For Quick Alerts
ALLOW NOTIFICATIONS  
For Daily Alerts

ಥಟ್ ಅಂತ ಮನೆಯಲ್ಲಿಯೇ ಮಾಡಿ ರವೆ ಇಡ್ಲಿ!

By Arshad
|

ಒಂದು ವೇಳೆ ನೀವು ದಕ್ಷಿಣ ಭಾರತೀಯ ತಿನಿಸುಗಳನ್ನು ಇಷ್ಟಪಡುವವರೇ ಆಗಿದ್ದರೆ ನಿಮಗೆ ಇಡ್ಲಿಯೂ ತುಂಬಾ ಇಷ್ಟವಾದ ತಿಂಡಿಯಾಗಿರಲೇಬೇಕು. ಅದರಲ್ಲೂ ಅತಿ ಕಡಿಮೆ ಎಣ್ಣೆಯ ಅಂಶದೊಡನೆ ಆವಿಯಲ್ಲಿ ಬೆಂದ ಅಕ್ಕಿ ಇಡ್ಲಿ ಅತ್ಯಂತ ಆರೋಗ್ಯಕರವಾಗಿದ್ದು ಬೆಳಗ್ಗಿನ ಉಪಹಾರಕ್ಕೂ ಸಂಜೆಯ ತಿಂಡಿಗೂ ಸೂಕ್ತವಾಗಿದೆ. ಸಾಂಬಾರಿನೊಂದಿಗೂ, ಚಟ್ನಿಯೊಂದಿಗೂ, ಬೆಲ್ಲದನೀರು, ಜೇನು, ಸಾರು ಎಲ್ಲದರೊಡನೆ ಬೆರೆತು ತಿನ್ನಬಹುದಾದ ಇಡ್ಲಿ ಪ್ರತಿ ಮನೆಯಲ್ಲಿಯೂ ತಪ್ಪದೇ ತಯಾರಾಗುತ್ತದೆ. ಆದರೆ ಇದನ್ನು ತಯಾರಿಸಲು ಹೆಚ್ಚಿನ ಸಮಯ ಬೇಕು ಎಂಬುದೇ ಹೇಳಿಕೊಳ್ಳಬಹುದಾದ ಋಣಾತ್ಮಕ ಅಂಶ.

ಆದರೆ ಈಗ ಥಟ್ ಅಂತ ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದಾದ ರವೆ ಇಡ್ಲಿ ಈ ಋಣಾತ್ಮಕ ಅಂಶವನ್ನೂ ಬದಿಗಿರಿಸಿದೆ. ಹೇಗೆ? ಈ ಪ್ರಶ್ನೆಗೆ ಕೆಳಗಿನ ರೆಸಿಪಿ ಉತ್ತರ ನೀಡಲಿದೆ. ಇನ್ನು ಮುಂದೆ ಧಾವಂತದ ಸಮಯದಲ್ಲಿಯೂ ರುಚಿಯಾದ ರವೆ ಇಡ್ಲಿ ಸವಿದು ನಗುನಗುತ್ತಾ ನಿಮ್ಮ ಕೆಲಸಗಳಿಗೆ ಹೊರಡಬಹುದು!

ಥಟ್ ಅಂತ ತಯಾರಿಸಿ ಬೆಳಗ್ಗಿನ ಉಪಾಹಾರಕ್ಕೆ ಮಾತ್ರವಲ್ಲ, ಮಕ್ಕಳ ಮಧ್ಯಾಹ್ನದ ಊಟಕ್ಕೂ ಬುತ್ತಿ ಕಟ್ಟಿ ಕಳಿಸಬಹುದು. ಇದರಲ್ಲಿ ಬಳಸಲಾಗಿರುವ ಸಾಮಾಗ್ರಿಗಳು ಅತ್ಯಂತ ಆರೋಗ್ಯಕರವಾಗಿದ್ದು ಹೆಚ್ಚು ಹೊತ್ತು ಹೊಟ್ಟೆಯನ್ನು ತುಂಬಿಸಿರಲು ನೆರವಾಗುತ್ತದೆ. ಈ ಇಡ್ಲಿಗಳನ್ನು ಸುಲಭವಾಗಿ ಹಾಗೂ ಕಡಿಮೆ ಸಮಯದಲ್ಲಿ ತಯಾರಿಸಬಹುದು. ಬನ್ನಿ, ಈ ವಿಧಾನವನ್ನು ನೋಡೋಣ...

rava Idli recipe

ಪ್ರಮಾಣ: ಐದು ಇಡ್ಲಿಗಳಿಗಾಗಿ
*ಸಿದ್ಧತಾ ಸಮಯ: ಹದಿನೈದು ನಿಮಿಷಗಳು
*ತಯಾರಿಕಾ ಸಮಯ : ಹತ್ತು ನಿಮಿಷಗಳು

ಅಗತ್ಯವಿರುವ ಸಾಮಾಗ್ರಿಗಳು: (ಹಿಟ್ಟಿಗೆ)
*ರವೆ: (ಇಡ್ಲಿ ರವೆ) ಒಂದು ಕಪ್
*ಮೊಸರು: ಕಾಲು ಕಪ್
*ಕೊತ್ತಂಬರಿ ಸೊಪ್ಪಿನ ಎಲೆಗಳು: ಒಂದು ದೊಡ್ಡ ಚಮಚ (ಚಿಕ್ಕದಾಗಿ ಹೆಚ್ಚಿದ್ದು)
*ಸೋಡಿಯಂ ಬೈಕಾರ್ಬೋನೇಟ್ ಉಪ್ಪು (Fruit Salt) - ಮುಕ್ಕಾಲು ಚಮಚ
*ಸಾಮಾನ್ಯ ಉಪ್ಪು: ರುಚಿಗನುಸಾರ

ಅಡುಗೆ ಮನೆಯಲ್ಲಿ ಅರಳಿದ ಘಮಘಮಿಸುವ ರವೆ ಇಡ್ಲಿ!

ಇತರ ಸಾಮಾಗ್ರಿಗಳು:
*ಎಣ್ಣೆ : ಒಂದು ಚಿಕ್ಕ ಚಮಚ
*ತುಪ್ಪ: ಅರ್ಧ ಚಿಕ್ಕ ಚಮಚ
*ಉದ್ದಿನ ಬೇಳೆ : ಒಂದು ಚಿಕ್ಕ ಚಮಚ
*ಸಾಸಿವೆ: ಅರ್ಧ ಚಿಕ್ಕ ಚಮಚ
*ಗೋಡಂಬಿ : ಒಂದು ದೊಡ್ಡ ಚಮಚ (ಚಿಕ್ಕದಾಗಿ ತುಂಡರಿಸಿದ್ದು)
*ಜೀರಿಗೆ : ಅರ್ಧ ಚಿಕ್ಕ ಚಮಚ
*ಕರಿಬೇವಿನ ಎಲೆಗಳು: ನಾಲ್ಕು
*ಹಸಿಮೆಣಸು: ಎರಡು ಚಿಕ್ಕ ಚಮಚ (ಚಿಕ್ಕದಾಗಿ ಕತ್ತರಿಸಿದ್ದು)
*ಇಂಗು : ಚಿಟಿಕೆಯಷ್ಟು

ಅಡುಗೆ ಮನೆಯಲ್ಲಿ ಅರಳಿದ ರುಚಿ ರುಚಿಯಾದ ರಾಗಿ ಇಡ್ಲಿ

ವಿಧಾನ:
1. ಮೊದಲು ಒಂದು ದೊಡ್ಡ ಬೋಗುಣಿಯಲ್ಲಿ ರವೆ ಮತ್ತು ಮೊಸರನ್ನು ಬೆರೆಸಿ ಉಪ್ಪು ಚಿಮುಕಿಸಿ ಕೊಂಚ ಮಿಶ್ರಣ ಮಾಡಿ. ಬಳಿಕ ನಿಧಾನವಾಗಿ ನೀರನ್ನು ಬೆರೆಸುತ್ತಾ ಗಂಟುಗಳಿಲ್ಲದಂತೆ ಕಲಸಿ ಪಕ್ಕಕ್ಕಿಡಿ.
2. ಈ ಹಿಟ್ಟನ್ನು ಗಟ್ಟಿಗೊಳಿಸೋಣ. ಒಂದು ಚಿಕ್ಕ ಪಾತ್ರೆಯಲ್ಲಿ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿಮಾಡಿ. ಇದಕ್ಕೆ ಸಾಸಿವೆ, ಉದ್ದಿನ ಬೇಳೆ, ಕರಿಬೇವಿನ ಎಲೆ, ಗೋಡಂಬಿ, ಜೀರಿಗೆ, ಇಂಗು ಹಾಕಿ ಚೆನ್ನಾಗಿ ಬಾಡಿಸಿ.
3. ಎಲ್ಲವೂ ಚೆನ್ನಾಗಿ ಕೆಂಪಗಾಗಿ ಹುರಿದ ಬಳಿಕ ಈ ಒಗ್ಗರಣೆಯನ್ನು ಮೊದಲು ಕಲಸಿಟ್ಟ ಹಿಟ್ಟಿಗೆ ಹಾಕಿ ಮಿಶ್ರಣ ಮಾಡಿ. ಇದಕ್ಕೆ ಸೋಡಿಯಂ ಬೈಕಾರ್ಬೋನೇಟ್ ಉಪ್ಪನ್ನು ಹಾಕಿ ಕೊಂಚವೇ ನೀರನ್ನು ಬೆರೆಸಿ (ಇಡ್ಲಿಹಿಟ್ಟಿನ ಹದ ಬರುವಷ್ಟು) ಕಲಸಿ. ಈಗ ಹಿಟ್ಟು ಕೊಂಚ ಉಬ್ಬತೊಡಗುತ್ತದೆ. ತಕ್ಷಣವೇ ಇನ್ನಷ್ಟು ಕಲಸಿ ಉಬ್ಬುವುದು ಪೂರ್ಣ ನಿಲ್ಲುವವರೆಗೆ ಮುಂದುವರೆಸಿ. ಈಗ ನಿಮ್ಮ ಇಡ್ಲಿಪಾತ್ರೆಯಲ್ಲಿ ನೀರನ್ನು ಬಿಡಿಮಾಡಿ ಇಡ್ಲಿಗಳನ್ನು ಬಿಡುವ ಅಚ್ಚಿನ ತಟ್ಟೆ ಅಥವಾ ಚಿಕ್ಕ ಬಟ್ಟಲುಗಳ ಒಳಗೆ ಕೊಂಚವೇ ಎಣ್ಣೆಯನ್ನು ಒರೆಸಿ ಇಡ್ಲಿ ಹಿಟ್ಟನ್ನು ತುಂಬಿಸಿ ಇಡ್ಲಿಪಾತ್ರೆಯಲ್ಲಿರಿಸಿ ಮುಚ್ಚಳ ಮುಚ್ಚಿ.
4. ಸಾಮಾನ್ಯ ಇಡ್ಲಿಪಾತ್ರೆಯಲ್ಲಿ ಈ ಇಡ್ಲಿಗಳು ಬೇಯಲು ಸುಮಾರು ಏಳರಿಂದ ಎಂಟು ನಿಮಿಷ ಸಾಕು. ಬಳಿಕ ಇಡ್ಲಿಗಳನ್ನು ಹೊರತೆಗೆದು ಚಮಚವೊಂದನ್ನು ಉಪಯೋಗಿಸಿ ಬಿಸಿ ಇಡ್ಲಿಗಳನ್ನು ತಟ್ಟೆಯ ಮೇಲಿರಿಸಿ. ಪ್ರತಿ ಇಡ್ಲಿಯ ಮೇಲೆ ಕೊಂಚವೇ ತುಪ್ಪವನ್ನು ಸವರಿ ರುಚಿಯಾದ ಇಡ್ಲಿಗಳನ್ನು ಆಸ್ವಾದಿಸಲು ತಯಾರಾಗಿ ನಿಮ್ಮನ್ನೇ ಎದುರುನೋಡುತ್ತಿರುವ ಮಕ್ಕಳಿಗೆ ಹಾಗೂ ಮನೆಯ ಸದಸ್ಯರಿಗೆ ಬಡಿಸಿ. ಸಾಂಬಾರ್ ಅಥವಾ ಚಟ್ನಿಯೊಂದಿಗೆ ಈ ಇಡ್ಲಿಗಳು ಅತ್ಯಂತ ರುಚಿಕರವಾಗಿರುತ್ತವೆ. ಈ ಇಡ್ಲಿಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮಗೆ ಖಂಡಿತಾ ಬರೆದು ತಿಳಿಸಿ. ಇದಕ್ಕಾಗಿ ಕೆಳಗಿನ ಕಮೆಂಟ್ಸ್ ಭಾಗವನ್ನು ಉಪಯೋಗಿಸಿ.

ಸಲಹೆ
*ಮಧುಮೇಹಿಗಳಿಗೆ ಮತ್ತು ಅತಿ ಒತ್ತಡದಿಂದ ಬಳಲುತ್ತಿರುವವರಿಗೆ ಇದು ಸೂಕ್ತವಾದ ರೆಸಿಪಿಯಾಗಿದೆ
*ಉತ್ತಮ ಫಲಿತಾಂಶಕ್ಕಾಗಿ ಇಡ್ಲಿಯ ಹಿಟ್ಟು ತಯಾರಾದ ತಕ್ಷಣ ಇಡ್ಲಿ ಪಾತ್ರೆಯಲ್ಲಿ ಬೇಯಲು ಇಡಿ. ತಡವಾದಷ್ಟೂ ಇಡ್ಲಿ ಹೆಚ್ಚು ಧೃಢವಾಗುತ್ತಾ ಹೋಗುತ್ತದೆ.

English summary

Morning Breakfast: Tips to make Instant rava Idli recipe

Prepare it for breakfast or you can pack it for lunch to your kids. The entire recipe is super healthy; if you are on a diet and keep your lunch light, go for small rava idlis. So, read this simple method on how to make rava idlis. Here are the ingredients and the recipe of rava idlis that you can prepare quickly and at ease. Read on to know more.
X
Desktop Bottom Promotion