For Quick Alerts
ALLOW NOTIFICATIONS  
For Daily Alerts

ಹಲಸಿನ ಪಾಯಸದ ರುಚಿ ಮರೆಯುವಂತಿಲ್ಲ

By * ಮನಸ್ವಿನಿ,ನಾರಾವಿ
|
Jack Fruit
ಬೇಸಿಗೆ ಮುಗಿದು, ಮುಂಗಾರು ಆರಂಭಕ್ಕೆ ಮುನ್ನ ಚಂಡಮಾರುತಕ್ಕೆ ಸಿಕ್ಕ ಅಕಾಶ, ಸುರಿಸುತ್ತಿರುವ ಹುಚ್ಚಾಪಟ್ಟೆ ಮಳೆಗೆ ಬಯಲು ಸೀಮೆ ಜನ ಬೆದರಿರುವುದನ್ನು ನೋಡಿದ ಮೇಲೆ. ಬೇಸಿಗೆಯಲ್ಲಿ ಅಕಾಲಿಕ ಮಳೆ ಸಂದರ್ಭದ ನಡುವೆಯೂ ಮಲೆನಾಡಿನಲ್ಲಿ ಹಲಸಿನ ಖಾದ್ಯವಿಲ್ಲದ ಊಟ ಸಾಧ್ಯವೇ ಇಲ್ಲ ಎಂಬುದು ನೆನಪಾಗಿ. ಸಿಹಿ ಖಾದ್ಯವನ್ನು ಊಣಬಡಿಸುತ್ತಿದ್ದೇನೆ.

ಹಲಸಿನಿಂದ ಬಗೆಬಗೆ ತಿನಿಸು ಮಾಡಿದರೂ, ಥಟ್ಟನೆ ನೆನಪಾಗುವುದು ಪಾಯಸ. ಮುಂಚೆಲ್ಲಾ ಮಲೆನಾಡಿನಲ್ಲಿ ಎಲ್ಲಾ ಶುಭ ಸಮಾರಂಭಕ್ಕೂ ಎಲೆ ಮೊದಲಿಗೆ ಖಾಯಂ ಆಗಿರುತ್ತಿದ್ದ ಹಲಸಿನ ಪಾಯಸದ ಸ್ಥಾನವನ್ನು ಕ್ರಮೇಣ ಗೇರುಹಣ್ಣು, ಗೋಡಂಬಿ, ಇತರೆ ಹಣ್ಣುಗಳ ಮಿಶ್ರಣ ಆಕ್ರಮಿಸಿದೆ. ಇರಲಿ, ನಾವು ಹಳೆಯದನ್ನು ಮರೆಯುವಂತಿಲ್ಲ. ಹಲಸಿನ ರುಚಿ ನೋಡದೆ ಬಿಡುವಂತಿಲ್ಲ. ಒಪ್ಪಿಸಿಕೊಳ್ಳಿ

ತಯಾರಿಗೆ ಈ ಪದಾರ್ಥಗಳು ಬೇಕು :

ಹಲಸಿನ ಹಣ್ಣಿನ ತೊಳೆಗಳು-20 ಅಥವಾ ಅಧಿಕ ಮಾಗಿದ ಹಣ್ಣು ಇರಲಿ.
ತುಪ್ಪ-ಒಂದೂವರೆ ಕಪ್
ಬೆಲ್ಲದ ತುರಿ-3/4 ಕಪ್,
ತೆಂಗಿನಕಾಯಿ ತುರಿ-1/2 ಕಪ್,
ಏಲಕ್ಕಿ ಪುಡಿ:1/4 ಟೀ ಚಮಚ
ಗೋಡಂಬಿ ಚೂರುಗಳುಬೇಕಾದಷ್ಟು,

ತಯಾರಿಸುವ ಬಗೆ ಹೀಗೆ:
*ತೆಂಗಿನಕಾಯಿತುರಿಗೆ ಸ್ವಲ್ಪ ನೀರು ಸೇರಿಸಿ ರುಬ್ಬಿಕೊಳ್ಳಿ. ಎರಡಾವರ್ತಿಕಾಯಿ ಹಾಲನ್ನು ತೆಗೆಯಿರಿ.
*ಹಲಸಿನ ತೊಳೆಗಳಲ್ಲಿರುವ ಬೀಜಗಳನ್ನು ತಗೆದು, ತೊಳೆಗಳನ್ನು ಸಣ್ಣ ಚೂರುಗಳನ್ನಾಗಿ ಕತ್ತರಿಸಿ.
* ಒಂದು ಪಾತ್ರೆಯಲ್ಲಿ ಒಂದು ಕಪ್ ನೀರನ್ನು ಬಿಸಿಮಾಡಿ. ನೀರು ಕುದಿಯಲು ಬಿಡಿ. ನೀರು ಕುದಿಯತೊಡಗಿದಾಗ ಅದಕ್ಕೆ ಹಲಸಿನ ತೊಳೆಗಳನ್ನು ಸೇರಿಸಿ, ಅವು ತೀರಾ ಮೆತ್ತಗಾಗುವವರೆಗೂ ಕುದಿಸಿ.
* ಕುದಿಯುತ್ತಿರುವ ನೀರಿಗೆ ಬೆಲ್ಲದ ತುರಿ ಹಾಗೂ ಕಾಯಿ ಹಾಲನ್ನು ಸೇರಿಸಿ.
ಕಾಯಿ ಹಾಲು ಬೆರಸುವಾಗ ಉರಿಯು ಕಡಿಮೆಯಾಗಿರಲಿ ಹಾಗೂ ಬೆಲ್ಲವು ಸಂಪೂರ್ಣವಾಗಿ ಕರಗುವಂತೆ ನೋಡಿಕೊಳ್ಳಿ.
*ಗೋಡಂಬಿಯನ್ನು ತುಪ್ಪದಲ್ಲಿ ಹುರಿದಿಟ್ಟುಕೊಳ್ಳಿ. ತುಪ್ಪವನ್ನು ಸ್ವಲ್ಪ ಬಿಸಿ ಮಾಡಿಕೊಂಡು ಸೇರಿಸಿ ನಂತರ ಪಾಯಸದೊಡನೆ ಬೆರಸಿ. ಕುದಿತದಿಂದ ಒಳ್ಳೆಯ ಸುವಾಸನೆ ಬಂದ ನಂತರ ಒಲೆಯಿಂದ ಇಳಿಸಿ.ಎಲ್ಲರಿಗೂ ಬಡಿಸಿ, ಆನಂದಿಸಿ.

ಪೂರಕ ಮಾಹಿತಿ:
ಬಹುಪಯೋಗಿ ಹಣ್ಣಿನ ಮರ - ಹಲಸು - ಕುರಿತು ರಾಷ್ಟ್ರೀಯ ಕಾರ್ಯಾಗಾರ ಮೇ. 21 ಹಾಗೂ ಮೇ.22 ರಂದು ಬೆಂಗಳೂರಿನ ಜಿಕೆವಿಕೆಯ ಕುವೆಂಪು ಸಭಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಾಗಾರದಲ್ಲಿ ಸುಮಾರು 200 ರೈತರು, 50 ವಿಜ್ಞಾನಿಗಳು ಹಾಗೂ 50 ಉದ್ದಿಮೆದಾರರು ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಭಾಗವಹಿಸಲಿದ್ದಾರೆ ಹಾಗೂ ಕಾರ್ಯಾಗಾರದಲ್ಲಿ 50ಕ್ಕೂ ಹೆಚ್ಚು ವಿಷಯಗಳ ಮಂಡನೆಯಾಗಲಿದೆ.

ಹಲಸಿನ ಹಣ್ಣಿನಲ್ಲಿ ಎ ಮತ್ತು ಸಿ ಜೀವಸತ್ವಗಳು ಹಾಗೂ ಖನಿಜ ಪದಾರ್ಥಗಳಿವೆ. ಇದರಲ್ಲಿ ಪೊಟಾಸಿಯಂ ಅಂಶ ಹೆಚ್ಚಿರುವುದರಿಂದ ರಕ್ತದೊತ್ತಡ ಇರುವವರಿಗೆ ಬಹಳ ಉಪಯುಕ್ತ. ಕೃಷಿ ವಿಶ್ವವಿದ್ಯಾನಿಲಯ ಪ್ರೊ. ರಂಗಣ್ಣ ಅವರ ನೇತೃತ್ವದಲ್ಲಿ ಮೌಲ್ಯವರ್ಧಿತ ಉತ್ಪನ್ನಗಳಾದ ಬಿಸ್ಕತ್, ವಿನೇಗರ್, ಸ್ಕ್ವಾಷ್, ಜ್ಯೂಸ್, ಹಲ್ವ, ವೈನ್, ಸೀಕರಣೆ ತಯಾರಿಸಲಾಗಿದ್ದು ಎರಡು ದಿನ ಪ್ರದರ್ಶನ ಹಾಗೂ ಮಾರಾಟವಿರುತ್ತದೆ.

X
Desktop Bottom Promotion