For Quick Alerts
ALLOW NOTIFICATIONS  
For Daily Alerts

ಅಸ್ತಮಾ ರೋಗಿಗಳು ಸೇವಿಸಬೇಕಾದ ಮತ್ತು ಸೇವಿಸಬಾರದ ಆಹಾರಗಳು

|

ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಯಾದ ಅಸ್ತಮಾ ಮಕ್ಕಳಲ್ಲಿ 3 ರಿಂದ 38% ಹಾಗೂ ವಯಸ್ಕರಲ್ಲಿ 2 ರಿಂದ 12% ವ್ಯಕ್ತಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ಭಾರತದಲ್ಲಿ ನಡೆಸಿದ ಅಸ್ತಮಾ ರೋಗದ ಸಾಂಕ್ರಾಮಿಕ ರೋಗಶಾಸ್ತ್ರ ಅಧ್ಯಯನವೊಂದರಲ್ಲಿ ಹದಿನೈದು ವರ್ಷ ದಾಟಿದ ವಯಸ್ಸಿನವರಲ್ಲಿ ಅಸ್ತಮಾ ರೋಗದ ಲಕ್ಷಣಗಳು ಮತ್ತು ಗಂಭೀರ ಸ್ವರೂಪದ ಬ್ರಾಂಕೈಟಿಸ್ ರೋಗ ಮುಂದುವರೆಯುವ ಸಾಧ್ಯತೆ 2.05% ರಷ್ಟಿದೆ ಎಂದು ಕಂಡುಕೊಳ್ಳಲಾಗಿದೆ.

ಅಸ್ತಮಾ ಮತ್ತು ಆಹಾರಕ್ರಮ

ಅಸ್ತಮಾ ರೋಗಿಗಳು ತಮ್ಮ ಆಹಾರಕ್ರಮದಲ್ಲಿ ಕೆಲವೊಂದು ಆಹಾರಗಳನ್ನು ಅಳವಡಿಸಿಕೊಂಡಾಗ ಒಟ್ಟಾರೆ ಆರೋಗ್ಯ ಉತ್ತಮಗೊಳಿಸುವ ಸಹಿತ ಅಸ್ತಮಾ ರೋಗದ ಲಕ್ಷಣಗಳನ್ನು ಕಡಿಮೆಯಾಗಿಸಲು ಸಾಧ್ಯವಾಗುತ್ತದೆ. ಸಂಶೋಧನೆಗಳಲ್ಲಿ ಹಿಂದಿನ ಕೆಲವು ದಶಕಗಳಲ್ಲಿ ತಾಜಾ ಆಹಾರಗಳ ಬದಲು ಸಂಸ್ಕರಿಸಿದ ಅಹಾರ ಸೇವಿಸುವವರಲ್ಲಿ ಅಸ್ತಮಾ ಲಕ್ಷಣಗಳು ಹೆಚ್ಚಿರುವುದು ಕಂಡುಬಂದಿದೆ.

Asthma

ಅಸ್ತಮಾ ರೋಗಿಗಳ ಆಹಾರ ಸಮತೋಲನದಲ್ಲಿರಬೇಕಾಗಿರುವುದು ಅವಶ್ಯವಾಗಿದ್ದು ಇವುಗಳಲ್ಲಿ ಹೆಚ್ಚು ಹೆಚ್ಚಾಗಿ ತಾಜಾ ಹಣ್ಣು ಮತ್ತು ಹಸಿ ತರಕಾರಿಗಳಿರಬೇಕು. ಆದರೆ ಕೆಲವು ಆಹಾರಗಳು ಅಸ್ತಮಾ ರೋಗವನ್ನು ಪ್ರಚೋದಿಸಲು ಸಾಧ್ಯ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಕೆಲವು ಆಹಾರಗಳಲ್ಲಿರುವ ವಿಶಿಷ್ಟ ಪ್ರೊಟೀನುಗಳಿಗೆ ದೇಹದ ರೋಗ ನಿರೋಧಕ ವ್ಯವಸ್ಥೆ ಅತಿಯಾಗಿ ಕ್ರಿಯಾತ್ಮಕವಾಗುವ ಮೂಲಕ ದೇಹ ಆ ಅಹಾರಕ್ಕೆ ಅಸಹಿಷ್ಟುತೆ ಹಾಗೂ ಅಲರ್ಜಿಯನ್ನು ಪ್ರಕಟಿಸುತ್ತದೆ ಹಾಗೂ ಇವೇ ಅಸ್ತಮಾ ಲಕ್ಷಣಗಳಿಗೆ ಕಾರಣವಾಗಬಹುದು.

ವಿಟಮಿನ್ ಎ, ಡಿ, ಬೀಟಾ ಕ್ಯಾರೋಟೀನ್, ಮೆಗ್ನೀಶಿಯಂ, ಒಮೆಗಾ 3 ಕೊಬ್ಬಿನ ಆಮ್ಲಗಳು ಹಾಗೂ ಇತರ ವಿಟಮಿನ್ನುಗಳು ಮತ್ತು ಖನಿಜಗಳು ಅಸ್ತಮಾ ರೋಗವನ್ನು ನಿಯಂತ್ರಿಸಲು ನೆರವಾಗುತ್ತವೆ. ಒಂದು ವೇಳೆ ನೀವು ಅಸ್ತಮಾ ರೋಗದಿಂದ ಬಳಲುತ್ತಿದ್ದರೆ ಈ ಕೆಳಗಿನ ಆಹಾರಗಳನ್ನು ನೀವು ಸೇವಿಸಬಹುದು:

ಸೇಬು

ಸೇಬುಗಳಲ್ಲಿ ವಿಟಮಿನ್ ಎ, ವಿಟಮಿನ್ ಸಿ ಹಾಗು ಮೆಗ್ನೀಶಿಯಂ ಉತ್ತಮ ಪ್ರಮಾಣದಲ್ಲಿದ್ದು ಅಸ್ತಮಾ ರೋಗವನ್ನು ದೂರವಿಡಲು ನೆರವಾಗುತ್ತದೆ. ಒಂದು ಆಹಾರ ಮಾಧ್ಯಮವೊಂದು ನಡೆಸಿದ ಅಧ್ಯಯನದ ಪ್ರಕಾರ ನಿಯಮಿತ ಸೇಬಿನ ಸೇವನೆಯಿಂದ ಶ್ವಾಸಕೋಶದ ಕ್ಷಮತೆ ಉತ್ತಮಗೊಳ್ಳುತ್ತದೆ ಹಾಗೂ ಅಸ್ತಮಾ ಎದುರಾಗುವ ಸಾಧ್ಯತೆ ಕಡಿಮೆಯಾಗಿಸುತ್ತದೆ.

ಹಣ್ಣು ಮತ್ತು ತರಕಾರಿಗಳು

ಹಸಿಯಾಗಿ ತಿನ್ನಬಹುದಾದ ತರಕಾರಿಗಳು ಮತ್ತು ಹಣ್ಣುಗಳು ಅಸ್ತಮಾದ ಲಕ್ಷಣಗಳನ್ನು ದೂರವಿರಿಸುತ್ತವೆ. ಏಕೆಂದರೆ ಇವುಗಳಲ್ಲಿ ಆಂಟಿ ಆಕ್ಸಿಡೆಂಟುಗಳಾದ ವಿಟಮಿನ್ ಸಿ , ವಿಟಮಿನ್ ಇ ಹಾಗೂ ಬೀಟಾ ಕ್ಯಾರೋಟೋನ್ ಗಳು ಹೇರಳವಾಗಿರುತ್ತವೆ. ವಿಶೇಷವಾಗಿ ಕಾಮನಬಿಲ್ಲಿನ ಬಣ್ಣಗಳಾದ ಕಿತ್ತಳೆ, ಕೆಂಪು, ಕಂದು, ಹಳದಿ ಹಾಗೂ ಹಸಿರು ಬಣ್ಣದ ಹಣ್ಣುಗಳು ಮತ್ತು ಹಸಿ ತರಕಾರಿಗಳು ರೋಗ ನಿರೋಧಕ ಶಕ್ತಿಯನ್ನು ಉತ್ತಮಗೊಳಿಸುವುದು ಮಾತ್ರವಲ್ಲ, ಅಸ್ತಮಾಘಾತದ ಗತಿಯನ್ನೂ ನಿಧಾನಗೊಳಿಸುತ್ತವೆ.

ಒಮೆಗಾ 3 ಕೊಬ್ಬಿನ ಆಮ್ಲಗಳು:

ಒಮೆಗಾ 3 ಕೊಬ್ಬಿನ ಆಮ್ಲಗಳು ಹೆಚ್ಚಿರುವ ಆಹಾರಗಳಾದ ಸಾಲ್ಮನ್ ಮೀನು, ಬೂತಾಯಿ, ಟ್ಯೂನಾ ಹಾಗೂ ಸಸ್ಯಜನ್ಯ ಆಹಾರಗಳಾದ ಅಗಸೆಬೀಜ (flaxseeds) ಹಾಗೂ ಒಣಫಲಗಳು ನಿಮ್ಮ ನಿತ್ಯದ ಆಹಾರವಾಗಲಿ. American Journal of Respiratory and Critical Care Medicine ಎಂಬ ವೈದ್ಯಕೀಯ ನಿಯತಕಾಲಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ, ಈ ಕೊಬ್ಬಿನಾಮ್ಲಗಳು ಹೆಚ್ಚಿರುವ ಆಹಾರಗಳ ಸೇವನೆಯಿಂದ ಅಸ್ತಮಾದ ಗಂಭೀರತೆ ಕಡಿಮೆಯಾಗುತ್ತದೆ ಹಾಗೂ ವಿಶೇಷವಾಗಿ ಮಕ್ಕಳಿಗೆ ಮನೆಯೊಳಗಿನ ವಾತಾವರಣದಲ್ಲಿರುವ ಪ್ರದೂಷಣೆಯಿಂದ ರಕ್ಷಣೆ ದೊರಕುತ್ತದೆ.

ಬಾಳೆಹಣ್ಣು

ಮಕ್ಕಳಲ್ಲಿ ಸೀನುವಿಕೆ ಸತತವಾಗಿದ್ದರೆ ಬಾಳೆಹಣ್ಣು ತಿನ್ನಿಸುವ ಮೂಲಕ ಉತ್ತಮ ಪರಿಹಾರ ಪಡೆಯಬಹುದು. ಬಾಳೆಯಲ್ಲಿರುವ ಪ್ರಬಲ ಆಂಟಿ ಆಕ್ಸಿಡೆಂಟ್ ಹಾಗೂ ಪೊಟ್ಯಾಶಿಯಂ ಈ ಕಾರ್ಯಕ್ಕೆ ನೆರವಾಗುತ್ತವೆ ಎಂದು European Respiratory Journal ಎಂಬ ಮಾಧ್ಯಮದಲ್ಲಿ ಪ್ರಕಟವಾದ ವರದಿಯಲ್ಲಿ ತಿಳಿಸಲಾಗಿದೆ. ವಿಶೇಷವಾಗಿ ಅಸ್ತಮಾ ರೋಗವಿರುವ ಮಕ್ಕಳು ನಿಯಮಿತವಾಗಿ ಬಾಳೆಹಣ್ಣು ತಿನ್ನುವ ಮೂಲಕ ಶ್ವಾಸಕೋಶದ ಕ್ಷಮತೆ ಉತ್ತಮಗೊಳ್ಳುತ್ತದೆ.

ವಿಟಮಿನ್ ಡಿ ಯುಕ್ತ ಆಹಾರಗಳು

ವಿಟಮಿನ್ ಡಿ ನಮ್ಮ ದೇಹದಲ್ಲಿ ಉತ್ಪತ್ತಿಯಾಗಲು ಸೂರ್ಯನ ಬೆಳಕಿನ ಅವಶ್ಯವಿದ್ದು ನಮ್ಮ ಆಹಾರದಲ್ಲಿ ಸಾಕಷ್ಟು ಪ್ರಮಾಣದ ಹಾಲು, ಕಿತ್ತಳೆ ರಸ, ಸಾಲ್ಮನ್ ಹಾಗೂ ಮೊಟ್ಟೆಗಳನ್ನು ಅಳವಡಿಸಿಕೊಳ್ಳಬೇಕು. ವಿಶೇಷವಾಗಿ ಆರರಿಂದ ಹದಿನೈದು ವರ್ಷ ವಯಸ್ಸಿನ ಅಸ್ತಮಾ ರೋಗವಿರುವ ಮಕ್ಕಳಿಗೆ ಈ ಅಹಾರ ಅವಶ್ಯವಾಗಿದೆ. ಶ್ವಾಸಕೋಶ ಹಾಗೂ ಶ್ವಾಸವ್ಯವಸ್ಥೆಯನ್ನು ಉತ್ತಮಗೊಳಿಸಲು ಹಾಗೂ ಸೋಂಕುಗಳಿಂದ ರಕ್ಷಿಸಲು ವಿಟಮಿನ್ ಡಿ ನೆರವಾಗುತ್ತದೆ ಹಾಗೂ ಮಕ್ಕಳಿಗೂ ವಯಸ್ಕರಿಗೂ ಶ್ವಾಸಕೋಶದ ಕ್ಷಮತೆ ಉತ್ತಮಗೊಳ್ಳಲು ನೆರವಾಗುತ್ತದೆ.

ಮೆಗ್ನೀಶಿಯಂ ಯುಕ್ತ ಆಹಾರಗಳು:

American Journal of Epidemiology ಎಂಬ ವೈದ್ಯಕೀಯ ಮಾಧ್ಯಮದಲ್ಲಿ ಪ್ರಕಟವಾದ ವರದಿಯ ಪ್ರಕಾರ ಹನ್ನೊಂದರಿಂದ ಹತ್ತೊಂಭತ್ತು ವರ್ಷ ವಯಸ್ಸಿನ ಮಕ್ಕಳ ದೇಹದಲ್ಲಿ ಮೆಗ್ನೀಶಿಯಂ ಕಡಿಮೆ ಇದ್ದಾಗ ಇವರ ಶ್ವಾಸಕೋಶದ ಕ್ಷಮತೆಯೂ ಕಡಿಮೆ ಇರುತ್ತದೆ. ಮೆಗ್ನೀಶಿಯಂ ಪ್ರಮಾಣ ಹೆಚ್ಚಿರುವ ಆಹಾರಗಳಾದ ಕಪ್ಪು ಚಾಕಲೇಟು, ಕುಂಬಳದ ಬೀಜ, ಸಾಲ್ಮನ್ ಮೀನು ಹಾಗೂ ಪಾಲಕ್ ಸೊಪ್ಪುಗಳನ್ನು ಸೇವಿಸುವ ಮೂಲಕ ಈ ಕೊರತೆಯನ್ನು ತುಂಬಿಕೊಳ್ಳಬಹುದು.

ವಿಟಮಿನ್ ಎ ಯುಕ್ತ ಆಹಾರಗಳು:

ಇನ್ನೊಂದು ವೈದ್ಯಕೀಯ ನಿಯತಕಾಲಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ ವಿಟಮಿನ್ ಎ ಮಟ್ಟ ಕಡಿಮೆ ಇರುವ ಮಕ್ಕಳಿಗೆ ಅಸ್ತಮಾ ಇರುವ ಸಾಧ್ಯತೆ ವಿಟಮಿನ್ ಎ ಮಟ್ಟ ಸೂಕ್ತವಾಗಿರುವ ಮಕ್ಕಳಿಗಿಂತ ಹೆಚ್ಚಿರುತ್ತದೆ. ಹಾಗಾಗಿ ವಿಟಮಿನ್ ಎ ಉತ್ತಮ ಪ್ರಮಾಣದಲ್ಲಿರುವ ಆಹಾರಗಳಾದ ಕ್ಯಾರೆಟ್, ಬ್ರೋಕೋಲಿ, ಸಿಹಿಗೆಣಸು ಹಾಗೂ ದಪ್ಪನೆಯ ಎಲೆಗಳಿರುವ ಸೊಪ್ಪುಗಳನ್ನು ಸೇವಿಸಬೇಕು.
ಅಸ್ತಮಾ ರೋಗಿಗಳು ಸೇವಿಸಬಾರದ ಆಹಾರಗಳು:

ಸ್ಯಾಲಿಸೈಲೇಟ್ ಗಳು (Salicylates)

ಇವು ಕೆಲವು ಆಹಾರಗಳಲ್ಲಿ ಕಂಡುಬರುವ ಸಂಯುಕ್ತ ರಾಸಾಯನಿಕಗಳಾಗಿದ್ದು ಈ ರಾಸಾಯನಿಕಗಳಿಗೆ ಸೂಕ್ಷ್ಮಸಂವೇದಿಯಾಗಿರುವ ಅಸ್ತಮಾ ರೋಗಿಗಳಿಗೆ ಎದುರಾಗುವ ಲಕ್ಷಣಗಳನ್ನು ಉಲ್ಬಣಗೊಳಿಸುತ್ತವೆ. ಇವು ಕೆಲವು ಔಷಧಿಗಳಲ್ಲಿ ಹಾಗೂ ಆಹಾರ ಉತ್ಪನ್ನಗಳಲ್ಲಿ ಕಂಡುಬರುತ್ತವೆ. ಅಲ್ಲದೇ ಕಾಫಿ, ಟೀ, ಸಾಂಬಾರ ಪದಾರ್ಥಗಳು ಹಾಗೂ ಕೆಲವು ಮೂಲಿಕೆಗಳಲ್ಲಿಯೂ ಕಂಡುಬರುತ್ತವೆ.

ಸಲ್ಫೈಟ್ ಗಳು (Sulfites)

ಇದೊಂದು ಬಗೆಯ ಆಹಾರ ಸಂರಕ್ಷಕವಾಗಿದ್ದು ಒಣಫಲಗಳು, ವೈನ್, ಸಿಗಡಿ, ಉಪ್ಪಿನಲ್ಲಿ ಸಂರಕ್ಷಿಸಿದ ಆಹಾರಗಳು, ಬಾಟಲಿಯಲ್ಲಿ ಲಭ್ಯವಿರುವ ಲಿಂಬೆರಸ ಹಾಗೂ ಇತರ ಹುಳಿದ್ರವಗಳಲ್ಲಿ ಬಳಕೆಯಾಗುತ್ತದೆ. ಈ ಆಹಾರಗಳನ್ನು ಸೇವಿಸಿದಾಗ ಅಸ್ತಮಾ ಲಕ್ಶಣಗಳು ಉಲ್ಬಣಗೊಳ್ಳುತ್ತವೆ.

ಕೃತಕ ಸಾಮಾಗ್ರಿಗಳು

ಆಹಾರದ ಬಣ್ಣ, ರುಚಿ, ಆಕರ್ಷಣೆ ಹೆಚ್ಚಿಸಲು ಬಳಸಲಾಗುವ ಕೃತಕ ಸಾಮಾಗ್ರಿಗಳಾದ ರುಚಿಕಾರಕ, ಕೃತಕ ಬಣ್ಣ, ರಾಸಾಯನಿಕ ಸಂರಕ್ಷಕಗಳು ಸಾಮಾನ್ಯವಾಗಿ ಎಲ್ಲಾ ಸಿದ್ದ ಆಹಾರಗಳಲ್ಲಿ ಇದ್ದೇ ಇರುತ್ತವೆ. ಅಸ್ತಮಾ ರೋಗಿಗಳು ಈ ಅಹಾರಗಳನ್ನು ಸೇವಿಸಬಾರದು.

ವಾಯುಪ್ರಕೋಪವುಂಟುಮಾಡುವ ಅಹಾರಗಳು

ವಾಯುಪ್ರಕೋಪಕ್ಕೆ ಮೂಲವಾಗಿರುವ ಎಲೆಕೋಸು, ಬೀನ್ಸ್, ಬುರುಗು ಪಾನೀಯಗಳು, ಬೆಳ್ಳುಳ್ಳಿ, ನೀರುಳ್ಳಿ ಹಾಗೂ ಹುರಿದ ಆಹಾರಗಳ ಸೇವನೆಯಿಂದ ವಪೆಯ ಮೇಲೆ ಒತ್ತಡ ಬೀಳುತ್ತದೆ. ಪರಿಣಾಮವಾಗಿ ಶ್ವಾಸಕೋಶದ ಮೇಲೂ ಒತ್ತಡ ಬಿದ್ದು ಅಸ್ತಮಾದ ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚುತ್ತದೆ.

ಅಸ್ತಮಾ ಉಲ್ಬಣಗೊಂಡರೆ ಮಾರಣಾಂತಿಕವಾಗುವ ಕಾಯಿಲೆಯಾಗಿರುವ ಕಾರಣ ಆರೋಗ್ಯವನ್ನು ಕಾಪಾಡಿಕೊಳ್ಳಲು ಸೂಕ್ತವಾದ ಆಹಾರ ಸೇವನೆ ಅತ್ಯಂತ ಅವಶ್ಯವಾಗಿದೆ. ಸರಿಯಾದ ಅಹಾರ ಸೇವನೆಯಿಂದ ಅಸ್ತಮಾ ರೋಗವನ್ನು ನಿಯಂತ್ರಣದಲ್ಲಿರಿಸಿ ಉತ್ತಮ ಆರೋಗ್ಯವನ್ನು ಉಳಿಸಿಕೊಳ್ಳಲು ಸಾಧ್ಯವಿದೆ.

English summary

Foods To Eat And Avoid If You Have Asthma

We look for concerts and events to make the best memories over the weekends. While concerts hold promises from renowned musicians and fun times, there are high chances that they don't not go as planned. Several tragedies have taken place during the concerts. Roskilde Festival , The Hudson Project and Isle Of Wight are a few.
X
Desktop Bottom Promotion