For Quick Alerts
ALLOW NOTIFICATIONS  
For Daily Alerts

ದೇವರೇ, ನಮ್ಮನ್ನು ಈ ಉಪ್ಪಿಟ್ಟಿನಿಂದ ಕಾಪಾಡಪ್ಪಾ!

By Staff
|

ಕಾಲೇಜು ದಿನಗಳಲ್ಲಿ ಪ್ರೀತಿಸಿದ ಆ ಹುಡುಗಿಯನ್ನು ಮದುವೆಯಾಗಿದ್ದರೆ ಚೆನ್ನಾಗಿತ್ತು. ಅವಳು ಇಂಥ ಉಪ್ಪಿಟ್ಟನ್ನು ಮಾಡಿ ಬಡಿಸಿ ಹಿಂಸಿಸುತ್ತಿರಲಿಲ್ಲವೇನೋ?

* ರಾಜು ಮಹತಿ

ಪ್ರಿಯಾ ನಿನ್ನ ಮುಖವೇಕೆ
ಕಪ್ಪಿಟ್ಟಿದೆ ?
ಯಾಕೆಂದರೆ ನನ್ನ ಮುಂದೆ
ನೀ ಮಾಡಿದ ಉಪ್ಪಿಟ್ಟಿದೆ!

ಕ್ಷಮಿಸಿ, ಇದು ಉಪ್ಪಿಟ್ಟಿನ ಮೇಲಿನ ಸಿಟ್ಟೋ ಹೆಂಡತಿಯ ಮೇಲಿನ ಸಿಟ್ಟೋ ನಾನು ಹೇಳಲಾರೆ. ಯಾಕೆಂದರೆ ಕವಿ ಉದ್ದೇಶಪೂರ್ವಕವಾಗಿಯೇ ನೀ ಮಾಡಿದ ಉಪ್ಪಿಟ್ಟಿದೆ ಎಂದು ಸೇರಿಸಿರಬೇಕು. ಬರೀ ಉಪ್ಪಿಟ್ಟಿದೆ ಎಂದಿದ್ದರೆ ಅದನ್ನು ಉಪ್ಪಿಟ್ಟಿನ ಮೇಲಿನ ಸಿಟ್ಟು ಎಂದುಕೊಂಡು ಸುಮ್ಮನಾಗಬಹುದಿತ್ತು.

ಹೆಂಡತಿ ಮಾಡಿದ ಉಪ್ಪಿಟ್ಟು ಕಾಲದಂತೆ ಕ್ರೂರವಾಗಿರುತ್ತದೆ, ಭಗ್ನ ಪ್ರೇಮದಂತೆ ಕಹಿಯಾಗಿರುತ್ತದೆ. ಬಹುಶಃ ಕಾಲೇಜು ದಿನಗಳಲ್ಲಿ ಪ್ರೀತಿಸಿದ ಆ ಹುಡುಗಿಯನ್ನು ಮದುವೆಯಾಗಿದ್ದರೆ ಅವಳು ಇಂಥ ಉಪ್ಪಿಟ್ಟನ್ನು ಮಾಡಿ ಬಡಿಸಿ ಹಿಂಸಿಸುತ್ತಿರಲಿಲ್ಲ ಎಂಬ ವಿಷಾದಕ್ಕಂತೂ ಕಾರಣವಾಗುತ್ತದೆ.

ಅದು ಯಾಕೋ ಏನೋ ಗೊತ್ತಿಲ್ಲ, ಉಪ್ಪಿಟ್ಟು ಎಂದರೆ ನನಗೆ ನೆನಪಾಗುವುದು ಹಳೆಯ ಪ್ರೇಯಸಿಯರು. ಅವರ ನೆನಪು ಉಪ್ಪಿಟ್ಟಿನಂತೆ ಹೊಟ್ಟೆಯಾಳಗೆ ಕಾಂಕ್ರೀಟು ಹಾಕಿದಂತಿದೆ ಎಂದರೂ ಸರಿಯೆ. ನನಗೂ ನಿನಗೂ ಅಂಟಿದ ಅಂಟಿನ ಕೊನೆ ಬಲ್ಲವರಾರು ಎಂದು ಬೇಂದ್ರೆ ಹಾಡಿದ್ದೂ ಉಪ್ಪಿಟ್ಟಿನ ಕುರಿತೇ.

ನನ್ನ ಗೆಳೆಯನೊಬ್ಬನಿದ್ದ. ಅವನಿಗೆ ಉಪ್ಪಿಟ್ಟು ಎಂದರೆ ಪಂಚಪ್ರಾಣ. ಆದರೆ ಮದುವೆಯಾಗಿ ಒಂದೇ ತಿಂಗಳಿಗೆ ಉಪ್ಪಿಟ್ಟು ತಿನ್ನುವುದನ್ನು ಬಿಟ್ಟುಬಿಟ್ಟ. ಯಾಕೆಂದರೆ ಅವನ ಹೆಂಡತಿ ಉಪ್ಪಿಟ್ಟನ್ನು ಅವನ ಮೇಲೆ ಒಂದು ಅಸ್ತ್ರದಂತೆ ಪ್ರಯೋಗಿಸಲು ಆರಂಭಿಸಿದ್ದಳಂತೆ. ಯಾವುದೂ ತನಗೆ ತಾನೇ ಕೆಟ್ಟದಲ್ಲ, ಒಳ್ಳೆಯದೂ ಅಲ್ಲ. ಕಾಲದೇಶಗಳ ಗುಣದೋಷಗಳಿಗೆ ಅನುಗುಣವಾಗಿ ಅದು ನಮ್ಮ ಮೇಲೆ ಒಳ್ಳೆಯ ಪರಿಣಾಮವನ್ನೋ ಕೆಟ್ಟ ಪರಿಣಾಮವನ್ನೋ ಬೀರುತ್ತದೆ.

ಕೇಶವರಾಯನ ವೈಕುಂಠ ಸಮಾರಾಧನೆಯ ದಿನ ಶ್ರೀರಂಗಪಟ್ಟಣದ ಮುಕುಂದಾಚಾರ್ಯರ ಮನೆಯ ಉಪ್ಪಿಟ್ಟು ತಿಂದು ಅತ್ತಷ್ಟು ಅವನು ಸತ್ತಾಗಲೂ ಆತನ ಗೆಳೆಯರು ಅಳಲಿಲ್ಲ. ಸತ್ತ ಮೇಲೂ ಉಪ್ಪಿಟ್ಟಾಗಿ ಉಪಟಳ ಕೊಡಬೇಕಿತ್ತೇ ಹೇ ಕೇ'ಶವ"! ಎಂದು ಗೆಳೆಯರು ಬೇಜಾರು ಮಾಡಿಕೊಳ್ಳುತ್ತಲೇ ಚಟ್ನಿಪುಡಿ ಹಾಕಿಕೊಂಡು ಉಪ್ಪಿಟ್ಟು ಜಡಿದರು.

ಹೇಗೆ ತಿಂದರೂ ಉಪ್ಪಿಟ್ಟು ಉಪ್ಪಿಟ್ಟೇ. ಆದರೆ ಉಪ್ಪಿಟ್ಟು ತಿನ್ನುವುದೂ ಒಂದು ಕಲೆ. ಎಲ್ಲರೂ ಉಪ್ಪಿಟ್ಟು ಮಾಡುವುದು ಕಲೆ ಎಂದುಕೊಂಡಿರುತ್ತಾರೆ. ಆದರೆ ನನ್ನ ಪ್ರಕಾರ ಉಪ್ಪಿಟ್ಟನ್ನು ಯಾರು ಬೇಕಾದರೂ ಮಾಡಬಹುದು. ಅದನ್ನು ಯಾರೂ ಕೆಡಿಸಲಾರರು, ಯಾಕೆಂದರೆ ಅದು ಮೂಲತಃ ಕೆಟ್ಟಿರುವ ತಿಂಡಿಯೇ. ಆದರೆ ಅದನ್ನು ತಿನ್ನುವ ಹೊತ್ತಿಗೆ ಅದರ ಗುಣಾವಗುಣಗಳು ಕಾಣದಂತೆ ಮೇಕಪ್ಪು ಮಾಡಿಕೊಳ್ಳಬೇಕು. ಆಧುನಿಕ ನವಯುವತಿಯರು ಇಲ್ಲದ್ದನ್ನು ಇರುವಂತೆಯೂ ಇರುವುದನ್ನು ಇಲ್ಲದಂತೆಯೂ ಪ್ರದರ್ಶಿಸುವ ವಿದ್ಯೆ ಕಲಿತಿರುತ್ತಾರಲ್ಲ ಹಾಗೆ.

ಹೀಗಾಗಿ ಸಂಪರ್ಕಕ್ಕೆ ಬಂದ ನಂತರ ಇರಬೇಕಾದದ್ದು ಇರುವುದಿಲ್ಲ, ಇರಬಾರದ್ದು ಇದ್ದೇ ಇರುತ್ತದೆ.

ಉಪ್ಪಿಟ್ಟಿನ ಮೇಲೆ ಒಂದು ಲೀಟರು ಚಟ್ನಿಯನ್ನು ಸುರಿದುಕೊಂಡು ತಿನ್ನುವುದು ಬೆಂಗಳೂರಿಗರ ಕ್ರಮ. ಅದೇ ಬಯಲುಸೀಮೆಗೆ ಹೋದರೆ ಉಪ್ಪಿಟ್ಟಿಗೆ ಮೊಸರು ಹಾಕಿಕೊಂಡು ತಿನ್ನುವುದನ್ನು ನೀವು ಕಾಣುತ್ತೀರಿ. ಮಲೆನಾಡಿನ ಕಡೆ ಹೋದರೆ ಪೇಪರ್‌ ಅವಲಕ್ಕಿಯ ಜೊತೆ ಬೆರೆಸಿಕೊಂಡು ಉಪ್ಪಿಟ್ಟನ್ನು ತಿನ್ನುತ್ತಾರೆ. ಮತ್ತೆ ಕೆಲವರು ಉಪ್ಪಿಟ್ಟಿಗೆ ಸಕ್ಕರೆ ತುಪ್ಪ ಹಾಕಿ ಅದನ್ನೇ ಕೇಸರಿಬಾತ್‌ ಎಂದು ಕರೆದು ಅದನ್ನೇ ಮಾರುವೇಷದಲ್ಲಿ ತಿನ್ನುವುದುಂಟು. ಆದರೆ ಹೇಗೆ ತಿಂದರೂ..

ಉಪ್ಪಿಟ್ಟು ಉಪ್ಪಿಟ್ಟೇ
ಸೇರಿದ ಮೇಲೆ ಹೊಟ್ಟೆ
ಮನುಜಾ ನೀ ಕೆಟ್ಟೆ!

ಉಪ್ಪಿಟ್ಟಿಗೂ ಹೆಂಡತಿಗೂ ಒಂದು ಸಾಮ್ಯವುಂಟು ಎಂದೆನಲ್ಲ. ಉಪ್ಪಿಟ್ಟು ತಿಂದವರು ಅದನ್ನು ಅದೆಷ್ಟು ದೂರಿದರೂ ಅದುವರೆಗೆ ಉಪ್ಪಿಟ್ಟೇ ತಿನ್ನದವರಿಗೆ ಅದೊಂದು ಅಪೂರ್ವ ಖಾದ್ಯವಾಗಿ ಕಾಣಿಸುತ್ತದೆ. ಹೀಗಾಗಿ ಅವರು ಉಪ್ಪಿಟ್ಟನ್ನು ಒಂದಲ್ಲಒಂದು ಸಾರಿ ತಿಂದೇ ತೀರಬೇಕೆಂಬ ನಿರ್ಧಾರಕ್ಕೆ ಬರುತ್ತಾರೆ. ಹೆಂಡತಿಯೂ ಹಾಗೆಯೇ. ಮನುಷ್ಯ ಜೀವನದಲ್ಲಿ ದೊರಕಬಹುದಾದ ಅತ್ಯಮೂಲ್ಯ ಸಂಪನ್ಮೂಲ ಎಂಬ ಭಾವನೆ ಜನರಲ್ಲಿ ಬಿಡುಬೀಸಾಗಿರುತ್ತದೆ. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಹೇಳಲಾಗದ ಭಾವವೊಂದು ಆತನನ್ನು ಆವರಿಸಿಕೊಳ್ಳುತ್ತದೆ. ತತ್ವಜ್ಞಾನವೆಂದರೆ ಇದೇ! ಮದುವೆಯಾಗುವುದು ಎಂದರೆ Choiceless awareness ಪರಿಪೂರ್ಣ ಜ್ಞಾನ. ಅಲ್ಲಿ ಆಯ್ಕೆಯೇ ಇಲ್ಲ. ಆಯ್ಕೆಯಿಲ್ಲದ ಸ್ಥಿತಿ ಎಂದರೆ ಮೋಕ್ಷ. ಅಲ್ಲಿ ಪರ್ಯಾಯವೂ ಇಲ್ಲ, ಪರ್ಯಾಯವಿಲ್ಲದ ಸ್ಥಿತಿ ಎಂದರೆ bliss. ಉಪ್ಪಿಟ್ಟೆಂದರೂ ಬ್ಲಿಸ್ಸೇ.

ಕಾವ್ಯಕ್ಕೆ ಹೋಲಿಸಿದರೆ ಉಪ್ಪಿಟ್ಟು ದಲಿತ ಸಂವೇದನೆ. ಅದೊಂದು ಬದಲಾಗದ ಸ್ಥಿತಿ. ದಲಿತ ಸಾಹಿತ್ಯ ಕೂಡ ಬದಲಾಗದು. ಸಿದ್ಧಲಿಂಗಯ್ಯನಂಥ ಕವಿ ಕೂಡ ಎಂಎಲ್‌ಸಿ ಆದ ನಂತರವೂ ದಲಿತತ್ವದ ಬಗ್ಗೆಯೇ ಬರೆಯಬೇಕು. ಉಪ್ಪಿಟ್ಟೂ ಅಷ್ಟೇ.

ಸೋಮಾರಿತನಕ್ಕೆ ಸಾಕ್ಷಿ : ಅಮೆರಿಕಾದಲ್ಲಿ ಉಪ್ಪಿಟ್ಟಿದೆಯೇ? ನಾನು ಹೇಳುತ್ತಿರುವುದು ಕನ್ನಡಿಗರ ಮನೆಯಲ್ಲಿ ಅಲ್ಲ. ಅಚ್ಚ ಅಮೆರಿಕನ್ನರ ಮನೆಯಲ್ಲಿ. ಬಹುಶಃ ಸಿಗಲಿಕ್ಕಿಲ್ಲ. ಜಗತ್ತಿನ ಯಾವುದೇ ದೇಶದಲ್ಲಿ, ಯಾವುದೇ ಭಾಷೆಯಲ್ಲಿ ಉಪ್ಪಿಟ್ಟಿನಂಥ ಖಾದ್ಯ ಇನ್ನೊಂದಿಲ್ಲ. ಆ ಮಟ್ಟಿಗೆ ಅದು ಕನ್ನಡಿಗರ ಕೊಡುಗೆ. ಅದನ್ನು ಕಂಡು ಹಿಡಿದದ್ದಾದರೂ ಯಾರು? ಈ ಬಗ್ಗೆ ಹಂಪಿ ಯೂನಿವರ್ಸಿಟಿಯಲ್ಲಿ ಅಥವಾ ಇನ್ನೂ ಆರಂಭವಾಗದ, ಎಂದೆಂದಿಗೂ ಆರಂಭವಾಗದ Iowa ಕನ್ನಡ ಅಧ್ಯಯನ ಪೀಠದಲ್ಲಿ ಸಂಶೋಧನೆ ನಡೆಯಬೇಕು.

ಉಪ್ಪಿಟ್ಟು ಅಂದರೆ ಉಪ್ಪು ಮತ್ತು ಹಿಟ್ಟು. ಹಿಟ್ಟಿಗೆ ಉಪ್ಪು ಹಾಕಿ ಮಾಡಿದ್ದೇ ಉಪ್ಪಿಟ್ಟು. ಅಂದರೆ ಮೂಲದಲ್ಲಿ ಹಿಟ್ಟಿಗೆ ಉಪ್ಪುಹಾಕಿ ಮಾಡಿದ ಯಾವುದೇ ತಿಂಡಿಯೂ ಉಪ್ಪಿಟ್ಟೇ. ಆದರೆ ಕನ್ನಡಿಗರ ಔದಾರ್ಯ ಮತ್ತು ಸೋಮಾರಿತನಕ್ಕೆ ಸಾಕ್ಷಿಯಾಗಿ ಉಪ್ಪಿಟ್ಟು . ರವೆ ಮತ್ತು ಉಪ್ಪಿನ ಮಿಶ್ರಣವಾಗಿಬಿಟ್ಟಿದೆ. ಇದು ಹಳಗನ್ನಡದ ಶಬ್ದವೂ ಆಗಿರುವುದರಿಂದ ಉಪ್ಪಿಟ್ಟಿಗೆ ಇತಿಹಾಸವೂ ಪರಂಪರೆಯೂ ಉಂಟೆಂಬುದು ನಿಜ. ಸಾಧ್ಯವಾದರೆ ಆ ಭಗವಂತ ನಮ್ಮನ್ನು ಉಪ್ಪಿಟ್ಟಿನಿಂದ ಕಾಪಾಡಲಿ. ಇಲ್ಲದೇ ಹೋದರೆ ನಾವು ತಿಂದ ಉಪ್ಪಿಟ್ಟು ನಮ್ಮನ್ನು ಕಾಪಾಡಲಿ!

ಅಂದಹಾಗೆ, ಇವತ್ತು ನಿಮ್ಮ ಮನೆಯಲ್ಲಿ ತಿಂಡಿಯೇನು? ಉಪ್ಪಿಟ್ಟಾ ? ನಮಗೆ ಗೊತ್ತು ನಿಮ್ಮ ಮನೆದೇವರ ಸತ್ಯ!

Story first published: Wednesday, September 9, 2009, 17:33 [IST]
X
Desktop Bottom Promotion