For Quick Alerts
ALLOW NOTIFICATIONS  
For Daily Alerts

ಹೊಸ ವರ್ಷಕ್ಕೆ ಚೀನಿಕಾಯಿ ಕಡುಬು

By Staff
|

ಉತ್ತರ ಕರ್ನಾಟಕದ ಕಡೆ ಸಾಮಾನ್ಯವಾಗಿ ದೀಪಾವಳಿಗೆ ಚೀನಿಕಾಯಿ ಅಥವಾ ಗೋವೆಕಾಯಿ ಕಡುಬನ್ನು ಮಾಡುತ್ತಾರೆ. ಈಬಾರಿ ಸಂಪ್ರದಾಯವನ್ನು ಮುರಿದು ದೀಪಾವಳಿಗಷ್ಟೇ ಏಕೆ ಹೊಸವರ್ಷಕ್ಕೇ ಮಾಡೋಣಂತೆ, ಅದಕ್ಕೇನಂತೆ! ನೆನಪಿಡಿ, ಚೀನಿಕಾಯಿಯಿಂದ ಸಾಂಬಾರ್, ಪಾಯಸ, ಪಲ್ಯ, ಮೊಸರು ಬಜ್ಜಿ, ಸಿಪ್ಪೆಯ ಚಟ್ನಿ ಕೂಡ ತಯಾರಿಸಬಹುದು.

ಹೊಸವರುಷಕೆ ಸಿಹಿಗಡುಬಿನ ತಿನಿಸು.

ಉತ್ತರಕರ್ನಾಟಕದ ಕಡೆ ದೀಪಾವಳಿಯಂದು ಈ ಚೀನಿಕಾಯಿ ಕಡುಬು ಆಗಲೇಬೇಕು. ಅದರಲ್ಲೂ ವಿಶೇಷವಾಗಿ ನರಕಚತುರ್ದಶಿಯದಿನ ಈ ಕಡುಬನ್ನು ಎಲ್ಲರ ಮನೆಯಲ್ಲೂ ಮಾಡುತ್ತಾರೆ. ಶಿರಸಿಯ ಕಡೆ ಚೀನಿಕಾಯಿಗೆ ಗೋವೆಕಾಯಿ ಎನ್ನುತ್ತಾರೆ. ಗೋವೇಕಾಯಿ ಕಡುಬು ಉತ್ತರಕನ್ನಡದ ಕಡೆಯ ತಿಂಡಿ ತಿನಿಸುಗಳಲ್ಲಿ ಅಗ್ರಗಣ್ಯವಾದದ್ದು.

ಚೀನೀಕಾಯಿಯಿಂದ ಬಹಳಷ್ಟು ಪದಾರ್ಥಗಳನ್ನು ತಯಾರಿಸಬಹುದು. ಸಾಂಬಾರ್, ಪಾಯಸ, ಪಲ್ಯ, ಮೊಸರು ಬಜ್ಜಿ(ಹಶಿ) ಹಾಗೂ ಸಿಪ್ಪೆಯ ಚಟ್ನಿ ಕೂಡಾ ತುಂಬಾ ರುಚಿಕರ. ಚೀನಿಕಾಯಿಯ ಬಲಿತ ಬೀಜವನ್ನು ಚೆನ್ನಾಗಿ ಒಣಗಿಸಿ, ನಂತರ ಮೇಲಿನ ಸಿಪ್ಪೆಯನ್ನು ತೆಗೆದು ಒಳಭಾಗವನ್ನು ತಿನ್ನಬಹುದು. ತುಂಬಾ ಚೆನ್ನಾಗಿರುತ್ತದೆ.

ಬೇಕಾಗುವ ಸಾಮಗ್ರಿಗಳು

* ಅಕ್ಕಿ - 1/2 ಕೆ.ಜಿ.
* ಬೆಲ್ಲ - 1/2 ಕೆ.ಜಿ.
* ಚೀನಿಕಾಯಿ - 1/2 ಕೆ.ಜಿ.
* ತೆಂಗಿನಕಾಯಿ - 1/4 ಭಾಗ
* ಏಲಕ್ಕಿ ಬೀಜ - 10 (ಬೇಕಿದ್ದರೆ ಸಣ್ಣ ಜಾಯಿಕಾಯಿ ಚೂರನ್ನೂ ಹಾಕಬಹುದು)
* ಬಾಳೆ ಎಲೆ - 8-10

ಮಾಡುವ ವಿಧಾನ

* ಅಕ್ಕಿಯನ್ನು 4-5 ಗಂಟೆಗಳ ಕಾಲ ನೆನೆಹಾಕಿ, ಗಟ್ಟಿಯಾಗಿ ನುಣ್ಣಗೆ ರುಬ್ಬಬೇಕು.
* ಚೀನಿಕಾಯಿಯನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಬೇಕು. ದೊಡ್ಡ ಬಾಣಲೆಯಲ್ಲಿ ಬೆಲ್ಲವನ್ನು ಗುದ್ದಿ, ಒಂದು ಲೋಟ ನೀರನ್ನು ಹಾಕಿ ಹೆಚ್ಚಿಟ್ಟ ಗೋವೆಕಾಯಿ ಹಾಗೂ ಕಾಯಿತುರಿಯನ್ನು ಹಾಕಿ ಸಣ್ಣ ಉರಿಯಲ್ಲಿ ಕುದಿಸಬೇಕು.
* ಕುದಿಸಿದ ನಂತರ ಬೀಸಿಟ್ಟ ಅಕ್ಕಿಹಿಟ್ಟು, ಏಲಕ್ಕಿ ಬೀಜಗಳು ಹಾಗೂ ಜಾಯಿಕಾಯಿ ಚೂರನ್ನು ಹಾಕಿ ಸಣ್ಣ ಉರಿಯಲ್ಲಿ ಚೆನ್ನಾಗಿ ಕಲಕಬೇಕು(ತೊಳೆಸಬೇಕು).
* ಸರಿಯಾಗಿ ಮಿಶ್ರಣವಾದನಂತರ, (ಗ್ರಾಮ್ಯ ಭಾಷೆಯಲ್ಲಿ ಕೇಳಬೇಕೆಂದರೆ, ಒಂದು ಬಂಧ ಬಂದನಂತರ) ಗ್ಯಾಸ್ ಆರಿಸಿ ತಣಿಯಲು ಬಿಡಬೇಕು.
* ಮಿಶ್ರಣ ತಣಿದ ಮೇಲೆ ಬಾಳೆ ಎಲೆಗಳನ್ನು ತುಸು ಬಾಡಿಸಿಕೊಂಡು ಒಂದೊಂದು ಬಾಳೆ ಎಲೆಗೆ ಎರಡು ಸೌಟು ಮಿಶ್ರಣವನ್ನು ಹಾಕಿ ತುಸು ತೆಳುವಾಗಿ ಹರಡುವಂತೆ ಕೈಯಲ್ಲಿ ತಟ್ಟಬೇಕು. ನಂತರ ನಾಲ್ಕೂ ಕಡೆ ಬಾಳೆ ಎಲೆಯನ್ನು ಮಡಚಿ, ಇಡ್ಲಿ ( Idli Cooker)ದಳ್ಳೆಯಲ್ಲಿಟ್ಟು ಸುಮಾರು ಒಂದು ತಾಸಿನವರೆಗೂ ಬೇಯಿಸಬೇಕು.
* ಒಂದು ತಾಸಾದ ಮೇಲೆ ಬೆಂದಿರುವುದನ್ನು ಖಾತರಿಸಿಕೊಂಡು, ಬಾಳೆ ಎಲೆಯಿಂದ ಕಡುಬನ್ನು ತೆಗೆಯಬೇಕು. ಘಮ ಘಮಿಸುವ ಗೋವೆ ಕಡುಬು ಬಲು ರುಚಿಕರವಾಗಿರುತ್ತದೆ. ನಮ್ಮಲ್ಲಿ ಇದನ್ನು ತುಪ್ಪದೊಂದಿಗೆ ತೆಗೆದುಕೊಳ್ಳುತ್ತಾರೆ. ನಿಮ್ಮಲ್ಲಿ?

English summary

Cheenikayi Kadabu or Govekayi Kadubu

How to make Cheenikayi or Govekayi kadubu? Here are the step by step instructions.
X
Desktop Bottom Promotion