For Quick Alerts
ALLOW NOTIFICATIONS  
For Daily Alerts

ಶಾಲೆ ಸುತ್ತಮುತ್ತ ಜಂಕ್ ಆಹಾರ ನಿಷೇಧಿಸಬೇಕಾ?

By Prasad
|

ಮಣಭಾರ ಬ್ಯಾಗನ್ನು ಬೆನ್ನಿನ ಮೇಲೆ ಹೇರಿಕೊಂಡು ಶಾಲೆಗೆ ಹೋಗುವ ನಿಮ್ಮ ಮಗು ಟಿಫಿನ್ ಬಾಕ್ಸಲ್ಲಿ ಏನನ್ನು ತೆಗೆದುಕೊಂಡು ಹೋಗುತ್ತದೆ? ಬ್ರೆಡ್, ಬಿಸ್ಕತ್, ಇಡ್ಲಿ, ದೋಸೆ, ಬರ್ಗರ್, ಬನ್ನು, ಚಿಪ್ಸ್, ಕೇಕ್, ಕುರ್ಕುರೆ, ಪಿಜಾ? ಅಥವಾ ಶಾಲೆಗೆ ಹೋದಾಗ ಅಕ್ಕಪಕ್ಕದ ಅಂಗಡಿಗೆ ಹೋಗುವ ಅವಕಾಶವಿದ್ದರೆ ಏನನ್ನು ತಿಂದು ಬರುತ್ತದೆ?

ಮಕ್ಕಳ ಆರೋಗ್ಯದ ದೃಷ್ಟಿಯಿಂದ ಅವರು ತಿನ್ನುವ ಆಹಾರದ ಮೇಲೆ ಪಾಲಕರು ಮತ್ತು ಶಿಕ್ಷಕರು ಒಂದು ನಿಗಾ ಇಡುವುದು ಉತ್ತಮ. ಏಕೆಂದರೆ ಇಂತಹ ಪದಾರ್ಥಗಳೇ ಮುಂದೆ ಆರೋಗ್ಯದ ಮೇಲೆ ಮಾತ್ರವಲ್ಲ ಅವರ ಭವಿಷ್ಯದ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರಬಲ್ಲದು.

ಕರ್ನಾಟಕದ ಕೆಲ ಖಾಸಗಿ ಶಾಲೆಗಳಲ್ಲಿ ಬ್ರೆಡ್ ಹೊರತಾಗಿ ಬೇಕರಿಯ ಯಾವ ಪದಾರ್ಥಗಳನ್ನೂ ತಿನ್ನಲು ಬಿಡುವುದಿಲ್ಲ. ಪ್ರತಿನಿತ್ಯ ಮನೆಯಲ್ಲಿಯೇ ತಯಾರಿಸಿದ ಆಹಾರ ತಂದರೆ ಸರಿ ಇಲ್ಲದಿದ್ದರೆ ಮಗು ಖಾಲಿ ಹೊಟ್ಟೆಯಲ್ಲಿ ವಾಪಸ್ ಬರಬೇಕಾದೀತು. ಇಂತಹ ಪದ್ಧತಿ ಕರ್ನಾಟಕದ ಎಲ್ಲ ಸರಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಜಾರಿಗೆ ಬರಬೇಕು.

ಈ ವಿಷಯ ಯಾಕೆ ಹೇಳಬೇಕಾಯಿತೆಂದರೆ, ದೆಹಲಿಯ ಕೆಲ ಪ್ರಜ್ಞಾವಂತ ಮಕ್ಕಳು ಪಿಜ್ಜಾ, ಬರ್ಗರ್ ಸೇರಿದಂತೆ ಎಲ್ಲಾ ಜಂಕ್ ಆಹಾರವನ್ನು ಶಾಲೆಗಳಲ್ಲಿ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ನಿಷೇಧಿಸಬೇಕೆಂದು ದೆಹಲಿ ಹೈಕೋರ್ಟ್ ಮೆಟ್ಟಲೇರಿದ್ದಾರೆ. ಮಕ್ಕಳ ಕಾಳಜಿಯನ್ನು ಮನಗಂಡ ನ್ಯಾಯಮೂರ್ತಿಗಳು ಕೇಂದ್ರ ಸರಕಾರಕ್ಕೆ ನೋಟೀಸ್ ಜಾರಿ ಮಾಡಿದೆ.

ಆರೋಗ್ಯ ಕೆಡಿಸುವ ಕುರುಕಲು ಆಹಾರ ಮಾತ್ರವಲ್ಲ ತಂಪು ಪಾನೀಯಗಳನ್ನು ಕೂಡ ಬ್ಯಾನ್ ಮಾಡಬೇಕೆಂದು ವಿದ್ಯಾರ್ಥಿಗಳ ವೇದಿಕೆ ಕೋರ್ಟನ್ನು ಕೋರಿದೆ. ಇಂದಿನ ದಿನಗಳಲ್ಲಿ ಎಲ್ಲೆಲ್ಲಿ ಶಾಲಾ ಕಾಲೇಜುಗಳಿವೆಯೋ ಅಲ್ಲಿ ಸುತ್ತಮುತ್ತಲೆಲ್ಲ ಕಾಂಡಿಮೆಂಟ್ಸ್ ಮಾರುವ ಅಂಗಡಿ ಇದ್ದೇ ಇರುತ್ತದೆ. ವ್ಯಾಪಾರ ನೂರಕ್ಕೆ ನೂರರಷ್ಟು ಖಾತ್ರಿ.

ಪಾಠಶಾಲೆಯಲ್ಲಿ ಮಾತ್ರ ಆರೋಗ್ಯ ಕಾಪಾಡುವ ಕುರಿತು ಗಂಟೆಗಟ್ಟಲೆ ಪಾಠ ಮಾಡುತ್ತಾರೆ, ಆದರೆ ಶಾಲೆಯ ಬಾಗಿಲಲ್ಲೇ ಜಂಕ್ ಆಹಾರಗಳು ಲಭ್ಯವಿದ್ದರೂ ಶಾಲೆ ಯಾವ ಕ್ರಮಗಳನ್ನೂ ತೆಗೆದುಕೊಳ್ಳುವುದಿಲ್ಲ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಫುಡ್ ಸೇಫ್ಟಿ ಅಂಡ್ ಸ್ಟಾಂಡರ್ಡ್ಸ್ ಅಥಾರಿಟಿ ಆಫ್ ಇಂಡಿಯಾಗೆ ಕೂಡ ನೋಟೀಸ್ ಜಾರಿಯಾಗಿದ್ದು, ಅರ್ಜಿಗೆ ಉತ್ತರ ನೀಡುವಂತೆ ಕೋರ್ಟ್ ಆಗ್ರಹಿಸಿದೆ.

English summary

Ban junk food in and around schools in Karnataka | ಶಾಲೆ ಸುತ್ತಮುತ್ತ ಜಂಕ್ ಆಹಾರ ನಿಷೇಧಿಸಿ

Should all the schools, govt and private, in Karnataka ban junk food and cool drinks around the schools? A debate has begun. Few sensible students in New Delhi have filed public interest petition in Delhi High Court requesting to ban sale of unhealthy junk food.
Story first published: Friday, January 13, 2012, 14:29 [IST]
X