For Quick Alerts
ALLOW NOTIFICATIONS  
For Daily Alerts

ಹಿಂದೂ ಪದ್ಧತಿಯಂತೆ ಯಾವ ಮಾಸ ಯಾವ ದೇವರಿಗೆ ಮೀಸಲು, ಹೇಗೆ ಪೂಜಿಸಬೇಕು?

|

ಹಿಂದೂ ಪ್ರಂಚಾಗದ ಪ್ರಕಾರ 12 ಮಾಸಗಳಿವೆ. ಪ್ರತಿಮಾಸಕ್ಕೂ ಒಬ್ಬ ನಾಮಕ ದೇವರು ಇರುತ್ತಾನೆ, ಈ ಮಾಸದಲ್ಲಿ ನಾಮಕ ದೇವರನ್ನು ಶ್ರದ್ಧಾ ಭಕ್ತಿಯಿಂದ, ಪದ್ಧತಿಯಂತೆ ಪೂಜಿಸಿದರೆ ಶುಭಫಲ ನಮ್ಮದಾಗುತ್ತದೆ ಎಂಬ ನಂಬಿಕೆ ಹಿಂದೂ ಸಂಪ್ರದಾಯದಲ್ಲಿದೆ. ಪದ್ಧತಿಯಂತೆ ಪ್ರತೀ ತಿಂಗಳನ್ನು ಎರಡು ಭಾಗಗಳಾಗಿ ವಿಂಗಡಿಸಲಾಗುತ್ತದೆ. ಮೊದಲ ಭಾಗ ಶುಕ್ಲ ಪಕ್ಷ ಮತ್ತು ಎರಡನೆಯ ಭಾಗ ಕೃಷ್ಣ ಪಕ್ಷ. ಶುಕ್ಲ ಎಂದರೆ ಚಂದ್ರನ ಆಕಾರ ಹೆಚ್ಚಾಗುವುದು ಮತ್ತು ಅಂತಿಮವಾಗಿ ಹುಣ್ಣಿಮೆ ಎದುರಾಗುವುದು.

ದೈವದ ನಂಬಿಕೆಯ ಮೇಲೆ ರಚಿತವಾದ ಹಿಂದೂ ಧರ್ಮದ ಪ್ರತಿ ಮಾಸದ ನಾಮಕ ದೇವರಿಗೂ ತನ್ನದೇ ಆದ ರಿತಿಯಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ಅಲ್ಲದೇ ಈ ಮಾಸದ ಹಿನ್ನೆಲೆಗೂ ದೈವದ ಆರಾಧನೆಗೂ ಸಂಬಂಧವಿದೆ. ಯಾವ ಮಾಸದಲ್ಲಿ ಯಾವ ದೇವರನ್ನುಪೂಜಿಸಬೇಕು, ಏಕೆ ಮತ್ತು ಹೇಗೆ ಎಂಬುದರ ಸವಿವರ ಮಾಹಿತಿ ಮುಂದೆ ನೀಡಿದ್ದೇವೆ:

ಚೈತ್ರ ಮಾಸ

ಚೈತ್ರ ಮಾಸ

ಹಿಂದೂ ಕ್ಯಾಲೆಂಡರ್‌ನ ಮೊದಲ ತಿಂಗಳು ಚೈತ್ರ, ಇದು ವಸಂತಕಾಲದಲ್ಲಿ ಬರುತ್ತವೆ. ಈ ಮಾಸದಲ್ಲಿ ಬರುವ ಯುಗಾದಿ ಹಿಂದೂಗಳ ವರ್ಷದ ಮೊದಲ ದಿನ ಎಂದು ಶ್ರದ್ಧಾ ಭಕ್ತಿಯಿಂದ ತಳಿರು ತೋರಣಗಳಿಂದಮನೆಯನ್ನು ಸಿಂಗರಿಸಿ, ಸಿಹಿ ಅಡುಗೆ ಮಾಡಿ ಪೂಜಿಸುತ್ತೇವೆ. ಚೈತ್ರ ಮಾಸದ ಮೊದಲ ದಿನವು ನವರಾತ್ರಿ ದುರ್ಗಾ ವ್ರತದಿಂದ ಪ್ರಾರಂಭವಾಗುವುದು ಮಾತ್ರವಲ್ಲ, ಈ ದಿನ ರಾಜ ರಾಮಚಂದ್ರನ ಪಟ್ಟಾಭಿಷೇಕ, ಯುಧಿಷ್ಠಿರನ ಪಟ್ಟಾಭಿಷೇಕ, ಸಿಖ್ ಸಂಪ್ರದಾಯದ ಎರಡನೇ ಗುರು ಅಂಗದ್ದೇವನ ಜನನ ಹೀಗೆ ಹಲವು ವಿಶೇಷಗಳ ಮಾಸಚೈತ್ರ ಮಾಸ.

ಈ ತಿಂಗಳ ಪ್ರತಿ ದಿನವು ಕೆಲವು ದೇವತೆಗಳನ್ನು ವಿಧಿ - ವಿಧಾನಗಳ ಮೂಲಕ ಪೂಜಿಸಲಾಗುತ್ತದೆ. ಅದರಲ್ಲೂ ಪ್ರಮುಖವಾಗಿ ದುರ್ಗಾ ದೇವಿಯನ್ನು ಪೂಜಿಸಲಾಗುತ್ತದೆ. ಶುಕ್ಲ ತೃತೀಯದಲ್ಲಿ ಉಮಾ, ಶಿವ ಮತ್ತು ಅಗ್ನಿ ದೇವರನ್ನು ಪೂಜಿಸಿದರೆ, ಶುಕ್ಲ ತೃತೀಯವನ್ನು ಮತ್ಸ್ಯ ಜಯಂತಿ ಎಂದು ಆಚರಿಸಲಾಗುತ್ತದೆ. ಚತುರ್ಥಿ ಗಣೇಶನನ್ನು ಪೂಜಿಸಬೇಕು. ಪಂಚಮಿಯ ಮೇಲೆ ಲಕ್ಷ್ಮಿ ಪೂಜೆ ಮತ್ತು ಸರ್ಪಗಳ ಪೂಜೆ ಮಾಡಬೇಕು. ಶಾಂತಿಗಾಗಿ ಸ್ವಾಮಿ ಕಾರ್ತಿಕೇಯ ಆರಾಧನೆ ಮಾಡಬೇಕು. ಸಪ್ತಮಿಯಂದು ಸೂರ್ಯನ ಆರಾಧನೆ.

ವೈಶಾಖ ಮಾಸ

ವೈಶಾಖ ಮಾಸ

ಹಿಂದೂ ಪಂಚಾಂಗದ ಎರಡನೇ ಮಾಸ ವೈಶಾಖ ಮಾಸವು ಎಲ್ಲಾ ಮಾಸಗಳಲ್ಲಿ ಸರ್ವಶ್ರೇಷ್ಠವಾಗಿದ ಮಾಸ. ಪವಿತ್ರವಾದ ಈ ಮಾಸದಲ್ಲಿ ವಿಷ್ಣು, ಬ್ರಹ್ಮ ಮತ್ತು ಶಿವನ ಆರಾಧನೆಯನ್ನು ಮಾಡಲಾಗುತ್ತದೆ. ತ್ರಿಮೂರ್ತಿಗಳನ್ನು ಒಲಿಸಿಕೊಂಡು ಮನದಿಷ್ಟವನ್ನು ಸಫಲಗೊಳಿಸಿಕೊಳ್ಳುವ ಶುಭ ಮಾಸ ಇದಾಗಿದೆ. ತ್ರಿಮೂರ್ತಿಗಳಿಗೆ ಪವಿತ್ರ ಜಲವನ್ನು ಅರ್ಪಿಸಿ ಪೂಜಿಸುವುದರಿಂದ ದೇವರು ಪ್ರಸನ್ನಗೊಳ್ಳುತ್ತಾನೆ ಎಂಬ ನಂಬಿಕೆ ಇದೆ. ಅಷ್ಟೇ ಅಲ್ಲದೆ ತೀರ್ಥಕ್ಷೇತ್ರಗಳಿಗೆ ಹಾಗೂ ದೇವಾನು ದೇವತೆಗಳ ಮಂದಿರ ದರ್ಶನಕ್ಕೆ ಇದು ಸಕಾಲ ಎಂದು ಹೇಳಲಾಗುತ್ತದೆ. ಈ ತಿಂಗಳ ಸೋಮವಾರದಂದು ಮಾಡುವ ಶಿವ ಪೂಜೆ ವಿಶೇಷವಾದದ್ದು. ವೈಶಾಖ ಮಾಸದ ಗುರುವಾರದಂದು ವಿಷ್ಣವಿನ ಪೂಜೆ ಮಾಡಬೇಕು. ಈ ದಿನದಂದು ವಿಷ್ಣುವಿಗೆ ಪ್ರಿಯವಾದ ಹಳದಿ ವಸ್ತ್ರವನ್ನು ಧರಿಸಿ, ಪುಷ್ಪವನ್ನು ಅರ್ಪಿಸಿ ಆರತಿ ಮಾಡುವುದರಿಂದ ಸಕಲ ಸುಖ ಸಂಪತ್ತು ಲಭಿಸುತ್ತದೆ. ಬ್ರಹ್ಮ ದೇವರನ್ನು ಸಹ ಈ ಮಾಸದಲ್ಲಿ ಪೂಜಿಸಬೇಕು. ಬ್ರಹ್ಮ ದೇವರನ್ನು ಪೂಜಿಸುವಾಗ ಕಮಲದ ಹೂವನ್ನು ಅರ್ಪಿಸಿದರೆ ಬ್ರಹ್ಮ ಪ್ರಸನ್ನಗೊಳ್ಳುತ್ತಾನೆಂಬ ನಂಬಿಕೆ ಇದೆ.

ಜೇಷ್ಠ ಮಾಸ

ಜೇಷ್ಠ ಮಾಸ

ಭಾರತೀಯ ಕಾಲಮಾನ ಹಾಗೂ ಹಿಂದೂ ಪಂಚಾಂಗದ ಪ್ರಕಾರ ಮೂರನೇ ಮಾಸ ಜೇಷ್ಠ ಮಾಸ. ಜೇಷ್ಠ ಮಾಸವನ್ನು ಉಷ್ಣ ಮಾಸವೆಂದು ಕರೆಯುತ್ತಾರೆ. ಈ ಮಾಸದಲ್ಲಿ ಸೂರ್ಯ ಮಿಥುನ ರಾಶಿಗೆ ಪ್ರವೇಶ ಮಾಡೋದು ವಿಶೇಷ. ಈ ಮಾಸಕ್ಕೆ ಇಂದ್ರ ಅಧಿಪತಿ. ಈ ಮಾಸದ ಹುಣ್ಣಿಮೆ ಜ್ಯೇಷ್ಠಾ ನಕ್ಷತ್ರದಲ್ಲಿ ಬರುತ್ತೆ. ಜ್ಯೇಷ್ಠಾ ನಕ್ಷತ್ರದ ಅಧಿಪತಿ ಇಂದ್ರ. ಈ ಮಾಸದಲ್ಲಿ ಇಂದ್ರನ ಪೂಜೆ ಮಾಡಿದರೆ ನಿಮ್ಮ ಇಷ್ಟಾರ್ಥಗಳು ಸಿದ್ಧಿಸುತ್ತವೆ. ಇನ್ನು ಈ ಮಾಸದಲ್ಲಿ ನೀರಿಗೆ ಅಧಿಪತಿಯಾದವರನ್ನು ಪೂಜಿಸೋದು ವಿಶೇಷವಾಗಿದೆ. ಜೇಷ್ಠ ಮಾಸದ ಮಂಗಳವಾರಗಳು ಅತ್ಯಂತ ವಿಶೇಷ.

ಜೇಷ್ಠ ಮಾಸದಲ್ಲಿಯೇ ಹನುಮಂತ ಶ್ರೀರಾಮನನ್ನು ಭೇಟಿಯಾಗಿದ್ದು. ಹೀಗಾಗಿ ಹನುಮಂತನಿಗೆ ಜೇಷ್ಠ ಮಾಸವೆಂದರೆ ಬಲು ಇಷ್ಟ. ಈ ಮಾಸದಲ್ಲಿ ಶ್ರೀರಾಮನ ಜತೆ ಹನುಮಂತನನ್ನು ಪೂಜಿಸುವುದು ಫಲಕಾರಿಯಾಗುತ್ತದೆ.

ಆಷಾಢ ಮಾಸ

ಆಷಾಢ ಮಾಸ

ಹಿಂದೂ ಪಂಚಾಂಗದ ನಾಲ್ಕನೇ ಮಾಸ ಆಷಾಢ. ಬಹುತೇಕ ಹಿಂದೂಗಳಲ್ಲಿ ಆಷಾಢ ಮಾಸ ಅಶುಭ ಮಾಸ ಎಂಬ ಕಲ್ಪನೆ ಬೇರೂರಿ ಬಿಟ್ಟಿದೆ. ಆದರೆ ಇದಕ್ಕೆ ವೈಜ್ಞಾನಿಕ ಕಾರಣ ಮಳೆಗಾಲ ಎಂಬುದಷ್ಟೇ. ಆಷಾಢದಲ್ಲಿ ಶಿವ ಹಾಗೂ ಲಕ್ಷ್ಮಿದೇವಿಯ ಆರಾಧನೆ ಮಾಡಲಾಗುತ್ತದೆ. ಅಮರನಾಥದ ಹಿಮಲಿಂಗ ದರ್ಶನ ಪ್ರತಿ ವರ್ಷ ಆರಂಭವಾಗುವುದು ಈ ಸಮಯದಲ್ಲೇ. ಶಿವ ಪಾರ್ವತಿಗೆ ಅಮರತ್ವದ ರಹಸ್ಯ ಹೇಳಿರುವುದು ಸಹ ಈ ಮಾಸದಲ್ಲೇ . ಗಂಗೆ ಭೂಮಿಗೆ ಉತ್ತರಾಭಿಮುಖವಾಗಿ ಹರಿದು ಬಂದಿದ್ದು ಈ ಮಾಸದಲ್ಲಿ. ಅನುಸೂಯದೇವಿ ಎಂಬ ಮಹಾ ಪತಿವ್ರತೆ ಈ ಮಾಸದ ನಾಲ್ಕು ಸೋಮವಾರ ಶಿವ ವ್ರತ ಮಾಡಿದ್ದಳು. ಅಮರನಾಥನ ಹಿಮಲಿಂಗ ದರ್ಶನ ಪ್ರತಿ ವರ್ಷ ಈ ಸಮಯದಲ್ಲೇ ಆರಂಭವಾಗುತ್ತದೆ. ಪ್ರಥಮ ಏಕಾದಶಿ ವ್ರತ ಆರಾಧನೆ ಬರುವುದು ಆಷಾಢದಲ್ಲಿ. ಆಷಾಢದ ಶುಕ್ರವಾರಗಳಲ್ಲಿ ಲಕ್ಷ್ಮೀ ಪೂಜೆಯನ್ನು ವಿಶೇಷವಾಗಿ ಆಚರಿಸುವರು. ಆ ದಿನ ಸಂಜೆ ಮನೆ ಮುಂದೆ ದೀಪ ಹಚ್ಚಿ ಇಡುತ್ತಾರೆ.

ಶ್ರಾವಣ ಮಾಸ

ಶ್ರಾವಣ ಮಾಸ

ಹಿಂದೂ ಪಂಚಾಂಗದ ಐದನೇ ಮಾಸ ಶ್ರಾವಣ ಶನಿವಾರ ವಿಷ್ಣುವಿನ ಪೂಜೆಗೆ, ವಿಷ್ಣುವನ್ನು ಕುಲದೇವರಾಗಿ ಆರಾಧಿಸುವವರಿಗೆ ಪೂಜ್ಯನೀಯ ಮಾಸ. ಈ ಮಾಸದಲ್ಲಿ ವಿಷ್ಣು ಆರಾಧಕರು ಮಾಂಸಾಹಾರವನ್ನು ತ್ಯಜಿಸಿ ಶ್ರದ್ಧಾ ಭಕ್ತಿಯಿಂದ ಪೂಜಿಸುತ್ತಾರೆ. ಶ್ರಾವಣ ಮಾಸ ಆರಂಭವು ಸತ್ಕಾರ್ಯಗಳನ್ನು ಮಾಡಲು ಸರಿಯಾದ ಸಮಯ. ಈ ಮಾಸದಲ್ಲಿ ಬರುವ ಎಲ್ಲ ಸೋಮವಾರಗಳು ಮುಕ್ತಿಯ ಸೋಪಾನಗಳು ಎಂಬುದು ಶಿವಭಕ್ತರ ನಂಬಿಕೆಯಾಗಿದೆ.

ಶ್ರಾವಣ ಮಾಸದಲ್ಲಿ ಒಂದೇ ರೇಖೆಯಲ್ಲಿ ಬರುವ 17 ನಕ್ಷತ್ರಗಳು ಮಂಗಳಕರವಾದ ಮಳೆಗರೆದು, ಧರೆಯ ಜನರಿಗೆ ಉನ್ನತ ಫಲಗಳನ್ನು ನೀಡುತ್ತದೆ. ಸಿರಿ ಸಂಪತ್ತು ವದ್ಧಿಗಾಗಿ ವರಲಕ್ಷ್ಮಿ ಮಹಾ ಪೂಜಾ ವ್ರತ, ಸಕಲ ಸಂಕಷ್ಟಗಳಿಂದ ಮುಕ್ತಗೊಳಿಸಿ ಸಮದ್ಧಿ ನೀಡುವ ಶ್ರೀ ಸತ್ಯ ನಾರಾಯಣ ಪೂಜಾವ್ರತ, ಮಂಗಳಗೌರಿ ವ್ರತ, ವಿದ್ಯಾಬುದ್ಧಿ ವದ್ಧಿಗಾಗಿ ಶಾರದಾ ಮಹಾಪೂಜೆ, ನಾಡ ಹಬ್ಬ ನಾಗಪಂಚಮಿ ನಾಗದೇವತೆಗೆ ಹಾಲೆರೆಯುವುದು, ಸಹೋದರಿಯರ ರಕ್ಷಾಬಂಧನ, ಶ್ರೀಕಷ್ಣ ಜನ್ಮಾಷ್ಟಮಿ ಆಚರಣೆ ಮುಂತಾದ ವಿಧಿ ವಿಶೇಷಗಳಿಗೆ ಈ ಮಾಸವೇ ಪ್ರಧಾನವಾಗಿದೆ. ಶ್ರಾವಣ ಸೋಮವಾರಕ್ಕೆ ಅಗ್ರ ಸ್ಥಾನವನ್ನು ಕಲ್ಪಿಸಲಾಗಿದ್ದು, ಈ ಮಾಸದಲ್ಲಿ ಬರುವ ಎಲ್ಲ ಸೋಮವಾರಗಳು ಮುಕ್ತಿಯ ಸೋಪಾನಗಳು ಎಂಬುದು ಶಿವಭಕ್ತರ ನಂಬಿಕೆಯಾಗಿದೆ.

ಶ್ರಾವಣ ಮಾಸದ ಪೂಜೆ ಹೀಗಿರಲಿ

  • ಸೋಮವಾರ: ಸೋಮವಾರದಂದು ಪರಶಿವನನ್ನು ಆರಾಧಿಸಿ.
  • ಮಂಗಳವಾರ: ಮಹಿಳೆಯರು ಕುಟುಂಬದ ಸದಸ್ಯರ ಉತ್ತಮ ಆರೋಗ್ಯಕ್ಕಾಗಿ ಗೌರಿ ಪೂಜೆ ಮಾಡಬೇಕು.
  • ಬುಧವಾರ: ಭಗವಾನ್‌ ವಿಷ್ಣು ಅಥವಾ ಕೃಷ್ಣನ ಇನ್ನೊಂದು ಅವತಾರವಾದ ವಿಠಲನನ್ನು ಈ ದಿನ ಆರಾಧಿಸಬೇಕು.
  • ಗುರುವಾರ: ಶ್ರಾವಣ ಮಾಸದ ಗುರುವಾರದಂದು ಬುಧ ಮತ್ತು ಗುರುವನ್ನು ಪೂಜಿಸಬೇಕು.
  • ಶುಕ್ರವಾರ: ಈ ದಿನ ಲಕ್ಷ್ಮಿ ಮತ್ತು ತುಳಸಿಯನ್ನು ಭಕ್ತಿಯಿಂದ ಪೂಜಿಸಿ.
  • ಶನಿವಾರ: ಶ್ರಾವಣ ಮಾಸದ ಈ ದಿನವನ್ನು ಶ್ರಾವಣ ಶನಿವಾರ ಅಥವಾ ಸಂಪತ್‌ ಶನಿವಾರವೆಂದು ಕರೆಯಲಾಗುತ್ತದೆ. ಈ ದಿನ ಸಂಪತ್ತನ್ನು ಪಡೆದುಕೊಳ್ಳಲು ಶನೇಶ್ವರನನ್ನು ಆರಾಧಿಸಬೇಕು.
  • ಭಾದ್ರಪದ ಮಾಸ

    ಭಾದ್ರಪದ ಮಾಸ

    ಹಿಂದೂ ಸಂಪ್ರದಾಯದಲ್ಲಿ ಆರನೇ ಮಾಸವಾಗಿ ಬರುವ ಮಾಸವೇ ಭಾದ್ರಪದ. ಈ ಮಾಸ ದೈವಾದೀನರಾದವರಿಗೆ ಪೂಜೆ ಸಲ್ಲಿಸುವ ವಿಶೇಷ ಮಾಸವಾಗಿದೆ. ಈ ಮಾಸದಲ್ಲಿ ಹೆಣ್ಣುಮಕ್ಕಳು, ಸುಮಂಗಲಿಯರು ಹರಿತಾಲಿಕಾ ವ್ರತವನ್ನು ಭಾದ್ರಪದ ಶುಕ್ಲ ತದಿಗೆಯಂದು ಮಾಡುತ್ತಾರೆ. ಪಾರ್ವತಿಯು ಈ ವ್ರತವನ್ನು ಮಾಡಿ ಶಿವನನ್ನು ಪಡೆದಳು. ಆದುದರಿಂದ ಯುವತಿಯರು ತಮಗೆ ಅಪೇಕ್ಷಿತ ವರನನ್ನು ಪಡೆಯಲು ಈ ವ್ರತವನ್ನು ಮಾಡುತ್ತಾರೆ ಹಾಗೂ ಅಖಂಡ ಸೌಭಾಗ್ಯ ಸಿಗಲು ವಿವಾಹಿತ ಸ್ತ್ರೀಯರು ಈ ವ್ರತವನ್ನು ಮಾಡುತ್ತಾರೆ. ಭಾದ್ರಪದಮಾಸಕ್ಕೆ ಹೃಷಿಕೇಶರೂಪಿ ಪರಮಾತ್ಮನು ನಿಯಾಮಕ ಈ ಮಾಸವು ದೇವತೆಗಳಿಗೆ ಹಾಗೂ ಪಿತೃಗಳಿಗೆ ಪ್ರಿಯವಾಗಿದ್ದು ಹದಿನೈದು ದಿವಸ ದೇವತೆಗಳಿಗೆ ಹದಿನೈದು ದಿವಸ ಪಿತೃಗಳಿಗೆ ಮೀಸಲಿರಿಸಲಾಗಿದೆ. ಈ ಮಾಸದಲ್ಲಿ ಬರುವ ಪಿತೃ ಪಕ್ಷದಲ್ಲಿ ಪಿಂಡ ಪ್ರಧಾನ, ಕುಟುಂಬದ ಹಿರಿಯರಿಗೆ ಪೂಜೆ ಸಲ್ಲಿಸುವ ಪದ್ಧತಿ ಇದೆ.

    ಆಶ್ವಯುಜ ಮಾಸ

    ಆಶ್ವಯುಜ ಮಾಸ

    ಹಿಂದೂ ಪದ್ಧತಿಯ ಏಳನೇ ಮಾಸ ಆಶ್ವಯುಜದಲ್ಲಿ ಭಾರತದ ವಿಶೇಷ ಹಬ್ಬ/ದಿನಗಳಾದ ಕಾರ್ತೀಕ ಸ್ನಾನ, ನವರಾತ್ರಿ ಮತ್ತು ದೀಪಾವಳಿ ಬರುತ್ತದೆ. ಈ ಮಾಸದಲ್ಲಿ ದೇವಿಯರ ಆರಾಧನೆ ಹೆಚ್ಚು ಫಲಪ್ರದ. ಆಶ್ವಿನ ಮಾಸದ ಶುಕ್ಲ ಪ್ರತಿಪಾದದಿಂದ "ನವರಾತ್ರಿ" ಉತ್ಸವವು ಪ್ರಾರಂಭವಾಗುತ್ತದೆ. ಈ ಉತ್ಸವವು ಶರದ್ಋತುವಿನಿಂದ ಪ್ರಾರಂಭವಾಗುವುದರಿಂದ ಇದಕ್ಕೆ "ಶರನ್ನವರಾತ್ರಿ" ಎಂಬುದಾಗಿ ಕರೆಯುವುದುಂಟು. ಆಶ್ವಿನ ಮಾಸದಲ್ಲಿ ಪ್ರಾತಃಸ್ನಾನವು ಮಹಾಫಲದಾಯಕವಾಗಿದೆ. ಈ ಮಾಸದಲ್ಲಿ ಮಾಡಿದ ಜಪ, ದಾನ, ಶ್ರೀಹರಿಪೂಜೆ ಇವು ಸಕಲ ಪಾಪಪರಿಹಾರಕವಾಗಿವೆ. ಈ ನವರಾತ್ರಿ ಸಮಯದಲ್ಲಿ ಶ್ರೀನಿವಾಸ ಕಲ್ಯಾಣ ಪಾರಾಯಣ ಮಾಡಬೇಕು. ವೇದ ಪಾರಾಯಣಗಳನ್ನು ಮಾಡಿದರೆ ಕಲ್ಯಾಣವಾಗುವುದು ಮತ್ತು ವಿಶೇಷ ಫಲವಿದೆ ಎಂದು ಆಶ್ವೀನಮಾಸ ಮಹಾತ್ಮೇಯಲ್ಲಿ ಹೇಳಿದೆ

    ಕಾರ್ತಿಕ ಮಾಸ

    ಕಾರ್ತಿಕ ಮಾಸ

    ಹಿಂದೂ ಪಂಚಾಂಗದ ಪ್ರಕಾರ ಚಳಿಗಾಲ ಆರಂಭವಾಗುವ ಮಾಸ ಅಂದರೆ ಎಂಟನೇ ಮಾಸವೇ ಕಾರ್ತಿಕ ಮಾಸ. ಕಾರ್ತಿಕ ಮಾಸ ಅತ್ಯಂತ ಪವಿತ್ರ ಹಾಗೂ ಶ್ರೇಷ್ಠ ಮಾಸ ಎಂದು ಪರಿಗಣಿಸಲಾಗಿದೆ. ಕಾರ್ತಿಕ ಮಾಸದ ಅಧಿಪತಿ ಶಿವ. ಪರಮೇಶ್ವರನ ಆರಾಧನೆಗೆ ಇದು ಅತ್ಯಂತ ಶುಭಕರ ಮಾಸವಾಗಿದೆ. ಈ ಮಾಸದಲ್ಲಿ ತುಳಸಿ ಪೂಜೆಗೆ ಹೆಚ್ಚು ಶ್ರೇಷ್ಠತೆಯನ್ನು ಪಡೆಯುತ್ತದೆ. ಈ ಮಾಸದಲ್ಲಿ ಜ್ಯೋತಿ ಬೆಳಗುವ ಮೂಲಕ ಮನಸ್ಸಿನ ಅಂಧಕಾರವನ್ನು ತೊಡೆದುಹಾಕಬಹುದು. ಸೂರ್ಯೋದಯ ಹಾಗೂ ಸೂರ್ಯಾಸ್ತದ ಸಮಯದಲ್ಲಿ ದೀಪ ಬೆಳಗುವುದು ಶ್ರೇಯಸ್ಕರ. ಈ ತಿಂಗಳನ್ನು ವಿಷ್ಣು ಮಾಸ ಎಂದು ಕೂಡ ಕರೆಯಲಾಗುವುದು. ತುಳಸಿಗೆ ವಿಶೇಷ ಮಾನ್ಯತೆ ಹೊಂದಿರುವ ಈ ಮಾಸದಂದು ವಿಷ್ಣು ಮತ್ತು ಲಕ್ಷ್ಮಿಯರು ನದಿಯಲ್ಲಿ ಪವಿತ್ರ ಸ್ನಾನ ಮಾಡಿ, ತುಳಸಿಯನ್ನು ಪೂಜಿಸಿದರು ಎಂದು ಹೇಳಲಾಗುತ್ತದೆ. ಇದೇ ಕಾರಣದಿಂದ ಈ ಮಾಸದಲ್ಲಿ ತುಳಸಿ ಪೂಜೆ ಮಾಡಿದರೆ, ಇಷ್ಟಾರ್ಥ ಫಲಿಸಲಿದೆ ಎನ್ನಲಾಗುತ್ತದೆ. ಧಾರ್ಮಿಕ ನಂಬಿಕೆ ಎಂದರೆ ಕಾರ್ತಿಕ ಮಾಸದಲ್ಲಿ ವಿಷ್ಣುವು ನಿದ್ರೆಯಿಂದ ಎಚ್ಚರಗೊಂಡು ಇಡೀ ಸೃಷ್ಟಿಯ ಮೇಲೆ ಸಂತೋಷ ಮತ್ತು ಅನುಗ್ರಹವನ್ನು ನೀಡುತ್ತಾನೆ. ಇದರೊಂದಿಗೆ ಲಕ್ಷ್ಮಿ ಕೂಡ ಈ ತಿಂಗಳು ಭೂಮಿಗೆ ಭೇಟಿ ನೀಡುತ್ತಾಳೆ. ಭಕ್ತರಿಗೆ ಅಪಾರ ಸಂಪತ್ತನ್ನು ಅನುಗ್ರಹಿಸುತ್ತಾರೆ. ಈ ತಿಂಗಳು ದಾನಕ್ಕೆ ಹೆಸರುವಾಸಿಯಾಗಿದೆ.

    ಮಾರ್ಗಶಿರ ಮಾಸ

    ಮಾರ್ಗಶಿರ ಮಾಸ

    ಹಿಂದೂ ಪಂಚಾಂಗದ ಪ್ರಕಾರ ಒಂಬತ್ತನೇ ಮಾಸವಾಗಿರುವ ಮಾರ್ಗಶಿರ ಮಾಸ ಹಾಗೂ ಧನುರ್ಮಾಸ ಎಂದೂ ಕರೆಯುವ ಈ ಮಾಸವನ್ನು ಅತ್ಯಂತ ಪುಣ್ಯ, ಪವಿತ್ರವಾದ ಮಾಸ ಎಂದು ಭಾವಿಸುತ್ತಾರೆ. "ಮಾಸಾನಾಮ್ ಮಾರ್ಗಶೀರ್ಷಃ ಅಹಮ್ ಋತೂನಾಮ್ ಕುಸುಮ ಆಕರಃ -ಸಾಮದ ಗಾನಗಳಲ್ಲಿ ಬೃಹತ್ ಸಾಮವೆಂಬ ಗಾನ ನಾನು" ಎಂದು ಭಗವಾನ್ ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ್ದಾನೆ. ಅಂದರೆ ಮಾಸಗಳಲ್ಲಿ ನಾನು ಮಾರ್ಗಶಿರ ಮಾಸ, ಋತುಗಳಲ್ಲಿ ವಸಂತ ಋತುವಾಗಿದ್ದೇನೆ ಎಂಬುದು ಇದರ ಅರ್ಥ. ಶ್ರೀಕೃಷ್ಣ ಅರ್ಜುನನಿಗೆ ಗೀತೋಪದೇಶ ಮಾಡಿದ್ದೂ ಸಹ ಇದೇ ಮಾರ್ಗಶಿರ ಮಾಸದಲ್ಲಿ.

    ಮಾರ್ಗಶಿರ ಮಾಸವನ್ನು ಧನುರ್ಮಾಸವೆಂದೂ ಕರೆಯುತ್ತಾರೆ. ವಿಷ್ಣುವಿನ ಸ್ವರೂಪವೇ ಆಗಿರುವ ಶ್ರೀಕೃಷ್ಣ ಮಾಸಗಳಲ್ಲಿ ನಾನು ಮಾರ್ಗಶಿರ ಮಾಸ ಎಂದು ಹೇಳಿದ್ದು, ಈ ಮಾಸದಲ್ಲಿ ವಿಷ್ಣುವಿಗೆ ವಿಶೇಷ ಪೂಜೆಗಳು ನಡೆಯುತ್ತದೆ. ಈ ಮಾಸದ ಮತ್ತೊಂದು ಆಚರಣೆಯೆಂದರೆ ಅಮಾವಾಸ್ಯೆಯ 6 ದಿನಗಳ ನಂತರ ಸ್ಕಂದ ಷಷ್ಟಿಯನ್ನು ಆಚರಿಸಲಾಗುತ್ತದೆ. ತಮಿಳುನಾಡಿನಲ್ಲಿ ಈ ರೀತಿಯ ಸ್ಕಂದ ಷಷ್ಠಿ ಆಚರಣೆ ಹೆಚ್ಚು ನಡೆಯಲಿದ್ದು, ಸಂತಾನವಿಲ್ಲದವರು ಈ ಷಷ್ಠಿಯ ದಿನದಂದು ಸುಬ್ರಹ್ಮಣ್ಯನಿಗೆ ಪೂಜೆ ಸಲ್ಲಿಸಿದರೆ ಸಂತಾನ ಪಡೆಯುತ್ತಾರೆ ಎಂಬ ನಂಬಿಕೆಯೂ ಇದೆ.

    ಪುಷ್ಯ ಮಾಸ

    ಪುಷ್ಯ ಮಾಸ

    ಪುಷ್ಯ ಮಾಸವೆಂದರೆ ಅದುವೇ ಹಿಂದೂ ಪಂಚಾಂಗದ 10ನೇ ಮಾಸ. ಪುಷ್ಯ ಮಾಸವು ತೆಲುಗು ಮತ್ತು ಕನ್ನಡ ಕ್ಯಾಲೆಂಡರ್‌ನಲ್ಲಿ ಒಂದು ಪ್ರಮುಖ ಚಂದ್ರ ತಿಂಗಳು. ಪುಷ್ಯ ಮಾಸವು ಭಗವಾನ್‌ ಶ್ರೀಮನ್‌ ನಾರಾಯಣನಿಗೆ ಅರ್ಪಿತವಾದ ಮಾಸವಾಗಿದೆ. ಲಕ್ಷ್ಮಿ ನಾರಾಯಣ ಅಂದರೆ ಲಕ್ಷ್ಮಿ ಮತ್ತು ವಿಷ್ಣು ಈ ಮಾಸದ ಪ್ರಧಾನ ದೇವ ಮತ್ತು ದೇವತೆಯಾಗಿದ್ದಾರೆ. ಅವರನ್ನು ಲಕ್ಷ್ಮಿ ನಾರಾಯಣ ಎನ್ನುವ ಹೆಸರಿನಲ್ಲಿ ಪೂಜಿಸಲಾಗುತ್ತದೆ. ಶನಿ ಗ್ರಹವು ಪುಷ್ಯ ಮಾಸದ ಪ್ರಧಾನ ಗ್ರಹವಾಗಿದೆ. ಮತ್ತು ಬೃಹಸ್ಪತಿ ಅಥವಾ ಗುರುವನ್ನು ಈ ಮಾಸದ ನಕ್ಷತ್ರ ದೇವತೆಯೆಂದು ಪರಿಗಣಿಸಲಾಗುತ್ತದೆ.

    ಈ ಮಾಸವು ಮಕರ ಸಂಕ್ರಾಂತಿ ಹಬ್ಬದೊಂದಿಗೆ ಆರಂಭವಾಗುತ್ತದೆ. ಈ ಮಾಸವನ್ನು ಶೂನ್ಯ ಮಾಸವೆಂದೂ ಕರೆಯಲಾಗುತ್ತದೆ. ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಪುಷ್ಯ ಮಾಸಕ್ಕೆ ವಿಶೇಷ ಪ್ರಾಮುಖ್ಯತೆ ಇದೆ.

    ಪುಷ್ಯ ತಿಂಗಳಿನಲ್ಲಿ ಸೂರ್ಯ ದೇವನು ದೇವರುಗಳ ದಿಕ್ಕೆಂದು ಗುರುತಿಸಿಕೊಂಡ ಉತ್ತರ ದಿಕ್ಕಿನಲ್ಲಿ ಸಂಚಾರವನ್ನು ಮಾಡುತ್ತಾನೆ. ಮತ್ತು ಅಂದಿನಿಂದ ಉತ್ತರಾಯಣ ಪುಣ್ಯಕಾಲವು ಪ್ರಾರಂಭವಾಗುತ್ತದೆ. ಉತ್ತರಾಯಣವು ಮಕರ ಸಂಕ್ರಾಂತಿಯ ಅತ್ಯಂತ ಪ್ರಸಿದ್ಧ ಹಬ್ಬದೊಂದಿಗೆ ಪ್ರಾರಂಭವಾಗುತ್ತದೆ. ಮಕರ ಸಂಕ್ರಾಂತಿಯ ದಿನದಂದೇ ಪುಷ್ಯ ಮಾಸ ಆರಂಭವಾಗಿದೆ.

    ಮಾಘ ಮಾಸ

    ಮಾಘ ಮಾಸ

    ಹಿಂದೂ ಪಂಚಾಂಗದ 11ನೇ ತಿಂಗಳು ಮಾಘ ಮಾಸ ಎಂದೊಡನೆ ತಕ್ಷಣ ನೆನಪಿಗೆ ಬರುವುದು ಮಾಘಸ್ನಾನ, ಹಬ್ಬಗಳ ಸಾಲು. ಸೂರ್ಯ ಮಕರರಾಶಿಯಲ್ಲಿರುವಾಗ ಮಾಘಮಾಸದಲ್ಲಿ ಪ್ರಾತಃ ಕಾಲದಲ್ಲಿ ಸ್ನಾನ ಮಾಡುವವರು ಸಮಸ್ತ ಪಾಪಗಳಿಂದ ಮುಕ್ತರಾಗಿ ಅಂತ್ಯದಲ್ಲಿ ಮೋಕ್ಷವನ್ನು ಪಡೆಯುತ್ತಾರೆ ಎಂಬ ನಂಬಿಕೆಯಿದೆ.

    ಈ ಮಾಸದಲ್ಲಿ ತೀರ್ಥಗಳ ರಾಜ ಎಂದೇ ಕರೆಯಲಾಗುವ ಪ್ರಯಾಗ ಮಹಾಕ್ಷೇತ್ರದಲ್ಲಿ ಸ್ನಾನ ಮಾಡಿದವರು ವೈಕುಂಠ ಸೇರುತ್ತಾರೆ. ಮಾಘ ಪುರಾಣದ ಪ್ರಕಾರ ಮೊದಲನೇ ದಿನ ಮಾಘ ಸ್ನಾನ ಮಾಡಿದವರಿಗೆ ಪಾಪಗಳಿಂದ ಬಿಡುಗಡೆ, ಎರಡನೇ ದಿನವೂ ಮಾಘಸ್ನಾನ ಆಚರಣೆ ಮುಂದುವರೆಸುವವರು ವಿಷ್ಣು ಲೋಕಸೇರುತ್ತಾರೆ ಹಾಗೂ ಮೂರನೇ ದಿನವೂ ಇದನ್ನು ಮುಂದುವವರಿಗೆ ಯಾವ ಫಲವನ್ನು ಕೊಡಬೇಕೆಂದು ವಿಷ್ಣುವೇ ಯೋಚಿಸುತ್ತಾನೆಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.

    ಫಾಲ್ಗುಣ ಮಾಸ

    ಫಾಲ್ಗುಣ ಮಾಸ

    ಫಾಲ್ಗುಣ ಹಿಂದೂ ಪಂಚಾಂಗದ ಕೊನೆಯ ತಿಂಗಳು. ಈ ತಿಂಗಳ ಹುಣ್ಣಿಮೆಯನ್ನು ಫಲ್ಗುಣಿ ನಕ್ಷತ್ರ ಎಂದು ಕರೆಯುವುದರಿಂದ ಅದನ್ನು ಫಾಲ್ಗುಣ ಮಾಸ ಎಂದು ಕರೆಯಲಾಗುತ್ತದೆ. ಫಾಲ್ಗುಣ ತಿಂಗಳು ಸಂತೋಷ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಫಾಲ್ಗುಣ ತಿಂಗಳು ಬೇಸಿಗೆಯ ಆಗಮನವನ್ನು ಸೂಚಿಸುತ್ತದೆ ಎಂದು ಹೇಳಲಾಗುತ್ತದೆ.

    ಫಾಲ್ಗುಣ ತಿಂಗಳಲ್ಲಿ ಶ್ರೀ ಕೃಷ್ಣನನ್ನು ಪೂಜಿಸುವುದು ವಿಶೇಷವಾಗಿ ಫಲಪ್ರದವಾಗಿದೆ ಎಂದು ಹೇಳಲಾಗುತ್ತದೆ. ಮಕ್ಕಳನ್ನು ಹೊಂದಲು ಬಯಸುವವರು ಈ ತಿಂಗಳಲ್ಲಿ ಶ್ರೀಕೃಷ್ಣನ ಮಗುವಿನ ರೂಪವನ್ನು ಪೂಜಿಸಬೇಕು. ಈ ತಿಂಗಳಲ್ಲಿ ಶ್ರೀಕೃಷ್ಣನ ಪೂಜೆಗೆ ವಿಶೇಷ ಮಹತ್ವವಿದೆ. ಈ ತಿಂಗಳಲ್ಲಿ ಚಂದ್ರದೇವನ ಜೊತೆಗೆ ಶ್ರೀ ಕೃಷ್ಣ, ಶಿವ, ವಿಷ್ಣು ಪೂಜೆಗೆ ವಿಶೇಷ ಮಹತ್ವವಿದೆ. ಫಾಲ್ಗುಣ ತಿಂಗಳಲ್ಲಿ ಮಾತಾ ಸೀತೆಯನ್ನು ಪೂಜಿಸಲಾಗುತ್ತದೆ. ಫಾಲ್ಗುಣ ತಿಂಗಳಲ್ಲಿ ಅನೇಕ ಹಬ್ಬಗಳನ್ನು ಆಚರಿಸಲಾಗುತ್ತದೆ, ಮುಖ್ಯವಾಗಿ ಹೋಳಿ, ಶನಿ ಅಮಾವಾಸ್ಯೆ, ಫಾಲ್ಗುಣ ಪೂರ್ಣಿಮಾ, ಫಾಲ್ಗುಣ ಅಮಾವಾಸ್ಯೆ ಮತ್ತು ಅಮಲಕೀ ಏಕಾದಶಿಯಂತಹ ವಿಶೇಷ ಹಬ್ಬವನ್ನು ಆಚರಿಸಲಾಗುವುದು.

English summary

Find out which month is dedicated to which god

Here we are discussing about Find out which month is dedicated to which god. Read more.
X
Desktop Bottom Promotion