For Quick Alerts
ALLOW NOTIFICATIONS  
For Daily Alerts

ನಿಜವಾಗಿಯೂ ಕಾಫಿಗೆ ತಲೆನೋವು ಶಮನಗೊಳಿಸುವ ಗುಣವಿದೆಯೇ?

|

ತಲೆನೋವು, ಅದರಲ್ಲೂ ಅತ್ಯುಗ್ರ ರೂಪವಾದ ಮೈಗ್ರೇನ್ ಆವರಿಸಿದರಂತೂ ದಿನದ ಯಾವುದೇ ಕೆಲಸ ಮಾಡಲು ಸಾಧ್ಯವಾಗದೇ ದೈಹಿಕ ಮತ್ತು ಮಾನಸಿಕ ಹಿಂಸೆ ಅನುಭವಿಸಬೇಕಾಗುತ್ತದೆ. ಮೈಗ್ರೇನ್ ಎದುರಾದರೆ ಶತ್ರುವಿಗೂ ಬೇಡ ಎನ್ನಿಸುವಷ್ಟು ತೀವ್ರವಾದ ನೋವು ಎಂದೂ ಇಲ್ಲದಂತೆ ದೇವರನ್ನು ಪ್ರಾರ್ಥಿಸಲು ಪ್ರೇರೇಪಿಸುತ್ತದೆ. ತಲೆನೋವು ಪ್ರಾರಂಭದಲ್ಲಿದ್ದಾಗಲೇ ಸೂಕ್ತ ಕ್ರಮ ಕೈಗೊಂಡಷ್ಟೂ ಇದನ್ನು ಉಲ್ಬಣಗೊಳ್ಳುವುದನ್ನು ತಡೆಯಬಹುದು. ಆದರೆ ತೀವ್ರಗೊಂಡ ಬಳಿಕ ಯಾವುದೇ ತಲೆನೋವು ಸುಲಭವಾಗಿ ಬಗ್ಗುವುದಿಲ್ಲ.

ಸಾಮಾನ್ಯವಾಗಿ ತಲೆನೋವು ಎದುರಾದ ತಕ್ಷಣ ನಮ್ಮಲ್ಲಿ ಹೆಚ್ಚಿನವರು ಔಷಧಿ ತೆಗೆದುಕೊಳ್ಳುವ ಬದಲು ತಕ್ಷಣವೇ ಒಂದು ಲೋಟ ಕಾಫಿ ಕುಡಿಯುತ್ತಾರೆ. ಈ ಮೂಲಕ ತಲೆನೋವು ಉಲ್ಬಣಗೊಳ್ಳದಂತೆ ತಡೆಯಬಹುದು ಎಂಬುದು ಹೆಚ್ಚಿನವರ ಅಭಿಪ್ರಾಯವಾಗಿದೆ. ಆದರೆ ನಿಜಕ್ಕೂ ಕಾಫಿ ತಲೆನೋವನ್ನು ಕಡಿಮೆಗೊಳಿಸುತ್ತದೆಯೇ? ಈ ಬಗ್ಗೆ ತಜ್ಞರಲ್ಲಿ ವಿಚಾರಿಸಿದರೆ ಅವರಿಂದ ದೊರಕುವ ಮಾಹಿತಿ ಬೇರೆಯೇ ಆಗಿರುತ್ತದೆ.

Most Read: ಅಪಾರವಾಗಿ ಪೀಡಿಸುವ ತಲೆನೋವು : ನಿಮಗೆ ಈ ಎಂಟರಲ್ಲಿ ಯಾವ ಬಗೆ ಬಾಧಿಸುತ್ತಿದೆ ಗೊತ್ತೇ?

ವೈದ್ಯರ ಪ್ರಕಾರ, ತಲೆನೋವು, ವಿಶೇಷವಾಗಿ ಮೈಗ್ರೇನ್ ಪ್ರಾರಂಭವಾದ ತಕ್ಷಣ ಕಾಫಿ ಕುಡಿಯುವುದರಿಂದ ಕಡಿಮೆಯಾಗುತ್ತದೆ ಎಂದು ನಾವು ಭಾವಿಸಿದರೂ ವಾಸ್ತವದಲ್ಲಿ ಇದು ತಲೆನೋವನ್ನು ಇನ್ನಷ್ಟು ಶೀಘ್ರವಾಗಿ ತೀವ್ರಗೊಳಿಸಬಹುದು. ನಿಮ್ಮ ದೇಹ ಕೆಫೀನ್ ಗೆ ಎಷ್ಟು ಸೂಕ್ಷ್ಮಸಂವೇದಿಯಾಗಿದೆ ಎಂಬ ಅಂಶವನ್ನು ಆಧರಿಸಿ ಕಾಫಿ ತಲೆನೋವನ್ನು ಕಡಿಮೆಗೊಳಿಸುತ್ತದೋ ಅಥವಾ ಉಲ್ಬಣಗೊಳಿಸುತ್ತದೋ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ.

coffee

ಏಕಿದು ಹೀಗೆ?
ಮೊದಲಾಗಿ, ತಲೆನೋವಿಗೆ ಮೂಲ ಕಾರಣ ಮೆದುಳಿನಲ್ಲಿರುವ ಕೆಲವು ನರಗಳು ಊದಿಕೊಳ್ಳುತ್ತವೆ. ಕಾಫಿಯಲ್ಲಿರುವ ಕೆಫೀನ್ ರಕ್ತದ ಮೂಲಕ ಈ ನರಗಳಿಗೆ ತಲುಪಿದಾಗ ಊದಿಕೊಂಡಿದ್ದ ನರಗಳನ್ನು ಪುನಃ ಸಂಕುಚಿತಗೊಳಿಸಲು ಹಾಗೂ ಇದೇ ಸಮಯದಲ್ಲಿ ನೋವಿಗೊಳಗಾಗಿದ್ದ ಸ್ನಾಯುಗಳನ್ನು ಸಡಿಲಿಸಲು ನೆರವಾಗುತ್ತದೆ. ಹಾಗಾಗಿ ತಲೆನೋವಿಗೆ ಕೆಫೀನ್ ಒಂದು ಅದ್ಭುತವಾದ ಔಷಧಿ ಎಂದು ಪರಿಗಣಿಸಬಹುದು. ಆದರೆ ಕೆಫೀನ್ ಪ್ರಮಾಣ ದೇಹ ತಾಳಿಕೊಳ್ಳುವ ಸಂವೇದನೆಯ ಮಿತಿ ಮೀರಿದರೆ ನೋವಿಗೊಳಗಾಗಿದ್ದ ಸ್ನಾಯುಗಳು ಇನ್ನಷ್ಟು ಸಂಕುಚಿತಗೊಂಡು ನೋವನ್ನು ಉಲ್ಬಣಿಸಬಹುದು. ಹಾಗಾದರೆ, ತಲೆನೋವು ಬಂದಾಗ ಕಾಫಿ ಕುಡಿಯುವ ನಿರ್ಧಾರದ ಬಗ್ಗೆ ಮರು ಯೋಚಿಸುತ್ತಿದ್ದೀರಾ? ಇನ್ನೂ ಹೆಚ್ಚಿನ ಕಾರಣಗಳನ್ನು ವಿವರಿಸುತ್ತಿದ್ದೇವೆ:

ಕೆಫೀನ್ ಪ್ರತಿ ವ್ಯಕ್ತಿಯಲ್ಲಿಯೂ ಭಿನ್ನವಾಗಿ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಮೊದಲಾಗಿ ನೆನಪಿನಲ್ಲಿಟುಕೊಳ್ಳಬೇಕು ಹಾಗೂ ತಲೆನೋವು ಮತ್ತು ಮೈಗ್ರೇನ್ ಎದುರಾದಾಗ ಪ್ರತಿಯೊಬ್ಬರಿಗೂ ಕೆಫೀನ್ ಸೂಕ್ತ ಔಷಧಿಯಾಗಲಾರದು. ಕೆಲವರಿಗೆ ಕಾಫಿ ಕುಡಿದ ಬಳಿಕ ನಿದ್ದೆ ಹಾರಿ ಹೋದರೆ ಕೆಲವರಿಗೆ ಇಲ್ಲದ ನಿದ್ದೆ ಆವರಿಸುತ್ತದೆ. ಕೆಲವರಿಗೆ ಉದ್ವೇಗ ಹೆಚ್ಚಿದರೆ ಕೆಲವರಿಗೆ ಹೆಚ್ಚಿನ ಪ್ರಭಾವವನ್ನೇ ಬೀರುವುದಿಲ್ಲ. ಹಾಗಾಗಿ ಮಾನಸಿಕ ಒತ್ತಡದಿಂದ ಎದುರಾದ ತಲೆನೋವು ಅಥವಾ ಮೈಗ್ರೇನ್ ಎದುರಾದರೆ ಕಾಫಿ ಕುಡಿಯುವುದು ಸೂಕ್ತ ಪರಿಹಾರರವಾಗಲಾರದು.

ಅಷ್ಟೇ ಅಲ್ಲ, ತಲೆನೋವು ಬಂದ ಬಳಿಕ ಕುಡಿಯುವ ಕಾಫಿಗಿಂತಲೂ ಆ ದಿನದಲ್ಲಿ ಎಷ್ಟು ಕಾಫಿ ಇದಕ್ಕೂ ಮುನ್ನ ಕುಡಿದಿದ್ದೀರಿ ಎಂಬ ಅಂಶವನ್ನೂ ಪರಿಗಣಿಸಬೇಕಾಗುತ್ತದೆ. ಸಾಮಾನ್ಯ ದಿನಗಳಲ್ಲಿ ದಿನಕ್ಕೆ ಒಂದರಿಂದ ಎರಡು ಕಪ್ ಕಾಫಿ ಸೇವನೆ ಆರೋಗ್ಯಕ್ಕೆ ಪೂರಕ. ಆದರೆ ಇದಕ್ಕೂ ಹೆಚ್ಚಿನ ಪ್ರಮಾಣದಿಂದ ಅಷ್ಟೊಂದು ಪ್ರಯೋಜನವಿಲ್ಲ. ಬದಲಿಗೆ, ಹೆಚ್ಚಿನ ಕಾಫಿ ಹೆಚ್ಚು ನಿರ್ಜಲೀಕರಣ ಹಾಗೂ ಉದ್ವೇಗವನ್ನು ಹೆಚ್ಚಿಸಿ ಈಗಾಗಲೇ ಮೈಗ್ರೇನ್ ನಿಂದ ಎದುರಾಗಿದ್ದ ನೋವು ಮತ್ತು ಬಳಲಿಕೆಯನ್ನು ಹೆಚ್ಚಿಸಬಹುದು.

ಅಲ್ಲದೇ, ಒಂದು ವೇಳೆ ನಿಮಗೆ ಮೈಗ್ರೇನ್ ತಲೆನೋವಿನ ತೊಂದರೆ ಇದ್ದು ತಕ್ಷಣಕ್ಕೆ ಔಷಧಿ ಲಭ್ಯವಿಲ್ಲದಿದ್ದಲ್ಲಿ, ಯಾವುದೇ ಕಾರಣಕ್ಕೆ ಕೆಫೀನ್ ಭರಿತ ಪೇಯಗಳ ಮೊರೆ ಹೋಗದಿರಿ, ಇವು ಕಾಫಿಗಿಂತಲೂ ಹೆಚ್ಚಿನ ಹಾನಿಯುಂಟುಮಾಡುತ್ತವೆ. ಮಾರುಕಟ್ಟೆಯಲ್ಲಿ ದೊರಕುವ ಈ ಸಿದ್ದರೂಪದ ಪೇಯಗಳಲ್ಲಿ ನರಗಳನ್ನು ಪ್ರಚೋದಿಸುವಂತಹ ರಾಸಾಯನಿಕಗಳಿದ್ದು ಇವು ನರಗಳನ್ನು ವ್ಯತಿರಿಕ್ತವಾಗಿ ಪ್ರಚೋದಿಸಿ ತಲೆತಿರುಗುವಿಕೆ ಹಾಗೂ ಪಾರ್ಶ್ವವಾಯು ಮೊದಲಾದ ತೊಂದರೆಗಳನ್ನೂ ತಂದೊಡ್ಡಬಲ್ಲವು. ಜೊತೆಗೇ, ಇವುಗಳಲ್ಲಿ ಅತಿ ಹೆಚ್ಚಿನ ಸಾಂದ್ರತೆಯ ಸಕ್ಕರೆ ಮತ್ತು ಖಾಲಿ ಕ್ಯಾಲೋರಿಗಳು (ಅಂದರೆ ಶಕ್ತಿ ನೀಡದ ಕ್ಯಾಲೋರಿಗಳು) ಇದ್ದು ಆರೋಗ್ಯವನ್ನು ಕೆಡಿಸಬಹುದು ಹಾಗೂ ಈ ಕಾರಣಗಳಿಂದಾಗಿ ನೋವು ನಿವಾರಕವಾಗಿ ಕಾಫಿ ಹಾಗೂ ಕೆಫೀನ್ ಯುಕ್ತ ಪೇಯಗಳು ಆಯ್ಕೆಯಾಗಲಾರವು.

ನಿಸರ್ಗದ ನೆರವು ಪಡೆಯಿರಿ
ಒಂದು ವೇಳೆ ತಲೆನೋವಿನ ನಿವಾರಣೆಗೆ ಕಾಫಿ ಬೇಡವೆಂದ ಬಳಿಕ ಬೇರಾವ ಪೇಯ ಈ ತೊಂದರೆ ನಿವಾರಿಸಬಹುದು? ನಿಸರ್ಗದಲ್ಲಿ ಈ ತೊಂದರೆಗೂ ಕೆಲವಾರು ಪರಿಹಾರಗಳಿವೆ. ಅಡುಗೆ ಮನೆಯಲ್ಲಿ ಸದಾ ಲಭ್ಯವಿರುವ ಕಾಳುಮೆಣಸು, ಪುದಿನಾ ಮತ್ತು ಜೇನು ಈ ಎಲ್ಲವನ್ನೂ ಬೆರೆಸಿ ಸೇವಿಸುವ ಮೂಲಕ ನೋವು ಕಡಿಮೆ ಮಾಡಿಕೊಳ್ಳಬಹುದು. ರಾತ್ರಿ ಮಲಗುವ ಮುನ್ನ ಹತ್ತು ಹನ್ನೆರಡು ಕಾಳುಮೆಣಸುಗಳನ್ನು ಒಡೆದು ಒಂದು ಲೋಟ ತಣ್ಣೀರಿನಲ್ಲಿ ನೆನೆಸಿಟ್ಟು ಮರುದಿನ ಬೆಳಗ್ಗಿನ ಪ್ರಥಮ ಆಹಾರವಾಗಿ ಕುಡಿಯುವ ಮೂಲಕವೂ ಮೈಗ್ರೇನ್ ತಲೆನೋವನ್ನು ಸಾಕಷ್ಟು ಮಟ್ಟಿಗೆ ತಗ್ಗಿಸಬಹುದು.

English summary

Can coffee really cure headaches?

Headaches and migraines can wreck your day. A pounding migraine can actually make you clutch your head and pray for it to go away. Clearly, the only thing you can do is manage the symptoms. Most of us reach out to the coffee when we don't want to take the aid of medicines. But, does it really help get rid of the pain? Experts suggest there is a very different problem lying underneath.
X
Desktop Bottom Promotion