For Quick Alerts
ALLOW NOTIFICATIONS  
For Daily Alerts

ಟೊಮೆಟೊಭಾತ್ ವಿರೋಧಿಸಿ ಪಂಜಿನ ಮೆರವಣಿಗೆ

By * ಅದಿತಿ ವಾಗೀಶ್, ಗೌರವನಗರ
|

ತುಂಬ ವರ್ಷದಿಂದ ನನ್ನ ಒಂದು ಅಸಹನೆಯನ್ನು ಹೊರಹಾಕಬೇಕೆಂಬ ಆಸೆ ಇತ್ತು. ಅದಕ್ಕೆ ಅವಕಾಶವನ್ನು ಒದಗಿಸಿದ ದಟ್ಸ್ ಕನ್ನಡ ಅಡುಗೆ ಮತ್ತು ಆಹಾರ ವಿಭಾಗದ ಸುಮಲತ ಮತ್ತು ರೀನಾ ಅವರಿಗೆ ಧನ್ಯವಾದಗಳು.

ನಾನು ಕೆಲಸಮಾಡುವ ಕಂಪನಿ ಜಯನಗರದಲ್ಲಿದೆ. ನಾವು ಸಹೋದ್ಯೋಗಿಗಳು ಮಧ್ಯಾನ್ಹದ ಊಟಕ್ಕೆ ಬೇರೆಬೇರೆ ಹೋಟೆಲುಗಳಿಗೆ ಹೋಗುತ್ತೇವೆ. ವೀಕ್ ಎಂಡ್ ಪ್ರಯುಕ್ತ ಸೌತ್ ಎಂಡ್ ಹೋಟೆಲಿನಲ್ಲಿ ಶುಕ್ರವಾರದಂದು ದುಬಾರಿ ಊಟ ಮಾಡಿದರೆ ಸೋಮವಾರದಿಂದ ಗುರುವಾರದವರಿಗೆ ನಮಗೆ ದರ್ಶಿನಿ ಊಟವೇ ಗತಿ.

ಮಂಗಳವಾರ ಮಧ್ಯಾನ್ಹ ಜಯನಗರ ಮೂರನೇ ಬ್ಲಾಕಿನಲ್ಲಿರುವ ಉಪಾಹಾರ ದರ್ಶಿನಿಯಲ್ಲಿ ನಾನು ಮತ್ತು ನನ್ನ ಮಿತ್ರರು ಊಟಮಾಡಿದೆವು. ದಟ್ಸ್ ಕನ್ನಡ ವರದಿಗಾರರು ಅಲ್ಲಿಗೆ ಬಂದಿದ್ದರು. ಬಹುತೇಕ ಎಲ್ಲರೂ ಊಟ ಮಾಡಿದ್ದು ಟೊಮೆಟೊ ರೈಸ್ ಭಾತ್ ಮತ್ತು ಮೊಸರನ್ನ. ಎಲ್ಲರೂ ಈ ಟೊಮೆಟೊ ರೈಸ್ ಎಂಬ ಅರ್ಥಹೀನ, ಕಳಾಹೀನ, ಸ್ವಾದಹೀನ, ಮತಿಹೀನ ಪದಾರ್ಥವನ್ನು ಟೀಕಿಸುತ್ತಲೇ ಊಟ ಮಾಡಿದರು.

ಟೊಮೆಟೊ ಭಾತ್ ಕೇವಲ UD ಯಲ್ಲಿ ಮಾತ್ರವಲ್ಲ. ಅನಿವಾರ್ಯಕ್ಕೊ ಅಥವಾ ಆಕಸ್ಮಾತಾಗಿಯೋ ಹೊಟೆಲು ತಿಂಡಿ ಬಳಸುವವರನ್ನು ಸತತ ಕಾಡುತ್ತಿರುವ ಯಕ್ಷಪ್ರಶ್ನೆಯೆಂದರೆ ಇದನ್ನು ಯಾಕೆ ತಯಾರಿಸುತ್ತಾರೆ ಎಂದು. ಬಿಸಿಬೇಳೆ ಭಾತ್, ಚಿತ್ರಾನ್ನ, ಪೊಂಗಲ್, ಅನ್ನ ಸಾಂಬಾರು, ಪುಳಿಯೋಗರೆ, ಕಾಯಿಸಾಸುವೆ ಅನ್ನ, ವಾಂಗಿಭಾತ್ ಮುಂತಾದ ಅನ್ನ ಮೂಲದ ತಿಂಡಿಗಳು ಸ್ವೀಕಾರಾರ್ಹವೆ. ಆದರೆ, ಟೊಮೆಟೊ ಭಾತ್ ಅಂತಹ ಮಹಾಮೋಸದ ತಿಂಡಿ ಕನ್ನಡ ಜಗತ್ತಿನಲ್ಲಿ ಇನ್ನೊಂದಿಲ್ಲ.

ಟೊಮೆಟೊ ಹಣ್ಣು ಜ್ಯೂಸಿಗೋ ಅಥವಾ ಹಸಿಹಸಿಯಾಗಿ ತಿನ್ನುವುದಕ್ಕೋ ಸರಿ. ಇದನ್ನು ಬೇಯಿಸಿ, ಹುರಿದು, ತಿರುವಿ ಅನ್ನಕ್ಕೆ ಹಾಕಿ ಕಲಸುವ ಹೊತ್ತಿಗೆ ಟೊಮೆಟೊ ಹಣ್ಣು ಸತ್ತು ಸ್ವರ್ಗ ಸೇರಿರುತ್ತದೆ. ಇಂಥ ಪದಾರ್ಥವನ್ನು ಒಂದು ರೆಸಿಪಿಯಾಗಿ ಮಾಡಿ ಮಾರುವುದು ಮಹಾಮೋಸ. ಮನೆಯಲ್ಲಿ ಮಾಡಿದರೂ ಅಷ್ಟೆ. ಈ ಭಾತಿನಲ್ಲಿ ಇರುವುದೆಂದು ಆರೋಪಿಸಲಾಗಿರುವ ಹಣ್ಣಿನ ರಸ ಒಣಗಿರುತ್ತದೆ, ಸತ್ತ ಟೊಮೆಟೊದ ಕೆಂಪು ಚರ್ಮ ಚೂರುಚೂರುಗಳಾಗಿ ತಟ್ಟೆಯ ಅಲ್ಲಲ್ಲಿ ಬಿದ್ದಿರುತ್ತದೆ.

ನಮ್ಮದೇ ಆಹಾರ ಪದ್ಧತಿಗಳನ್ನು ಹೋಟೆಲ್ ಉದ್ಯಮ ಈಗಾಗಲೇ ಸಾಕಷ್ಟು ಹಾಳುಮಾಡಿರುತ್ತದೆ. ಹೀಗಿರುವಾಗ ಬದುಕಿ ಉಳಿದಿರುವ ನಮ್ಮ ಕೆಲವೇ ಕೆಲವು ತಿಂಡಿಗಳನ್ನು ತಿನ್ನುವ ಕೆಲವೇ ಕನ್ನಡಿಗರ ಆಹಾರ ಧರ್ಮದ ಮೇಲೆ ಪ್ರತಿನಿತ್ಯ ಅನಾಚಾರ, ಅತ್ಯಾಚಾರವಾಗುತ್ತಿದೆ.

ಇದರ ವಿರುದ್ಧ ನಾವು ಕನ್ನಡಿಗರು ಪ್ರತಿಭಟಿಸಬೇಕು. ಕನ್ನಡ ಎಂದಾಕ್ಷಣ ಕನ್ನಡ ಸಾಹಿತ್ಯ, ಕನ್ನಡ ಸಂಗೀತ, ಕನ್ನಡ ಸಿನಿಮಾ, ಕನ್ನಡ ಶಾಲೆ, ಕನ್ನಡ ಪತ್ರಿಕೋದ್ಯಮ ಎಂದು ಭಾವಿಸುವ ನಾವುಗಳು ಕನ್ನಡದ ಊಟದ ಬಗ್ಗೆಯೂ ಎಚ್ಚೆತ್ತುಕೊಳ್ಳುವುದು ಅಗತ್ಯ.

ನಮ್ಮವರೇ ಆಗಿರುವ ವಾಟಾಳ್ ನಾಗರಾಜ್, ಪ್ರೊ. ಜಿ. ವೆಂಕಟಸುಬ್ಬಯ್ಯ, ಸಿಪಿ ಕೃಷ್ಣಕುಮಾರ್, ಯುಆರ್ ಅನಂತಮೂರ್ತಿ, ಅರವಿಂದ ಮಾಲಗತ್ತಿ, ಡಾ. ಪುರುಷೋತ್ತಮ ಬಿಳಿಮಲೆ, ನಾಗ ಐತಾಳ, ಪ್ರಕಾಶ್ ರಾವ್ ಪಯ್ಯಾರ್, ವಾಣಿ ರಾಮದಾಸ್, ಡಾ. ಎಂಎಸ್ ನಟರಾಜ್, ನಾಗಭೂಷಣ ರಾವ್ ಮೂಲ್ಕಿ, ವಲ್ಲೀಶ ಶಾಸ್ತ್ರಿ, ಟಿ ಎ ನಾರಾಯಣ ಗೌಡ, ಜಯದೇವ ಪ್ರಸನ್ನ, ಕೈಯಾರ ಕಿಞಣ್ಣ ರೈ, ವಸುಧೇಂದ್ರ ಮುಂತಾದವರು ಸೆಟೆದು ನಿಂತು ಕೆಟ್ಟ ಕನ್ನಡ ವಿರುದ್ಧ ಪ್ರತಿಭಟನೆ ಮಾಡಬೇಕು. ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಿಬ್ಬಂದಿ ಕೂಡ ಈ ಪ್ರತಿಭಟನೆಯಲ್ಲಿ ಭಾಗಿಯಾಗಬೇಕೆಂಬ ಬಯಕೆ ನನ್ನದು.

ಇಂಥ ಅನಿಷ್ಟಗಳ ವಿರುದ್ಧ ಹೋರಾಡುವುದರ ಮುಂದಾಳತ್ವವನ್ನು ವಾಟಾಳ್ ವಹಿಸಿಕೊಳ್ಳಲಿ ಎಂದು ನಾವು ಜೇನಾಯ್ಡ್ ಟೆಕ್ ಇಂಡಿಯ ಪ್ರೈವೇಟ್ ಲಿಮಿಟೆಡ್ ಕನ್ನಡಿಗರು ಬಯಸುತ್ತೇವೆ. ಟೊಮೆಟೊ ರೈಸ್ ಭಾತ್ ವಿರುದ್ಧ ವಾಟಾಳ್ ರವರು ರಾಜ್ಯಮಟ್ಟದ ಪಂಜಿನ ಮೆರವಣಿಗೆ ಆರ್ಗನೈಜ್ ಮಾಡಿದರೆ ನಾವೆಲ್ಲ ಬಂದು ಸೇರಿಕೊಳ್ಳುತ್ತೇವೆ.

English summary

Tomato delights | Hotels and Restuarants in Bangalore | Karnataka Food Habits | ಟೊಮೆಟೊಭಾತ್ ವಿರೋಧಿಸಿ ಪಂಜಿನ ಮೆರವಣಿಗೆ

Karnataka hotels need to learn how to prepare vegetarian dishes using tomatos.
Story first published: Wednesday, December 14, 2011, 17:09 [IST]
X