For Quick Alerts
ALLOW NOTIFICATIONS  
For Daily Alerts

ಎರಡು ಹನಿ ಕಣ್ಣೀರು, ಬಿಕ್ಕಿನೊಂದಿಗೆ, ನಾನು

By * ವಿದ್ಯಾಶಂಕರ ಹರಪನಹಳ್ಳಿ, ಟೂಲೂಸ್, ಫ್ರಾನ್
|
Love letter by Vidyashankar Harapanahalli
ಜೀವದ ಗೆಳತಿ,

ತಮ್ಮ ಪ್ರೀತಿಯನ್ನು ಬದುಕಿನಲ್ಲಿ ಮೊದಲಸಲ ಕಂಡಾಕ್ಷಣ ಯಾರ್ಯಾರಿಗೋ ಏನೇನೋ ಅನಿಸಬಹುದು ಮತ್ತು ಅವರ ಮನದಲ್ಲಿ ಏನೇನೋ ಆಸೆ ಹುಟ್ಟಬಹುದು. ಆದರೆ ನನ್ನಲ್ಲಿ, ನನ್ನ ಬದುಕಲ್ಲಿ ಹುಟ್ಟಿದ್ದು ಅಪ್ಪಟ ಹದಿನಾರಾಣೆ ಶಿಸ್ತು ಎಂದರೆ ನೀನು ಅಚ್ಚರಿಯಾದರು ನಂಬಲೇಬೇಕು. ನಿಜ, ಅಸ್ತವ್ಯಸ್ತವಾಗಿದ್ದ ನನ್ನ ಬ್ರಹ್ಮಚಾರಿ ಜೀವನದಲ್ಲಿ ಭಯಂಕರ ಶಿಸ್ತು, ಶ್ರದ್ಧೆ ಬಂದುಬಿಡ್ತು. ಮಾಡುವ ಎಲ್ಲಾ ಕೆಲಸಗಳಲ್ಲೂ ಕಂಡು ಕೇಳರಿಯದ ಮಟ್ಟಸ್ತನ ಬಂದು ಬಿಡ್ತು ನೋಡು! ದಿನವೂ ಸ್ನಾನ, ಹಾಗು ಹೀಗು ಇದ್ದ ಬಟ್ಟೆಗಳಿಗೆ ಇಸ್ತ್ರಿ, ತಲೆಗೆ ಎಣ್ಣೆ, ತೀಡಿ ತೀಡಿ ಬಾಚಿದ ಕ್ರಾಪು.... ಅದೆಲ್ಲಾ ಬಿಡು ನನ್ನ ಹಳೆ ಹರಿದ ಚಡ್ಡಿ, ಬನಿಯನ್ನು ಹಿಂಡಿ ಒಣಗ್ಹಾಕುವಾಗಲು ನನ್ನಲ್ಲೇ ನಾನು ಪ್ರೀತಿಯಿಂದ ಮುಗುಳು ನಗುತ್ತಿದ್ದೆ! ನನ್ನ ಅಮ್ಮ ಬದುಕಿದ್ದರೆ ನನ್ನ ಶಿಸ್ತು, ಶ್ರದ್ದೆ ನೋಡಿ ಎಷ್ಟು ಸಂತೋಷ ಪಡುತಿದ್ದಳೋ... ಒಟ್ಟಿನಲ್ಲಿ ಬರಗೂರು ರಾಮಚಂದ್ರಪ್ಪನವರ ಗದ್ಯದಂತಿದ್ದ ನನ್ನ ಬದುಕು ಕೆ.ಎಸ್. ನರಸಿಂಹ ಸ್ವಾಮಿಯವರ ಪದ್ಯದಂತಾಯಿತು ನೋಡು...

ನಿನಗಿಷ್ಟವೆಂದು ತಿಳಿದ ತಕ್ಷಣ ಪದ್ಯ ಓದುವುದು ಕಲಿತೆ ಮತ್ತು ಗಜಲ್ ಕೇಳುವುದು ರೂಢಿಸಿಕೊಂಡೆ. ಒಂದು ಸಲ ನಿನ್ನ ಮುಂದೆ ಪೆದ್ದುಪೆದ್ದಾಗಿ ಗಜಲ್ ಹಾಡಲು ಹೋಗಿ ಹಾಸ್ಯಾಸ್ಪದವಾದೆ, ಆಗ ನೀನು ಮುಕ್ತವಾಗಿ ನಕ್ಕು ಎಲ್ಲವನ್ನೂ ಮರೆಸಿದೆ. ಇಂದು ತಕ್ಕ ಮಟ್ಟಿಗೆ ಗಜಲ್ ಹಾಡಲು ಕಲಿತಿದ್ದರೆ ಮತ್ತು ಉರ್ದು ಭಾಷೆಯ ಸೂಕ್ಷ್ಮಗಳನ್ನೂ ಕಲಿತಿದ್ದರೆ ಅದಕ್ಕೆ ನೀನೆ ಕಾರಣ. ಆದರೆ ನಿನ್ನ ಮುಂದೆ ನಾನೇನಿಲ್ಲ ಬಿಡು. ನೀನು ರೇಷ್ಮೆ ಸೀರೆಯುಟ್ಟು ಸ್ಟೇಜ್ ಮೇಲೆ ಕುಳಿತು ಗಜಲ್ ಹಾಡುತ್ತಿದ್ದರೆ, ಆ ಕ್ಷಣಕ್ಕೆ ಅರ್ಧ ರಾಜ್ಯ ಬರೆದುಕೊಟ್ಟ ರಸಿಕರೆಷ್ಟೋ... ನಾನಂತೂ ನನ್ನ ಪೂರ್ತಿ ರಾಜ್ಯ ಮತ್ತು ಬದುಕುನ್ನೇ ಬರೆದು ಕೊಟ್ಟೆ.

ಎಷ್ಟೋ ಸಲ ನಿನ್ನ ಗುಣಕ್ಕೆ, ಸೌಂದರ್ಯಕ್ಕೆ, ಕಲೆಗೆ ಸರಿಸಾಟಿಯಾಗಿ... ಉಹುಂ ಅದೆಲ್ಲಾ ಹೋಗಲಿ ನಿನ್ನ ಜೊತೆ ನಿಲ್ಲುವುದಕ್ಕೂ ಯೋಗ್ಯತೆ ಇಲ್ಲದ ನಾನು ಅನೇಕ ಸಲ ಕೀಳರಿಮೆಯಿಂದ ಬಳಲುತಿದ್ದೆ. ಆದರೆ ನಿನ್ನ ಒಂದು ಮುಗುಳ್ನಗೆ, ತೋರಿಸುತಿದ್ದ ವಿಶ್ವಾಸ ನನ್ನಲ್ಲಿ ಆತ್ಮವಿಶ್ವಾಸದ ಜೋಗದ ಜಲಪಾತವನ್ನೇ ಹರಿಸಿತ್ತು. ಇಂತದ್ದೇ ಒಂದು ಅಶಕ್ತ ಗಳಿಗೆಯಲ್ಲಿ ಮೈ ಮರೆತು ನಿನ್ನ ಆರಾಧಿಸುತ್ತ, ಪ್ರೀತಿಯಲ್ಲಿ ಮುಳುಗಿಬಿಟ್ಟೆ. ನಿನ್ನ ದೊಡ್ಡ ಭಾವ ಪೂರ್ಣ ಕಣ್ಣುಗಳಲ್ಲಿ ನನ್ನನ್ನೇ ಹುಡುಕುತ್ತಿದ್ದೆ.

ನನ್ನ ಬದುಕಿನ ಅತ್ಯಂತ ಸುಖಿ ದಿನಗಳವು. ಹಗಲಾದರೆ ನಿನ್ನ ನೋಡುವ ತವಕ, ರಾತ್ರಿಯಾದರೆ, ಕನಸಲ್ಲಿ ಆಡದೆ ಉಳಿದ ಮಾತುಗಳ ಮರಮರ. ಅಪ್ಪಟ ನಾಸ್ತಿಕನಾದ ನಾನು ಆ ಕ್ಷಣಕ್ಕೆ ದೇವರನ್ನು ನಂಬಿಬಿಟ್ಟೆ! ಆ ದೇವರು ಎಷ್ಟೊಂದು ದಯಾಮಯಿ! ನನ್ನಂಥ ಒರಟು ರುದ್ರನನ್ನು ಹುಟ್ಟಿಸಿ ನಿನ್ನಂಥ ಲಕ್ಷಣವಾದ ಗೌರಿಯನ್ನು ಸೃಷ್ಟಿಸಿದ!

English summary

An ode to my lover | Love letter by Vidyashankar Harapanahalli | ಎರಡು ಹನಿ ಕಣ್ಣೀರು, ಬಿಕ್ಕಿನೊಂದಿಗೆ, ನಾನು | ವಿದ್ಯಾಶಂಕರ ಹರಪನಹಳ್ಳಿ ಪ್ರೇಮ ಪತ್ರ

An ode to my lover. The person who taught discipline, sincerity, dedication is none other than my lover. Though I am not married to you, I adore you forever. Love letter by Vidyashankar Harapanahalli.
Story first published: Saturday, February 11, 2012, 18:53 [IST]
X
Desktop Bottom Promotion