For Quick Alerts
ALLOW NOTIFICATIONS  
For Daily Alerts

ಅಸ್ಸಾಂನಲ್ಲಿ ಜಪಾನೀಸ್ ಎನ್ಸಫಲೈಟಿಸ್: ಈ ಕಾಯಿಲೆ ಬಗ್ಗೆ ನೀವು ತಿಳಿದಿರಬೇಕಾದ ವಿಷಯಗಳು

|

ಅಸ್ಸಾಂನಲ್ಲಿ ಇತ್ತೀಚೆಗೆ ಆವರಿಸಿರುವ Japanese encephalitis ಎಂಬ ಕಾಯಿಲೆಗೆ ಇದುವರೆಗೆ ನಲವತ್ತೆಂಟು ಜನರು ಸಾವನ್ನಪ್ಪಿದ್ದಾರೆ. ಕಾಯಿಲೆ ಹರಡುವುದನ್ನು ತಪ್ಪಿಸಲು ಹಾಗೂ ನಿಯಂತ್ರಿಸಲು ಅಸ್ಸಾಂ ರಾಜ್ಯ ಸರ್ಕಾರ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಅಸ್ಸಾಂ ರಾಜ್ಯದ ಉತ್ತರ ಭಾಗದ ಜಿಲ್ಲಿಗಳಾದ ಗೋಲಾಘಾಟ್, ಜೊರ್ಹಾತ್, ದಿಬ್ರುಗಡ್, ಲಖಿಂಪುರ್ ಮತ್ತು ಅಸ್ಸಾಂ ನ ದಕ್ಷಿಣ ಭಾಗದ ಜಿಲ್ಲೆಗಳಾದ ಕಮ್ರುಪ್ ಭಾಗದಲ್ಲಿ ಸೊಳ್ಳೆಗಳ ಮೂಲಕ ಹರಡುವ ಈ ಸಾಂಕ್ರಾಮಿಕ ರೋಗ ಹೆಚ್ಚಾಗಿ ಕಾಣಿಸಿಕೊಂಡಿದೆ.

ಜಪಾನೀಸ್ ಎನ್ಸಫಲೈಟಿಸ್ ಎಂದರೇನು?
ಸೊಳ್ಳೆಗಳ ಮೂಲಕ ಹರಡುವ ವೈರಸ್ ನಿಂದ ಈ ಕಾಯಿಲೆ ಒಬ್ಬರಿಂದೊಬ್ಬರಿಗೆ ಹರಡುತ್ತದೆ. ವಿಶ್ವ ಆರೋಗ್ಯ ಸಂಸ್ಥೆ World Health Organization (WHO) ಪ್ರಕಾರ ಏಷ್ಯಾ ಖಂಡದಲ್ಲಿ ವ್ಯಾಪಕವಾಗಿರುವ ಈ ರೋಗದ ಪ್ರಕರಣಗಳು ಇದುವರೆಗೆ ಸುಮಾರು ಪ್ರತಿವರ್ಷ 68,000 ರಷ್ಟು ದವಾಖಾನೆಗಳಲ್ಲಿ ದಾಖಲಿಸಲ್ಪಟ್ಟಿವೆ. ಸೊಳ್ಳೆಯ ಕಚ್ಚುವಿಕೆಯಿಂದ ರೋಗಿಯ ರಕ್ತಕ್ಕೆ ಫ್ಲಾವಿವೈರಿಡೇ (Flaviviridae) ಎಂಬ ಕೀಟಪ್ರಜಾತಿಗೆ ಸೇರಿದ ಫ್ಲಾವಿವೈರಸ್ (Flavivirus) ಎಂಬ ವೈರಸ್ ದಾಟಿಕೊಳ್ಳುತ್ತದೆ. ಹಳದಿ ಜ್ವರ ಮತ್ತು ಡೆಂಘಿ (dengue) ರೋಗದ ಹರಡುವಿಕೆಗೆ ಕಾರಣವಾದ ವೈರಸ್ಸುಗಳು ಸಹಾ ಇದೇ ಕೀಟಪ್ರಜಾತಿಗೆ ಸೇರಿವೆ.

ಜಪಾನೀಸ್ ಎನ್ಸಫಲೈಟಿಸ್ ರೋಗ ಆವರಿಸಲು ಕಾರಣವೇನು?
ನಮ್ಮ ಮಲೆನಾಡಿನಲ್ಲಿ ಮಲೇರಿಯಾ ರೋಗ ಹರಡಲು ಕಾರಣವಾಗಿರುವ ಕ್ಯೂಲೆಕ್ಸ್ (Culex) ಎಂಬ ಸೊಳ್ಳೆಯೇ ಈ ವೈರಸ್ಸನ್ನೂ ಕಚ್ಚುವಿಕೆಯ ಮೂಲಕ ಒಬ್ಬರಿಂದೊಬ್ಬರಿಗೆ ಹರಡುತ್ತದೆ. ಈ ಸೊಳ್ಳೆ ಜಾನುವಾರುಗಳನ್ನೂ ಕಡಿಯುವ ಕಾರಣ ವೈರಸ್ ನ ಸೋಂಕು ಜಾನುವಾರುಗಳಿಗೂ ಹರಡಬಹುದು. ಸಾಮಾನ್ಯವಾಗಿ ಕಾಡಿನ ಹಕ್ಕಿಗಳು ಮತ್ತು ಸಾಕು ಹಂದಿಗಳ ದೇಹದಲ್ಲಿ ಈ ವೈರಸ್ಸು ಆಶ್ರಯ ಪಡೆದು ಸಂಖ್ಯಾಭಿವೃದ್ದಿಗೊಳಿಸುತ್ತದೆ ಹಾಗೂ ಇವೇ ಬಹುತೇಕ ಜಪಾನೀಸ್ ಎನ್ಸಫಲೈಟಿಸ್ ಕಾಯಿಲೆ ಹರಡುವ ವೈರಸ್ಸುಗಳಿಗೆ ಮೂಲತಾಣಗಳಾಗಿವೆ. ಇವುಗಳ ರಕ್ತ ಕುಡಿದು ಮನುಷ್ಯರು ಮತ್ತು ಇತರ ಜಾನುವಾರುಗಳನ್ನು ಕಡಿಯುವ ಸೊಳ್ಳೆಗಳು ರೋಗ ಹರಡುವಿಕೆಯಲ್ಲಿ ಮಧ್ಯವರ್ತಿಗಳ ಪಾತ್ರ ವಹಿಸುತ್ತವೆ.

ಜಪಾನೀಸ್ ಎನ್ಸಫಲೈಟಿಸ್ ರೋಗದ ಲಕ್ಷಣಗಳು
ಈ ರೋಗ ಆವರಿಸಿದ ತಕ್ಷಣವೇ ಯಾವುದೇ ಲಕ್ಷಣಗಳು ಗೋಚರವಾಗುವುದೇ ಇಲ್ಲ. ಒಂದು ವೇಳೆ ಪ್ರಕಟಗೊಂಡರೂ ವ್ಯಕ್ತಿಯಿಂದ ವ್ಯಕ್ತಿಗೆ ಇದು ಐದರಿಂದ ಹದಿನೈದು ದಿನಗಳ ಬಳಿಕವಷ್ಟೇ ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತವೆ. ಸಾಮಾನ್ಯವಾಗಿ ಜಪಾನೀಸ್ ಎನ್ಸಫಲೈಟಿಸ್ ರೋಗಪೀಡಿತ ವ್ಯಕ್ತಿಗೆ ತಲೆನೋವು ಮತ್ತು ಚಿಕ್ಕದಾಗಿ ಜ್ವರ ಮಾತ್ರ ಕಾಣಿಸಿಕೊಳ್ಳುವುದರಿಂದ ಹೆಚ್ಚಿನವರು ಈ ಲಕ್ಷಣಗಳನ್ನು ಅಲಕ್ಷಿಸುತ್ತಾರೆ. ಆದರೆ ಯಾವಾಗ ಈ ಸೋಂಕು ಉಲ್ಬಣಗೊಳ್ಳಲು ಪ್ರಾರಂಭವಾಯಿತೋ, ಈ ಕೆಳಗಿನ ಲಕ್ಷಣಗಳು ಕಾಣಿಸತೊಡಗುತ್ತವೆ.
* ತಲೆನೋವು
* ಜ್ವರ
* ವಾಕರಿಕೆ
* ವಾಂತಿ
* ನಡುಕ
* ಕುತ್ತಿಗೆ ಪೆಡಸಾಗುವುದು
* ಕೆಲವು ಅಂಗಗಳು ಸಂವೇದನೆ ಕಳೆದುಕೊಂಡು ಲಕ್ವ ಹೊಡೆದ ಲಕ್ಷಣಗಳು ತೋರುವುದು
ಮೆದುಳಿಗೆ ಸಂಬಂಧಿಸಿದ ಕೆಲವು ಕಾರ್ಯಗಳೂ ಈ ಸೋಂಕಿನಿಂದ ಪ್ರಭಾವಿತಗೊಳ್ಳಬಹುದು. ಪರಿಣಾಮವಾಗಿ ರೋಗಿ ಕೋಮಾ ಸ್ಥಿತಿಗೆ ತಲುಪಬಹುದು, ಮಂದಬುದ್ದಿ, ಮಾಡುವ ಕೆಲಸಗಳು ತಾಳಮೇಳ ಕಳೆದುಕೊಳ್ಳುವುದು ಹಾಗೂ ಮಕ್ಕಳಲ್ಲಿ ಕನವರಿಕೆಗಳು ಕಂಡುಬರುತ್ತವೆ.

ಈ ಲಕ್ಷಣಗಳು ಗಂಭೀರವಾಗಿದ್ದು ರೋಗಿಗೆ ಜೀವನಪರ್ಯಂತ ಕಾಡಬಹುದಾದ ವೈಕಲ್ಯಗಳನ್ನು ತಂದೊಡ್ಡ ಬಲ್ಲುದು. ಕಿವುಡು, ದೇಹದ ಒಂದು ಭಾಗದಲ್ಲಿ ಶಾಶ್ವತ ನಿಃಶಕ್ತಿ ಹಾಗೂ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗದೇ ಹೋಗುವುದು ಮೊದಲಾದವು ಕಾಣಿಸಿಕೊಳ್ಳುತ್ತವೆ.

ಜಪಾನೀಸ್ ಎನ್ಸಫಲೈಟಿಸ್ ರೋಗದ ಅಪಾಯಗಳ ಸಾಧ್ಯತೆಗಳು
ಈ ರೋಗ ಆವರಿಸುವ ಸಾಧ್ಯತೆ ವಯಸ್ಕರಿಗಿಂತ ಮಕ್ಕಳಿಗೆ ಹೆಚ್ಚು
ಸಮಶೀತೋಷ್ಣ ವಯಲದ ಪ್ರದೇಶಗಳಲ್ಲಿ ಈ ರೋಗ ಹರಡುವ ಸಾಧ್ಯತೆ ಅತಿ ಹೆಚ್ಚಾಗಿರುತ್ತದೆ, ಅದರಲ್ಲೂ ಬೇಸಿಗೆಯಿಂದ ತೊಡಗಿ ಚಳಿಗಾಲದ ಪ್ರಾರಂಭಿಕ ದಿನಗಳಲ್ಲಿ, ಅಂದರೆ ಮೇ ಮತ್ತು ಸೆಪ್ಟೆಂಬರ್ ವರೆಗೆ ಈ ಹರಡುವಿಗೆ ಹೆಚ್ಚು ಕಾಣಿಸಿಕೊಳ್ಳುತ್ತದೆ. ಆದರೆ ಈ ರೋಗ ವರ್ಷದ ಎಲ್ಲಾ ದಿನಗಳಲ್ಲಿಯೂ ಕಾಣಿಸಿಕೊಳ್ಳಬಹುದು.
ಉಷ್ಣವಲಯ ಹಾಗೂ ಸಮಶೀತೋಷ್ಣವಲಯದಲ್ಲಿ ಈ ಹರಡುವಿಕೆ ಮಳೆಯ ಪ್ರಮಾಣ ಮತ್ತು ಹಕ್ಕಿಗಳ ವಲಸೆಯನ್ನು ಆಧರಿಸಿ ಆ ಪ್ರದೇಶಗಳಲ್ಲಿ ಗರಿಷ್ಟವಾಗಿರುತ್ತದೆ.
ಎಲ್ಲೆಲ್ಲಿ ಭತ್ತ ಬೆಳೆಯಲಾಗುತ್ತದೆಯೋ ಅಲ್ಲೆಲ್ಲಾ ಜಪಾನೀಸ್ ಎನ್ಸಫಲೈಟಿಸ್ ರೋಗವೂ ಹೆಚ್ಚಾಗಿ ಕಂಡುಬಂದಿದೆ.

ಜಪಾನೀಸ್ ಎನ್ಸಫಲೈಟಿಸ್ ರೋಗದ ಪತ್ತೆಹಚ್ಚುವಿಕೆ
ವೈದ್ಯರು ರೋಗಿಯ ರೋಗದ ಲಕ್ಷಣಗಳನ್ನು ಪರಿಶೀಲಿಸುವ ಜೊತೆಗೇ ಆತ ವಾಸಿಸುವ ಪ್ರದೇಶದ ಬಗ್ಗೆಯೂ ವಿಚಾರಿಸುತ್ತಾರೆ. ಅಲ್ಲದೇ ಇತ್ತೀಚೆಗೆ ರೋಗಿ ಭೇಟಿ ನೀಡಿದ ಸ್ಥಳಗಳು ಹಾಗೂ ಈ ಸ್ಥಳಗಳಲ್ಲೆಲ್ಲಾದರೂ ಸೋಂಕು ಹರಡಿದ್ದ ಬಗ್ಗೆ ವರದಿಗಳಿವೆಯೇ ಎಂದೂ ಪರಿಶೀಲಿಸುತ್ತಾರೆ.

ಒಂದು ವೇಳೆ ಈ ರೋಗದ ಇರುವಿಕೆಯ ಬಗ್ಗೆ ಅನುಮಾನವುಂಟಾದರೆ ವೈದ್ಯರು ರೋಗಿಯ ಎಂ ಆರ್ ಐ ಮತ್ತು ಸಿಟಿ ಸ್ಕ್ಯಾನ್ ಪರೀಕ್ಷೆಗಳನ್ನು ನಡೆಸುವಂತೆ ಸಲಹೆ ಮಾಡುತ್ತಾರೆ. ಅಲ್ಲದೇ ಮೆದುಳುಬಳ್ಳಿಯ ದ್ರವದ ಪರೀಕ್ಷೆ ನಡೆಸಲು lumbar puncture ಎಂಬ ಪರೀಕ್ಷೆಯನ್ನೂ ನಡೆಸಬಹುದು. ಬೆನ್ನುಮೂಳೆಯ ಕೆಳಭಾಗದಲ್ಲಿ ಸೂಕ್ಷ್ಮ ಸೂಜಿಯ ಮೂಲಕ ಮೆದುಳುಬಳ್ಳಿಯ ದ್ರವನ್ನು ಸಂಗ್ರಹಿಸಿ ಈ ದ್ರವದಲ್ಲಿ ವೈರಸ್ ನ ಇರುವಿಕೆಯ ಬಗ್ಗೆ ಪರೀಕ್ಷೆ ನಡೆಸಲಾಗುತ್ತದೆ.

ಸಾಮಾನ್ಯವಾಗಿ ದೇಹವನ್ನು ಪ್ರವೇಶಿಸುವ ಯಾವುದೇ ವೈರಸ್ ಹಾಗೂ ಬ್ಯಾಕ್ಟೀರಿಯಾಗಳ ವಿರುದ್ದ ಹೋರಾಡಲು ನಮ್ಮ ದೇಹ ಪ್ರತಿಜೀವಕ (antibodies) ಗಳನ್ನು ಉತ್ಪಾದಿಸಿಕೊಳ್ಳುತ್ತದೆ. ಒಂದು ವೇಳೆ ಈ ವೈರಸ್ ಗೆ ಈಗಾಗಲೇ ದೇಹ ಯಾವುದಾದರೂ ಪ್ರತಿಜೀವಕವನ್ನು ಉತ್ಪಾದಿಸಿದೆಯೇ ಎಂದು ಪರಿಶೀಲಿಸಲು ಪ್ರತಿದೀಪಕ (fluorescent) ರಾಸಾಯನಿಕಗಳನ್ನು ಬಳಸಿ ನಡೆಸಲಾಗುವ immunofluorescence ಎಂಬ ಪರೀಕ್ಷೆಯನ್ನೂ ನಡೆಸಲಾಗುತ್ತದೆ.

ಜಪಾನೀಸ್ ಎನ್ಸಫಲೈಟಿಸ್ ರೋಗದ ಚಿಕಿತ್ಸೆ
ವಿಶ್ವ ಆರೋಗ್ಯ ಸಂಸ್ಥೆ World Health Organization (WHO) ಯ ಪ್ರಕಾರ, ಈ ರೋಗಕ್ಕೆ ಇದುವರೆಗೆ ಯಾವುದೇ ವೈರಸ್ ನಿರೋಧಕ ಔಷಧಿಯನ್ನು ಕಂಡುಹಿಡಿಯಲಾಗಿಲ್ಲ. ಆದರೆ ಈ ರೋಗದ ಲಕ್ಶಣಗಳನ್ನು ಕಡಿಮೆಗೊಳಿಸಲು ಕೇವಲ ಪ್ರತೀಜೀವಕ ಔಷಧಿಗಳು ಮಾತ್ರವೇ ಲಭ್ಯವಿವೆ.

ಜಪಾನೀಸ್ ಎನ್ಸಫಲೈಟಿಸ್ ರೋಗ ಹರಡುವುದನ್ನು ತಡೆಗಟ್ಟುವ ವಿಧಾನಗಳು
ಈ ರೋಗ ಬಾರದೇ ಇರಲು ಸೂಕ್ತ ಲಸಿಕೆಯನ್ನು ಹಾಕಿಸಿಕೊಳ್ಳುವುವು ಮತ್ತು ಸೊಳ್ಳೆಗಳ ಕಡಿತದಿಂದ ರಕ್ಷಿಸಿಕೊಳ್ಳಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಉದಾಹರಣೆಗೆ ಸೊಳ್ಳೆ ವಿಕರ್ಷಣ ವಿಧಾನಗಳು.

ಲಸಿಕೆ
ಈ ರೋಗ ಬಾರದಂತೆ ಹಾಕಿಸಿಕೊಳ್ಳುವ ಲಸಿಕೆಯನ್ನು ಎರಡು ಹಂತದಲ್ಲಿ ಚುಚ್ಚುಮದ್ದಿನ ಮೂಲಕ ನೀಡಲಾಗುತ್ತದೆ.
ಮೊದಲ ಚುಚ್ಚುಮದ್ದು ನೀಡಿದ ಇಪ್ಪತ್ತೆಂಟು ದಿನಗಳ ಬಳಿಕವೇ ಎರಡನೆಯ ಚುಚ್ಚುಮದ್ದನ್ನು ನೀಡಲಾಗುತ್ತದೆ. ಸಂದರ್ಭವನ್ನು ಪರಿಗಣಿಸಿ ವೈದ್ಯರು ಈ ಅವಧಿಯನ್ನು ಏಳು ದಿನಗಳವರೆಗೂ ಕಡಿಮೆಗೊಳಿಸಬಹುದು ಹಾಗೂ ಈ ಕಡಿಮೆ ಅವಧಿ ಹದಿನೆಂಟರಿಂದ ಅರವತ್ತೈದು ವರ್ಷದ ನಡುವಣ ವ್ಯಕ್ತಿಗಳಿಗೆ ಮಾತ್ರವೇ ಅನ್ವಯಿಸುತ್ತದೆ.

ಈ ಲಸಿಕೆಯ ಚುಚ್ಚುಮದ್ದು ನೀಡಿದ ಬಳಿಕ ತಾತ್ಕಾಲಿಕ ಅವಧಿಗೆ ಕೆಲವು ಅಡ್ಡಪರಿಣಾಮಗಳು ಕಾಣಿಸಿಕೊಳ್ಳಬಹುದು. ತಲೆನೋವು, ಸ್ನಾಯುಗಳ ನೋವು, ಚರ್ಮ ಕೆಂಪಗಾಗುವುದು, ಊದಿಕೊಳ್ಳುವುದು ಹಾಗೂ ಚುಚ್ಚುಮದ್ದು ನೀಡಿದ ಭಾಗದ ಸುತ್ತಮುತ್ತ ದದ್ದುಗಳು ಏಳುವುದು, ದದ್ದುಗಳೆದ್ದ ಭಾಗದಲ್ಲಿ ಅಸಾಧ್ಯ ತುರಿಕೆ ಹಾಗೂ ಉಸಿರಾಡಲು ಕಷ್ಟಕರವಾಗುವುದು ಮೊದಲಾದವು ಕಾಣಿಸಿಕೊಳ್ಳುತ್ತವೆ.

ಈ ಕೆಳಗಿನ ಸಂದರ್ಭಗಳಿಗೆ ಒಳಗಾಗುವ ವ್ಯಕ್ತಿಗಳು ಕಡ್ಡಾಯವಾಗಿ ಲಸಿಕೆಯನ್ನು ಹಾಕಿಸಿಕೊಳ್ಳುವಂತೆ ವೈದ್ಯರು ಸಲಹೆ ಮಾಡುತ್ತಾರೆ
* ಈ ರೋಗ ವ್ಯಾಪಕವಾಗಿರುವ ಪ್ರದೇಶಗಳಿಗೆ ಭೇಟಿ ನೀಡಲಿರುವ ವ್ಯಕ್ತಿಗಳು
* ಒಂದು ತಿಂಗಳಿಗೂ ಕಡಿಮೆ ಅವಧಿಗಾಗಿ ಪ್ರವಾಸಕ್ಕೆ ತೆರಳಲಿರುವ ವ್ಯಕ್ತಿಗಳು
* ಈ ಜ್ವರ ಸಾಂಕ್ರಾಮಿಕವಾಗಿರುವ ಪ್ರದೇಶಕ್ಕೆ ಭೇಟಿ ನೀಡಲಿರುವ ವ್ಯಕ್ತಿಗಳು
* ಈ ರೋಗ ವ್ಯಾಪಕವಾಗಿರುವ ಸ್ಥಳಗಳಲ್ಲಿ ಹೊರಾಂಗಣ ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ವ್ಯಕ್ತಿಗಳು

ಜಪಾನೀಸ್ ಎನ್ಸಫಲೈಟಿಸ್ ರೋಗ ತಡೆಗಟ್ಟುವಿಕೆಗೆ ಇತರ ವಿಧಾನಗಳು
ಗ್ರಾಮಪ್ರದೇಶಗಳಲ್ಲಿ ಹೆಚ್ಚಿನ ಸಮಯ ಕಳೆಯುವ ವ್ಯಕ್ತಿಗಳು ತಮ್ಮನ್ನ ತಾವು ಸೊಳ್ಳೆಕಡಿತದಿಂದ ರಕ್ಷಿಸಿಕೊಳ್ಳಲು ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು. ಸೊಳ್ಳೆಪರದೆ, ಸೊಳ್ಳೆ ಕಡಿತದಿಂದ ರಕ್ಷಣೆ ಒದಗಿಸುವ ಬಟ್ಟೆ ಹಾಗೂ ಮುಲಾಮುಗಳನ್ನು ಬಳಸುವುದು, ಮನೆಯ ಸುತ್ತಮುತ್ತ ನೀರು ಚಿಕ್ಕ ಗುಂಡಿಗಳಲ್ಲಿ ನಿಲ್ಲಲು ಅವಕಾಶ ನೀಡದಿರುವುದು ಇತ್ಯಾದಿ. ವಾಸ್ತವದಲ್ಲಿ ಈ ಚಿಕ್ಕ ಚಿಕ್ಕ ನೀರಿನ ಗುಂಡಿಗಳೇ ಸೊಳ್ಳೆಗಳು ಮೊಟ್ಟೆಯಿಟ್ಟು ಮರಿಮಾಡುವ ಮನೆಗಳಾಗಿರುತ್ತವೆ.

English summary

Japanese Encephalitis: Things You Should Know About The Disease

Japanese encephalitis is a mosquito-borne viral infection. It is the leading cause of viral encephalitis in Asia. The Culex mosquito transmits the virus to humans and they become the carriers of the virus. The mosquito can infect animals too. Wild birds and domestic pigs are likely to be the natural hosts of Japanese encephalitis, and mosquitoes are the vectors.
X