For Quick Alerts
ALLOW NOTIFICATIONS  
For Daily Alerts

ಕಂಪಾರ್ಟ್ಮೆಂಟ್ ಸಿಂಡ್ರೋಮ್ ಎಂದರೇನು? ಇದರ ಲಕ್ಷಣಗಳು, ಮತ್ತು ಚಿಕಿತ್ಸೆಗಳೇನು?

|

ಒಂದು ವೇಳೆ ಪ್ರಮುಖ ಸ್ನಾಯು ಅಥವಾ ಮಾಂಸಖಂಡದೊಳಗೆ ಅತಿಯಾದ ಒತ್ತಡ ಆವರಿಸಿದಾಗ ಎದುರಾಗುವ ಸ್ಥಿತಿಯನ್ನು ಕಂಪಾರ್ಟ್ಮೆಂಟ್ ಸಿಂಡ್ರೋಂ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಸ್ನಾಯುವಿನ ಮೇಲೆ ಆದ ತೀಕ್ಷ್ಣವಾದ ಹೊಡೆತ ಅಥವಾ ಗಾಯದಿಂದ ಈ ಸ್ಥಿತಿ ಎದುರಾಗುತ್ತದೆ. ಕೆಲವೊಮ್ಮೆ ಈ ಸ್ಥಿತಿ ಗಂಭೀರ ಸ್ಥಿತಿಗೆ ತಲುಪಬಹುದು ಹಾಗೂ ಈ ಆಘಾತ ಶಾಶ್ವತವಾಗದೇ ಇರಲು ತಕ್ಷಣವೇ ಶಸ್ತ್ರಚಿಕಿತ್ಸೆಯನ್ನು ನಡೆಸಬೇಕಾಗಿಯೂ ಬರಬಹುದು.

ಕಂಪಾರ್ಟ್ಮೆಂಟ್ ಸಿಂಡ್ರೋಂ ಅತಿ ಯಾತನಾಮಯ ಸ್ಥಿತಿಯಾಗಿದೆ. ಸ್ನಾಯುವಿನೊಳಗೆ ಎದುರಾಗ ಅತಿಯಾದ ಒತ್ತಡ ಸ್ನಾಯುವಿನ ಪ್ರತಿ ನರಗಳನ್ನೂ ಸಂಕುಚಿತಗೊಳಿಸಿ ರಕ್ತಸಂಚಾರವಾಗದಂತೆ ತಡೆಯುತ್ತದೆ. ಪರಿಣಾಮವಾಗಿ ಸ್ನಾಯುವಿನ ಅಂಗಾಂಶಗಳಿಗೆ ಆಮ್ಲಜನಕ ದೊರಕದೇ ಶಕ್ತಿಗುಂದುತ್ತಾ ಹೋಗುತ್ತದೆ. ಪರಿಣಾಮವಾಗಿ ಸ್ನಾಯುಗಳು ಮತ್ತು ರಕ್ತನಾಳಗಳು ಸೀಮಿತ ಸ್ಥಳದಲ್ಲಿಯೇ ಒಂದಕ್ಕೊಂದು ಒತ್ತಿಕೊಳ್ಳುತ್ತವೆ. ಈ ಸ್ಥಿತಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಂದಿನ ಲೇಖನದಲ್ಲಿ ಸಂಗ್ರಹಿಸಲಾಗಿದೆ:

Compartment Syndrome

ಕಂಪಾರ್ಟ್ಮೆಂಟ್ ಸಿಂಡ್ರೋಂ? ಹಾಗೆಂದರೇನು? (ಆಂಗ್ಲಭಾಷೆಯ ಪದಕ್ಕೆ ಸೂಕ್ತ ಕನ್ನಡ ಪದ ಲಭ್ಯವಿಲ್ಲದ ಕಾರಣ ಮೂಲಪದವನ್ನೇ ಉಳಿಸಿಕೊಳ್ಳಲಾಗಿದೆ)
ನಮ್ಮ ದೇಹದ ಕೆಲವು ಪ್ರಮುಖ ಸ್ನಾಯುಗಳ ಮೇಲೆ ಅತಿ ಹೆಚ್ಚಿನ ಸೆಳೆತ ಎದುರಾಗುತ್ತದೆ. ಮುಂಗೈ, ಕಾಲಿನ ಮೀನಖಂಡ, ಪಾದಗಳು, ತೊಡೆಯ ಸ್ನಾಯುಗಳು, ಬೆನ್ನಿನ ಸ್ನಾಯುಗಳು ಇತ್ಯಾದಿ. ನಡಿಗೆ, ಭಾರ ಎತ್ತುವ ಅಥವಾ ಬೇರಾವುದೋ ಚಲನೆಯ ಸ್ಥಿತಿಯ ಒಂದು ಹಂತದಲ್ಲಿ ದೇಹದ ಮತ್ತು ಹೆಚ್ಚುವರಿ ಭಾರವನ್ನು ಒಟ್ಟಾರೆಯಾಗಿ ಕೆಲವು ಕ್ಷಣಗಳಿಗಾದರೂ ಈ ಸ್ನಾಯುಗಳು ಪೂರ್ಣಪ್ರಮಾಣದಲ್ಲಿ ಹೊರಬೇಕಾಗುತ್ತದೆ. ಹಾಗಾಗಿ ಈ ಸ್ನಾಯುಗಳು ಅತಿ ಹೆಚ್ಚಿನ ನಾರುಗಳಿಂದ ಕೂಡಿದ್ದು ಸೆಳೆಯಲು ಸಾಧ್ಯವಾಗುವಂತಹ ಪಟ್ಟಿಗಳಂತಿರುತ್ತದೆ (fibrous bands of tissues). ಈ ಪಟ್ಟಿಗಳೇ ಸ್ಪಷ್ಟವಾದ ಪ್ರತ್ಯೇಕ ಭಾಗಗಳಂತಿರುತ್ತವೆ. ಚಲನೆಗೆ ಅಗತ್ಯವಾಗುವಂತೆ ಈ ಪಟ್ಟಿಗಳು ಹಿಗ್ಗುವ ಅಥವಾ ಸಂಕುಚಿತಗೊಳ್ಳುವ ಮೂಲಕವೇ ನಮ್ಮ ದೇಹ ಚಲನೆ ಪಡೆಯಲು ಸಾಧ್ಯವಾಗುತ್ತದೆ. ಒಂದು ವೇಳೆ ಗಾಯ ಅಥವಾ ಪೆಟ್ಟಿನಿಂದಾಗಿ ಈ ಸ್ನಾಯುಗಳ ಪಟ್ಟಿಗಳ ಭಾಗದಲ್ಲಿ ಊತ ಎದುರಾದರೆ ಇದು ಹಿಗ್ಗುವ ಅಥವಾ ಸಂಕುಚಿತಗೊಳ್ಳಲು ಅಗತ್ಯವಿರುವ ಸ್ಥಳಾವಕಾಶವನ್ನು ಕಸಿದುಕೊಂಡು ಈ ಮೂಲಕ ಅಗತ್ಯವಿದ್ದಷ್ಟು ಚಲನೆ ಸಾಧ್ಯವಿಲ್ಲದಂತೆ ಮಾಡುತ್ತದೆ.ಒಂದು ವೇಳೆ ತಕ್ಷಣವೇ ಇದಕ್ಕೆ ಸೂಕ್ತ ಚಿಕಿತ್ಸೆ ದೊರಕದೇ ಹೋದಲ್ಲಿ ಈ ಭಾಗದ ನರ ಮತ್ತು ಸ್ನಾಯುಗಳ ಅಂಗಾಂಶಗಳಿಗೆ ರಕ್ತಸಂಚಾರ ದೊರಕದೇ ಹೋಗಿ ಇವು ಸಾಯುತ್ತವೆ. ಕೆಲವು ಸಂದರ್ಭಗಳಲ್ಲಿ ಕಂಪಾರ್ಟ್ಮೆಂಟ್ ಸಿಂಡ್ರೋಂ ಅತಿ ಮಾರಕ ಸ್ಥಿತಿ ತಲುಪಬಹುದು. ಈ ಸ್ಥಿತಿ ಎದುರಾಗಲು ಕೆಲವೊಮ್ಮೆ ಸ್ನಾಯುಗಳ ಮೇಲೆ ಸಾಮರ್ಥ್ಯಕ್ಕೂ ಮೀರಿದ ಭಾರವನ್ನು (ಉದಾಹರಣೆಗೆ ಅತಿಯಾದ ವ್ಯಾಯಾಮ ಅಥವಾ ಕ್ರೀಡೆಯಲ್ಲಿ ಅತ್ಯುನ್ನತೆಯ ಸ್ಥಿತಿ ಸಾಧಿಸಲು ಕೆಲವು ಸ್ನಾಯುಗಳನ್ನು ಅತಿಯಾಗಿ ದಂಡಿಸುವುದು) ಹೋರುವ ಮೂಲಕವೂ ಈ ಸ್ಥಿತಿ ಎದುರಾಗಬಹುದು.

ಕಂಪಾರ್ಟ್ಮೆಂಟ್ ಸಿಂಡ್ರೋಂ ಎರಡು ಬಗೆಯಲ್ಲಿ ಕಾಣಿಸಿಕೊಳ್ಳಬಹುದು

ತೀವ್ರತರದ ಕಂಪಾರ್ಟ್ಮೆಂಟ್ ಸಿಂಡ್ರೋಂ : ಗಂಭೀರ ಗಾಯದ ಮೂಲಕ ಎದುರಾಗುವ ಈ ಸ್ಥಿತಿಗೆ ತಕ್ಷಣವೇ ಸೂಕ್ತ ಚಿಕಿತ್ಸೆಯ ಅಗತ್ಯವಿದ್ದು ಚಿಕಿತ್ಸೆ ದೊರಕದೇ ಹೋದರೆ ಗಾಯಗೊಂಡ ಸ್ನಾಯು ಶಾಶ್ವತವಾಗಿ ತನ್ನ ಬಲವನ್ನು ಕಳೆದುಕೊಳ್ಳಬಹುದು.
ಲಘುತರದ ಕಂಪಾರ್ಟ್ಮೆಂಟ್ ಸಿಂಡ್ರೋಂ : ಒಂದು ವೇಳೆ ಯಾವುದಾದರೊಂದು ಸ್ನಾಯುವನ್ನು ಅದರ ಸಾಮರ್ಥ್ಯಕ್ಕೂ ಮೀರಿದ ಭಾರ ಹೊರುವ ಅಥವಾ ಸತತವಾಗಿ ಬಳಸಿಕೊಳ್ಳುವ ಮೂಲಕ ಕಂಪಾರ್ಟ್ಮೆಂಟ್ ಸಿಂಡ್ರೋಂ ಸ್ಥಿತಿ ಎದುರಾಗಬಹುದು. ಇದನ್ನು exertional compartment syndrome (ಅತಿಯಾಗಿ ದಂಡಿಸುವಿಕೆಯ ಮೂಲಕ ಎದುರಾದ ಲಕ್ಷಣ) ಹೆಚ್ಚಿನ ಸಂದರ್ಭಗಳಲ್ಲಿ ಇದು ವೈದ್ಯಕೀಯ ಚಿಕಿತ್ಸೆ ಅನಿವಾರ್ಯವೆನಿಸುವ ಸ್ಥಿತಿಗೆ ಒಳಗಾಗುವುದಿಲ್ಲ. ಕ್ರೀಡಾಪಟುಗಳಲ್ಲಿ ಹೆಚ್ಚಾಗಿ ಈ ಸ್ಥಿತಿ ಕಂಡುಬರುತ್ತದೆ.

ಕಂಪಾರ್ಟ್ಮೆಂಟ್ ಸಿಂಡ್ರೋಂ ಎದುರಾಗಲು ಕಾರಣಗಳು

ಸ್ನಾಯುವಿನ ಮೇಲೆ ಆದ ಪೆಟ್ಟಿನಿಂದಾಗಿ ಆ ಭಾಗದಲ್ಲಿ ರಕ್ತದ ನೀರಿನ ಭಾಗ ತುಂಬಿಕೊಳ್ಳುವುದು. ಸಾಮಾನ್ಯವಾಗಿ ಸ್ನಾಯುವಿನ ಅಂಗಾಂಶಗಳನ್ನು ಪರಸ್ಪರ ಬಂಧಿಸುವ ಫೇಶಿಯಾ (fascia) ಎಂಬ ಪದರದ ಗೋಡೆಗಳು ಅತಿ ಬಲಯುತವಾಗಿದ್ದು ಸುಲಭವಾಗಿ ಸೆಳೆತಕ್ಕೊಳಗಾಗುವುದಿಲ್ಲ. ಹಾಗಾಗಿ ಊತಗೊಂಡ ಭಾಗದೊಳಗೆ ಅತಿಯಾದ ಒತ್ತಡವೇರ್ಪಡುತ್ತದೆ. ಪರಿಣಾಮವಾಗಿ ಈ ಭಾಗದಲ್ಲಿರುವ ನರಗಳು ಒತ್ತಲ್ಪಟ್ಟು ರಕ್ತಸಂಚಾರಕ್ಕೆ ಅಡ್ಡಿಯಾಗುತ್ತದೆ. ಈ ಸ್ಥಿತಿಯಿಂದಾಗಿ ಸ್ನಾಯುಗಳ ಅಂಗಾಂಶಗಳಿಗೆ ರಕ್ತ ದೊರಕದೇ ಭಾರೀತರದ ಘಾಸಿಯಾಗಬಹುದು. ವಿಶೇಷವಾಗಿ ಕೈಗಳು, ಹೊಟ್ಟೆ, ಮೀನಖಂಡ ಮೊದಲಾದವುಗಳು ಕಂಪಾರ್ಟ್ಮೆಂಟ್ ಸಿಂಡ್ರೋಂ ಸ್ಥಿತಿಗೆ ಒಳಗಾಗುವ ಸಾಧ್ಯತೆ ಹೆಚ್ಚು.

ಒಂದು ವೇಳೆ ಕೈ ಅಥವಾ ಕಾಲಿನ ಪ್ರಮುಖ ಮೂಳೆಗಳು ಮುರಿತಕ್ಕೊಳಗಾದರೆ ತೀವ್ರತರದ ಕಂಪಾರ್ಟ್ಮೆಂಟ್ ಸಿಂಡ್ರೋಂ ಕಾಣಿಸಿಕೊಳ್ಳುತ್ತದೆ. ಈ ಸ್ಥಿತಿ ಅಪಘಾತ ಸಂಭವಿಸಿದ ಕ್ಷಣದಿಂದ ಪ್ರಾರಂಭಗೊಂಡು ಕೆಲವು ಘಂಟೆಗಳ ಅಥವಾ ದಿನಗಳ ಬಳಿಕ ಗಂಭೀರರೂಪ ಪಡೆಯುತ್ತದೆ. ಕೆಲವೂಮ್ಮೆ ಮೂಳೆ ಮುರಿತವಾಗದೇ ಇದ್ದರೂ ಕೆಳಗೆ ವಿವರಿಸಿದ ಕಾರಣಗಳಿಂದಲೂ ತೀವ್ರತರದ ಕಂಪಾರ್ಟ್ಮೆಂಟ್ ಸಿಂಡ್ರೋಂ ಎದುರಾಗಬಹುದು:

* ಗಂಭೀರ ರೂಪದ ಸುಟ್ಟ ಗಾಯಗಳು
* ಒಂದು ಸ್ನಾಯುವಿನ ಮೇಲೆ ಬಿದ್ದ ಅಗಾಧವಾದ ಭಾರ (ಭಾರಿ ವಸ್ತುವಿನ ಅಡಿಗೆ ಸ್ನಾಯು ಸಿಲುಕಿಕೊಳ್ಳುವುದು)
* ನರವೊಂದರಲ್ಲಿ ಎದುರಾದ ಹೆಪ್ಪುಗಟ್ಟಿದ ರಕ್ತ
* ಗಾಯಗೊಂಡ ಸ್ನಾಯುವನ್ನು ಸುತ್ತುವರೆಯುವಂತೆ ಅತಿ ಬಿಗಿಯಾಗಿ ಬ್ಯಾಂಡೇಜ್ ಪಟ್ಟಿಯನ್ನು ಕಟ್ಟುವುದು
* ಕಾಲು ಬಲು ಹೆಚ್ಚು ಹೊತ್ತಿನವರೆಗೆ ಮಡಚಿಯೇ ಇರುವುದು (ವಿಶೇಷವಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ)
* ಕೈ ಅಥವಾ ಕಾಲುಗಳ ನರಗಳಿಗೆ ನೀಡಲಾದ ಶಸ್ತ್ರ ಚಿಕಿತ್ಸೆ
* ಒಂದು ಸ್ನಾಯುವನ್ನು ಅತಿಯಾಗಿ ದಂಡಿಸುವ ವ್ಯಾಯಾಮ ಅಥವಾ ಕ್ರೀಡೆ
* ಸ್ನಾಯುಗಳನ್ನು ಬೆಳೆಸಲು ಪ್ರಚೋದಿಸುವ ಸ್ಟೆರಾಯ್ಡುಗಳ ಸೇವನೆ (anabolic steroids)

ಲಘುತರದ ಕಂಪಾರ್ಟ್ಮೆಂಟ್ ಸಿಂಡ್ರೋಂ ಪೂರ್ಣರೂಪದಲ್ಲಿ ಆವರಿಸಲು ಕೆಲವು ದಿನಗಳಿಂದ ಹಿಡಿದು ಕೆಲವು ವಾರಗಳವರೆಗೂ ಬೇಕಾಗಬಹುದು. ಸಾಮಾನ್ಯವಾಗಿ ಇದು ಕ್ರೀಡಾಪಟುಗಳು ಅಥವಾ ಒಂದು ಅಂಗದ ಸ್ನಾಯುವನ್ನೇ ಸತತವಾಗಿ ಅತಿಯಾಗಿ ದಂಡಿಸುವ ಕೆಲಸ ನಿರ್ವಹಿಸುವ ಅಥವ ವ್ಯಾಯಾಮ ಮಾಡುವ ವ್ಯಕ್ತಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಕಾಲಿನ ಮೀನಖಂಡ, ತೊಡೆಗಳು ನಿತಂಬಗಳು ಈ ಸ್ಥಿತಿಗೆ ಒಳಗಾಗುತ್ತವೆ.

ಹೊಟ್ಟೆಯ ಸ್ನಾಯುಗಳಿಗೆ ಎದುರಾಗುವ ಕಂಪಾರ್ಟ್ಮೆಂಟ್ ಸಿಂಡ್ರೋಂ: ಸಾಮಾನ್ಯವಾಗಿ ಈ ಭಾಗಕ್ಕೆ ಬಿದ್ದ ಭಾರೀ ಹೊಡೆತ, ಶಸ್ತ್ರಚಿಕಿತ್ಸೆ ಅಥವಾ ಗಂಭೀರರೂಪದ ಕಾಯಿಲೆಯ ಕಾರಣದಿಂದಾಗಿ ಎದುರಾಗುತ್ತವೆ. ಉಳಿದಂತೆ ಈ ಸ್ಥಿತಿಗೆ ಎದುರಾಗುವ ಕಾರಣಗಳೆಂದರೆ:

* ಹೊಟ್ಟೆಯ ಭಾಗದಲ್ಲಿ ನಡೆಸಿದ ಶಸ್ತ್ರಚಿಕಿತ್ಸೆ (ಉದಾಹರಣೆಗೆ ಯಕೃತ್ ಕಸಿ)
* ತೀವ್ರತರದ ಹೊಡೆತ (Trauma)
* ನಂಜು (Sepsis)
* ಹೊಟ್ಟೆಯ ಒಳಭಾಗದಲ್ಲಿ ಕಾಣಿಸಿಕೊಳ್ಳುವ ತೀವ್ರತರದ ರಕ್ತಸ್ರಾವ
* ಸೊಂಟದ ಭಾಗದ ಮೂಳೆ ಮುರಿತ
* ಹೊಟ್ಟೆಯ ಸ್ನಾಯುವನ್ನು ಅತಿಯಾಗಿ ದಂಡಿಸುವ ವ್ಯಾಯಾಮಗಳು

ಕಂಪಾರ್ಟ್ಮೆಂಟ್ ಸಿಂಡ್ರೋಂ ಸ್ಥಿತಿ ಆವರಿಸಿರುವುದನ್ನು ಸ್ಪಷ್ಟಪಡಿಸುವ ಲಕ್ಷಣಗಳು:

ತೀವ್ರತರದ ಕಂಪಾರ್ಟ್ಮೆಂಟ್ ಸಿಂಡ್ರೋಂ ಲಕ್ಷಣಗಳಲ್ಲಿ ಇವು ಪ್ರಮುಖವಾಗಿವೆ:

ಕೈ ಅಥವಾ ಕಾಲಿನ ಸ್ನಾಯುವೊಂದರಲ್ಲಿ ಇದುವರೆಗೆ ಕಾಣಿಸಿಕೊಳ್ಳದೇ ಇದ್ದ, ಸತತವಾದ ನೋವು
ಒಂದು ವೇಳೆ ಪೆಟ್ಟಿಗೆ ಒಳಗಾಗಿದ್ದರೆ ಪೆಟ್ಟು ಸಂಭವಿಸಿದ ಕ್ಷಣದ ಕೆಲವು ಘಂಟೆಗಳ ಬಳಿಕವೇ ನೋವು ಕಾಣಿಸಿಕೊಳ್ಳುವುದು
ಪೆಟ್ಟಿನ ನೋವಿಗಿಂತಲೂ ಈ ನೋವು ಅತಿ ಹೆಚ್ಚು ಎನಿಸುವುದು
ಈ ಭಾಗ ಬಿಗಿಯಾದಂತೆ, ಊದಿಕೊಂಡಂತೆ ಹಾಗೂ ಜಜ್ಜಿರುವಂತೆ ಕಾಣಿಸುವುದು
ಕಾಲಿನ ಭಾಗ ನಿಷ್ಟೇಷ್ಟಿತವಾದಂತೆ, ಚಿಕ್ಕದಾದ ಸಾವಿರ ಸೂಜಿಗಳು ಒಳಗಿನಿಂದ ಚುಚ್ಚುತ್ತಿರುವಂತೆ ಅನ್ನಿಸುವುದು

ಲಘುತರದ ಕಂಪಾರ್ಟ್ಮೆಂಟ್ ಸಿಂಡ್ರೋಂ ಲಕ್ಷಣಗಳಲ್ಲಿ ಇವು ಪ್ರಮುಖವಾಗಿವೆ:

ಮೊಣಕಾಲಿನಿಂದ ಕೆಳಗಿನ ಭಾಗದಲ್ಲಿ ಮೂಳೆಯಿಂದ ಸ್ನಾಯು ಬೇರ್ಪಡುತ್ತಿದೆ ಎನ್ನಿಸುವಂತಹ ನೋವು (shin splints)
ಆಘಾತಕ್ಕೊಳಗಾದ ಸ್ನಾಯು ಇನ್ನಷ್ಟು ಸೆಡೆತಕ್ಕೆ ಒಳಗಾಗುವುದು
ವ್ಯಾಯಾಮ ಪ್ರಾರಂಭಿಸಿದ ಅರ್ಧ ಘಂಟೆಯೊಳಗಾಗಿ ನೋವು ಕಾಣಿಸಿಕೊಳ್ಳುವುದು
ಸ್ನಾಯುವಿನ ಮೇಲೆ ಯಾವುದೇ ಭಾರ ಹೇರದೇ ವಿಶ್ರಾಂತಿ ಪಡೆದಾಗ ನೋವು ಕಡಿಮೆಯಾಗುವಂತೆ ಅನ್ನಿಸುವುದು
ನೋವಿದ್ದರೂ ಸ್ನಾಯುವನ್ನು ಬಳಸಿಕೊಂಡು ಮಾಡುವ ಕೆಲಸ ಅಡ್ಡಿಯಾಗದಂತೆ ಅನ್ನಿಸುವುದು

ಹೊಟ್ಟೆಯ ಸ್ನಾಯುಗಳಿಗೆ ಎದುರಾಗುವ ಕಂಪಾರ್ಟ್ಮೆಂಟ್ ಸಿಂಡ್ರೋಂ ಲಕ್ಷಣಗಳು:

ಸಾಮಾನ್ಯವಾಗಿ ಈ ಭಾಗದಲ್ಲಿ ಕಂಪಾರ್ಟ್ಮೆಂಟ್ ಸಿಂಡ್ರೋಂ ಎದುರಾಗಿದ್ದರೂ ರೋಗಿಯ ಗಮನಕ್ಕೆ ಬರುವುದು ಅಪರೂಪ. (ಏಕೆಂದರೆ ಈ ಸ್ಥಿತಿ ಎದುರಾಗಿದ್ದರೆ ಆತ ಅಥವಾ ಆಕೆ ಈಗಾಗಲೇ ಗಂಭೀರ ರೂಪದ ಗಾಯಕ್ಕೆ ಒಳಗಾಗಿರಬಹುದು). ಆದರೆ ವೈದ್ಯರು ಹಾಗೂ ಕುಟುಂಬ ಸದಸ್ಯರು ಈ ಕೆಳಗಿನ ಲಕ್ಷಣಗಳನ್ನು ಗಮನಿಸಬಹುದು:

  • ಹೊಟ್ಟೆಯ ಭಾಗವನ್ನು ಒತ್ತಿದಾಗ ಅನೈಚ್ಛಿಕವಾಗಿ ಈ ಭಾಗ ಸಂಕುಚಿತಗೊಳ್ಳುವುದು (Wincing)
  • ಮೂತ್ರದ ಹೊರಹರಿಯುವಿಕೆಯ ಪ್ರಮಾಣ ಕುಗ್ಗುವುದು
  • ರಕ್ತದೊತ್ತಡ ಕುಸಿಯುವುದು
  • ಹೊಟ್ಟೆಯ ಒಳಭಾಗದಲ್ಲಿ ಊತ ಎದುರಾದಂತೆ ಹೊರಭಾಗದಲ್ಲಿ ಒತ್ತಡದಲ್ಲಿ ಉಬ್ಬಿಕೊಂಡಿರುವುದು

ಕಂಪಾರ್ಟ್ಮೆಂಟ್ ಸಿಂಡ್ರೋಂ ಸ್ಥಿತಿಯ ಅರಿಯುವಿಕೆ

ರೋಗಿಯನ್ನು ಪರೀಕ್ಷಿಸುವ ವೈದ್ಯರು ಈ ಕೆಳಗಿನ ಲಕ್ಷಣಗಳನ್ನು ಗಮನಿಸಿ ಕಂಪಾರ್ಟ್ಮೆಂಟ್ ಸಿಂಡ್ರೋಂ ಎದುರಾಗಿದೆ ಎಂದು ಖಚಿತಪಡಿಸಿಕೊಳ್ಳುತ್ತಾರೆ
*ದೈಹಿಕ ತಪಾಸಣೆ
*ಗಾಯದ ಬಗೆ
ಕೆಲವು ಸಂದರ್ಭಗಳಲ್ಲಿ, ಪೆಟ್ಟಿಗೆ ಒಳಗಾದ ಭಾಗದಲ್ಲಿ ಉಂಟಾಗಿರುವ ಒತ್ತಡವನ್ನು ನೇರವಾಗಿ ಅಳೆಯಬೇಕಾಗುತ್ತದೆ. ಇದನ್ನು ಅರಿಯಲು ವೈದ್ಯರು ಒತ್ತಡಮಾಪಕ ಅಳವಡಿಸಿದ ಸೂಜಿಯೊಂದನ್ನು ಈ ಭಾಗದಲ್ಲಿ ತೂರಿಸಿ ತಕ್ಷಣವೇ ಒಳಭಾಗದಲ್ಲಿ ಎದುರಾದ ಒತ್ತಡದ ತೀವ್ರತೆಯನ್ನು ತಕ್ಷಣದಲ್ಲಿಯೇ ಪಡೆಯುತ್ತಾರೆ. ಒಂದು ವೇಳೆ ಈ ಮಾಹಿತಿ ಸತತವಾಗಿ ಕಾಣಿಸುತ್ತಿರಬೇಕು ಎಂದು ವೈದ್ಯರಿಗೆ ಅನ್ನಿಸಿದರೆ ಈ ಭಾಗದಲ್ಲಿ ಪ್ಲಾಸ್ಟಿಕ್ಕಿನ ಕ್ಯಾಥೆಟರ್ ಎಂಬ ಉಪಕರಣವನ್ನು ಅಳವಡಿಸಬಹುದು.

ಒಂದು ವೇಳೆ ಹೊಟ್ಟೆಯ ಭಾಗದ ಕಂಪಾರ್ಟ್ಮೆಂಟ್ ಸಿಂಡ್ರೋಂ ಆಗಿರಬಹುದು ಎಂದು ಅನುಮಾನ ಉಂಟಾದರೆ ವೈದ್ಯರು ಮೂತ್ರಕೋಶದಲ್ಲಿ urinary catheter ಎಂಬ ಉಪಕರಣವನ್ನು ಅಳವಡಿಸಬಹುದು. ಮೂತ್ರಕೋಶದಲ್ಲಿ ಅತಿಯಾದ ಒತ್ತಡವಿದ್ದರೆ ಇದು ಸಾಮಾನ್ಯವಾಗಿ ಹೊಟ್ಟೆಯ ಭಾಗದ ಕಂಪಾರ್ಟ್ಮೆಂಟ್ ಸಿಂಡ್ರೋಂ ಎದುರಾಗಿರುವುದನ್ನು ಸೂಚಿಸುತ್ತದೆ.ಇದರ ಜೊತೆಗೇ ಪ್ರಯೋಗಾಲಯದಲ್ಲಿ ನಡೆಸುವ ಪರೀಕ್ಷೆಗಳು ಹಾಗೂ ಚಿತ್ರರೂಪದ ವಿವರಗಳನ್ನು ನೀಡುವ ಪರೀಕ್ಷೆಗಳನ್ನೂ ನಡೆಸಲಾಗುವ ಮೂಲಕ ಕಂಪಾರ್ಟ್ಮೆಂಟ್ ಸಿಂಡ್ರೋಂ ಎದುರಾಗಿರುವ ಸಾಧ್ಯತೆಯನ್ನು ಖಚಿತಪಡಿಸಿಕೊಳ್ಳಲಾಗುತ್ತದೆ.

ಕಂಪಾರ್ಟ್ಮೆಂಟ್ ಸಿಂಡ್ರೋಂ ಗೆ ನೀಡಲಾಗುವ ಚಿಕಿತ್ಸೆಗಳು:

ಈ ಚಿಕಿತ್ಸೆಯ ಮುಖ್ಯ ಉದ್ದೇಶವೆಂದರೆ ಅಪಾಯ ಉಂಟುಮಾಡಿರುವ ಪೆಟ್ಟಿಗೊಳಗಾಗಿರುವ ಸ್ನಾಯುವಿನ ಒಳಗಿರುವ ಒತ್ತಡವನ್ನು ನಿವಾರಿಸುವುದು. ಅಲ್ಲದೇ ಈ ಮೂಲಕ ಎದುರಾಗಿರುವ ಸೀಳು ಅಥವಾ ಮೂಳೆಯಿಂದ ಸ್ನಾಯು ಬೇರ್ಪಡಿರುವುದನ್ನು ಮತ್ತೆ ಸರಿಪಡಿಸುವುದು.
ತೀವ್ರತರದ ಕಂಪಾರ್ಟ್ಮೆಂಟ್ ಸಿಂಡ್ರೋಂ ಎದುರಾಗಿದ್ದರೆ ತಕ್ಷಣವೇ ಈ ಒತ್ತಡವನ್ನು ನಿವಾರಿಸಲು ಶಸ್ತ್ರ ಚಿಕಿತ್ಸೆಯ ಅಗತ್ಯತೆ ಎದುರಾಗುತ್ತದೆ. ಇದಕ್ಕಾಗಿ ಒತ್ತಡಕ್ಕೊಳಗಾದ ಭಾಗದ ಚರ್ಮದ ಮೂಲಕ ಸ್ನಾಯುವಿನಲ್ಲಿ ಆಳವಾದ ಕೊಯ್ತವನ್ನು ಮಾಡಿ ಒತ್ತಡವನ್ನು ಇಲ್ಲವಾಗಿಸಲಾಗುತ್ತದೆ. ಇದರ ಜೊತೆಗೇ ಇತರ ಕ್ರಮಗಳನ್ನು ಕೈಗೊಳ್ಳುವ ಮೂಲಕ ಈ ಕ್ರಿಯೆಗೆ ನೆರವು ನೀಡಲಾಗುತ್ತದೆ. ಇವೆಂದರೆ:

* ಈ ಭಾಗದಲ್ಲಿ ರಕ್ತ ಪರಿಚಲನೆಯನ್ನು ಉತ್ತಮಗೊಳಿಸಲು ಈ ಭಾಗವನ್ನು ಹೃದಯದ ಮಟ್ಟಕ್ಕಿಂತ ಕೆಳಗಿರುವಂತೆ ನೋಡಿಕೊಳ್ಳಲಾಗುತ್ತದೆ
* ರೋಗಿಗೆ ಮೂಗು ಅಥವಾ ಬಾಯಿಯ ಮೂಲಕ ಆಮ್ಲಜನಕವನ್ನು ನೀಡಲಾಗುತ್ತದೆ
* ರೋಗಿಗೆ ಅಗತ್ಯವಿರುವ ದ್ರವರೂಪದ ಔಷಧಿ ಹಾಗೂ ಆಹಾರಗಳನ್ನು ನರಗಳ ಮೂಲಕ ನೀಡಲಾಗುತ್ತದೆ
* ನೋವು ನಿವಾರಕ ಔಷಧಿಗಳನ್ನೂ ನೀಡಲು ವೈದ್ಯರು ಸಲಹೆ ಮಾಡಬಹುದು

ಲಘುತರದ ಕಂಪಾರ್ಟ್ಮೆಂಟ್ ಸಿಂಡ್ರೋಂ ಎದುರಾಗಿದ್ದರೆ ತಕ್ಷಣವೇ ಈ ನೋವಿಗೆ ಕಾರಣವಾಗಿರುವ ವ್ಯಾಯಾಮ ಅಥವಾ ಚಟುವಟಿಕೆಯನ್ನು ತಕ್ಷಣ ನಿಲ್ಲಿಸಬೇಕು. ಸ್ನಾಯುವನ್ನು ಸಡಿಲಿಸುವ ಹಾಗೂ ವಿರುದ್ದ ದಿಕ್ಕಿನತ್ತ ಸೆಳೆಯುವ ವ್ಯಾಯಾಮಗಳನ್ನು ಮಾಡಬೇಕಾಗಿ ಬರಬಹುದು. ಈ ಸ್ಥಿತಿ ಎದುರಾದರೆ ಶಸ್ತ್ರಚಿಕಿತ್ಸೆಯ ಅಗತ್ಯ ಬೀಳುವುದು ತೀರಾ ಅಪರೂಪವಾಗಿದ್ದು ಒಂದು ವೇಳೆ ಒಳಗಿನ ಒತ್ತಡ ಅಪಾಯಕರ ಮಟ್ಟದಲ್ಲಿದ್ದರೆ ಮಾತ್ರ ವೈದ್ಯರೂ ಈ ನಿರ್ಧಾರ ತೆಗೆದುಕೊಳ್ಳುತ್ತಾರೆ.

ಒಂದು ವೇಳೆ ಹೊಟ್ಟೆಯ ಕಂಪಾರ್ಟ್ಮೆಂಟ್ ಸಿಂಡ್ರೋಂ ಎದುರಾಗಿದ್ದರೆ ಇದರ ಚಿಕಿತ್ಸೆಗಾಗಿ ಪ್ರಮುಖ ಜೀವ ಉಳಿಸುವ ಸಾಧನಗಳಾದ ವಾಸೋಪ್ರೆಸ್ಸರ್, ಡಯಾಲಿಸಿಸ್, ಮೆಕ್ಯಾನಿಕಲ್ ವೆಂಟಿಲೇಶನ್ ಮೊದಲಾದ ಉಪಕರಣಗಳನ್ನು ಬಳಸಬೇಕಾಗಿ ಬರಬಹುದು. ಒಂದು ವೇಳೆ ಹೊಟ್ಟೆಯೊಳಗಿನ ಒತ್ತಡ ತೀವ್ರತರನಾಗಿದ್ದರೆ ಈ ಭಾಗವನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆರೆಯಬೇಕಾಗಿಯೂ ಬರಬಹುದು.

ಕಂಪಾರ್ಟ್ಮೆಂಟ್ ಸಿಂಡ್ರೋಂ ಎದುರಾಗದಿರಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ

ತೀವ್ರತರದ ಕಂಪಾರ್ಟ್ಮೆಂಟ್ ಸಿಂಡ್ರೋಂ ಎದುರಾಗದಿರಲು ತಕ್ಷಣವೇ ರೋಗಿಯನ್ನು ವೈದ್ಯರ ಬಳಿ ಕರೆದೊಯ್ದು ಈ ಸ್ಥಿತಿ ಎದುಗಾಗಿರುವುದನ್ನು ಸ್ಪಷ್ಟಪಡಿಸಿ ಇನ್ನಷ್ಟು ಉಲ್ಬಣಗೊಳ್ಳದಂತೆ ತಡೆಗಟ್ಟಬೇಕು. ಸಾಮಾನ್ಯವಾಗಿ ಈ ಸ್ಥಿತಿ ಅಪಘಾತ ಅಥವಾ ಊಹಿಸಲು ಅಸಾಧ್ಯಾವಾದ ಸ್ಥಿತಿಯಲ್ಲಿ ಎದುರಾಗುವ ಕಾರಣ ಪ್ರತಿಯೊಬ್ಬರೂ ತಮ್ಮ ಜಾಗ್ರತೆಯಲ್ಲಿ ತಾವಿರಬೇಕು ಎಂದು ಮಾತ್ರವೇ ಹೇಳಬಹುದು. ಲಘುತರದ ಕಂಪಾರ್ಟ್ಮೆಂಟ್ ಸಿಂಡ್ರೋಂ ಎದುರಾಗದೇ ಇರಲು ಪಾದಕ್ಕೆ ಸರಿಯಾದ ಗಾತ್ರದ ಪಾದರಕ್ಷೆ - ಶೂ ಧರಿಸುವುದು, ಸ್ನಾಯುಗಳ ಸೆಳೆತವನ್ನು ನಿಧಾನವಾಗಿ ಹೆಚ್ಚಿಸಿಕೊಳ್ಳುತ್ತಾ ಹೋಗುವುದು ಹಾಗೂ ಓಡುವ ಅಥವಾ ವ್ಯಾಯಾಮದ ಕ್ರಮದಲ್ಲಿ ನಡುನಡುವೆ ಈ ಸ್ನಾಯುವಿಗೆ ಆರಾಮ ನೀಡುವಂತೆ ಅನುಸರಿಸಿಕೊಂಡು ಹೋಗಬೇಕು. ಈಗಾಗಲೇ ಈ ಸ್ಥಿತಿ ಎದುರಾಗಿರುವ ವ್ಯಕ್ತಿಗಳು ತಮ್ಮ ವ್ಯಾಯಾಮ ಅಥವಾ ಓಟದ ಕ್ರಮದಲ್ಲಿ gait pattern ಅಥವಾ ದೇಹದ ಭಾರ ಸತತವಾಗಿ ದೇಹದ ಕೇಂದ್ರಭಾಗದಲ್ಲಿಯೇ ಇರುವಂತೆ ಮಾರ್ಪಾಡಿಸಿಕೊಳ್ಳುವ ಮೂಲಕ ಈ ನೋವನ್ನು ನಿಧಾನವಾಗಿ ಇಲ್ಲವಾಗಿಸಬಹುದು.

English summary

What Is Compartment Syndrome?

Compartment syndrome is an extremely painful condition. The build-up of pressure can go beyond dangerous levels causing a decrease in blood flow, that would, in turn, prevent nourishment and oxygen from reaching nerve and muscle cells. The focus of treatment is reducing the dangerous pressure in the body compartment.
X
Desktop Bottom Promotion