For Quick Alerts
ALLOW NOTIFICATIONS  
For Daily Alerts

ನಿದ್ದೆಯನ್ನು ಕಳೆದುಕೊಳ್ಳುವುದರಿಂದ ಎದುರಾಗುವ ಹನ್ನೊಂದು ಅಡ್ಡಪರಿಣಾಮಗಳು

|

ಆರೋಗ್ಯಕರ ಜೀವನಕ್ರಮ ಎಂದರೆ ಕೇವಲ ಪೌಷ್ಟಿಕ ಆಹಾರ ಸೇವನೆ ಮಾತ್ರವಲ್ಲ, ಸಾಕಷ್ಟು ಗಾಢನಿದ್ದೆಯೂ ಅವಶ್ಯವಾಗಿದೆ. ಇಂದಿನ ದಿನಗಳಲ್ಲಿ ಸವಲತ್ತು ಹಾಗೂ ಉದ್ಯೋಗ ಮೊದಲಾದ ಕಾರಣಗಳಿಂದಾಗಿ ನಮ್ಮ ಜೀವನಕ್ರಮವೇ ಬದಲಾಗಿಬಿಟ್ಟಿದೆ. ಅನಾರೋಗ್ಯಕರ ಜೀವನಕ್ರಮ, ಹೊತ್ತಲ್ಲದ ಹೊತ್ತಿನಲ್ಲಿ ಊಟ ಮಾಡುವುದು, ವ್ಯಾಯಾಮದ ಕೊರತೆ ಮೊದಲಾದವುಗಳಿಂದ ಹಲವಾರು ಕಾಯಿಲೆಗಳು ಎದುರಾಗುತ್ತದೆ. ಅದರಲ್ಲೂ ನಿದ್ದೆ ಮಾಡಬೇಕಾದ ಸಮಯದಲ್ಲೂ ಎಚ್ಚರಾಗಿದ್ದು ಯಾವುದೋ ಚಟುವಟಿಕೆಯಲ್ಲಿ ವ್ಯಸ್ತರಿರುವುದು ಕೆಲವು ಗಂಭೀರತದರ ಕಾಯಿಲೆಗಳಿಗೆ ಮೂಲವಾಗಬಹುದು. ವಯಸ್ಕರಿಗೆ ಏನಿಲ್ಲವೆಂದರೂ, ಆರು ಘಂಟೆಗಳ ಸತತ ಮತ್ತು ಗಾಢ ನಿದ್ದೆ ಬೇಕೇ ಬೇಕು.

ಆಗ ಮಾತ್ರವೇ ನಮ್ಮ ಮೆದುಳು ಸೂಕ್ತವಾಗಿ ಕಾರ್ಯನಿರ್ವಹಿಸಬಲ್ಲುದಾಗಿದ್ದು ತನ್ಮೂಲಕ ದೇಹದ ಆರೋಗ್ಯವೂ ಸುಸ್ಥಿತಿಯಲ್ಲಿರಲು ಸಾಧ್ಯ. ವಾಸ್ತವದಲ್ಲಿ, ನಮ್ಮ ದೇಹ ಆಹಾರ ನೀರಿಲ್ಲದೇ ಸುಮಾರು ಒಂದು ವಾರವಾದರೂ ಇರಬಹುದು, ಆದರೆ ನಿದ್ದೆಯಿಲ್ಲದೇ ಎರಡನೇ ದಿನ ಮುಂದುವರೆಯಲು ಸಾಧ್ಯವಿಲ್ಲ. ರಾತ್ರಿ ಮಲಗುವ ಮುನ್ನ ಮದ್ಯಸೇವನೆ, ಕಾಫಿ ಟೀ ಮೊದಲಾದ ಕೆಫೀನ್ ಯುಕ್ತ ಪಾನೀಯ ಸೇವನೆಗಳು ಸತತವಾದರೆ ನಿದ್ದೆ ಕಡಿಮೆಯಾಗುತ್ತದೆ ಹಾಗೂ ಆವರಿಸಲು ತುಂಬಾ ತಡವೂ ಆಗುತ್ತದೆ. ಥೈರಾಯ್ಡ್ ಕಸಿ ಶಸ್ತ್ರಚಿಕಿತ್ಸೆ ಮೊದಲಾದ ಚಿಕಿತ್ಸೆಗೆ ಒಳಗಾಗಿ ಔಷಧಿ ಪಡೆಯುತ್ತಿರುವ ರೋಗಿಗಳು, ಕೆಲವು ಅಸ್ತಮಾ ಔಷಧಿಗಳು, ನೋವು ನಿವಾರಕಗಳು, ಕೆಲವು ವಿಟಮಿನ್ ಮತ್ತು ಖನಿಜಗಳನ್ನು ಹೆಚ್ಚುವರಿಯಾಗಿ ಒದಗಿಸುವ ಮಾತ್ರೆಗಳು ಮೊದಲಾದವು ದೇಹಕ್ಕೆ ಪ್ರಚೋದನೆ ನೀಡುತ್ತಾ ನಿದ್ದೆ ಬರದಂತೆ ತಡೆಯುತ್ತವೆ.

Sleep

ನಿದ್ದೆ ಬಂದರೂ ಇದು ಗಾಢ ಮತ್ತು ಸತತವಾಗಿರದೇ ತುಂಡು ತುಂಡಾಗಿರುತ್ತದೆ. ಸಾಮಾನ್ಯವಾಗಿ ಪವಡಿಸಿದ ಐದು ನಿಮಿಷಗಳಲ್ಲಿಯೇ ನಿದ್ದೆಗೆ ಜಾರಿದರೆ ಇದು ಆರೋಗ್ಯಕರ ಎಂದು ಪರಿಗಣಿಸಬಹುದು. ಐದು ನಿಮಿಷಕ್ಕೂ ಹೆಚ್ಚು ಕಾಲ ನಿದ್ದೆ ಬರದೇ ಇದ್ದಲ್ಲಿ ನೀವು ನಿದ್ರಾರಾಹಿತ್ಯಕ್ಕೆ ಒಳಗಾಗಿದ್ದೀರಿ ಎಂದು ಪರಿಗಣಿಸಬಹುದು. ನಿದ್ರಾರಾಹಿತ್ಯ ಕೇವಲ ರಾತ್ರಿ ಪಾಳಿಗಳಲ್ಲಿ ಕೆಲಸ ಮಾಡುವ ವ್ಯಕ್ತಿಗಳಿಗೆ ಮಾತ್ರ ಸೀಮಿತವಾಗಿಲ್ಲ, ಸ್ಲೀಪ್ ಅಪ್ನಿಯಾ (sleep apnoea) ಅಥವಾ ಇತರ ಕಾರಣಗಳಿಂದಲೂ, ಮುಖ್ಯವಾಗಿ ಮಾನಸಿಕ ಕಾರಣಗಳಿಂದಾಗಿ ನಿದ್ರಾರಾಹಿತ್ಯ ಎದುರಾಗುತ್ತದೆ.

ಒಂದು ವೇಳೆ ಯಾವುದೋ ಕಾರಣಗಳಿಂದ ನಿಮಗೆ ಕನಿಷ್ಟ ಆರು ಘಂಟೆಗಳ ಕಾಲವಾದರೂ ನಿದ್ದೆ ಸಿಗುತ್ತಿಲ್ಲವೆಂದಾದರೆ ಇದು ನಿಮ್ಮ ಆರೋಗ್ಯವನ್ನು ಹಲವಾರು ಬಗೆಗಳಿಂದ ಇಂದಲ್ಲವಾದರೂ ನಾಳೆ ಬಾಧಿಸಬಹುದು. ಹಾಗಾಗಿ, ಮುಂದಿನ ಬಾರಿ ರಾತ್ರಿಯಿಡೀ ಎಚ್ಚರಿರುವಂತಹ ಯಾವುದೇ ಪಾರ್ಟಿಗೆ ಹೋಗಬೇಕೆಂದು ಮನ ತುಡಿದರೆ, ಇದನ್ನು ತಡೆಯಲು ಕೆಳಗೆ ವಿವರಿಸಿರುವ ಹನ್ನೊಂದು ವಾಸ್ತವಸಂಗತಿಗಳು ನಿಮ್ಮ ಕಣ್ಣನ್ನು ತೆರೆಸಬಹುದು. ನಿದ್ದೆ ಬಾರದೇ ಇರುವ ಕಾರಣಗಳು ಕೆಲವು ಆರೋಗ್ಯ ಸ್ಥಿತಿಗಳಿಗೆ ಸಂಬಂಧಿಸಿದರೆ ಉಳಿದವರಿಗೆ ಉದ್ಯೋಗದ ಒತ್ತಡ, ಪರೀಕ್ಷೆಗಳಿಗೆ ಅಭ್ಯಾಸ ಮಾಡಬೇಕಾದ ಅನಿವಾರ್ಯತೆ ಅಥವಾ ಕೆಲವರಿಗೆ ಕುಂಟುನೆಪ ಹಾಕಿ ನಿದ್ದೆಯನ್ನು ಬಿಡುವ ಸ್ಥಿತಿ ಎದುರಾಗಬಹುದು. ಒಂದು ವೇಳೆ ನಿದ್ದೆ ಬಿಡುವುದು ಸತತವಾದರೆ ಇದರಿಂದ ಆರೋಗ್ಯದ ಮೇಲೆ ಭಾರೀ ಪರಿಣಾಮ ಎದುರಾಗಬಹುದು.

Most Read: ಎಚ್ಚರ: ರಾತ್ರಿ ನಿದ್ದೆ ಬಿಟ್ಟರೆ, ಭಯಾನಕ ರೋಗ ಬರಬಹುದು!

ಸ್ಥೂಲಕಾಯ

ನಿದ್ರಾರಾಹಿತ್ಯದಿಂದ ಎದುರಾಗುವ ಅತಿ ಸಾಮಾನ್ಯ ತೊಂದರೆ ಎಂದರೆ ಸ್ಥೂಲಕಾಯ. ಇದಕ್ಕೆ ಮುಖ್ಯ ಕಾರಣ ಲೆಪ್ಟಿನ್ ಎಂಬ ರಸದೂತ. ದೇಹ ಎಚ್ಚರಾಗಿದ್ದಷ್ಟೂ ಈ ರಸದೂತದ ಮಟ್ಟ ಕಡಿಮೆಯಾಗುತ್ತಾ ಹೋಗುತ್ತದೆ. ನಮ್ಮ ದೇಹಕ್ಕೆ ಹಸಿವಾಗುತ್ತದೆ ಎಂದು ಮೆದುಳು ನೀಡುವ ಸೂಚನೆಗೆ ಈ ರಸದೂತ ಮುಖ್ಯ ಕಾರಣ. ರಸದೂತ ಕಡಿಮೆ ಇದ್ದಷ್ಟೂ ಹಸಿವು ಹೆಚ್ಚಾಗುತ್ತದೆ. ಯಾವಾಗ ಈ ರಸದೂತ ಕಡಿಮೆಯಾಯಿತೋ ಆ ಸ್ಥಳದಲ್ಲಿ ಘ್ರೆಲಿನ್ ಎಂಬ ಇನ್ನೊಂದು ರಸದೂತ ಹೆಚ್ಚು ಉತ್ಪತ್ತಿಯಾಗುತ್ತದೆ. ಇದು ವಾಸ್ತವದಲ್ಲಿ ಹಸಿವನ್ನು ಹೆಚ್ಚಿಸುತ್ತದೆ. ಅಲ್ಲದೇ ನಿದ್ರಾರಾಹಿತ್ಯದಿಂದ ರಕ್ತದಲ್ಲಿ ಇನ್ಸುಲಿನ್ ಮಟ್ಟ ಹೆಚ್ಚುತ್ತದೆ, ಇದು ಹೆಚ್ಚು ಹೆಚ್ಚು ಕೊಬ್ಬನ್ನು ಸಂಗ್ರಹಿಸಲು ಕಾರಣವಾಗುತ್ತದೆ.

Sleep

ಶಿಥಿಲವಾಗುವ ರೋಗ ನಿರೋಧಕ ಶಕ್ತಿ

ನಮ್ಮ ರೋಗ ನಿರೋಧಕ ಶಕ್ತಿ ಬಲಯುತವಾಗಿರಬೇಕೆಂದರೆ ಸೋಂಕುಗಳ ವಿರುದ್ದ ಹೋರಾಡುವ ಆಂಟಿಬಾಡಿಗಳು, ರಕ್ಷಣೆ ಒದಗಿಸುವ ಸೈಟೋಕೈನ್ಸ್ ಮೊದಲಾದವು ಉತ್ತಮ ಪ್ರಮಾಣದಲ್ಲಿರಬೇಕು. ಇಲ್ಲದಿದ್ದಾಗ ರೋಗ ನಿರೋಧಕ ಶಕ್ತಿಯ ಕ್ಷಮತೆ ಉಡುಗುತ್ತದೆ. ಇವೆಲ್ಲವೂ ರಾತ್ರಿ ಮಲಗಿದ್ದ ಸಮಯದಲ್ಲಿಯೇ ಉತ್ಪತ್ತಿಯಾಗುತ್ತವೆ ಹಾಗೂ ಬ್ಯಾಕ್ಟೀರಿಯಾ ಮತ್ತು ಇತರ ಸೋಂಕುಕಾರಕಗಳಿಂದ ದೇಹವನ್ನು ರಕ್ಷಿಸಲು ಅಗತ್ಯವಿದ್ದಷ್ಟು ಪ್ರಮಾಣದಲ್ಲಿರುತ್ತದೆ. ಯಾವಾಗ ನಿದ್ದೆಯ ಪ್ರಮಾಣ ಕಡಿಮೆಯಾಯಿತೋ, ಆಗ ಒಂದೆಡೆ ಇವುಗಳ ಉತ್ಪತ್ತಿ ಕಡಿಮೆಯಾಗುವುದಲ್ಲದೇ ಎಚ್ಚರಿರುವ ಅವಧಿ ಹೆಚ್ಚುವ ಕಾರಣ ಈಗ ಇರುವಷ್ಟು ಪ್ರಮಾಣವನ್ನು ಹೆಚ್ಚುವರಿ ಅವಧಿಗೆ ಬಳಸಿಕೊಳ್ಳಬೇಕಾಗಿ ಬರುವ ಕಾರಣ ಇವುಗಳ ಪ್ರಮಾಣ ಅಪಾರವಾಗಿ ಕುಸಿಯುತ್ತದೆ. ಪರಿಣಾಮವಾಗಿ ಹಲವಾರು ಸೋಂಕುಗಳಿಗೆ ನಮ್ಮ ದೇಹ ಸುಲಭವಾಗಿ ತುತ್ತಾಗುತ್ತದೆ. ವಿಶೇಷವಾಗಿ ಶ್ವಾಸದ ಮೂಲಕ ಎದುರಾಗುವ ವೈರಸ್ಸುಗಳು ಮೊತ್ತ ಮೊದಲಾಗಿ ಶಿಥಿಲವಾದ ರೋಗ ನಿರೋಧಕ ವ್ಯವಸ್ಥೆಯ ಪ್ರಯೋಜನ ಪಡೆಯುತ್ತವೆ. ಶೀತ ಮತ್ತು ಫ್ಲೂ ಸತತವಾಗಿ ಕಾಡುತ್ತವೆ ಹಾಗೂ ಕೆಲವು ಸಂದರ್ಭಗಳಲ್ಲಿ ನಿದ್ರಾರಾಹಿತ್ಯ ಸ್ಥಿತಿ ಶ್ವಾಸಕೋಶದ ತೊಂದರೆಗಳನ್ನೂ ತಂದೊಡ್ಡಬಹುದು.

ಮೆದುಳನ್ನು ಸುಸ್ತು ಮಾಡುತ್ತದೆ

ನಿದ್ರಾರಾಹಿತ್ಯದ ನೇರವಾದ ಪರಿಣಾಮ ನಮ್ಮ ಮೆದುಳಿನ ನ್ಯೂರಾನುಗಳ ಮೇಲಾಗುತ್ತದೆ. ಎಕೆಂದರೆ ನಮ್ಮ ಮೆದುಳು ಎಚ್ಚರಿದ್ದಷ್ಟೂ ಹೊತ್ತು ಪ್ರತಿ ಕ್ಷಣವೂ ಲಕ್ಷಾಂತರ ಪ್ರಕಾರದ ಸೂಚನೆಗಳನ್ನು ಸತತವಾಗಿ ನೀಡುತ್ತಿರಬೇಕಾಗುತ್ತದೆ. ಗಾಢ ನಿದ್ದೆ ಆವರಿಸಿದ ಬಳಿಕವೇ ಇವುಗಳಿಗೆ ವಿಶ್ರಾಂತಿ ದೊರಕುತ್ತದೆ. ನಿದ್ರಾರಾಹಿತ್ಯದಿಂದ ಎಚ್ಚರಿರುವ ಅವಧಿಯೂ ಹೆಚ್ಚುವ ಕಾರಣ ಅಷ್ಟೂ ಹೊತ್ತು ನ್ಯೂರಾನುಗಳೂ ಕೆಲಸಮಾಡಬೇಕಾಗಿ ಬರುವ ಕಾರಣ ಅತಿಯಾದ ಒತ್ತಡದಿಂದ ಇವುಗಳಲ್ಲಿ ಕೆಲವಾರು ಕೆಲಸಗಳು ಸಾಧ್ಯವಾಗದೇ ಹೋಗುತ್ತವೆ. ಮುಖ್ಯವಾಗಿ ನಮ್ಮ ದೇಹದಲ್ಲಿ ಆಗಿರುವ ಗಾಯಗಳನ್ನು ರಿಪೇರಿ ಮಾಡಬೇಕಾದ ಕೆಲಸ ಹಾಗೂ ಚಿಂತಿಸುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಪರಿಣಾಮವಾಗಿ ಕ್ರಿಯಾತ್ಮಕ ಚಿಂತನೆ, ತಕ್ಷಣವೇ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುವ ನಿಪುಣತೆ ಪಡೆಯದೇ ಹೋಗುತ್ತದೆ. ಅಲ್ಲದೇ ನಿದ್ದೆಯಿಲ್ಲದ ವ್ಯಕ್ತಿಯ ಮನೋಭಾವವೂ ಕ್ಷಣಕ್ಷಣಕ್ಕೆ ಬದಲಾಗುತ್ತಾ ಇರುತ್ತದೆ.

Sleep

Most Read: ನಿದ್ರೆಯ ಕೊರತೆಯೇ? ಕಾರಣಗಳನ್ನು ತಿಳಿದುಕೊಳ್ಳಿ

ನರವ್ಯವಸ್ಥೆಗೆ ಸಂಬಂಧಿಸಿದ ತೊಂದರೆಗಳು ಎದುರಾಗುತ್ತವೆ

ನಿದ್ರಾರಾಹಿತ್ಯ ಕೇವಲ ಭಾವನಾತ್ಮಕ ತೊಂದರೆಗಳನ್ನು ಮಾತ್ರವಲ್ಲ, ಕೆಲವು ಗಂಭೀರವಾದ ಮನೋವೈಜ್ಞಾನಿಕ ಹಾಗೂ ನರವ್ಯವಸ್ಥೆಗೆ ಸಂಬಂಧಿಸಿದ ತೊಂದರೆಗಳನ್ನೂ ತಂದೊಡ್ಡುತ್ತದೆ. ಇವುಗಳಲ್ಲಿ ಪ್ರಮುಖವಾದವು ಎಂದರೆ ಮನೋವಿಕಾರತೆ, ಭ್ರಮೆಗಳು, ತೀವ್ರತರದ ಖಿನ್ನತೆ, ಮತಿವಿಕಲ್ಪತೆ ಹಾಗೂ ಹಠಾತ್ತಾಗಿ ಬದಲಾಗುವ ವರ್ತನೆ ಮೊದಲಾದವು.

ಗಂಭೀರರೂಪದ ಕಾಯಿಲೆಗಳ ಸಾಧ್ಯತೆ ಹೆಚ್ಚುತ್ತದೆ

ನಿದ್ದೆ ಇಲ್ಲದಿರುವುದಕ್ಕೂ ಕೆಲವು ಗಂಭೀರ ಸಮಸ್ಯೆಗಳಿಗೂ ದೀರ್ಘಕಾಲದ ನಿದ್ರಾರಾಹಿತ್ಯ ನಿಕಟ ಸಂಬಂಧ ಹೊಂದಿರುವುದನ್ನು ಕೆಲವಾರು ವೈದ್ಯಕೀಯ ಮಾಹಿತಿಗಳು ಖಚಿತಪಡಿಸಿವೆ. ಇವುಗಳಲ್ಲಿ ಪ್ರಮುಖವಾದವು ಎಂದರೆ ಅಧಿಕ ರಕ್ತದೊತ್ತಡ, ಹೃದಯಸ್ತಂಭನ, ಮಧುಮೇಹ ಇತ್ಯಾದಿ. ನಿದ್ದೆಯನ್ನು ತ್ಯಜಿಸುವವರಲ್ಲಿಯೇ ಹೆಚ್ಚಾಗಿ ಕಾಣಿಸಿಕೊಂಡಿವೆ.

ಅನಾರೋಗ್ಯಕರ ಆಹಾರಕ್ರಮ

ನಿದ್ರಾರಾಹಿತ್ಯದ ಪರಿಣಾಮವಾಗಿ ಅನಗತ್ಯ ಪ್ರಮಾಣ ಮತ್ತು ಹೊತ್ತಲ್ಲದ ಹೊತ್ತಿನಲ್ಲಿ ಆಹಾರ ಸೇವಿಸಲು ನೇರವಾಗಿ ಪ್ರಚೋದನೆ ದೊರಕುತ್ತದೆ. ನಿದ್ರಾರಾಹಿತ್ಯದ ಹೊತ್ತಿನಲ್ಲಿ ಹಸಿವು ಭುಗಿಲೇಳುತ್ತದೆ ಹಾಗೂ ಈ ಸಮಯದಲ್ಲಿ ಆರೋಗ್ಯಕರ ಅಹಾರಕ್ಕಿಂತಲೂ ಅನಾರೋಗ್ಯಕ ಸಿದ್ಧ ಆಹಾರಗಳನ್ನೇ ತಿನ್ನುವ ಸಾಧ್ಯತೆ ಹೆಚ್ಚಿರುವ ಕಾರಣ ಅನಾರೋಗ್ಯ ಎದುರಾಗುವ ಜೊತೆಗೇ ಅಗತ್ಯವಿಲ್ಲದ ಹೊತ್ತಿನಲ್ಲಿ ಹೊಟ್ಟೆಯನ್ನು ಸೇರುವ ಅಹಾರವನ್ನು ಜೀರ್ಣಿಸಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿ ಈ ಸಮಯದಲ್ಲಿ ಪ್ರಚೋದಿಸಬೇಕಾಗಿದ್ದ ರಸದೂತಗಳ ಮಟ್ಟವನ್ನು ತಗ್ಗಿಸಿ ಜೀರ್ಣಕ್ರಿಯೆಗೆ ಅಗತ್ಯವಾದ ರಸದೂತಗಳ ಮಟ್ಟವನ್ನು ಏರಿಸಬೇಕಾಗುತ್ತದೆ. ಇದು ಅಪಾರವಾದ ರಸದೂತಗಳ ಮಟ್ಟಗಳ ಅಸಮತೋಲನೆಗೆ ನೇರವಾಗಿ ಕಾರಣವಾಗುತ್ತದೆ.

Sleep

ಶಿಥಿಲಗೊಳ್ಳುವ ಲೈಂಗಿಕ ಜೀವನ

ಮಾನಸಿಕ ಒತ್ತಡ ಮತ್ತು ಉದ್ವೇಗ ಇಂದು ಪುರುಷರಲ್ಲಿಯೂ ಮಹಿಳೆಯರಲ್ಲಿಯೂ ಹೆಚ್ಚುತ್ತಿದ್ದು ದಂಪತಿಗಳ ನಡುವಣ ಲೈಂಗಿಕ ಜೀವನವನ್ನು ಬಾಧಿಸುತ್ತಿದೆ. ಇವುಗಳಿಗೂ ನಿದ್ರಾರಾಹಿತ್ಯಕ್ಕೂ ನಿಕಟ ಸಂಬಂಧವಿರುವುದನ್ನು ಅಲ್ಲಗಳೆಯಲಾಗದು.

ತ್ವಚೆಗೆ ಸಂಬಂಧಿಸಿದ ತೊಂದರೆಗಳು

ನಿದ್ದೆ ಕಡಿಮೆಯಾದಾಗ ಮೆದುಳಿನಲ್ಲಿ ಕಾರ್ಟಿಸೋಲ್ ಎಂಬ ರಸದೂತ ಅತಿ ಹೆಚ್ಚು ಉತ್ಪತ್ತಿಯಾಗುತ್ತದೆ. ಇದು ತ್ವಚೆಯ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ. ಕಾರ್ಟಿಸೋಲ್ ತ್ವಚೆಯ ಪ್ರೋಟೀನ್ ಆಗಿರುವ ಕೊಲ್ಯಾಜೆನ್ ಎಂಬ ಕಣಗಳನ್ನು ಒಡೆಯುತ್ತವೆ. ನಮ್ಮ ತ್ವಚೆ ನಯವಾಗಿರಲು ಈ ಕೊಲ್ಯಾಜೆನ್ ಅಗತ್ಯವಾಗಿದೆ. ಯಾವಾಗ ನಿದ್ದೆಯಿಲ್ಲದೆ ಕೆಲವು ದಿನಗಳಾದವೋ ತಕ್ಷಣವೇ ಕಣ್ಣುಗಳ ಕೆಳಗೆ ಕಪ್ಪು ವರ್ತುಗಳಗಳು ಆವರಿಸುತ್ತವೆ. ಒಂದು ವೇಳೆ ನಿದ್ರಾರಾಹಿತ್ಯ ಗಂಭೀರರೂಪ ಪಡೆದರೆ ಇದರಿಂದ ಯಾವುದೇ ವಯಸ್ಸಿನ ವ್ಯಕ್ತಿಯಾಗಲಿ, ಅವರ ತ್ವಚೆಯನ್ನು ತೀರಾ ಒಣಗಿಸಿ ವೃದ್ದರಲ್ಲಿ ಕಾಣುವ ನೆರಿಗೆ ಮೂಡಿಸುತ್ತದೆ.

ಹೃದಯಸಂಬಂಧಿ ತೊಂದರೆಗಳು

ಹೃದಯ ಮತ್ತು ರಕ್ತಪರಿಚಲನಾ ವ್ಯವಸ್ಥೆಗೆ ಸಂಬಂಧಿಸಿದ ತೊಂದರೆಗಳಾದ ಹೃದಯದ ಕಾಯಿಲೆಗಳು, ಅಧಿಕ ರಕ್ತದೊತ್ತಡ ಮೊದಲಾದವು ನಿದ್ರಾರಾಹಿತ್ಯಕ್ಕೆ ಒಳಗಾಗಿರುವ ವ್ಯಕ್ತಿಗಳಲ್ಲಿ ಸಾಮಾನ್ಯವಾಗಿರುತ್ತವೆ. ಬರೆ ಒಂದೇ ದಿನದಲ್ಲಿ ಸಾಕಷ್ಟು ನಿದ್ದೆ ಪಡೆಯದೇ ಹೋದಾಗ ಅಧಿಕ ರಕ್ತದೊತ್ತಡದ ತೊಂದರೆ ಇರುವ ವ್ಯಕ್ತಿಗಳಲ್ಲಿ ರಕ್ತದೊತ್ತಡ ಇನ್ನಷ್ಟು ಹೆಚ್ಚುವುದನ್ನು ಗಮನಿಸಲಾಗಿದೆ.

ಪ್ರಭಾವಗೊಂಡ ಸ್ಮರಣಾಶಕ್ತಿ

ದೇಹಕ್ಕೆ ಅಗತ್ಯ ಪ್ರಮಾಣದ ನಿದ್ದೆ ಸಿಗದೇ ಹೋದಾಗ ಇದು ನಮ್ಮ ಕೇಂದ್ರ ನರವ್ಯವಸ್ಥೆಯ ಮೇಲೆ ಅತಿ ಹೆಚ್ಚಿನ ಒತ್ತಡವನ್ನು ಹೇರುತ್ತದೆ. ಪರಿಣಾಮವಾಗಿ ನಮ್ಮ ಮೆದುಳಿಗೆ ಸಂಬಂಧಿಸಿದ ಕ್ಷಮತೆ ಕುಗ್ಗುತ್ತದೆ. ಹಲವಾರು ಸಂಶೋಧನೆಗಳ ಮೂಲಕ ನಿದ್ದೆ ಹಾಗೂ ಮೆದುಳಿನ ಕಾರ್ಯಕ್ಷಮತೆಗೆ ನೇರವಾದ ಸಂಬಂಧವಿರುವುದನ್ನು ಸಾಬೀತುಗೊಳಿಸಲಾಗಿದೆ. ಅಧ್ಯಯನಗಳ ಮೂಲಕವೂ ನಿದ್ದೆಯಿಲ್ಲದ ವ್ಯಕ್ತಿಗಲ್ಲಿ ಸ್ಮರಣಾಶಕ್ತಿ ಉಡುಗುವುದನ್ನು ಕಂಡುಕೊಳ್ಳಲಾಗಿದೆ.

Sleep

ಜೈವಿಕ ಗಡಿಯಾರ ಬದಲಿಸುತ್ತದೆ

ನಮ್ಮ ದೇಹದ ಎಲ್ಲಾ ಕಾರ್ಯಗಳು ನಿಸರ್ಗದ ನಿಮಯದ ಪ್ರಕಾರವೇ ನಡೆಯುತ್ತವೆ ಹಾಗೂ ಇದನ್ನು ನಿಯಂತ್ರಿಸಲು ನಮ್ಮೊಳಗೊಂದು ಗಡಿಯಾರವೂ ಇದೆ. ಇದನ್ನು ಜೈವಿಕ ಗಡಿಯಾರವೆಂದು ಕರೆಯುತ್ತೇವೆ. ಈ ಗಡಿಯಾರ ನಮ್ಮನ್ನು ಯಾವುದೇ ಹೊರಗಿನ ಪ್ರಚೋದನೆಯಿಲ್ಲದೆಯೇ ಸೂಕ್ತ ಸಮಯಕ್ಕೆ ಏಳಲು, ನಿದ್ದೆ ಹೋಗಲು ಸೂಚನೆ ನೀಡುತ್ತದೆ. ನಿಸರ್ಗ ಹಗಲನ್ನು ಎಚ್ಚರದಿಂದಿದ್ದು ನಿತ್ಯದ ಕೆಲಸಗಳನ್ನು ಮಾಡಲು ಹಾಗೂ ರಾತ್ರಿ ವಿಶ್ರಾಂತಿ ಪಡೆದು ನಿದ್ದೆ ಮಾಡಲೆಂದೇ ನಮ್ಮ ದೇಹವನ್ನು ನಿರ್ಮಿಸಿದ್ದು ಆಯಾ ಹೊತ್ತಿನ ಕೆಲಸಗಳು ಆಯಾ ಹೊತ್ತಿನಲ್ಲಿಯೇ ಆಗುವಂತೆ ಜೈವಿಕ ಗಡಿಯಾರವನ್ನು ನಿರ್ದೇಶಿಸಿದೆ. ಈ ವ್ಯವಸ್ಥೆಗೆ circadian rhythm ಎಂದು ಕರೆಯುತ್ತಾರೆ. ಯಾವಾಗ ನಿದ್ದೆ ಹೋಗಬೇಕಾದ ಸಮಯದಲ್ಲಿ ನಿದ್ದೆ ಹೋಗಲಿಲ್ಲವೋ ಮತ್ತು ಎಚ್ಚರಿರಬೇಕಾದ ಸಮಯದಲ್ಲಿ ನಿದ್ದೆ ಹೋದಿರೋ ಆಗ ಈ ವ್ಯವಸ್ಥೆಯೂ ಬದಲಾಗುತ್ತದೆ. ಬದಲಾದ ಜೈವಿಕ ಗಡಿಯಾರ ನಿಸರ್ಗ ನಿಯಮಕ್ಕೆ ವಿರುದ್ದವಾಗಿದ್ದು ದೇಹದ ಹಲವಾರು ಕಾರ್ಯಕ್ಷಮತೆಗಳನ್ನು ಉಡುಗಿಸುತ್ತದೆ.

MOst Read:ಮಲಗಿದ ಕೂಡಲೇ ನಿದ್ದೆ ಬರಬೇಕೇ? ಹಾಗಾದರೆ ಈ ಟಿಪ್ಸ್ ಅನುಸರಿಸಿ

ನಿದ್ರಾರಾಹಿತ್ಯ ತಡೆಯಲು ಅತ್ಯುತ್ತಮ ವಿಧಾನವೆಂದರೆ ಪ್ರತಿಯೊಬ್ಬರೂ ತಮ್ಮ ನಿದ್ದೆಯ ಅಭ್ಯಾಸಗಳನ್ನು ಆರೋಗ್ಯಕರ ಅಭ್ಯಾಸಗಳಿಗೆ ಹೊಂದಿಕೊಳ್ಳುವಂತೆ ಬದಲಿಸಿಕೊಳ್ಳುವುದು. ರಾತ್ರಿ ಮಲಗುವ ಸಮಯವಾದ ತಕ್ಷಣ ನಿಮ್ಮ ಎಲ್ಲಾ ಎಲೆಕ್ಟ್ರಾನಿಕ್ ಉಪಕರಣಗಳನ್ನು ಮತ್ತು ಉದ್ಯೋಗ ಸಂಬಂಧಿತ ವಿಷಯಗಳನ್ನು ಮಲಗುವ ಕೋಣೆಯ ಹೊರಗಿರಿಸಿ. ರಾತ್ರಿಯ ಸಮಯ ಎಂದರೆ ಕತ್ತಲು, ನಿಮ್ಮ ಕೋಣೆಯಲ್ಲಿಯೂ ಕತ್ತಲಿರುವಂತೆ ಹಾಗೂ ತಣ್ಣಗಿರುವಂತೆ ವಾತಾವರಣ ಏರ್ಪಡಿಸಿ. ನೀವು ಮಲಗುವ ಹೊತ್ತು ಯಾವುದೇ ಆಗಿರಲಿ, ಬೆಳಿಗ್ಗೆ ಏಳುವ ಸಮಯ ಮಾತ್ರ ಒಂದೇ ಹೊತ್ತಿನಲ್ಲಿರಲಿ, ಇದು ರಜಾದಿನಗಳಿಗೂ ಅನ್ವಯಿಸಬೇಕು. ರಾತ್ರಿ ಮಲಗುವ ಕನಿಷ್ಟ ಮೂರು ಘಂಟೆಗಳ ಬಳಿಕ ಯಾವುದೇ ಭಾರೀ ಆಹಾರ ಸೇವಿಸದಿರಿ. ರಾತ್ರಿ ಮಲಗುವ ಮುನ್ನ ಎಂಟು ಘಂಟೆಗಳವರೆಗೆ ಯಾವುದೇ ಕೆಫೀನ್ ಸೇವಿಸದಿರಿ. ರಾತ್ರಿ ಮಲಗುವ ಮುನ್ನ ಮದ್ಯಪಾನ ಅಥವಾ ಧೂಮಪಾನ ಮಾಡದಿರಿ.

English summary

Side Effects Of Sleep Deprivation On Your Health

Adequate sleep is as important as having nutritious food when it comes to maintaining a healthy lifestyle. The way poor lifestyle habits, untimely meals and lack of exercise cause many diseases, lack of enough sleep can also cause serious health problems.Sleep impairs cognitive functioning, decision-making, hasten the effects of ageing.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X