For Quick Alerts
ALLOW NOTIFICATIONS  
For Daily Alerts

ಮಕ್ಕಳಲ್ಲಿ ಕಾಣುವ ಖಿನ್ನತೆಯ ಈ ಲಕ್ಷಣಗಳನ್ನು ಎಂದಿಗೂ ಕಡೆಗಣಿಸದಿರಿ!

|

ಯಾವುದೇ ತಂದೆ ತಾಯಿಗಳಿಗೆ ಮಕ್ಕಳ ಬಗ್ಗೆ ಹೆಚ್ಚು ಗಮನವಿರಬೇಕು. ಅವರ ಆಟ ಪಾಠದ ಬಗ್ಗೆ, ಅವರ ಚಟುವಟಿಕೆಯ ಬಗ್ಗೆ, ಅವರ ಆಹಾರದ ಬಗ್ಗೆ ಪ್ರತಿ ಕ್ಷಣ ಗಮನ ವಹಿಸಿ ಮಾನಸಿಕವಾಗಿ ಅಥವಾ ದೈಹಿಕವಾಗಿ ಅವರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಮಕ್ಕಳು ಎಂದ ಮೇಲೆ ಏಳುವುದು ಬೀಳುವುದು ಸಹಜ. ಆದರೆ ಬಿದ್ದಾಗ ಸಮಾಧಾನ ಮಾಡಲು ತಮಗೆ ಯಾರೂ ಇಲ್ಲ ಎಂಬ ಭಾವನೆ ಮಕ್ಕಳಿಗೆ ಅಷ್ಟು ಚಿಕ್ಕ ವಯಸ್ಸಿಗೆ ಬರಲು ಬಿಡಬಾರದು. ಏಕೆಂದರೆ ಇದು ಮಕ್ಕಳಲ್ಲಿ ಮಾನಸಿಕ ಖಿನ್ನತೆಗೆ ಕಾರಣವಾಗುವ ಮೊಟ್ಟಮೊದಲನೆಯ ಅಂಶವಾಗಿ ಬದಲಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹಿಂದಿನ ಕಾಲದಂತೆ ಮಕ್ಕಳನ್ನು ಹೆತ್ತು ಅವರನ್ನು ಲಾಲಿಸಿ, ಪಾಲಿಸಿ, ಮುದ್ದಾಡುತ್ತಿದ್ದ ಸಂಭ್ರಮ ಇತ್ತೀಚಿನ ಪೋಷಕರಲ್ಲಿ ಕಾಣಿಸುತ್ತಿಲ್ಲ. ಕೇವಲ ತಮ್ಮ ದುಡಿಮೆಯ ಒತ್ತಡದಿಂದ ಪೋಷಕರುಗಳು ತಮ್ಮ ಕುಟುಂಬಕ್ಕೆ ಸಂಬಂಧಪಟ್ಟ ಯಾವುದೇ ವಿಚಾರಗಳ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳುತ್ತಿಲ್ಲ. ತಮ್ಮ ಮಕ್ಕಳ ಬಗ್ಗೆ ಕೂಡ ತುಂಬಾ ಅಜಾಗರೂಕತೆ ವಹಿಸುತ್ತಾರೆ.

ಇತ್ತೀಚಿನ ಸಂಸ್ಕೃತಿ ಹೇಗಾಗಿದೆ ಎಂದರೆ ಪೋಷಕರು ತಮ್ಮ ಪಾಡಿಗೆ ತಾವು ಕೆಲಸಕ್ಕೆ ಹೊರಟು, ತಮ್ಮ ಮಕ್ಕಳನ್ನು ನೋಡಿಕೊಳ್ಳಲು ಒಬ್ಬ ಆಯಾ ರನ್ನು ನೇಮಿಸಿ ಅವರಿಗೆ ತಿಂಗಳಿಗಿಷ್ಟು ಸಂಬಳ ಎಂದು ಗೊತ್ತು ಮಾಡಿ ಬಿಡುತ್ತಾರೆ ಮತ್ತು ಅಲ್ಲಿಗೆ ಅವರ ಜವಾಬ್ದಾರಿ ಮುಗಿದು ಹೋಯಿತು ಎಂದು ತಿಳಿಯುತ್ತಾರೆ. ಇದು ಇತ್ತೀಚೆಗೆ ಬಹುತೇಕ ಎಲ್ಲಾ ಕಡೆಯಲ್ಲೂ ಕಂಡು ಬರುತ್ತಿರುವ ಮನಸ್ಸು ಹಿಂಡುವ ದೃಶ್ಯ. ಆದರೆ ಒಂದು ವಿಚಾರವನ್ನು ಪೋಷಕರು ಯೋಚನೆ ಮಾಡಬೇಕು. ತಮ್ಮ ಮಕ್ಕಳಿಗೆ ತಂದೆ ತಾಯಿಯ ಪ್ರೀತಿಯನ್ನು ಬೇರೆಯವರು ಕೊಡಲು ಸಾಧ್ಯವೇ? ಮಕ್ಕಳಿಗೆ ತಂದೆ ತಾಯಿಯ ಬಳಿ ಇದ್ದಷ್ಟು ಆರಾಮದಾಯಕತೆ ಬೇರೆಯವರ ಬಳಿ ಸಿಗುತ್ತದೆಯೇ?

ಮಕ್ಕಳ ಮನಸ್ಸು ಹಾಲಿನಷ್ಟೇ ಪರಿಶುದ್ಧ. ಸ್ವಲ್ಪವೂ ಕಲ್ಮಶವಿಲ್ಲದ ತಿಳಿ ನೀರಿನಷ್ಟೇ ಪ್ರಶಾಂತವಾದ ಮನಸ್ಸುಳ್ಳ ಮಕ್ಕಳು ತಾವು ದಾರಿಯಲ್ಲಿ ಸಣ್ಣದಾಗಿ ಎಡವಿ ಬಿದ್ದರೂ, ಅಥವಾ ತಮ್ಮ ಕೈಯಲ್ಲಿದ್ದ ಲಾಲಿಪಪ್, ಐಸ್ ಕ್ರೀಮ್ ಅನ್ನು ಯಾರಾದರೂ ತಮಾಷೆಗಾಗಿ ಕಿತ್ತುಕೊಂಡರೂ ಅದನ್ನು ತಂದೆ - ತಾಯಿಗಳ ಬಳಿ ಚಾಚೂತಪ್ಪದೆ ಬಂದು ವರದಿ ಒಪ್ಪಿಸುತ್ತಾರೆ.

ಬೇಕು-ಬೇಡಗಳನ್ನು ಮಕ್ಕಳೇ ನಿರ್ಧರಿಸುತ್ತಾರೆ

ಬೇಕು-ಬೇಡಗಳನ್ನು ಮಕ್ಕಳೇ ನಿರ್ಧರಿಸುತ್ತಾರೆ

ಪುಟ್ಟ ಮಕ್ಕಳಿಗೆ ಸ್ವಲ್ಪ ಬುದ್ಧಿ ಬಂದ ತಕ್ಷಣವೇ ತಮಗೆ ತಮ್ಮ ಪೋಷಕರೇ ರಕ್ಷಕರು ಎಂಬ ಭಾವನೆ ಅದಾಗಲೇ ಬಂದು ಬಿಟ್ಟಿರುತ್ತದೆ. ಹಾಗಾಗಿ ತಮ್ಮ ಎಲ್ಲಾ ಬೇಕು ಬೇಡಗಳಿಗೆ ತಂದೆ - ತಾಯಿಯನ್ನೇ ಅವಲಂಬಿಸಿರುತ್ತಾರೆ. ಆದರೆ ಪೋಷಕರು ತಮಗಿರುವ ಸಾಕಷ್ಟು ಕೆಲಸದ ಹಾಗೂ ಜೀವನದ ಇನ್ನಿತರ ಒತ್ತಡಗಳಿಂದ ಮತ್ತು ಕೆಲವೊಮ್ಮೆ ಮಕ್ಕಳು ಎಂಬ ತಾತ್ಸಾರ ಭಾವದಿಂದ ಅವರ ಮಾತನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳಲು ಹೋಗುವುದಿಲ್ಲ.

ಇದು ಮಕ್ಕಳ ಮನಸ್ಸಿನ ಮೇಲೆ ಬೇಸರ ಉಂಟು ಮಾಡುತ್ತದೆ. ಕೆಲವು ಮಕ್ಕಳು ಅಷ್ಟು ಚಿಕ್ಕ ವಯಸ್ಸಿಗೆ ಇಂತಹ ವಿಚಾರಗಳನ್ನು ತಲೆಗೆ ಹಾಕಿಕೊಂಡು ತುಂಬಾ ಕೊರಗುತ್ತಾರೆ. ಇದು ಅವರ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರಿ, ಅವರ ನಡವಳಿಕೆಯ ಮೇಲೆ ಕೂಡ ಪ್ರಭಾವ ಬೀರುವುದರಲ್ಲಿ ಯಾವುದೇ ಅನುಮಾನ ಇರುವುದಿಲ್ಲ.

ಪ್ರತಿ ದಿನವೂ ಮಕ್ಕಳ ಜೊತೆ ಒಡನಾಟದಲ್ಲಿರುವ ಪೋಷಕರಿಗೆ ತಮ್ಮ ಮಕ್ಕಳಲ್ಲಿ ಕಂಡುಬರುವ ಸಣ್ಣ ಪುಟ್ಟ ಬದಲಾವಣೆಗಳು ತಿಳಿಯುತ್ತವೆ. ಹಾಗಾಗಿ ಪ್ರತಿ ದಿನ ಖುಷಿಯಾಗಿ ತುಂಟಾಟ ಮಾಡುತ್ತಿದ್ದ ಮಕ್ಕಳು ಇಂದು ಸಪ್ಪಗೆ ಒಂದು ಕಡೆ ಕುಳಿತಿದ್ದರೆ, ಪೋಷಕರಿಗೆ ಇದರ ಬಗ್ಗೆ ಗಮನಕ್ಕೆ ಬಾರದೆ ಇರದು.

ಮಾನಸಿಕ ಖಿನ್ನತೆಗೆ ಒಳಗಾದ ಮಕ್ಕಳಲ್ಲಿ ಕೇವಲ ನಕಾರಾತ್ಮಕ ಭಾವನೆಗಳು ಮೂಡಿ ಬರಲು ಪ್ರಾರಂಭವಾಗಿ ಮಕ್ಕಳನ್ನು ಹಟಮಾರಿಗಳನ್ನಾಗಿ ಪರಿವರ್ತಿಸುತ್ತವೆ ಎಂದು ಮಾನಸಿಕ ತಜ್ಞರು ಹೇಳುತ್ತಾರೆ. ಚಿಕ್ಕ ವಯಸ್ಸಿನಲ್ಲಿ ಉಂಟಾಗುವ ಯಾವುದೇ ಬಗೆಯ ಮಾನಸಿಕ ಅಥವಾ ದೈಹಿಕ ಆಘಾತ ಮಕ್ಕಳ ಮನಸ್ಸಿನಲ್ಲಿ ದೀರ್ಘ ಕಾಲದವರೆಗೆ ಮಾಸದ ಒಂದು ರೀತಿಯ ಕೆಟ್ಟ ನೆನಪಾಗಿ ಉಳಿದು ಬಿಡುತ್ತದೆ. ಇದು ಮಕ್ಕಳನ್ನು ಕೆಲವೊಮ್ಮೆ ದಾರಿ ತಪ್ಪಿಸುವ ಹಂತಕ್ಕೆ ಕೊಂಡೊಯ್ಯುತ್ತದೆ. ಹಾಗಾಗಿ ಪೋಷಕರು ಈ ಬಗ್ಗೆ ನಿರ್ಲಕ್ಷ ಮಾಡದೆ, ತಮ್ಮ ಮಕ್ಕಳ ಬಗ್ಗೆ ಆಗಾಗ ಗಮನ ವಹಿಸುತ್ತಿರಬೇಕು.

ಒಮ್ಮೆ ಮಾನಸಿಕ ಖಿನ್ನತೆಗೆ ಗುರಿಯಾದ ಮಕ್ಕಳು ತೋರಿಸುವ ಲಕ್ಷಣಗಳು ಈ ರೀತಿ ಇರುತ್ತವೆ

1. ಯಾವುದರಲ್ಲೂ ಆಸಕ್ತಿ ಇರುವುದಿಲ್ಲ

1. ಯಾವುದರಲ್ಲೂ ಆಸಕ್ತಿ ಇರುವುದಿಲ್ಲ

ಯಾವುದೇ ಒಬ್ಬ ವ್ಯಕ್ತಿಗೆ ಮಾನಸಿಕ ಸ್ಥಿತಿ ಸರಿ ಇಲ್ಲದಿದ್ದರೆ ಆತನನ್ನು ಸಮಾಜ ಬೇರೆ ದೃಷ್ಟಿಯಲ್ಲಿ ನೋಡುತ್ತದೆ ಮತ್ತು ಆತನೂ ಕೂಡ ತನ್ನ ಸುತ್ತಮುತ್ತಲಿನವರ ಜೊತೆ ಹಾಗೂ ಯಾವುದೇ ವಿಚಾರಗಳ ಬಗ್ಗೆ ಮೊದಲಿನಷ್ಟು ಆಸಕ್ತಿ ವಹಿಸುವುದಿಲ್ಲ. ಇದು ಮಕ್ಕಳ ವಿಚಾರದಲ್ಲೂ ಆಗುತ್ತದೆ. ಮಾನಸಿಕ ಖಿನ್ನತೆಗೆ ಗುರಿಯಾದ ಯಾವುದೇ ಮಕ್ಕಳಿಗೆ ಪೋಷಕರಾಗಲೀ ಅಥವಾ ಶಾಲೆಯಲ್ಲಿ ಸಹಪಾಠಿಗಳಾಗಲೀ ಆಸೆ ಹುಟ್ಟಿಸುವ ಯಾವುದೇ ವಿಚಾರಗಳ ಮೇಲೆ ಲಕ್ಷ್ಯ ಇರುವುದಿಲ್ಲ.

ಆಟಪಾಠಗಳ ಬಗ್ಗೆ ನಿರ್ಲಕ್ಷತೆ ತೋರಿ ತನ್ನದೇ ಆದ ಲೋಕದಲ್ಲಿ ಮುಳುಗಿ ಬಿಡುತ್ತದೆ. ತುಂಬಾ ಸಕ್ರಿಯವಾಗಿರುವ ಮಕ್ಕಳು ಕೂಡ ಬಾಯಲ್ಲಿ ತಮ್ಮಿಷ್ಟಗಳನ್ನು ವ್ಯಕ್ತಪಡಿಸುತ್ತಾರೆ. ಆದರೆ ಕಾಲಕ್ರಮೇಣ ಅವುಗಳ ಬಗ್ಗೆ ಆಸಕ್ತಿ ಕಳೆದುಕೊಂಡು ಸುಮ್ಮನಾಗಿ ಬಿಡುತ್ತಾರೆ. ಪ್ರೌಢಾವಸ್ಥೆಗೆ ಹತ್ತಿರವಾಗುತ್ತಿರುವ ಮಕ್ಕಳು ಅಷ್ಟು ಚಿಕ್ಕ ವಯಸ್ಸಿಗೆ ತಮ್ಮ ಮಾನಸಿಕ ನೆಮ್ಮದಿಗಾಗಿ ಕೆಲವೊಂದು ಕೆಟ್ಟ ಚಟಗಳ ದಾಸರಾಗುವುದೂ ಇದೆ. ಇದನ್ನು ಆರಂಭಿಕ ಹಂತದಲ್ಲಿ ತಡೆ ಹಿಡಿಯಬೇಕಾದ ಅತ್ಯಂತ ದೊಡ್ಡ ಜವಾಬ್ದಾರಿ ಪೋಷಕರ ಮೇಲಿದೆ.

ಮಾನಸಿಕ ಖಿನ್ನತೆಗೆ ಗುರಿಯಾದ ಮಕ್ಕಳಲ್ಲಿ ಹುರುಪು, ಚೈತನ್ಯ ಸತ್ತು ಹೋಗಿರುತ್ತದೆ. ಪೋಷಕರ ಜೊತೆಯಾಗಲೀ ಅಥವಾ ಶಾಲೆಯಲ್ಲಾಗಲೀ ಮೊದಲಿನ ರೀತಿ ಅಷ್ಟು ಚುರುಕಾಗಿರುವುದಿಲ್ಲ. ಇಂತಹ ಸಮಯಗಳಲ್ಲಿ ಮಕ್ಕಳನ್ನು ಯಾರಾದರೂ ಗೇಲಿ ಮಾಡಿದರೆ, ಅದಕ್ಕೆ ವಿರುದ್ಧವಾದ ಕೆಲಸಗಳನ್ನೇ ಮಾಡುತ್ತಾರೆ. ಉದಾಹರಣೆಗೆ ತುಂಬಾ ದಪ್ಪ ಇರುವ ಮಕ್ಕಳನ್ನು ಯಾರಾದರೂ ಆಡಿಕೊಂಡರೆ, ಅಂತಹ ಮಕ್ಕಳು ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಆಹಾರ ಸೇವನೆಯನ್ನೇ ಬಿಟ್ಟು ಬಿಡುತ್ತಾರೆ. ಇದು ಅವರ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಇನ್ನಷ್ಟು ಕೆಟ್ಟ ಪ್ರಭಾವ ಬೀರುವುದರಲ್ಲಿ ಅನುಮಾನವಿಲ್ಲ.

2. ಸದಾ ಒಬ್ಬಂಟಿಯಾಗಿರಲು ಬಯಸುವುದು

2. ಸದಾ ಒಬ್ಬಂಟಿಯಾಗಿರಲು ಬಯಸುವುದು

ಮಕ್ಕಳ ಮನಸ್ಸು ಸದಾ ಚಂಚಲ ಎಂದು ಹೇಳುತ್ತಾರೆ. ದೊಡ್ಡವರಿಗಿಂತ ಚುರುಕಾಗಿರುವ ಮಕ್ಕಳಿಗೆ ಒಮ್ಮೆ ಈ ಮಾನಸಿಕ ಖಿನ್ನತೆ ಎಂಬ ಕಾಯಿಲೆ ಕಂಡುಬಂದ ತಕ್ಷಣ ಇದ್ದಕ್ಕಿದ್ದಂತೆ ಮಂಕಾಗುತ್ತಾರೆ. ಯಾರೊಬ್ಬರ ಜೊತೆಯೂ ಬೆರೆಯಲು ಇಷ್ಟ ಪಡುವುದಿಲ್ಲ. ತಮ್ಮ ಪಾಡಿಗೆ ತಾವು ಒಬ್ಬಂಟಿಯಾಗಿ ಇರಲು ಬಯಸುತ್ತಾರೆ. ಯಾವುದೇ ಸಭೆ ಸಮಾರಂಭಗಳಲ್ಲಿ, ತಮ್ಮ ಸ್ನೇಹಿತರ ಬರ್ತಡೆ ಪಾರ್ಟಿಗಳಲ್ಲಿ ಅಥವಾ ತಮ್ಮ ಸ್ವಂತ ಮನೆಯಲ್ಲಿ ನಡೆಯುವ ಯಾವುದೇ ಖುಷಿಯಾದ ಕಾರ್ಯಕ್ರಮಗಳಲ್ಲಿ ಕೂಡ ತಾವು ಕಾಣಿಸಿಕೊಳ್ಳಲು ಇಷ್ಟ ಪಡುವುದಿಲ್ಲ. ಮನೆಯಲ್ಲಿ ಮಾಡಿದ ತಮಗೆ ಇಷ್ಟವಾದ ಸಿಹಿ ತಿನಿಸುಗಳನ್ನು ತಿನ್ನಲು ಕೂಡ ಮುಂದಾಗುವುದಿಲ್ಲ ಮತ್ತು ಮೊದಲಿನಂತೆ ತಮಗೆ ಎದುರಾಗುತ್ತಿದ್ದ ಎಲ್ಲಾ ಕಷ್ಟ ಸುಖಗಳನ್ನು ತಂದೆ - ತಾಯಿಗಳ ಬಳಿ ಹಂಚಿಕೊಳ್ಳಲು ಬಯಸುವುದಿಲ್ಲ.

3. ಯಾರ ಸಂಪರ್ಕವೂ ಬೇಡ ಎನಿಸಿಬಿಡುತ್ತದೆ

3. ಯಾರ ಸಂಪರ್ಕವೂ ಬೇಡ ಎನಿಸಿಬಿಡುತ್ತದೆ

ಮನೆಯಲ್ಲಿನ ಮಕ್ಕಳನ್ನು ತುಂಬಾ ಜನರು ಇಷ್ಟಪಡುತ್ತಾರೆ, ಮುದ್ದು ಮಾಡುತ್ತಾರೆ. ದೊಡ್ಡವರಿಗಿಂತ ಮಕ್ಕಳಿಗೇ ನೆಂಟರಿಷ್ಟರು ಜಾಸ್ತಿ ಎನ್ನುವ ಹಾಗಿರುತ್ತದೆ. ಗೆಳೆಯರು, ಪೋಷಕರು, ಅಕ್ಕಪಕ್ಕದ ಮನೆಯವರು, ಬಂಧು - ಬಾಂಧವರು ಹೀಗೆ ಎಲ್ಲರೂ ಮನೆಗೆ ಬಂದು ಹೋದಾಗ ಮಕ್ಕಳ ಮೇಲೆ ವಿಶೇಷ ಕಾಳಜಿ ಪ್ರೀತಿ ತೋರುತ್ತಾರೆ. ತಿಂಡಿ ತಿನಿಸುಗಳನ್ನು ಕೊಡಿಸುತ್ತಾರೆ.

ಆದರೆ ಮಾನಸಿಕ ಖಿನ್ನತೆಗೆ ಗುರಿಯಾದ ಮಕ್ಕಳು ಇದ್ದಕ್ಕಿದ್ದಂತೆ ಇವೆಲ್ಲವುಗಳಿಂದ ತಮ್ಮನ್ನು ತಾವು ದೂರ ಮಾಡಿಕೊಳ್ಳಲು ಬಯಸುತ್ತಾರೆ. ಬೇರೆಯವರ ಜೊತೆ ಇರಲಿ, ನಮ್ಮ ನೆಚ್ಚಿನವರ ಜೊತೆ ಕೂಡ ಹೆಚ್ಚು ಬೆರೆಯಲು ಇಷ್ಟ ಪಡುವುದಿಲ್ಲ. ಸದಾ ಯಾವುದೋ ಒಂದು ಆತಂಕ ಮಕ್ಕಳನ್ನು ಕಾಡುವುದರಿಂದ ತಾವು ಒಬ್ಬಂಟಿಯಾಗಿರುವುದರಲ್ಲಿ ಸಾಕಷ್ಟು ಆರಾಮದಾಯಕ ಅನುಭವವನ್ನು ಪಡೆಯುತ್ತಾರೆ.

4. ನಿದ್ರಾ ಹೀನತೆಯ ಸಮಸ್ಯೆ

4. ನಿದ್ರಾ ಹೀನತೆಯ ಸಮಸ್ಯೆ

ಮಕ್ಕಳಿಗೆ ರಾತ್ರಿಯ ಸಮಯದಲ್ಲಿ ನಿದ್ರೆ ಬಹಳ ಮುಖ್ಯ. ಪುಟ್ಟ ಮಗುವಾಗಿದ್ದಾಗ ಯಾವಾಗಂದ್ರೆ ಆವಾಗ ನಿದ್ರೆಗೆ ಜಾರುತ್ತಿದ್ದ ಮಕ್ಕಳಿಗೆ ನಿಧಾನವಾಗಿ ರಾತ್ರಿಯ ಸಮಯದಲ್ಲಿ ನಿದ್ರೆ ಮಾಡುವುದು ರೂಢಿಯಾಗಿರುತ್ತದೆ. ಅದರಲ್ಲೂ ವೈದ್ಯರು ಹೇಳುವಂತೆ ದೊಡ್ಡವರಿಗಿಂತ ಹೆಚ್ಚು ಸಮಯ ಮಕ್ಕಳು ನಿದ್ರೆ ಮಾಡಬೇಕಂತೆ. ಇದು ಅವರ ನಾಳಿನ ದಿನದಲ್ಲಿ ಹೆಚ್ಚು ಚಟುವಟಿಕೆಯಿಂದ ಕೂಡಿರಲು ಸಹಾಯಕವಾಗುತ್ತದೆ.

ಆದರೆ ಮಾನಸಿಕ ಖಿನ್ನತೆಗೆ ಗುರಿಯಾದ ಮಕ್ಕಳಲ್ಲಿ ರಾತ್ರಿಯ ಸಮಯದಲ್ಲಿ ನಿದ್ರೆ ಕಾಣಿಸುವುದಿಲ್ಲ. ಕೆಲವು ಮಕ್ಕಳು ಇಡೀ ರಾತ್ರಿ ಎಚ್ಚರವಾಗಿ ಇರುತ್ತಾರೆ. ಇದು ಕೂಡ ಮಾನಸಿಕವಾಗಿ ಅವರ ಬುದ್ಧಿ ಶಕ್ತಿಯ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ. ಇದರಿಂದ ಆಟಪಾಠಗಳಲ್ಲಿ ಸದಾ ಚುರುಕಾಗಿದ್ದ ಮಕ್ಕಳು ಇದ್ದಕ್ಕಿದ್ದಂತೆ ಎಲ್ಲಾ ಕೆಲಸಗಳಲ್ಲೂ ತುಂಬಾ ನಿಧಾನವಾಗಿ ಬಿಡುತ್ತಾರೆ. ಹಾಗಾಗಿ ಮಕ್ಕಳ ನಿದ್ರಾ ಹೀನತೆ ಪೋಷಕರಿಗೆ ಬಹಳ ಬೇಗನೆ ತಿಳಿಯುತ್ತದೆ ಎಂದು ವೈದ್ಯರು ಹೇಳುತ್ತಾರೆ.

5. ಸದಾ ಆಯಾಸದಿಂದ ಬಳಲುವುದು

5. ಸದಾ ಆಯಾಸದಿಂದ ಬಳಲುವುದು

ಮಕ್ಕಳ ಚುರುಕುತನ ಇನ್ನೊಬ್ಬರಿಗೆ ಮಾದರಿಯಾಗಿರುತ್ತದೆ. ಕೆಲವೊಮ್ಮೆ ದೊಡ್ಡವರಾದ ನಾವು ಸಹ ಮಕ್ಕಳ ಚಟುವಟಿಕೆಗಳಿಂದ ಸಾಕಷ್ಟು ಕಲಿಯುತ್ತೇವೆ ಮತ್ತು ಇತರರಿಗೂ ತಿಳಿಸಲು ಮುಂದಾಗುತ್ತೇವೆ. ಮಾನಸಿಕ ಖಿನ್ನತೆಗೆ ಗುರಿಯಾದ ಮಕ್ಕಳಲ್ಲಿ ಕೇವಲ ಇದಕ್ಕೆ ತದ್ವಿರುದ್ಧವಾದ ಗುಣ ಲಕ್ಷಣಗಳೇ ಕಾಣಿಸುತ್ತಿರುತ್ತವೆ.

ಯಾವುದೋ ಒಂದು ಸಣ್ಣ ವಿಷಯವನ್ನು ತಲೆಗೆ ತುಂಬಾ ಹಚ್ಚಿಕೊಂಡು, ಪ್ರತಿ ದಿನ ಅದರ ಬಗ್ಗೆ ಕೊರಗಿ ಮಾನಸಿಕವಾಗಿ ಮತ್ತು ದೈಹಿಕವಾಗಿ ತುಂಬಾ ಬಳಲಿದಂತೆ ಕಂಡು ಬರುತ್ತಾರೆ. ಇದ್ದಕ್ಕಿದ್ದಂತೆ ಸೋಮಾರಿಯಾಗುತ್ತಾರೆ, ದೊಡ್ಡವರು ಹೇಳಿದ ಮಾತುಗಳನ್ನು ಕಿವಿಗೆ ಹಾಕಿಕೊಳ್ಳದೆ ಹಠಮಾರಿಗಳಾಗುತ್ತಾರೆ, ಕೂತಲ್ಲಿ ನಿಂತಲ್ಲಿ ತೂಕಡಿಸುತ್ತಾರೆ. ಓದುವ ವಿಷಯದಲ್ಲಿ ಆಸಕ್ತಿ ಕಳೆದುಕೊಂಡು ತಮ್ಮ ಮಾನಸಿಕ ಆತಂಕವನ್ನು ಇನ್ನಷ್ಟು ಹೆಚ್ಚು ಮಾಡಿಕೊಳ್ಳುತ್ತಾರೆ.

6. ಹೊಟ್ಟೆ ಹಸಿವಿನ ಬಗ್ಗೆ ಅಷ್ಟು ಆಸಕ್ತಿ ಇರುವುದಿಲ್ಲ

6. ಹೊಟ್ಟೆ ಹಸಿವಿನ ಬಗ್ಗೆ ಅಷ್ಟು ಆಸಕ್ತಿ ಇರುವುದಿಲ್ಲ

ಮಕ್ಕಳು ತಮ್ಮ ವಯಸ್ಸಿನಲ್ಲಿ ದಷ್ಟಪುಷ್ಟವಾಗಿ ಬೆಳೆಯಬೇಕೆಂದರೆ ಹೆಚ್ಚು ಪೋಷಕಾಂಶಗಳನ್ನು ಒಳಗೊಂಡ ಆಹಾರಗಳನ್ನು ಸದಾ ಸೇವಿಸಬೇಕು. ಪೋಷಕರು ಸಹ ಇದರ ಬಗ್ಗೆ ಹೆಚ್ಚು ಗಮನ ವಹಿಸುತ್ತಾರೆ. ಮಾನಸಿಕವಾಗಿ ಬಳಲಿದ ಮಕ್ಕಳ ವಿಚಾರದಲ್ಲಿ ಇದು ಸಾಧ್ಯವಾಗುವುದೇ ಇಲ್ಲ. ಮೊದಲೇ ಪೋಷಕರು ಹೇಳಿದ ಮಾತುಗಳನ್ನು ಮಕ್ಕಳು ಕೇಳುವುದಿಲ್ಲ.

ಆಹಾರದ ವಿಚಾರದಲ್ಲಿ ಕೂಡ ಪೋಷಕರು ಸೂಚಿಸಿದ ಆಹಾರಗಳನ್ನು ಬಿಟ್ಟು ತಮ್ಮ ಹಠದ ಸ್ವಭಾವದಿಂದ ತಮಗೆ ಬೇಕಾದ ಆಹಾರಗಳನ್ನು ತಿನ್ನಲು ಮುಂದಾಗುತ್ತಾರೆ ಇಲ್ಲವೇ ಯಾವುದೇ ಆಹಾರಗಳನ್ನು ತಿನ್ನಲು ಇಷ್ಟ ಪಡುವುದಿಲ್ಲ. ಇದು ಬರುಬರುತ್ತಾ ಮಕ್ಕಳಲ್ಲಿ ಬೊಜ್ಜಿನ ಅಂಶಕ್ಕೆ ಕಾರಣವಾಗುತ್ತದೆ ಎಂದು ಹೇಳುತ್ತಾರೆ. ಕೆಲವು ಮಕ್ಕಳು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಅನುಭವಿಸುತ್ತಾರೆ. ಚಿಕ್ಕ ವಯಸ್ಸಿಗೆ ಬೀದಿ ಬದಿಯ ತಿಂಡಿ ತಿನಿಸುಗಳನ್ನು ರೂಡಿ ಮಾಡಿಕೊಂಡಿರುವ ಮಕ್ಕಳು ಅದೇ ಆಹಾರಗಳು ಬೇಕೆಂದು ಹಠ ಹಿಡಿಯುತ್ತಾರೆ. ಹಾಗಾಗಿ ಇದೂ ಸಹ ಒಂದು ಬಗೆಯ ಮಾನಸಿಕ ಬದಲಾವಣೆ ಎಂದು ತಿಳಿಯಬಹುದು.

English summary

How to Tell If Your Child Shows Symptoms of Depression

Here we are discussing about These Are The Signs That Recognize A Child With Depression. Depression shows itself in many different ways and is recognizable if seen through a keen and caring eye. Some of how it is evident that your child has depression is as follows, Read more.
X