For Quick Alerts
ALLOW NOTIFICATIONS  
For Daily Alerts

ವಸಂತ ಋತುವಿನಲ್ಲಿ ತಿನ್ನಿ ಕಳಲೆ ಪಲ್ಯ

By * ವಾಣಿ ರಾಮದಾಸ್, ಸಿಂಗಪುರ
|
Kalale or Kanile palya
ಇತ್ತೀಚೆಗೆ ಪರಿಚಯಸ್ಥರ ಮನೆಯಲ್ಲಿ ಕಂಡೆ ಹೊಸತೊಂದು ಪಲ್ಯ. ಪಕ್ಕದಲಿ ಇದ್ದ ಸ್ನೇಹಿತರನು ಇದು ಯಾವ ತರಕಾರಿ ಎಂದೆ. ಗೊತ್ತಿಲ್ವೇನೆ ಇದು "ಕಳಲೆ" ಎಂದರು. ಕಳಲೆ ಅಂದ್ರೆ-ಒಂದೂರಿದೆ ಹಾಗೆ ಎಳೆ ಬಿದಿರಿಗೂ ಅದೇ ಹೆಸರು ಎಂದೆ. ಊರು ಕಳಲೆ ನೋಡಿದೀನಿ, ಕಳಲೆ-ಪಲ್ಯ ಇಂದೇ ತಿಂದದ್ದು ಎಂದೆ. ಊರಿನ ಬಗ್ಗೆ ಗೊತ್ತಿರಲಿಲ್ಲ ಎಂದರು. "ಕಳಲೆ" ಒಂದು ಸಣ್ಣ ಗ್ರಾಮ, ನಂಜನಗೂಡು ಹತ್ತಿರ ಇದೆ ಎಂದೆ. ನೀವು ಮೈಸೂರಿನವರು "ಕಳಲೆ" ಊರು ಗೊತ್ತು, ನಾನು ಮಲೆನಾಡಿನವಲು ಕಳಲೆ ಪಲ್ಯ ಗೊತ್ತು. ಎಳೆಯ ಬಿದಿರಿಗೆ ಕಳಲೆ, ತುಳುವಿನಲ್ಲಿ ಕಣಿಲೆ ಅಂತೀವಿ ಅಂದರು. ಮಾತಿನಿಂದ ವಿಷಯ ಸಂಗ್ರಹಣೆ....ಆಹಾ ಕಳಲೆ!

ಏನಿದು ಕಳಲೆ?

ಎಲ್ಲರಿಗೂ ಬಿದಿರು ಬಗ್ಗೆ ಗೊತ್ತೇ ಇದೆ. ಜಗತ್ತಿನಲ್ಲಿ ಅತ್ಯಧಿಕ ವೇಗದಲ್ಲಿ ಬೆಳೆಯುವ ಗಿಡವೇ ಬಿದಿರು. ಇದು ಮಲೆನಾಡಿನಲಿ ಮಳೆಗಾಲದ ಸಮಯದಲಿ ಸಿಗುವ ಎಳೆ ಬಿದಿರು ವಿವಿಧ ಖಾದ್ಯಗಳು. ಬಾಂಬೂ ಬಲಿತ ಬಿದಿರು ಬಡಿಯಲು, ಕಟ್ಟಲು, ಎಳೆ ಬಿದಿರು ತಿನ್ನಲು....ಅಹಾ ಬಿದಿರೇ!

ವರ್ಷ ಋತುವಿನ ಆಗಮನ, ಬಿದಿರಿಗೆ ಬಿಡುವಿಲ್ಲದ ಕೆಲಸ ತನ್ನ ವಂಶವಾಹಿನಿಯ ವೃದ್ಧಿ. ಬಿದಿರಿನ ಬುಡದಲ್ಲಿನ ಗಡ್ಡೆಯ ಭಾಗದಲ್ಲಿ ಬರುವ ಮೊಳಕೆಗೆ "ಕಳಲೆ" ಎಂದು ಹೆಸರು. ಬಿದಿರಿನಿಂದ ಬೇರ್ಪಡಿಸಿದ ಕಳಲೆಯ ಕವಚ ತೆಗೆದಾಗ ಬುಡದಲಿ ಸಿಗುವುದು ಬಿಳಿಯ ತಿರುಳು ಕಳಲೆ- ತುಳುವಲ್ಲಿ ಕಣಿಲೆ. ಇದನು ಹಾಗೆ ಉಪಯೋಗಿಸಿದಲ್ಲಿ ವಿಷಕಾರಿ. ಈ ಕಳಲೆಯನು ದಿನವೂ ನೀರು ಬದಲಾಯಿಸುತ್ತಾ 3 ದಿನ ನೀರಲ್ಲಿ ಮುಳುಗಿಸಿಟ್ಟು ಆಮೇಲೆ ಅದನು ತರಕಾರಿಯಂತೆ ಉಪಯೋಗಿಸಬೇಕು. ಶ್ರಾವಣದಲಿ ದೊರಕುವ ಕಳಲೆ, ಭಾದ್ರಪದದಲಿ ಕೊಯ್ಯುವುದು ನಿಷಿದ್ದ. ನೋಡಿ, ಬಿದಿರಿನ ಸಂತತಿ ಉಳಿಯಬೇಕು ಎಂಬ ತಂತ್ರವೂ ಅಡಗಿದೆ ಅದರಲ್ಲಿ.

ಬಿದಿರು ಘಟ್ಟಪ್ರದೇಶ, ಮಲೆನಾಡು ಹಾಗೂ ಅಲ್ಲಿನ ಸುತ್ತಮುತ್ತಲ ಪ್ರದೇಶಗಳಲ್ಲಿ ವಿಪುಲವಾಗಿ ಬೆಳೆಯುತ್ತದೆ. ಇವು ರೈತನ ಹೊಲದ ರಕ್ಷಣೆಗೂ ಸೈ. ಕಳಲೆ ಖನಿಜ, ಲವಣ, ಸುಣ್ಣದ ಅಂಶ ಹೊಂದಿದೆ. ಇದೀಗ ಅರಣ್ಯ ಇಲಾಖೆ ಬಿದಿರನು ಕಡಿಯದಂತೆ ನಿಷೇಧಿಸಿದೆ. ವರುಷಕ್ಕೊಮ್ಮೆ ಆದರೂ ಆರೋಗ್ಯದ ದೃಷ್ಟಿಯಿಂದ ಕಳಲೆ ತಿನ್ನಲೇಬೇಕಂತೆ. ಕಳಲೆಯಲಿ ಬರೀ ಪಲ್ಯವೊಂದೇ ಅಲ್ಲ ಅದು ಬಜೆ, ಚಿತ್ರಾನ್ನ, ಸಾಂಬಾರಿಗೂ ಸೈ.

ಊರು ಕಳಲೆ:

ಇದೊಂದು ಒಂದು ಪುಟ್ಟ ಗ್ರಾಮ. ಮೈಸೂರು ಜಿಲ್ಲೆಯ ನಂಜನಗೂಡಿನಿಂದ ಐದು ಮೈಲು ದೂರದಲ್ಲಿದೆ. ಇಲ್ಲಿ ಲಕ್ಷ್ಮೀಕಾಂತ ಸ್ವಾಮಿಯ ದೇಗುಲವಿದೆ. ಈ ಲಕ್ಷ್ಮೀಕಾಂತ ಕೂಡ ಬಿದಿರು ಬೆಳೆಗಳ ಮಧ್ಯೆ ದೊರಕಿದನಂತೆ ಅದಕ್ಕೆ ಆ ಸ್ಥಳಕ್ಕೆ "ಕಳಲೆ" ಎಂದು ಹೆಸರಾಯಿತಂತೆ. ಕಳಲೆ ಮನೆತನದ ದಳವಾಯಿಗಳು ಮೈಸೂರು ಹಾಗು ವಿಜಯನಗರ ಸಂಸ್ಥಾನಗಳ ಆಳ್ವಿಕೆಯಲಿ ಪ್ರಮುಖ ಪಾತ್ರ ವಹಿಸಿದವರು.

ಇಷ್ಟೆಲ್ಲಾ ಹೇಳಿ ರೆಸಿಪಿ ಹೇಳದಿದ್ದರೆ ಹೇಗೆ?

ಸಣ್ಣಗೆ ಹೆಚ್ಚಿದ ಕಳಲೆ : 3 ಕಪ್
ಎಣ್ಣೆ : 2 ಚಮಚ
ಒಗ್ಗರಣೆ ಸಾಮಾಗ್ರಿ : ಸಾಸಿವೆ, ಜೀರಿಗೆ, ಅರಿಶಿಣ, ಉದ್ದಿನಬೇಳೆ ತಲಾ ಒಂದು ಚಮಚ
ಕೆಂಪು ಮೆಣಸಿನಕಾಯಿ : 5
ಬೆಲ್ಲ/ಸಕ್ಕರೆ ಸ್ವಲ್ಪ(ಇಷ್ಟವಿದ್ದಲ್ಲಿ)
ಗೊತ್ತೇ ಇದೆ ರುಚಿಗೆ ತಕ್ಕಷ್ಟು ಉಪ್ಪು

ತಯಾರಿಸುವ ವಿಧಾನ :

ಮೇಲೆ ತಿಳಿಸಿದಂತೆ ಕಳಲೆಯನ್ನು ಮೂರು ದಿನ ನೀರಲ್ಲಿ ನೆನೆಸಿಡಿ. ನಂತರ ಕಳಲೆಯನ್ನು ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ. ಕಡಾಯಿಯಲ್ಲಿ ಎಣ್ಣೆ ಬಿಸಿ ಮಾಡಿ, ಒಗ್ಗರಣೆ ಹಾಕಿ ಅದಕ್ಕೆ ಬೇಯಿಸಿದ ಕಳಲೆ ಸೇರಿಸಿ, ಬೆಲ್ಲ, ಉಪ್ಪು ಹಾಕಿ, ಕಡಾಯಿಯನ್ನು ಮುಚ್ಚಿಟ್ಟು ಮಂದ ಉರಿಯಲ್ಲಿ 10 ನಿಮಿಷ ಬೇಯಿಸಿ. ಕಳಲೆ ಪಲ್ಯ ತಯಾರು.

ನಾಮವೊಂದೆ...ರೂಪ ಹಲವು....ನಿಮಗೂ ತಿಳಿದಿದ್ದಲ್ಲಿ ಬರೆಯಿರಿ! ಎಲ್ಲರಿಗೂ ತಿಳಿಸಿ.

Story first published: Wednesday, March 24, 2010, 17:17 [IST]
X
Desktop Bottom Promotion