For Quick Alerts
ALLOW NOTIFICATIONS  
For Daily Alerts

ಜೀರಿಗೆ ಸಾರು ಮಾಡಿದ ವಿಧಾನ

By * ಶಾಮಿ
|
Cumin seeds for Jeera Rasam (Pic : Wikipedia)
ನಿನ್ನೆ ಭಾನುವಾರ. ಬೇಳೆಗಳ ಸಹಾಯವಿಲ್ಲದೆ ಹೊಸ ರುಚಿಯ ಅಡುಗೆ ಮಾಡುವ ಮನಸ್ಸಾಯಿತು. ಅನ್ನಕ್ಕೆ ಏನಾದರೂ ಹೊಸ ಬಗೆಯ ಸಾರು ಮಾಡುವ ಮೂಡ್ ಬಂದಾಗ ಅಡುಗೆಮನೆ ಕಟ್ಟೆಯ ಮೇಲಿನ ಡಬ್ಬಗಳ ಸಾಲಿನಲ್ಲಿ ಕುಳಿತಿದ್ದ ಜೀರಿಗೆ ಡಬ್ಬಿ ಕಣ್ಣು ಸೆಳೆಯಿತು. ಸರಿ. ಆ ಕ್ಷಣದಲ್ಲೇ ನನ್ನ ಜೀರಿಗೆ ಸಾರು ಪ್ರಯೋಗ ಶುರುವಾಯಿತು. ಅಂತಿಮವಾಗಿ ತುಂಬಾ ರುಚಿಯಾಗಿ ಮೂಡಿಬಂತು. ನೀವೂ ಪ್ರಯತ್ನಿಸಿ.

ಬೇಕಾಗುವ ಪದಾರ್ಥಗಳು : ಅರ್ಧ ಚಮಚ ಉದ್ದಿನಬೇಳೆ | ಅರ್ಧ ಚಮಚ ಕೊತ್ತಂಬರಿ ಬೀಜ | ಎರಡು ಚಮಚ ಜೀರಿಗೆ | ಐದು ಒಣಮೆಣಸಿನಕಾಯಿ | ಒಂದು ಚಮಚ ಸನ್ ಗೋಲ್ಡ್ ಅಡುಗೆ ಎಣ್ಣೆ.

ಇವಿಷ್ಟನ್ನೂ ತವದಲ್ಲಿ ಘಂ ಎಂದು ಪರಿಮಳ ಬರುವವರೆಗೆ ಹುರಿದುಕೊಂಡೆ. ಇದಕ್ಕೆ ಮೂರು ಚಮಚ ಹಸಿ ತೆಂಗಿನತುರಿ, ಮೂರು ಚಮಚ ಒಣ ಕೊಬ್ಬರಿ ತುರಿ ಬೆರೆಸಿ ಮಿಕ್ಸಿಗೆ ಹಾಕಿ, ಚೂರು ನೀರು ಬೆರೆಸಿ ನುಣ್ಣಗೆ ರುಬ್ಬಿಟ್ಟುಕೊಂಡೆ.

ಆನಂತರದಲ್ಲಿ, ಅರ್ಧ ಗೋಳಾಕಾರದ ಒಂದು ಬಾಣಲೆಯನ್ನು ಸ್ಟೌವ್ ಮೇಲಿಟ್ಟು ನಾಲಕ್ಕು ಲೋಟ ನೀರು ಕುದಿಯಲು ಇಟ್ಟೆ. ನೀರು ಕುದ್ದನಂತರ ಅದಕ್ಕೆ ರುಬ್ಬಿಕೊಂಡ ಪದಾರ್ಥವನ್ನು ಹಾಕಿ ಮತ್ತೆ ಕುದಿಸಿದೆ. ಇದೇ ಸಮಯಕ್ಕೆ ಅರ್ಧ ಚಮಚದಷ್ಟು ಹುಣಿಸೆಹಣ್ಣಿನ ಪೇಸ್ಟ್, ಅರ್ಧ ಉಂಡೆ ಬೆಲ್ಲ, ಉಪ್ಪು ಹಾಕಿ ಚೆನ್ನಾಗಿ ಕುದಿಯುವತನಕ ಕಾದೆ.

ಬಾಣಲೆ ಕೆಳಗಿಳಿಸಿದ ನಂತರ ಒಗ್ಗರಣೆ ಕೈಸೌಟಿನಲ್ಲಿ ಅರ್ಧ ಚಮಚ ಎಣ್ಣೆ, ಸಾಸಿವೆ, ಸಣ್ಣಗೆ ಹೆಚ್ಚಿಕೊಂಡ ತಾಜಾ ಕರಿಬೇವಿನ ಎಲೆಗಳು ಹಾಗೂ ಎರಡು ಚೂರು ಇಂಗು ಹಾಕಿ ಒಗ್ಗರಣೆ ಮಾಡಿ ಸಾರಿನ ಬಾಣಲೆಯಲ್ಲಿ ಮುಳುಗಿಸಿದೆ. ಜೀರಿಗೆ ಪರಿಮಳವೇ ಪ್ರಧಾನವಾದ ಈ ಸಾರಿನ ರುಚಿ ತುಂಬಾ ಚೆನ್ನಾಗಿತ್ತು. ಇದು ಗರ್ವದ ಮಾತಲ್ಲ. ನನ್ನ ಅಂದಾಜಿನ ಪ್ರಕಾರ ನಾನು ಬರೆದ ಅಳತೆಯಲ್ಲಿ ನೀವು ಸಾರು ಮಾಡಿದರೆ ಇಬ್ಬರ ಊಟಕ್ಕೆ ಸಾಕಾಗುತ್ತದೆ. ನಾನು ಒಬ್ಬನೇ ಇದ್ದುದರಿಂದ ಇಷ್ಟು ಪ್ರಮಾಣದ ಸಾರು ಮಧ್ಯಾನ್ಹ ಮತ್ತು ರಾತ್ರಿ ಊಟಕ್ಕೆ ಸಾಕಷ್ಟಾಯಿತು.

Story first published: Monday, May 10, 2010, 11:59 [IST]
X
Desktop Bottom Promotion