For Quick Alerts
ALLOW NOTIFICATIONS  
For Daily Alerts

ಸಿಹಿ ಅನ್ನ ಅಥವಾ ಸಾಕರ್ ಭಾತ್

By Prasad
|
Sweet rice
ಕಾಶ್ಮೀರಿ ಪುಲಾವ್ ತರಹಾನೇ ಕಾಣುವ ಸಾಕರ್ ಭಾತ್ ಅಥವಾ ಸಿಹಿ ಅನ್ನ ಉತ್ತರ ಕರ್ನಾಟಕದಲ್ಲಿ ಹಬ್ಬಗಳಲ್ಲಿ ಮತ್ತು ಶುಭ ಸಮಾರಂಭಗಳಲ್ಲಿ ಮಾಡುವ ಅತ್ಯಂತ ಜನಪ್ರಿಯ ಖಾದ್ಯ. ಅದಕ್ಕೆ ಕೇಸರಿ ಸಿಹಿ ಅನ್ನ ಅಂತನೂ ಕರೆಯುತ್ತಾರೆ. ಸಾಕರ್ ಅಂದರೆ ಸಕ್ಕರೆ. ಸಕ್ಕರೆ ಹಾಕಿ ಮಾಡುವುದರಿಂದ ಇದಕ್ಕೆ ಸಾಕರ್ ಭಾತ್ ಅಂತ ಹೆಸರು. ಕೇಸರಿ ಬಣ್ಣ ಹಾಕುವುದರಿಂದ ಕೇಸರಿ ಅನ್ನ ಅನ್ನುವವರೂ ಇದ್ದಾರೆ.

ಇದನ್ನು ಮಾಮೂಲಿ ಸೋನಾ ಮಸೂರಿ ಅಕ್ಕಿಯಿಂದಲೇ ಮಾಡುತ್ತಾರೆ, ಜೊತೆಗೊಂದಿಷ್ಟು ಬಾಸುಮತಿ ಅಕ್ಕಿ ಹಾಕಿದರೆ ಘಮ್ಮನೆ ವಾಸನೆ ಬರುತ್ತದೆ. ಇದನ್ನು ಮಾಡುವ ವಿಧಾನ ನೋಡೋಣ.

* ನಿವೇದಿತಾ ಪ್ರಭಾಕರ್, ಬೆಂಗಳೂರು

ಬೇಕಾಗುವ ಪದಾರ್ಥಗಳು

1 ಪಾವು ಅಕ್ಕಿ
1 ಮುಟ್ಟಿಗೆಯಷ್ಟು ಬಾಸುಮತಿ ಅಕ್ಕಿ
1 ಪಾವು ಸಕ್ಕರೆ
ನಾಲ್ಕು ಚಮಚ ತುಪ್ಪ
ಲವಂಗ ನಾಲ್ಕಾರು
ಏಲಕ್ಕಿ ಪುಡಿ ಚಿಟಿಕೆಯಷ್ಟು
ಗೋಡಂಬಿ, ಬೇದಾಣಿ (ಒಣದ್ರಾಕ್ಷಿ)
ಕೇಸರಿ ಬಣ್ಣ ಅರ್ಧ ಚಮಚ

ಮಾಡುವ ವಿಧಾನ

* ಸೋನಾ ಮಸೂರಿ ಅಕ್ಕಿಗೆ ಬಾಸುಮತಿ ಅಕ್ಕಿಯನ್ನು ಸೇರಿಸಿ ಉದುರುದುರಾಗುವಂತೆ ಬೇಯಿಸಿಟ್ಟುಕೊಳ್ಳಬೇಕು. ಯಾವುದೇ ಕಾರಣಕ್ಕೂ ಮುದ್ದೆಯಾಗಲು ಬಿಡಬೇಡಿ.

* ಅಕ್ಕಿಯಷ್ಟೇ ಸಕ್ಕರೆಯನ್ನು ತುಪ್ಪ ಮತ್ತು ಲವಂಗ ಹಾಕಿದ ಬೋಗುಣಿಯಲ್ಲಿ ಹಾಕಿರಿ. ಸಕ್ಕರೆ ಮುಳುಗುವಷ್ಟು ನೀರು ಹಾಕಿ ಎಳೆಪಾಕ ಬರುವವರೆಗೆ ಕುದಿಸಿರಿ. ಜಾಸ್ತಿ ಗಟ್ಟಿಯಾಗುವುದು ಬೇಡ.

* ಗೋಡಂಬಿ ಮತ್ತು ಬೇದಾಣಿಯನ್ನು ಕಾಲು ಚಮಚ ತುಪ್ಪ ಹಾಕಿ ಹುರಿದಿಟ್ಟುಕೊಂಡು ಸಕ್ಕರೆ ಪಾಕಕ್ಕೆ ಏಲಕ್ಕಿ ಪುಡಿ ಮತ್ತು ಕೇಸರಿ ಬಣ್ಣದೊಡನೆ ಹಾಕಿ ಕೈಯಾಡಿಸಿ.

* ಇಳಿಸಿಟ್ಟುಕೊಂಡ ಅನ್ನವನ್ನು ಸಕ್ಕರೆ ಪಾಕಕ್ಕೆ ಹಾಕಿ ಚೆನ್ನಾಗಿ ಕೈಯಾಡಿಸಿ. ಕೇಸರಿ ಕೇಸರಿ ಬಣ್ಣದ ಸಿಹಿ ಸಿಹಿ ಸಾಕರ್ ಭಾತ್ ಯಾವುದೇ ಶುಭ ಸಮಾರಂಭದ ಸಂಭ್ರಮವನ್ನು ಹೆಚ್ಚಿಸುತ್ತದೆ.

Story first published: Wednesday, March 3, 2010, 14:51 [IST]
X
Desktop Bottom Promotion