For Quick Alerts
ALLOW NOTIFICATIONS  
For Daily Alerts

ಗರಿಗರಿ ಖಾರಾ ಕೋಡುಬಳೆ ರೆಸಿಪಿ

By * ರಾಧಮ್ಮ, ತಾಳ್ಯ
|
Kodubale, deep fried snack recipe
ಖಾರವಾದ ಕೋಡುಬಳೆಗಳು ಮತ್ತು ಅದರ ಜತೆಗೆ ಲೋಟದ ತುಂಬಾ ಬಿಸಿಬಿಸಿ ಕಾಫಿ! ಎಲ್ಲರೂ ಇಷ್ಟ ಪಡುವ ಕುರುಕಲು ತಿಂಡಿ. ಸಾಮಾನ್ಯವಾಗಿ ಮಧ್ಯ ಕರ್ನಾಟಕದ ಜಿಲ್ಲೆಗಳಲ್ಲಿ ತಯಾರಿಸುವ ಮನೆ ತಿಂಡಿ ಇದಾಗಿದೆ. ಒಮ್ಮೆ ಮನೆಯಲ್ಲೇ ಮಾಡಿ ಸವಿದರೆ ಆವಾಗ ನಿಮಗೆ ಮನೆ ಕೋಡುಬಳೆಯ ರುಚಿ ಮತ್ತು ಅಂಗಡಿ ಕೋಡುಬಳೆಯ ರುಚಿ ನಡುವೆ ಇರುವ ವ್ಯತ್ಯಾಸ ಅರಿವಾಗುತ್ತದೆ.

ಬೇಕಾಗುವ ಪದಾರ್ಥಗಳು :

ಒಂದು ಪಾವು ಅಕ್ಕಿ ಹಿಟ್ಟು | 100 ಗ್ರಾಂ ಬ್ಯಾಡಗಿ ಮೆಣಸಿನಕಾಯಿ | ಒಂದು ಕಪ್ ಹಸಿ ತೆಂಗಿನತುರಿ | ಒಂದು ಕಪ್ ಒಣಕೊಬ್ಬರಿ ತುರಿ | ಆರು ಚಮಚ ಚಿರೋಟಿ ರವೆ | ಹಿಟ್ಟು ಕಲಸುವುದಕ್ಕೆ ನಾಲಕ್ಕು ಚಮಚ ಅಡುಗೆ ಎಣ್ಣೆ | ಕರಿಯುವಾಗ ಕೋಡುಬಳೆಗಳು ಬಾಣಲೆಯಲ್ಲಿ ಮುಳುಗುವಷ್ಟು ಎಣ್ಣೆ | ಇಂಗು ಮತ್ತು ಉಪ್ಪು.

ಕೋಡುಬಳೆ ಮಾಡುವ ವಿಧಾನ :

ಮೊದಲಿಗೆ ಒಣ ಮೆಣಸಿನಕಾಯಿಯನ್ನು ಹದವಾಗಿ, ಚೆನ್ನಾಗಿ ಹುರಿದುಕೊಳ್ಳಬೇಕು. ಹುರಿದ ಕಾಯಿಗಳ ಜತೆಗೆ ಹಸಿ ಕೊಬ್ಬರಿ, ಒಣ ಕೊಬ್ಬರಿ ಮತ್ತು ಚಿಟಿಕೆ ಇಂಗು ಬೆರೆಸಿ ನೀರು ಹಾಕದೆ ರುಬ್ಬಬೇಕು. ರುಬ್ಬಿಕೊಂಡ ಪದಾರ್ಥವನ್ನು ಅಕ್ಕಿ ಹಿಟ್ಟಿಗೆ ಬೆರೆಸಿ ಕಲಸಬೇಕು. ಮತ್ತು ಉಪ್ಪಿಟ್ಟಿಗೆ ಹುರಿದುಕೊಳ್ಳುವಂತೆ ಚಿರೋಟಿ ರವೆಯನ್ನು ಹುರಿದುಕೊಂಡು ಅದನ್ನು ಅಕ್ಕಿಹಿಟ್ಟಿಗೆ ಬೆರೆಸಿಕೊಳ್ಳಬೇಕು. ಉಪ್ಪು ಹಾಕಿ ಹಿಟ್ಟು ಕಲಸುವಾಗ ಚೆನ್ನಾಗಿ ಕಾಯಿಸಿರುವ ನಾಲಕ್ಕು ಅಥವಾ ಐದು ಚಮಚ ಎಣ್ಣೆಯನ್ನು ಹಾಕಿಕೊಂಡು ಕಲಸಿರಿ. ಹಸಿ ಎಣ್ಣೆ ಹಾಕಬಾರದು. (ರವೆ ಹಾಕುವ ಉದ್ದೇಶ ಕೋಡುಬಳೆಗಳು ಗರಿಗರಿಯಾಗುವುದು).

ಹಿಟ್ಟನ್ನು ಗಟ್ಟಿಯಾಗಿ ಇರುವಂತೆ ಕಲಸಿರಿ. ನೀರು ಹಾಕಬೇಡಿ. ಆನಂತರ ಸ್ವಲ್ಪ ಸ್ವಲ್ಪವೇ ಕಲಸಿದ ಹಿಟ್ಟನ್ನು ತೆಗೆದುಕೊಂಡು ಮಣೆಯಮೇಲೆ ಅಥವಾ ಗ್ರಾನೈಟ್ ಅಡುಗೆ ಕಟ್ಟೆಯ ಮೇಲೆ ನಾದಿಕೊಳ್ಳಬೇಕು. ಐದು ಅಂಗಲದಷ್ಟು ಉದ್ದದ ಹಿಟ್ಟಿನ ಕೋಲುಗಳನ್ನು ಮಾಡಿ ಅದನ್ನು ಸುರುಳಿ ಸುರುಳಿಯಾಗಿ ಕೋಡುಬಳೆ ಆಕಾರಕ್ಕೆ ಸುತ್ತಿರಿ.

ಕರಿಯುವುದಕ್ಕೆ ಬಾಣಲೆಯಲ್ಲಿ ಎಣ್ಣೆ ಸುರಿದು ಚೆನ್ನಾಗಿ ಕಾಯಿಸಿಕೊಳ್ಳಿರಿ. ಒಮ್ಮೆ ಗರಿಷ್ಠ ಮಟ್ಟಕ್ಕೆ ಕಾದನಂತರ ಉರಿಯನ್ನು ಸಣ್ಣಗೆ ಮಾಡಿಬಿಡಿ. ಎಣ್ಣೆ ಕಾಯುತ್ತಲೇ ಇದ್ದರೆ ಸುಟ್ಟು ಹೊಗೆಯಾಗುತ್ತದೆ. ಅಲ್ಲದೆ ಕೋಡುಬಳೆ ಕಪ್ಪಾಗುತ್ತದೆ. ಮೇಲೆ ಮೇಲೆ ಬೇಯುವುದು ಒಳಗಡೆ ಹಸಿಹಿಟ್ಟು ಉಳಿದುಕೊಳ್ಳುವುದನ್ನು ತಪ್ಪಿಸಲು ಈ ಕ್ರಮ ಅನುಸರಿಸಲೇ ಬೇಕು.

ಕೋಡುಬಳೆ ತುಂಬಾ ರುಚಿಯಾದ ತಿಂಡಿ. ತಕ್ಷಣಕ್ಕೆ ಬೇಕಾದಾಗ ಗಡಿಬಿಡಿಯಲ್ಲಿ ಮಾಡುವ ತಿಂಡಿಯಲ್ಲ. ಸಾಕಷ್ಟು ಸಮಯ ಇದ್ದಾಗ, ಮಧ್ಯಾನ್ಹ ಊಟ ಮಾಡಿ ಒಂದು ಸಣ್ಣ ನಿದ್ದೆ ಮಾಡಿ ಎದ್ದು ಕೋಡುಬಳೆ ಮಾಡುವುದಕ್ಕೆ ಆರಂಭಿಸಿ. ಕೋಡುಬಳೆ ಕರಿಯುವಾಗ ಮಾತ್ರ ಸಾವಧಾನವಾಗಿ, ಅರ್ಜೆಂಟ್ ಮಾಡಿಕೊಳ್ಳದೆ ಕೆಲಸ ಮಾಡಿ. ಪ್ರತಿಯೊಂದು ಕೋಡುಬಳೆಯನ್ನೂ ಜಾಲರಿಯಲ್ಲಿ ಆಡಿಸಿ ಚೆನ್ನಾಗಿ ಬೆಂದಿದೆಯೇ ಎಂದು ಗಮನಿಸಿಕೊಂಡು ಪಾತ್ರೆಗೆ ಹಾಕಬೇಕು.

ಮಕ್ಕಳು ಮರಿಗೆ ಈಗ ಬೇಸಿಗೆ ರಜೆ. ಇನ್ನೆರಡು ದಿನಕ್ಕೆ ಎಸ್ಎಸ್ಎಲ್ಸಿ ಪರೀಕ್ಷೆಗಳೂ ಮುಗಿಯುತ್ತವೆ. ತಾಯಂದಿರಿಗೆ ಮನೆಯಲ್ಲಿ ಹೆಚ್ಚು ಸಮಯ ಸಿಗುತ್ತದೆ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಸದಾ ಗಮನವಿಟ್ಟೂ ಇಟ್ಟೂ ಎಷ್ಟೋ ತಾಯಿಯರಿಗೆ ಸುಸ್ತಾಗಿರುತ್ತದೆ. ಒಂದು ಶನಿವಾರ ಅಥವಾ ಭಾನುವಾರ ಕೋಡುಬಳೆ ಮಾಡುವುದಕ್ಕೆ ಸಮಯ ಮೀಸಲಿಡಿ. ಮಕ್ಕಳಿಗೆ ಮನೆ ತಿಂಡಿ ರುಚಿ ತಪ್ಪಿಹೋಗದಂತೆ ಕಾಪಾಡುವ ಜವಾಬ್ದಾರಿ ನಿಮ್ಮದು.

Story first published: Wednesday, April 7, 2010, 13:01 [IST]
X
Desktop Bottom Promotion