For Quick Alerts
ALLOW NOTIFICATIONS  
For Daily Alerts

ಮನಮೋಹಕ ಉದ್ದಿನವಡೆಗಳು

By * ರೆಸಿಪಿ ರಾಘಣ್ಣ, ಚಾಮರಾಜಪೇಟೆ
|
Delicious Uddina Vada
ದಕ್ಷಿಣ ಭಾರತದ ಸಸ್ಯಾಹಾರಿ ತಿಂಡಿತಿನಿಸುಗಳ ಹರಿವಾಣದಲ್ಲಿ ಉದ್ದಿನವಡೆಗೆ ವಿಶೇಷವಾದ ಸ್ಥಾನಮಾನ. ಕರಿದ ತಿಂಡಿಗಳ ಪಟ್ಟಿಯಲ್ಲಿ ಸಾವಿರ ಬಗೆ ಇರಬಹುದು, ಆದರೆ ಉದ್ದಿನವಡೆಗೆ ಉದ್ದಿನವಡೆಯೇ ಸಾಕ್ಷಿ. ಉದ್ದಿನವಡೆಗೆ ಮನಸೋಲದವರೇ ಕಮ್ಮಿ. ದೊಡ್ಡ ಬಾಣಲೆಯಲ್ಲಿ, ಕುದಿಯುತ್ತಿರುವ ಎಣ್ಣೆಯಲ್ಲಿ ಉದ್ದಿನ ಹಿಟ್ಟು ಮೀಯುತ್ತಿದ್ದರೆ ಅದನೋಡಿದವರ ಬಾಯಲ್ಲಿ ನೀರೂರದಿದ್ದರೆ ಅವರು ಸನ್ಯಾಸಿಯೇ ಸರಿ!ಈ ವಾರಾಂತ್ಯದ ರಜೆಯ ಅವಧಿಯಲ್ಲಿ ಉದ್ದಿನವಡೆ ಮಾಡಿಯೇ ತೀರೋಣ. ಜತೆಗೆ ನಿಮಗೆ ಇಷ್ಟವಾಗುವ ಇಡ್ಲಿ ಕುಕ್ಕರ್ ನಲ್ಲಿ ರೆಡಿಯಿರಲಿ.

ಉದ್ದಿನವಡೆ ಮಾಡುವುದಕ್ಕೆ ಜಾಸ್ತಿ ಪದಾರ್ಥಗಳ ಅವಶ್ಯಕತೆಯಿಲ್ಲ. ಸ್ವಲ್ಪ ಸಮಯ ಜಾಸ್ತಿ ಇದ್ದರೆ ವಡೆ ಮಾಡುವುದು ಬ್ರಹ್ಮವಿದ್ಯೆ ಅಲ್ಲ. ಒಟ್ಟು ಏಳು ಐಟಂ ಬೇಕು. ಮನೆಯಲ್ಲಿ ನಿತ್ಯ ಬಳಸುವ ಬಾಣಲೆ. ಅದರಲ್ಲಿ ಅರ್ಧಕ್ಕಿಂತ ಚೂರು ಮೇಲೆ ಬರುವಷ್ಟು ಎಣ್ಣೆ. ಉದ್ದಿನಬೇಳೆ ಒಂದು ಲೋಟ, ಹಸಿಮೆಣಸಿನಕಾಯಿ ಏಳೆಂಟು, ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು, ಪುಡಿ ಮಾಡಿದ ಚಿಟಿಕೆ ಇಂಗು, ತುರಿದ ಹಸಿಶುಂಠಿ ಸ್ವಲ್ಪ ಹೆಚ್ಚಿಗೆ ಇರಲಿ. ಉಪ್ಪು ರುಚಿಗೆ ಒಪ್ಪುವಷ್ಟು.

* ಉದ್ದಿನಬೇಳೆಯನ್ನು ಎರಡು ಗಂಟೆಗಳ ಕಾಲ ಎರಡು ಕಪ್ ನೀರಿನಲ್ಲಿ ನೆನೆಸಿಡಿ.
* ನೀರನ್ನು ಪೂರ್ಣ ಬಸಿದು ಹಸಿಮೆಣಸಿನಕಾಯಿ, ಉಪ್ಪು ಮತ್ತು ಇಂಗಿನಪುಡಿ ಹಾಕಿ ನುಣ್ಣಗೆ ರುಬ್ಬಿ (ರುಬ್ಬುವಾಗ ಸ್ವಲ್ಪವೇ ನೀರು ಹಾಕಿಕೊಳ್ಳಿ)
* ರುಬ್ಬಿದ ಹಿಟ್ಟಿಗೆ ಕೊತ್ತಂಬರಿ ಸೊಪ್ಪು, ಹಸಿಶುಂಠಿ ಹಾಕಿ ಬೆರೆಸಿರಿ.
* ಸ್ವಲ್ಪ ಹಿಟ್ಟು ತೆಗೆದುಕೊಂಡು ದುಂಡನೆಯ ವಡೆಯ ಆಕಾರಕ್ಕೆ ಅಂಗೈಯಲ್ಲಿ ತಟ್ಟಿಕೊಳ್ಳಿರಿ. ಬೆರಳಿನಿಂದ ಹಿಟ್ಟಿನ ನಡುವೆ ಚಿಕ್ಕ ರಂಧ್ರ ಮಾಡಿ ಎಣ್ಣೆಯಲ್ಲಿ ನಿಧಾನವಾಗಿ ಇಳಿಬಿಡಿ.
* ವಡೆ ಕರಿದುಕೊಂಡು ಬಿಳಿಯ ಬಣ್ಣಕ್ಕೆ ತಿರುಗಿದಾಗ, ಜಾಲರಿಯಿಂದ ತೆಗೆದು ಸ್ವಲ್ಪ ಹೊತ್ತು ಬದಿಯ ತಟ್ಟೆಯಲ್ಲಿಟ್ಟುಕೊಳ್ಳಿ.
* ಆನಂತರ, ಸ್ವಲ್ಪ ಸಮಯಬಿಟ್ಟು ಮತ್ತೆ ಅದನ್ನೇ ಬಾಣಲೆಗೆ ಹಾಕಿ ಕರಿದರೆ ಗರಿಗರಿಯಾದ ಹೊಂಬಣ್ಣದ ವಡೆಗಳು ಸಿದ್ಧವಾಗುತ್ತದೆ.
* ಎಂದಿನಂತೆ ಚಟ್ನಿ ಅಥವಾ ಕ್ಯಾರೆಟ್, ಹುರುಳಿಕಾಯಿ, ತೊಗರಿಬೇಳೆಯ ಸಾಂಬಾರಿನಲ್ಲಿ ಅದ್ದಿಕೊಂಡು ಸವಿಯಿರಿ.
* ನಲವತ್ತು, ನಲವತ್ತೈದು, ಐವತ್ತು ವಯಸ್ಸು ದಾಟಿದವರು ಎರಡೋ ಅಥವಾ ಮೂರೋ ಉದ್ದಿನವಡೆಗೆ ತೃಪ್ತಿಪಟ್ಟುಕೊಳ್ಳಿರಿ.

Story first published: Friday, August 28, 2009, 18:08 [IST]
X
Desktop Bottom Promotion