For Quick Alerts
ALLOW NOTIFICATIONS  
For Daily Alerts

ಮರೆಗುಳಿತನ: ಕಾರಣಗಳು, ಪತ್ತೆ ಹಚ್ಚುವಿಕೆ ಮತ್ತು ಚಿಕಿತ್ಸೆ

|

ಇತ್ತೀಚೆಗೆ ನಿಮಗೆ ಹಿಂದಿನ ದಿನಗಳಿಗಿಂತಲೂ ಮರೆವು ಹೆಚ್ಚಾಗಿದೆ ಎಂದೆನ್ನಿಸುತ್ತಿದೆಯಯೇ? ಹೌದು ಎಂದಾದರೆ ನಿಮ್ಮ ಮರೆಗುಳಿತನಕ್ಕೆ ಸಾಮಾನ್ಯವಾಗಿರುವ ಅಲ್ಜೀಮರ್ಸ್ ಕಾಯಿಲೆಯ ಹೊರತಾಗಿಯೂ ಕೆಲವು ಅಚ್ಚರಿ ಮೂಡಿಸುವ ಕಾರಣಗಳಿರಬಹುದು. ಮರೆಗುಳಿತನ ಸಾಮಾನ್ಯ ಹಾಗೂ ಪ್ರತಿಯೊಬ್ಬರಿಗೂ ಮರೆವಿನ ತೊಂದರೆ ಇದ್ದೇ ಇರುತ್ತದೆ. ಆದರೆ ಮರೆಗುಳಿತನವನ್ನು ಪ್ರತಿಯೊಬ್ಬರಲ್ಲಿಯೂ ಒಂದೇ ಮಾನದಂಡದಲ್ಲಿ ಅಳೆಯಲು ಸಾಧ್ಯವಿಲ್ಲ. ಜಾಣಮರೆವಿನ ಹೊರತಾಗಿ ಕೆಲವರಲ್ಲಿ ಮರೆವು ಅಲ್ಪಮಟ್ಟಿಗಿದ್ದರೆ ಅಲ್ಜೀಮರ್ಸ್ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳಲ್ಲಿ ಅತಿ ಹೆಚ್ಚು ಇರುತ್ತದೆ. ಮರೆವು ವಯಸ್ಸಿನೊಂದಿಗೇ ಹೆಚ್ಚುವುದೂ ಸಾಮಾನ್ಯ.

ಒಂದು ವೇಳೆ ಮರೆಗುಳಿತನದಿಂದ ನಿಮ್ಮ ನಿತ್ಯ ಜೀವನದ ಚಟುವಟಿಕೆಗಳೇ ಬಾಧೆಗೊಳಗಾಗಿದ್ದರೆ ಮೊದಲಾಗಿ ನೀವು ನಿಮ್ಮ ವೈದ್ಯರನ್ನು ಕಾಣುವುದು ಅವಶ್ಯವಾಗಿದೆ. ಏಕೆಂದರೆ ಅಲ್ಪಾವಧಿಯ ಮರೆವು, ದೀರ್ಘಾವಧಿಯ ಮರೆವು ಹಾಗೂ ಪೂರ್ಣವಾಗಿ ಮರೆಯುವುದು ಇವೆಲ್ಲವೂ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ ಹಾಗೂ ಕೆಲವು ಪರೋಕ್ಷ ಕಾರಣಗಳಿಂದಲೂ ಎದುರಾಗಬಹುದು. ಹಾಗಾಗಿ ಚಿಕ್ಕ ವಯಸ್ಸಿನಲ್ಲಿಯೇ ಅಲ್ಪಾವಧಿಯ ಮತ್ತು ದೀರ್ಘಾವಧಿಯ ಮರೆಗುಳಿತನಕ್ಕೆ ಸೂಕ್ತ ಚಿಕಿತ್ಸೆ ಪಡೆದುಕೊಂಡರೆ ಈ ತೊಂದರೆಯಿಂದ ಶಮನ ಪಡೆಯಲು ಸುಲಭವಾಗುತ್ತದೆ.

Memory Loss

ಮರೆಗುಳಿತನದ ಬಗೆಗಳು

ಮರೆಗುಳಿತನದ ವ್ಯಾಪ್ತಿ ವಿಶಾಲವಾಗಿದ್ದರೂ ವೈದ್ಯವಿಜ್ಞಾನದಲ್ಲಿ ಇದನ್ನು ಎರಡು ಪ್ರಮುಖ ಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲನೆಯದು ಅಲ್ಪಾವಧಿಯ ಮರೆಗುಳಿತನ ಹಾಗೂ ಎರಡನೆಯದು ದೀರ್ಘಾವಧಿಯ ಮರೆಗುಳಿತನ. ಅಲ್ಪಾವಧಿಯ ಮರೆಗುಳಿತನ: ಈ ತೊಂದರೆ ಇರುವ ವ್ಯಕ್ತಿಗಳು ಇತ್ತೀಚೆಗೆ ಘಟಿಸಿದ ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಅಸಮರ್ಥರಾಗಿರುತ್ತಾರೆ. ಈ ವ್ಯಕ್ತಿಗಳಿಗೆ ತಮ್ಮ ಜೀವನದ ಇಪ್ಪತ್ತು ವರ್ಷ ಹಿಂದಿನ ನೆನಪುಗಳೆಲ್ಲವೂ ಸ್ಪಷ್ಟವಾಗಿ ನೆನಪಿರುತ್ತವೆ ಆದರೆ ನಿನ್ನೆ ಮೊನ್ನೆಯ ವಿಷಯಗಳು ನೆನಪಿರುವುದಿಲ್ಲ. ಸುಮಾರು ಹತ್ತು ನಿಮಿಷ ಹಿಂದೆ ನಡೆದ ಪ್ರಮುಖ ವಿಷಯವನ್ನು ಈಗ ಕೇಳಿದಾಗ ಇವರು ಉತ್ತರಿಸಲು ತಡವರಿಸುತ್ತಾರೆ.

ದೀರ್ಘಾವಧಿಯ ಮರೆಗುಳಿತನ. ಈ ತೊಂದರೆ ಇರುವ ವ್ಯಕ್ತಿಗಳಿಗೆ ಯಾವ ಸಮಯದಲ್ಲಿ ಯಾವ ವಿಷಯ ಅಗತ್ಯವಾಗಿ ನೆನಪಾಗಬೇಕೋ ಆಗ ಆ ವಿಷಯ ನೆನಪಾಗುವುದೇ ಇಲ್ಲ. ಕಾರ್ಯಕ್ರಮದ ಸಮಯ, ಕೆಲವು ಅಗತ್ಯ ಮಾಹಿತಿಗಳು, ಮನೆಗೆ ಹೋಗುವ ದಾರಿ ಮೊದಲಾದವುಗಳನ್ನು ಇವರು ಅಗತ್ಯವಾಗಿ ಬೇಕಾದಾಗ ಮರೆತಿರುತ್ತಾರೆ. ಮೂಲತಃ ಇವರಿಗೆ ನಿತ್ಯದ ಸಾಮಾನ್ಯ ಚಟುವಟಿಕೆಗಳನ್ನು ನಿರ್ವಹಿಸುವುದೇ ಮರೆತು ಹೋಗುತ್ತಿರುತ್ತದೆ.

Most Read: ವ್ಯಾಯಾಮವು ಹೃದಯ ರೋಗಿಯ ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆಯಂತೆ

Memory Loss

ಮರೆಗುಳಿತನಕ್ಕೆ ಕಾರಣಗಳು

ಈ ತೊಂದರೆಗೆ ಹಲವಾರು ಕಾರಣಗಳಿವೆ. ಇವುಗಳಲ್ಲಿ ಪ್ರಮುಖವಾದುದನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ:

ಕೆಲವು ಔಷಧಿಗಳು: ಖಿನ್ನತಾನಿವಾರಕ, ಉದ್ವೇಗ ನಿವಾರಕ, ಸ್ನಾಯುಗಳ ಸೆಡೆತ ನಿವಾರಿಸುವ, ಅಲರ್ಜಿ ನಿವಾರಕ, ಪ್ರಜ್ಞೆ ತಪ್ಪಿಸಲು ಬಳಸುವ, ನಿದ್ದೆಯನ್ನು ಪ್ರಚೋದಿಸುವ ಹಾಗೂ ಶಸ್ತ್ರಚಿಕಿತ್ಸೆಯ ಬಳಿಕ ನೀಡಲಾಗುವ ನೋವು ನಿವಾರಕ ಔಷಧಿಗಳು ಮರೆಗಳುತನಕ್ಕೆ ನೇರವಾಗಿ ಕಾರಣವಾಗುತ್ತವೆ.

ಮದ್ಯಪಾನ, ತಂಬಾಕು ಅಥವಾ ಮಾದಕಪದಾರ್ಥ ಸೇವನೆ: ಸ್ಮರಣಶಕ್ತಿ ಕುಂದಲು ಧೂಮಪಾನ ಪ್ರಮುಖ ಕಾರಣವಾಗಿದೆ. ಏಕೆಂದರೆ ಶ್ವಾಸಕೋಶದಿಂದ ಮೆದುಳಿಗೆ ತಲುಪಬೇಕಾದ ಆಮ್ಲಜನಕದ ಮಟ್ಟವನ್ನು ಇದು ತಗ್ಗಿಸುತ್ತದೆ.

ವಿಟಮಿನ್ ಬಿ-12 ಕೊರತೆ

ಸಾಕಷ್ಟು ನಿದ್ದೆ ಬಾರದಿರುವಿಕೆ:

*ಕ್ಯಾನ್ಸರ್ ಗೆ ನೀಡಲಾಗುವ ಕೆಲವು ಚಿಕಿತ್ಸಾ ವಿಧಾನಗಳು: ಖೀಮೋಥೆರಪಿ, ವಿಕಿರಣ ಚಿಕಿತ್ಸೆ, ಅಸ್ಥಿಮಜ್ಜೆ ಬದಲಿ ಚಿಕಿತ್ಸೆ, ತಲೆಗೆ ಬಿದ್ದ ಏಟು ಅಥವಾ ಹಿಂದೆ ಎದುರಾಗಿದ್ದ ಢಿಕ್ಕಿ, ಆಘಾತ.

*ಥೈರಾಯ್ಡ್ ಗ್ರಂಥಿಯ ಕ್ಷಮತೆ ಉಡುಗಿರುವುದು

*ಮೆದುಳಿನಲ್ಲಿ ಗಡ್ಡೆ ಅಥವಾ ಸೋಂಕು

*ಮಾನಸಿಕ ಆಘಾತ

*ಅತಿಯಾದ ಮಾನಸಿಕ ಒತ್ತಡ

*ಹೃದಯಾಘಾತ

*ಮೆದುಳಿನ ಶಸ್ತ್ರಚಿಕಿತ್ಸೆ ಅಥವಾ ಹೃದಯದ ಬೈಪಾಸ್ ಶಸ್ತ್ರಚಿಕಿತ್ಸೆ

Memory Loss

ಮಾನಸಿಕ ತೊಂದರೆಗಳು: ಉದಾಹರಣೆಗೆ

*ಖಿನ್ನತೆ, ದ್ವಿವ್ಯಕ್ತಿತ್ವ ತೊಂದರೆ (bipolar disorder),ಸ್ಕೀಜೋಫ್ರೀನಿಯಾ ಹಾಗೂ ವಿಷಯಕ್ಕನುಗುಣವಾಗಿ ಮಾತನಾಡುವುದನ್ನು ಮರೆಯುವ ತೊಂದರೆ (dissociative disorder).ಕೆಲವು ಬಗೆಯ ಸೆಡೆತಗಳು, Transient ischemic attack (TIA) ಎಂಬ ಆಘಾತ, ಎಲೆಕ್ಟ್ರೋ-ಕನ್ವಲ್ಸಿವ್ ಚಿಕಿತ್ಸೆ, ಹಂಟಿಂಗ್ಸನ್ಸ್ ಕಾಯಿಲೆ ಎಂಬ ನರವ್ಯವಸ್ಥೆ ಕುಸಿಯುವ ಕಾಯಿಲೆ,

*ಪಾರ್ಕಿನ್ಸನ್ಸ್ ಕಾಯಿಲೆ ಅಥವಾ ಮಲ್ಟಿಪಲ್ ಸ್ಕ್ಲೆರೋಸಿಸ್,

*ಮೈಗ್ರೇನ್,

*ತೀವ್ರ ಮರೆಗುಳಿತನ ಅಥವಾ Dementia.

ಈ ಮೇಲಿನ ಪ್ರಮುಖ ಕಾರಣಗಳ ಹೊರತಾಗಿ, ಕೆಲವು ಬಗೆಯ ಸೋಂಕುಗಳೂ ಮರೆಗುಳಿತನಕ್ಕೆ ಕಾರಣವಾಗುತ್ತವೆ. ಉದಾಹರಣೆಗೆ ಹೆಚ್ ಐ ವಿ ಸೋಂಕು, ಕ್ಷಯ ಹಾಗೂ ಸಿಫಿಲಿಸ್ ರೋಗಗಳು ಮೆದುಳನ್ನು ಬಾಧಿಸುತ್ತವೆ.

ಯಾವಾಗ ವೈದ್ಯರನ್ನು ಕಾಣಬೇಕು?

ಒಂದು ವೇಳೆ ನಿಮ್ಮ ನಿತ್ಯದ ಕೆಲಸಗಳೆಲ್ಲವೂ ಮೆರಗುಳಿತನದ ಪ್ರಭಾವದಿಂದ ಆಗದೇ ಹೋಗುತ್ತಿದ್ದಲ್ಲಿ, ಮಾಡಬೇಕಾದ ಕೆಲಸ ಮಾಡದೇ ಹೋಗಿ ಮಾಡಬಾರದ ಕೆಲಸವನ್ನು ಮಾಡುತ್ತಿದ್ದರೆ, ಸುರಕ್ಷತೆಯೇ ಪಣಕ್ಕಿಡುವಂತಾದರೆ (ಉದಾಹರಣೆಗೆ ಮರೆತು ವಾಹನಸಂಚಾರವಿರುವ ರಸ್ತೆಯ ಮಧ್ಯೆ ಹೋಗಿ ನಿಂತರೆ), ಸಮಾಜದ ಸ್ಥಾನಕ್ಕೆ ಕುಂದು ಎದುರಾಗುವಂತಾದರೆ, ನೀವು ವೈದ್ಯರನ್ನು ಖಂಡಿತವಾಗಿಯೂ ಕಾಣಬೇಕು. ಒಂದು ವೇಳೆ ಈ ಬಗ್ಗೆ ಅಲಕ್ಷ್ಯ ತೋರಿದರೆ ಹಾಗೂ ಚಿಕಿತ್ಸೆ ಪಡೆಯದೇ ಹೋದರೆ ಇದು ದಿನೇ ದಿನೇ ಹೆಚ್ಚುತ್ತಾ ಹೋಗುತ್ತದೆ.

Most Read: ನಿಮ್ಮ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುವ 18 ಅದ್ಭುತ ಆಹಾರಗಳು

Memory Loss

ಮೆರೆಗುಳಿತನದ ಪತ್ತೆ ಹಚ್ಚುವಿಕೆ

ಯಾವಾಗ ನಿಮ್ಮ ಹಿಂದಿನ ಕ್ಷಮತೆಗಿಂತಲೂ ಈಗ ನಿಮ್ಮ ಕ್ಷಮತೆ ಸ್ಮರಣಶಕ್ತಿಯ ಕೊರತೆಯಿಂದಾಗಿ ಕುಸಿದಿದೆ ಎಂದೆನಿಸುತ್ತದೆಯೋ ಅಥವಾ ನಿತ್ಯದ ಕೆಲಸಗಳನ್ನು ಹಿಂದಿನ ದಿನಗಳಲ್ಲಿ ಮಾಡುವಷ್ಟು ಸುಲಭವಾಗಿ ಮಾಡಲು ಸಾಧ್ಯವಾಗುತ್ತಿಲ್ಲವೋ ಆಗ ತಕ್ಷಣವೇ ವೈದ್ಯರನ್ನು ಕಂಡು ತಪಾಸಣೆಗೆ ಒಳಗಾಗಬೇಕು. ಒಂದು ವೇಳೆ ಈ ತೊಂದರೆ ನೀವು ಅಂದುಕೊಂಡಿದ್ದಕ್ಕಿಂತಲೂ ವಿಷಮವಾಗಿದ್ದರೆ ವೈದ್ಯರು ಕೆಲವು ಪರೀಕ್ಷೆಗಳನ್ನು ನಡೆಸುತ್ತಾರೆ. ದೈಹಿಕ ಪರೀಕ್ಷೆ, ನರವ್ಯವಸ್ಥೆಯ ಪರೀಕ್ಷೆ ಹಾಗೂ ಕೆಲವು ಮನೋವೈಜ್ಞಾನಿಕ ಪ್ರಶ್ನಾವಳಿಗಳ ಮೂಲಕ ನಿಮ್ಮ ಸ್ಥಿತಿಯನ್ನು ಅರಿಯಲು ಯತ್ನಿಸುತ್ತಾರೆ. ದೈಹಿಕ ಪರೀಕ್ಷೆಯಲ್ಲಿ ವೈದ್ಯರು ರೋಗಿಯ ಆರೋಗ್ಯದ ಇತಿಹಾಸವನ್ನು ಪಡೆದುಕೊಳ್ಳುತ್ತಾರೆ. ಇದರಲ್ಲಿ ಹಿಂದಿನ ಚಿಕಿತ್ಸೆಯಲ್ಲಿ ಪಡೆಯಲಾದ ಔಷಧಿಗಳು ಹಾಗೂ ಸುಲಭವಾಗಿ ಸಿಗುವ ಔಷಧಿಗಳ ಸೇವನೆ, ಹಿಂದಿನ ದಿನಗಳಲ್ಲಿ ಎದುರಾಗಿದ್ದ ಕಾಯಿಲೆಗಳು ಹಾಗೂ ಇತರ ಆರೋಗ್ಯಸಂಬಂಧಿ ಮಾಹಿತಿಗಳನ್ನು ಪಡೆದುಕೊಳ್ಳುತ್ತಾರೆ. ಜೊತೆಗೇ ರಕ್ತ ಮತ್ತು ಮೂತ್ರಪರೀಕ್ಷೆಯನ್ನೂ ನಡೆಸಲಾಗುತ್ತದೆ.

ಜೊತೆಗೇ ಸ್ಮರಣಶಕ್ತಿಯ ಪರೀಕ್ಷೆ, ಸರಳ ಗಣಿತದ ಪ್ರಶ್ನೆಗಳನ್ನು ಪರಿಹರಿಸುವುದು, ಲೆಕ್ಕ ಮಾಡುವುದು ಹಾಗೂ ಭಾಷಾಜ್ಞಾನ (ಮಾನಸಿಕ ಕ್ಷಮತೆಯ ಪರೀಕ್ಷೆಗಳು) ಮೊದಲಾದವುಗಳನ್ನು ನಡೆಸಲಾಗುತ್ತದೆ. ಅಗತ್ಯವೆನಿಸಿದರೆ ಸಿಟಿ ಸ್ಕ್ಯಾನ್ (ಮೆದುಳಿನಲ್ಲಿ ವಯಸ್ಸಿಗನುಗುಣವಾದ ಬದಲಾವಣೆಗಳನ್ನು ಪತ್ತೆ ಹಚ್ಚುವುದು) ಸಹಾ ನಡೆಸಬಹುದು. ಇವುಗಳ ಹೊರತಾಗಿ ವೈದ್ಯರು ಪರಿಗಣಿಸುವ ಪರೀಕ್ಷೆಗಳೆಂದರೆ:

  • ಸೆರೆಬ್ರಲ್ ಆಂಜಿಯೋಗ್ರಫಿ (ಮೆದುಳಿನಲ್ಲಿ ರಕ್ತಪ್ರವಾಹ ಹೇಗೆ ಸಾಗುತ್ತಿದೆ ಎಂಬುದನ್ನು ಎಕ್ಸ್ ರೇ ಮೂಲಕ ಪರಿಶೀಲಿಸುವ ಪರೀಕ್ಷೆ)
  • ಸ್ಪೈನಲ್ ಟ್ಯಾಪ್ (ಮೆದುಳುಬಳ್ಳಿಯ ಕಾರ್ಯಕ್ಷಮತೆಯ ಪರೀಕ್ಷೆ)
  • ಇಇಜಿ (ಎಲೆಕ್ಟ್ರೋ ಎನ್ಸೆಫೆಲೋಗ್ರಾಂ) ಮೆದುಳಿನಲ್ಲಿ ನೆಡೆಯುತ್ತಿರುವ ವಿದ್ಯುತ್ ಚಟುವಟಿಕೆಗಳನ್ನು ಪರಿಶೀಲಿಸುವ ಪರೀಕ್ಷೆ.

ಮರೆಗುಳಿತನಕ್ಕೆ ಚಿಕಿತ್ಸೆ

ಮರೆಗುಳಿತನಕ್ಕೆ ನಿಖರವಾದ ಕಾರಣವನ್ನು ಕಂಡುಕೊಂಡ ಬಳಿಕವೇ ಸೂಕ್ತವಾದ ಚಿಕಿತ್ಸೆಯನ್ನು ವೈದ್ಯರೇ ನಿರ್ಧರಿಸುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ, ಚಿಕಿತ್ಸೆ ಪಡೆಯುವ ಮೂಲಕ ಸ್ಮರಣಶಕ್ತಿ ಹಿಂದಿಗಿಂತಲೂ ಉತ್ತಮಗೊಳ್ಳುವುದು ಕಂಡುಬಂದಿದೆ. ಒಂದು ವೇಳೆ ಔಷಧಿಗಳ ಪ್ರಭಾವದಿಂದ ಮರೆಗುಳಿತನ ಎದುರಾಗಿದ್ದರೆ ವೈದ್ಯರು ಇದಕ್ಕೆ ಬದಲಿ ಔಷಧಿಗಳನ್ನು ನೀಡುತ್ತಾರೆ. ಖಿನ್ನತೆ ಮೊದಲಾದ ಮಾನಸಿಕ ತೊಂದರೆಗಳು ಕಾರಣವಾಗಿದ್ದರೆ ಇದಕ್ಕೆ ಮಾನಸಿಕ ಚಿಕಿತ್ಸೆಗಳನ್ನು ಪಡೆದುಕೊಳ್ಳಬೇಕಾಗುತ್ತದೆ. ಒಂದು ವೇಳೆ ಪೋಷಕಾಂಶಗಳ ಕೊರತೆಯಿಂದಾಗಿ ಎದುರಾಗಿದ್ದರೆ ಇದಕ್ಕೆ ಸೂಕ್ತ ಪ್ರಮಾಣದ ಹೆಚ್ಚುವರಿ ಔಷಧಿ ಮತ್ತು ಆಹಾರಗಳನ್ನು ಸೇವಿಸಲು ಸಲಹೆ ಮಾಡಲಾಗುತ್ತದೆ. ಇತರ ಚಿಕಿತ್ಸೆಗಳೆಂದರೆ ದೈಹಿಕ ಚಿಕಿತ್ಸೆ, ಕೆಲವು ವಿಶಿಷ್ಟ ಔಷಧಿಗಳು ಹಾಗೂ ಈ ತೊಂದರೆಗೆ ಕಾರಣವಾದ ಸಂದರ್ಭವನ್ನು ನಿರ್ವಹಿಸುವುದು ಮೊದಲಾದವುಗಳಾಗಿವೆ.

ಅಗತ್ಯ ಸಲಹೆ

ಮರೆಗುಳಿತನ ಯಾವುದೇ ಮಟ್ಟದಲ್ಲಿರಲಿ, ವೈದ್ಯರನ್ನು ಕಾಣುವುದು ಅವಶ್ಯವಾಗಿದೆ.

ಮರೆಗುಳಿತನಕ್ಕೆ ಚಿಕಿತ್ಸೆಯನ್ನು ಸ್ವತಃ ನಿರ್ವಹಿಸಿಕೊಳ್ಳುವ ಅವಕಾಶವಿದ್ದರೂ ಇದಕ್ಕೆ ಆಸ್ಪದ ನೀಡದೇ ಕೇವಲ ವೈದ್ಯಕೀಯ ತಜ್ಞರಿಂದ ಮಾತ್ರವೇ ತಪಾಸಣೆಗೊಳಪಡಬೇಕು.

Memory Loss

ಸ್ಮರಣಶಕ್ತಿ ಕುಂದಿದ್ದರೆ ನಿರ್ವಹಣೆ ಹೇಗೆ?

ಮರೆಗುಳಿತನವನ್ನು ಸೂಕ್ತ ಚಿಕಿತ್ಸೆಗಳಿಂದ ಸರಿಪಡಿಸಲು ಸಾಕಷ್ಟು ಸಮಯಾವಕಾಶ ಬೇಕಾದುದರಿಂದ ಅಲ್ಲಿಯವರೆಗೆ ಈ ಸ್ಥಿತಿಯನ್ನು ಒಪ್ಪಿಕೊಂಡು ಜೀವನದಲ್ಲಿ ಅಗತ್ಯ ಬದಲಾವಣೆಗಳನ್ನು ಅಳವಡಿಸಿಕೊಂಡು ನಿರ್ವಹಿಸುವುದೇ ಜಾಣತನದ ಕ್ರಮವಾಗಿದೆ. ಇವುಗಳಲ್ಲಿ ಪ್ರಮುಖವಾದವು ಎಂದರೆ:

* ನಿಮ್ಮ ಮನೆ ಹಾಗೂ ಕಾರ್ಯಸ್ಥಳವನ್ನು ಒಪ್ಪಓರಣವಾಗಿ, ಯಾವುದೇ ಅಡಚಣೆಗಳಿಲ್ಲದಂತೆ ಇರಿಸಿ

* ನಿಮ್ಮ ಕ್ಯಾಲೆಂಡರ್ ಮತ್ತು ಅಡ್ರೆಸ್ ವಿವರಗಳು ಸದಾ ಇಂದಿನ ದಿನಕ್ಕೆ ನಿಖರವಾಗುವಂತೆ ನಿರ್ವಹಿಸಿ.

* ದೈಹಿಕ ಚಟುವಟಿಕೆಯನ್ನು ಬೇಡುವ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಿ

* ನೀವು ಮಾಡಬೇಕಾದ ಕೆಲಸಗಳನ್ನು ಪಟ್ಟಿ ಮಾಡಿ

* ಈ ಪಟ್ಟಿಯನ್ನು ಸದಾ ನಿಮ್ಮೊಂದಿಗಿರಿಸಿ ಆ ಪ್ರಕಾರವೇ ಕಾರ್ಯನಿರ್ವಹಿಸಿ

* ನೀವು ಸೇವಿಸಬೇಕಾದ ಔಷಧಿಗಳನ್ನು ಪಟ್ಟಿ ಮಾಡಿ ಯಾವಾಗ ಯಾವ ಔಷಧಿ ತೆಗೆದುಕೊಳ್ಳಬೇಕೆಂದು ಸಮೂದಿಸಿ, ಆ ಪ್ರಕಾರವೇ ಸೇವಿಸಿ.

English summary

Memory Loss: Causes, Diagnosis And Treatment

In the case of memory loss affecting your daily life, it is time that you consult a doctor. Because, short-term memory loss, long-term memory loss and forgetfulness all vary in its nature and its effect on your daily life, therefore, getting treatment at an early stage will help manage the condition
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more