For Quick Alerts
ALLOW NOTIFICATIONS  
For Daily Alerts

ಶ್ರಾವಣ ಮಾಸ 2019 : ಯಾವ ಆಹಾರಗಳನ್ನು ಸೇವಿಸಬೇಕು? ಯಾವ ಆಹಾರವನ್ನು ಸೇವಿಸಬಾರದು?

|

ಶ್ರಾವಣ ಮಾಸ ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವಾದ ತಿಂಗಳು. ಇದನ್ನು ದೈವಿಕ ಮಾಸ ಎಂದು ಪರಿಗಣಿಸಲಾಗುವುದು. ಶ್ರಾವಣದಲ್ಲಿ ಭಕ್ತಾಧಿಗಳು ಇಷ್ಟ ದೇವರಿಗಾಗಿ ವ್ರತ-ಉಪವಾಸವನ್ನು ಕೈಗೊಳ್ಳುತ್ತಾರೆ. ಇದರಿಂದ ಇಷ್ಟಾರ್ಥಗಳು ಪೂರೈಸುತ್ತವೆ ಎನ್ನುವ ನಂಬಿಕೆಯನ್ನು ಹೊಂದಿದ್ದಾರೆ. ಶ್ರಾವಣ ಮಾಸದಲ್ಲಿ ವಿವಿಧ ಹಬ್ಬಗಳು, ವ್ರತಗಳು ಹಾಗೂ ಉಪವಾಸ ಕ್ರಮಗಳು ಜರುಗುವುದರಿಂದ ದೇವತೆಗಳಿಗೆ ಮೀಸಲಾದ ತಿಂಗಳು ಎಂದು ಕರೆಯುತ್ತಾರೆ. ಈ ಮಾಸದಲ್ಲಿ ಕೈಗೊಳ್ಳುವ ಕೆಲಸ ಕಾರ್ಯಗಳು ಅತ್ಯಂತ ಯಶಸ್ಸು ಹಾಗೂ ಸಮೃದ್ಧಿಯನ್ನು ತಂದುಕೊಡುವುದು ಎನ್ನಲಾಗುತ್ತದೆ.

ಶ್ರವಣ ನಕ್ಷತ್ರ ಹುಣ್ಣಿಮೆಯಂದು ಬಂದಾಗ ಶ್ರಾವಣ ಮಾಸ ಎಂದು ಕರೆಯುತ್ತಾರೆ. ಹಿಂದೂ ಪಂಚಾಂಗದಲ್ಲಿ ಹುಣ್ಣಿಮೆಯಂದು ಬರುವ ನಕ್ಷತ್ರದ ಹೆಸರನ್ನು ಆಯಾ ಮಾಸಗಳಿಗೆ ಇಡಲಾಗಿದೆ. ಹನ್ನೆರಡು ಮಾಸಗಳಲ್ಲಿ ಚಂದ್ರನ ಮಾಸವೆಂದರೆ ಶ್ರಾವಣ ಮಾಸ. ಚಂದ್ರಮಾ ಮನಸೋ ಜಾತಃ ಎಂಬಂತೆ ಸಂಪೂರ್ಣವಾಗಿ ಮನಸ್ಸಿನ ಮೇಲೆ ಪ್ರಭಾವ ಬೀರುವ ತಿಂಗಳು. ಈ ಮಾಸದಲ್ಲಿ ಚಂದ್ರನ ಪ್ರಭಾವ ಅಧಿಕವಾಗಿರುವುದರಿಂದ ಇದನ್ನು ವಿಶೇಷವಾಗಿ ಗಣನೆಗೆ ತೆಗೆದುಕೊಂಡ ನಮ್ಮ ಪೂರ್ವಜರು ಚಂದ್ರನ ಚಾರದಿಂದ ಉಂಟಾಗಬಹುದಾದ ತೊಂದರೆಗಳನ್ನು ನಿವಾರಿಸುವುದಕ್ಕಾಗಿ ಮತ್ತು ದೇಹ ಹಾಗೂ ಮನಸ್ಸಿನ ಆರೋಗ್ಯಕ್ಕಾಗಿ ಹಬ್ಬ ಹರಿದಿನಗಳ ಆಚರಣೆಯನ್ನು ವಿಧಿಸಿದ್ದಾರೆ.

Shravan Month

ಇನ್ನು ಆತ್ಮಕಾರಕನಾದ ರವಿಯು ಕರ್ಕಾಟಕ ರಾಶಿಯಲ್ಲಿ ಶ್ರಾವಣಮಾಸದಲ್ಲಿ ಸಂಚರಿಸುತ್ತಾನೆ. ಕರ್ಕಾಟಕ ರಾಶಿಯಲ್ಲಿ ಪುನರ್ವಸು ನಾಲ್ಕನೇ ಪಾದ, ಪುಷ್ಯ ಹಾಗೂ ಆಶ್ಲೇಷ ನಕ್ಷತ್ರಗಳಿವೆ. ರವಿಯು ಪುನರ್ವಸು ನಕ್ಷತ್ರದಲ್ಲಿ ಸಂಚರಿಸುವಾಗ ಪುನರ್ವಸು ನಕ್ಷತ್ರದ ಅಧಿಪತಿಯಾದ ಗುರುವಿನಂತೆ ಪ್ರಭಾವ ಬೀರುತ್ತಾನೆ. ಪುಷ್ಯ ನಕ್ಷತ್ರದಲ್ಲಿ ಸಂಚರಿಸುವಾಗ ಅದರ ಅಧಿಪತಿಯಾದ ಬುಧನಂತೆ ಪ್ರಭಾವ ಬೀರುತ್ತಾನೆ. ಇಷ್ಟೇ ಅಲ್ಲದೆ ಶ್ರಾವಣ ಮಾಸ ಇಂಗ್ಲಿಷ್ ತಿಂಗಳ ಆಗಸ್ಟ್ ಮಾಹೆಯಲ್ಲಿ ಬಂದು ಅದು ರವಿಯ ಆಧಿಪತ್ಯಕ್ಕೆ ಒಳಪಟ್ಟಿರುವುದು. ಹಾಗಾಗಿ ಆತ್ಮ ಹಾಗೂ ಮನಸ್ಸಿಗೆ ಸಂಬಂಧಿಸಿದ ಮಾಸ ಶ್ರಾವಣವಾಗಿರುವುದು.

ಶ್ರಾವಣ ಮಾಸವು ಪ್ರಮುಖವಾಗಿ ಶಿವ ಪಾರ್ವತಿಗೆ ಮೀಸಲಾದ ಮಾಸ ಎಂದು ಹೇಳುತ್ತಾರೆ. ಈ ಹಿನ್ನೆಲೆಯಲ್ಲಿಯೇ ಸೋಮವಾರ ವ್ರತ, ಮಂಗಳ ಗೌರಿ ವ್ರತ, ನಾಗ ಪಂಚಮಿ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಈ ಮಾಸದಲ್ಲಿ ಜನರು ಕೆಲವು ಮಹತ್ವ ಪೂರ್ಣವಾದ ಚಟುವಟಿಕೆ ಹಾಗೂ ಧಾರ್ಮಿಕ ಕ್ರಿಯೆಗಳನ್ನು ಕೈಗೊಂಡರೆ ಅತ್ಯುತ್ತಮವಾದ ಜೀವನ ಲಭ್ಯವಾಗುವುದು ಎನ್ನಲಾಗುತ್ತದೆ. ಹಾಗಾಗಿಯೇ ಶ್ರಾವಣ ಮಾಸದಲ್ಲಿ ವಿಶೇಷವಾಗಿ ಜನರು ಸೂರ್ಯೋದಯಕ್ಕೂ ಮುನ್ನವೇ ಎದ್ದು ಸ್ನಾನವನ್ನು ಮುಗಿಸಿ, ಧ್ಯಾನ ಮಾಡುತ್ತಾರೆ. ಸಾತ್ವಿಕ ಆಹಾರಗಳನ್ನು ಸೇವಿಸುತ್ತಾರೆ. ವಿಶೇಷ ವ್ರತಾಚರಣೆಯನ್ನು ಮಾಡುವುದರ ಮೂಲಕ ತಮ್ಮ ಪಾಪ ಕರ್ಮಗಳನ್ನು ತೊಳೆದುಕೊಳ್ಳುತ್ತಾರೆ.

ಈ ಮಾಸ ಅತ್ಯಂತ ಪವಿತ್ರ ಹಾಗೂ ವಿಶೇಷವಾದ ಸಮಯ. ಇದರ ಆಚರಣೆಯು ಉತ್ತರ ಭಾರತದಲ್ಲಿ ಹಾಗೂ ದಕ್ಷಿಣ ಭಾರತದಲ್ಲಿ ಕೊಂಚ ಭಿನ್ನತೆಯಿಂದ ಕೂಡಿರುವುದನ್ನು ಕಾಣಬಹುದು. ಉತ್ತರ ಭಾರತದವರು ಶ್ರಾವಣ ಮಾಸವನ್ನು ಸ್ವಲ್ಪ ಮುಂಚಿತವಾಗಿ ಆಚರಿಸುತ್ತಾರೆ. ಅಂದರೆ ಈ ವರ್ಷ 2019ರಲ್ಲಿ ಜುಲೈ 17 ರಿಂದ ಶ್ರಾವಣ ಮಾಸ ಪ್ರಾರಂಭವಾಗುತ್ತದೆ. ಅದೇ ರಕ್ಷಾ ಬಂಧನ ಆಚರಣೆಯೊಂದಿಗೆ 2019ರ ಆಗಸ್ಟ್ 15ರಂದು ಪೂರ್ಣಗೊಳ್ಳುತ್ತದೆ. ಅದೇ ದಕ್ಷಿಣ ಭಾರತದವರ ಆಚರಣೆಯ ಅನುಸಾರ ಈ ಬಾರಿ 2019 ಆಗಸ್ಟ್ 1 ರಿಂದ ಶ್ರಾವಣ ಮಾಸ ಆರಂಭವಾಗುವುದು. ಅಂತೆಯೇ 2019ರ ಆಗಸ್ಟ್ 30 ರಂದು ಶ್ರಾವಣ ಮಾಸ ಮುಕ್ತಾಯವಾಗುವುದು. ಈ ಒಂದು ಪವಿತ್ರ ಮಾಸವು ಸಾಮಾನ್ಯವಾಗಿ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಬರುತ್ತದೆ ಎನ್ನಲಾಗುವುದು.

ಶ್ರಾವಣ ಮಾಸದಲ್ಲಿ ಸಾಮಾನ್ಯವಾಗಿ ಸಾತ್ವಿಕ ಆಹಾರವನ್ನು ಸೇವಿಸುವುದು ರೂಢಿ ಹಾಗೂ ಧಾರ್ಮಿಕ ನಿಯಮವೂ ಹೌದು. ಮಾಂಸಹಾರಿಗಳು ಶ್ರಾವಣ ಮಾಸದಲ್ಲಿ ಮಾಂಸಹಾರವನ್ನು ತ್ಯಜಿಸುತ್ತಾರೆ. ಕೆಲವರು ವಿಶೇಷ ವಾರಗಳಲ್ಲಿ ಉಪವಾಸವನ್ನು ಕೈಗೊಳ್ಳುತ್ತಾರೆ. ಶಿವನಿಗೆ ಮೀಸಲಾದ ಈ ಮಾಸದಲ್ಲಿ ಶಿವನಿಗೆ ಇಷ್ಟವಾಗುವ ರೀತಿಯಲ್ಲಿ ವರ್ತನೆ ಇದ್ದರೆ ಭಕ್ತರಿಗೆ ಉತ್ತಮ ಆರೋಗ್ಯ, ಉತ್ತಮ ಜೀವನ ಹಾಗೂ ಮೋಕ್ಷ ದೊರೆಯುವುದು ಎನ್ನುವ ನಂಬಿಕೆ ಇದೆ. ಹಾಗಾಗಿ ಶ್ರಾವಣ ಮಾಸದ ಸೋಮವಾರವನ್ನು "ಶ್ರಾವಣ ಸೋಮವಾರ" ಎಂದು ಪೂಜೆ ಮಾಡಲಾಗುವುದು. ಈ ವಾರದಂದು ಜನರು ಉಪವಾಸವನ್ನು ಕೈಗೊಳ್ಳುವುದರ ಮೂಲಕ ಶಿವನ ಕೃಪೆಗೆ ಒಳಗಾಗುತ್ತಾರೆ. ಶಿವನ ಆಶೀರ್ವಾದ ಪಡೆದು ಉತ್ತಮ ಜೀವನವನ್ನು ಪಡೆದುಕೊಳ್ಳುವರು.

ಈ ಮಾಸದಲ್ಲಿ ಹಿಂದೂ ಸಸ್ಯಹಾರಿಗಳು ಸಹ ಕಟ್ಟುನಿಟ್ಟಾದ ಉಪವಾಸ ಹಾಗೂ ವ್ರತ ಆಚರಣೆಯನ್ನು ಕೈಗೊಳ್ಳುತ್ತಾರೆ. ಕೆಲವರು ದಿನಕ್ಕೆ ಒಂದೇ ಊಟ, ಕೆಲವರು ಕೇವಲ ತುಳಸಿ ನೀರನ್ನು ಸೇವಿಸಿ ವ್ರತ ಆಚರಣೆ ಮಾಡುತ್ತಾರೆ. ಈ ವಿಶೇಷ ತಿಂಗಳಲ್ಲಿ ಉಪ್ಪು, ಬೆಳ್ಳುಳ್ಳಿ, ಈರುಳ್ಳಿ ರಹಿತವಾದ ಊಟ-ತಿಂಡಿಯನ್ನು ಸೇವಿಸುತ್ತಾರೆ. ಕೆಲವರು ಕೇವಲ ಹಣ್ಣು ಮತ್ತು ಕಾಳುಗಳನ್ನು ಸೇವಿಸುವುದರ ಮೂಲಕ ವ್ರತ ಆಚರಣೆ ಮಾಡುತ್ತಾರೆ. ಈ ರೀತಿ ಧಾರ್ಮಿಕ ಆಚರಣೆ ಮಾಡುವುದರಿಂದ ವೈಜ್ಞಾನಿಕವಾಗಿಯೂ ಉಪಯೋಗ ಆಗುವುದು. ಉಪವಾಸ ಕ್ರಮ ಅನುಸರಿಸುವುದರಿಂದ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸಲಾಗುವುದು. ಹೃದಯದ ಆರೋಗ್ಯ ಸುಧಾರಿಸುವುದು, ಮೆದುಳಿನ ಕಾರ್ಯ ಹೆಚ್ಚಿಸುವುದು ಹಾಗೂ ತೂಕ ಇಳಿಸಲು ಸಹಾಯ ಮಾಡುವುದು.

ಶ್ರಾವಣ ಮಾಸದಲ್ಲಿ ಕೈಗೊಳ್ಳುವ ವ್ರತ ಆಚರಣೆಯು ನಿಮ್ಮ ದೇಹವನ್ನು ದಂಡಿಸುವ ಹಾಗೂ ಭಕ್ತಿಯ ಭಾವ ಹೆಚ್ಚಿಸುವಂತೆ ಇರಬೇಕು. ಅದಕ್ಕಾಗಿ ಕೆಲವು ಸೂಕ್ತ ರೀತಿಯ ಉಪವಾಸ ಕ್ರಮ ಕೈಗೊಳ್ಳಬೇಕು. ಕೆಲವು ಆರೋಗ್ಯ ಕರ ಕ್ರಮದ ಆಹಾರ ಸೇವನೆಯು ನಿಮಗೆ ಹೆಚ್ಚಿನ ಶಕ್ತಿ ನೀಡುವುದು. ಜೊತೆಗೆ ಧಾರ್ಮಿಕ ಕಾರ್ಯದಲ್ಲಿ ತೊಡಗಿಕೊಳ್ಳಲು ಆಸಕ್ತಿ ಹಾಗೂ ಶಕ್ತಿ ದೊರೆಯುವುದು. ಹಾಗಾದರೆ ಆ ಆಹಾರ ಕ್ರಮಗಳು ಯಾವವು? ಎನ್ನುವುದನ್ನು ಈ ಮುಂದೆ ವಿವರಿಸಿದ್ದೇವೆ.

ಶ್ರಾವಣ ಮಾಸದಲ್ಲಿ ತಿನ್ನಬಹುದಾದ ಉತ್ತಮ ಆಹಾರ ಪಟ್ಟಿ

*ಪ್ರತಿ ದಿನ ಮುಂಜಾನೆ 1-2 ಗ್ಲಾಸ್ ಬೆಚ್ಚಗಿನ ನೀರಿಗೆ ಜೇನುತುಪ್ಪ ಮತ್ತು ನಿಂಬೆ ರಸವನ್ನು ಸೇರಿಸಿ, ಸೇವಿಸಿ. ಹೀಗೆ ಮಾಡುವುದರಿಂದ ನಿಮ್ಮ ಚಯಾಪಚಯ ಕ್ರಿಯೆಯು ಅತ್ಯುತ್ತಮವಾಗಿರುತ್ತದೆ. ದೇಹದಲ್ಲೂ ಚೈತನ್ಯ ಶಕ್ತಿಯು ಹೆಚ್ಚಾಗುವುದು.
*ಬೆಳಗಿನ ಉಪಹಾರ ಸೇವಿಸುವಾಗ ಒಂದು ಲೋಟ/ಗ್ಲಾಸ್ ಸೇಬು ಅಥವಾ ಬಾಳೆ ಹಣ್ಣಿನ ಮಿಲ್ಕ್ ಶೇಕ್ ಸೇವಿಸಿ. ಇವು ನಿಮ್ಮ ಹೊಟ್ಟೆಯನ್ನು ಪೂರ್ಣಗೊಳಿಸುವುದರ ಜೊತೆಗೆ ಹೆಚ್ಚಿನ ತೃಪ್ತಿ ನೀಡುವುದು. ಬಹುಬೇಗ ಹಸಿವಾಗುವುದನ್ನು ತಪ್ಪಿಸುತ್ತದೆ.
*ಮುಂಜಾನೆ ನೀವು 5 ಬಾದಾಮಿ ಮತ್ತು 2 ವಾಲ್ನಟ್ ಒಣ ಬೀಜವನ್ನು ಸೇವಿಸಬಹುದು. ಇದು ನಿಮ್ಮ ದೇಹಕ್ಕೆ ಅಗತ್ಯವಾದ ಕೊಬ್ಬು, ಪ್ರೋಟೀನ್ ಮತ್ತು ಫೈಬರ್ನಿಂದ ಕೂಡಿರುತ್ತದೆ. ಇದು ಮಧ್ಯಾಹ್ನದ ಊಟದ ವರೆಗೂ ಹಸಿವಾಗದಂತೆ ತಡೆಯುವುದು. ಜೊತೆಗೆ ದಿನ ಪೂರ್ತಿ ಅಗತ್ಯವಿರುವ ಪೋಷಕಾಂಶವನ್ನು ನೀಡುವುದು.

*ಮಧ್ಯಾಹ್ನದ ಊಟಕ್ಕೆ ನೀವು ಸಲಾಡ್ ಅಥವಾ ಸಾಬಕ್ಕಿ ಕಿಚಡಿ, ರೊಟ್ಟಿ, ಪಾಯಸಗಳನ್ನು ಸೇವಿಸಬಹುದು. ಸಾಬಕ್ಕಿ ಉಪವಾಸದ ಸಮಯದಲ್ಲಿ ಕಡ್ಡಾಯವಾಗಿ ಸೇವಿಸಬೇಕಾದ ಅತ್ಯುತ್ತಮ ಆಹಾರವಾಗಿದೆ. ಏಕೆಂದರೆ ಇದು ದೇಹಕ್ಕೆ ಅತ್ಯುತ್ತಮ ಶಕ್ತಿ ಹಾಗೂ ಚೈತನ್ಯವನ್ನು ನೀಡುವುದು.
*ಸಂಜೆಯ ಸಮಯದಲ್ಲಿ ಒಂದು ಕಪ್ ಹಸಿರು ಚಹಾ/ಗ್ರೀನ್ ಟೀ ಮತ್ತು ಸಿಂಹರಾ ಹಿಟ್ಟಿನ ದೋಸೆ ಅಥವಾ ರೊಟ್ಟಿಯನ್ನು ಸೇವಿಸಿ. ಈ ಹಿಟ್ಟು ಅತ್ಯುತ್ತಮ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್, ಸತು, ರಂಜಕ, ಕ್ಯಾಲ್ಸಿಯಂ ಹಾಗೂ ಕಬ್ಬಿಣದಂತಹ ಶಕ್ತಿಯನ್ನು ಪಡೆದುಕೊಂಡಿದೆ. ಇದರ ಸೇವನೆಯು ದೇಹಕ್ಕೆ ಅತ್ಯುತ್ತಮ ಪೋಷಕಾಂಶವನ್ನು ನೀಡುವುದು.
*ರಾತ್ರಿಯ ಊಟಕ್ಕೆ ತರಕಾರಿಯ ಜೊತೆಗೆ 2 ಚಪಾತಿಯನ್ನು ಸೇವಿಸಿ. ಇದರೊಟ್ಟಿಗೆ ದಾಲ್ ಬೌಲ್, ಸೂಪ್ ಬೌಲ್ ಮತ್ತು ಮೊಸರು ಬೌಲ್ ಅನ್ನು ಹೊಂದಬಹುದು. ಆಗ ನಿಮ್ಮ ಊಟವು ಉತ್ತಮವಾಗಿರುತ್ತದೆ. ದೇಹಕ್ಕೂ ಹಿತವಾಗಿರುತ್ತದೆ.
*ಮಲಗುವ ಮುನ್ನ ಕೆನೆ ತೆಗೆದ ಹಾಲು ಮತ್ತು ಒಂದು ಹಣ್ಣನ್ನು ತಿನ್ನಿರಿ. ಇದು ಆರೋಗ್ಯಕ್ಕೆ ಅತ್ಯುತ್ತಮ ಪರಿಹಾರ ನೀಡುವುದು.
ಶ್ರಾವಣ ಮಾಸದಲ್ಲಿ ಸೇವಿಸಬಾರದ ಕೆಲವು ಆಹಾರಗಳ ಪಟ್ಟಿ
ಶ್ರಾವಣ ಮಾಸವು ಅತ್ಯಂತ ಪವಿತ್ರವಾದ ಮಾಸ. ಈ ತಿಂಗಳಲ್ಲಿ ನಾವು ನಮ್ಮ ಮನಸ್ಸು ಹಾಗೂ ಭಾವನೆಯನ್ನು ಅತ್ಯಂತ ಶುದ್ಧ ಹಾಗೂ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಹಾಗಾಗಿ ನಮ್ಮ ಸಂವೇದನೆಗಳು ಕೆರಳುವಂತಹ ಆಹಾರ ಪದಾರ್ಥಗಳಿಂದ ದೂರ ಇರಬೇಕು. ಅಂತಹ ಕೆಲವು ಆಹಾರ ಪದಾರ್ಥಗಳ ಪಟ್ಟಿ ಈ ರೀತಿ ಇವೆ.
*ಈ ಪವಿತ್ರ ತಿಂಗಳಲ್ಲಿ ಬದನೆಕಾಯಿಯನ್ನು ತಪ್ಪಿಸಬೇಕು. ಪ್ರಾಚೀನ ಗ್ರಂಥಗಳ ಪ್ರಕಾರ, ತರಕಾರಿಯನ್ನು ಅಶುದ್ಧವೆಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಹೆಚ್ಚಿನ ಜನರು ಇದನ್ನು ತಿನ್ನುವುದನ್ನು ತಪ್ಪಿಸುತ್ತಾರೆ. ವೈಜ್ಞಾನಿಕವಾಗಿ, ಬದನೆಕಾಯಿಯು ಬಹಳಷ್ಟು ಕೀಟಗಳಿಂದ ಮುತ್ತಿಕೊಂಡಿರುತ್ತದೆ, ಅದಕ್ಕಾಗಿಯೇ ಇದು ತಿನ್ನಲು ಸುರಕ್ಷಿತವಲ್ಲ.
*ಉಪವಾಸ ಮಾಡುವ ಜನರು ಹಾಲು ಕುಡಿಯುವುದನ್ನು ತಪ್ಪಿಸಬೇಕು. ಆಯುರ್ವೇದದ ಪ್ರಕಾರ, ಮಳೆಗಾಲದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳು ಎಲ್ಲಾ ದೋಶಗಳಲ್ಲಿ ಅಸಮತೋಲನವನ್ನು ಸೃಷ್ಟಿಸುತ್ತವೆ.
*ಈ ತಿಂಗಳಲ್ಲಿ ಆಲ್ಕೊಹಾಲ್ ಕುಡಿಯುವುದನ್ನು ಮತ್ತು ಮೀನು, ಮೊಟ್ಟೆ ಮತ್ತು ಮಾಂಸದಂತಹ ಮಾಂಸಾಹಾರವನ್ನು ಸೇವಿಸುವುದನ್ನು ತಪ್ಪಿಸಿ.
*ಹಸಿರು ಎಲೆಗಳ ತರಕಾರಿಗಳನ್ನು ಕೀಟಗಳನ್ನು ಹೊಂದಿರುವುದರಿಂದ ತಿನ್ನುವುದನ್ನು ತಪ್ಪಿಸಿ, ವಿಶೇಷವಾಗಿ ಮಳೆಗಾಲದಲ್ಲಿ. ಎಲೆಗಳ ಸೊಪ್ಪಿನ ಸೇವನೆಯು ದೇಹದಲ್ಲಿ ಹೆಚ್ಚುವರಿ ಪಿತ್ತರಸವನ್ನು ಸ್ರವಿಸುತ್ತದೆ.
*ಉಪವಾಸದ ಸಮಯದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಹಾಗೂ ನಂಜಿನ ಆಹಾರ ಪದಾರ್ಥಗಳನ್ನು ದೂರ ಇಡಬೇಕು. ಹೆಚ್ಚು ಖಾರ, ಉಪ್ಪು ಹಾಗೂ ಮಸಾಲೆಯಿಂದ ಕೂಡಿರುವ ಆಹಾರ ಪದಾರ್ಥಗಳನ್ನು ಸೇವಿಸಬಾರದು. ಇದರಿಂದ ನಮ್ಮ ಭಾವನೆ ಹಾಗೂ ಸಂವೇದನೆಗಳು ಕೆರಳುವುದು. ಈ ಮಾಸದಲ್ಲಿ ವ್ರತವನ್ನು ಕೈಗೊಳ್ಳುವಾಗ ನಮ್ಮ ಭಾವನೆಗಳು ಆದಷ್ಟು ಶಾಂತ ಮತ್ತು ಸದ್ವಿಚಾರಗಳಿಂದ ಕೂಡಿರಬೇಕು. ಅದಕ್ಕೆ ಅನುಕೂಲವಾಗುವ ಆಹಾರವನ್ನು ಸೇವಿಸುವುದು ಉತ್ತಮ ಎಂದು ಧರ್ಮವು ಹೇಳುತ್ತದೆ.

ಶ್ರವಣ ತಿಂಗಳಲ್ಲಿ ಮನಸ್ಸಿನಲ್ಲಿಟ್ಟುಕೊಳ್ಳಬೇಕಾದ ಸಲಹೆಗಳು

*ಬೀನ್ಸ್ ಮತ್ತು ಹಸಿರು ಎಲೆಗಳ ತರಕಾರಿಗಳ ಬಳಕೆಯನ್ನು ನಿರ್ಬಂಧಿಸುವುದರ ಹೊರತಾಗಿ, ಹೆಚ್ಚಿನ ಪ್ರಮಾಣದಲ್ಲಿ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನುವುದನ್ನು ತಪ್ಪಿಸಿ.
*ದಿನದಲ್ಲಿ ಕನಿಷ್ಠ 8 - 10 ಲೋಟ ನೀರು ಕುಡಿಯಿರಿ.
*ಡೀಪ್ ಫ್ರೈಡ್, ಮಸಾಲೆಯುಕ್ತ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ.
*ಅನುಚಿತ ವರ್ತನೆ ಹಾಗೂ ಪದ್ಧತಿಯನ್ನು ತೋರುವುದರ ಮೂಲಕ ನಿಮ್ಮ ಭಾವನೆಗಳಿಗೆ ಹಾಗೂ ಆಚರಣೆಗೆ ಅಡ್ಡಿಯನ್ನುಂಟುಮಾಡದಿರಿ.

English summary

Shravan Month 2019: What Foods To Eat And What Foods To Avoid

The Hindu month of Sawan or Shravan has started on 17 July 2019 and will end on 15 August 2019 in North India, and will start on 1 August 2019 and end on 30 August 2019 in South India. In Shravan, some Hindus follow a strict vegetarian diet, some restrict to just one meal a day, some avoid foods containing salt, garlic, and onion, and some people fast.
X
Desktop Bottom Promotion