For Quick Alerts
ALLOW NOTIFICATIONS  
For Daily Alerts

ಇಂತಹ ಅತಿಥಿಗಳನ್ನು ಮನೆಯಿಂದ ಆದಷ್ಟು ಬೇಗ ಓಡಿಸಿ!

By Super
|

ಶೀರ್ಷಿಕೆ ನೋಡಿ, ಸ್ವಲ್ಪ ಆಶ್ಚರ್ಯವಾಗಿರಬೇಕು ಅಲ್ಲವೇ?, ಹೌದು ನಾವು ಈಗ ಹೇಳಹೊರಟಿರುವುದು ಮನೆಯಲ್ಲಿ ಈಗಾಗಲೇ ಜಾಂಡಾ ಹೂಡಿರುವ ಕೀಟಗಳ ಬಗ್ಗೆ..! ಸಾಮಾನ್ಯವಾಗಿ ನಾವೆಲ್ಲರೂ ಕೀಟಗಳೆಂದರೆ ಅನಿಷ್ಟವೆಂದೇ ತಿಳಿದಿದ್ದೇವೆ. ಆದರೆ ವಾಸ್ತವದಲ್ಲಿ ಜಗತ್ತಿಗೆ ಕೀಟಗಳು ಅನಿವಾರ್ಯ. ಏಕೆಂದರೆ ಹೂವಿನ ಪರಾಗಸ್ಪರ್ಶವಾಗದೇ ಬೀಜವಾಗಲು, ತನ್ಮೂಲಕ ಸಸ್ಯಗಳು ಬೆಳೆಯಲು ಸಾಧ್ಯವಾಗುವುದೇ ಇಲ್ಲ.

ನಮಗೆ ಸಿಹಿಯಾದ ಜೇನು ನೀಡುವ ಜೇನ್ನೊಣವೂ ಒಂದು ಕೀಟವೇ. ಜೀವಶಾಸ್ತ್ರಜ್ಞರು ಇದುವರೆಗೆ ಪಟ್ಟಿ ಮಾಡಿರುವ ಪ್ರಕಾರ ಈ ವಿಶ್ವದಲ್ಲಿ 950,000ಕ್ಕೂ ಹೆಚ್ಚು ವಿಧದ ಕೀಟಗಳಿವೆ. ಇವುಗಳಲ್ಲಿ ಕೆಲವು ಮಾತ್ರ ಮಾನವರಿಗೆ ಕೆಟ್ಟದ್ದನ್ನು ಮಾಡಿದರೆ ಉಳಿದವು ನಿಸರ್ಗಕ್ಕೆ ಒಳ್ಳೆಯದನ್ನೇ ಮಾಡುತ್ತವೆ. ಒಂದು ವೇಳೆ ಕೀಟಗಳನ್ನೆಲ್ಲಾ ನಿರ್ನಾಮ ಮಾಡಹೊರಟರೆ ಈ ಜಗತ್ತೇ ಕೊನೆಗೊಳ್ಳಬಹುದು. ಆದ್ದರಿಂದ ಮಾನವರಿಗೆ ತೊಂದರೆಕೊಡುವ ಕೀಟಗಳನ್ನು ಮಾತ್ರ ಕೊಂದು ಉಳಿದವರನ್ನು ಹಾಗೇ ಉಳಿಸುವುದು ಎಂಟಮಾಲಜಿ ಅಥವಾ ಕೀಟಶಾಸ್ತ್ರ ಕಲಿಯುವವರ ಪಾಲಿಗೆ ಸತ್ವಪರೀಕ್ಷೆಯಾಗಿದೆ. ಮನೆಯಲ್ಲಿ ಜಿರಳೆಗಳ ಕಾಟವೇ? ಇನ್ನು ಚಿಂತೆ ಬಿಡಿ!

ಆದರೆ ಸಾಮಾನ್ಯವಾಗಿ ಮಾನವರು ವಾಸ ಮಾಡುವ ಸ್ಥಳಗಳನ್ನೇ ತಮ್ಮ ವಾಸಸ್ಥಾನವನ್ನಾಗಿಸಿ, ಮಾನವರು ಉಂಡುಬಿಟ್ಟ ಆಹಾರ, ಮಾನವರ ರಕ್ತವನ್ನೇ ಕುಡಿದು ಮಾನವರಿಗೇ ರೋಗ ಹತ್ತಿಸುವ ಕೃತಘ್ನ ಕೀಟಗಳೂ ಇವೆ. ಜಿರಲೆ, ಸೊಳ್ಳೆ, ನೊಣ, ನುಸಿ, ಇಲಿ, ಹಲ್ಲಿ,ತಿಗಣೆ, ಚಿಗಟ, ಇರುವೆ ಮೊದಲಾದವು ಮನೆಯ ಹೊರಗಿದ್ದರೆ ನಾವಷ್ಟು ತಲೆಬಿಸಿ ಮಾಡಿಕೊಳ್ಳುತ್ತಿರಲಿಲ್ಲ. ಆದರೆ ಇವು ನೇರವಾಗಿ ನಮ್ಮ ಮನೆಯೊಳಗೇ

ನುಗ್ಗಿ ನಮ್ಮ ಖಾಸಗಿತನವನ್ನು ಕಸಿಯುವುದು ಮಾತ್ರವಲ್ಲ, ಉಡುಗೊರೆಯಾಗಿ ಕಾಯಿಲೆಗಳನ್ನು ನೀಡುವುದನ್ನು ಮಾತ್ರ ನಾವು ಸಹಿಸೆವು. ಅದರಲ್ಲೂ ಜಿರಲೆಗಳು ಎಲ್ಲೆಲ್ಲಿ ಓಡಾಡಿಕೊಂಡಿರುತ್ತವೆಯೋ ಏನೋ, ಅವು ನಡೆದಾಡಿದಲ್ಲೆಲ್ಲಾ ಲಕ್ಷಾಂತರ ಸೂಕ್ಷ್ಮಾಣುಜೀವಿಗಳಿದ್ದು ರೋಗ ಹತ್ತಿಸಲು ಕಾಯುತ್ತಿರುತ್ತವೆ. ಬನ್ನಿ ನಮ್ಮ ಮನೆಗಳಿಗೆ ಬರುವ ಈ ಬೇಡದ ಅತಿಥಿಗಳಿಗೆ ವಿದಾಯ ಹೇಳುವ ವಿಧಾನವನ್ನು ಸ್ಲೈಡ್ ಶೋ ಮೂಲಕ ವಿವರಿಸಲಾಗಿದೆ, ಮುಂದೆ ಓದಿ..

ಇಲಿ

ಇಲಿ

ಬಿಕನಿ ಎಂಬ ದ್ವೀಪವನ್ನು ಅಮೇರಿಕಾ ಸರ್ಕಾರ ಮೊತ್ತ ಮೊದಲು ಆಟಂ ಬಾಂಬ್ ಹಾಕಿ ಉಡಾಯಿಸಿದ ಬಳಿಕ ಹೋಗಿ ನೋಡಿದವರಿಗೆ ಇಲಿಯ ಹೆಜ್ಜೆಗಳು ಮೂಡಿದ್ದುದು ಅಚ್ಚರಿ ಮೂಡಿಸಿತ್ತು. ಆಟಂ ಬಾಂಬಿಗೇ ಸಾಧ್ಯವಾಗದ ಈ ಯಕಶ್ಚಿತ್ ಇಲಿಯನ್ನು ನಮಗೆ ನಿರ್ನಾಮ ಮಾಡುವುದು ಸುಲಭ ಸಾಧ್ಯವಲ್ಲ. ಆದರೆ ನಮ್ಮ ಮನೆಗೆ ನುಗ್ಗದಂತೆ ಮಾತ್ರ ನೋಡಿಕೊಳ್ಳಬಹುದು. ಇದಕ್ಕಾಗಿ ಮೊದಲು ಇಲಿಗಳ ಬಿಲಗಳನ್ನು ಪತ್ತೆ ಮಾಡಬೇಕು. ಮನೆಯ ಸುತ್ತಲೂ, ಪ್ರತಿ ಗೋಡೆ, ಮೆಟ್ಟಿಲು, ಮೂಲೆ ಎಲ್ಲೆಲ್ಲೂ ಗಮನವಿಟ್ಟು ನೋಡಿ ಬಿಲಗಳನ್ನು ಗುರುತು ಹಾಕಿಕೊಳ್ಳಬೇಕು.

ಇಲಿ

ಇಲಿ

ವಾಸ್ತವವಾಗಿ ಇಲಿಗಳು ತಮ್ಮ ಆಪತ್ಕಾಲಕ್ಕಾಗಿ ಮನೆಯಿಂದ ಹೊರಗೂ ಹೋಗುವಂತೆ ಒಂದು ಕಳ್ಳಬಿಲವನ್ನೂ ಕೊರೆದಿರುತ್ತವೆ. ಈ ಬಿಲವನ್ನೂ ಕಂಡುಹಿಡಿದರೆ ಲಾಟರಿ ಹೊಡೆದ ಹಾಗೆ. ಇಲಿಗಳಿಗೆ ಪುದೀನಾ ಎಣ್ಣೆ (peppermint oil) ಯ ಘಾಟು ತಡೆಯಲು ಸಾಧ್ಯವಿಲ್ಲ. ನೀವು ಕಂಡುಹಿಡಿದಿರುವ ಪ್ರತಿ ಬಿಲಗಳ ಒಳಗೆ ಒಂದು ದಪ್ಪನಾದ ಹತ್ತಿಯ ಉಂಡೆಯನ್ನು ಪುದಿನಾ ಎಣ್ಣೆಯಲ್ಲಿ ಮುಳುಗಿಸಿ ತೂರಿಸಿ. ಸಾಧ್ಯವಾದರೆ ಕಳ್ಳಬಿಲವನ್ನು ಗಟ್ಟಿಯಾದ ಕಲ್ಲು ಹಾಕಿ ಮುಚ್ಚಿ. ಈ ಘಾಟನ್ನು ಉಸಿರಾಡಿದ ಇಲಿಯ ಶ್ವಾಸಕೋಶ ಕುಗ್ಗಿ ಮತ್ತೆ ಹಿಗ್ಗಲಾಗದೇ ಒಳಗೇ ಸತ್ತು ಹೋಗುತ್ತದೆ.

ಜಿರಲೆ

ಜಿರಲೆ

ಸಮಪ್ರಮಾಣದಲ್ಲಿ ಒಂದು ದೊಡ್ಡ ಚಮಚದಷ್ಟು ಕಾಳುಮೆಣಸಿನ ಪುಡಿ, ಚಿಕ್ಕದಾಗಿ ಹೆಚ್ಚಿ ಜಜ್ಜಿದ ಈರುಳ್ಳಿ, ಸುಲಿದು ಜಜ್ಜಿರುವ ಬೆಳ್ಳುಳ್ಳಿ ಯನ್ನು ಸುಮಾರು ಒಂದು ಲೀಟರ್ ನೀರಿನಲ್ಲಿ ಹಾಕಿ ಕದಡಿ. (ಜಿರಲೆಯ ಕಾಟ ಹೆಚ್ಚಿದ್ದರೆ ಒಂದು ಚಮಚಕ್ಕೂ ಹೆಚ್ಚು ಪ್ರಮಾಣವನ್ನು ಉಪಯೋಗಿಸಬಹುದು). ಸಿಂಪಡಿಸುವ ಬಾಟಲಿ ಇದ್ದರೆ ದ್ರಾವಣವನ್ನು ಮಿಕ್ಸಿಯಲ್ಲಿ ಚೆನ್ನಾಗಿ ಗೊಟಾಯಿಸಿದರೆ ಇನ್ನೂ ಉತ್ತಮ.

ಜಿರಲೆ

ಜಿರಲೆ

ಈ ನೀರನ್ನು ಜಿರಳೆಗಳು ಎಲ್ಲೆಲ್ಲಿ ಕಾಣಿಸಿಕೊಳ್ಳುತ್ತವೆಯೋ ಅಲ್ಲೆಲ್ಲಾ, ವಿಶೇಷವಾಗಿ ಅಡುಗೆ ಮನೆಗಳ ಮೂಲೆಗಳಲ್ಲಿ ಸಿಂಪಡಿಸಿ. ದ್ರಾವಣ ಒಣಗಿದ ಬಳಿಕ ಇನ್ನೂ ಕೆಲವು ಬಾರಿ ಸಿಂಪಡಿಸುತ್ತಾ ಬನ್ನಿ. ಈ ಘಾಟನ್ನು ತಡೆಯಲಾರದ ಜಿರಲೆಗಳು ನಿಮ್ಮ ಮನೆಗೆ ಬರುವುದೇ ಇಲ್ಲ.

ನೊಣ

ನೊಣ

ಆಹಾರ ಎಲ್ಲಿದೆಯೋ ಅಲ್ಲೆಲ್ಲಾ ನೊಣಗಳು ಇದ್ದೇ ಇರುತ್ತವೆ. ಸಹಾರ ಮರುಭೂಮಿಯ ಅತ್ಯಧಿಕ ತಾಪಮಾನವಿರುವ ಸ್ಥಳದಲ್ಲಿಯೂ ಈ ನೊಣಗಳು ಬದುಕಿವೆ! ಆದರೆ ಸಹಾರ ಮರುಭೂಮಿಯಲ್ಲಿ ಬೆಳೆಯದ ತುಳಸಿ ಗಿಡ ನಿಮ್ಮ ಮನೆಯಂಗಳದಲ್ಲಿದ್ದರೆ ನೊಣಗಳನ್ನು ಸಹಾರಾ ಮರುಭೂಮಿಗೇ ಓಡಿಸಬಹುದು.

ನೊಣ

ನೊಣ

ಇದಕ್ಕಾಗಿ ಹೂಕುಂಡದಲ್ಲಿ ತುಳಸಿ ಗಿಡಗಳನ್ನು ಬೆಳೆಸಿ ನಿಮ್ಮ ಮನೆಯ ಪ್ರತಿ ಬಾಗಿಲಿನ ಬಳಿ ಇಟ್ಟರೆ ನೊಣ ಒಳಗಡಿಯಿಡುವುದಿಲ್ಲ. ಇದನ್ನು ಹಲವು ಸಸ್ಯಶಾಸ್ತ್ರಜ್ಞರು ಪರಿಶೀಲಿಸಿ ಸತ್ಯವೆಂದು ಕಂಡುಕೊಂಡಿದ್ದಾರೆ. ಇದರ ಜೊತೆಗೇ ನಿಲಗಿರಿ ಅಥವಾ ಲ್ಯಾವೆಂಡರ್ ಹೂವಿನ ವಾಸನೆ ಇದ್ದಲ್ಲಿಯೂ ನೊಣಗಳು ಬರುವುದಿಲ್ಲ. ಪ್ರಯತ್ನಿಸಿ ನೋಡಿ.

ತಿಗಣೆ

ತಿಗಣೆ

ಸಾಮಾನ್ಯವಾಗಿ ತಿಗಣೆಯನ್ನು ಹೊಸಕಿ ಹಾಕುವ ಮೂಲಕ ಉಚ್ಛಾಟಿಸುವವರಿಗೆ ಇದರ ಮೂಲಕ ಇನ್ನಷ್ಟು ತಿಗಣೆಗಳನ್ನು ಆಹ್ವಾನಿಸುತ್ತಿದ್ದೇವೆ ಎಂಬ ಅರಿವೇ ಇರುವುದಿಲ್ಲ. ಪುರಾತನ ಕಾಲದ ರಕ್ತಬೀಜಾಸುರನ ಅವತಾರವಾದ ತಿಗಣೆಗಳನ್ನು ಹೊಸಕಿದರೆ ಅದರಿಂದ ಹೊರಡುವ ರಾಸಾಯನಿಕ ಸೂಚನೆಯನ್ನು ಇತರ ತಿಗಣೆಗಳು ಎಷ್ಟೋ ದೂರದಿಂದ ಗ್ರಹಿಸಿ ಆ ಸ್ಥಳಕ್ಕೆ ಆಗಮಿಸಿ ತಮ್ಮ ವಂಶಸ್ಥರನ್ನು ಕೊಂದವರ ರಕ್ತ ಹೀರಿ ಸೇಡು ತೀರಿಸಿಕೊಳ್ಳುತ್ತವೆ. ಈ ರಕ್ತಬೀಜಾಸುರರನ್ನು ನಿಮ್ಮ ಮನೆಯಿಂದ ನಿವಾರಿಸಲು ಎಂದಿಗೂ ಹೊಸಕಬೇಡಿ. ಬದಲಿಗೆ ಹಸಿ ನೀರುಳ್ಳಿಯನ್ನು ಮಿಕ್ಸಿಯಲ್ಲಿ ಕಡೆದು ರಸ ಹಿಂಡಿ. (ಇದು ಕಣ್ಣಿನಲ್ಲಿ ನೀರು ತರಿಸುತ್ತದಾದರೂ ಕೊಂಚ ಸಹಿಸಿಕೊಳ್ಳುವುದು ಅನಿವಾರ್ಯ)

ತಿಗಣೆ

ತಿಗಣೆ

ಮುಖವನ್ನು ದಪ್ಪ ಟವೆಲ್ಲಿನಿಂದ ಮುಚ್ಚಿಕೊಂಡು ಈ ರಸವನ್ನು ಸ್ಪ್ರೇ ಬಾಟಲಿಗೆ ಹಾಕಿ ತಿಗಣೆಗಳಿರುವ ಸ್ಥಳದಲ್ಲೆಲ್ಲಾ, ವಿಶೇಷವಾಗಿ ಮಂಚದ ಬಿರುಕು, ತೂತು, ಮೊಳೆ ಹೊಡೆದು ಬಳಿಕ ನಿವಾರಿಸಿದ್ದರೆ ಉಳಿದಿರುವ ಗುಂಡಿ, ಹಾಸಿಗೆಯ, ದಿಂಬುಗಳ ಅಂಚುಗಳು, ಹೊಲಿಗೆ ಹಾಕಿರುವ ಸ್ಥಳದ ಮೂಲೆಗಳು ಮೊದಲಾದಲ್ಲಿಲ್ಲೆಲ್ಲಾ ನೇರವಾಗಿ ಸಿಂಪಡಿಸಿ. ಒಣಗಿದ ಬಳಿಕವೂ ಇನ್ನೊಂದೆರಡು ಬಾರಿ ಅದೇ ಸ್ಥಳದಲ್ಲಿ ಇನ್ನಷ್ಟು ಸಿಂಪಡಿಸಿ. ನಂತರ ಮನೆಯ ಕಿಟಕಿ ಬಾಗಿಲುಗಳನ್ನು ಭದ್ರವಾಗಿ ಮುಚ್ಚಿ ಮನೆಯ ಹೊರಗೆ ಕಾಲ ಕಳೆಯಿರಿ. ಸುಮಾರು ಆರು ಘಂಟೆಗಳ ಬಳಿಕ ವಾಪಸ್ಸಾದರೆ ಅಷ್ಟೂ ತಿಗಣೆಗಳು ಸತ್ತು ಬಿದ್ದಿರುವುದನ್ನು ಕಾಣುತ್ತೀರಿ.

ಹಲ್ಲಿ

ಹಲ್ಲಿ

ಹಲ್ಲಿಗಳಿರುವಲ್ಲಿ ಒಂದೆರಡು ಒಡೆದ ಮೊಟ್ಟೆಯ ಚಿಪ್ಪುಗಳನ್ನು ತೂಗು ಹಾಕಿ. ವಿಶೇಷವಾಗಿ ಮನೆಯ ಮೇಲ್ಛಾವಣಿಯ ಮೂಲೆಗಳಲ್ಲಿ ತೂಗು ಹಾಕಿ. ಮೊಟ್ಟೆಯ ಚಿಪ್ಪಿನ ವಾಸನೆ ನಮಗೆ ಬರದೇ ಇದ್ದರು ಹಲ್ಲಿಗಳಿಗೆ ಮಾತ್ರ ಸಹಿಸಲಸಾಧ್ಯವಾದುದರಿಂದ ಅವು ನಿಮ್ಮ ಮನೆಗೆ ಭೇಟಿ ನೀಡುವುದನ್ನೇ ಬಿಟ್ಟು ಬಿಡುತ್ತವೆ.

ಸೊಳ್ಳೆಗಳು

ಸೊಳ್ಳೆಗಳು

ಸರ್ಕಾರದ ಸೊಳ್ಳೆಗಳ ಉಚ್ಛಾಟನೆಯ ಎಷ್ಟೇ ಕಾರ್ಯಕ್ರಮ ಅಥವಾ ಯೋಜನೆಗಳಿದ್ದರೂ, ಸೊಳ್ಳೆಗಳ ನಿಗ್ರಹಕ್ಕೆ ನೀರು ನಿಲ್ಲಿದಂತೆ ನೋಡಿಕೊಳ್ಳಿ ಎಂದು ಪ್ರಕಟಣೆಗಳ ಮುಖಾಂತರ ಬೊಬ್ಬೆ ಹೊಡೆದರೂ ದಿವ್ಯ ನಿರ್ಲಕ್ಷ್ಯ ತೋರುವ ನಾವು ಭಾರತೀಯರಿಗೆ ಇದರ ಮಹತ್ವ ಮನದಟ್ಟಾಗುವುದು ಮಲೇರಿಯಾ ಅಥವಾ ಡೆಂಗಿ ಜ್ವರ ಇಡಿಯ ಊರಿಗೆ ವ್ಯಾಪಿಸಿದಾಗಲೇ! ಆದರೆ ಉಳಿದವರಂತೆ ನೀವು ಸೋಮಾರಿಗಳಾಗದೇ ನಿಮ್ಮ ಮನೆ ಮತ್ತು ಸುತ್ತಮುತ್ತ ಸೊಳ್ಳೆಗಳಿರದಂತೆ ನೋಡಿಕೊಳ್ಳಲು ಅಕ್ಕಪಕ್ಕದ ಮನೆಯವರ ಜೊತೆಗೂಡಿ ಬೇವಿನ ಎಣ್ಣೆಯನ್ನು ಬಳಸಿ ಸೊಳ್ಳೆಯನ್ನು ಸಾಕಷ್ಟು ಮಟ್ಟಿಗೆ ನಿಗ್ರಹಿಸಬಹುದು. ನಿಮ್ಮ ಇಡಿಯ ವಠಾರ ಅಥವಾ ಊರಿನ ಜನತೆ ಜೊತೆಗೂಡಿದರಂತೂ ಅತ್ಯಂತ ಉತ್ತಮ. ಇದಕ್ಕಾಗಿ ಬೇವಿನ ಎಣ್ಣೆಯನ್ನು ಸ್ಪ್ರೇ ಮಾಡುವ ಬಾಟಲಿಗಳಲ್ಲಿ ತುಂಬಿ ಸೊಳ್ಳೆಗಳಿರುವಲ್ಲೆಲ್ಲಾ ನೇರವಾಗಿ ಸಿಂಪಡಿಸಿ. ಎಲ್ಲೆಲ್ಲಿ ನೀರು ನಿಂತುಕೊಂಡಿದೆಯೋ ಅಲ್ಲಿ ಮಣ್ಣು ತುಂಬಿ ಮುಚ್ಚಿ. ನೀರು ನಿಲ್ಲಬಹುದಾದ ವಸ್ತುಗಳು, ಉದಾಹರಣೆಗೆ ಅಡ್ಡಬಿದ್ದ ಹಳೆಯ ಟೈರು, ಗೆರಟೆಚಿಪ್ಪು ಮೊದಲಾದವನ್ನೆಲ್ಲಾ ನಿವಾರಿಸಿ, ಆ ಸ್ಥಳದಲ್ಲೆಲ್ಲಾ ಬೇವಿನೆಣ್ಣೆಯನ್ನು ಸಿಂಪಡಿಸಿ. ಇದು ಸೊಳ್ಳೆಯನ್ನು ಓಡಿಸುವುದು ಮಾತ್ರವಲ್ಲದೇ ನೀರಿನ ಮೇಲೆ ತೆಳುವಾದ ಪದರವನ್ನು ಮೂಡಿಸಿ ಸೊಳ್ಳೆಗಳ ಮೊಟ್ಟೆಗಳು ಮರಿಯಾಗದಂತೆ ತಡೆಯುತ್ತದೆ.

English summary

Quick Remedies To Kill These Pests

Likewise, flies too are harmful little creatures who often have a bag of dirt on their back which they sprinkle over the food you consume, causing you to fall ill. To get rid of these home pests, we have a series of kitchen ingredients which we think might work to end their life. Applying or sprinkling these natural ingredients in your home will see that the production of these home pests are terminated. On the other hand, these home remedies are worth it as they are inexpensive and non-toxic, have a look
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X