For Quick Alerts
ALLOW NOTIFICATIONS  
For Daily Alerts

ಸರಿಯಾದ ವ್ಯಾಯಮ: ತಾಯಿ, ಮಗುವಿನ ಆರೋಗ್ಯಕ್ಕೆ ಪೂರಕ

|

ಸಾಮಾನ್ಯವಾಗಿ ಗರ್ಭಿಣಿಯರಿಗೆ ಎಲ್ಲರೂ ನೀಡುವ ಪುಕ್ಕಟೆ ಸಲಹೆ ಎಂದರೆ "ವಿಶ್ರಾಂತಿ ತೆಗೆದುಕೊಳ್ಳಿ". ವಾಸ್ತವವಾಗಿ ಈ ಸಲಹೆ ಪೂರ್ಣವಾಗಿ ತಪ್ಪೂ ಅಲ್ಲ, ಪೂರ್ಣವಾಗಿ ಸರಿಯೂ ಅಲ್ಲ. ಏಕೆಂದರೆ ಗರ್ಭಾವಸ್ಥೆಯಲ್ಲಿ ಮಹಿಳೆಯ ದೇಹ ಹಲವು ಮಾರ್ಪಾಡುಗಳನ್ನು ಹೊಂದುತ್ತಾ ಹೋಗುವುದರಿಂದ ಆ ಪ್ರಕಾರವಾಗಿ ಆಹಾರ, ವಿಶ್ರಾಂತಿ ಮತ್ತು ನಿದ್ದೆಗಳಲ್ಲಿಯೂ ಕೊಂಚ ವ್ಯತ್ಯಾಸವಾಗುತ್ತಾ ಹೋಗುತ್ತದೆ.

ಈ ವ್ಯತ್ಯಾಸಗಳನ್ನು ಆಧರಿಸಿ ಗರ್ಭಾವಸ್ಥೆಯನ್ನು ವೈದ್ಯವಿಜ್ಞಾನ ಮೂರು ಮೂರು ತಿಂಗಳ ಮೂರು ಅವಧಿಗಳನ್ನಾಗಿ ವಿಂಗಡಿಸಿದೆ. ಈ ಅವಧಿಗಳಲ್ಲಿ ದೇಹದ ಅಗತ್ಯಕ್ಕೆ ತಕ್ಕ ಸರಳ ವ್ಯಾಯಾಮ, ಆಹಾರ, ನಿದ್ದೆಗಳು ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಪೂರಕವಾಗಿವೆ.

ಪ್ರಥಮ ಮೂರು ತಿಂಗಳುಗಳಲ್ಲಿ ಮೆಟ್ಟಿಲು ಇಳಿಯುವಂತಹ ಮತ್ತು ನೆಗೆಯುವ (ಸ್ಕಿಪ್ಪಿಂಗ್) ಚಟುವಟಿಕೆ ಇರುವ ವ್ಯಾಯಾಮಗಳನ್ನು ಬಿಟ್ಟು ಬೇರೆ ಸರಳ ವ್ಯಾಯಾಮಗಳನ್ನು ಮಾಡಬೇಕು. (ಈ ವ್ಯಾಯಾಮಗಳಿಂದ ಗರ್ಭಪಾತವಾಗುವ ಸಂಭವ ಹೆಚ್ಚುತ್ತದೆ) ನಾಲ್ಕರಿಂದ ಆರು ತಿಂಗಳವರೆಗೆ ಮೈ ಸೆಳೆಯುವ ಮತ್ತು ನಡಿಗೆ, ಕಸ ಗುಡಿಸಲು ಬಗ್ಗುವಂತಹ ವ್ಯಾಯಾಮಗಳು ಸಾಕು.

Good reasons to exercise in pregnancy

ಏಳನೆಯ ತಿಂಗಳಿನಿಂದ ಒಂಬತ್ತನೆಯ ತಿಂಗಳವರೆಗೆ ನಿಧಾನಗತಿಯ ನಡಿಗೆ ಮತ್ತು ಸರಳ ವ್ಯಾಯಾಮಗಳನ್ನು ಮಾಡಬೇಕು. ಯಾವುದೇ ಕಾರಣಕ್ಕೆ ಆರನೆಯ ತಿಂಗಳ ಬಳಿಕ ಭಾರ ಎತ್ತಬಾರದು. ನಿಮ್ಮ ಕುಟುಂಬ ವೈದ್ಯರ ಸಲಹೆಯನ್ನು ಅನುಸರಿಸಿ ನಿಮಗೆ ಯಾವುದು ಹೆಚ್ಚು ಸೂಕ್ತವೋ ಆ ವ್ಯಾಯಾಮಗಳನ್ನು ಮಾತ್ರ ಖಂಡಿತಾ ಮಾಡಬೇಕು.

ಒಂದು ವೇಳೆ ಹೆಚ್ಚಿನವರು ನೀಡಿದ ಪುಕ್ಕಟೆ ಸಲಹೆಯನ್ನು ಸರ್ವಥಾ ಅನುಸರಿಸಿದರೆ ದೇಹ ಅಗತ್ಯಕ್ಕಿಂತ ಹೆಚ್ಚಿಗೆ ದಪ್ಪಗಾಗುವುದು, ಹೆರಿಗೆಯಲ್ಲಿ ಕಷ್ಟವಾಗುವುದು, ಹೆರಿಗೆಯ ಬಳಿಕ ಕಾಣಿಸಿಕೊಳ್ಳುವ ಇತರ ತೊಂದರೆಗಳು, ಹೀಗೆ ಮೊದಲಾದ ಸಮಸ್ಯೆಗಳು ಎದುರಾಗಬಹುದು. ಈ ವ್ಯಾಯಾಮಗಳ ಮೂಲಕ ಪಡೆಯಬಹುದಾದ ಅಪಾರ ಪ್ರಯೋಜನಗಳಲ್ಲಿ ಪ್ರಮುಖವಾದ ವಿಷಯಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ..... ಗರ್ಭಾವಸ್ಥೆಯಲ್ಲಿ ಸುರಕ್ಷಿತ ವ್ಯಾಯಾಮಕ್ಕಾಗಿ 7 ಸಲಹೆಗಳು

ಮಲಬದ್ಧತೆಯಾಗುವುದನ್ನು ತಡೆಯುತ್ತದೆ
ಗರ್ಭಾವಸ್ಥೆಯಲ್ಲಿ ದೇಹ ಆಹಾರಕ್ಕಿಂತಲೂ ಹೆಚ್ಚು ನೀರನ್ನು ಬೇಡುವುದರಿಂದ ಹಾಗೂ ಬಹಳಷ್ಟು ನೀರು ಶಿಶುವಿನ ಬೆಳವಣಿಗೆಗೆ ಉಪಯೋಗಿಸಲ್ಪಡುವುದರಿಂದ ಮಲಬದ್ಧತೆಯ ಸಾಧ್ಯತೆಗಳು ಹೆಚ್ಚಾಗುತ್ತವೆ. ವ್ಯಾಯಾಮ ಇಲ್ಲದೇ ಇರುವುದರಿಂದ ಮಲವಿಸರ್ಜನೆ ತುಂಬಾ ತಡವಾಗುತ್ತದೆ, ತನ್ಮೂಲಕ ಇತರೇ ತೊಂದರೆಗಳನ್ನು ತಂದೊಡ್ಡುತ್ತದೆ. ಪ್ರತಿದಿನದ ವ್ಯಾಯಾಮದಿಂದ ಹಾಗೂ ನಿಮ್ಮ ಆಹಾರದಲ್ಲಿ ಸಾಕಷ್ಟು ನಾರು ಇರುವಂತೆ ನೋಡಿಕೊಳ್ಳುವುದರಿಂದ ವಿಸರ್ಜನಾ ಕಾರ್ಯ ಸುಲಭಗೊಂಡು ಮಲಬದ್ಧತೆಯಿಂದಾಗಬಹುದಾಗಿದ್ದ ಎಲ್ಲಾ ತೊಂದರೆಗಳಿಂದ ಕಾಪಾಡಿಕೊಂಡತಾಗುತ್ತದೆ.

ಬೆನ್ನು ನೋವನ್ನು ತಡೆಯುತ್ತದೆ ನಾಲ್ಕನೆಯ ತಿಂಗಳಿನಿಂದ ಹೊಟ್ಟೆಯ ಭಾಗ ಮುಂದೆ ಬಂದಿದ್ದರೂ ಹೆಚ್ಚು ಹಿಂದೆ ಬಾಗಬೇಕಾಗಿ ಬರುವುದಿಲ್ಲ. ಆದರೆ ಆರನೆಯ ತಿಂಗಳ ನಂತರ ಹೊಟ್ಟೆಯ ಗಾತ್ರ ಹೆಚ್ಚುತ್ತಾ ಹೋಗಿ ಹಿಂದೆ ಬಾಗುವ ಅನಿವಾರ್ಯತೆಯೂ ಹೆಚ್ಚುತ್ತದೆ. ಇದರಿಂದ ಬೆನ್ನು ಮೂಳೆಯ ಮೇಲೆ ಹೆಚ್ಚಿನ ಒತ್ತಡ ಮತ್ತು ಸೊಂಟದ ಸ್ನಾಯುಗಳಿಗೆ ಹೆಚ್ಚಿನ ಸೆಳೆತ ನೀಡಬೇಕಾಗಿ ಬರುತ್ತದೆ. ಒಂದು ವೇಳೆ ಸೂಕ್ತ ವ್ಯಾಯಾಮಗಳಿಂದ ಈ ಸ್ನಾಯುಗಳನ್ನು ದೃಢಗೊಳಿಸದೇ ಇದ್ದಲ್ಲಿ ಬೆನ್ನು ನೋವು ಅಪಾರವಾಗಿ ಬಾಧಿಸುತ್ತದೆ.

ಈ ತೊಂದರೆಯಿಂದ ತಪ್ಪಿಸಿಕೊಳ್ಳಲು ನಾಲ್ಕನೆಯ ತಿಂಗಳಿನಿಂದಲೇ ಬೆನ್ನುಮೂಳೆ ಮತ್ತು ಸೊಂಟದ ಸ್ನಾಯುಗಳಿಗೆ ಅವಶ್ಯವಾದ ಬಾಗುವಿಕೆಯ ವ್ಯಾಯಾಮಗಳನ್ನು ಮಾಡುವುದು ಅತ್ಯಂತ ಅವಶ್ಯವಾಗಿದೆ. (ಪ್ರಥಮ ಮೂರು ತಿಂಗಳಲ್ಲಿ ಬಗ್ಗುವ ವ್ಯಾಯಾಮಗಳಿಂದ ದೂರವಿರುವುದು ಒಳಿತು). ಆದರೆ ಹೊಟ್ಟೆಯ ಮೇಲೆ ಭಾರ ಬೀಳುವುದನ್ನು ತಪ್ಪಿಸಬೇಕು. ಸಾಧ್ಯವಾದಷ್ಟು ಹಿಂದಕ್ಕೆ ಮತ್ತು ಪಕ್ಕಕ್ಕೆ ಬಾಗುವ ವ್ಯಾಯಾಮಗಳನ್ನೂ ಮಾಡುವ ಮೂಲಕ ಸೊಂಟದ ಸ್ನಾಯುಗಳು ಸದೃಢಗೊಳ್ಳುವುದರಿಂದ ಬೆನ್ನುನೋವಿನಿಂದ ಬಿಡುಗಡೆಯೂ ದೊರಕಿದಂತಾಗುತ್ತದೆ ಹಾಗೂ ಮುಂದೆ ಹೆರಿಗೆಯ ಸಮಯದಲ್ಲಿಯೂ ನೆರವಿಗೆ ಬರುತ್ತದೆ.

ಗರ್ಭಾವಸ್ಥೆಯ ಮಧುಮೇಹದಿಂದ ರಕ್ಷಣೆ ದೊರಕುತ್ತದೆ
ಅನುವಂಶಿಕವಾಗಿ ಅಥವಾ ಸ್ಥೂಲಕಾಯದಿಂದಾಗಿ ಗರ್ಭಾವಸ್ಥೆಯ ಮಧುಮೇಹಕ್ಕೆ (gestational diabetes) ಒಳಗಾಗುವ ಸಾಧ್ಯತೆ ಇದ್ದಲ್ಲಿ ವ್ಯಾಯಾಮಗಳು ನಿಮಗೆ ಅನಿವಾರ್ಯ. ಏಕೆಂದರೆ ಗರ್ಭಕಾಲದಲ್ಲಿ ರಕ್ತದಲ್ಲಿ ಇನ್ಸುಲಿನ್ ಸ್ರವಿಕೆ ಏರುಪೇರಾಗಿ ಮಧುಮೇಹದ ತಾತ್ಕಾಲಿಕ ಪ್ರಭಾವಕ್ಕೆ ಒಳಗಾಗಬೇಕಾಗುತ್ತದೆ.


ಇದಕ್ಕೆ ಔಷಧಿಗಳು ಇವೆಯಾದರೂ ಇದರ ಅಡ್ಡಪರಿಣಾಮಗಳು ಶಿಶುವಿಗೂ ತೊಂದರೆಯಾಗಬಹುದಾದ ಸಾಧ್ಯತೆ ಇರುವುದರಿಂದ ವೈದ್ಯರು ವ್ಯಾಯಾಮವನ್ನೇ ಹೆಚ್ಚಾಗಿ ಸಲಹೆ ನೀಡುತ್ತಾರೆ. ತೊಂದರೆ ಬಂದ ಬಳಿಕ ವೈದ್ಯರು ಹೇಳಿ ವ್ಯಾಯಾಮ ಮಾಡುವುದಕ್ಕಿಂತ ಪ್ರಾರಂಭದಿಂದಲೇ ಸೂಕ್ತ ವ್ಯಾಯಾಮಗಳ ಮೂಲಕ ಈ ತೊಂದರೆಯೇ ಬರದಂತೆ ನೋಡಿಕೊಳ್ಳುವುದು ಜಾಣತನ, ಅಲ್ಲವೇ.?

ಆರೋಗ್ಯವಂತ ಶಿಶುವಿನ ಜನನಕ್ಕೆ ಸಹಾಯವಾಗುತ್ತದೆ
ಪ್ರಾರಂಭದ ದಿನಗಳಿಂದಲೂ ಸೂಕ್ತ ವ್ಯಾಯಾಮಗಳನ್ನು ಮಾಡುತ್ತಾ ಬಂದಿರುವ ಮಹಿಳೆಯರಿಗೆ ಜನಿಸಿದ ಶಿಶುಗಳು ವ್ಯಾಯಾಮ ಮಾಡದೇ ಇರುವವರಿಗೆ ಜನಿಸಿದ ಶಿಶುಗಳಿಗಿಂತಲೂ ಹೆಚ್ಚು ಆರೋಗ್ಯಕರವಾಗಿ ಜನಿಸಿರುವುದು ಸಂಶೋಧನೆಗಳಿಂದ ದೃಢಪಟ್ಟಿದೆ.

English summary

Good reasons to exercise in pregnancy

There are lots of reasons to exercise through all three trimesters of pregnancy for both you and baby, from reducing the risk of pregnancy, So today boldsky kannada share such good tips to stay fit in during pregnancy. Here's the lowdown on pregnancy and exercise, from getting started to staying motivated.
Story first published: Tuesday, September 22, 2015, 18:37 [IST]
X
Desktop Bottom Promotion