For Quick Alerts
ALLOW NOTIFICATIONS  
For Daily Alerts

ಸುಸಂಸ್ಕೃತ ಮಜ್ಜಿಗೆಯೂ ನಮ್ಮ ಸಂಸ್ಕೃತಿಯೂ...

By Staff
|

ಮಜ್ಜಿಗೆ ಬೇಸಗೆಯಲ್ಲಿ ತಂಪು ನೀಡುವ ಆರೋಗ್ಯಕರ ಪಾನೀಯ. ಕೋಕ್‌-ಪೆಪ್ಸಿಗಳೂ ನೀಡಲಾರದ ಸಂತೃಪ್ತಿ-ತಂಪನ್ನು ಚಿಟಿಕೆ ಉಪ್ಪು ಸೇರಿಸಿದ ಒಂದು ಲೋಟ ಮಜ್ಜಿಗೆ ಕೊಡುತ್ತದೆ.

  • ಶ್ರೀವತ್ಸ ಜೋಶಿ

ಅಮೆರಿಕದ ಗ್ರೋಸರಿ ಸೂಪರ್‌ ಮಾರ್ಕೆಟ್‌ಗಳಲ್ಲಿ ಮಜ್ಜಿಗೆ ಸಿಗುತ್ತದೆ -'ಕಲ್ಚರ್‌ಡ್‌ ಬಟರ್‌ಮಿಲ್ಕ್‌’ ಎಂಬ ಲೇಬಲ್‌ನೊಂದಿಗೆ. ತಮಾಷೆಗೆ ನಾನು ಅದನ್ನು 'ಸುಸಂಸ್ಕೃತ ಮಜ್ಜಿಗೆ’ ಅನ್ನುವುದುಂಟು. ವಾಸ್ತವವಾಗಿ 'ಕಲ್ಚರ್‌ಡ್‌’ ಎಂದರೆ ಹಾಲಿಗೆ ಬ್ಯಾಕ್ಟೀರಿಯಾ ಕಲ್ಚರ್‌ಗಳನ್ನು ಸೇರಿಸಿ ತಯಾರಿಸಿದ ಮಜ್ಜಿಗೆ ಎಂದರ್ಥ. 'ಸ್ಟ್ರೆಪ್ಟೊಕಾಕಸ್‌ ಲಾಕ್ಟಿಸ್‌’ ಮತ್ತು 'ಲ್ಯಾಕ್ಟೋಕಾಕಸ್‌ ಲಾಕ್ಟಿಸ್‌’ - ಇವೇ ಆ ಬ್ಯಾಕ್ಟೀರಿಯಮ್‌ಗಳು ಹಾಲಿನಲ್ಲಿ ಭರತನಾಟ್ಯ ಮಾಡಿ (ಅಂದರೆ ಅದಕ್ಕೆ ಸಂಸ್ಕೃತಿಯ ಅಂಶವನ್ನು ಬೀರಿ) ಮಜ್ಜಿಗೆಯನ್ನು ತಯಾರಿಸುವಂಥವು. ಹಾಗೆ ತಯಾರಾದ ಮಜ್ಜಿಗೆಯೇ ಕಲ್ಚರ್‌ಡ್‌ ಬಟರ್‌ಮಿಲ್ಕ್‌!

'ಸುಸಂಸ್ಕೃತ ಮಜ್ಜಿಗೆಯ’ ಸಂಗತಿ ಅದಾದರೆ, ನಮ್ಮ ಭಾರತೀಯ, ಕನ್ನಡ ಸಂಸ್ಕೃತಿಯಲ್ಲಿ ಹಿಂದಿನಿಂದಲೂ, ಹಾಲಿಗೆ ಹೆಪ್ಪುಹಾಕಿ ಮಾರನೆ ದಿನ ಬೆಳ್ಳಂಬೆಳಿಗ್ಗೆ ಕಡಗೋಲಿಂದ ಕಡೆದು ಮಜ್ಜಿಗೆಯನ್ನು (ಚರ್ನ್‌ಡ್‌ ಬಟರ್‌ಮಿಲ್ಕ್‌) ಮಾಡುವುದು ಕ್ರಮ. ಮಜ್ಜಿಗೆ ಕಡೆಯುವುದು ಹಳ್ಳಿಯ ಮನೆಗಳ ಹಿರಿಯ ಹೆಂಗಸರ ದಿನಚರಿಯಲ್ಲೊಂದು; ಜತೆಯಲ್ಲೇ ಉದಯರಾಗ ಹಾಡೂ ಬೇಕಿದ್ದರೆ. ಮಜ್ಜಿಗೆ ಕಡೆಯುವುದಕ್ಕೆ ಎಷ್ಟೊಂದು ಧಾರ್ಮಿಕ ಭಾವ ಇರುತ್ತಿತ್ತೆಂದರೆ ಅಮಾವಾಸ್ಯೆಯಂದು ಮಜ್ಜಿಗೆ ಕಡೆಯದಿರುವ ಪದ್ಧತಿಯೂ ಕೆಲವರಲ್ಲಿತ್ತು. ಈಗೀಗ ಕಡಗೋಲು ಅಟ್ಟ ಸೇರಿದೆ. ವಿದ್ಯುತ್‌ ಚಾಲಿತ (ವಿದ್ಯುತ್‌ಪೂರೈಕೆ ಇದ್ದರೆ!) ಮಜ್ಜಿಗೆ ಕಡೆಯುವ ಯಂತ್ರಗಳನ್ನು ನೋಡಿದೆ, ಕಳೆದ ವರ್ಷ ನಮ್ಮೂರಿಗೆ ಹೋಗಿದ್ದಾಗ.

 

ಹಳ್ಳಿಯಾದರೂ ದಿಲ್ಲಿಯಾದರೂ ಮನೆಗಳಲ್ಲಿ ಮಜ್ಜಿಗೆ ಇದ್ದೇ ಇರುತ್ತದೆ. ಅಮೆರಿಕದಲ್ಲಿರುವ ಭಾರತೀಯರಲ್ಲೂ ತುಂಬ ಮಂದಿ (ವಿಶೇಷತಃ ದಕ್ಷಿಣ ಭಾರತ ಮೂಲದವರು) ಮನೆಯಲ್ಲೇ ಹಾಲಿಗೆ ಹೆಪ್ಪು ಹಾಕಿ ಮೊಸರು/ಮಜ್ಜಿಗೆ ಮಾಡುತ್ತಾರೆ. 'ಭಾರತದಿಂದ ಬರುವಾಗ ನಮ್ಮ ಫ್ಯಾಮಿಲಿ-ಫ್ರೆಂಡ್‌ ಒಬ್ಬರು ಕರ್ಡ್‌-ಸ್ಯಾಂಪಲ್‌ ತಂದಿದ್ದರು, ಅದರಿಂದ ಮಾಡಿದ ಮೊಸರು ಇದು...’ ಎಂದು ಹೆಮ್ಮೆಯಿಂದ ಗಟ್ಟಿ ಮೊಸರನ್ನು ಬಡಿಸುವವರನ್ನು ನಾನು ಕಂಡಿದ್ದೇನೆ. ಹೆಪ್ಪು, ತವರೂರಿನ ಹಚ್ಚಗಿನ ಬೆಚ್ಚನೆಯ ನೆನಪಿನ ಸಂಕೇತವಾಗಿ ವಿಮಾನ ಪ್ರಯಾಣ ಮಾಡಿ ಬಂದಿರುತ್ತದೆ! ಮತ್ತೆ ಇಲ್ಲಿ ನೆರೆಕೆರೆಯ ಸ್ನೇಹಿತೆಯರಿಗೂ 'ಇಂಡಿಯನ್‌ ಕರ್ಡ್‌ ಸ್ಯಾಂಪಲ್‌’ ವಿತರಣೆಯಾಗಿರುತ್ತದೆ!

ಹಾಲಿಗೆ ಹೆಪ್ಪು ಹಾಕಿ ಮೊಸರು/ಮಜ್ಜಿಗೆ ಮಾಡುವುದು; ಮರುದಿನ ಆ ಮಜ್ಜಿಗೆಯ ಒಂದು ಸಣ್ಣ ಸ್ಯಾಂಪಲ್‌ (ಹೆಪ್ಪು) ಹಾಲಿಗೆ ಹಾಕಿ ಮತ್ತೆ ಮೊಸರು/ಮಜ್ಜಿಗೆ ಮಾಡುವುದು. ಕೋಳಿ ಮೊದಲೋ ಮೊಟ್ಟೆ ಮೊದಲೋ ಎಂಬ ನ್ಯಾಯದಂತೆಯೇ ಇದು ಕೂಡ. ಇಂತಿರಲು 'ಹೆಪ್ಪಿನ ನವೀಕರಣ’ ಹೇಗೆ ಮಾಡುವುದು ಎಂದು ಯಾವಾಗಾದರೂ ಯೋಚಿಸಿದ್ದೀರಾ ? ವರ್ಷವಿಡೀ ಅನೂಚಾನವಾಗಿ ಬಂದ ಹಾಲು-ಹೆಪ್ಪು-ಮಜ್ಜಿಗೆ-ಹೆಪ್ಪು-ಹಾಲು ಚೈನನ್ನು ವರ್ಷಕ್ಕೊಮ್ಮೆ ನವೀಕರಿಸುವ ಪದ್ಧತಿ ಉಡುಪಿ ಜಿಲ್ಲೆಯ ನಮ್ಮೂರಲ್ಲಿ ಇದೆ (ನಮ್ಮ ಮನೆಯಲ್ಲಂತೂ ಹೌದು, ಇತರ ಕೆಲವರೂ ಅದನ್ನು ಮಾಡುತ್ತಾರೆ ಎಂದು ಕೇಳಿದ್ದೇನೆ). ಅಕ್ಟೋಬರ್‌ ತಿಂಗಳ ಆಸುಪಾಸಿನಲ್ಲಿ ಹದಿನಾಲ್ಕು ದಿನಗಳ ಅವಧಿಯಲ್ಲಿ 'ಸ್ವಾತಿ’ ಮಹಾನಕ್ಷತ್ರವಿದ್ದಾಗ ಬಿದ್ದ ಮಳೆನೀರನ್ನು (ಅಂಗಳದಲ್ಲಿ ಎತ್ತರದ ಸ್ಟೂಲ್‌ ಮೇಲೆ ಸ್ಟೀಲ್‌ ಬೋಗುಣಿಯಿಟ್ಟು ಡೈರೆಕ್ಟಾಗಿ ಮಳೆನೀರನ್ನು ಸಂಗ್ರಹಿಸಬೇಕು, ಮಳೆಮಾಪಕದಲ್ಲಿ ಸಂಗ್ರಹಿಸಿದಂತೆ) ಸಂಗ್ರಹಿಸಿ ಸುಮಾರು ಅರ್ಧ ಬೋಗುಣಿ ಸ್ವಾತಿಮಳೆ ನೀರಿಗೆ ಅಷ್ಟೇ ಪ್ರಮಾಣದಲ್ಲಿ ಬಿಸಿಮಾಡಿ ಸ್ವಲ್ಪವೇ ಆರಿಸಿದ ಹಾಲನ್ನು ಸೇರಿಸಿಡಬೇಕು. ಎರಡು ದಿನಗಳ ನಂತರ ಈ ಪಾತ್ರೆಯನ್ನು ತೆಗೆದುನೋಡಿದರೆ ಅದು ಮೊಸರಾಗಿರುತ್ತದೆ! ತಿನ್ನಲಿಕ್ಕೆ ರುಚಿರುಚಿ ಆಗಿರಲಾರದಾದರೂ ಹೆಪ್ಪಿನ ಹೊಸ ಸ್ಯಾಂಪಲ್‌ಗೆ ಅರ್ಹವಾಗಿರುತ್ತದೆ!

 

ಈ ಪದ್ಧತಿ ಮೂಢನಂಬಿಕೆಯಲ್ಲ. ಇದಕ್ಕೆ ವೈಜ್ಞಾನಿಕ ಪುಷ್ಠೀಕರಣವನ್ನೂ ಕೊಡಬಹುದು. ಸ್ವಾತಿ ನಕ್ಷತ್ರದ ಸೀಸನ್‌ ಅಂದರೆ ಅಕ್ಟೋಬರ್‌ ಆಸುಪಾಸಿನಲ್ಲಿ ಮುಂಗಾರು ಮಳೆ ಕೊನೆಗೊಳ್ಳುವಾಗ ಗುಡುಗು-ಮಿಂಚುಗಳ ಆರ್ಭಟ ಇದ್ದೇ ಇರುತ್ತದೆ. ಮಿಂಚು ಉಂಟಾದಾಗ ವಾತಾವರಣದಲ್ಲಿನ ಸಾರಜನಕ (ನೈಟ್ರೊಜನ್‌) ಮಿಂಚಿನ ಶಾಖೋತ್ಪತ್ತಿಯಿಂದಾಗಿ ನೈಟ್ರೇಟ್‌ ಆಗಿ ಪರಿವರ್ತಿತವಾಗುತ್ತದೆ. ನೈಟ್ರೇಟ್‌ ಕರಗಿದ ಮಳೆ ನೀರಿಗೆ ವಿಶೇಷ ಆಮ್ಲೀಯ ರಾಸಾಯನಿಕ ಗುಣವಿರುತ್ತದೆ. ಹಾಲನ್ನು ಮೊಸರಾಗಿಸುವುದರಲ್ಲಿ ಅದು ಶಕ್ತವಾಗುತ್ತದೆ. 'ಸ್ವಾತ್ಯಾಂ ಸಾಗರಶುಕ್ತಿಮಧ್ಯಪತಿತಂ ತನ್ಮೌಕ್ತಿಕಂ ಜಾಯತೆ ।’ ಎಂಬ ಸುಭಾಷಿತ ಸಾಲಿನಲ್ಲಿ ಹೇಳಿದಂತೆ ಸ್ವಾತಿ ನಕ್ಷತ್ರದಲ್ಲಿ ಮಳೆನೀರು ಸಮುದ್ರ ಚಿಪ್ಪಿನಲ್ಲಿ ಬಿದ್ದರೆ ಮುತ್ತು ಆಗುತ್ತದೆ ಎಂಬುದರ ಹಿಂದಿನ ವೈಜ್ಞಾನಿಕ ಸತ್ಯವೂ ಅದೇ! ('ಸ್ವಾತಿಮುತ್ತಿನ ಮಳೆಹನಿಯೆ... ಮೆಲ್ಲಮೆಲ್ಲನೆ ಧರೆಗಿಳಿಯೆ...’ ಎಂಬ ರವಿಚಂದ್ರನ್‌ ಸಿನೆಮಾಹಾಡಿನ 'ಮುತ್ತಿನ’ ಕತೆಯೂ ಅದೇ!?)

ಮಜ್ಜಿಗೆ ಬೇಸಗೆಯಲ್ಲಿ ತಂಪು ನೀಡುವ ಆರೋಗ್ಯಕರ ಪಾನೀಯ. ಕೋಕ್‌-ಪೆಪ್ಸಿಗಳೂ ನೀಡಲಾರದ ಸಂತೃಪ್ತಿ-ತಂಪನ್ನು ಚಿಟಿಕೆ ಉಪ್ಪು ಸೇರಿಸಿದ ಒಂದುಲೋಟ ಮಜ್ಜಿಗೆ ಕೊಡುತ್ತದೆ. ಬೇಸಗೆಯಲ್ಲಿ ನಡೆಯುವ ಪಿಕ್‌ನಿಕ್‌ಗಳು, ಆಟೋಟಗಳು, ಗೆಟ್‌-ಟುಗೆದರ್‌ಗಳಲ್ಲಿ , ಹಸಿಮೆಣಸು-ಶುಂಠಿ-ಕೊತ್ತುಂಬರಿ ಮಿಶ್ರಿತ ಮಸಾಲೆ ಮಜ್ಜಿಗೆ ಸಕತ್‌ ಮೆಚ್ಚುಗೆ ಪಡೆಯುತ್ತದೆ. ಊಟೋಪಚಾರದಲ್ಲೂ ಮಜ್ಜಿಗೆ ಹುಳಿ ಇದ್ದರೆ ಅದರ ವೈಭವವೇ ಬೇರೆ! ಉತ್ತರಕನ್ನಡ-ಶಿವಮೊಗ್ಗಗಳಲ್ಲಿ 'ಹಶಿ’ ಎಂದು ಮಜ್ಜಿಗೆಯಿಂದ ಮಾಡಿದ ಒಂದಲ್ಲ ಒಂದು ನಮೂನೆಯ ತಂಬುಳಿ ಊಟಕ್ಕೆ ಇರುತ್ತದೆ. ಬಾಯಲ್ಲಿ ನೀರೂರಿಸುವ ಬಾಳಕ ಮೆಣಸಿನಕಾಯಿ ಮಾಡುವುದಕ್ಕೂ ಮಜ್ಜಿಗೆ ಬೇಕೇಬೇಕು. ಹಸಿಮೆಣಸಿನಕಾಯಿಗಳನ್ನು ಸ್ವಲ್ಪ ಸೀಳು ಮಾಡಿ ಮಸಾಲೆ ತುಂಬಿಸಿ ಮಜ್ಜಿಗೆಯಲ್ಲಿ ಅದ್ದಿ ತೆಗೆದು ಬಿಸಿಲಲ್ಲಿ ಒಣಗಿಸಿಟ್ಟರೆ ಮಳೆಗಾಲದ ದಿನಗಳಲ್ಲಿ ಧೋ ಎಂದು ಮಳೆ ಸುರಿಯುತ್ತಿರುವಾಗ ಊಟದ ವೇಳೆ ನೆಂಚಿಕೊಳ್ಳಲಿಕ್ಕೆ ಕರಿದು ತಿನ್ನಲು ಅದೆಂಥ ರುಚಿ !

ಮಜ್ಜಿಗೆ ಇಷ್ಟೆಲ್ಲ ನಮ್ಮ ದೈನಂದಿನ ಆಹಾರಕ್ರಮದಲ್ಲಿ, ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿದ್ದರೂ ಇತರ ಹೈನು ಪದಾರ್ಥಗಳಾದ ಹಾಲು, ಮೊಸರು, ಬೆಣ್ಣೆ ಮತ್ತು ತುಪ್ಪಗಳಿಗೆ ಹೋಲಿಸಿದರೆ ಮಜ್ಜಿಗೆಗೆ ಸಂದಿರುವ 'ಮರ್ಯಾದೆ’ ಕಡಿಮೆ ಎಂದು ನನ್ನ ಅಭಿಪ್ರಾಯ. ದೇವರ ಪೂಜೆಯ ಷೋಡಷೋಪಚಾರಗಳಲ್ಲಿ ಹಾಲು-ಮೊಸರು-ಬೆಣ್ಣೆ-ತುಪ್ಪ ಗಳ ಉಲ್ಲೇಖ ಬರುತ್ತದಾದರೂ ಮಜ್ಜಿಗೆಯ ಪ್ರಸ್ತಾಪವಿಲ್ಲ. ವಿರಾಗಿಯಾಗಿ ದಿಗಂಬರನಾಗಿ ನಿಂತ ಗೋಮಟೇಶ್ವರನಿಗೂ ಮಹಾಮಸ್ತಕಾಭಿಷೇಕದ ವೇಳೆ ಹಾಲು, ತುಪ್ಪ, ಮೊಸರುಗಳ ಅಭ್ಯಂಜನ. ಉಡುಪಿ ಕೃಷ್ಣನಿಗೆ ನವನೀತ (ಬೆಣ್ಣೆ) ಅಲಂಕಾರ. ಬುಸ್‌ ಬುಸ್‌ ನಾಗಪ್ಪನಿಗೆ ಪಂಚಮಿಯಂದು ಹಾಲು. ಹೋಮಹವನಾದಿಗಳಲ್ಲಿ ಅಗ್ನಿಗೆ ಹವಿಸ್ಸು, ಸಮಿಧೆಗಳನ್ನು ತುಪ್ಪದಲ್ಲಿ ಮುಳುಗಿಸಿಯೇ ಅರ್ಪಿಸುವುದು. ಮಜ್ಜಿಗೆ ಅದೇನು ಪಾಪ ಮಾಡಿದೆಯೋ... ದೇವಾನಾಂಪ್ರಿಯ ಎಂದು ಅದು ಕರೆಯಿಸಿಕೊಂಡಂತಿಲ್ಲ. ಪುರಂದರದಾಸರು ಕೂಡ ತಮ್ಮ 'ಭಾಗ್ಯದ ಲಕ್ಷ್ಮಿ ಬಾರಮ್ಮಾ...’ ಕೀರ್ತನೆಯಲ್ಲಿ ಹೆಜ್ಜೆಯ ಮೇಲೆ ಹೆಜ್ಜೆ... ಗೆಜ್ಜೆಯ ಕಾಲ್ಗಳ ನಾದ... ಸಜ್ಜನಸಾಧು ಪೂಜೆ... ಇತ್ಯಾದಿಗೆ ಪ್ರಾಸಬದ್ಧವಾಗುವಂತೆ 'ಮಜ್ಜಿಗೆ’ಯನ್ನು ಉಪಯೋಗಿಸಿದರೇ ವಿನಹ ಕೊನೆಗೆ ಅವರೂ ಲಕ್ಷ್ಮಿಯನ್ನು ಹೋಲಿಸಿದ್ದು ಮಜ್ಜಿಗೆಯಾಳಗಿನ ಬೆಣ್ಣೆಗೆ!

ಮತ್ತೆ 'ಕಲ್ಚರ್‌ಡ್‌ ಬಟರ್‌ಮಿಲ್ಕ್‌’ ಬಳಸುವ ಅಮೆರಿಕನ್ನರ ಸಂಸ್ಕೃತಿಯಲ್ಲಿ ಮಜ್ಜಿಗೆಯ ರೆಫರೆನ್ಸ್‌ ನೋಡಿದರೆ ನಿರಾಶೆಯಾಗುವುದಿಲ್ಲ. ನ್ಯೂಯಾರ್ಕ್‌ ಬಂದರಿನ ಒಂದು ಕಾಲುವೆಗೆ (ಬ್ರೂಕ್‌ಲಿನ್‌ ಮತ್ತು ಗವರ್ನರ್ಸ್‌ ಐಲ್ಯಾಂಡ್‌ ನಡುವಿನ ಜಲಮಾರ್ಗ) ಬಟರ್‌ಮಿಲ್ಕ್‌ ಚಾನೆಲ್‌ ಎಂಬ ಹೆಸರಿದೆ. 17ನೇ ಶತಮಾನದಲ್ಲೇ ಈ ನಾಮಕರಣವಾಗಿದೆಯಂತೆ - ಡಚ್‌ ಗೊಲ್ಲತಿಯರು ಮಜ್ಜಿಗೆ ಮಾರಲು ದೋಣಿಗಳಲ್ಲಿ ಆ ಕಾಲುವೆಯ ಮೂಲಕ ಹೋಗುತ್ತಿದ್ದರಂತೆ. ನ್ಯೂಯಾರ್ಕ್‌ ರಾಜ್ಯದಲ್ಲೇ 'ಬಟರ್‌ಮಿಲ್ಕ್‌ ಫಾಲ್ಸ್‌’ ಎಂಬ ಸುಂದರ ಜಲಪಾತವೂ ಇದೆ. ಮಜ್ಜಿಗೆಯನ್ನು ಕಡೆಯುವಾಗಿನ ನೊರೆನೊರೆಯಂತೆ ಅಲ್ಲಿ ನೀರು ಹರಿಯುವುದರಿಂದ ಆ ಹೆಸರು!

ಮಜ್ಜಿಗೆಯನ್ನು ಬಣ್ಣಿಸುವ ಸಂಸ್ಕೃತ ಸುಭಾಷಿತದೊಂದಿಗೆ ಈ ಹರಟೆಯನ್ನು ಮುಗಿಸುವಾ.

ಘೃತಂ ನ ಶ್ರೂಯತೆ ಕರ್ಣೆ ದಧಿ ಸ್ವಪ್ನೆಪಿ ದುರ್ಲಭಮ್‌ ।

ಮುಗ್ಧೆ ದುಗ್ಧಸ್ಯ ಕಾ ವಾರ್ತಾ ತಕ್ರಂ ಶಕ್ರಸ್ಯ ದುರ್ಲಭಮ್‌ ।।

ಮನೆಯಲ್ಲಿ ಕ್ಷೀರೋತ್ಪನ್ನಗಳಿಗೆ ತತ್ವಾರ ಎಷ್ಟಿದೆಯೆಂಬುದನ್ನು ಬಡವನೊಬ್ಬ ತನ್ನ ಹೆಂಡತಿಯಾಂದಿಗೆ ತೋಡಿಕೊಳ್ಳುವ ಸನ್ನಿವೇಶ. 'ತುಪ್ಪ ಎಂದು ಕೇಳಿಯೇ ಗೊತ್ತಿಲ್ಲ. ಮೊಸರನ್ನು ಕನಸಲ್ಲೂ ಕಂಡಿಲ್ಲ. ಹಾಲಿನ ಸಮಾಚಾರವೇನನ್ನು ಹೇಳಲಿ ಮುಗ್ಧೆಯೇ, ಮಜ್ಜಿಗೆಯೂ ನನ್ನ ಪಾಲಿಗೆ ಇಂದ್ರಪದವಿಯಷ್ಟು ದುರ್ಲಭವಾಗಿದೆ....’ ಎಂಬ ಗೋಳು.

English summary

Buttermilk : Utterly butterly tasty tasty !

Buttermilk : Utterly butterly tasty tasty !
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more