For Quick Alerts
ALLOW NOTIFICATIONS  
For Daily Alerts

ಬಾಳೆದಿಂಡಿನ ವಿಶೇಷ ಖಾದ್ಯ ನಿಮಗಾಗಿ ಆಸ್ವಾದಿಸಿ

By Super
|

ಬಾಳೆದಿಂಡನ್ನು ಸಾಮಾನ್ಯವಾಗಿ ಕೆಲ ಸಂದರ್ಭಗಳಲ್ಲಿ ಮಾತ್ರ ಬಳಸುವವರಿದ್ದಾರೆ. ಸ್ವಲ್ಪ ಮಟ್ಟಿನ ಪೂರ್ವ ತಯಾರಿ ಮಾಡಿಕೊಂಡರೆ ದಿಂಡಿನಿಂದ ಬಗೆಬಗೆಯ ತಿಂಡಿಗಳನ್ನು ಕ್ಷಣಾರ್ಧದಲ್ಲಿ ಮಾಡಬಹುದು. ಬಾಳೆದಿಂಡು ನಾರಿನ ಅಂಶದಿಂದ ಕೂಡಿರುವುದರಿಂದ ಪಚನಕ್ರಿಯೆಗೆ ಸಹಾಯಕಾರಿ.

ಬಾಳೆದಿಂಡನ್ನು ಸಾಂಬಾರು, ತೊವ್ವೆ, ಕೋಸಂಬರಿ, ಪಲ್ಯ, ಪಚಡಿ.. ಹೀಗೆ ಬಗೆಬಗೆಯಾಗಿ ಉಪಯೋಗಿಸುವುದುಂಟು.ಸದ್ಯಕ್ಕೆ ಕೋಸಂಬರಿ ಹಾಗೂ ಪಚಡಿ ಮಾಡುವ ಕ್ರಮವನ್ನು ತಿಳಿಯೋಣ.

ಮನಸ್ವಿನಿ, ನಾರಾವಿ.

ಕೋಸಂಬರಿ:
ಬೇಕಾಗುವ ಸಾಮಾಗ್ರಿಗಳು:
ದಿಂಡಿನ ತುರಿ: 1 ಬಟ್ಟಲು
ಮೊಳಕೆ ಕಟ್ಟಿದ ಹೆಸರುಕಾಳು: 1 ಬಟ್ಟಲು
ತೆಂಗಿನ ತುರಿ: 2 ಚಮಚ
ಕೊತ್ತಂಬರಿ ಸೊಪ್ಪು ಸ್ವಲ್ಪ
ಒಗ್ಗರಣೆಗೆ ಎಣ್ಣೆ: 1ಚಮಚ
ಸಾಸಿವೆ: 1 ಚಮಚ
ಕರಿಬೇವು : 1ಕಡ್ಡಿ
ರುಚಿಗೆ ತಕ್ಕಷ್ಟು ಉಪ್ಪು, ಇಂಗು

ಮಾಡುವ ವಿಧಾನ:
ಸಣ್ಣದಾಗಿ ಹೆಚ್ಚಿದ ಬಾಳೆದಿಂಡನ್ನು ಹಿಂದಿನದಿನವೇ ಮೊಸರಿನಲ್ಲಿ ಹಾಕಿಟ್ಟು, ಮಾರನೇ ದಿನ ಉಪಯೋಗಿಸುವ ಗುಟ್ಟು ನಮ್ಮ ಮಹಿಳೆಯರಿಗೆ ತಿಳಯದ್ದೇನಲ್ಲ. ಮೊಸರು ಹುಳಿಯಾಗಿದ್ದರೆ ಕೊಂಚ ಹಾಲು ಸೇರಿಸಿ. ಬಾಳೆದಿಂಡಿನ ಬಣ್ಣ ಹಾಗೆ ಉಳಿಯುತ್ತದೆ.

ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಸಣ್ಣ ಉರಿಯಲ್ಲಿ ಕಾಯಿಸಿ, ಎಣ್ಣೆ ಕಾದನಂತರ ಸಾಸಿವೆ ಹಾಕಿ. ಸಾಸಿವೆ ಚಿಟಗುಟ್ಟಿ ನಿಂತ ಮೇಲೆ, ಕೊತ್ತಂಬರಿ ಕರಿಬೇವು ಹಾಕಿರಿ. ಜತೆಗೆ ರುಚಿಗೆ ತಕ್ಕಷ್ಟು ಉಪ್ಪು, ಇಂಗು ಸೇರಿಸಿ. ನಂತರ ದಿಂಡಿನ ತುರಿ, ಮೊಳಕೆ ಕಟ್ಟಿದ ಹೆಸರುಕಾಳು, ತೆಂಗಿನ ತುರಿ ಹಾಕಿ ಕದಡುತ್ತಿರಿ. ಅರ್ಧ ನಿಮಿಷ ಬಾಣಲೆ ಮುಚ್ಚಿಡಿ. ನಂತರ ಉಲೆ ಮೇಲಿಂದ ತೆಗೆದು ಬಡಿಸಿ.

ಸ್ವಲ್ಪ ಖಾರ ಬೇಕಾದವರು ಹಸಿಮೆಣಸಿನಕಾಯಿಯನ್ನು ಒಗ್ಗರಣೆ ಸಮಯದಲ್ಲಿ ಬಳಸಬಹುದು.ಇಂಗು ಬಳಕೆ ಅವರವರ ರುಚಿಯ ಮೇಲೆ ಅವಲಂಬಿತ.
****
ಪಚಡಿ:

ಬೇಕಾಗುವ ಸಾಮಾಗ್ರಿಗಳು:
ಸಣ್ಣಗೆ ಹೆಚ್ಚಿದ ದಿಂಡು: 1 ಬಟ್ಟಲು
ಮೊಸರು: ಒಂದೂವರೆ ಬಟ್ಟಲು
ಒಣಮೆಣಸು: 2
ಕೊತ್ತಂಬರಿ ಸೊಪ್ಪು , ಕರಿಬೇವು : 1ಕಡ್ಡಿ
ಒಗ್ಗರಣೆಗೆ ಎಣ್ಣೆ: 1ಚಮಚ
ಸಾಸಿವೆ: 1 ಚಮಚ
ರುಚಿಗೆ ತಕ್ಕಷ್ಟು ಉಪ್ಪು, ಇಂಗು

ಮಾಡುವ ವಿಧಾನ:
ಮೇಲ್ಕಂಡ ವಿಧಾನದಂತೆ ಒಣಮೆಣಸನ್ನು ಬಳಸಿ ಒಗ್ಗರಣೆ ಮಾಡಿ ಗಟ್ಟಿ ಮೊಸರು, ಕೊತ್ತಂಬರಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಪಚಡಿ ತಯಾರಿಸಿ ಸೇವಿಸಬಹುದು.

(ದಟ್ಸ್ ಕನ್ನಡ ಪಾಕಶಾಲೆ)

X
Desktop Bottom Promotion