Just In
Don't Miss
- Movies
ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ಪುನೀತ್ ರಾಜ್ ಕುಮಾರ್ ವರ್ಕೌಟ್ ವಿಡಿಯೋ
- News
ಸಂಸದರ ಮಹತ್ವದ ನಿರ್ಣಯ; ನಿಜಕ್ಕೂ ಇದು ಜಾರಿಯಾಗಲಿದೆಯೇ?
- Technology
2020 ನ್ನು ಆರಂಭಿಸುವ ಮುನ್ನ ನೀವು ಈ ಟೆಕ್ ಗೆಜೆಟ್ ಗಳನ್ನು ಹೊಂದಿರಲೇಬೇಕು!
- Sports
ರನ್ ಬೆನ್ನತ್ತುವ ಪರೀಕ್ಷೆಗೆ ಭಾರತ ಸಿದ್ದ: ವಿರಾಟ್ ಕೊಹ್ಲಿ
- Automobiles
ಜನವರಿ 1ರಿಂದ ಟಾಟಾ ಕಾರುಗಳ ಖರೀದಿ ಮತ್ತಷ್ಟು ದುಬಾರಿ
- Finance
ವಿಶ್ವದ ಬೃಹತ್ ಕಂಪನಿಗಳನ್ನು ಮುನ್ನಡೆಸುತ್ತಿರುವ ಟಾಪ್ 10 ಭಾರತೀಯರು
- Education
ಅರಣ್ಯ ಇಲಾಖೆಯಲ್ಲಿ ಕಾನೂನು ಸಲಹೆಗಾರ ಹುದ್ದೆಗೆ ಅರ್ಜಿ ಆಹ್ವಾನ...ತಿಂಗಳಿಗೆ 60,000/-ರೂ ವೇತನ
- Travel
ಭಾರತದಲ್ಲಿ ಖಗೋಳ ಛಾಯಾಚಿತ್ರಗ್ರಹಣ ಮಾಡಲು ಇಲ್ಲಿವೆ ಬೆಸ್ಟ್ ಸ್ಥಳಗಳು
Negative Effects of Mobile Phones : ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ ನೋಡುತ್ತೀರಾ? ಅಪಾಯ ತಪ್ಪಿದ್ದಲ್ಲ!
ಮೊಬೈಲ್ ಪರಿಚಯವಾದ ಮೇಲೆ ಜಗತ್ತಿನ ಜನರ ದಿನಚರಿಯೇ ಬದಲಾಗಿದೆ. ಕೆಲವರಿಗಂತೂ ಒಂದು ಅರ್ಧ ತಾಸು ಮೊಬೈಲ್ ಬಿಟ್ಟಿರು ಎಂದರೆ ಬಿಟ್ಟಿರಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಏಕೋ ಮೊಬೈಲ್ ತುಂಬಾ ಬಳಸುತ್ತಿದ್ದೇನೆ ಕಡಿಮೆ ಮಾಡಬೇಕು ಎಂದು ಬಯಸಿದರೂ ಅದನ್ನು ನೋಡದೆ ಇರಲು ಸಾಧ್ಯವಾಗುವುದಿಲ್ಲ. ಯಾರು ಮೆಸೇಜ್ ಮಾಡಿರಬಹುದು,ಯಾರು ಕಾಲ್ ಮಾಡಿರಬಹುದು ಎಂದು ಮನಸ್ಸು ಆ ಕಡೆ ಸೆಳೆಯುತ್ತಿರುತ್ತದೆ, ಮೊಬೈಲ್ ಬಳಸುವುದು ಎಲ್ಲರಲ್ಲಿ ಒಂದು ಚಟವಾಗಿ ಬಿಟ್ಟಿದೆ ಎಂದು ತಪ್ಪಾಗಲಾರದು.
ಇನ್ನು ನಮ್ಮ ದಿನನಿತ್ಯದ ಎಷ್ಟೋ ಕೆಲಸ ಕಾರ್ಯಗಳಿಗೆ ಮೊಬೈಲ್ ಅನ್ನೇ ಅವಲಂಬಿಸಿದ್ದೇವೆ. ಬ್ಯಾಂಕ್ ವ್ಯವಹಾರದಿಂದ ಹಿಡಿದು ಮನೆಗೆ ದಿನಸಿ ತರುವುದಕ್ಕೂ ಮೊಬೈಲ್ ಬೇಕೇಬೇಕು. ನಮ್ಮ ಬಹುತೇಕ ವ್ಯವಹಾರಗಳು ಆನ್‌ಲೈನ್ ಮೂಲಕವೇ ನಡೆಯುವುದರಿಂದ ಮೊಬೈಲ್ ಇಲ್ಲದೆ ದಿನ ಕಳೆಯಲು ಕಷ್ಟವಾಗಬಹುದು. ಹಾಗಂತ ಮಲಗುವ ಮುನ್ನ ಹಾಗೂ ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ ಮೇಲೆ ಕಣ್ಣಾಡಿಸುವ ಅಭ್ಯಾಸವಿದ್ದರೆ ನಿಮ್ಮ ಆರೋಗ್ಯ ಅಪಾಯದಲ್ಲಿದೆ ಎಂದು ಅಧ್ಯಯನ ವರದಿ ಹೇಳಿದೆ.

ಅಧ್ಯಯನ ಏನು ಹೇಳಿದೆ?
ಬೆಳಗ್ಗೆ ಎದ್ದ ತಕ್ಷಣ ಇಮೇಲ್ ಚೆಕ್ ಮಾಡಲು, ನ್ಯೂಸ್ ಓದಲು, ಸ್ಟೇಟಸ್ ಚೆಕ್ ಮಾಡಲು ಮೊಬೈಲ್ ನೋಡುವ ಅಭ್ಯಾಸ ಹೆಚ್ಚಿನವರಲ್ಲಿದೆ. ಆದರೆ ಐಡಿಸಿ(International Data Corporation)ನಡೆಸಿದ ಅಧ್ಯಯನದಲ್ಲಿ ಶೇ. 80ರಷ್ಟು ಸ್ಮಾರ್ಟ್‌ಫೋನ್ ಬಳಕೆದಾರರು ಬೆಳಗ್ಗೆ ಎದ್ದು 15 ನಿಮಿಷದೊಳಗಾಗಿ ಮೊಬೈಲ್ ಸ್ಕ್ರೀನ್ ಮೇಲೆ ಕಣ್ಣಾಡಿಸುತ್ತಾರೆ. ಪ್ರತಿ 5 ಜನ ಸ್ಮಾರ್ಟ್‌ಫೋನ್ ಬಳಕೆದಾರರಲ್ಲಿ 4 ಜನರು ಮೊಬೈಲ್ ಬಳಸುವ ಚಟ ರೂಢಿಸಿಕೊಂಡಿದ್ದಾರೆ ಎಂದು ಅಧ್ಯಯನ ಹೇಳಿದೆ.

ಎದ್ದ ತಕ್ಷಣ ಮೊಬೈಲ್ ನೋಡಿದರೆ ಏನಾಗುತ್ತದೆ?
ಬೆಳಗ್ಗೆ ಎದ್ದ ತಕ್ಷಣ ಈ ದಿನ ಚೆನ್ನಾಗಿ ಪ್ರಾರಂಭವಾಗಲಿ, ಮನಸ್ಸಿಗೆ ಯಾವುದೇ ಕಿರಿಕಿರಿ, ಒತ್ತಡ ಉಂಟು ಮಾಡುವ ಘಟನೆಗಳು ನಡೆಯದಿರಲಿ ಎಂದು ನೀವು ಬಯಸುವುದಾದರೆ ಬೆಳಗ್ಗೆ ಎದ್ದ ಕೂಡಲೇ ಮೊಬೈಲ್ ಮುಟ್ಟಲೇಬೇಡಿ. ಬೆಳಗ್ಗೆ ಎಂದು ದೇವರ ಪೂಜೆ, ಧ್ಯಾನ ಇವುಗಳನ್ನು ಮಾಡಿದರೆ ಮನಸ್ಸು ಶಾಂತವಾಗಿರುತ್ತದೆ, ಅದೇ ಅವುಗಳಿಗಿಂತ ಮೊದಲೇ ಮೊಬೈಲ್ ಮೇಲೆ ಕಣ್ಣಾಡಿಸುವುದರಿಂದ ಬಂದಂತಹ ಕೆಲಸದ ಇಮೇಲ್‌ಗಳು, ಇವತ್ತು ನೀವು ಮಾಡಬೇಕಾದ ಕೆಲಸಗಳು, ಇನ್ನು ಇತರರ ಸ್ಟೇಟಸ್ ಇವುಗಳೆಲ್ಲಾ ನೋಡುತ್ತಾ ಹೋದಂತೆ ಮಾನಸಿಕ ಒತ್ತಡ ಹೆಚ್ಚಾಗುವುದು, ಇನ್ನು ಕೆಲವರ ಸ್ಟೇಟಸ್ ನೋಡಿದಾಗ ಬೆಳಗ್ಗೆ-ಬೆಳಗ್ಗಿಯೇ ಕೋಪಕೂಡ ಬರಬಹುದು, ಇದರಿಂದ ಮನಸ್ಸು ಹಾಳಾಗುತ್ತದೆ. ಇದರಿಂದ ದಿನ ಪ್ರಾರಂಭವಾಗುವ ಮುನ್ನವೇ ಸುಸ್ತು ಅನಿಸಬಹುದು.

ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮಾಡುವುದು
ಖುಷಿಯಾಗಿ ಎದ್ದರೆ ಆ ದಿನ ಚೆನ್ನಾಗಿರುತ್ತದೆ ಎಂದು ನಾವೆಲ್ಲಾ ಭಾವಿಸುತ್ತೇವೆ ತಾನೆ? ಆದರೆ ಬೆಳಗ್ಗೆ ಯಾರಾದೋ ಮೆಸೇಜ್ ಅಥವಾ ಸ್ಟೇಟಸ್ ನೋಡಿ ಮೂಡ್ ಹಾಳು ಮಾಡಿಕೊಂಡರೆ ಆ ದಿನ ಹಾಳಾದಂತೆ ಲೆಕ್ಕ. ಕಾರಣವಿಲ್ಲದೆ ಚಿಕ್ಕ ವಿಷಯಕ್ಕೂ ಕೋಪ ಬಂದು ಸಿಡಿಮಿಡಿಯಾದರೆ ಅದರಿಂದ ಮನೆಯವರಿಗೆ ಬೇಸರವಾಗಬಹುದು, ಆಫೀಸ್‌ಗೆ ಹೋದಾಗ ಮೊದಲೇ ಮನಸ್ಸು ಹಾಳಾಗಿರುತ್ತದೆ, ಇನ್ನು ಕೆಲಸದ ಒತ್ತಡ ಕೂಡ ಸೇರಿದಾಗ ಮನಸ್ಸು ಗೊಂದಲದ ಗೂಡಾಗುವುದು, ಇದರಿಂದ ರಕ್ತದೊತ್ತಡ, ಮಾನಸಿಕ ಒತ್ತಡ ಇವೆಲ್ಲಾ ಹೆಚ್ಚಾಗುವುದು. ಕೆಲವರು ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ಅನಾರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳುತ್ತಾರೆ. ಇದರಿಂದ ಆರೋಗ್ಯ ಹಾಳಾಗುವುದು.

ನಿಮ್ಮ ಸಂತೋಷ ಹಾಳಾಗುವುದು
ನಮಗೆ ಎಷ್ಟೇ ಇದ್ದರೂ ನಮ್ಮಲ್ಲಿ ಇಲ್ಲದಿರುವುದನ್ನು ಬಯಸಿ ಕೊರಗುವ ಗುಣ ಮನುಷ್ಯರಲ್ಲಿರುವುದು ಸಹಜ. ಬೆಳಗ್ಗೆ ಎದ್ದ ತಕ್ಷಣ ನಿಮ್ಮ ಫ್ರೆಂಡ್ಸ್ ಸ್ಟೇಟಸ್ ನೋಡುತ್ತೀರಿ ಅವರು ಎಲ್ಲಿಗೋ ಜಾಲಿ ಟ್ರಿಪ್ ಹೋದ ಫೋಟೋ ಅಥವಾ ತಮ್ಮ ಲಕ್ಷುರಿ ಮನೆ ಅಥವಾ ಗಾಡಿಯಲ್ಲಿ ಕುಳಿತು ನೀಡಿದ ಪೋಸ್, ಅವರು ಧರಿಸಿದ ಬಟ್ಟೆ ಇವುಗಳೆನ್ನೆಲ್ಲಾ ಗಮನಿಸುತ್ತೀರಿ, ನಿಮ್ಮಲ್ಲಿ ಇಲ್ಲದ ವಸ್ತುಗಳು ಅವರ ಬಳಿ ಇದ್ದರೆ ನನ್ನ ಹತ್ತಿರ ಏನೂ ಇಲ್ಲ ಎಂಬ ಕೊರಗು ಶುರುವಾಗುತ್ತದೆ, ಇನ್ನು ನನಗೆ ಟ್ರಿಪ್ ಹೋಗಲು ಬಿಡುವೇ ಸಿಕ್ಕಲ್ಲ, ಈ ಕೆಲಸವೇ ಸಾಕು ಅಂತ ಕೆಲಸದ ಮೇಲೆ ಜಿಗುಪ್ಸೆ ಪಟ್ಟುಕೊಳ್ಳುತ್ತೀರಿ, ಇದರಿಂದ ಮನಸ್ಸಿನ ಸಂತೋಷ ಹಾಳಾಗುವುದು.

ಕೆಲಸದ ಕಡೆ ಗಮನ ಕೊಡಲು ಸಾಧ್ಯವಾಗುವುದಿಲ್ಲ
ಬೆಳಗ್ಗೆ ಎದ್ದ ತಕ್ಷಣ ಇಮೇಲ್ ನೋಡಿದರೆ ಅದಕ್ಕೆ ಪ್ರತಿಕ್ರಿಯೆ ನೀಡುತ್ತೀರಿ, ಇದರಿಂದ ಬೆಳಗ್ಗೆ ಎದ್ದ ಕೂಡಲೇ ಕೆಲಸದ ಬಗ್ಗೆ ಚಿಂತಿಸಿ, ಟೆನ್ಷನ್ ಶುರುವಾಗಿರುತ್ತದೆ. ಮನಸ್ಸು ಹಾಳಾದರೆ ಕೆಲಸದ ಕಡೆ ಗಮನ ಕೊಡಲು ಸಾಧ್ಯವಾಗುವುದಿಲ್ಲ. ತುಂಬಾ ಕೆಲಸ ಮಾಡಿ ಮುಗಿಸಬೇಕಾಗಿದ್ದರೆ ಯಾವ ಕೆಲಸ ಮೊದಲು ಮಾಡಬೇಕು, ಯಾವುದು ನಂತರ ಮಾಡಬೇಕು ಎಂಬ ಗೊಂದಲ ಉಂಟಾಗುವುದು, ಇದರಿಂದ ಸಿಟ್ಟು ಬರುವುದು, ಮಾನಸಿಕ ಒತ್ತಡ ಅಧಿಕವಾಗುವುದು. ಇದರಿಂದ ನೀವು ಬಯಸಿದ ಫಲ ಸಿಗುವುದಿಲ್ಲ. ಹೀಗೆ ಬೆಳಗ್ಗೆ ಎದ್ದು ಮೊಬೈಲ್ ನೋಡುವ ಅಭ್ಯಾಸ ನಿಮ್ಮ ದಿನ, ಮನಸ್ಸು, ಕೆಲಸವನ್ನು ಹಾಳು ಮಾಡುತ್ತದೆ.

ಏನು ಮಾಡಬೇಕು?
ಎಷ್ಟೇ ಕೆಲಸದ ಒತ್ತಡವಿರಲಿ ಬೆಳಗ್ಗೆ ಎದ್ದು ಮೊಬೈಲ್ ನೋಡುವುದು ಮಾಡಬೇಡಿ. ಎದ್ದು ಬಿಸಿ ನೀರು ಕುಡಿದು, ಫ್ರೆಶ್ ಆಗಿ, ಧ್ಯಾನ ಮಾಡುವ ಅಭ್ಯಾಸವಿದ್ದರೆ ಅದನ್ನು ಮಾಡಿ, ದೈಹಿಕ ವ್ಯಾಯಾಮ ಮಾಡಿ ನಂತರವಷ್ಟೇ ನಿಮ್ಮ ಮೊಬೈಲ್ ಚೆಕ್ ಮಾಡಿ, ಅದರಲ್ಲೂ ಬೆಳಗ್ಗಿನ ತಿಂಡಿ ತಿಂದ ಬಳಿಕ ಮೊಬೈಲ್ ನೋಡಿದರೆ ಮತ್ತಷ್ಟು ಒಳ್ಳೆಯದು, ಇನ್ನು ರಾತ್ರಿ ಕೂಡ ಮಲಗುವ ಅರ್ಧ ಗಂಟೆ ಮುನ್ನ ಮೊಬೈಲ್ ನೋಡುವುದು, ಟಿವಿಯಲ್ಲಿ ಕ್ರೈಂ ನೋಡುವುದು ಮಾಡಬೇಡಿ, ಸಂಗೀತ ಕೇಳುವುದು, ಮನರಂಜನೆ ಕಾರ್ಯಕ್ರಮಗಳನ್ನು ನೋಡುವುದು ಮಾಡಿ. ಇದರಿಂದ ಮಲಗಿದ ಕೂಡಲೇ ನೆಮ್ಮದಿಯ ನಿದ್ದೆ ಬರುವುದು. ನಿಮ್ಮ ದಿನಚರಿಯಲ್ಲಿ ಈ ನಿಯಮಗಳನ್ನು ಅಳವಡಿಸಿ ನೋಡಿ, ನಿಮ್ಮ ಮನಸ್ಸು ಶಾಂತ ಅನಿಸುವುದು ಹಾಗೂ ಕೆಲಸದ ಕಡೆ ಹೆಚ್ಚು ಗಮನ ಕೊಡಲು ಸಾಧ್ಯವಾಗುವುದು.