For Quick Alerts
ALLOW NOTIFICATIONS  
For Daily Alerts

ಶುಭ ಸಮಾರಂಭಗಳ ಶೋಭೆ ದೂಧ್ ಪೇಡೆ

By Prasad
|
Doodh peda or milk peda
ಉತ್ತರ ಕರ್ನಾಟಕದಲ್ಲಿ ಮದುವೆ, ಮುಂಜಿ, ನಿಶ್ಚಿತಾರ್ಥದಂಥ ಯಾವುದೇ ಶುಭ ಸಮಾರಂಭವಿರಲಿ ಡಬ್ಬಿಯಲ್ಲಿ ನೀಟಾಗಿ ಜೋಡಿಸಿಟ್ಟ ಪೇಡೆ ಇಲ್ಲದಿದ್ದರೆ ಸಮಾರಂಭಕ್ಕೆ ಕಳೆಯಿರುವುದಿಲ್ಲ. ಪೇಡೆಯಿಂದ ಸಮಾರಂಭಕ್ಕೆ ಆಗಮಿಸಿದವರ ಬಾಯಿ ಸಿಹಿ ಮಾಡದಿದ್ದರೆ ಸಮಾರಂಭ ಸಾರ್ಥಕತೆ ಪಡೆಯುವುದಿಲ್ಲ. ಅಷ್ಟರ ಮಟ್ಟಿಗೆ ಪೇಡೆ ಅಲ್ಲಿನ ಜನರ ಜೀವನದ ಹಾಸುಹೊಕ್ಕಾಗಿದೆ.

ಪೇಡೆಗಳಲ್ಲಿ ಧಾರವಾಡ ಪೇಡೆ ಎರಡನೇ ಸ್ಥಾನ ಪಡೆದಿರುವ ದೂಧ್ ಪೇಡೆ ಅಥವಾ ಹಾಲಿನ ಪೇಡೆಯನ್ನು ಅಂಗಡಿಯಿಂದ ಕೊಂಡುತರುವ ಬದಲು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಮಾಡುವ ವಿಧಾನ ಇಲ್ಲಿದೆ ನೋಡಿ.

ಬೇಕಾಗುವ ಪದಾರ್ಥಗಳು

ಖೋವಾ ಅರ್ಧ ಕಿ.ಗ್ರಾಂ.
ಸಕ್ಕರೆ ಕಾಲು ಕಿ.ಗ್ರಾಂ.
ಹಾಲು ಒಂದು ಲೋಟದಷ್ಟು
ರೋಸ್ ಎಸೆನ್ಸ್ ಎರಡು ಹನಿ
ಬಾದಾಮಿ, ಪಿಸ್ತಾ, ಇಲಾಚಿ ಪೌಡರ್

ಹಾಲಿನ ಪೇಡೆ ತಯಾರಿಸುವ ವಿಧಾನ

ಮೊದಲಿಗೆ ಖೋವಾವನ್ನು ಒಂದು ನಾನ್ ಸ್ಟಿಕ್ ಪಾತ್ರೆಯಲ್ಲಿ ಹಾಕಿ ಅದಕ್ಕೆ ಸಕ್ಕರೆಯನ್ನು ಸೇರಿಸಿರಿ. ಪಾತ್ರೆಯನ್ನು ಸಣ್ಣಗೆ ಉರಿಯುವ ಸ್ಟೌ ಮೇಲಿಟ್ಟು ಸೌಟಿನಿಂದ ಕೈಯಾಡಿಸಲು ಪ್ರಾರಂಭಿಸಿ. ಅದಕ್ಕೆ ಹಾಲನ್ನು ಸ್ವಲ್ಪಸ್ವಲ್ಪವಾಗಿ ಸುರಿಯುತ್ತ ಸೌಟನ್ನು ತಿರುಗಿಸುತ್ತಲೇ ಇರಿ. ಮಿಶ್ರಣ ಗಂಟಾಗದಂತೆ ಕೈಯಾಡಿಸುತ್ತಿರಿ. ಹಾಲು ಜಾಸ್ತಿ ಆಗದಂತೆ ನಿಗಾ ವಹಿಸಿ. ಸ್ವಲ್ಪ ಉರಿ ಏರಿಸಿ ಖೋವಾ, ಸಕ್ಕರೆ ಮತ್ತು ಹಾಲಿನ ಮಿಶ್ರಣವನ್ನು ಕುದಿ ಬರುವವರೆಗೆ ಒಲೆಯ ಮೇಲಿಡಿ.

ಪಾತ್ರೆಯನ್ನು ಕೆಳಗಿಳಿಸಿದ ನೆತರ ರೋಸ್ ಎಸೆನ್ಸನ್ನು ಸೇರಿಸಿ ಮತ್ತೊಮ್ಮೆ ಚೆನ್ನಾಗಿ ಕೈಯಾಡಿಸಿ. ಮಿಶ್ರಣ ಆರುವ ಮೊದಲೇ ಒಂದು ತಟ್ಟೆಗೆ ಸುರಿದು ಅದರ ಮೇಲೆ ಸಣ್ಣಗೆ ಕತ್ತರಿಸಿಕೊಂಡ ಬಾದಾಮಿ ಮತ್ತು ಪಿಸ್ತಾವನ್ನು ಉದುರಿಸಿ. ಆರಿದ ನಂತರ ನಿಮಗೆ ಬೇಕಾದ ಆಕಾರಕ್ಕೆ ಕತ್ತರಿಸಿ ನೆಂಟರಿಷ್ಟರ ಬಾಯಿ ಸಿಹಿ ಮಾಡಿರಿ.

Story first published: Tuesday, March 30, 2010, 16:30 [IST]
X
Desktop Bottom Promotion