For Quick Alerts
ALLOW NOTIFICATIONS  
For Daily Alerts

ಬಾಯಲ್ಲಿ ನೀರೂರಿಸುವ ಹಣ್ಣುಗಳ ಜಾಮ್! ನೀವೂ ಪ್ರಯತ್ನಿಸಿ

By Arshad
|

ಹಣ್ಣುಗಳ ಜಾಮ್ ಎಂದರೆ ಮಕ್ಕಳಿಗೆ ತುಂಬಾ ಇಷ್ಟ. ತಿನ್ನಲು ಇಷ್ಟವಿಲ್ಲದ ಚಪಾತಿ ರೊಟ್ಟಿಗಳ ಜೊತೆಗೆ ಜಾಮ್ ಇರಿಸಿದರೆ ಮಾತ್ರ ತಿನ್ನುವ ಮಕ್ಕಳೂ ಇದ್ದಾರೆ. ಅತ್ಯಂತ ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಸಿದ್ಧ ಮತ್ತು ಬಹುಜನರ ಉಪಾಹಾರವೆಂದರೆ ಬ್ರೆಡ್ ಜಾಮ್.

ಹಣ್ಣುಗಳಲ್ಲಿ ಉತ್ತಮ ಪ್ರಮಾಣದ ನೀರಿನ ಅಂಶವಿದ್ದು ಹಣ್ಣುಗಳನ್ನು ತಿನ್ನುವ ಮೂಲಕ ಬೆವರು ಮತ್ತು ನಿರ್ಜಲೀಕರಣದ ಕಾರಣ ನಷ್ಟವಾಗಿದ್ದ ನೀರಿನ ಪ್ರಮಾಣವನ್ನು ಮತ್ತೆ ತುಂಬಿಸಿಕೊಳ್ಳಲು ಸಾಧ್ಯವಾಗುತ್ತದೆ. ಹಣ್ಣುಗಳಲ್ಲಿರುವ ಸಕ್ಕರೆ ಶಕ್ತಿಯ ಆಗರವಾಗಿದ್ದು ಜೊತೆಗೆ ಹಣ್ಣಿನ ರಸದಲ್ಲಿರುವ ಖನಿಜಗಳು ದೇಹಕ್ಕೆ ಪೋಷಣೆ ನೀಡುವ ಜೊತೆಗೇ ರೋಗಗಳ ವಿರುದ್ಧ ಹೋರಾಡಲೂ ನೆರವಾಗುತ್ತದೆ.

ಅಲ್ಲದೆ ಹಣ್ಣುಗಳ ತಿರುಳಿನಲ್ಲಿ ಉತ್ತಮ ಪ್ರಮಾಣದ ನಾರು ಅಥವಾ ಸೆಲ್ಯುಲೋಸ್ ಇದ್ದು ಮಲಬದ್ಧತೆಯಾಗದಂತೆ ತಡೆಯುತ್ತದೆ. ಬಹುತೇಕ ಹಣ್ಣುಗಳು ಋತುಮಾನಕ್ಕೆ ಅನುಗುಣವಾಗಿ ಲಭ್ಯವಾದರೂ ವರ್ಷವಿಡೀ ಒಂದಲ್ಲಾ ಒಂದು ಹಣ್ಣಂತೂ ಇದ್ದೇ ಇರುತ್ತದೆ. ಮಾರುಕಟ್ಟೆಯಲ್ಲಿ ಅಷ್ಟೇನೂ ದುಬಾರಿಯಲ್ಲದ ಹಣ್ಣುಗಳನ್ನು ಕೊಂಡುಕೊಳ್ಳಲೂಬಹುದು ಅಥವಾ ಕೊಂಚ ಶ್ರಮವಹಿಸಿ ಮನೆಯಲ್ಲಿಯೇ ಕೆಲವೊಂದು ಹಣ್ಣುಗಳನ್ನು ಬೆಳೆದುಕೊಳ್ಳಲೂಬಹುದು. ಅದರಲ್ಲೂ ಸ್ಥಳೀಯವಾಗಿ ಲಭ್ಯವಿರುವ ಹಣ್ಣುಗಳು ತಾಜಾ ಮತ್ತು ಪೌಷ್ಟಿಕವಾಗಿರುವ ಜೊತೆಗೇ ಹೊರಗಿನಿಂದ ಬಂದ ಹಣ್ಣುಗಳಿಗಿಂತ ಅಗ್ಗವೂ ಆಗಿರುತ್ತವೆ. ಮಿಕ್ಸ್ಡ್ ಫ್ರೂಟ್ ಜಾಮ್ ಮಾಡುವ ವಿಧಾನ

ಇಂತಹ ಒಂದು ಹಣ್ಣು ಎಂದರೆ ಅನಾನಸ್. ಸಾಧ್ಯವಾದಷ್ಟು ಮಟ್ಟಿಗೆ ಕೊಂಚ ಪ್ರಮಾಣದಲ್ಲಿಯಾದರೂ ನಿತ್ಯವೂ ಸೇವಿಸುವುದರಿಂದ ಹಲವು ಪ್ರಯೋಜನಗಳಿವೆ. ಇದರ ಸಿಪ್ಪೆ ಮತ್ತು ನಡುವಿನ ದಂಡನ್ನು ನಿವಾರಿಸಿದ ಬಳಿಕ ಉಳಿಯುವ ತಿರುಳನ್ನು ಚಿಕ್ಕದಾಗಿ ಕತ್ತರಿಸಿ ಕೊಂಚವೇ ಉಪ್ಪು ಮತ್ತು ಮೆಣಸಿನ ಪುಡಿಯನ್ನು ಚಿಮುಕಿಸಿ ತಿಂದರೆ ಸ್ವರ್ಗಕ್ಕೆ ಕಿಚ್ಚು ಹಚ್ಚುವ ರುಚಿ ಸಿಗುತ್ತದೆ. ಅಂತೆಯೇ ರಂಬುಟಾನ್ ಮತ್ತು ಮ್ಯಾಂಗೋಸ್ಟೀನ್ ಸಹಾ ಸಿಪ್ಪೆ ಸುಲಿದು ತಿನ್ನಬಹುದಾದ ಹಣ್ಣುಗಳಾಗಿವೆ.

ರಂಬುಟಾನ್ ಪ್ರಿಯರು ಇದರ ಸಿಪ್ಪೆ ಸುಲಿದು ತಿನ್ನುವುದನ್ನೇ ಹೆಚ್ಚು ಇಷ್ಟಪಡುತ್ತಾರೆ. ಹಾಗೂ ಬೇಸಿಗೆಯಲ್ಲಿ ಫ್ರಿಜ್ಜಿನಲ್ಲಿಟ್ಟು ಸೆಖೆಯ ಸಮಯದಲ್ಲಿ ತಿನ್ನಲು ಹೆಚ್ಚು ಪ್ರಶಸ್ತವಾಗಿರುತ್ತದೆ. ಅಂತೆಯೇ ಚಿಕ್ಕು, ಬಾಳೆಹಣ್ಣು, ಮಾವಿನಹಣ್ಣು ಮೊದಲಾದವುಗಳನ್ನೂ ತಿನ್ನುವುದು ಉತ್ತಮ. ಹಣ್ಣುಗಳನ್ನು ಸೇವಿಸುವ ಇನ್ನೊಂದು ಸುಲಭ ವಿಧಾನವಿದೆ. ಅದೆಂದರೆ ಜಾಮ್ ಮಾಡಿಕೊಂಡು ನಿತ್ಯದ ಉಪಾಹಾರದಲ್ಲಿ ಸೇವಿಸುವುದು. ಮಾರುಕಟ್ಟೆಯಲ್ಲಿ ಸಿಗುವ ಜಾಮ್ ಗಳಲ್ಲಿ ಹೆಚ್ಚಿನ ಸಕ್ಕರೆ ಮತ್ತು ಸಂರಕ್ಷಕಗಳಿರುವ ಕಾರಣ ಮನೆಯಲ್ಲಿಯೇ ತಯಾರಿಸಿದ ಜಾಮ್ ಹೆಚ್ಚು ಆರೋಗ್ಯಕರ ಮತ್ತು ರುಚಿಕರವೂ ಆಗಿದೆ. ಬನ್ನಿ, ಇದನ್ನು ಹೇಗೆ ತಯಾರಿಸುವುದು ಎಂಬುದನ್ನು ನೋಡೋಣ:

ಅಗತ್ಯವಿರುವ ಸಾಮಾಗ್ರಿಗಳು
*ಹೋಳು ಪಪ್ಪಾಯಿ ಹಣ್ಣು (ಚೆನ್ನಾಗಿ ಹಣ್ಣಾಗಿದ್ದು)
*ಹೋಳು ಅನಾನಸು
*ಹೋಳು ತರಬೂಜ
*ಬಾಳೆಹಣ್ಣುಗಳು
*ಚಿಕ್ಕು (ಸಪೋಟ ಹಣ್ಣು)
*ಸ್ಟಾರ್ ಫ್ರುಟ್
*ಲಿಂಬೆ
ಸುಮಾರು ಆರುನೂರು ಮಿಲಿ ಲೀಟರ್ ನೀರು
ಸಕ್ಕರೆ: ಸುಮಾರು ಇನ್ನೂರು ಗ್ರಾಂ. (ಹಣ್ಣುಗಳ ಸಿಹಿಗೆ ಅನುಗುಣವಾಗಿ ಕೊಂಚ ಹೆಚ್ಚು ಕಡಿಮೆಯಾಗಿಸಬಹುದು)

ವಿಧಾನ
1) ನೀರನ್ನು ಕುದಿಸಿ ಇದರಲ್ಲಿ ಸಕ್ಕರೆಯನ್ನು ಕರಗಿಸಿ.
2) ಈ ನೀರು ಕುದಿಯುತ್ತಿರುವಂತೆ ಅನಾನಸಿನ ತುಂಡುಗಳನ್ನು ಹಾಕಿ ಸುಮಾರು ಹತ್ತು ನಿಮಿಷ ಮುಚ್ಚಳ ಮುಚ್ಚಿ ಚಿಕ್ಕ ಉರಿಯಲ್ಲಿ ಕುದಿಸಿ. ನಡುನಡುವೆ ತಿರುವುತ್ತಾ ಇರಿ. ಇಲ್ಲದಿದ್ದರೆ ಸಕ್ಕರೆ ತಳ ಹತ್ತುತ್ತದೆ. ಬಳಿಕ ಉರಿ ಆರಿಸಿ ಕೊಂಚ ತಣಿಸಿ.
3) ಬಳಿಕ ಉಳಿದ ಹಣ್ಣುಗಳೆಲ್ಲವನ್ನೂ ಒಂದೊಂದಾಗಿ ಮಿಶ್ರಣ ಮಾಡಿ ತಿರುವುತ್ತಿರಿ. ಬಾಳೆಹಣ್ಣು ಮತ್ತು ಸ್ಟಾರ್ ಫ್ರುಟ್ ಗಳನ್ನು ಕೊನೆಯದಾಗಿ ಹಾಕಿ.
4) ಕಟ್ಟ ಕಡೆಯದಾಗಿ ಲಿಂಬೆರಸವನ್ನು ಸೇರಿಸಿ ಮಿಶ್ರಣ ಮಾಡಿ ಗಾಳಿಯಾಡದ ಜಾಡಿಯಲ್ಲಿ ಗಟ್ಟಿಯಾಗಿ ಮುಚ್ಚಳ ಮುಚ್ಚಿ ಫ್ರಿಜ್ಜಿನಲ್ಲಿಡಿ.
5) ಮರುದಿನದ ಬಳಿಕ ಈ ಜಾಮ್ ಅನ್ನು ಹಾಗೇ ತಿನ್ನಲು ಅಥವಾ ರೊಟ್ಟಿ ಬ್ರೆಡ್‌ಗಳ ಜೊತೆಗೆ ತಿನ್ನಲೂ ನೀಡಬಹುದು. ಇದರಲ್ಲಿ ಹಣ್ಣುಗಳ ಚಿಕ್ಕ ತುಂಡುಗಳೇ ಕುರುಕುವಂತೆ ಸಿಗುವ ಕಾರಣ ಎಲ್ಲರಿಗೂ ಇಷ್ಟವಾಗುತ್ತದೆ. ಅಲಂಕರಿಸಲು ಚೆರ್ರಿಯ ಹಣ್ಣೊಂದನ್ನು ಮೇಲಿರಿಸಿ.

English summary

Homemade Fruit Jam Recipe For Kids

Many people like to skin rambutans, chill them prior to consuming them. Chikoo, bananas, mangoes, etc, along with other small fruits can also be enjoyed as a whole. Here's a yummy recipe of a fruit jam that you can prepare and allow your kids to relish it to their heart's content, have a look.
X
Desktop Bottom Promotion