For Quick Alerts
ALLOW NOTIFICATIONS  
For Daily Alerts

ಒಡೆದದ್ದು ಮೂತಿ ಮಾತ್ರವಲ್ಲ ಪ್ರೀತಿ, ಬದುಕು ಕೂಡ!

By * ವಿದ್ಯಾಶಂಕರ ಹರಪನಹಳ್ಳಿ, ಟೂಲೂಸ್, ಫ್ರಾನ್
|
Love letter by Vidyashankar Harapanahalli
ಗೆಳತಿ, ನಿನ್ನಲ್ಲಿ ನನ್ನ ಭವಿಷ್ಯ ಬದುಕಿನ ವಿಶ್ವರೂಪವನ್ನೇ ಕಂಡೆ, ಆದರೆ ನೀನು ನನ್ನಲ್ಲಿ ನಿರ್ಮಲ ಗೆಳೆತನದ ಹೊರತಾಗಿ ಬೇರೆ ಏನನ್ನು ಕಾಣಲಿಲ್ಲ. ನೀನು ಹಾಗೆಂದು ಹೇಳಿದಾಗ ಒಡೆದ ಕನ್ನಡಿಯಂತೆ ನನ್ನ ಬದುಕನ್ನು, ಎಷ್ಟೇ ಕಷ್ಟಪಟ್ಟರು ಇನ್ನೂ ಸೇರಿಸಲಾಗಲಿಲ್ಲ. ನಿನ್ನ ಮದುವೆ ಬೇರೊಬ್ಬರ ಜೊತೆ ಗೊತ್ತಾದ ವಿಷಯ ನೀನೆ ನನಗೆ ಹೇಳಿದೆ ನೋಡು, ಆಗ ಕೂಡ ಸಾರ್ವಜನಿಕ ಸ್ಥಳದಲ್ಲಿ ಅಳಬಾರದು ಎಂದು ನೀನೇ ಹೇಳಿಕೊಟ್ಟ ಶಿಸ್ತಿನಿಂದಾಗಿ ನನ್ನ ಕಣ್ಣೀರಹನಿಗಳನ್ನು ನುಂಗಿ ಬಿಟ್ಟೆ ಗೆಳತಿ... ಆದರೂ ಅದು ನಿನಗೆ ಗೊತ್ತಾಗಿ, ಏನು ಮಾಡಲು ತೋಚದೆ ನೀನು ಬೇರೆ ಕಡೆ ತಿರುಗಿದೆ... ಅಂದಿನಿಂದ ಇಂದಿನವರೆಗೂ ನನ್ನ ಬದುಕು ಅಶಿಸ್ತಿನ ಕೂಪವಾಗಿ ಹೋಗಿದೆ ನೋಡು. ನಿನ್ನ ನೋಡಿ ಓ ಬದುಕೇ ಐ ಲವ್ ಯು ಎಂದು ಓಡಿ ಬಂದವನು, ಪುಟ್ಟ ಮಗುವಿನಂತೆ ಬಿದ್ದು ಮೂತಿ ಒಡೆದುಕೊಂಡೆ. ಒಡೆದಿದ್ದು ನನ್ನ ಮೂತಿ ಮತ್ತು ಪ್ರೀತಿ ಮಾತ್ರವಲ್ಲ, ನನ್ನ ಬದುಕು ಕೂಡ.

ನನಗೇ ಏಕೆ ಹೀಗಾಯಿತು? ಯಾರಿಗೆ ನಾನು ಏನು ಅನ್ಯಾಯ ಮಾಡಿದೆ? ಎಂದು ಯೋಚಿಸಿ.. ಯೋಚಿಸಿ... ಮನಸ್ಸು ಮರಗಟ್ಟಿ ಹೋಗಿದೆ... ಎಂದಾದರೂ ಸಿಕ್ಕರೆ ನಿನ್ನ ಕೇಳಬೇಕು ಎಂದು ಆಕಾಶದೆಡೆಗೆ ನೋಡುತ್ತೇನೆ... ಉತ್ತರಕ್ಕೆ, ಸಾಂತ್ವನಕ್ಕೆ ಆಕಾಶದಲ್ಲಿ ಅಮ್ಮನನ್ನು ಹುಡುಕುತ್ತೇನೆ.

ದುರಂತ ಅಂದರೆ ನೋಡು, ಈಗ ನನಗೂ ಮದುವೆಯಾಗಿ, ಇಬ್ಬರು ಮಕ್ಕಳು. ಪ್ರಪಂಚದ ಕಣ್ಣಿಗೆ ನಾ ಸುಖಿ ಕುಟುಂಬದ ಯಜಮಾನ. ಬೆಂಗಳೂರಿನಲ್ಲಿ ಒಳ್ಳೆ ಕೆಲಸ, ಮನೆ, ಕಾರು, ಆಳುಕಾಳು ಉಳ್ಳ ಶ್ರೀಮಂತ, ಅದೃಷ್ಟವಂತ. ಆದರೂ ನಿನ್ನ ಕಳೆದು ಕೊಂಡದ್ದು ನೆನಪಾದಾಗೆಲ್ಲ ನಾನು ಅನುಭವಿಸುವ, ನನ್ನ ಮನದಲ್ಲಿ ಹುಟ್ಟುವ ದಟ್ಟದಾರಿದ್ರ್ಯ ನನಗೊಬ್ಬನಿಗೆ ಗೊತ್ತು.

ದಿನವೂ ನಾನು ಪ್ರೀತಿಸುವ ಜನರಿಗೋಸ್ಕರ ದೇವರಲ್ಲಿ ಬೇಡಿಕೊಳ್ಳುವುದಿಷ್ಟೇ, ನಿನ್ನಂತಹ ಹೆಣ್ಣು ಪ್ರತಿಯೊಬ್ಬರಿಗೂ ಬದುಕಲ್ಲಿ ಯಾವ ರೂಪದಲ್ಲಾದರೂ ಸಿಗಲಿ... ಅಮ್ಮ, ಅಕ್ಕ, ತಂಗಿ, ಗೆಳತಿ, ಹೆಂಡತಿ, ಪ್ರೇಯಸಿ, ಟೀಚರ್ ಯಾವುದೇ ರೂಪದಲ್ಲಿ ಸಿಕ್ಕರೂ ಅವರ ಬದುಕು ಬಂಗಾರವಾಗುವುದರಲ್ಲಿ ಸಂದೇಹವೇ ಇಲ್ಲ. ನನಗಂತೂ ನೀನೆ ಮತ್ತು ನಿನ್ನ ನೆನಪೇ ಎಲ್ಲಾ.

ಪ್ರತಿ ವರುಷ ಪ್ರೇಮಿಗಳ ದಿನದಂದು ನಿನ್ನ ಪ್ರೀತಿಸಿದ ನನ್ನೊಳಗಿನ ಮುಗ್ಧ ಪ್ರೇಮಿ ಎದ್ದು ಕೂಡುತ್ತಾನೆ, ನಾನು ಪ್ರತಿ ವರುಷ ಅವನ ಕತ್ತುಹಿಡಿದು ಅದುಮಿ, ಹೂತಿಟ್ಟು ನಿಟ್ಟುಸಿರು ಬಿಡುತ್ತೇನೆ. ಆದರೂ ಹುಚ್ಚುಖೋಡಿ ಮನಸು ಇನ್ನೂ ಆಸೆ ಬಿಟ್ಟಿಲ್ಲ... ನನ್ನನು ಸಮಾಧಾನಿಸುವಂತೆ ಡೆಕ್ಕಲ್ಲಿ ನಿನ್ನದೇ ಗಜಲ್ ತೇಲಿ ಬರುತಿದೆ... ಹುಡುಕಿದರೆ, ಧ್ಯಾನಿಸಿದರೆ ದೇವರೇ ಸೀಗುತ್ತಾನಂತೆ... ಮತ್ತೊಮ್ಮೆ ಬದುಕಿನಲ್ಲಿ ನೀನು ಸಿಗಲಾರೆಯಾ?

ಎರಡು ಹನಿ ಕಣ್ಣೀರು, ಬಿಕ್ಕಿನೊಂದಿಗೆ,

ನಾನು

(ಅನುಲೇಖ: ಕ್ಷಮಿಸು ಗೌರಿ! ನಿನ್ನ ಆಜ್ಞೆ ಮೀರಿ, ನಿನ್ನ ನೆನಪಾಗಿ ತಡೆಯದೆ ಕಣ್ಣು, ಕಣ್ಣೀರು ಸುರಿಸುತ್ತಿದೆ, ಅದಕ್ಕೆ ನಾನಂತೂ ಹೊಣೆಯೆಲ್ಲ.)

English summary

An ode to my lover | Love letter by Vidyashankar Harapanahalli | ಎರಡು ಹನಿ ಕಣ್ಣೀರು, ಬಿಕ್ಕಿನೊಂದಿಗೆ, ನಾನು | ವಿದ್ಯಾಶಂಕರ ಹರಪನಹಳ್ಳಿ ಪ್ರೇಮ ಪತ್ರ

An ode to my lover. The person who taught discipline, sincerity, dedication is none other than my lover. Though I am not married to you, I adore you forever. Love letter by Vidyashankar Harapanahalli.
Story first published: Saturday, February 11, 2012, 18:44 [IST]
X
Desktop Bottom Promotion