For Quick Alerts
ALLOW NOTIFICATIONS  
For Daily Alerts

ಸರ್ವಜನಪ್ರಿಯ ಬೂಂದಿ ಲಾಡು ರೆಸಿಪಿ

By * ನಿವೇದಿತಾ
|
Boondi laddu recipe (pic : globaladjustments.com)
ಡಿಸೆಂಬರ್ 17ರಂದು ಇರುವ ವೈಕುಂಠ ಏಕಾದಶಿಯಂದು ಭಕ್ತಾದಿಗಳಿಗೆ ಬೂಂದಿ ಲಾಡು ವಿತರಿಸಲು ರಾಜ್ಯ ಚುನಾವಣಾ ಆಯೋಗ ಅನುಮತಿ ನೀಡಿ ಬೂಂದಿ ಹಂಚುವವರಿಗೂ, ಅದನ್ನು ಕಣ್ಣಿಗೊತ್ತಿ ತಿನ್ನುವವರಿಗೂ ಭಾರೀ ಹರ್ಷ ತಂದಿದೆ. ಬೂಂದಿ ಲಾಡು ಎಂದರೆ ಯಾರಿಗೆ ಇಷ್ಟವಾಗಲಿಕ್ಕಿಲ್ಲ? ಅದರಲ್ಲೂ, ಗುಣಮಟ್ಟದಲ್ಲಿ ಮತ್ತು ಗಾತ್ರದಲ್ಲಿ ಕುಗ್ಗಿದ್ದರೂ ತಿರುಪತಿಯ ಬೂಂದಿ ಲಾಡುಗಳು ಸಿಹಿ ಇಷ್ಟಪಡುವ ಭಕ್ತಾದಿಗಳ ಫೆವರಿಟ್ ಸಿಹಿ ತಿನಿಸು.

ಬೂಂದಿ ಪದ ಬಂದದ್ದಾದರೂ ಹೇಗೆ? ಯಾರಿಗಾದರೂ ಗೊತ್ತಿದೆಯಾ? ನನಗೂ ಗೊತ್ತಿಲ್ಲ, ಆದರೆ ಅದು ಹೀಗೆ ಬಂದಿರಬಹುದಾ ಎಂಬ ಊಹೆ ಅಷ್ಟೆ. ಬೂಂದ್ ಅಂದರೆ ಹನಿ (ಅ ಡ್ರಾಪ್ ಆಫ್ ವಾಟರ್). ಬೂಂದಿ ಲಾಡುಗಳು ಕೂಡ ನೀರಹನಿಯ ಗಾತ್ರದಲ್ಲಿ ಇರುವ ಕಾಳುಗಳನ್ನು ಸೇರಿಸಿ ಮಾಡಿರುವುದರಿಂದ ಹಾಗೆ ಬಂದಿರಬಹುದಾ? ತಿಳಿದವರು ತಿಳಿಸಬೇಕು. ಈ ಲಾಜಿಕ್ ಸರಿಯಾಗಿದ್ದರೆ ಹೌದಪ್ಪ ಅನ್ನಬೇಕು.

ಇರಲಿ, ಈಗ ಬೂಂದಿ ಲಾಡು ಮಾಡುವ ವಿಧಾನವನ್ನು ತಿಳಿಯೋಣ. ನಿಷ್ಣಾತ ನಳಪಾಕರಿಗೆ ಇದನ್ನು ಮಾಡುವುದು ಕರತಲಾಮಲಕ. ಬೇಕಾದ ಪದಾರ್ಥಗಳನ್ನು ಸರಿ ಪ್ರಮಾಣದಲ್ಲಿ ಹಾಕಿ ನಮ್ಮ ಕೈಚಳಕವನ್ನು ತೋರಿಸಿದರೆ ಇದನ್ನು ಮಾಡುವುದು ವಿಪರೀತ ಕಷ್ಟವೇನೂ ಅಲ್ಲ. ಹಲ್ಲುಬಂದ ಸಣ್ಣ ಪಾಪುವಿನಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ತಿನ್ನಬಹುದಾದ ವಿಶಿಷ್ಟ ಸ್ವೀಟ್ ರೆಸಿಪಿ.

ಬೂಂದಿ ಲಾಡು ತಿನಿಸಿನ ಬಗ್ಗೆ ಮತ್ತೊಂದು ಸ್ವಾರಸ್ಯಕರ ವಿಷಯ ತಿಳಿಸುತ್ತೇನೆ ಕೇಳಿ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೃಷ್ಣಾ ನದಿತೀರದ ಗ್ರಾಮ ಸತ್ತಿ ಎಂಬ ಊರಿನಲ್ಲಿ ಗೋವಿಂದ ಎಂಬ ನಮ್ಮ ದೂರದ ಸಂಬಂಧಿಯೊಬ್ಬರು ಇದ್ದರು. ಬೂಂದಿ ಲಾಡು ತಿನ್ನುವ ಸ್ಪರ್ಧೆಯಲ್ಲಿ ಅವರನ್ನೂ ಮೀರಿಸುವವರಿಲ್ಲ. ಹೊಟ್ಟೆಭರ್ತಿ ಊಟವಾದ ನಂತರ ಅವರು ಒಂದು ಬಾರಿ, ಕೂಕಾಬುರ್ರಾ ಕ್ರಿಕೆಟ್ ಚೆಂಡಿಗಿಂತ ದೊಡ್ಡದಾದ 32 ಬೂಂದಿ ಲಾಡುಗಳನ್ನು ತುಪ್ಪದಲ್ಲಿ ಅದ್ದಿಕೊಂಡು ಹೊಟ್ಟೆಗಿಳಿಸಿದ್ದರಂತೆ. ಈ ಕಥೆಯನ್ನು ನನಗೆ ಅನೇಕರು ದೃಢಪಡಿಸಿದ್ದಾರೆ.

ಇರಲಿ, ನಾನು ಮಾಡುವ ಮತ್ತು ಹೇಳಿಕೊಡುವ ಬೂಂದಿ ಲಾಡು ಮಾಡುವ ಬಗೆ ತಿರುಪತಿ ಲಾಡುವಷ್ಟು ಮತ್ತು ಆಧುನಿಕ ಭೀಮಸೇನರು ಮಾಡುವಷ್ಟು ಪರ್ಫೆಕ್ಟಾಗಿ ಮತ್ತು ಸ್ವಾದಿಷ್ಟಕರವಾಗಿ ಇರಲಿಕ್ಕಿಲ್ಲ. ಆದರೆ, ಖಂಡಿತ ತಿನ್ನಲು ಅಡ್ಡಿಯಿಲ್ಲ. ನೀವೂ ಮಾಡಿ ನೋಡಿ. ಅದು, ತಿರುಪತಿ ಲಾಡುಗಿಂತ ಶ್ರೇಷ್ಠವಾಗಬಹುದು. ಆಲ್ ದಿ ಬೆಸ್ಟ್.

ಬೇಕಾಗುವ ಪದಾರ್ಥಗಳು

ಕಡಲೆಹಿಟ್ಟು 1 ಕಪ್
ಅಕ್ಕಿ ಹಿಟ್ಟು 1 ಚಮಚ
ಸಕ್ಕರೆ 2 ಕಪ್
ಏಲಕ್ಕಿ 5-6
ಲವಂಗ 5-6
ಹಳದಿ ಬಣ್ಣ ಚಿಟಿಕೆಯಷ್ಟು
ಗೋಡಂಬಿ, ಒಣ ದ್ರಾಕ್ಷಿ ಅರ್ಧ ಹಿಡಿಯಷ್ಟು
ಕೇಸರಿ ಚಿಟಿಕೆಯಷ್ಟು
ಕರಿಯಲು ರಿಫೈನ್ಡ್ ಎಣ್ಣೆ
ದೊಡ್ಡ ತೂತಿರುವ ಜಾಲರಿ

ತಯಾರಿಸುವ ವಿಧಾನ

ಒಂದು ದೊಡ್ಡ ಪಾತ್ರೆಯಲ್ಲಿ ಸಕ್ಕರೆಯ ಮೂರು ಪಟ್ಟು ನೀರು ಹಾಕಿಕೊಂಡು ಅದಕ್ಕೆ ಸಕ್ಕರೆ ಸುರುವಿ ಸಣ್ಣು ಉರಿಯಲ್ಲಿ ಬಿಸಿಯಾಗಲು ಬಿಡಿ. ಸಕ್ಕರೆ ಕರಗಿದ ನಂತರ ಸಣ್ಣಎಳೆಯ ಪಾಕ ತಯಾರಾದ ನಂತರ ಸ್ಟೌನಿಂದ ಕೆಳಗಿಳಿಸಿ ತಣ್ಣಗಾಗಲು ಬಿಡಿ. ಪಾಕ ತೀರ ನೀರು ಮತ್ತು ತೀರ ಗಟ್ಟಿಯಾಗಬಾರದಂತೆ ಎಚ್ಚರವಹಿಸಿ. ಅದಕ್ಕೆ ಚಿಟಿಕೆಯಷ್ಟು ಹಳದಿ ಬಣ್ಣ ಮತ್ತು ಕೇಸರಿಯನ್ನು ಸೇರಿಸಿ ಕೈಯಾಡಿಸಿ.

ಇನ್ನೊಂದೆಡೆ ದೊಡ್ಡ ಪರಾತದಲ್ಲಿ ಕಡಲೆಹಿಟ್ಟಿಗೆ ಅಕ್ಕಿಹಿಟ್ಟು ಸೇರಿಸಿ ಅದಕ್ಕೆ ಸ್ವಲ್ಪಸ್ವಲ್ಪವೇ ನೀರು ಹಾಕುತ್ತ ದೋಸೆ ಹಿಟ್ಟಿನಷ್ಟು ಗಟ್ಟಿಯಾಗಿ ಕಲಿಸಿಕೊಳ್ಳಿ. ಹಿಟ್ಟು ತೀರ ಅಳ್ಳಕಾಗಬಾರದು, ಗಟ್ಟಿಯಾಗಲೂಬಾರದು. ನಂತರ ದೊಡ್ಡ ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಕುದಿಯಲು ಬಿಡಿ. ದೊಡ್ಡ ತೂತಿರುವ ದೊಡ್ಡ ಗಾತ್ರದ ಜಾಲರಿಯನ್ನು ತೆಗೆದುಕೊಂಡು ಅದಕ್ಕೆ ಹಿಟ್ಟನ್ನು ಸುರುವಿ, ತೂತಿನ ಮುಖಾಂತರ ಬೀಳುವ ನೀರಹನಿ ಆಕಾರದ ಹಿಟ್ಟನ್ನು ಕುದಿಯುವ ಎಣ್ಣೆಯಲ್ಲಿ ಕರಿಯಿರಿ. ಗರಿಗರಿಯಾದ ಬೂಂದಿಗಳು ತಯಾರಾಗಿ ಬರುತ್ತವೆ.

ಕಾಳುಗಳನ್ನು ಎಣ್ಣೆ ಹೀರಿಕೊಳ್ಳುವಂತೆ ಪೇಪರಿನ ಮೇಲೆ ಸುರುವಿ ನಂತರ ಪಾಕದಲ್ಲಿ ಹಾಕಿರಿ. ಅರ್ಧ ಅಥವಾ ಮುಕ್ಕಾಲು ಗಂಟೆ ಹಾಗೆಯೇ ಬಿಟ್ಟು ನಂತರ ಅದಕ್ಕೆ ಪುಡಿ ಮಾಡಿಟ್ಟುಕೊಂಡ ಏಲಕ್ಕಿ ಹಾಕಿ ಕೈಯಾಡಿಸಿ. ತುಸು ಆರಿದ ನಂತರ ಉಂಡೆಯಾಗಿ ಕಟ್ಟಿ ಅದಕ್ಕೆ ತುಂಡಾಗಿ ಕತ್ತರಿಸಿದ ಗೋಡಂಬಿ ಮತ್ತು ಒಣದ್ರಾಕ್ಷಿಗಳನ್ನು ಒಂದೆರಡರಂತೆ ಸಿಕ್ಕಿಸಿ. ಗಟ್ಟಿಯಾಗಿ ಕಟ್ಟಿದ ಲಾಡುಗಳನ್ನು ಡಬ್ಬಿಯಲ್ಲಿಟ್ಟು ಬೇಕೆಂದಾಗ ಜಮಾಯಿಸಿ.

English summary

Boondi laddu recipe | Bundi laddu sweet | How to make Boondi laddu | ಬೂಂದಿ ಲಾಡು ರೆಸಿಪಿ | ಬೂಂದಿ ಲಾಡು ಸಿಹಿ ತಿನಿಸು

How to make boondi laddu recipe. Though it is not a easy, but anyone can prepare this sweet bundi laddu recipe. Tutorial by Niveditha.
X
Desktop Bottom Promotion