For Quick Alerts
ALLOW NOTIFICATIONS  
For Daily Alerts

ಗಂಜಿ ಊಟ ಈಸ್‌ ಮೈ ಬ್ರೆಡ್‌-ಬಟರ್‌-ಜಾಮ್‌

By Super
|

ಗಂಜಿ ಊಟದ ಮುಂದೆ ಇನ್ನಾವ ಊಟ? ಪಂಚಭಕ್ಷ್ಯ ಪರಮಾನ್ನ.. ನಡೀ ಆಚೆ..

ಇವತ್ತು ಬೆಳಗ್ಗೆ ಗಂಜಿ ಉಣ್ಣುವಾಗ, ವಿಚಿತ್ರಾನ್ನದಲ್ಲಿ ಬಂದಿದ್ದ ಖಂಡೋಪಹಾರ ಗಂಜಿಯ ನೆನಪಾಯಿತು! ಪುಣ್ಯಕ್ಕೆ ‘ನಾನು ಚಿಕ್ಕವನಿದ್ದಾಗ....’ ಅಂತ ಗಂಜಿಯ ಬಗ್ಗೆ ಕತೆ ಹೇಳುವ ಹಂತವಿನ್ನೂ ನಾನು ತಲುಪಿಲ್ಲ. ಬದಲಿಗೆ ನನಗೆ ಬುದ್ಧಿ ಬಂದಾಗಿನಿಂದ ಇದುವರೆಗೂ, ಮುಂದೆ ಬುದ್ಧಿ ಕೆಡುವವರೆಗೂ ಬೆಳಗ್ಗಿನ ಉಪಾಹಾರಕ್ಕೆ ಗಂಜಿಗೇ ಜೈ ಅನ್ನುತ್ತೇನೆ ಅಂತ ವಿಶ್ವಾಸದಿಂದ ಹೇಳಲು ಖುಷಿ ಆಗುತ್ತದೆ.

ಸಣ್ಣವನಿದ್ದಾಗನಿಂದ ಇವತ್ತಿನವರೆಗೂ ಗಂಜಿಯ ರುಚಿಗೆ ಪ್ರತಿ ದಿನವೂ ಮಾರುಹೋಗುತ್ತೇನೆ ನಾನು. ಕೆಲವೊಮ್ಮೆ ಗಂಜಿ ಸ್ವಲ್ಪ ನೀರಾಗಿರಬಹುದು, ಇನ್ನು ಕೆಲವುಸಲ ಸ್ವಲ್ಪ ಗಟ್ಟಿ, ಉಳಿದ ದಿನ ಮೆತ್ತಗೆ - ಈ ವ್ಯತ್ಯಯಗಳೆಲ್ಲಾ ಅದರ ರುಚಿಯನ್ನು ದುಪ್ಪಟ್ಟಾಗಿಸುತ್ತವೆಯೇ ವಿನಃ ತಾತ್ಸಾರ ಮೂಡುವ ಪ್ರಶ್ನೆಯೇ ಇಲ್ಲ. ಅದೇ ರೀತಿ ಕೆಲವೊಮ್ಮೆ ಮನೆಯಲ್ಲಿ ಕಾಯಿಸಿದ ತುಪ್ಪವೋ ಅಥವಾ ನಂದಿನಿ ತುಪ್ಪವೋ ಅಥವಾ ಅಜ್ಜಿ ಕಳಿಸಿಕೊಡುವ ಪ್ಯೂರ್‌ ಹಸು-ವಿನ ತುಪ್ಪ (ಓಹ್‌ ಸಾರಿ, ಹಸು-ವಿನ ಪ್ಯೂರ್‌ ತುಪ್ಪ!) ಮುಂತಾದ ತುಪ್ಪದ ವೆರೈಟಿಗಳು, ಪರ್ಯಾಯವಾಗಿ ಬರುವ ಮಿಡಿ ಉಪ್ಪಿನಕಾಯಿ, ಅಡಂಗಾಯಿ ಅಥವಾ ಕೊತ್ತಂಬರಿ ಸೊಪ್ಪು ಚಟ್ನಿ ಮುಂತಾದ ನಂಜಿಕೊಳ್ಳುವ ಬಗೆಗಳು - ಇವೆಲ್ಲ ಗಂಜಿಯ ರುಚಿಯೇರಿಸಿ ಅದನ್ನು ಇಷ್ಟಪಡುವಂತೆ ಮಾಡುವಲ್ಲಿ ನೆರವಾಗುತ್ತವೆ.

ಆದರೆ ಈ ಗಂಜಿ ಬೆಳಗ್ಗೆಗೆ ಮಾತ್ರ ಮೀಸಲು. ತರಕಾರಿ, ಸೊಪ್ಪುಗಳಿಂದ ಸಾಮಾನ್ಯವಾಗಿ ದೂರವಿರುತ್ತಿದ್ದ ನಾನು ಮಧ್ಯಾಹ್ನ, ರಾತ್ರಿಗೂ ಗಂಜಿ ಬೇಕೆಂದು ಹಠ ಮಾಡಿದರೆ ಬಿಲ್‌ಕುಲ್‌ ಸಿಗುತ್ತಿರಲಿಲ್ಲ. ತರಕಾರಿ ತಿನ್ನಬೇಕೆಂಬ ಕರಾರಿನಿಂದಾಗಿ ಉಳಿದ ಹೊತ್ತಿನಲ್ಲಿ ಅನ್ನವೇ ಕಡ್ಡಾಯವಾಗಿತ್ತು.

ಈಗ ಬ್ರಹ್ಮಚರ್ಯ ಪಾಲನೆಯಿಂದಾಗಿ(?) ಸ್ವಯಂಪಾಕ ಮಾಡಬೇಕಾಗಿ ಬಂದಾಗ ಆ ಕಟ್ಟಳೆಗಳೆಲ್ಲ ನೀರುಪಾಲು. ಮೇಲೋಗರ ಮಾಡಲಿಕ್ಕೆ ತಡವಾದ ದಿನವೆಲ್ಲ ಮೂರು ಹೊತ್ತೂ ಗಂಜಿಯೇ ಗತಿ. ಆದರೆ ‘ಅತಿ ಪರಿಚಯಾದವಜ್ಞಾ’ ಅನ್ನುತ್ತಾರಲ್ಲ... ಹಾಗೆ ಆಫೀಸಿಂದ ಲೇಟಾಗಿ ಬಂದ ರಾತ್ರಿ ಚಪ್ಪೆ ಗಂಜಿ ಉಣ್ಣುವಾಗ ‘ಛೆ, ಒಂದು ರುಚಿಕಟ್ಟು ಬೇಳೆಸಾರು ಇದ್ದಿದ್ರೆ...’ ಅನ್ನುವ ಯೋಚನೆ ಬರದಿರುತ್ತದೆಯೇ? ಹಾಗೆ ಆದ ಕೂಡಲೇ ‘‘ನಾಳೆಯಿಂದ ಬೆಳಗ್ಗೆ ಮಾತ್ರ ಗಂಜಿ; ಸಂಜೆಗೆ ಪಲ್ಯವನ್ನೋ ಹುಳಿಯನ್ನೋ ಬೆಳಿಗ್ಗೆಯೇ ಬೇಗ ಎದ್ದು ಮಾಡಿಡುವೆ’’ ಎಂದು ರಿಸಾಲ್ವ್‌ ಮಾಡಿಬಿಡುತ್ತೇನೆ; ಆದರೆ ತಡವಾಗಿ ಮಲಗುವುದರಿಂದ ಮಾರನೆಯ ದಿನವೂ ಲೇಟಾಗಿ ಎದ್ದಾಗ ಆ ರಿಸಾಲ್ವ್‌ ಡಿಸಾಲ್ವ್‌ ಆಗಿರುತ್ತದೆ. ಮತ್ತೆ ಯಥಾ ಪ್ರಕಾರ ಕುಕ್ಕರಿನಲ್ಲಿ ಗಂಜಿ ಬೇಯುತ್ತದೆ.

ಮನೆಯಲ್ಲಿ ತಿನ್ನುತ್ತಿದ್ದ ಗಂಜಿಯನ್ನು ಈ ರೀತಿ ಅಪಮೌಲ್ಯ ಮಾಡಿದ್ದಕ್ಕಾಗಿ ನನ್ನ ಮೇಲೆಯೇ ಅಸಮಾಧಾನವಾಗಿ, ಅಂಗಡಿಯಲ್ಲಿ ಸಿಗುವ ನಂದಿನಿ/ನಾನ್‌-ನಂದಿನಿ ತುಪ್ಪಕ್ಕೆ ರುಚಿಯೂ ಇಲ್ಲದೆ ಹೋಗಿ, ಅಂತೂ ಮೊದಲಿನ ಗಂಜಿಯನ್ನು ಕಳೆದುಕೊಂಡಿದ್ದೇನೆ.

ನಮ್ಮನೆಯಲ್ಲಿ ವಾರವಿಡೀ ಗಂಜಿಯೇ ಫಳಾರವಾಗಿದ್ದರೂ ಆದಿತ್ಯವಾರದಂದು ಮಾತ್ರ ಬೇರೆ ತಿಂಡಿ. ದೋಸೆ, ಇಡ್ಲಿ ಮುಂತಾದುವುಗಳ ಜೊತೆಗೆ ಕಡುಬು (ಓಲಿಯಿಂದ ಮಾಡುವ ಮೂಡೆಗೇ ಪ್ರಾಶಸ್ತ್ಯ; ಹಲಸಿನ ಎಲೆಯದ್ದಕ್ಕೆ ಎರಡನೇ ದರ್ಜೆ), ಶ್ಯಾವಿಗೆ(ಸೇಮಗೆ ಎಂದು ಮನೆಯಲ್ಲಿ ಉಚ್ಚಾರ; ನೂಕಡ್ಯೆ - ಎಂಬುದು ಇನ್ನೊಂದು ಹೆಸರು; ಮನೆಗೆ ಬಂದ ಅತಿಥಿಗಳು ಹೋಗುವ ದಿನ ಇದನ್ನು ಮಾಡುತ್ತಾರೆ. ಬಂದವರು ಮೂರು ದಿನವಾದರೂ ಹೋಗದಿದ್ರೆ ಅವರನ್ನು ನೂಕಲಿಕ್ಕೆ ಮಾಡುವ ತಿಂಡಿ ಅಂತ ಆ ಹೆಸರಂತೆ), ಅಥವಾ ಚಪಾತಿ (ಸಣ್ಣವನಿದ್ದಾಗ ಹಾಲು + ಸಕ್ಕರೆ + ತುಪ್ಪ ಹಾಕ್ಕೊಳ್ತಿದ್ದೆ; ಮನೆಯಲ್ಲಿನ ಆಕ್ಷೇಪದ ನಡುವೆಯೂ ಈಗಲೂ ಅದೇ ಅಭ್ಯಾಸ ಮುಂದುವರೆದಿದೆ) ಜೊತೆಗೆ ಗುಳಿಯಪ್ಪ, ದೊಡ್ಣ ಮುಂತಾದ ದೋಸೆ + ಇಡ್ಲಿಗಳ ಅವತಾರಗಳು ಮುಂತಾದುವೂ ಜಾಗ ಪಡೆಯುತ್ತಿದ್ದವು(ಹೊಟ್ಟೆಯಲ್ಲಿ).

ಮೇಲೆ ಹೇಳಿದ ಗಟ್ಟಿ ತಿಂಡಿಗಳಿಗಷ್ಟೇ ಬೆಳಗ್ಗೆ ಸ್ಥಾನ. ಇನ್ನುಳಿದ ತಿಂಡಿಗಳಿಗೆಲ್ಲ ಸಂಜೆಗೆ ಡಿಮೋಟೆಡ್‌. ಬಜಗೋಳಿಯ ಗೋಳಿಬಜೆ, ಕುಜ್ಜೆಯ ಗಿಡ್ಡೆ(ಸಾಗುವಾನಿ ಎಲೆಯಿಂದ ಮಾಡುವ ಹಲಸಿನ ಕಡುಬು), ಈರಡ್ಯೆ(ಅರಿಶಿನ ಎಲೆ ಕಡುಬು), ಮಡ್ಡಿ, ಹುಗ್ಗಿ(ಹುಗ್ಗಿಯ ಹುಳಿಬಜ್ಜಿಯಂತೂ ಪ್ರಾಣ ನನಗೆ), ಮೊಸರೊಡೆ, ಉಪ್ಪಿಟ್ಟು+ಉಪ್ಕರಿ(ಸಜ್ಜಿಗೆ ಬಜಿಲ್‌), ಪತ್ರೊಡೆ, ಕ್ಷೀರಾ (ಕೇಸರಿಭಾತ್‌), ಅವಲಕ್ಕಿ ಒಗ್ಗರಣೆ, ಬಾಳೆಹಣ್ಣು ಬನ್ಸ್‌ ಇವೆಲ್ಲವೂ ಸಂಜೆ ತಿಂಡಿಗಷ್ಟೇ ಮೀಸಲು. ಅದರಲ್ಲೂ ಉಪ್ಪಿಟ್ಟು+ಉಪ್ಕರಿ ಮಾತ್ರ ನನಗೆ ಭಾರೀ ಆಶ್ಚರ್ಯ ತರುವ ಕಾಂಬಿನೇಷನ್‌.

ಯಾವ ರೀತಿಯಲ್ಲೂ ಕಾಂಪ್ಲಿಮೆಂಟರಿ ಎಂದನಿಸದ ಇವೆರಡು ಹೇಗೆ ಅಷ್ಟು ಅನ್ಯೋನ್ಯವಾದವು ಅಂತ ಕೆಲವೊಮ್ಮೆ ಮಂಡೆ ಸಜ್ಜಿಗೆಬಜಿಲಾಗ್ತದೆ. ನನಗೆ ಕಾಣುವ ಪ್ರಕಾರ ಒಂದು ಕಾಲದಲ್ಲಿ ಇವೆರಡಕ್ಕೂ ಅವಿನಾಭಾವ ಸಂಬಂಧ ಇರಲಿಲ್ಲ. ಯಾರಿಗೋ ಅಕಸ್ಮಾತ್ತಾಗಿ ಎರಡೂ ಒಟ್ಟಿಗೆ ತಿನ್ನುವ ಸಂದರ್ಭ ಬಂದು ಆ ರುಚಿಗೆ ಮಾರುಹೋದ ಆ ತಿಂದವರು ಅವೆರಡನ್ನೂ ಒಟ್ಟಾಗಿಸಿ ತಿನ್ನುವ ಸಂಪ್ರದಾಯ ತಂದರು ಅಂತ ನನ್ನ ಎಣಿಕೆ (ಕೇಸರಿಭಾತಿಗೆ ಸ್ವಲ್ಪ ಚಟ್ನಿ ತಾಗಿಸಿ ತಿನ್ನುವ ಹಾಗೆ). ಅವರಿಗೆ ಅನಂತ ಧನ್ಯವಾದ.

ಪುಣೆಯಲ್ಲಿದ್ದಾಗ ಅಲ್ಲಿನವರ ತಿಂಡಿ ಹವ್ಯಾಸಗಳು ನನ್ನನ್ನು ಪಜಲಿಗೀಡಾಗಿಸುತ್ತಿದ್ದವು. ಅವರಿಗೆ ವಡಾಪಾವ್‌ ಅಂದರೆ ಪಂಚಪ್ರಾಣ. ‘ಜೋಶಿ ವಡೇವಾಲೇ’ ಎಂಬ ಜಗತ್ಪ್ರಸಿದ್ಧ ಸರಣಿ ಅಂಗಡಿಗಳಲ್ಲಿ ಬೆಳಗ್ಗಿನಿಂದ ರಾತ್ರಿಯವರೆಗೂ ಬರೀ ವಡಾಪಾವ್‌ ತಿನ್ನುವ ಜನರು ಕಾಣುತ್ತಾರೆ. ಆ ಅಂಗಡಿಸರಣಿ ಎಷ್ಟು ಹೆಸರುವಾಸಿ ಎಂದರೆ, ಅವರ ಪ್ರತಿಯಾಂದು ಔಟ್‌ಲೆಟ್‌ನ ಎದುರಿಗೂ ‘ವಡೆವಾಲೆ ಜೋಶಿ’ ಎಂಬ ಕಾಂಪಿಟಿಟರ್‌ ಒಬ್ಬ ಹುಟ್ಟಿಕೊಂಡಿರುತ್ತಾನೆ. ವಡಾಪಾವಿನಂತೆ ಮಿಸಳ್‌ಪಾವ್‌, ಪಾವ್‌ಭಾಜಿ, ಚಿವ್‌ಡ ಇತ್ಯಾದಿಗಳೂ ಕೂಡ ಅಷ್ಟೇ ಮುಖ್ಯವಾದ ತಿಂಡಿಗಳು. ನನಗೆ ತೊಂದರೆಯಾಗುತ್ತಿದ್ದುದೆಂದರೆ ಬೆಳಗ್ಗೆ ಬರೀ ಹೊಟ್ಟೆಗೆ ಇಂಥಾ ಎಣ್ಣೆಮಯ ತಿಂಡಿಗಳನ್ನು ತಿಂದರೆ ಹೊಟ್ಟೆಯ ಗತಿಯೇನು ಎಂದು. ಅಲ್ಲದೆ ಚಕ್ಕುಲಿಯನ್ನು ಮೊಸರಿಗೆ ಮುಳುಗಿಸಿ ರುಚಿಯಾಗಿ ತಿನ್ನುವ ಕ್ರಮವನ್ನು ಅಲ್ಲಿ ಮಾತ್ರ ನೋಡಿದ್ದು ನಾನು!

ಪುಣೆಯಲ್ಲಿನ ‘ಪೋಹಾ’ಕ್ಕೆ ಮಾತ್ರ ನಾನು ಮಾರುಹೋದೆ ಎನ್ನಲೇಬೇಕು. ನಮ್ಮಲ್ಲಿನ ಅವಲಕ್ಕಿ ಒಗ್ಗರಣೆಗಿಂತಲೂ ಅದು ನನಗೆ ಆಕರ್ಷಕವಾಗಿ ಕಂಡಿತು. ಜೊತೆಗೆ ನಂಜಿಕೊಳ್ಳಲು ಉಪ್ಪಿನಲ್ಲಿ ಕಲಡಿಸಿ ಕೊಡುತ್ತಿದ್ದ ಕರಿದ ಹಸಿಮೆಣಸು. ಈಗಲೂ ರಜೆಯಲ್ಲಿ ಅದನ್ನು ಮಾಡಿಕೊಳ್ಳುವ ಅಭ್ಯಾಸವಿದೆ ನನಗೆ. ಹಸಿಮೆಣಸು ಕಾಯಿಸಿ ತಿನ್ನುವುದು ಒಳ್ಳೆಯದಲ್ಲ ಎಂದು ಮನವರಿಕೆಯಾದ ಮೇಲೆ ಅದನ್ನೊಂದು ಬಿಟ್ಟೆ. ಅಲ್ಲಿರುವಾಗಲೇ ನನಗೆ ಡೋಕ್ಲಾ, ದಾಬೇಲಿ ಮುಂತಾದ ರುಚಿಯಾದ ಗುಜರಾತಿ ತಿಂಡಿಗಳೂ ಪರಿಚಯವಾದವು.

ಮೈಸೂರಿನಲ್ಲಿ ನನ್ನ ರುಚಿಮೊಗ್ಗುಗಳಿಗೆ ಒಗ್ಗಿದ್ದು ರೋಗ ಕಳೆಯುವ ರಾಗಿ. ಹುರಿದ ರಾಗಿಗೆ ತೆಂಗಿನಕಾಯಿ, ಬೆಲ್ಲ, ಹಾಲು ಕಲೆಸಿ ಮುದ್ದೆ ಮಾಡಿ ತಿನ್ನುವ ಕ್ರಮವನ್ನು ಅಮ್ಮ ತಿಳಿಸಿದಾಗಿನಿಂದ ಅದೊಂದು ಪ್ರೀತಿಪಾತ್ರ ತಿಂಡಿಯಾಯಿತು ನನಗೆ. ಜೊತೆಗೆ ರಾಗಿ ದೋಸೆಯೂ. ಅರ್ಜೆಂಟಿಗೆ ಮಾಡ್ಲಿಕ್ಕೆ ತುಂಬಾ ಸುಲಭವಾಗಿ ಒದಗುತ್ತದೆ ಅದು.

ಅಂತೂ, ಖಂಡಾಂತರ ಪ್ರಲಾಪದಿಂದಾಗಿ ನನಗೂ ಮನಸ್ಸಿನಲ್ಲಿ ಮಂಡಿಗೆಯನ್ನು ತಿನ್ನುವ/ಮೆಲುಕು ಹಾಕುವ ಯೋಗ ಬಂದಿತು! ಅದಕ್ಕಾಗಿ ವಿಚಿತ್ರಾನ್ನದ ಜೋಶಿಯವರಿಗೆ ‘ಗಂಜಿದಾತಾ ಸುಖೀಭವ’ ಎಂದು ಹಾರೈಸುವೆ.

X
Desktop Bottom Promotion