For Quick Alerts
ALLOW NOTIFICATIONS  
For Daily Alerts

ಕಲ್ಲಂಗಡಿ ಹಣ್ಣಿನ ತಿರುಳಿನ ದೋಸೆ

By Super
|
Dose recipe from watermelon
ಕಲ್ಲಂಗಡಿ ಹಣ್ಣಿನಿಂದ ಪಾಯಸ, ದೋಸೆ ಹಾಗೂ ಜ್ಯೂಸ್‌ಗಳನ್ನು ಸಾಮಾನ್ಯವಾಗಿ ತಯಾರಿಸುತ್ತಾರೆ. ಪ್ರಸ್ತುತ ಇಲ್ಲಿ ಇದರ ತಿರುಳಿನಿಂದ ರುಚಿಕರವಾದ ದೋಸೆಯನ್ನು ತಯಾರಿಸುವ ವಿಧಾನವನ್ನು ವಿವರಿಸಿದ್ದೇನೆ. ಹಣ್ಣಿನ ಕೆಂಪಾದ ಮೇಲ್ಭಾಗವನ್ನು ಮಾತ್ರ ತಿಂದು ಅದರ ಬಿಳಿಯಾದ ಭಾಗ ಅಂದರೆ ತಿರುಳನ್ನು ಬಿಸುಟದೇ ಅದರಲ್ಲೇ ಸ್ವಾದಭರಿತ ದೋಸೆಯನ್ನು ತಯಾರಿಸಬಹುದಾಗಿದೆ.

* ತೇಜಸ್ವಿನಿ ಹೆಗಡೆ, ಬೆಂಗಳೂರು

ಬೇಸಿಗೆಗಾಲ ಬಂತೆಂದರೆ ಸಾಕು ಕಿತ್ತು ತಿನ್ನುವ ಬೆವರು ಹಾಗೂ ಅಸಾಧ್ಯ ಬಾಯಾರಿಕೆ. ಇಂತಹ ಸಮಯದಲ್ಲೇ ಎಲ್ಲೆಲ್ಲೂ ಕಂಡುಬರುವ ಬಿರು ಬಿಸಿಲಿಗೆ ಸಂಜೀವಿನಿಯಾದ ಕಲ್ಲಂಗಡಿ ಹಣ್ಣು(Watermelon) ಕಣ್ಮನಗಳನ್ನಲ್ಲದೇ ಹೊಟ್ಟೆಯನ್ನೂ ತಂಪಾಗಿಸುತ್ತದೆ. ಬಿಸಿ ಬಿಸಿ ಚಾ, ಕಾಫಿ, ಹಾಲು ಯಾವುದನ್ನೂ ಬೇಡದ ಮನಸ್ಸು ತಂಪಾದ ಪಾನೀಯವನ್ನೇ ಬಯಸುತ್ತದೆ. ಆಗ ತಕ್ಷಣ ನೆನಪಿಗೆ ಬರುವುದೇ ಈ ಹಣ್ಣಿನ ಜ್ಯೂಸ್.

ಕಲ್ಲಂಗಡಿ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರಿರುವುದರಿಂದ ಇದನ್ನು ಯಾರೂ ಸೇವಿಸಬಹುದು. ಅತ್ಯಲ್ಪ ಕ್ಯಾಲೊರಿಯನ್ನು ಹೊಂದಿರುವ ಹಣ್ಣು ಬಹೋಪಯೋಗಿಯೂ ಹೌದು. ಇದರಲ್ಲಿ ಪೊಟಾಶಿಯಂ ಹಾಗೂ ವಿಟಮಿನ್ 'ಸಿ' ಅತ್ಯಧಿಕ ಪ್ರಮಾಣದಲ್ಲಿದ್ದು, ಇದರ ಸೇವನೆಯಿಂದ ರಕ್ತದೊತ್ತಡವನ್ನು ಕಡಿಮೆಗೊಳಿಸಬಹುದು. ಅದೂ ಅಲ್ಲದೇ ಹೃದ್‌ರೋಗಕ್ಕೆ, ಕೆಲವೊಂದು ಕ್ಯಾನ್ಸರ್ ಚಿಕಿತ್ಸೆಗೆ ಇದನ್ನು ಔಷಧಿಯನ್ನಾಗಿ ಬಳಸುವುದೂ ತಿಳಿದುಬಂದಿದೆ. ಕಲ್ಲಂಗಡಿ ಹಣ್ಣಿನ ಹೆಚ್ಚಿನ ಉಪಯೋಗಗಳನ್ನು ತಿಳಿಯಲು ಈ ಲಿಂಕ್‌ಗೆ ತಪ್ಪದೇ ಭೇಟಿಕೊಡಿ.

ಈ ಹಣ್ಣನ್ನು ತಿರುಳು ಸಹಿತ ನುಣ್ಣಗೆ ಬೀಸಿ ಲೇಪದಂತೆ ಮಾಡಿಕೊಂಡು ಮೈ, ಕೈಗೆ ಹಚ್ಚಿಕೊಂಡರೆ ತ್ವಚೆ ನುಣುಪಾಗುವುದು, ಕಲೆರಹಿತವಾಗುವುದು ಅಲ್ಲದೇ ಸುಕ್ಕುಗಳು ಕ್ರಮೇಣ ಮಾಯವಾಗುವುವು. ಉರಿಮೂತ್ರಕ್ಕೆ ಇದು ದಿವ್ಯೌಷಧಿಯಾಗಿದೆ. ಅಲ್ಲದೇ ಕಿಡ್ನಿ ಸ್ಟೋನ್ ತಡೆಗಟ್ಟಲೂ ಇದು ತುಂಬಾ ಸಹಕಾರಿಯಾಗಿರುವುದು ತಿಳಿದು ಬಂದಿದೆ.

ಕಲ್ಲಂಗಡಿ ಹಣ್ಣಿನಿಂದ ಪಾಯಸ, ದೋಸೆ ಹಾಗೂ ಜ್ಯೂಸ್‌ಗಳನ್ನು ಸಾಮಾನ್ಯವಾಗಿ ತಯಾರಿಸುತ್ತಾರೆ. ಪ್ರಸ್ತುತ ಇಲ್ಲಿ ಇದರ ತಿರುಳಿನಿಂದ ರುಚಿಕರವಾದ ದೋಸೆಯನ್ನು ತಯಾರಿಸುವ ವಿಧಾನವನ್ನು ವಿವರಿಸಿದ್ದೇನೆ. ಹಣ್ಣಿನ ಕೆಂಪಾದ ಮೇಲ್ಭಾಗವನ್ನು ಮಾತ್ರ ತಿಂದು ಅದರ ಬಿಳಿಯಾದ ಭಾಗ ಅಂದರೆ ತಿರುಳನ್ನು ಬಿಸುಟದೇ ಅದರಲ್ಲೇ ಸ್ವಾದಭರಿತ ದೋಸೆಯನ್ನು ತಯಾರಿಸಬಹುದಾಗಿದೆ. ಅಲ್ಲದೇ ತಿರುಳನ್ನು ನುಣ್ಣಗೆ ಬೀಸಿ ಮುಖಗಳಿಗೆ, ಕೈ ಕಾಲುಗಳಿಗೆ ಹಚ್ಚಿಕೊಂಡರೂ ತ್ಚಚೆಯ ಕಾಂತಿಯು ಹೆಚ್ಚುತ್ತದೆಂದು ಸಂಶೋಧನೆಯಿಂದ ತಿಳಿದು ಬಂದಿದೆ. ಹಾಗಾಗಿ ಇನ್ನು ಮುಂದೆ ತಿರುಳನ್ನು ಬಿಸುಟದಿರಿ.

ಬೇಕಾಗುವ ಸಾಮಗ್ರಿಗಳು

* ಅಕ್ಕಿ - 1 ಲೋಟ
* ಕಲ್ಲಂಗಡಿ ಹಣ್ಣಿನ ತಿರುಳಿನ ಚೂರುಗಳು (ಬಿಳಿಭಾಗದ ಹೋಳುಗಳು) - 2 ಲೋಟ
* ಮೆಂತೆ - 1/2 ಚಮಚ
* ಜೀರಿಗೆ - 1/2 ಚಮಚ
* ಉಪ್ಪು - ರುಚಿಗೆ ತಕ್ಕಷ್ಟು
* ತಂಗಿನೆಣ್ಣೆ - ಸ್ವಲ್ಪ

ತಯಾರಿಸುವ ವಿಧಾನ

* ಮೊದಲಿಗೆ ಅಕ್ಕಿ ಹಾಗೂ ಮೆಂತೆಯನ್ನು ನಾಲ್ಕು ಗಂಟೆಗಳ ಕಾಲ ನೆನೆಯಲು ಬಿಡಬೇಕು.
* ಕಲ್ಲಂಗಡಿ ಹಣ್ಣಿನ ಬಿಳಿ ಭಾಗವನ್ನು (ತಿರುಳನ್ನು) ಚೆನ್ನಾಗಿ ತೊಳೆದು ಸಣ್ಣ ಹೋಳುಗಳನ್ನಾಗಿಸಿಟ್ಟುಕೊಳ್ಳಬೇಕು.
* ಚೆನ್ನಾಗಿ ನೆನೆದ ಅಕ್ಕಿ ಹಾಗೂ ಮೆಂತೆಯನ್ನು ತಿರುಳಿನ ಚೂರುಗಳು ಹಾಗೂ ಜೀರಿಗೆಯ ಜೊತೆಗೆ ನುಣ್ಣಗೆ ರುಬ್ಬಬೇಕು.
* ನಂತರ ಈ ರುಬ್ಬಿದ ಮಿಶ್ರಣಕ್ಕೆ ದೋಸೆ ಹಿಟ್ಟಿನ ಹದಕ್ಕೆ ಬೇಕಾಗುವಷ್ಟು ನೀರನ್ನು ಹಾಕಿ, ಉಪ್ಪನ್ನು ಸೇರಿಸಬೇಕು.
* ಕಾವಲಿಯಲ್ಲಿ ಈ ಹಿಟ್ಟನ್ನು ತೆಳ್ಳಗೆ ಹೊಯ್ದು ಮೇಲಿನಿಂತ ಸ್ವಲ್ಪ ತೆಂಗಿನೆಣ್ಣೆಯನ್ನು ಬಿಟ್ಟು ಕೆಂಪಗೆ ಕಾಯಿಸಬೇಕು.
* ಬಿಸಿ ಬಿಸಿಯಾದ ದೋಸೆಯನ್ನು ಕಾಯಿ ಚಟ್ನಿಯೊಂದಿಗೆ ಸೇವಿಸಲು ಬಲು ರುಚಿಕರವಾಗಿರುತ್ತದೆ.

X
Desktop Bottom Promotion