For Quick Alerts
ALLOW NOTIFICATIONS  
For Daily Alerts

ಬೆಳಗಾವಿ ಸೂಪರ್ ಸ್ಪೆಷಲ್ ಮೋತಿಪಾಕ್ ವಡಿ

By * ಪ್ರಸಾದ ನಾಯಿಕ, ಬೆಳಗಾವಿ
|
Motipak Vadi sweet recipe
ಬೆಳಗಾವಿ ಕನ್ನಡ ಸಮ್ಮೇಳನ ಪಕ್ಕದ ಹಳ್ಳಿಗಳಿಂದ, ದೂರದ ಪಟ್ಟಣಗಳಿಂದ, ಬಹುದೂರದ ನಾನಾದೇಶಗಳಿಂದ ಕನ್ನಡದ ಸಂಭ್ರಮ ನೋಡಲು ಬಂದಿರುವ ಅತಿಥಿಗಳ ಸತ್ಕಾರ ಭರ್ಜರಿಯಾಗಿಯೇ ಮಾಡುತ್ತಿದೆ. ಊಟದ ವ್ಯವಸ್ಥೆಯ ಅಚ್ಚುಕಟ್ಟುತನದಿಂದಾಗಿ ಯಾವುದೇ ಗೊಂದಲಗಳಿಲ್ಲದೆ ಬೆಳಗಾವಿಯ ವಿಶೇಷ ತಿಂಡಿತಿನಿಸುಗಳನ್ನು ಜನ ಸವಿಯುತ್ತಿದ್ದಾರೆ.

ಜೋಳದ ರೊಟ್ಟಿ, ಶೇಂಗಾ ಚಟ್ನಿ, ರಾಗಿ ಅಂಬಲಿ, ಗೋಧಿ ಹುಗ್ಗಿ, ಪುಂಡಿ ಪಲ್ಲೆ, ಪಾತಾಳ ಭಾಜಿ... ಬೆಳಗಾವಿಯ ಸ್ಪೆಷಲ್ ತಿಂಡಿಗಳು ಹಸಿದವರ ಹೊಟ್ಟೆ ಸೇರುತ್ತಿವೆ. ಔತಣಕೂಟಗಳಲ್ಲಿ ಜನರಿಗೆ ಸಿಹಿಯ ಹುಚ್ಚುಹಿಡಿಸಿದ್ದೆಂದರೆ ಬೆಳಗಾವಿಯ ಸೂಪರ್ ಸ್ಪೆಷಲ್ ಸ್ವೀಟ್ ಮೋತಿಪಾಕ್ ವಡಿ. ಇದನ್ನು ಹೇಗೆ ಮಾಡುತ್ತಾರೆಂದು ತಿಳಿಯೋಣ.

ಬೇಕಾಗುವ ಪದಾರ್ಥಗಳು

ಕಡಲೆಹಿಟ್ಟು 4 ಬಟ್ಟಲು
ಸಕ್ಕರೆ 2 ಬಟ್ಟಲು
ಖೋವಾ ಅಥವಾ ಕುಂದಾ 200 ಗ್ರಾಂ
ಗೋಡಂಬಿ ನಾಲ್ಕು
ಶೇಂಗಾ ಅರ್ಧ ಹಿಡಿಯಷ್ಟು
ವೆನಿಲ್ಲಾ ಪೌಡರ್ ಸ್ವಲ್ಪ
ಎಣ್ಣೆ

ತಯಾರಿಸುವ ವಿಧಾನ : ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಕುದಿಯಲು ಬಿಡಬೇಕು. ಬೂಂದಿಕಾಳುಗಳನ್ನು ತಯಾರಿಸುವ ರೀತಿಯಲ್ಲಿ ಕಡಲೆಹಿಟ್ಟನ್ನು ಅಳ್ಳಕಾಗುವಂತೆ ನೀರಿನಲ್ಲಿ ಕಲಿಸಿಕೊಂಡು ಸಣ್ಣತೂತಿನ ಜಾಲರಿಯ ಮುಖಾಂತರ ಹಿಟ್ಟನ್ನು ಕಾದ ಎಣ್ಣೆಯಲ್ಲಿ ಸುರಿದು ಕಾಳುಗಳನ್ನು ಕರೆದು ತೆಗೆದುಕೊಳ್ಳಿರಿ.

ಇನ್ನೊಂದು ಬೋಗುಣಿಯಲ್ಲಿ ಸಕ್ಕರೆ ಮುಳುಗುವಷ್ಟು ನೀರು ಹಾಕಿ ಸಣ್ಣ ಉರಿಯಲ್ಲಿ ಪಾಕ್ ತಯಾರಿಸಿಕೊಳ್ಳಿ. ಸಕ್ಕರೆ ಪಾಕ್ ಗಟ್ಟಿಯಾಗದಂತೆ ನಿಗಾವಹಿಸಿ. ಬೆರಳ ತುದಿಯಲ್ಲಿ ಸಣ್ಣಗೆ ಅಂಟು ಬಂದಾಗ ಸ್ಟೌ ಆರಿಸಿ ಪಾಕನ್ನು ಕೆಳಗಿಳಿಸಿಕೊಳ್ಳಿ.

ನಂತರ ಕರಿದಿಟ್ಟ ಕಾಳುಗಳನ್ನು ಸಕ್ಕರೆ ಪಾಕದಲ್ಲಿ ಸುರಿದು ಸರಿಯಾಗಿ ಮಿಕ್ಸ್ ಆಗುವಂತೆ ಚೆನ್ನಾಗಿ ಕೈಯಾಡಿಸಿ. ಅದಕ್ಕೆ ಖೋವಾ ಅಥವಾ ಕುಂದಾ ಹಾಕಿ ಮತ್ತೆ ಕೈಯಾಡಿಸಿ ಸಣ್ಣ ಉರಿಯಲ್ಲಿ ಮತ್ತೆ ಒಲೆಯ ಮೇಲಿಡಿ. ಅದಕ್ಕೆ ಸ್ವಲ್ಪೇ ಸ್ವಲ್ಪ ವೆನಿಲ್ಲಾ ಪೌಡರ್, ತುಂಡು ಮಾಡಿಟ್ಟುಕೊಂಡ ಗೋಡಂಬಿ ಮತ್ತು ಶೇಂಗಾ ಸೇರಿಸಿ ಚೆನ್ನಾಗಿ ಕೈಯಾಡಿಸಿ ಮತ್ತೆ ಹತ್ತು ನಿಮಿಷ ಕುದಿಯಲು ಬಿಡಿ.

ಈ ಮಿಶ್ರಣವನ್ನು ದೊಡ್ಡ ತಟ್ಟೆಯಲ್ಲಿ ಸುರುವಿ ತುಸು ಆರಿದ ನಂತರ ಕೊಬ್ಬರಿ ವಡೆ ಆಕಾರಕ್ಕೆ ಅಥವಾ ನಿಮಗಾವುದೇ ಆಕಾರದಲ್ಲಿ ಕತ್ತಿರಿಸಿಕೊಳ್ಳಿ.

English summary

Motipak Vadi recipe | Motipak sweet dish | Vishwa Kannada Sammelana | ಮೋತಿಪಾಕ್ ವಡಿ ಸಿಹಿತಿನಿಸು | ಬೆಳಗಾವಿ ಕನ್ನಡ ಸಮ್ಮೇಳನ

Motipak Vadi sweet recipe at Vishwa Kannada Sammelana 2011. You will not forget this Belgaum special sweet dish for a long time.
Story first published: Sunday, March 13, 2011, 0:50 [IST]
X
Desktop Bottom Promotion