For Quick Alerts
ALLOW NOTIFICATIONS  
For Daily Alerts

ಹಲಸಿನ ಹಣ್ಣಿನ ಸುಪ್ರಸಿದ್ದ ಅಡ್ಯೆ

By Staff
|
jack friut sweet adye
ಮಲೆನಾಡು ಮತ್ತು ಕರಾವಳಿ ಕಡೆಯ ಹೆಣ್ಣುಮಕ್ಕಳು, ಅದರಲ್ಲೂ 50 ದಾಟಿದವರು ರುಚಿರುಚಿಯಾದ, ವಿಶಿಷ್ಟವಾದ ಅಡುಗೆಗಳನ್ನು ಮಾಡುವುದರಲ್ಲಿ ಎತ್ತಿದ ಕೈ. ಅವರು ಮಾತನಾಡುವುದು ಕಡಿಮೆ. ಕೆಲಸ ಜಾಸ್ತಿ. ಇಂಥ ಮಹಿಳೆಯರ ಕೈರುಚಿ ಸವಿಯದ ಕನ್ನಡಿಗರೇ ನಿರ್ಭಾಗ್ಯರು ಎನ್ನಬಹುದು. ಮಲೆನಾಡಿನ ಅಡಿಕೆ ಮರದ ಕೆಳಗೆ, ಬಾಳೆಗಿಡದ ಪಕ್ಕದಲ್ಲಿ ಸಣ್ಣಗೆ ಹೊಗೆಯಾಡುವ ಅಡುಗೆಮನೆಗಳಲ್ಲಿ ತಯಾರಾಗುವ ಸಾಲುಸಾಲು ಪದಾರ್ಥಗಳ ಹೆಸರು ಕೇಳಿದರೇನೇ ಬಾಯಲ್ಲಿ ನೀರು ಬರುವ ಸಾಧ್ಯತೆಗಳನ್ನು ಅಲ್ಲಗೆಳೆಯುವಂತಿಲ್ಲ. ಇಂಥ ಅನೇಕ ತಿಂಡಿಗಳ ಪಟ್ಟಿಯಲ್ಲಿ ಇವತ್ತು ನಮಗೆ ಎದ್ದು ಕಾಣುವ ಹೆಸರು ಸ್ವಾದಿಷ್ಟ ಮತ್ತು ಸುಪ್ರಸಿದ್ದ ಹಲಸಿನ ಹಣ್ಣಿನ 'ಅಡ್ಯೆ '.

ಹಲಸಿನ ಹಣ್ಣು ಸಾಮಾನ್ಯವಾಗಿ ಕರ್ನಾಟಕದ ಎಲ್ಲ ಭಾಗಗಳಲ್ಲೂ ಸಿಗುತ್ತದೆ. ಬಯಲು ಸೀಮೆಯವರು, ಚೆನ್ನಪಟ್ಟಣದವರು, ಹೂವಿನಹಡಗಲಿಯವರು, ಯಾದಗಿರಿಯವರು, ಅರಸೀಕೆರೆಯವರು ಮತ್ತು ಸಾಹಿತ್ಯ ಸಮ್ಮೇಳನ ನಡೆಸಲು ಅಣಿಯಾಗಿರುವ ಚಿತ್ರದುರ್ಗ ಜಿಲ್ಲೆಯವರು ಹಾಗೂ ಈ ಕಡೆ ಬಂದರೆ ಕೋಲಾರ, ಚಿಕ್ಕ ತಿರುಪತಿ, ಮುಳುಬಾಗಿಲು, ಕೆಜಿಎಫ್ ಕಡೆಯವರೆಲ್ಲ ಈ ತಿಂಡಿಯನ್ನು ತಯಾರಿಸಬಹುದು. ಭಾಷೆಯಲ್ಲಿ ಆಗದಿದ್ದರೂ ಕಡೆಯಪಕ್ಷ ಆಹಾರ ಸಂಸ್ಕೃತಿಯಲ್ಲಿ ಕ್ರಮೇಣ ಏಕತೆಮೂಡಿ ತನ್ಮೂಲಕ ವಿಶಾಲ ಕರ್ನಾಟಕದ ಕಲ್ಪನೆಯನ್ನು ಮನೆಮನೆಗಳಲ್ಲಿ ಸ್ಥಾಪಿಸಬಹುದು ಎನ್ನುವುದು ನಿಮ್ಮ ವಿಶ್ವಾಸಿ ವೆಬ್ ಸೈಟಿನ ಆಕಾಂಕ್ಷೆಯಾಗಿರುತ್ತದೆ.

ನೆನಪಿಡಿ :
ನಮ್ಮ ವೆಬ್ ಸೈಟಿನಲ್ಲಿ ಪ್ರಕಟವಾಗುವ ಕೆಲವು ತಿಂಡಿ ತೀರ್ಥಗಳು ಹೊಟೆಲುಗಳಲ್ಲೂ ಸಿಗುತ್ತವೆ. ಆದರೆ, ಹಲಸಿನ ಹಣ್ಣಿನ ಅಡ್ಯೆ ಮನೆಗಳಿಗೆ, ಫ್ಲ್ಯಾಟುಗಳಿಗೆ, ವಠಾರಗಳಿಗೆ, ಔಟ್ ಹೌಸ್ ಗಳಿಗೆ, ಫಾರ್ಮ್ ಹೌಸುಗಳಿಗೆ, ಘಟ್ಟದ ಮೇಲಿನವರಿಗೆ ಹಾಗೂ ಘಟ್ಟದ ಕೆಳಗಿನವರಿಗೆ ಮಾತ್ರ ಸೀಮಿತವಾಗಿರುತ್ತದೆ. ಒಂದು ಪ್ಲೇಟಿಗೆ ಸಾವಿರ ಡಾಲರು ಕೊಡ್ತೀನಿ ಅಂದರೂ ಕೂಡ ಟೂ ಥ್ರೀ ಫೋರ್ ಫೈವ್ ಸ್ಟಾರ್ ಹೋಟೆಲುಗಳಲ್ಲಿ ಈ ತಿಂಡಿಯನ್ನು ಯಾರೂ ಮಾಡಿ ಬಡಿಸುವುದಿಲ್ಲ. ಬನ್ನಿ, ಅಡ್ಯೆ ಮಾಡೋಣಂತೆ.

ಬೇಕಾಗುವ ಪದಾರ್ಥಗಳು:

ಅಕ್ಕಿ - 1/2 ಕೆ.ಜಿ.
ಹಲಸಿನ ಹಣ್ಣಿನ ಚೂರು - 20-30
ಬೆಲ್ಲ - 1/4 ಕೆ.ಜಿ.
ಉಪ್ಪು - ರುಚಿಗೆ ತಕ್ಕಷ್ಟು
ತುಪ್ಪ - 10 ಟೀ ಚಮಚ

ಮಾಡುವ ವಿಧಾನ :

ಅಕ್ಕಿಯನ್ನು ತೊಳಯುವ ತಾಳ್ಮೆ ಮತ್ತು ಕಲೆಯ ಮೇಲೆ ಅಡ್ಯೆದ ಬಣ್ಣ ಹೇಗಿರುತ್ತದೆ ಎಂದು ನಿರ್ಧಾರವಾಗುತ್ತದೆ. ಆದ್ದರಿಂದ ಅಕ್ಕಿಯನ್ನು ಚೆನ್ನಾಗಿ ತೊಳೆಯಲು ಕಲಿಯಿರಿ ಅಥವಾ ಕಲಿತಿ ಸ್ಕಿಲ್ ಸೆಟ್ಟುಗಳನ್ನು ಮರೆಯಬೇಡಿ. ತೊಳೆದ ಅಕ್ಕಿಯನ್ನು ಎರಡು ಗಂಟೆ ನೆನೆಹಾಕಬೇಕು. ಹಲಸಿನ ಹಣ್ಣಿನ ಬಿಜವನ್ನೆಲ್ಲ ತೆಗೆದು ಸ್ವಚ್ಚ ಮಾಡಿಟ್ಟುಕೊಳ್ಳಬೇಕು. ಅದಾದನಂತರ ಅಕ್ಕಿ, ಹಲಸಿನಹಣ್ಣು ಹಾಗು ಬೆಲ್ಲ ಮೂರನ್ನೂ ಒಟ್ಟಾಗಿ ಮಿಕ್ಸಿಯಲ್ಲಿ ಹಾಕಿ ಗಡಗಡ ರುಬ್ಬಿಕೊಳ್ಳಿ. ರುಬ್ಬುವಾಗ ಜಾಸ್ತಿ ನೀರು ಹಾಕಬಾರದು!ಸ್ವಲ್ಪ ಗಟ್ಟಿಗಟ್ಟಿಯಾಗಿಯೇ ಇರಲಿ.

ರುಬ್ಬಿದ ಹಿಟ್ಟಿಗೆ 8-10 ಚಮಚ ತುಪ್ಪ ಹಾಕಿ. ಹಿಟ್ಟನ್ನು ಮತ್ತೆ ಚೆನ್ನಾಗಿ ಕಲಸಿ ಬಾಳೆಯೆಲೆ ಅಥವಾ ಇಡ್ಲಿ ತಟ್ಟೆಯಲ್ಲಿ ಹಾಕಿ ಸುಮಾರು 20-22 ನಿಮಿಷ ಹಬೆಯಲ್ಲಿ ಬೇಯಿಸಿ ಕೆಳಗಿಳಿಸಿ. ರುಚಿಯಾದ ಹಲಸಿನ ಹಣ್ಣಿನ 'ಅಡ್ಯೆ ' ತಂತಾನೆ ಸಿದ್ಧವಾಗುತ್ತದೆ. ಪ್ರವಾಸ ಕಾಲದಲ್ಲಿ ಅದೂ ಪ್ಲಸ್ ಇದೂ ತಿಂದು ನಾಲಗೆಯ ಗ್ರಂಥಿಗಳಿಗೆ ಜಡ್ಡು ಬರಿಸಿಕೊಂಡವರಿಗೆ ಹಲಸಿನ ಹಣ್ಣಿನ ಅಡ್ಯೆ ಮನೆ ಮದ್ದು ಎಂತಲೂ ಕರೆಯಬಹುದು.

ವಿಸೂ : ನಮ್ಮ ಮನೆಯಲ್ಲಿ ಒಟ್ಟು ಏಳು ಜನ. ಆ ಲೆಕ್ಕ ಇಟ್ಟುಕೊಂಡು ಅರ್ಧ ಕೆಜಿ ಅಕ್ಕಿ ಲೆಕ್ಕದಲ್ಲಿ ಅಡುಗೆ ಪ್ರಮಾಣಗಳನ್ನು ವಿವರಿಸಲಾಗಿದೆ. ನಿಮ್ಮ ಮನೆಯಲ್ಲಿ ತಿನ್ನುವವರು ಎಷ್ಟು ಜನ ಎಂಬ ಆಧಾರದ ಮೇಲೆ ನೀವು ಪ್ರಮಾಣಗಳನ್ನು ಅಗತ್ಯಕ್ಕೆ ತಕ್ಕಂತೆ ಮಾರ್ಪಾಟು ಮಾಡಿಕೊಳ್ಳಬೇಕು.

(ದಟ್ಸ್ ಕನ್ನಡ ಪಾಕಶಾಲೆ)

Story first published: Friday, January 30, 2009, 15:02 [IST]
X
Desktop Bottom Promotion