For Quick Alerts
ALLOW NOTIFICATIONS  
For Daily Alerts

ಪಾಕಶಾಲೆ: ಕರಿಬೇವಿನ ಪಲ್ಯ, ತಂಬುಳಿ, ಚಟ್ನಿ

By Super
|

ಅಡುಗೆಯಲ್ಲಿ ಒಗ್ಗರಣೆ ಕೊಡುವಾಗ ಕರಿಬೇವಿನ ಎಲೆ ಇಲ್ಲದಿದ್ದರೆ ಅದು ಅಪೂರ್ಣವೆನ್ನಿಸುವುದು. ಕರಿಬೇವಿನ ಸೊಪ್ಪು ಗಂಧ-ರುಚಿಗಾಗಿ ಅಷ್ಟೇ ಅಲ್ಲ, ಆರೋಗ್ಯಕ್ಕೂ ಹಿತಕರ.ಒಗ್ಗರಣೆ ಮಾತ್ರ ಸೀಮಿತವಾಗಿಸದೇ ಕರಿಬೇವಿನ ಎಲೆಯನ್ನೇ ಪ್ರಧಾನವಾಗಿಟ್ಟುಕೊಂಡು ಪಲ್ಯ, ತಂಬುಳಿ, ಚಟ್ನಿಪುಡಿ, ಚಟ್ನಿಯನ್ನು ಸುಲಭವಾಗಿ ತಯಾರಿಸಬಹುದು. ಸಾಮಾನ್ಯ ನೆಗಡಿ, ಕೆಮ್ಮಿನಿಂದ ಹಿಡಿದು,ಜ್ವರ, ಮಧುಮೇಹ, ರಕ್ತಬೇಧಿ, ಆಮಶಂಕೆ ಸೇರಿದಂತೆ ಅನೇಕ ಕಾಯಿಲೆಗೆ ಕರಿಬೇವು ರಾಮಬಾಣವಾಗಿ ಉಪಯೋಗಿಸಬಹುದಾಗಿದೆ.

*ಜಿ. ಅರ್ಚನಾ ಬೊಮ್ನಳ್ಳಿ

ಕರಿಬೇವಿನ ಪಲ್ಯ

ಬೇಕಾಗುವ ಸಾಮಾಗ್ರಿಗಳು:
ಕರಿಬೇವಿನ ಸೊಪ್ಪು : ಸಣ್ಣಗೆ ಹೆಚ್ಚಿದ್ದು- 2 ಮುಷ್ಟಿ
ಕಡ್ಲೇಬೇಳೆ: ಅರ್ಧ ಕಪ್ ,
ಉದ್ದಿನ ಬೇಳೆ: ಅರ್ಧ ಕಪ್,
ಜೀರಿಗೆ : 1 ಚಮಚ
ಕೊತ್ತಂ ಬರಿ: 1 ಚಮಚ
ಕೆಂಪು ಮೆಣಸಿನಪುಡಿ: 2 ಚಮಚ
ಉಪ್ಪು: ರುಚಿಗೆ ತಕ್ಕಷ್ಟು
ಹುಳಿಪುಡಿ: 2 ಚಮಚ
ಬೆಲ್ಲದ ಪುಡಿ: 2 ಚಮಚ
ಒಗ್ಗರಣೆ ಎಣ್ಣೆ: 2 ಚಮಚ
ಸಾಸಿವೆ: 1ಚಮಚ
ಮೆಣಸಿನಕಾಯಿ : 2

ಮಾಡುವ ವಿಧಾನ: ಬಾಣಲೆಗೆ ಎಣ್ಣೆ ಹಾಕಿ, ಸಾಸಿವೆ, ಮೆಣಸಿನಕಾಯಿ ಒಗ್ಗರಣೆ ಕೊಡಿ. ಕರಿಬೇವಿನ ಸೊಪ್ಪು ಕೊಚ್ಚಿದ್ದನ್ನು ಚೆನ್ನಾಗಿ ತೊಳೆದು, ನೀರು ಹಿಂಡಿ ಇದಕ್ಕೆ ಹಾಕಿ, ಉಪ್ಪು, ಹುಳಿಪುಡಿ ಸೇರಿಸಿ, ಬೇಕಿದ್ದರೆ ಸ್ವಲ್ಪ ನೀರು ಹಾಕಿ ಬೇಯಿಸಿ, ನಂತರ ಬೆಲ್ಲ ಸೇರಿಸಿ. ಕಡ್ಲೆಬೇಳೆ, ಉದ್ದಿನ ಬೇಳೆ, ಜೀರಿಗೆ, ಕೊತ್ತಂಬರಿಯನ್ನು ಬೇರೆ ಬೇರೆಯಾಗಿ ಹುರಿದು ಪುಡಿ ಮಾಡಿ. ಅದಕ್ಕೆ ಮೆಣಸಿನಪುಡಿ ಸೇರಿಸಿ. ಈ ಪುಡಿಯನ್ನು ಸೊಪ್ಪಿಗೆ ಹಾಕಿ ಚೆನ್ನಾಗಿ ಕೈಯಾಡಿಸಿ ಕೆಳಗಿರಿಸಿ. ಈ ಪಲ್ಯವನ್ನು ಒಂದು ವಾರದವರೆಗೂ ಇಡಬಹುದು.

********
ತಂಬುಳಿ

ಬೇಕಾಗುವ ಸಾಮಾಗ್ರಿ:
ಎಳೆಯ ಕರಿಬೇವಿನ ಎಸಳು-2
ಉದ್ದಿನಬೇಳೆ: 1 ಚಮಚ
ಸಣ್ಣ ಮೆಣಸು: 2
ಎಳ್ಳು: 1 ಚಮಚ
ಹುರಿಯಲು ಎಣ್ಣೆ: 1ಚಮಚ
ತೆಂಗಿನತುರಿ: ಅರ್ಧ ಕಪ್
ನಿಂಬೆ ಕಡಿ-1 ಅಥವಾ ಹುಳಿಮಜ್ಜಿಗೆ : ಅರ್ಧ ಕಪ್
ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ: ಬಾಣಲೆಗೆ ಎಣ್ಣೆ ಹಾಕಿ, ಉದ್ದಿನ ಬೇಳೆ, ಮೆಣಸು, ಕರಿಬೇವಿನ ಸೊಪ್ಪು ಹಾಕಿ ಹುರಿಯಿರಿ. ಇಳಿಸುವಾಗ ಎಳ್ಳು ಹಾಕಿ ಹುರಿದು ಕೆಳಗಿಳಿಸಿ. ನಂತರ ಇದಕ್ಕೆ ತೆಂಗಿನತುರಿ ಸೇರಿಸಿ ನುಣ್ಣಗೆ ರುಬ್ಬಿ ಉಪ್ಪು ಹುಳಿ ಸೇರಿಸಿ, ಬೇಕಿದ್ದರೆ ಸಾಸಿವೆ ಒಗ್ಗರಣೆ ಕೊಡಿ.
***
ಚಟ್ನಿ ಪುಡಿ

ಬೇಕಾಗುವ ಸಾಮಾಗ್ರಿಗಳು:
ಕರಿಬೇವು : 1 ಕಂತೆ
ಉದ್ದಿನ ಬೇಳೆ: ಮುಕ್ಕಾಲು ಕಪ್
ಹುರಿಗಡಲೆ ಪುಡಿ ಬೇಕಿದ್ದರೆ ಅರ್ಧಕಪ್
ಜೀರಿಗೆ : 2 ಕಪ್
ಕೊತ್ತಂಬರಿ: 2 ಚಮಚ
ಮೆಣಸಿನಪುಡಿ, ಉಪ್ಪು, ಹುಳಿಪುಡಿ -ರುಚಿಗೆ ತಕ್ಕಷ್ಟು
ಸಕ್ಕರೆಪುಡಿ ಬೇಕಿದ್ದರೆ
ಚಿಟಿಕೆಯಷ್ಟು ಇಂಗು
ಸಾಸಿವೆ -1ಚಮಚ
ಎಣ್ಣೆ: 2 ಚಮಚ

ಮಾಡುವ ವಿಧಾನ: ಕರಿಬೇವಿನ ಸೊಪ್ಪನ್ನು ಸರಿಯಾಗಿ ಒಣಗಿಸಿ ಒಂದೆರಡುಬಾರಿ ಹುರಿಯಿರಿ. ಕಡ್ಲೆಬೇಳೆ, ಉದ್ದಿನಬೇಳೆ, ಜೀರಿಗೆ, ಕೊತ್ತಂಬರಿ ಎಲ್ಲವನ್ನೂ ಬೇರೆ ಬೇರೆಯಾಗಿ ಹುರಿದು ಪುಡಿ ಮಾಡಿ. ಸೊಪ್ಪನ್ನು ಪುಡಿ ಮಾಡಿ ಎಲ್ಲವನ್ನೂ ಮಿಶ್ರಣ ಮಾಡಿ ಉಪ್ಪು, ಹುಳಿ, ಖಾರದಪುಡಿ, ಸಕ್ಕರೆ ಪುಡಿ ಸೇರಿಸಿ ಇಂಗಿನ ಒಗ್ಗರಣೆ ಕೊಡಿ. ಬೇಕಿದ್ದಲ್ಲಿ ಕೊಬ್ಬರಿ ತುರಿಯನ್ನೂ ಪುಡಿ ಮಾಡಿ ಸೇರಿಸಬಹುದು.
****
ಚಟ್ನಿ

ಬೇಕಾಗುವ ಸಾಮಾಗ್ರಿ:
ಕರಿಬೇವು: 1ಕಂತೆ
ಉದ್ದಿನಬೇಳೆ: 1 ಚಮಚ
ಕಡ್ಲೆಬೇಳೆ:1 ಚಮಚ
ಒಣಮೆಣಸಿನಕಾಯಿ: 5 ರಿಂದ 6
ಕೊಬ್ಬರಿ ತುರಿ: 1 ಕಪ್
ಹುಣಸೆಹಣ್ಣು: ನೆಲ್ಲಿಕಾಯಿ ಗಾತ್ರದಷ್ಟು
ಉಪ್ಪು: ರುಚಿಗೆ ತಕ್ಕಷ್ಟು

ಮಾಡುವ ವಿಧಾನ: ಉದ್ದಿನ ಬೇಳೆ, ಕಡ್ಲೆಬೇಳೆ, ಮೆಣಸಿನಕಾಯಿ,ಕರಿಬೇವಿನ ಸೊಪ್ಪು ಎಲ್ಲವನ್ನೂ ಸ್ವಲ್ಪ ಎಣ್ಣೆ ಹಾಕಿ ಹುರಿಯಿರಿ. ಇದಕ್ಕೆ ಕಾಯಿ, ಉಪ್ಪು, ಹುಳಿ ಸೇರಿಸಿ ಸ್ವಲ್ಪ ನೀರು ಹಾಕಿ ರುಬ್ಬಿ. ಬೇಕಿದ್ದರೆ ಸಾಸಿವೆ ಒಗ್ಗರಣೆ ಕೊಡಿ.

X
Desktop Bottom Promotion