For Quick Alerts
ALLOW NOTIFICATIONS  
For Daily Alerts

ಸಿಕ್ಸ್ ಕಪ್ ಬರ್ಫಿ : ಸಿಹಿತಿಂಡಿ ರೆಸಿಪಿ

By Staff
|

ಈ ತಿಂಡಿಗೆ ಸಿಕ್ಸ್ ಕಪ್ ಬರ್ಫಿ ಎಂದು ಏಕೆ ಕರೆಯುತ್ತಾರೆ? ಇದನ್ನು ತಯಾರಿಸುವುದು ಹೇಗೆ? ವಿವರಗಳು ಇಲ್ಲಿವೆ. ಗಮನಿಸಿ, ಇದನ್ನು ತಯಾರಿಸುವುದು ಸುಲಭ ಮತ್ತು ತಯಾರಿಸಲು ಹೆಚ್ಚು ಸಾಮಗ್ರಿಗಳ ಅವಶ್ಯಕತೆಯಿಲ್ಲ.

* ತೇಜಸ್ವಿನಿ ಹೆಗಡೆ, ಬೆಂಗಳೂರು

ಈ ಬರ್ಫಿಯನ್ನು ತಯಾರಿಸಲು ಒಟ್ಟು ಆರು ಕಪ್ ಸಾಮಗ್ರಿಗಳನ್ನು ಹಾಕುವುದರಿಂದ ಇದನ್ನು ಸಿಕ್ಸ್ ಕಪ್ ಬರ್ಫಿ ಎನ್ನುತ್ತಾರೆ. ಈ ಸಿಹಿ ತಿಂಡಿ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ತಯಾರಿಸಲೂ ಸುಲಭ. ಹೆಚ್ಚಿನ ಸಾಮಗ್ರಿಗಳ ಅವಶ್ಯಕತೆಯೂ ಇಲ್ಲ. ಇದನ್ನು ಗಾಳಿಯಾಡದ ಡಬ್ಬದಲ್ಲಿಟ್ಟರೆ ಒಂದು ವಾರದವರೆಗೂ ರುಚಿ ಕೆಡದಂತಿರುತ್ತದೆ.

ಬೇಕಾಗುವ ಸಾಮಗ್ರಿಗಳು :

* ಕಡಲೆ ಹಿಟ್ಟು - 1 ಕಪ್
* ಕಾಯಿ ತುರಿ - 1 ಕಪ್
* ತುಪ್ಪ - 1 ಕಪ್
* ಸಕ್ಕರೆ - 2 ಕಪ್
* ಹಾಲು - 1 ಕಪ್
* ಗೋಡಂಬಿ ಹಾಗೂ ದ್ರಾಕ್ಷಿಯ ಚೂರುಗಳು :ತಮಗೆ ಬೇಕಾದಷ್ಟು.

ಸಕ್ಕರೆ ಎರಡು ಕಪ್ ಸೇರಿಸಿ ಉಳಿದ ಸಾಮಗ್ರಿಗಳು ಒಂದೊಂದು ಕಪ್ ಹೀಗೆ ಒಟ್ಟೂ ಆರು ಕಪ್ ಹಾಕುವುದರಿಂದ ಈ ಬರ್ಫಿಗೆ ಸಿಕ್ಸ್ ಕಪ್ ಎನ್ನುತ್ತೇವೆ. ಕಪ್ ಅಳತೆಗೆ ನಿಮಗೆ ಇಷ್ಟವಾದ ಯಾವ ಕಪ್ ಬೇಕಾದರೂ ತೆಗೆದುಕೊಳ್ಳಬಹುದು. ನಿಮಗೆ ಬೇಕಾದ ಪ್ರಮಾಣದ ಅಳತೆಯಲ್ಲಿ ತಯಾರಿಸಬಹುದು. ಆದರೆ, ಒಂದು ಸಾಮಗ್ರಿಗೆ ಯಾವ ಕಪ್ ಅಳತೆ ತೆಗೆದುಕೊಳ್ಳುವಿರೋ ಅದೇ ಅಳತೆಯಲ್ಲೇ ಉಳಿದ ಸಾಮಗ್ರಿಗಳನ್ನೂ ಹಾಕಬೇಕು.

ಮಾಡುವ ವಿಧಾನ :

* ಮೊದಲಿಗೆ ಹಾಲನ್ನು ಬಿಸಿ ಮಾಡಿಟ್ಟುಕೊಳ್ಳಬೇಕು.
* ದೊಡ್ಡ ಬಾಣಲೆಯಲ್ಲಿ ಬಿಸಿ ಮಾಡಿದ ಹಾಲು, ಸಕ್ಕರೆ, ತುಪ್ಪ ಹಾಗೂ ಕಡಲೆ ಹಿಟ್ಟನ್ನು ಹಾಕಿ ಸರಿಯಾಗಿ ಕಲಕುತ್ತಿರಬೇಕು. ಸುಮಾರು ಅರ್ಧ ಗಂಟೆಯವರೆಗೆ ಆಗಾಗ ಕಲಕುತ್ತಿರಲು, ಮಿಶ್ರಣ ಬಾಣಲೆಯ ತಳ ಬಿಟ್ಟು ಮುದ್ದೆಯಾಕಾರಕ್ಕೆ ಬರುತ್ತದೆ.
* ಹೀಗೆ ಮುದ್ದೆಯಾಕಾರದಲ್ಲಿ ಬಂದಾಗ, ಗೋಡಂಬಿ ಹಾಗೂ ದ್ರಾಕ್ಷಿಯ ಚೂರುಗಳನ್ನು ಹಾಕಿ ಒಮ್ಮೆ ಕಲಕಿ, ಕೂಡಲೇ ಸ್ವಲ್ಪ ತುಪ್ಪ ಸವರಿದ ಬಟ್ಟಲಿಗೆ ಹಾಕಿ ಮಿಶ್ರಣವನ್ನು ಸರಿಯಾಗಿ ಹರಡಿ ಬೇಕಾದ ಆಕಾರದಲ್ಲಿ ತುಂಡರಿಸಿಡಬೇಕು. ಬಟ್ಟಲಿಗೆ ಹಾಕಿ ತಣಿದ ಮೇಲೆ ಕತ್ತರಿಸಲು ಹೋದರೆ ಬರ್ಫಿ ಗಟ್ಟಿಯಾಗುವುದರಿಂದ ತುಂಡರಿಸಲಾಗದು. ಹಾಗಾಗಿ ಬಿಸಿ ಇರುವಾಗಲೇ ನಮಗೆ ಬೇಕಾದ ಆಕಾರವನ್ನು ಕೊಡಬೇಕು.

Story first published: Friday, January 30, 2009, 15:06 [IST]
X
Desktop Bottom Promotion