲೇ ಇರುವ ನಂಬಿಕಸ್ಥ ಬಂಧುಗಳ, ಸ್ನೇಹಿತರ ಬಳಿಯಲ್ಲೋ ಕೆಲ ಗಂಟೆಗಳ ಕಾಲ ನೋಡಿಕೊಳ್ಳುವಂತೆ ಹೇಳಿ, ನೀವಿಬ್ಬರೂ ಕ್ವಿಕ್‌ ಶಾಪಿಂಗ್‌ ಮಾಡಿಕೊಂಡು ಬನ್ನಿ ಅಥವಾ ರೋಮ್ಯಾಂಟಿಕ್ ಡಿನ್ನರ್‌ಗಾಗಿ ನಿಮ್ಮ ಸಂಗಾತಿಯನ್ನು ಕರೆದುಕೊಂಡು ಹೋಗಿ, ಇದರಿಂದ ಇಬ್ಬರೂ ಒಬ್ಬರಿಗೊಬ್ಬರು ಸಮಯ ನೀಡಿದಂತಾಗುವುದು ಮಾತ್ರವಲ್ಲದೇ ಮನೆಯ ಒತ್ತಡಗಳಿಂದ ಸ್ವಲ್ಪ ಮಟ್ಟಿಗೆ ಮುಕ್ತಿ ಸಿಗುವುದು ಪಕ್ಕಾ..!

ಮಗುವಿನೊಂದಿಗೆ ಇಬ್ಬರೂ ಸಮಯ ಕಳೆಯಿರಿ

ಆದಷ್ಟು ಬಿಡುವು ಮಾಡಿಕೊಂಡು ಮೊಬೈಲ್‌, ಲ್ಯಾಪ್‌ಟಾಪ್‌ ಬದಿಗಿಟ್ಟು ಮಗುವಿನೊಂದಿಗೆ ಸಮಯ ಕಳೆಯಿರಿ. ಮಗುವಿಗೆ ಸ್ನಾನ ಮಾಡಿಸುವುದು, ನ್ಯಾಪಿ ಚೇಂಜ್‌ ಮಾಡಿಸುವುದಾಗಲಿ, ಹಲ್ಲುಜ್ಜುವುದು, ಕಥೆ, ಹಾಡು ಹೇಳುವುದು ತಾಯಿಯ ಕೆಲಸ ಮಾತ್ರವಲ್ಲ, ತಂದೆಯಾದವರ ಕರ್ತವ್ಯವೂ ಹೌದು. ಪಿತೃತ್ವ ಎನ್ನುವುದು ಜೀವನದ ಅಮೂಲ್ಯ ಕ್ಷಣಗಳು. ಆ ಕ್ಷಣಗಳನ್ನು ಆನಂದಿಸಿ, ಹೊರತು ದೊಡ್ಡ ಹೊರೆ ಎಂದು ಭಾವಿಸಬೇಡಿ.

ಮಕ್ಕಳು ಚಿಕ್ಕವರಾಗಿಯೇ ಎಂದಿಗೂ ಉಳಿಯುವುದಿಲ್ಲ, ದೊಡ್ಡವರಾದಂತೆ ನಮ್ಮ ಜೀವನಶೈಲಿಗೆ ಹೊಂದಿಕೊಳ್ಳುತ್ತಾ ಹೋಗುತ್ತಾರೆ. ಹಾಗಾಗಿ ಸಂಗಾತಿಯ ಮಧ್ಯೆ ಮಗುವಿನ ವಿಚಾರಕ್ಕಾಗಿಯೋ, ಇನ್ನೇನು ಕಾರಣಕ್ಕಾಗಿಯೋ ಜಗಳ ಮಾಡುವ ಬದಲು ನಿಮ್ಮ ಮಗುವಿನ ಬೆಳವಣಿಗೆಯ ಬಗ್ಗೆ ಗಮನ ಹರಿಸಿ. ಮಾತೃತ್ವವೆನ್ನುವುದು ದೊಡ್ಡ ಜವಾಬ್ದಾರಿ ಹಾಗಾಗಿ, ನಿಮ್ಮ ಮಗುವಿನ ಲಾಲನೆ ಪಾಲನೆಯೊಂದಿಗೂ ಪತಿಯಾದ ನಿಮ್ಮ ಬಗ್ಗೆಯೂ ಕಾಳಜಿ ವಹಿಸುವಂತಹ ಸಂಗಾತಿಯ ಬಗ್ಗೆ ನಿಮಗೊಂದು ಹೆಮ್ಮೆ ಇರಲಿ. ದಣಿದ ಆಕೆಯ ಮನಸ್ಸಿಗೆ, ದೇಹಕ್ಕೆ ಬೆಚ್ಚನೆಯ ಒಂದು ಆಲಿಂಗನವೂ ದೊಡ್ಡ ಸಾಂತ್ವಾನ ನೀಡುವುದು..

English summary

Reasons Why Couple Fight More After Having Baby in Kannada

These are the reasons why couples fight more often after having a baby, read on,
Story first published: Thursday, May 12, 2022, 17:50 [IST]
X