For Quick Alerts
ALLOW NOTIFICATIONS  
For Daily Alerts

ಫೈಬ್ರೋಡಿನೋಮಾ: ಕಾರಣಗಳು, ಲಕ್ಷಣಗಳು, ಪತ್ತೆ ಹಚ್ಚುವಿಕೆ ಮತ್ತು ಚಿಕಿತ್ಸೆ

|

ಫೈಬ್ರೋಡಿನೋಮಾ (Fibroadenoma)ಎಂಬುದು ಸ್ತನದಲ್ಲಿ ಕಾಣಿಸಿಕೊಳ್ಳುವ, ಕಾನ್ಸರ್ ಅಲ್ಲದ ಸ್ಥಿತಿಯಾಗಿದೆ. ಅತಿ ಸಾಮಾನ್ಯವಾಗಿ ಇದು ಗಡ್ಡೆಯ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ ಹಾಗೂ ಹೊರಗಿನಿಂದ ಒತ್ತಿದಾಗ ಸ್ಥಾನ ಪಲ್ಲಟಗೊಳ್ಳುತ್ತದೆ. ಇದರ ಹೊರತಾಗಿ ಬಾಹ್ಯನೋಟಕ್ಕೆ ಹೆಚ್ಚಿನ ಲಕ್ಷಣಗಳೇನೂ ಕಾಣಿಸುವುದಿಲ್ಲ. ಹೆಚ್ಚಿನ ಸಂದರ್ಭದಲ್ಲಿ ಇದು ನಿರಾಪಾಯಕಾರಿಯಾಗಿದ್ದು ಚಿಕ್ಕ ವಯಸ್ಸಿನ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈ ಬಗ್ಗೆ ನಡೆಸಿದ ಅಧ್ಯಯನಗಳು ಈ ಗಡ್ಡೆಗಳು ಯೌವನಾವಸ್ಥೆಯ ಬದಲಾವಣೆಯ ಹಂತದಲ್ಲಿ ಕಾಣಿಸಿಕೊಳ್ಳುವುದಾಗಿ ವಿವರಿಸಿವೆ. ಆದರೆ ಈ ಸ್ಥಿತಿ ಮಹಿಳೆಯ ಯಾವುದೇ ವಯಸ್ಸಿನಲ್ಲಿ ಆವರಿಸುವ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಅಪರೂಪದ ಸಂದರ್ಭಗಳಲ್ಲಿ ಈ ಸ್ಥಿತಿ ಕೆಲವು ಬಾರಿ ಪುರುಷರಲ್ಲಿಯೂ ಕಾಣಿಸಿ ಕೊಳ್ಳಬಹುದು. ಈ ಸ್ಥಿತಿ ಆವರಿಸಲು ಕಾರಣಗಳು, ಲಕ್ಷಣಗಳು, ಪತ್ತೆ ಹಚ್ಚುವಿಕೆ ಹಾಗೂ ಚಿಕಿತ್ಸೆಗಳನ್ನು ಇಂದಿನ ಲೇಖನದಲ್ಲಿ ನೋಡೋಣ:

ಫೈಬ್ರೋಡಿನೋಮಾ (Fibroadenoma)ಎಂದರೇನು?

ಸ್ತನದ ಒಳಭಾಗದಲ್ಲಿ ಹೆಚ್ಚು ಗಟ್ಟಿಯಲ್ಲದ ಗಡ್ಡೆಯೊಂದು ರೂಪುಗೊಳ್ಳುವ ಸ್ಥಿತಿಯನ್ನು ಫೈಬ್ರೋಡಿನೋಮಾ ಎಂದು ಕರೆಯಲಾಗುತ್ತದೆ. ಈ ಸ್ಥಿತಿ ಕೆಲವರಲ್ಲಿ ಮಾತ್ರವೇ ಏಕೆ ಕಾಣಿಸಿಕೊಳ್ಳುತ್ತದೆ, ಎಲ್ಲರಲ್ಲಿಯೂ ಏಕಲ್ಲ ಎಂಬ ಪ್ರಶ್ನೆಗೆ ವೈದ್ಯರು ಇನ್ನಷ್ಟೇ ಉತ್ತರ ಕಂಡುಕೊಳ್ಳಬೇಕಾಗಿದೆ. ಈ ಗಡ್ಡೆಗಳು ಗ್ರಂಥಿಗಳು ಮತ್ತು ಎರಡು ಅಂಗಗಳನ್ನು ಬಂಧಿಸುವ ಅಂಗಾಂಶಗಳಿಂದ ನಿರ್ಮಿತವಾಗಿರುತ್ತವೆ. ಇವುಗಳ ಗಾತ್ರ ಮತ್ತು ಆಕಾರ ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ ಬೇರೆ ತೆರನಾಗಿರುತ್ತದೆ. ಕೆಲವು ಸಂದರ್ಭಗಳಲ್ಲಿ ಇವು ತೀರಾ ಚಿಕ್ಕದಾಗಿದ್ದು ಇದರ ಇರುವಿಕೆಯ ಬಗ್ಗೆ ವ್ಯಕ್ತಿಗೆ ಅರಿವೇ ಇರುವುದಿಲ್ಲ ಅಥವಾ ಅನುಭವಕ್ಕೂ ಬರುವುದಿಲ್ಲ.

Fibroadenoma

ಆದರೆ ಹೆಚ್ಚಿನ ಸಂದರ್ಭಗಳಲ್ಲಿ ವ್ಯಕ್ತಿ ಸ್ವಪರೀಕ್ಷೆಯಿಂದಲೇ ತನ್ನ ಸ್ತನದಲ್ಲಿ ಈ ಮೆದುವಾದ ಗಡ್ಡೆಯಿರುವುದನ್ನು ಕಂಡುಕೊಳ್ಳಬಹುದು. ಓರ್ವ ವ್ಯಕ್ತಿಯಲ್ಲಿ ಒಂದೇ ಗಡ್ಡೆ ಇರಬಹುದು ಅಥವಾ ಒಂದಕ್ಕಿಂತ ಹೆಚ್ಚೂ ಇರಬಹುದು. ಸಮಯ ಕಳೆದಂತೆ ಈ ಗಡ್ಡೆಗಳು ದೊಡ್ಡದಾಗಲೂ ಬಹುದು ಅಥವಾ ಕಿರಿದಾಗಲೂಬಹುದು. ಈ ಗಡ್ಡೆಗಳನ್ನು ಪರಿಶೀಲಿಸಿದ ಬಳಿಕವೇ ವೈದ್ಯರು ಈ ಗಡ್ಡೆಗಳು ಎಷ್ಟರ ಮಟ್ಟಿಗೆ ನಿರಪಾಯಕಾರಿ ಅಥವಾ ಕ್ಲಿಷ್ಟವಾಗಿವೆ ಎಂದು ನಿರ್ಧರಿಸುತ್ತಾರೆ. ಸರಳವಾದ ಫೈಬ್ರೋಡಿನೋಮಾ ಗಡ್ಡೆಗಳೆಲ್ಲವೂ ಸೂಕ್ಷ್ಮದರ್ಶಕದಡಿ ಒಂದೇ ತೆರನಾಗಿ ಕಾಣಿಸಿಕೊಳ್ಳುತ್ತವೆ. ಆದರೆ ಕ್ಲಿಷ್ಟವಾದ ಅಥವಾ ಸಂಕೀರ್ಣ ಹಂತವನ್ನು ತಲುಪಿರುವ ಗಡ್ಡೆಗಳು ಸಾಮಾನ್ಯವಾಗಿ ಕೊಂಚ ಹೆಚ್ಚೇ ಎನಿಸುವಷ್ಟು ದೊಡ್ಡದಾಗಿರುತ್ತವೆ ಹಾಗೂ ಇತರ ಗಡ್ಡೆಗಳಿಗೂ ಹೊರತಾದ ಲಕ್ಷಣಗಳನ್ನು ಪಡೆದಿರುತ್ತವೆ.

Most Read: ಹೈಪೋಸ್ಮಿಯಾ: ಕಾರಣಗಳು, ಪತ್ತೆ ಹಚ್ಚುವಿಕೆ ಮತ್ತು ಚಿಕಿತ್ಸೆ

ಫೈಬ್ರೋಡಿನೋಮಾ ಆವರಿಸಿರುವ ಲಕ್ಷಣಗಳು

ಫೈಬ್ರೋಡಿನೋಮಾ ಆವರಿಸಿದರೆ ಇದರ ಜೊತೆಗೆ ಈ ಲಕ್ಷಣಗಳು ಕಾಣಿಸಿಕೊಳ್ಳಬಹುದು:

* ಸ್ತನವನ್ನು ಬೆರಳುಗಳ ನಡುವೆ ಒತ್ತಿ ನೋಡಿದಾಗ ಒಳಭಾಗದಲ್ಲಿ ಮೆತ್ತನೆಯ ಗಡ್ಡೆಯ ಇರುವಿಕೆ ಅನುಭವಕ್ಕೆ ಬರುತ್ತದೆ. ಹೆಚ್ಚು ಗಟ್ಟಿಯಲ್ಲದ ಮೃದುವಾದ ರಬ್ಬಿರಿನಂತಹ ಗಡ್ಡೆ ಒತ್ತಿದಾಗ ಪಕ್ಕಕ್ಕೆ ಸರಿಯುವಂತಿರುತ್ತದೆ. ಸರಿಸುಮಾರು ದುಂಡಗೆ ಹಾಗೂ ಮೃದುವಾಗಿರುವ ಈ ಗಡ್ಡೆಗಳು ಸಾಮಾನ್ಯವಾಗಿ ಮಾಸಿಕ ದಿನಗಳ ಮುನ್ನಾದಿನಗಳಲ್ಲಿಯೇ ಹೆಚ್ಚು ಸ್ಪಷ್ಟವಾಗಿ ಕಂಡುಬರುತ್ತವೆ. (ಮಾಸಿಕ ದಿನಗಳಲ್ಲಿ ಕಂಡುಬರುವ ರಸದೂತಗಳ ಬದಲಾವಣೆಯಿಂದಾಗಿ ಈ ಗಡ್ಡೆಗಳು ಊದಿಕೊಳ್ಳುವುದೇ ಇದಕ್ಕೆ ಕಾರಣ)

ಫೈಬ್ರೋಡಿನೋಮಾ ಆವರಿಸಲು ಕಾರಣಗಳು

ಈ ಸ್ಥಿತಿ ಎದುರಾಗಲು ಸ್ಪಷ್ಟವಾಗಿ ಏನು ಕಾರಣ ಎಂದು ಇದುವರೆಗೆ ಪತ್ತೆಯಾಗಿಲ್ಲ. ಈ ಬಗ್ಗೆ ನಡೆಸಿದ ಅಧ್ಯಯನಗಳೆಲ್ಲವೂ ಇದಕ್ಕೆ ಮಹಿಳೆಯರ ದೇಹದ ಪ್ರಮುಖ ರಸದೂತವಾಗಿರುವ ಈಸ್ಟ್ರೋಜೆನ್ ಪ್ರಮುಖ ಕಾರಣ ಎಂದು ಸೂಚಿಸಿವೆ. ಏಕೆಂದರೆ ಗರ್ಭವತಿಯರಲ್ಲಿ ಹಾಗೂ ರಜೋನಿವೃತ್ತಿಯ ಸಮಯದಲ್ಲಿಯೇ ಈ ಗಡ್ಡೆಗಳು ಅತಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಕೆಲವು ಸಂದರ್ಭಗಳಲ್ಲಿ ರಜೋನಿವೃತ್ತಿಯ ಬಳಿಕ ರಸದೂತ ಬದಲಾವಣೆಯ ಚಿಕಿತ್ಸೆಯನ್ನು ಪಡೆಯುತ್ತಿರುವ ಮಹಿಳೆಯರಲ್ಲಿಯೂ ಕಾಣಿಸಿಕೊಳ್ಳುತ್ತದೆ. ಗಡ್ಡೆಯ ಗಾತ್ರ ಮಾಸಿಕ ದಿನಗಳಿಗೆ ಅನುಸಾರವಾಗಿ ಚಿಕ್ಕದಾಗುತ್ತಾ ದೊಡ್ಡದಾಗುತ್ತಾ ಇರುತ್ತದೆ. (ಮಾಸಿಕ ದಿನಗಳ ರಸದೂತಗಳ ಮಟ್ಟಗಳು ಬದಲಾಗುವಾಗ)
ಈ ಸ್ಥಿತಿಯ ಅಪಾಯಗಳ ಸಾಧ್ಯತೆ: ಈ ಗಡ್ಡೆಗಳು ಸಾಮಾನ್ಯವಾಗಿ ಹದಿನೈದರಿಂದ ಮೂವತ್ತು ವರ್ಷ ವಯಸ್ಸಿನ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಅಲ್ಲದೇ ಗರ್ಭಾವಸ್ಥೆಯಲ್ಲಿಯೂ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ.

Most Read: ಒಣ ದ್ರಾಕ್ಷಿಯಲ್ಲಿರುವ ಆರೋಗ್ಯ ಪ್ರಯೋಜನಗಳು ಹಾಗೂ ಸೇವಿಸುವ ಸರಿಯಾದ ವಿಧಾನಗಳು

ಫೈಬ್ರೋಡಿನೋಮಾ ಪತ್ತೆಹಚ್ಚುವಿಕೆ

ಗಡ್ಡೆಯ ಇರುವಿಕೆಯ ಅನುಭವಕ್ಕೆ ಬಂದ ಬಳಿಕ ಮೊದಲ ಪುರುಸೊತ್ತಿನಲ್ಲಿ ವೈದ್ಯರ ಬಳಿ ತೆರಳಿ ಈ ಸ್ಥಿತಿಯನ್ನು ವಿವರಿಸಬೇಕು. ಪ್ರಾಥಮಿಕ ಪರೀಕ್ಷೆಯ ಬಳಿಕ ವೈದ್ಯರು ನಿಮ್ಮನ್ನು ಇನ್ನೂ ಹೆಚ್ಚಿನ ಪರಿಶೀಲನೆಗಾಗಿ ತಜ್ಞರಲ್ಲಿ ತೋರಿಸಿಕೊಳ್ಳುವಂತೆ ಸಲಹೆ ಮಾಡಬಹುದು. ಈ ಸ್ಥಿತಿಯ ಖಚಿತ ಅಂಕಿಅಂಶಗಳನ್ನು ಪಡೆಯಲು ಕೆಲವು ಪರೀಕ್ಷೆಗಳಿಗೆ ಒಳಪಡಿಸಬಹುದು. ಸಾಮಾನ್ಯವಾಗಿ ಮೂರು ಹಂತಹ ಈ ಪರೀಕ್ಷೆಗಳು ಈ ತೆರನಾಗಿರುತ್ತವೆ:
* ಅಲ್ಟ್ರಾಸೌಂಡ್ / ಮ್ಯಾಮ್ಮೋಗ್ರಾಂ:
* ಸ್ತನದ ಹೊರ ಪರೀಕ್ಷೆ
* ಸ್ತನದ ಒಳಪರೀಕ್ಷೆ / ಸೂಕ್ಷ್ಮ ಸೂಜಿಯ ಚುಚ್ಚುವಿಕೆ:
ಇಪ್ಪತ್ತರ ಹೊಸ್ತಿಲಲ್ಲಿರುವ ಮಹಿಳೆಯರಲ್ಲಿ ಈ ಸ್ಥಿತಿ ಕಂಡುಬಂದರೆ ಸ್ತನ ಪರೀಕ್ಷೆ ಅಥವಾ ಅಲ್ಟ್ರಾಸೌಂಡ್ ಪರೀಕ್ಷೆಯಲ್ಲಿ ಸುಲಭವಾಗಿ ಪತ್ತೆಯಾಗುತ್ತದೆ. ಒಂದು ವೇಳೆ ಸರಳ ಪರೀಕ್ಷೆಯಲ್ಲಿ ಈ ಸ್ಥಿತಿ ಪತ್ತೆಯಾಗದಿದ್ದರೆ ಮಾತ್ರ ಒಳಪರೀಕ್ಷೆಯನ್ನು ನಡೆಸಲಾಗುತ್ತದೆ. ನಲವತ್ತು ವರ್ಷ ದಾಟಿದ ಮಹಿಳೆಯರಲ್ಲಿ ಮ್ಯಾಮ್ಮೋಗ್ರಾಂಗಿಂತಲೂ ಅಲ್ಟ್ರಾಸೌಂಡ್ ಪರೀಕ್ಷೆಯನ್ನು ನಡೆಸಲು ವೈದ್ಯರು ಆದ್ಯತೆ ನೀಡುತ್ತಾರೆ. ಏಕೆಂದರೆ ತರುಣಿಯರ ಸ್ತನಗಳ ಅಂಗಾಂಶಗಳು ಹೆಚ್ಚು ಸಾಂದ್ರತೆಯಲ್ಲಿರುತ್ತವೆ ಹಾಗೂ ಎಕ್ಸ್ ರೇ ಚಿತ್ರ ಅಷ್ಟೊಂದು ಸ್ಪಷ್ಟವಾಗಿರುವುದಿಲ್ಲ ಹಾಗೂ ಮೆದುವಾದ ಗಡ್ಡೆಯ ಇರುವಿಕೆಯ ಪತ್ತೆ ಹಚ್ಚುವುದು ಕಷ್ಟವಾಗುತ್ತದೆ. ನಲವತ್ತಕ್ಕೂ ಕಡಿಮೆ ವಯಸ್ಸಿನ ಮಹಿಳೆಯರಿಗೆ ಮಾಮ್ಮೋಗ್ರಾಮ್ ಉಪಕರಣವನ್ನು ಬಳಸಿ ಗಡ್ಡೆಯನ್ನು ಪತ್ತೆಹಚ್ಚಲಾಗುತ್ತದೆ.

Most Read: ಮೊಟ್ಟೆಯ ಬಿಳಿಭಾಗವನ್ನು ಹೆಚ್ಚಾಗಿ ತಿನ್ನಬಾರದಂತೆ! ಯಾಕೆ ಗೊತ್ತೇ?

ಫೈಬ್ರೋಡಿನೋಮಾದ ಚಿಕಿತ್ಸೆ

ಫೈಬ್ರೋಡಿನೋಮಾದ ಇರುವಿಕೆ ಖಚಿತವಾಗಿದೆ ಎಂದರೆ ಇದನ್ನು ನಿವಾರಿಸಬೇಕು ಎಂಬ ತೀರ್ಮಾನಕ್ಕೆ ಬಂದುಬಿಡಬಾರದು. ವ್ಯಕ್ತಿಯ ಕುಟುಂಬದ ಇತಿಹಾಸ, ದೈಹಿಕ ಲಕ್ಷಣಗಳು ಹಾಗೂ ವೈಯಕ್ತಿಕ ಅಭಿಪ್ರಾಯಗಳನ್ನು ಪರಿಗಣಿಸಿ ವೈದ್ಯರು ಈ ಸ್ಥಿತಿಗೆ ಸೂಕ್ತವಾದ ನಿರ್ಧಾರವನ್ನು ಕೈಗೊಳ್ಳುತ್ತಾರೆ ಹಾಗೂ ಗಡ್ಡೆಯನ್ನು ತೆಗೆಯಬೇಕೋ ಅಥವಾ ಬಿಡಬೇಕೋ ಎಂದು ನಿರ್ಧರಿಸುತ್ತಾರೆ. ಗಾತ್ರ ಚಿಕ್ಕದಾಗಿದ್ದು ಬೆಳೆಯುತ್ತಿಲ್ಲವೆಂದಾದರೆ ಹಾಗೂ ಇದು ಕ್ಯಾನ್ಸರ್ ನ ಗಡ್ಡೆಯಲ್ಲವೆಂದು ಖಚಿತವಾದರೆ ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳುತ್ತಾ ಅಪಾಯಕರ ಮಟ್ಟಕ್ಕೆ ಬೆಳೆದಿಲ್ಲವೆಂದು ಖಚಿತಪಡಿಸಿಕೊಳ್ಳಲು ಸಲಹೆ ಮಾಡಲಾಗುತ್ತದೆ. ಉಳಿದಂತೆ ಈ ಕೆಳಗಿನ ಸ್ಥಿತಿಗಳು ಎದುರಾದರೆ ಮಾತ್ರ ಗಡ್ಡೆಯನ್ನು ನಿವಾರಿಸಬೇಕಾದ ನಿರ್ಧಾರವನ್ನು ವೈದ್ಯರೇ ತೆಗೆದುಕೊಳ್ಳುತ್ತಾರೆ.
* ಒಂದು ವೇಳೆ ಸ್ತನದ ಗಾತ್ರ ಸಹಜಗಾತ್ರದಿಂದ ಬದಲಾವಣೆ ಪಡೆದಿದ್ದರೆ
* ಇದು ಕ್ಯಾನ್ಸರ್ ಗೆ ತಿರುಗಬಹುದೆಂಬ ಅನುಮಾನವಿದ್ದರೆ
* ಬಯಾಪ್ಸಿಯ ವಿವರಗಳು ನಿಮಗೆ ಸಮಾಧಾನಕರವಲ್ಲ ಎನಿಸಿದರೆ
* ಕುಟುಂಬ ಇತಿಹಾಸದಲ್ಲಿ ಕ್ಯಾನ್ಸರ್ ಇದ್ದರೆ
ಸೂಚನೆ: ಒಂದು ವೇಳೆ ಫೈಬ್ರೋಡಿನೋಮಾದ ಗಡ್ಡೆಗಳನ್ನು ನಿವಾರಿಸಿದ ಬಳಿಕ ಜೀವಮಾನದಲ್ಲಿ ಮತ್ತೆ ಗಡ್ಡೆಗಳು ಮೂಡುವುದಿಲ್ಲ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ, ಒಂದು ಅಥವಾ ಹೆಚ್ಚು ಗಡ್ಡೆಗಳು ಮತ್ತೊಮ್ಮೆ ಮೂಡಬಹುದು.

ಫೈಬ್ರೋಡಿನೋಮಾದ ಗಡ್ಡೆ ನಿವಾರಣೆನ್ನು ಈ ಹಂತಗಳಲ್ಲಿ ನಡೆಸಲಾಗುತ್ತದೆ

  • ಲುಂಪೆಕ್ಟೋಮಿ (Lumpectomy (excisional biopsy):ಈ ಚಿಕಿತ್ಸೆಯಲ್ಲಿ ಸರ್ಜನ್ ವೈದ್ಯರು ಗಡ್ಡೆಯ ಅಂಗಾಂಶವನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಿ ಕೊಡುತ್ತಾರೆ.
  • ಕ್ರೈಯೋಆಬ್ಲೇಶನ್ (Cryoablation):ಸೂಕ್ಷ್ಮ ಹಾಗೂ ಪೊರಕೆಯಂತಹ ಉಪಕರಣವನ್ನು ಸ್ತನದ ಚರ್ಮದ ಮೂಲಕ ಗಡ್ಡೆಯ ಕಡೆ ಕಳುಹಿಸಲಾಗುತ್ತದೆ. ಬಳಿಕ ಒಂದು ಬಗೆಯ ಅನಿಲವನ್ನು ಹಾಯಿಸಿ ಈ ಗಡ್ಡೆಯನ್ನು ನಷ್ಟಪಡಿಸಲಾಗುತ್ತದೆ.

ಫೈಬ್ರೋಡಿನೋಮಾ ಗಡ್ಡೆ ಉಲ್ಬಣಗೊಳ್ಳುವ ಸಾಧ್ಯತೆಗಳು

ಸಾಮಾನ್ಯವಾಗಿ, ಈ ಗಡ್ಡೆಗಳು ನಿರಪಾಯಕಾರಿಯಾಗಿವೆ. ಈ ಗಡ್ಡೆಗಳು ಕ್ಯಾನ್ಸರ್ ಗಡ್ಡೆಗಳಾಗಿ ಪರಿವರ್ತಿತವಾಗುವುದು ಸಾಧ್ಯವೇ ಇಲ್ಲವೆನ್ನುವಷ್ಟು ಅಪರೂಪ. ಒಂದು ಅಧ್ಯಯನದ ಪ್ರಕಾರ ಕೇವಲ ಈ ಸಾಧ್ಯತೆ ಇರುವುದು 0.002 % ರಷ್ಟು ನಿಕೃಷ್ಟವಾಗಿದೆ.

English summary

Fibroadenoma: Causes, Symptoms, Diagnosis And Treatment

A fibroadenoma is a highly common non-cancerous breast condition. The most common symptom is the presence of a lump in your breast that would move when touched. Other than this, you are unlikely to experience any other symptoms. This condition is benign and mostly found in the young woman. Studies have linked its occurrence to the time during puberty. Nevertheless, it can occur in any women, irrespective of the age. In some rare cases, men can also get fibroadenoma.
X
Desktop Bottom Promotion