For Quick Alerts
ALLOW NOTIFICATIONS  
For Daily Alerts

ಹಲಸಿನ ಹಣ್ಣಿನ ಸಿರಾ ಅಥವಾ ಕೇಸರಿ ಭಾತ್

By Prasad
|
Jackfruit sira or kesari bhat
ಬೇಸಿಗೆಯಲ್ಲಿ ಮಾರುಕಟ್ಟೆಯಲ್ಲಿ ಹುಲುಸಾಗಿ ಸಿಗುವ ಹಲಸಿನ ಹಣ್ಣಿನಿಂದ ತಯಾರಿಸಿದ ಹಲಸಿನ ಹಣ್ಣಿನ ಸಿರಾ ಅಥವಾ ಹಲಸಿನ ಹಣ್ಣಿನ ಕೇಸರಿ ಭಾತ್ ಬಲು ಸ್ವಾದಿಷ್ಟಕರವಾಗಿರುತ್ತದೆ.

* ವಾಣಿ, ಬೆಂಗಳೂರು

ಬೇಕಾಗುವ ಪದಾರ್ಥಗಳು :
ರವೆ 1 ಲೋಟ | ತುಪ್ಪ 1 ಲೋಟ | ಸಕ್ಕರೆ ಒಂದೂವರೆ ಲೋಟ | ಹಲಸಿನ ಹಣ್ಣು ಐದಾರು | ಗೋಡಂಬಿ, ಒಣದ್ರಾಕ್ಷಿ, ಏಲಕ್ಕಿ ಪುಡಿ | ಕೇಸರಿ ಬಣ್ಣ (ಬೇಕಿದ್ದರೆ).

ತಯಾರಿಸುವ ವಿಧಾನ :

ಬಾಣಲೆಯಲ್ಲಿ ಎರಡು ಚಮಚ ತುಪ್ಪ ಹಾಕಿ ರವೆ ಘಮ್ಮನೆ ವಾಸನೆ ಮತ್ತು ತುಸು ಕಂದುಬಣ್ಣ ಬರುವವರೆಗೆ ಹುರಿದುಕೊಳ್ಳಬೇಕು. ಇನ್ನೊಂದು ಪುಟ್ಟ ಬಾಣಲೆಯಲ್ಲಿ ಕಾಲು ಚಮಚ ತುಪ್ಪದಲ್ಲಿ ಗೋಡಂಬಿ, ಒಣದ್ರಾಕ್ಷಿ ಹುರಿದಿಟ್ಟುಕೊಳ್ಳಿ.

ಇದಿಷ್ಟಾದ ನಂತರ ಹಲಸಿನ ಹಣ್ಣನ್ನು (ಲೋಳೆಲೋಳೆ ಇರದ ಹಣ್ಣು) ಮಿಕ್ಸಿಯಲ್ಲಿ ಹಾಕಿ ಸ್ವಲ್ಪೇ ಸ್ವಲ್ಪ ರುಬ್ಬಿಕೊಳ್ಳಬಹುದು ಅಥವಾ ಸಣ್ಣಸಣ್ಣ ಹೋಳಾಗಿ ತುಂಡರಿಸಿಟ್ಟುಕೊಳ್ಳಬಹುದು.

ಒಂದು ಪಾತ್ರೆಯಲ್ಲಿ ರವೆಯ ಎರಡರಷ್ಟು ಅಥವಾ ಎರಡೂವರೆಯಷ್ಟು ನೀರು ಮತ್ತು ಹಾಲು ಮಿಶ್ರಣವನ್ನು ಸ್ಟೌ ಮೇಲೆ ಕುದಿಯಲು ಇಟ್ಟು, ಕುದಿ ಬಂದ ನಂತರ ಹುರಿದಿಟ್ಟುಕೊಂಡ ಗೋಡಂಬಿ, ಒಣದ್ರಾಕ್ಷಿ, ರವೆ ಮತ್ತು ರುಬ್ಬಿಕೊಂಡ ಹಲಸಿನ ಹಣ್ಣನ್ನು ಹಾಕಿ ಕೈಯಾಡಿಸುತ್ತಿರಬೇಕು. ರವೆ ಗಂಟಾಗದಂತೆ ಹೆಚ್ಚಿನ ಎಚ್ಚರವಹಿಸಿ.

ಇದು ಅರ್ಧ ಬೆಂದನಂತರ ಸಕ್ಕರೆಯನ್ನು ಹಾಕಿ ಸಣ್ಣ ಉರಿಯಲ್ಲಿ ಮತ್ತೆ ಕುದಿಯಲು ಬಿಡಿ. ಚೆನ್ನಾಗಿ ಬೆಂದುಬಂದ ನಂತರ ತುಪ್ಪ ಮತ್ತು ಏಲಕ್ಕಿ ಪುಡಿಯನ್ನು ಬೆರೆಸಿ ಎಲ್ಲ ಹೊಂದಿಕೊಳ್ಳುವಂತೆ ಕೈಯಾಡಿಸಿ. ಕೇಸರಿ ಬಣ್ಣ ಬೇಕಿದ್ದರೆ ಚಿಟಿಕೆಯಷ್ಟು ಕೇಸರಿ ಬಣ್ಣ ಬೆರೆಸಿ. ಬಿಸಿಬಿಸಿಯಾಗಿರುವಾಗಲೇ ಸರ್ವ್ ಮಾಡಿ. ಜೊತೆಗೆ ನೆಚ್ಚಿನ ಬಟಾಣಿಕಾಳಿನ ಉಪ್ಪಿಟ್ಟು ಅಥವಾ ಬಿಸಿಬಿಸಿ ಕಾಂದಾಬಜಿ ಇದ್ದರೆ ಹಲಸಿನ ಹಣ್ಣಿನ ಸಿರಾದ ರುಚಿ ಇನ್ನಷ್ಟು ಹೆಚ್ಚುತ್ತದೆ.

Story first published: Friday, June 4, 2010, 15:13 [IST]
X
Desktop Bottom Promotion