For Quick Alerts
ALLOW NOTIFICATIONS  
For Daily Alerts

ಹಿಂದೂ ಧರ್ಮ: ಪಿತೃಪಕ್ಷ ಆಚರಣೆಯ ಹಿಂದಿನ ಇತಿಹಾಸ ಹಾಗೂ ಮಹತ್ವ

By Arshad
|

ಮನೆಯ ಹಿರಿಯರು ಗತಿಸಿದ ಬಳಿಕ ಅವರಿಗೆ ಸಲ್ಲಬೇಕಾದ ಗೌರವನ್ನು ಸುಮಾರು ಹದಿನಾರು ದಿನಗಳ ಕಾಲ ನೀಡಬೇಕಾದ ಧಾರ್ಮಿಕ ಕ್ರಿಯೆಯನ್ನು ಹಿಂದೂ ಧರ್ಮದಲ್ಲಿ ಅನುಸರಿಸಲಾಗುತ್ತದೆ. ಈ ಕ್ರಿಯೆಗೆ ಪಿತೃಪಕ್ಷ ಅಥವಾ ಶ್ರಾದ್ಧ ಎಂದು ಕರೆಯಲಾಗುತ್ತದೆ. ಇದರಿಂದ ಗತಿಸಿದವರ ಆತ್ಮಗಳಿಗೆ ಮೋಕ್ಷ ಪ್ರಾಪ್ತವಾಗುತ್ತದೆ ಎಂದು ಹೇಳಲಾಗುತ್ತದೆ.

ಪಿತೃಪಕ್ಷ ಅಥವಾ ಶ್ರಾದ್ಧದ ಹಿಂದೆ ಇರುವ ಇತಿಹಾಸ
ಪುರಾಣದ ಕಥೆಯೊಂದರಲ್ಲಿ ವಿವರಿಸಿದ ಪ್ರಕಾರ ಮಹಾಭಾರತದ ವೀರಯೋಧ ಕರ್ಣನ ಮರಣದ ಬಳಿಕ ಆತ ಸ್ವರ್ಗಕ್ಕೆ ಆಗಮಿಸುತ್ತಾನೆ. ಸ್ವರ್ಗದಲ್ಲಿ ಈತನಿಗೆ ಅಪ್ಪಟ ಚಿನ್ನದಲ್ಲಿ ತಯಾರಿಸಲಾದ ಆಹಾರವನ್ನು ನೀಡಲಾಗುತ್ತದೆ. ಇದು ಕರ್ಣನಿಗೆ ಕೋಪ ಬರಿಸುತ್ತದೆ. ಒಂದು ದಿನ ಕರ್ಣ ಇಂದ್ರನ ಬಳಿ ಹೋಗಿ ತನಗೆ ಸಾಮಾನ್ಯ ಊಟವನ್ನೇಕೆ ನೀಡಲಾಗುತ್ತಿಲ್ಲ ಎಂದು ಕೇಳುತ್ತಾನೆ.

Pitru Paksha

ಈ ಪ್ರಶ್ನೆಗೆ ನಸುನಕ್ಕ ಇಂದ್ರ ಹೀಗೆನ್ನುತ್ತಾನೆ: ಕರ್ಣ ಜೀವಂತನಾಗಿದ್ದಾಗ ಹಲವಾರು ದಾನಧರ್ಮದ ಕಾರ್ಯವನ್ನು ಮಾಡುತ್ತಿದ್ದ. ಆತ ಬಡಜನರಿಗೆ ಚಿನ್ನದ ಆಭರಣಗಳನ್ನು ದಾನರೂಪದಲ್ಲಿ ನೀಡುತ್ತಿದ್ದ. ಆದರೆ ಆ ಸಮಯದಲ್ಲಿ ಆ ಬಡಜನತೆಗೆ ಚಿನ್ನಕ್ಕಿಂತಲೂ ಹೆಚ್ಚಾಗಿ ಆಹಾರದ ಅಗತ್ಯವಿತ್ತು. ಹಾಗಾಗಿ ಬಡಜನತೆ ಚಿನ್ನ ನೀಡಿದ ಕರ್ಣನಿಗೆ ಚಿನ್ನದ ಬದಲು ಊಟ ನೀಡಬಾರದಿತ್ತೇ ಎಂದು ಮನಸ್ಸಿನಲ್ಲಿಯೇ ಅವಲತ್ತುಕೊಳ್ಳುತ್ತಿದ್ದರು. ಇದೇ ಕಾರಣಕ್ಕೆ ಆತನಿಗೆ ಚಿನ್ನದ ಊಟವನ್ನೇ ಸ್ವರ್ಗದಲ್ಲಿ ನೀಡಾಲಾಗುತ್ತಿತ್ತು.

ಈ ದೋಷವನ್ನು ಸರಿಪಡಿಸಲು ಇಂದ್ರ ಕರ್ಣನನ್ನು ಮತ್ತೊಮ್ಮೆ ಭೂಲೋಕಕ್ಕೆ ಕಳುಹಿಸಿದ. ಮತ್ತೊಮ್ಮೆ ಭೂಮಿಗೆ ಬಂದ ಕರ್ಣ ಹದಿನಾರು ದಿನ ಜೀವಂತವಿದ್ದ. ಈ ಅವಧಿಯಲ್ಲಿ ಅಗತ್ಯವಿದ್ದವರಿಗೆ ಆಹಾರವನ್ನು ದಾನ ಮಾಡಿ ತನ್ನ ದೋಶವನ್ನು ಸರಿಪಡಿಸಿಕೊಂಡ ಬಳಿಕ ಮತ್ತೊಮ್ಮೆ ಸ್ವರ್ಗಕ್ಕೆ ತೆರಳಿದ. ಈ ಹದಿನಾರು ದಿನಗಳನ್ನೇ ಪಿತೃ ಪಕ್ಷ ಎಂದು ಕರೆಯಲಾಗುತ್ತದೆ.

ಅಂದಿನಿಂದ ಜನರು ಈ ವಿಧಿಯನ್ನು ಅನುಸರಿಸುತ್ತಾ ಬಂದಿದ್ದು ಹಿರಿಯರು ವಿಧಿವಶರಾದ ಬಳಿಕ ನಂತರದ ಹದಿನಾರು ದಿನಗಳ ಕಾಲ ಅವರ ಆತ್ಮಗಳು ನಮಗೆ ಆಶೀರ್ವಾದ ನೀಡಲು ಭೂಲೋಕಕ್ಕೆ ಬರುತ್ತವೆ ಎಂದು ನಂಬುತ್ತಾರೆ. ಈ ಅವಧಿಯಲ್ಲಿ ತರ್ಪಣ, ಶ್ರಾದ್ಧ, ಪಿಂಡ ದಾನ ಮೊದಲಾದ ವಿಧಿಗಳನ್ನು ಆಚರಿಸಲಾಗುತ್ತದೆ. ಈ ಮೂಲಕ ಆತ್ಮಗಳು ಸಂತೃಪ್ತಿಗೊಂಡು ಸ್ವರ್ಗ ಸೇರಲು ಸಾಧ್ಯವಾಗುತ್ತದೆ ಹಾಗೂ ಮನೆಯವರಿಗೆ ಆಶೀರ್ವಾದ ನೀಡುತ್ತವೆ ಎಂದು ನಂಬುತ್ತಾರೆ.

ಶ್ರಾದ್ಧ ನಡೆಸುವ ವಿಧಿವಿಧಾನಗಳು
ಈ ಸಂದರ್ಭದಲ್ಲಿ ನಡೆಸುವ ವಿಧಿಗಳು ಇಂತಿವೆ:
1. ಕುಟುಂಬದ ಅತಿ ಹಿರಿಯ ಪುರುಷ ಸದಸ್ಯರು ಈ ವಿಧಿಯನ್ನು ಅನುಸರಿಸಬೇಕಾಗುತ್ತದೆ.
2. ಈ ಪುರುಷರು ಮೊದಲು ಸ್ನಾನ ಮಾಡಿ ಸ್ವಚ್ಛ ಬಟ್ಟೆಗಳನ್ನು ತೊಟ್ಟುಕೊಳ್ಳುತ್ತಾರೆ.
3. ಬಳಿಕ ಇವರು ಕುಶದರ್ಭೆಯಿಂದ ತಯಾರಿಸಲಾದ ಉಂಗುರವನ್ನು ತೊಟ್ಟುಕೊಳ್ಳುತ್ತಾರೆ. ಈ ಉಂಗುರ ದಯೆಯ ಪ್ರತೀಕವಾಗಿದ್ದು ಹಿರಿಯರ ಆತ್ಮವನ್ನು ಆಹ್ವಾನಿಸುವಲ್ಲಿ ನೆರವಾಗುತ್ತದೆ. ಈ ವಿಧಿಗೆ ತರ್ಪಣ ಎಂದು ಕರೆಯುತ್ತಾರೆ.
4. ಮುಂದಿನ ವಿಧಿ ಪಿಂಡದಾನವಾಗಿದೆ. ಇದರಲ್ಲಿ ಅನ್ನ, ಬಾರ್ಲಿಯ ಹಿಟ್ಟಿನ ಉಂಡೆ ಹಾಗೂ ಎಳ್ಳಿನ ಕಾಳುಗಳನ್ನು ಬಳಸಲಾಗುತ್ತದೆ. ಈ ಆಹಾರವನ್ನು ದಾನ ಮಾಡಲಾಗುತ್ತದೆ.
5. ಪಿಂಡದಾನದ ಬಳಿಕ ದರ್ಭೆಯ ಉಂಗುರವನ್ನು ವಿಷ್ಣುವಿಗೆ ಅರ್ಪಿಸುವ ಮೂಲಕ ಆಶೀರ್ವಾದವನ್ನು ಪಡೆಯಲಾಗುತ್ತದೆ. ದರ್ಭೆ ಹುಲ್ಲು ಎಲ್ಲಿಯೂ ಹುಲುಸಾಗಿ ಹಾಗೂ ಯಾವುದೇ ಅಡೆತಡೆಯಿಲ್ಲದೇ ಬೆಳೆಯುವ ಹುಲ್ಲಾಗಿದ್ದು ಇದು ಜೀವನದಲ್ಲಿ ಎದುರಾಗುವ ಅಡ್ಡಿಗಳನ್ನು ನಿವಾರಿಸುತ್ತದೆ ಎಂದು ನಂಬಲಾಗಿದೆ.


6. ಶ್ರಾದ್ಧದಲ್ಲಿ ವಿಶೇಷವಾಗಿ ಅನ್ನವನ್ನು ತಯಾರಿಸಿ ಕಾಗೆಗಳಿಗೆ ಅರ್ಪಿಸಲಾಗುತ್ತದೆ. ಕಾಗೆಗಳನ್ನು ಯಮನ ಸಂದೇಶವಾಹಕರು ಎಂದು ನಂಬಲಾಗಿದ್ದು ಕಾಗೆಗಳು ಅನ್ನವನ್ನು ಪೂರ್ಣವಾಗಿ ತಿನ್ನುವ ಮೂಲಕ ಶ್ರಾದ್ಧ ಪರಿಪೂರ್ಣವಾಗಿದೆ ಎಂದು ತಿಳಿಯುತ್ತಾರೆ.
7. ಕಾಗೆಗಳಿಗೆ ಅನ್ನವನ್ನು ದಾನವಾಗಿ ನೀಡಿದ ಬಳಿಕ ಬ್ರಾಹ್ಮಣ ಅರ್ಚಕರಿಗೆ ಊಟ ಬಡಿಸಲಾಗುತ್ತದೆ.
8. ಈ ಸಂದರ್ಭದಲ್ಲಿ ಧಾರ್ಮಿಕ ಗ್ರಂಥಗಳಾದ ಅಗ್ನಿ ಪುರಾಣ, ಗಂಗಾ ಅವತರಂ, ನಚಿಕೇತ, ಗರುಡ ಮೊದಲಾದವರ ಪುರಾಣ ಕಥೆಗಳನ್ನು ಪಠಿಸಲಾಗುತ್ತದೆ. ಈ ಸಂದರ್ಭದಲ್ಲಿ ಪುರಾಣಗ್ರಂಥಗಳ ಪಾರಾಯಣ ಶುಭಕರ ಎಂದು ನಂಬಲಾಗಿದೆ.
9. ಬಳಿಕ ಮನೆಯ ಎಲ್ಲಾ ಸದಸ್ಯರು ಒಟ್ಟಿಗೆ ಕುಳಿತು ಊಟ ಮಾಡುತ್ತಾರೆ.

ಮೇಲಿನ ವಿಧಿಗಳನ್ನು ಪೂರ್ಣಗೊಳಿಸಿದ ಬಳಿಕ ಶ್ರಾದ್ಧದ ಅವಧಿ ಪೂರ್ಣಗೊಳ್ಳುವವರೆಗೂ ಈ ಕಾರ್ಯಗಳಿಗೆ ಕಡ್ಡಾಯ ನಿಷೇಧ ಅನುಸರಿಸಬೇಕು:
1. ಯಾವುದೇ ಹೊಸದನ್ನು ಪ್ರಾರಂಭಿಸಬಾರದು. ಹೊಸ ವಸ್ತುಗಳನ್ನು ಖರೀದಿಸುವುದು, ಕೂದಲು ಕತ್ತರಿಸುವುದು, ಕೂದಲು ತೊಳೆದುಕೊಳ್ಳುವುದು, ಗಡ್ಡ ತೆಗೆಯುವುದು ಮೊದಲಾದವನ್ನೆಲ್ಲಾ ಹದಿನಾರು ದಿನಗಳ ಬಳಿಕವೇ ಮಾಡಬೇಕು.
2. ಹೊಸ ಮನೆ ಖರೀದಿಸುವುದು, ವಿವಾಹ, ಹುಟ್ಟುಹಬ್ಬ, ಮಗುವಿನ ನಾಮಕರಣ, ಹೊಸ ವ್ಯಾಪಾರ ಪ್ರಾರಂಭ ಮೊದಲಾದವುಗಳನ್ನು ಈ ಅವಧಿಯಲ್ಲಿ ಮಾಡಬಾರದು ಎಂದು ಜ್ಯೋತಿಷಿಗಳು ಅಭಿಪ್ರಾಯಪಡುತ್ತಾರೆ.
3. ಮಾಂಸಾಹಾರ, ಬೆಳ್ಳುಳ್ಳಿ, ಈರುಳ್ಳಿಯನ್ನು ಸೇವಿಸಬಾರದು.
4. ಈ ಅವಧಿಯಲ್ಲಿ ಹಸು, ನಾಯಿ ಬೆಕ್ಕುಗಳಿಗೆ ಆಹಾರ ನೀಡಬೇಕು ಹಾಗೂ ಇವುಗಳಿಗೆ ಯಾವುದೇ ನೋವು ನೀಡಬಾರದು.
5. ಈ ಅವಧಿಯಲ್ಲಿ ಕ್ಯಾರೆಟ್, ಸಾಸಿವೆ ಎಣ್ಣೆ, ಕಪ್ಪು ಉಪ್ಪು, ಜೀರಿಗೆ ಮೊದಲಾದವುಗಳನ್ನು ಅಡುಗೆಯಲ್ಲಿ ಬಳಸಬಾರದು.

ಶ್ರಾದ್ಧದ ಸಮಯದಲ್ಲಿ ನಡೆಸುವ ಯಾವುದೇ ಕ್ರಿಯೆಯನ್ನು ನಡೆಸುವಾಗ ಹೃದಯದಲ್ಲಿ ಯಾವುದೇ ದುರುದ್ದೇಶ, ದ್ವೇಶಭಾವನೆ ಇರಬಾರದು. ಹಾಗೂ ಪೂರ್ಣಹೃದಯದಿಂದ ಧನಾತ್ಮಕವಾಗಿ ನಿರ್ವಹಿಸಬೇಕು. ಪಿತೃ ಆತ್ಮಗಳಿಗೆ ಪೂರ್ಣಪ್ರಮಾಣದ ವಿದಾಯ ನೀಡುವ ಮೂಲಕ ಮುಂದಿನ ದಿನಗಳಲ್ಲಿ ಮನೆಯಲ್ಲಿ ಯಶಸ್ಸು ಹಾಗೂ ನೆಮ್ಮದಿ ನೆಲೆಸುತ್ತದೆ.

English summary

The History Behind Pitru Paksha

Pitru Paksha is also known as the "Shradh" period, which goes on for 16 days when Hindus pay reverence to their ancestors. By paying homage to the forefathers, their souls are made content. There are a variety of rituals like Tarpan, Shradh and Pind Daan that are performed during the Pitru Paksha to please the ancestors, so that they bless us whole-heartedly.
Story first published: Tuesday, September 19, 2017, 20:10 [IST]
X
Desktop Bottom Promotion