For Quick Alerts
ALLOW NOTIFICATIONS  
For Daily Alerts

ಮಲ್ಟಿಪಲ್ ಸ್ಕ್ಲೆರೋಸಿಸ್: ಕಾರಣಗಳು, ಲಕ್ಷಣಗಳು, ಪತ್ತೆ ಹಚ್ಚುವಿಕೆ ಮತ್ತು ಚಿಕಿತ್ಸೆ

|

ಹೃಸ್ವವಾಗಿ ಎಂ ಎಸ್ (MS) ಎಂದು ಕರೆಯಲ್ಪಡುವ Multiple sclerosis ಎಂಬ ಕಾಯಿಲೆ ಗಂಭೀರ ರೂಪದ, ಮೆದುಳಿಗೆ ಸಂಬಂಧಿಸಿದ ಕಾಯಿಲೆಯಾಗಿದ್ದು ಇಡಿಯ ದೇಹವನ್ನು ನಿಯಂತ್ರಿಸುವ ಕೇಂದ್ರ ನರ ವ್ಯವಸ್ಥೆಯನ್ನು ಶಿಥಿಲಗೊಳಿಸುತ್ತದೆ. ಮೆದುಳುಬಳ್ಳಿ ಮತ್ತು ಮೆದುಳಿನ ನರಗಳನ್ನು ಆವರಿಸಿರುವ ಮೈಯೆಲಿನ್ ಎಂಬ ರಕ್ಷಣಾಪದರವನ್ನು ಹರಿದು ಇವುಗಳ ಮೂಲಕ ಹರಿದು ಬರಬೇಕಾಗಿದ್ದ ಸೂಚನೆಗಳ ಸಂವಹನೆಯನ್ನು ತಡೆಯುತ್ತದೆ. ಪರಿಣಾಮವಾಗಿ ದೇಹದ ಸಹಜವಾಗಿ ನಡೆಯಬೇಕಾದ ಹಲವಾರು ಕಾರ್ಯಗಳು ಸಾಧ್ಯವಾಗದೇ ಹೋಗುತ್ತದೆ. ಮಲ್ಟಿಪಲ್ ಸ್ಕ್ಲೆರೋಸಿಸ್ ಕಾಯಿಲೆ ಬಾಧಿತ ವ್ಯಕ್ತಿಗೆ ನರಗಳ ಜೀವಕೋಶಗಳು ಶಾಶ್ತತವಾಗಿ ನಷ್ಟಗೊಳ್ಳುವ ಸಾಧ್ಯತೆಯೂ ಇರುತ್ತದೆ.

ಈ ಕಾಯಿಲೆಯ ಪ್ರಾಬಲ್ಯವನ್ನು ಅನುಸರಿಸಿ ಕೆಲವು ವ್ಯಕ್ತಿಗಳಿಗೆ ಕೆಲವು ಸೂಚನೆಗಳು ಮಾತ್ರವೇ ಕಾಣಿಸಿಕೊಂಡರೆ ಕೆಲವರಿಗೆ ಗಂಭೀರವಾದ ಸೂಚನೆಗಳು ಕಾಣಿಸಿಕೊಳ್ಳಬಹುದು. ನರಗಳು ಎಷ್ಟರ ಮಟ್ಟಿಗೆ ಘಾಸಿಗೊಂಡಿವೆ ಹಾಗೂ ಮೆದುಳಿನ ಎಷ್ಟು ಭಾಗ ಮತ್ತು ಯಾವ ಭಾಗದಲ್ಲಿ ನರಗಳು ಘಾಸಿಗೊಂಡಿವೆ ಎಂಬ ಮಾಹಿತಿಯನ್ನು ಆಧರಿಸಿ ಈ ಭಾಗ ನಿಯಂತ್ರಿಸುವ ಅಂಗ ಅಥವಾ ಅಂಗಗಳು ನಿಷ್ಟೇಷ್ಟಿತಗೊಳ್ಳುತ್ತವೆ. ಬನ್ನಿ, ಅತಿ ಗಂಭೀರವಾದ ಈ ಕಾಯಿಲೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅರಿಯೋಣ:

Multiple Sclerosis

ಮಲ್ಟಿಪಲ್ ಸ್ಕ್ಲೆರೋಸಿಸ್ ಎಂದರೇನು?

ನಮ್ಮ ದೇಹದ ಕೇಂದ್ರ ನರವ್ಯವಸ್ಥೆಯ ಪ್ರಮುಖ ಭಾಗವಾಗಿರುವ ನರಗಳ ಜೀವಕೋಶಗಳು ಇತರ ಅಂಗಾಂಶದ ಜೀವಕೋಶಗಳಿಗಿಂತಲೂ ಭಿನ್ನವಾಗಿರುತ್ತವೆ. ಇವುಗಳ ಹೊರಪದರ ನಾರಿನಂಶದಿಂದ ಕೂಡಿದ್ದು ಮೈಯೆಲಿನ್ ಎಂಬ ಪದರ ರಕ್ಷಣೆ ಒದಗಿಸುತ್ತದೆ. ಮೆದುಳಿನ ಸೂಚನೆಗಳು ನರಗಳ ಮೂಲಕ ದೇಹದ ಪ್ರತಿ ಭಾಗಕ್ಕೂ ತಲುಪಲು ಈ ಮೈಯೆಲಿನ್ ಪದರ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ. ಅಂದರೆ ಸೂಚನೆಯನ್ನು ಜೀವಕೋಶದಿಂದ ಜೀವಕೋಶಕ್ಕೆ ಮಿಂಚಿನ ವೇಗದಲ್ಲಿ ದಾಟಿಸುತ್ತದೆ. ಸತತವಾಗಿ ನಮ್ಮ ಆರೋಗ್ಯವನ್ನು ಕಾಪಾಡುವ ನಮ್ಮ ಜೀವ ನಿರೋಧಕ ಶಕ್ತಿ ಯಾವುದೋ ಕಾರಣದಿಂದ ತಪ್ಪಾಗಿ ಈ ಮೈಯೆಲಿನ್ ಕವಚವನ್ನು ನಮ್ಮ ದೇಹಕ್ಕೆ ಹಾನಿ ಮಾಡುವ ಬ್ಯಾಕ್ಟೀರಿಯಾ ಅಥವಾ ವೈರಸ್ ಎಂದೇ ತಿಳಿದು ಧಾಳಿ ಎಸಗುತ್ತದೆ.

ಪರಿಣಾಮವಾಗಿ ಈ ಧಾಳಿ ನಡೆದಲ್ಲೆಲ್ಲಾ ಮೈಯೆಲಿನ್ ಕವಚ ಘಾಸಿಗೊಂಡು ತನ್ನ ಕ್ಷಮತೆಯನ್ನು ಕಳೆದುಕೊಳ್ಳುತ್ತದೆ. ಈ ಘಾಸಿಗೊಳ್ಳುವಿಕೆ ಒಂದೇ ಭಾಗದಲ್ಲಲ್ಲದೇ ಹಲವೆಡೆ ನಡೆಯುತ್ತವೆ ಇದೇ ಕಾರಣಕ್ಕೆ ಮಲ್ಟಿಪಲ್ ಅಥವಾ ಹಲವೆಡೆ ಎಂದೂ, ಘಾಸಿಗೊಂಡ ಮೈಯೆಲಿನ್ ಪದರ ತೂತು ತೂತಾಗಿ ಶಿಥಿಲವಾಗಿ ಬರೆ ಬಿದ್ದಂತಾಗುತ್ತದೆ ಅಥವಾ ಸ್ಕ್ಲೆರೋಸಿಸ್ ಎಂಬ ಸ್ಥಿತಿ ಪಡೆಯುತ್ತದೆ. ಇದೇ ಕಾರಣಕ್ಕೆ ಈ ರೋಗವನ್ನು ಮಲ್ಟಿಪಲ್ ಸ್ಕ್ಲೆರೋಸಿಸ್ ಎಂದು ಕರೆಯಲಾಗುತ್ತದೆ. ವೈದ್ಯಕೀಯ ತಜ್ಞರು ಈ ಬರೆಯನ್ನು plaques ಅಥವಾ lesions ಎಂದೂ ಕರೆಯುತ್ತಾರೆ. ಶಿಥಿಲಗೊಂಡ ಮೈಯಲಿನ್ ಪದರದ ಮೂಲಕ ಸಾಗಬೇಕಾಗಿದ್ದ ಸೂಚನೆಗಳು ಅಥವಾ ನರಸಂವಹನೆ ತಡೆತಡೆದು ಸಾಗುತ್ತವೆ ಅಥವಾ ಪೂರ್ಣವಾಗಿ ಅಸಾಧ್ಯವಾಗುತ್ತದೆ. ಈ ಮೂಲಕ ಮೆದುಳಿನ ಸಂಕೇತಗಳು ಸಂಬಂಧಿತ ಅಂಗಕ್ಕೆ ತಲುಪಲು ಸಾಧ್ಯವಾಗದೇ ಆ ಅಂಗ ಬಾಧಿತಗೊಳ್ಳುತ್ತದೆ. ಈ ರೋಗದ ನೇರ ಪರಿಣಾಮ ಬೀರುವ ಅಂಗಗಳೆಂದರೆ:

  • ಮೆದುಳು ಬಳ್ಳಿ
  • ಕಣ್ಣುಗಳು (ದೃಷ್ಟಿ ನರ)
  • ಇಂದ್ರಿಯಗಳನ್ನು ಗ್ರಹಿಸುವ ಮೆದುಳಿನ ಭಾಗ (cerebellum)
  • ಮತ್ತು ಮೆದುಳಿನ ಬುಡ

ಮಲ್ಟಿಪಲ್ ಸ್ಕ್ಲೆರೋಸಿಸ್ ಹೆಚ್ಚುತ್ತಾ ಹೋದಂತೆ ಹೆಚ್ಚು ಹೆಚ್ಚು ಭಾಗದ ಮೈಯಲಿನ್ ನಷ್ಟವಾಗುತ್ತಾ ಸಾಗುತ್ತದೆ ಹಾಗೂ ಮೆದುಳಿನಲ್ಲಿರುವ ನರಗಳ ನಾರಿನಂಶವೂ ನಷ್ಟವಾಗುತ್ತಾ ಸಾಗುತ್ತದೆ ಹಾಗೂ ಸೂಚನೆಗಳ ಸಂವಹನೆಯೂ ಕಡಿಮೆಯಾಗುತ್ತಾ ಹೋಗುತ್ತದೆ. ಪರಿಣಾಮವಾಗಿ ದೇಹದ ಕೆಲವು ಕಾರ್ಯಗಳು ಅಥವಾ ಅಂಗಗಳು ಸ್ಥಗಿತಗೊಳ್ಳುತ್ತವೆ.

ಮಲ್ಟಿಪಲ್ ಸ್ಕ್ಲೆರೋಸಿಸ್ ನ ವಿಧಗಳು:

ಈ ರೋಗ ಆವರಿಸಿದ ಪ್ರತಿ ವ್ಯಕ್ತಿಯಲ್ಲಿಯೂ ನರಗಳ ಘಾಸಿಗೊಳ್ಳುವಿಕೆ ಭಿನ್ನವಾಗಿರುವ ಕಾರಣ ಕಾಯಿಲೆಯ ಪರಿಣಾಮವೂ ಭಿನ್ನವಾಗಿಯೇ ಇರುತ್ತವೆ. ವೈದ್ಯಕೀಯ ತಜ್ಞರ ಪ್ರಕಾರ ಸ್ಥೂಲವಾಗಿ ಈ ಕಾಯಿಲೆಯನ್ನುಗುರುತಿಸುವ ಮತ್ತು ಚಿಕಿತ್ಸೆ ನೀಡುವ ಅಂಶಗಳನ್ನು ಆಧರಿಸಿ ನಾಲ್ಕು ವಿಧಗಳಾಗಿ ವಿಂಗಡಿಸಬಹುದು.

*ರಿಲಾಪ್ಸಿಂಗ್ ರೆಮಿಟಿಂಗ್ ಮಲ್ಟಿಪಲ್ ಸ್ಕ್ಲೆರೋಸಿಸ್ (Relapsing-remitting multiple sclerosis)

ಈ ರೋಗ ಆವರಿಸಿರುವ ಒಟ್ಟಾರೆ ಜನರಲ್ಲಿ 85% ವ್ಯಕ್ತಿಗಳಿಗೆ ಈ ವಿಧದ ಕಾಯಿಲೆ ಕಾಣಿಸಿಕೊಂಡಿದೆ. ಈ ರೋಗದ ಪ್ರಥಮ ಸೂಚನೆ ಈ ವ್ಯಕ್ತಿಗಳು ಇಪ್ಪತ್ತರ ಹರೆಯದಲ್ಲಿದ್ದಾಗಲೇ ಕಾಣಿಸಿಕೊಳ್ಳತೊಡಗುತ್ತವೆ. ಬಳಿಕ ಕೆಲವು ನಿಗದಿತ ಅವಧಿಗಳಲ್ಲಿ (ಇದೇ ಕಾರಣಕ್ಕೆ ರಿಲಾಪ್ಸಿಂಗ್ ಎಂಬ ಪದವನ್ನು ಬಳಸಲಾಗಿದೆ) ಈ ಸೂಚನೆಗಳು ಮರುಕಳಿಸುತ್ತವೆ ಹಾಗೂ ಬಳಿಕ ಮುಂದಿನ ಅವಧಿಯವರೆಗೆ ಈ ಸೂಚನೆಗಳು ಗುಣವಾಗುವಂತೆ ತೋರುತ್ತವೆ. (ರೆಮಿಶನ್). ಈ ಅವಧಿಯಲ್ಲಿ ಮಲ್ಟಿಪಲ್ ಸ್ಕ್ಲೆರೋಸಿಸ್ ನ ಲಕ್ಷಣಗಳು ಅಂಶಿಕವಾಗಿ ಅಥವಾ ಪರಿಪೂರ್ಣವಾಗಿ ಗುಣವಾದ ಸೂಚನೆಗಳು ಕಂಡುಬರುತ್ತವೆ.

*ಪ್ರೈಮರಿ ಪ್ರೊಗ್ರೆಸಿವ್ ಮಲ್ಟಿಪಲ್ ಸ್ಕ್ಲೆರೋಸಿಸ್ ( Primary progressive multiple sclerosis (PPMS))

ಈ ಬಗೆಯ ಮಲ್ಟಿಪಲ್ ಸ್ಕ್ಲೆರೋಸಿಸ್ ಆವರಿಸಿದ ವ್ಯಕ್ತಿಗೆ ದಿನಗಳೆದಂತೆ ರೋಗ ಉಲ್ಬಣಗೊಳ್ಳುತ್ತಲೇ ಸಾಗುತ್ತದೆ. ಈ ರೋಗ ಆವರಿಸಿರುವ ಒಟ್ಟಾರೆ ಜನರಲ್ಲಿ 10-15% ವ್ಯಕ್ತಿಗಳಿಗೆ ಈ ವಿಧದ ಕಾಯಿಲೆ ಕಾಣಿಸಿಕೊಂಡಿದೆ. ಇತರ ವಿಧಗಳಿಗೆ ಹೋಲಿಸಿದರೆ ಈ ಬಗೆಯ ಮಲ್ಟಿಪಲ್ ಸ್ಕ್ಲೆರೋಸಿಸ್ ಪೀಡಿತ ವ್ಯಕ್ತಿಗಳ ಅಂಗಗಳು ಉಳಿದ ಬಗೆಗಳ ಮಲ್ಟಿಪಲ್ ಸ್ಕ್ಲೆರೋಸಿಸ್ ಪೀಡಿತ ವ್ಯಕ್ತಿಗಿಂತಲೂ ಬೇಗನೇ ನಿಷ್ಟೇಷ್ಠಿತವಾಗುತ್ತವೆ.

*ಸೆಕೆಂಡರಿ ಪ್ರೈಮರಿ ಪ್ರೋಗ್ರೆಸಿವ್ ಮಲ್ಟಿಪಲ್ ಸ್ಕ್ಲೆರೋಸಿಸ್ (Secondary progressive multiple sclerosis (SPMS)

ಈ ವಿಧದಲ್ಲಿ ಪ್ರಾರಂಭದಲ್ಲಿ ಇದರ ಸೂಚನೆಗಳು ಒಂದೇ ಹಂತದಲ್ಲಿದ್ದು ಹೆಚ್ಚೂ ಆಗದೇ ಕಡಿಮೆಯೂ ಆಗದೇ ಸುಮಾರು ಹತ್ತರಿಂದ ಇಪ್ಪತ್ತು ವರ್ಷಗಳವರೆಗೆ ಹಾಗೇ ಇರುತ್ತವೆ. ಬಳಿಕ ನಿಧಾನವಾಗಿ ದೇಹದ ಶಿಥಿಲತೆ ಹೆಚ್ಚುವ ಗತಿ ಏರುಕ್ರಮದಲ್ಲಿ ಸಾಗುತ್ತದೆ. ಯಾವಾಗ ಈ ಏರುಗತಿ ಕಾಣಿಸಿಕೊಂಡಿತೋ ಆಗ ಈ ರೋಗವನ್ನು ನಿಯಂತ್ರಿಸುವುದು ಅತಿ ಕಷ್ಟಕರವಾಗುತ್ತದೆ ಹಾಗೂ ಚಿಕಿತ್ಸೆಯೂ ಭಾರೀ ದುಸ್ತರವಾಗುತ್ತದೆ.

*ಪ್ರೋಗ್ರೆಸಿವ್ ರಿಲಾಪ್ಸಿಂಗ್ ಮಲ್ಟಿಪಲ್ ಸ್ಕ್ಲೆರೋಸಿಸ್ (Progressive relapsing)

ಇದು ಅತಿ ಅಪರೂಪದ ವಿಧವಾಗಿದ್ದು ಒಟ್ಟಾರೆ ಪ್ರಕರಣಗಳಲ್ಲಿ ಐದು ಶೇಖಡಾಕ್ಕಿಂತಲೂ ಕಡಿಮೆ ಜನರಲ್ಲಿ ಕಂಡುಬಂದಿದೆ. ಪ್ರಾರಂಭಿಕ ಹಂತದಲ್ಲಿ ನಿಧಾನವಾಗಿ ಹೆಚ್ಚುತ್ತಾ ಹೋಗುವ ರೋಗದ ಪ್ರಾಬಲ್ಯದ ಜೊತೆಗೇ ಇದರ ಸೂಚನೆಗಳೂ ಹೆಚ್ಚು ಬಗೆಯದ್ದಾಗುತ್ತಾ ಹೋಗುತ್ತವೆ. ಈ ರೋಗದಲ್ಲಿ ಗುಣವಾಗುವ ಹಂತ (ರೆಮಿಶನ್) ಇರುವುದೇ ಇಲ್ಲ.

ಮಲ್ಟಿಪಲ್ ಸ್ಕ್ಲೆರೋಸಿಸ್ ಗೆ ಕಾರಣಗಳು ಮತ್ತು ಅಪಾಯದ ಸಾಧ್ಯತೆಗಳು

ಮಲ್ಟಿಪಲ್ ಸ್ಕ್ಲೆರೋಸಿಸ್ ಗೆ ಹಲವಾರು ಕಾರಣಗಳಿವೆ ಹಾಗೂ ಸ್ಪಷ್ಟವಾಗಿ ಇದೇ ಕಾರಣ ಎಂದು ಹೇಳಲು ಇದುವರೆಗೆ ವೈದ್ಯವಿಜ್ಞಾನಕ್ಕೆ ಸಾಧ್ಯವಾಗಿಲ್ಲ. ಹಾಗಾಗಿ ಸ್ಥೂಲವಾಗಿ ಈ ಕಾರಣಗಳನ್ನು ನೀಡಬಹುದು:

*ವಂಶವಾಹಿನಿ: ಮಲ್ಟಿಪಲ್ ಸ್ಕ್ಲೆರೋಸಿಸ್ ಗೆ ವಂಶವಾಹಿನಿಯ ಕಾರಣವೂ ಇರಬಹುದು. ಅಂದರೆ ತಂದೆ ತಾಯಿಯರಲ್ಲಿ ಒಬ್ಬರಿಗಾಗದೂ ಮಲ್ಟಿಪಲ್ ಸ್ಕ್ಲೆರೋಸಿಸ್ ಇದ್ದರೆ ಮಕ್ಕಳಿಗೆ ಇದು ಬಂದೇ ಬರುತ್ತದೆ ಎಂದು ಹೇಳಲು ಸಾಧ್ಯವಾಗುವುದಿಲ್ಲ ಕೆಲವು ವ್ಯಕ್ತಿಗಳಿಗೆ ಜನ್ಮತಃ ಈ ರೋಗ ವಂಶವಾಹಿನಿಯಲ್ಲಿ ಬಂದಿರಬಹುದು ಆದರೆ ಈ ರೋಗವನ್ನು ಪ್ರಚೋದಿಸುವ ಅಂಶ ಅವರ ದೇಹಕ್ಕೆ ಎದುರಾಗುವವರೆಗೂ ಈ ರೋಗ ಅಗೋಚರವಾಗಿಯೇ ಇರುತ್ತದೆ.

*ವಾತಾವರಣ: ಮಲ್ಟಿಪಲ್ ಸ್ಕ್ಲೆರೋಸಿಸ್ ಗೆ ನಾವು ವಾಸಿಸುವ ವಾತಾವರಣವೂ ಕಾರಣವಾಗಬಹುದು. ಈ ರೋಗ ಕೆಲವು ವಿಶಿಷ್ಟ ಪರಿಸರದಲ್ಲಿ ವಾಸಿಸುವ ವ್ಯಕ್ತಿಗಳಿಗೆ ಅಥವಾ ಕೆಲವು ವಂಶಜರಲ್ಲಿ ಈ ರೋಗ ಕಾಣಿಸಿಕೊಳ್ಳಬಹುದು. ಸಾಮಾನ್ಯವಾಗಿ ಭೂಮಧ್ಯರೇಖೆಯಿಂದ ದೂರವಾಗಿರುವ ಶೀತವಲಯದ ದೇಶಗಳಾದ ಸ್ಕ್ಯಾಂಡಿನೇವಿಯಾ ಮತ್ತು ಸ್ಕಾಟ್ಲೆಂಡ್ ನಂತಹ ದೇಹದ ನಿವಾಸಿಗಳಲ್ಲಿ ಈ ರೋಗ ಹೆಚ್ಚಾಗಿ ಕಾಣಿಸಿಕೊಂಡಿದೆ. ಧೂಮಪಾನ ಹಾಗೂ ಕೆಲವು ವಿಟಮಿನ್ನುಗಳ ಕೊರತೆಯೂ ಕಾರಣವಾಗಬಹುದು.

*ಲೈಂಗಿಕ ರಸದೂತಗಳು: ಲೈಂಗಿಕ ರಸದೂತಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಬಾಧಿಸಬಹುದು ಅಥವಾ ವ್ಯತಿರಿಕ್ತವಾಗಿ ರೋಗ ನಿರೋಧಕ ಶಕ್ತಿ ಲೈಂಗಿಕ ರಸದೂತಗಳನ್ನೂ ಬಾಧಿಅಸ್ಬಹುದು. ಮಹಿಳೆಯರಲ್ಲಿ ರೋಗ ನಿರೋಧಕ ಶಕ್ತಿಯನ್ನು ಪ್ರೊಜೆಸ್ಟರಾನ್ ಮತ್ತು ಈಸ್ಟ್ರೋಜೆನ್ ರಸದೂತಗಳು ಬಾಧಿಸಿದರೆ ಪುರುಷರಲ್ಲಿ ಟೆಸ್ಟೋಸ್ಟೆರಾನ್ ರಸದೂತ ಬಾಧಿಸುತ್ತವೆ. ಈ ಬಗ್ಗೆ ನಡೆಸಿದ ಸಂಶೋಧನೆಗಳ ಮೂಲಕ ಕಂಡುಕೊಳ್ಳಲಾದ ಅಂಶವೆಂದರೆ ಈ ರೋಗಕ್ಕೆ ಒಳಗಾಗುವ ಸಾಧ್ಯತೆ ಪುರುಷರಿಗಿಂತಲೂ ಮಹಿಳೆಯರಿಗೆ ನಾಲ್ಕು ಪಟ್ಟು ಹೆಚ್ಚು

*ವೈರಸ್ಸುಗಳು:
ಸಂಶೋಧನೆಗಳ ಮೂಲಕ ವಿಜ್ಞಾನಿಗಳು ಮಲ್ಟಿಪಲ್ ಸ್ಕ್ಲೆರೋಸಿಸ್ ಗೆ ಹರ್ಪಿಸ್ ಕುಟುಂಬಕ್ಕೆ ಸೇರಿದ ಹರ್ಪಿಸ್ವಿರಿಡೇ ಎಂಬ ವೈರಸ್ ಪ್ರಚೋದನೆ ನೀಡುತ್ತದೆ ಎಂದು ಕಂಡುಕೊಂಡಿದ್ದಾರೆ. ಈ ರೋಗ ಆವರಿಸಿದ ವ್ಯಕ್ತಿಗಳ ಮೆದುಳುಬಳ್ಳಿಯ ದ್ರವದಲ್ಲಿ ಒಂದು ಬಗೆಯ ಪ್ರೋಟೀನ್ ಕಂಡುಬಂದಿದೆ ಹಾಗೂ ಈ ವೈರಸ್ ನ ಪ್ರಭಾವದಿಂದ ನರವ್ಯವಸ್ಥೆ ಕುಂದಿರುವ ರೋಗದ ಲಕ್ಷಣಗಳಿಗೆ ಹೋಲುತ್ತದೆ. ಆದರೆ ಈ ಮಾಹಿತಿಯನ್ನು ಸ್ಪಷ್ಟಪಡಿಸಲು ಇನ್ನೂ ಸಂಶೋಧನೆಗಳು ಮುಂದುವರೆಯುತ್ತಿವೆ.

*ಸ್ವಯಂ ರೋಗ ನಿರೋಧಕ ವ್ಯವಸ್ಥೆಯ ವಿರುದ್ದ ಪ್ರಭಾವ:
ಒಂದು ವೇಳೆ ವ್ಯಕ್ತಿಯೊಬ್ಬರಿಗೆ ರೋಗ ನಿರೋಧಕ ಶಕ್ತಿಯೇ ವಿರುದ್ದ ದಿಕ್ಕಿನಲ್ಲಿ ಧಾಳಿ ಎಸಗುವ ತೊಂದರೆ ಇದ್ದರೆ (ಉದಾಹರಣೆಗೆ ಜಠರದ ಉರಿಯೂತ) ಈ ರೋಗ ಆವರಿಸುವ ಸಾಧ್ಯತೆ ಹೆಚ್ಚು.

ಮಲ್ಟಿಪಲ್ ಸ್ಕ್ಲೆರೋಸಿಸ್ ನ ಲಕ್ಷಣಗಳು:

ನಮ್ಮ ದೇಹದಲ್ಲಿ ಮೆದುಳು ಕೇಂದ್ರ ಕಂಪ್ಯೂಟರ್ ನಂತೆ ಕಾರ್ಯನಿರ್ವಹಿಸುತ್ತದೆ ಹಾಗೂ ದೇಹದ ಎಲ್ಲಾ ಅಂಗಗಳ ಚಟುವಟಿಕೆಯನ್ನು ನಿಯಂತ್ರಿಸುತ್ತದೆ. ಮೆದುಳಿಗೆ ಘಾಸಿಯಾದರೆ ಇದು ದೇಹದ ಹಲವು ಅಂಗಗಳ ಕಾರ್ಯನಿರ್ವಹಣೆಯ ಮೇಲೆ ಪ್ರಭಾವ ಬೀರುತ್ತದೆ. ಈ ಮೂಲಕ ಎದುರಾಗುವ ಕೆಲವು ಲಕ್ಷಣಗಳೆಂದರೆ:

1. ಮಂದ್ರವಾದ ದೃಷ್ಟಿ / ಎರಡೆರಡಾಗಿ ಕಾಣುವುದು
2. ಅಂಗದ ಚಲನೆ ಸಾಧ್ಯವಾಗದಿರುವುದು ಅಥವಾ ಅಗತ್ಯವಿರುವಷ್ಟು ಪ್ರತಿಕ್ರಿಯೆ ತೋರದಿರುವುದು
3. ನಿಸ್ತೇಜತೆ
4. ಖಿನ್ನತೆ
5. ಜೀರ್ಣಶಕ್ತಿ ಉಡುಗುವುದು
6. ಸ್ನಾಯುಗಳ ಸೆಡೆತ
7. ಲೈಂಗಿಕ ತೊಂದರೆಗಳು (ಮಹಿಳೆಯರಲ್ಲಿ ಜನನಾಂಗ ಒಣಗುವಿಕೆ, ಪುರುಷರಲ್ಲಿ ನಿಮಿರು ದೌರ್ಬಲ್ಯ)
8. ಸದಾ ಸುಸ್ತು ಆವರಿಸಿರುವುದು
9. ಏಕಾಗ್ರತೆ ಮತ್ತು ಗಮನ ಹರಿಸಲು ಸಾಧ್ಯವಾಗದಿರುವುದು
10. ತಲೆಯಿಂದ ಬೆನ್ನಹುರಿಯ ಕೆಳಗಿನವರೆಗೆ ವಿದ್ಯುತ್ ಸಂಚಾರವಾದ ಅನುಭವ
11. ಚಿಕ್ಕದಾಗಿ ಸೂಜಿ ಚುಚ್ಚುವ ಅನುಭವ
12. ನಡೆಯುವ ಭಂಗಿಗಳಲ್ಲಿ ಬದಲಾವಣೆ
13. ತಲೆ ತಿರುಗುವುದು
14, ಮಾತನಾಡುವಾಗ ತೊದಲುವಿಕೆ
15. ದೇಹದ ಕೆಲವು ಭಾಗಗಳು ನಡುಗುವುದು ಅಥವಾ ಅದುರುವುದು

ಮಲ್ಟಿಪಲ್ ಸ್ಕ್ಲೆರೋಸಿಸ್ ಪತ್ತೆಹಚ್ಚುವಿಕೆ:

ಈ ರೋಗ ಪತ್ತೆ ಹಚ್ಚುವಿಕೆ ಅತಿ ಕಷ್ಟಕರವಾಗಿದೆ. ಏಕೆಂದರೆ ಈ ರೋಗವನ್ನು ಪತ್ತೆಹಚ್ಚಲು ನಿರ್ದಿಷ್ಟವಾದ ಪರೀಕ್ಷೆಯೇ ಇಲ್ಲ! ಏಕೆಂದರೆ ಈ ರೋಗದ ಲಕ್ಷಣಗಳು ಇತರ ರೋಗಗಳ ಲಕ್ಷಣಗಳಂತೆಯೇ ಇರುವುದೇ ವೈದ್ಯರಿಗೆ ದೊಡ್ಡ ಸವಾಲಾಗುತ್ತದೆ. ಹಾಗಾಗಿ ಕೆಲವೇ ಲಕ್ಷಣಗಳನ್ನು ಪರಿಗಣಿಸಿ ಇದು ಮಲ್ಟಿಪಲ್ ಸ್ಕ್ಲೆರೋಸಿಸ್ ರೋಗವೇ ಎಂದು ಹೇಳಲು ಸಾಧ್ಯವಿಲ್ಲ. ಹಾಗಾಗಿ ವೈದ್ಯರಿಗೆ ಒಂದಕ್ಕಿಂತ ಹೆಚ್ಚು ಬಗೆಯ ಪರೀಕ್ಷೆಗಳನ್ನು ನಡೆಸಬೇಕಾಗುತ್ತದೆ. ಇವುಗಳಲ್ಲಿ ಪ್ರಮುಖವಾದವು ಎಂದರೆ:

*ಎಂ ಆರ್ ಐ (MRI (Magnetic Resonance Imaging):

ಈ ಪರೀಕ್ಷೆಯ ಮೂಲಕ ರೋಗಿಯ ಮೆದುಳಿನ ಆರೋಗ್ಯದ ಬಗ್ಗೆ ವೈದ್ಯರಿಗೆ ಹೆಚ್ಚಿನ ಮಾಹಿತಿ ದೊರಕುತ್ತದೆ. ಈ ಉಪಕರಣದಲ್ಲಿ ಮೆದುಳಿನ ಅಡ್ಡಚಿತ್ರಗಳು ಕಾಣಬರುತ್ತವೆ ಹಾಗೂ ಹೆಚ್ಚಿನ ಸಾಂದ್ರತೆ ಇರುವ ಭಾಗದಲ್ಲಿ ಉರಿಯೂತದ ಪ್ರಭಾವವೇನಾದರೂ ಕಂಡುಬರುತ್ತದೆಯೇ ಎಂದು ಗಮನಿಸುತ್ತಾರೆ. ಆದರೆ ಎಂ ಆರ್ ಐ ನಿಂದ ಮಲ್ಟಿಪಲ್ ಸ್ಕ್ಲೆರೋಸಿಸ್ ನ ಇರುವಿಕೆಯ ಸ್ಪಷ್ಟ ಮಾಹಿತಿ ದೊರಕುವುದಿಲ್ಲ. ಏಕೆಂದರೆ ಈ ಚಿತ್ರಗಳಲ್ಲಿ ಕಂಡುಬರುವ ಚುಕ್ಕೆಗಳು ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಇರುವ ರೋಗಿಗಳಲ್ಲಿಯೂ ಕಂಡುಬರುತ್ತದೆ.

*ರಕ್ತಪರೀಕ್ಷೆ:

ಮಲ್ಟಿಪಲ್ ಸ್ಕ್ಲೆರೋಸಿಸ್ ನಂತಹದ್ದೇ ಲಕ್ಷಣಗಳು ಇತರ ರೋಗಗಳ ಲಕ್ಷಣಗಳಂತೆ ಕಾಣಗೊಡಗಿದರೆ ರಕ್ತಪರೀಕ್ಷೆಯ ಮೂಲಕ ಕೆಲವು ಸಂಭವಗಳನ್ನು ತಳ್ಳಿಹಾಕಲು ಸಾಧ್ಯವಾಗುತ್ತದೆ. ಈ ಪರೀಕ್ಷೆಯಲ್ಲಿ ಮಲ್ಟಿಪಲ್ ಸ್ಕ್ಲೆರೋಸಿಸ್ ಗೆ ಸಂಬಂಧಿಸಿದ ಕೆಲವು ಸೂಕ್ಷ್ಮ ಮಾಹಿತಿಗಳನ್ನು ಪಡೆದುಕೊಳ್ಳಲಾಗುತ್ತದೆ. ಆದರೆ ಇದೂ ಸಹಾ ರೋಗ ಪತ್ತೆಹಚ್ಚಲು ಏಕಮಾತ್ರ ವಿಧಾನವಲ್ಲ.

*ಮೆದುಳಿನ ದ್ರವದ ಪರೀಕ್ಷೆ ( Spinal tap (lumbar puncture):

ಈ ಪರೀಕ್ಷೆಯಲ್ಲಿ ಮೆದುಳನ್ನು ಆವರಿಸಿರುವ ದ್ರವವನ್ನು ಕೊಂಚ ಪ್ರಮಾಣದಲ್ಲಿ ಸಂಗ್ರಹಿಸಿ ಇದರ ಪ್ರತಿಜೀವಗಳಲ್ಲಿ ಅಸಹಜತೆಯೇನಾದರೂ ಇದೆಯೇ ಎಂದು ಪರೀಕ್ಷಿಸಲಾಗುತ್ತದೆ. ಈ ಪರೀಕ್ಷೆಯ ಮೂಲಕ ಮಲ್ಟಿಪಲ್ ಸ್ಕ್ಲೆರೋಸಿಸ್ ನ ಲಕ್ಷಣಗಳು ಬೇರಾವುದೋ ಸೋಂಕಿನ ಪ್ರಭಾವದ ಲಕ್ಷಣದೊಂದಿಗೆ ಹೋಲಿಕೆಯಾಗುತ್ತಿದ್ದರೆ ಆ ಸೋಂಕನ್ನು ಗುರುತಿಸಲು ಸಾಧ್ಯವಾಗುತ್ತದೆ.

*ಭಾವನೆಗಳ ಪ್ರಚೋದನಾ ಪರೀಕ್ಷೆ (Evoked potential tests):

ಈ ಪರೀಕ್ಷೆಯ ಮೂಲಕ ದೇಹದ ಹಲವು ಭಾಗಗಳು ಮತ್ತು ಭಾವನೆಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂದು ಪರಿಶೀಲಿಸಿ ಇವನ್ನು ನಿಯಂತ್ರಿಸುವ ಮೆದುಳು ಎಷ್ಟು ಮಟ್ಟಿಗೆ ಆರೋಗ್ಯಕರವಾಗಿದೆ ಎಂದು ಹಿಮ್ಮುಖ ರೀತಿಯಲ್ಲಿ ಪರೀಕ್ಷಿಸಲಾಗುತ್ತದೆ. ಕಣ್ಣಿನ ದೃಷ್ಟಿ, ಚರ್ಮದ ಅನುಭವ ಮತ್ತು ಕಿವಿ ಕೇಳಿಸಿಕೊಳ್ಳುವ ಕ್ಷಮತೆಗಳನ್ನು ಈ ಪರೀಕ್ಷೆಯಲ್ಲಿ ಪರಿಗಣಿಸಲಾಗುತ್ತದೆ. ಈ ಪರೀಕ್ಷೆಯನ್ನು ನಡೆಸಲು ರೋಗಿಯ ಭಾವನೆಗಳನ್ನು ಪ್ರಚೋದಿಸುವಂತಹ ಚಟುವಟಿಕೆ ಉದಾಹರಣೆಗೆ ವೀಡೀಯೋ ಚಿತ್ರ ತೋರಿಸಿ ಅಥವಾ ತಂಪುಗಾಳಿ ಬೀಸುವಂತೆ ಮಾಡುವ, ಕೆಲವು ವಿಶಿಷ್ಟ ಸದ್ದುಗಳನ್ನು ಹೊರಡಿಸುವ ಅಥವಾ ಕೈ ಮತ್ತು ಕಾಲುಗಳಿಗೆ ವಿದ್ಯುತ್ ನ ಲಘು ಆಘಾತಗಳನ್ನು ನೀಡುವ ಮೂಲಕ ಮೆದುಳಿನ ಚಟುವಟಿಕೆಗಳನ್ನು ವಿದ್ಯುತ್ ಅಲೆಗಳನ್ನು ಗ್ರಹಿಸುವ ಸೂಕ್ಷ್ಮ ಯಂತ್ರಗಳ ಮೂಲಕ ಪರಿಶೀಲಿಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಮೆದುಳಿನಿಂದ ನರಗಳಿಗೆ ಎಷ್ಟು ವೇಗದಲ್ಲಿ ಮಾಹಿತಿ ರವಾನೆಯಾಗುತ್ತದೆ ಎಂಬುದನ್ನು ಪರಿಶೀಲಿಸಲಾಗುತ್ತದೆ.

ಮಲ್ಟಿಪಲ್ ಸ್ಕ್ಲೆರೋಸಿಸ್ ನ ಕ್ಲಿಷ್ಟತೆಗಳು:

1. ಸ್ನಾಯುಗಳ ಸೆಡೆತ (myoclonus)
2. ಭಾವನೆಗಳಲ್ಲಿ ಏರಿಳಿತ, ಮರೆಗುಳಿತನ ಮೊದಲಾದ ಮಾನಸಿಕ ತೊಂದರೆಗಳು
3. ಎಪಿಲೆಪ್ಸಿ.
4. ಪಾರ್ಶ್ವವಾಯು, ಹೆಚ್ಚಾಗಿ ಕಾಲುಗಳಲ್ಲಿ ಕಾಣಿಸಿಕೊಳ್ಳುವುದು
5. ಲೈಂಗಿಕ ಮತ್ತು ಜೀರ್ಣಶಕ್ತಿ ಉಡುಗುವಿಕೆ

ಮಲ್ಟಿಪಲ್ ಸ್ಕ್ಲೆರೋಸಿಸ್ ರೋಗಕ್ಕೆ ಚಿಕಿತ್ಸೆಗಳು

ಈ ಕಾಯಿಲೆಗೆ ಚಿಕಿತ್ಸೆ ನೀಡುವ ವೈದ್ಯರು ಈ ಕಾಯಿಲೆ ಉಲ್ಬಣಗೊಳ್ಳುವುದನ್ನು ನಿಧಾನಗೊಳಿಸುವುದು, ಕಾಯಿಲೆಯ ಆಘಾತದಿಂದ ಆದಷ್ಟು ಶೀಘ್ರ ಚೇತರಿಸಿಕೊಳ್ಳುವುದು ಹಾಗೂ ಈಗ ಎದುರಾಗುತ್ತಿರುವ ಲಕ್ಷಣಗಳು ಇನ್ನಷ್ಟು ಹೆಚ್ಚದಿರುವಂತೆ ತಮ್ಮ ಚಿಕಿತ್ಸೆಯನ್ನು ಪ್ರಾರಂಭಿಸುತ್ತಾರೆ. ಹಾಗಾಗಿ ಈ ಕಾಯಿಲೆಗೆ ನಿರ್ದಿಷ್ಟವಾದ ಒಂದೇ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ರೋಗದ ಲಕ್ಷಣಗಳನ್ನು ಆಧರಿಸಿ ವೈದ್ಯರು ಈ ಕೆಳಗಿನ ವಿಧಾನಗಳನ್ನು ಆಯ್ದುಕೊಳ್ಳಬಹುದು:

*ಮಲ್ಟಿಪಲ್ ಸ್ಕ್ಲೆರೋಸಿಸ್ ನ ಆಘಾತಕ್ಕೆ ಲಭ್ಯವಿರುವ ಚಿಕಿತ್ಸೆಗಳು:

ಕಾರ್ಟಿಕೋಸ್ಟೆರಾಯ್ದುಗಳು (Corticosteroids):

ನರಗಳ ಉರಿಯೂತವನ್ನು ಕಡಿಮೆಗೊಳಿಸಲು ಈ ಔಷಧಿಗಳನ್ನು ಬಳಸಲಾಗುತ್ತದೆ.

ಪ್ಲಾಸ್ಮಾಫೆರೆಸಿಸ್ (Plasmapheresis) ಅಥವಾ ಪ್ಲಾಸ್ಮಾ ಎಕ್ಸ್ ಚೇಂಜ್:

ಈ ಚಿಕಿತ್ಸೆಯಲ್ಲಿ ರೋಗಿಯ ರಕ್ತದಲ್ಲಿರುವ ನೀರಿನಂಶ ಅಥವಾ ಪ್ಲಾಸ್ಮಾವನ್ನು ಪ್ರತ್ಯೇಕಿಸಿ ಇದಕ್ಕೆ ಆಲ್ಬುಮಿನ್ ಮಿಶ್ರಣ ಮಾಡಿ ಮತ್ತೆ ದೇಹಕ್ಕೆ ಸೇರಿಸಲಾಗುತ್ತದೆ.

*ಮಲ್ಟಿಪಲ್ ಸ್ಕ್ಲೆರೋಸಿಸ್ ಏರುಹಂತದಲ್ಲಿ ಸಾಗುವುದನ್ನು ತಡೆಯಲು ಲಭ್ಯವಿರುವ ಚಿಕಿತ್ಸೆಗಳು:

PPMS ಇರುವ ರೋಗಿಗಳಿಗೆ ocrelizumab ಎಂಬ ಚಿಕಿತ್ಸೆ ಸಧ್ಯಕ್ಕೆ ಲಭ್ಯವಿರುವ ಏಕಮಾತ್ರ ಮತ್ತು ಅತ್ಯುತ್ತಮ ಚಿಕಿತ್ಸೆಯಾಗಿದೆ. ಈ ಚಿಕಿತ್ಸೆಯ ಮೂಲಕ ರೋಗ ಇನ್ನಷ್ಟು ಉಲ್ಬಣಗೊಳ್ಳುವ ವೇಗ ಅತಿ ನಿಧಾನವಾಗುತ್ತದೆ ಅಥವಾ ಹಾಗೇ ಉಳಿಯಬಹುದು. ಉಳಿದ ಬಗೆಗಳಲ್ಲಿ ರೋಗ ಈಗಿರುವಂತೆಯೇ ಇರುತ್ತದೆ. RRMS ಗೂ ಈ ಚಿಕಿತ್ಸೆಯನ್ನು ನೀಡಬಹುದು.

*relapsing-remitting multiple sclerosisಗೆ ಚಿಕಿತ್ಸೆ:

ಬೀಟಾಇಂಟರ್ ಫೆರಾನ್ ಮತ್ತು ಗ್ಲಾಟಿರಾಮರ್ ಅಸಿಟೇಟ್ (Beta interferons and Glatiramer acetate) ಎಂಬ ಔಷಧಿಗಳನ್ನು ರೋಗಿಯ ಚರ್ಮದ ಅಡಿ ನೀಡಲಾಗುತ್ತದೆ ಹಾಗೂ ಈ ಮೂಲಕ ರೋಗ ಮರುಕಳಿಸುವ ಸಾಧ್ಯತೆಯನ್ನು ಕಡಿಮೆಗೊಳಿಸಲಾಗುತ್ತದೆ.

*ಆಹಾರದ ಮೂಲಕ ನೀಡಲಾಗುವ ಚಿಕಿತ್ಸೆಗಳು

dimethyl fumarate, siponimod, teriflunomide ಹಾಗೂ fingolimod ಮೊದಲಾದ ಔಷಧಿಗಳನ್ನು ಆಹಾರದ ಜೊತೆಗೆ ಸೇವಿಸಲು ನೀಡಲಾಗುತ್ತದೆ ಹಾಗೂ ಈ ಮೂಲಕ ಮರುಕಳಿಸುವಿಕೆಯ ಸಾಧ್ಯತೆಯನ್ನು ಕಡಿಮೆಗೊಳಿಸಲು ಹಾಗೂ ಏರುಗತಿಯನ್ನು ನಿಧಾನಗೊಳಿಸಲು ಸಾಧ್ಯವಾಗುತ್ತದೆ.

5. ಚುಚ್ಚುಮದ್ದಿನ ರೂಪದಲ್ಲಿ ನೀಡಲಾಗುವ ಚಿಕಿತ್ಸೆಗಳು:

Ocrelizumab ಎಂಬ ಔಷಧಿ the primary progression ಮತ್ತು relapse-remitting forms of multiple sclerosis ಎಂಬ ಎರಡೂ ಬಗೆಯ ಕಾಯಿಲೆಗಳಿಗೆ ಸೂಕ್ತವಾಗಿದೆ ಎಂದು ಪ್ರಮಾಣಿಸಲ್ಪಟ್ಟಿದೆ. ಈ ಔಷಧಿಯನ್ನು ಚುಚ್ಚುಮದ್ದಿನ ಮೂಲಕ ನರಗಳಿಗೆ ನೀಡಲಾಗುತ್ತದೆ.

Alemtuzumab: reducing relapses of MS ಎಂಬ ವಿಧಕ್ಕೆ ಈ ಔಷಧಿ ಸೂಕ್ತವಾಗಿದ್ದು ಬಿಳಿರಕ್ತಕಣಗಳಿಂದ ನರಗಳಿಗೆ ಎರಗುತ್ತಿರುವ ಘಾಸಿಯನ್ನು ನಿಗದಿತಗೊಳಿಸಲು ಸಾಧ್ಯವಾಗುತ್ತದೆ.

Natalizumab: ಈ ಔಷಧಿ ಘಾಸಿಗೊಂಡ ರೋಗ ನಿರೋಧಕ ಶಕ್ತಿಗೆ ಸಂಬಂಧಿಸಿದ ಜೀವಕೋಶಗಳು ರಕ್ತಪರಿಚಲನೆಯ ಮೂಲಕ ಮೆದುಳು ಮತ್ತು ಮೆದುಳುಬಳ್ಳಿಗಳಿಗೆ ತಲುಪದೇ ಇರುವಂತೆ ನೋಡಿಕೊಳ್ಳುತ್ತದೆ.

Mitoxantrone: ಈ ಔಷಧಿ ಮಲ್ಟಿಪಲ್ ಸ್ಕ್ಲೆರೋಸಿಸ್ ಗೆ ಅತ್ಯುತ್ತಮವಾಗಿದ್ದರೂ ರಕ್ತದ ಕ್ಯಾನ್ಸರ್ ಎದುರಾಗುವ ಸಾಧ್ಯತೆ ಇರುವುದರಿಂದ ಇದರ ಬಳಕೆಯನ್ನು ನಿಯಂತ್ರಿಸಲಾಗಿದೆ.

ಮಲ್ಟಿಪಲ್ ಸ್ಕ್ಲೆರೋಸಿಸ್ ರೋಗ ಬರದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳು

1. ಸಾಕಷ್ಟು ವಿಶ್ರಾಂತಿಯನ್ನು ಪಡೆಯುತ್ತಿರಬೇಕು.
2. ನಿಯಮಿತವಾಗಿ ವ್ಯಾಯಾಮ ಮಾಡಬೇಕು.
3. ಆರೋಗ್ಯಕರ ಆಹಾರಕ್ರಮವನ್ನು ಅನುಸರಿಸಬೇಕು
4. ಬಿಸಿಲಿಗೆ ಒಡ್ಡಿಕೊಳ್ಳುವುದು ಅಥವಾ ದೇಹದ ತಾಪಮಾನವನ್ನು ಏರಿಸುವ ಉಪಕರಣಗಳಿಂದ ಆದಷ್ಟೂ ದೇಹವನ್ನು ಕಾಪಾಡಿಕೊಂಡು ತಂಪಾಗಿರುವಂತೆ ನೋಡಿಕೊಳ್ಳಬೇಕು

ಮಲ್ಟಿಪಲ್ ಸ್ಕ್ಲೆರೋಸಿಸ್ ಇದ್ದರೆ ಇದರೊಂದಿಗೆ ಹೊಂದಿಕೊಂಡು ಹೋಗಲು ಧನಾತ್ಮಕ ಮನೋಭಾವ ಇರಬೇಕು ಹಾಗೂ ಜೀವನಕ್ರಮ ಹೀಗಿರಲಿ:

*ನಿಮ್ಮ ತೊಂದರೆಗಳನ್ನು ಹಂಚಿಕೊಳ್ಳಿ

ಆತ್ಮೀಯರೊಂದಿಗೆ ತೊಂದರೆಗಳನ್ನು ಹೇಳಿಕೊಳ್ಳುವ ಮೂಲಕ ಮನ ಹಗುರಾಗುತ್ತದೆ.

2. ಈ ತೊಂದರೆ ಇರುವ ಗುಂಪಿಗೆ ಸಹಕಾರ ನೀಡಿ: ನಿಮ್ಮಂತೆಯೇ ಬಾಧಿತರಾಗಿರುವ ಇತರರೊಂದಿಗೆ ಒಡನಾಟವಿಟ್ಟುಕೊಳ್ಳಿ. ಈ ಮೂಲಕ ಸಮಾನವಾದ ತೊಂದರೆಗಳನ್ನು ಹಂಚಿಕೊಳ್ಳುವ ಮೂಲಕ ಈ ರೋಗವನ್ನು ನಿಯಂತ್ರಣದಲ್ಲಿರಿಸಲು ಸುಲಭವಾಗುತ್ತದೆ.ಪ್ರತಿವರ್ಷದ ಮೇ ಮೂವತ್ತನೇ ತಾರೀಖಿನಂದು ವಿಶ್ವ ಮಲ್ಟಿಪಲ್ ಸ್ಕ್ಲೆರೋಸಿಸ್ ದಿನವನ್ನಾಗಿ ಆಚರಿಸಲಾಗುತ್ತದೆ ಹಾಗೂ ವಿವಿಧ ಕಾರ್ಯಕ್ರಮಗಳ ಮೂಲಕ ಈ ರೋಗದ ಬಗ್ಗೆ ಅರಿವನ್ನು ಮೂಡಿಸಲಾಗುತ್ತದೆ.

*ಸಮಾಲೋಚನೆ

ನಿಮ್ಮ ರೋಗದ ಬಗ್ಗೆ ಎಲ್ಲರೊಂದಿಗೆ ಹೇಳಿಕೊಳ್ಳಲು ಇಷ್ಟವಿಲ್ಲದೇ ಇದ್ದರೆ ಖಾಸಗಿಯಾಗಿ ನಿಮ್ಮ ಆಪ್ತರೊಂದಿಗೆ ಮಾತ್ರವೇ ಸಮಾಲೋಚಿಸಿ.

*ಡೈರಿ ಬರೆಯಿರಿ

ನಿಮ್ಮ ಭಾವನೆಗಳನ್ನು ನಿತ್ಯವೂ ಡೈರಿಯಲ್ಲಿ ಬರೆದಿಟ್ಟು ನಿಮ್ಮ ಭಾವನೆಗಳನ್ನು ಇನ್ನೂ ಸ್ಪಷ್ಟವಾಗಿ ವಿವರಿಸಬಹುದು.

*ನಿಮ್ಮ ಜೀವನದ ನಿಯಂತ್ರಣವನ್ನು ಸ್ವತಃ ನಿರ್ವಹಿಸಿ

ಈ ತೊಂದರೆ ಗಂಭೀರವಾಗಿದ್ದರೂ ಆದಷ್ಟೂ ಎಲ್ಲದಕ್ಕೂ ಬೇರೆಯವರ ಮೇಲೆ ಅವಲಂಬಿತರಾಗದೇ ಇರಿ. ನಿಮ್ಮಿಂದ ಸಾಧ್ಯವಾಗುವ ಎಲ್ಲಾ ಕಾರ್ಯಗಳನ್ನು ಸ್ವತಃ ನಿರ್ವಹಿಸಿ, ಆ ಬಳಿಕ ಬದಲಾವಣೆಯನ್ನು ಸ್ವತಃ ಕಾಣುವಿರಿ.

English summary

Multiple Sclerosis: Causes, Symptoms And Treatment

Multiple sclerosis (MS) is a chronic disease that affects the brain and central nervous system of the body. It ruptures myelin (an insulating layer around nerves) of the brain cells and spinal cord and interrupts the signal exchange between the brain and different parts of the body. Eventually, multiple sclerosis can cause permanent damage to the nerve cells. Some people will experience mild symptoms while others will experience severe symptoms. Its effect depends upon the amount of nerve damage and the area of the brain where nerves are affected.
X
Desktop Bottom Promotion