For Quick Alerts
ALLOW NOTIFICATIONS  
For Daily Alerts

ಸೂರ್ಯ ನಮಸ್ಕಾರ ಅನುಸರಿಸಲು ಸರಿಯಾದ ಸಮಯ ಯಾವುದು?

By Arshad Hussain
|

ಯೋಗಾಭ್ಯಾಸ, ಒಂದು ಪುರಾತನ ಭಾರತೀಯ ಪದ್ದತಿಯಾಗಿದ್ದು ದೇಹ ಹಾಗೂ ಮನಸ್ಸುಗಳನ್ನು ಆರೋಗ್ಯಕರವಾಗಿರಿಸಲು ನೆರವಾಗುವ ವ್ಯಾಯಾಮವೂ ಆಗಿದೆ. ಯೋಗಾಭ್ಯಾಸದಿಂದ ತೂಕದಲ್ಲಿ ಇಳಿಕೆ, ಕೆಲವಾರು ದೈಹಿಕ ನೋವುಗಳಿಂದ ಉಪಶಮನ, ಮಾನಸಿಕ ನಿರಾಳತೆ ಹಾಗೂ ಮಾನಸಿಕ ಒತ್ತಡ ಮತ್ತು ಉದ್ವೇಗಗಳನ್ನು ಕಡಿಮೆಗೊಳಿಸಲೂ ನೆರವಾಗುತ್ತದೆ. ಇಂದು ಯೋಗಾಭ್ಯಾಸದ ಪ್ರಯೋಜನವನ್ನು ಮನಗಂಡ ಹಲವು ವಿದೇಶಗಳಲ್ಲಿಯೂ ಸಾವಿರಾರು ವ್ಯಕ್ತಿಗಳು ಯೋಗಾಸನವನ್ನು ತಮ್ಮ ನಿತ್ಯದ ವ್ಯಾಯಾಮವನ್ನಾಗಿಸಿದ್ದಾರೆ.

ಯೋಗಾಸನಗಳಲ್ಲಿಯೇ ಅತಿ ಜನಪ್ರಿಯವಾದ ಆಸನವೆಂದರೆ ಸೂರ್ಯ ನಮಸ್ಕಾರ. ಸೂರ್ಯ ನಮಸ್ಕಾರದಲ್ಲಿ ಸುಮಾರು ಹನ್ನೆರಡು ಹಂತಗಳಿದ್ದು ಪ್ರತಿ ಹಂತದಲ್ಲಿಯೂ ಪಠಿಸಬೇಕಾದ ಪ್ರತ್ಯೇಕ ಮಂತ್ರಗಳಿವೆ. ಆದರೆ ಮಂತ್ರೋಚ್ಛಾರಣೆ ಈ ನಮಸ್ಕಾರಕ್ಕೆ ದೈವಿಕ ಪ್ರಾಮುಖ್ಯತೆ ನೀಡುತ್ತದೆಯೇ ವಿನಃ ಮಂತ್ರದ ಪಠಣ ಕಡ್ಡಾಯವಲ್ಲ. ಸೂರ್ಯ ನಮಸ್ಕಾರದಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ. ಪ್ರಮುಖವಾಗಿ ರಕ್ತಪರಿಚಲನೆ ಮತ್ತು ಪಚನಕ್ರಿಯೆಯನ್ನು ಉತ್ತಮಗೊಳಿಸುವುದು ಹಾಗೂ ತೂಕವನ್ನು ಇಳಿಸುವುದು. ಅಲ್ಲದೇ ಈ ಆಸನ ಧನಾತ್ಮಕ ಶಕ್ತಿಯನ್ನು ದೇಹದಲ್ಲಿ ಆವರಿಸುವ ಮೂಲಕ ದಿನವಿಡೀ ಉಲ್ಲಸಿತರಾಗಿರಲು ನೆರವಾಗುತ್ತದೆ. ಒಂದು ಬಾರಿ ಪೂರ್ಣವಾದ ಸೂರ್ಯ ನಮಸ್ಕಾರ ಅನುಸರಿಸುವ ಮೂಲಕ 13.9 ಕ್ಯಾಲೋರಿಗಳು ವ್ಯಯವಾಗುತ್ತವೆ.

ಸೂರ್ಯ ನಮಸ್ಕಾರದಿಂದ ವ್ಯಕ್ತಿಯು ಆರೋಗ್ಯಕರ ಶರೀರ ಹಾಗೂ ಮಾನಸಿಕ ಶಾಂತಿ ಪಡೆಯಲು ನೆರವಾಗುತ್ತದೆ. ಈ ಮೊದಲೇ ತಿಳಿಸಿದಂತೆ, ಈ ಆಸನದಲ್ಲಿ ಒಟ್ಟು ಹನ್ನೆರಡು ಹಂತಗಳಿವೆ. ಪ್ರಾಣಾಯಾಮದಿಂದ ಸೂರ್ಯ ನಮಸ್ಕಾರ ಪ್ರಾರಂಭವಾಗುತ್ತದೆ. ಮೊದಲಿಗೆ ಕೈ ಮಡಚಿಕೊಂಡು ನಿಮ್ಮ ಯೋಗಾಭ್ಯಾಸದ ಚಾಪೆಯ ಮೇಲೆ ನೆಟ್ಟಗೆ ನಿಲ್ಲಬೇಕು. ಬಳಿಕ ಹಸ್ತಉತ್ಥನಾಸನ ಅಥವಾ ಕೈಗಳನ್ನು ಮೇಲೆ ಎತ್ತುವ ಆಸನ ಅನುಸರಿಸಿ. ಬಳಿಕ ಹಸ್ತಪಾದಾಸನದಲ್ಲಿ ಮುಂದುವರೆಯಬೇಕು, ಅಂದರೆ ನಿಂತಲ್ಲೇ ಮುಂದೆ ಬಗ್ಗುವ ಆಸನವಾಗಿದೆ.

ನಾಲ್ಕನೆಯದಾಗಿ ಅಶ್ವ ಸಂಚಲನಾಸನ ಅಥವಾ ಅಶ್ವರೋಹಣಾ ಭಂಗಿಯ ಆಸನವನ್ನು ಅನುಸರಿಸಬೇಕು. ಐದನೆಯದಾಗಿ ದಂಡಾಸನ ಅಂದರೆ ಶರೀರವನ್ನು ನೆಟ್ಟಗೆ ದಂಡದಂತೆ ಸೆಟೆಯಬೇಕು. ಬಳಿಕ ಅಷ್ಟಾಂಗ ನಮಸ್ಕಾರವನ್ನು ಅನುಸರಿಸಬೇಕು. ಇದರ ನಂತರ ಭುಜಂಗಾಸನ ಅಥವಾ ಹಾವಿನ ಭಂಗಿಯನ್ನು ಹೋಲುವ ಆಸನವನ್ನು ಅನುಸರಿಸಬೇಕು ನಂತರ ಹಿಮ್ಮರಳಿ ಅಶ್ವ ಸಂಚಾಲಾಸನ, ನಂತರ ಹಸ್ತಪಾದಾಸನ, ಹಸ್ತಉತ್ಥನಾಸನ ಹಾಗೂ ಕಡೆಯದಾಗಿ ಪ್ರಾಣಾಯಾಮದೊಂದಿಗೆ ಪೂರ್ಣಗೊಳಿಸಬೇಕು.

Surya Namaskar

"ಸೂರ್ಯ ನಮಸ್ಕಾರ", ಹೆಸರೇ ತಿಳಿಸುವಂತೆ ಸೂರ್ಯದೇವನಿಗೆ ಸಲ್ಲಿಸುವ ಚಿರಂತನ ನಮನವಾಗಿದೆ. ಈ ವ್ಯಾಯಾಮದಿಂದ ಸೂರ್ಯನ ಕಿರಳಗಳಲ್ಲಿರುವ ಧನಾತ್ಮಕ ಶಕ್ತಿ ದೇಹವನ್ನು ಆವರಿಸಿ ಸುಪ್ತವಾದ ಬುದ್ದಿವಂತಿಕೆಯನ್ನು ಪ್ರಜ್ವಲಿಸಲು ನೆರವಾಗುತ್ತದೆ. ಸೂರ್ಯನಮಸ್ಕಾರದಿಂದ ಸೂರ್ಯನ ಶಕ್ತಿಯ ಅವಗಾಹನೆ ಸಾಧ್ಯವಾಗುತ್ತದೆ ಆದರೆ ಇದಕ್ಕಾಗಿ ಸೂಕ್ತ ಸಮಯದಲ್ಲಿ ಸೂರ್ಯನಮಸ್ಕಾರ ಅನುಸರಿಸುವುದು ಅಗತ್ಯವಾಗಿದೆ. ಯೋಗ ತರಬೇತುದಾರರು ಹಾಗೂ ಈಗಾಗಲೇ ಯೋಗಾಭ್ಯಾಸದ ಪಟ್ಟುಗಳಲ್ಲಿ ಪಾರಾಂಗತರಾಗಿ ಪ್ರವೀಣರಾದ ಯೋಗಪಟುಗಳ ಪ್ರಕಾರ ಸೂರ್ಯನಮಸ್ಕಾರವನ್ನು ಸೂರ್ಯನ ಪ್ರಥಮ ಕಿರಣಗಳು ಸೋಕುವ ಹೊತ್ತಿನಲ್ಲಿ ಅನುಸರಿಸುವುದು ಅತ್ಯುತ್ತಮವಾಗಿದೆ.

ಆದರೆ ಸೂರ್ಯನಮಸ್ಕಾರವನ್ನು ಕೇವಲ ಪ್ರಾತಃಕಾಲದಲ್ಲಿ ಮಾತ್ರವೇ ಅನುಸರಿಸಬೇಕೆಂದೇನೂ ಕಡ್ಡಾಯವಿಲ್ಲ. ಸಂಜೆಯ ಹೊತ್ತಿನಲ್ಲಿಯೂ ಅನುಸರಿಸಬಹುದು. ಇಂದು ಹೆಚ್ಚಿನವರು ತಮ್ಮ ಉದ್ಯೋಗಗಳಿಗೆ ತೆರಳುವ ಧಾವಂತದಲ್ಲಿ ಬೆಳಗ್ಗಿನ ಸಮಯದಲ್ಲಿ ಸೂರ್ಯನಮಸ್ಕಾರ ಅನುಸರಿಸಲು ಸಾಧ್ಯವಾಗದೇ ಹೋಗುವುದರಿಂದ ಈ ವ್ಯಕ್ತಿಗಳು ಸಂಜೆಯ ಹೊತ್ತಿನಲ್ಲಿ ಅನುಸರಿಸಬಹುದು .

ಒಂದು ವೇಳೆ ನೀವು ಸೂರ್ಯ ನಮಸ್ಕಾರವನ್ನು ತೂಕ ಕಳೆದುಕೊಳ್ಳುವುದಕ್ಕಿಂತಲೂ ಆರೋಗ್ಯ ವೃದ್ಧಿಗಾಗಿಯೇ ಯೋಗಾಭ್ಯಾಸವನ್ನು ಅನುಸರಿಸುತ್ತಿದ್ದರೆ ಹಾಗೂ ಯೋಗಾಸನದ ಎಲ್ಲಾ ಪಟುಗಳನ್ನು ಕಲಿತುಕೊಂಡು ಪ್ರವೀಣರಾಗಬಯಸಿದರೆ ಪ್ರಾತಃಕಾಲದಲ್ಲಿ ಯೋಗಾಸನ ಅನುಸರಿಸುವುದೇ ಸೂಕ್ತವಾಗಿದೆ. ಅದರಲ್ಲೂ ಪ್ರಾತಃಕಾಲದಲ್ಲಿ ಸೂರ್ಯನಿಗೆ ಎದುರಾಗಿ ಖಾಲಿಹೊಟ್ಟೆಯಲ್ಲಿ ಅನುಸರಿಸಬೇಕು. ಸೂರ್ಯನ ಪ್ರಥಮ ಕಿರಣಗಳಲ್ಲಿನ ಧನಾತ್ಮಕ ಶಕ್ತಿ ನಮ್ಮ ಆರೋಗ್ಯಕ್ಕೆ ಪೂರಕವಾಗಿದೆ.

ಅಲ್ಲದೇ, ಈ ಹೊತ್ತು ಗಜಿಬಿಜಿಯಿಲ್ಲದ, ಶಾಂತಿಯುತ ಹಾಗೂ ತಣ್ಣನೆಯ ವಾತಾವರಣವಿದ್ದು ಹೆಚ್ಚಿನ ತಾಜಾಹವೆಯಲ್ಲಿ ಈ ಆಸನವನ್ನು ಅನುಸರಿಸುವುದು ಸುಲಭ ಹಾಗೂ ಹೆಚ್ಚು ಫಲಕಾರಿಯಾಗಿದೆ. ಒಂದು ವೇಳೆ ಹೊರಗಿನ ತೆರೆದ ವಾತಾವರಣದಲ್ಲಿ ನಿರ್ವಹಿಸಲು ಅನುಕೂಲವಾಗದೇ ಇದ್ದರೆ ಮನೆಯಲ್ಲಿಯೇ ನಿರ್ವಹಿಸಬಹುದು. ಈ ಸಮಯದಲ್ಲಿ ಕಿಟಕಿಗಳನ್ನು ವಿಶಾಲವಾಗಿ ತೆರೆದು ಗರಿಷ್ಟ ಪ್ರಮಾಣದ ಗಾಳಿ ಹಾಗೂ ಬೆಳಕು ಬರುವಂತೆ ಮಾಡಬೇಕು. ಒಂದು ವೇಳೆ ಯೋಗಾಸನವನ್ನು ಇತ್ತೀಚೆಗೆ ಪ್ರಾರಂಭಿಸಿದ್ದರೆ ಸಂಜೆಯ ವೇಳೆ ಅನುಸರಿಸುವುದು ಸೂಕ್ತ ಏಕೆಂದರೆ ಈ ಹೊತ್ತಿನಲ್ಲಿ ಈ ವ್ಯಕ್ತಿಗಳ ದೇಹ ಸಾಕಷ್ಟು ಬೆಚ್ಚಗಾಗಿರುತ್ತದೆ.

ಬೆಳಗ್ಗಿನ ಹೊತ್ತು ದೇಹ ಹೆಚ್ಚು ಸೆಟೆದುಕೊಂಡಿರುತ್ತದೆ. ಆದರೂ ಪ್ರಾತಃ ಕಾಲದಲ್ಲಿ ಸೂರ್ಯನಮಸ್ಕಾರ ಅನುಸರಿಸುವುದು ಈ ವ್ಯಕ್ತಿಗಳಿಗೆ ಇಷ್ಟವಿದ್ದರೂ ಇವರು ಸಂಜೆಯ ವೇಳೆಯಲ್ಲಿ ಇದನ್ನು ಸರಿಯಾಗಿ ಅನುಸರಿಸುವಷ್ಟು ಪರಿಣಿತಿ ಪಡೆದ ಬಳಿಕವೇ ಮುಂಜಾನೆಯ ಹೊತ್ತೂ ಅನುಸರಿಸಬೇಕು. ಅಲ್ಲದೇ ಈ ಆಸನವನ್ನು ಆದಷ್ಟೂ ಸಾವಕಾಶವಾಗಿ ನಿರ್ವಹಿಸಬೇಕು, ಆಗಲೇ ಇದರ ಗರಿಷ್ಠ ಪ್ರಯೋಜನವನ್ನು ಪಡೆಯಬಹುದು ಹಾಗೂ ಈ ಆಸನದ ಪ್ರತಿ ಹಂತವನ್ನೂ ಸರಿಯಾಗಿ ನಿರ್ವಹಿಸುವುದು ಅಗತ್ಯವಾಗಿದೆ. ಅಲ್ಲದೇ ಪ್ರತಿದಿನ ಸುಮಾರು ಹನ್ನೆರಡು ಬಾರಿ ಸೂರ್ಯನಮಸ್ಕಾರವನ್ನು ಪುನರಾವರ್ತಿಸಬೇಕು.

ಇದಕ್ಕೂ ಮುನ್ನ ಆದಷ್ಟೂ ದೇಹವನ್ನು ಬೆಚ್ಚಗಾಗಿಸುವ ಸರಳ ವ್ಯಾಯಾಮಗಳನ್ನು ಅನುಸರಿಸುವುದೂ ಅಗತ್ಯ. ವಿಶೇಷವಾಗಿ ಇದುವರೆಗೆ ವ್ಯಾಯಾಮ ಮಾಡದೇ ದೇಹ ಹೆಚ್ಚು ಬಿರುಸಾಗಿದ್ದವರಿಗೆ ಸರಳ ವ್ಯಾಯಾಮಗಳು ಹೆಚ್ಚು ಅಗತ್ಯವಾಗಿವೆ. ಆದರೆ ಸೂರ್ಯ ನಮಸ್ಕಾರವನ್ನು ಗರ್ಭವತಿಯರು, ಹರ್ನಿಯಾ ತೊಂದರೆಯಿಂದ ಬಳಲುತ್ತಿರುವವರು, ಅಧಿಕ ರಕ್ತದೊತ್ತಡದ ರೋಗಿಗಳು, ಕೆಳಬೆನ್ನುನೋವಿನ ತೊಂದರೆ ಇರುವವರು ಹಾಗೂ ಮಾಸಿಕ ದಿನಗಳಲ್ಲಿರುವ ಮಹಿಳೆಯರು ನಿರ್ವಹಿಸಬಾರದು. ಆದರೆ ಪ್ರತಿ ವ್ಯಕ್ತಿಯ ಆರೋಗ್ಯವನ್ನು ಪರಿಗಣಿಸಿ ವೈದ್ಯರು ಅನುಮತಿ ನೀಡಿದರೆ ಮಾತ್ರವೇ ಮುಂದುವರೆಯಬಹುದು.

ಇನ್ನು ಗರ್ಭಿಣಿಯರು ವೈದ್ಯರ ಸಲಹೆ ಮೇರೆಗೆ ಹೆರಿಗೆಯ ದಿನ ಸಮೀಪಿಸಲು ಎಷ್ಟು ಸಾಧ್ಯವೋ ಅಷ್ಟು ದಿನ ನಿರ್ವಹಿಸುವ ಮೂಲಕ ಸಾಮಾನ್ಯ ಹೆರಿಗೆಯಾಗುವ ಸಾಧ್ಯತೆ ಹೆಚ್ಚುತ್ತದೆ. ಸೂರ್ಯನಮಸ್ಕಾರದ ಮೂಲಕ ಮಹಿಳೆಯರ ದೇಹದಲ್ಲಿ ಸ್ರವಿಸುವ ಹಾರ್ಮೋನುಗಳು ಸೂಕ್ತ ಪ್ರಮಾಣದಲ್ಲಿ ಸ್ರವಿಸುವ ಮೂಲಕ ಇದು ಸಾಧ್ಯವಾಗುತ್ತದೆ. ಆದ್ದರಿಂದ, ಸೂರ್ಯನಮಸ್ಕಾರ ಯೋಗಾಭ್ಯಾಸದಲ್ಲಿಯೇ ಅತ್ಯಂತ ಪ್ರಮುಖವಾದ ಹಾಗೂ ಅತ್ಯುತ್ತಮವಾದ ಆಸನವಾಗಿದೆ.

ಇದನ್ನು ಅನುಸರಿಸುವವರ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ವೃದ್ಧಿಸುವುದು ಹಾಗೂ ದಿನವಿಡೀ ಚೈತನ್ಯದಿಂದಿರಲು ಸಾಧ್ಯವಾಗುತ್ತದೆ. ಒಂದು ವೇಳೆ ನಿಮ್ಮ ನಿತ್ಯದ ಯಾಂತ್ರಿಕ ಬದುಕಿನಲ್ಲಿ ಕೊಂಚ ಬದಲಾವಣೆ ಬೇಕೆಂದಿದ್ದರೆ ಹಾಗೂ ಆರೋಗ್ಯ ವೃದ್ಧಿಸಬೇಕೆಂದಿದ್ದರೆ ಯೋಗಾಭ್ಯಾಸ ಉತ್ತಮ ಆಯ್ಕೆಯಾಗಿದೆ ಹಾಗೂ ಯೋಗಾಸನಗಳಲ್ಲಿಯೇ ಸೂರ್ಯನಮಸ್ಕಾರ ಅತಿ ಮಹತ್ತರದ್ದಾಗಿದೆ.

English summary

What Is The Perfect Time To Do Surya Namaskar?

One of the most well-known asanas of Yoga is the Surya Namaskar. It is a set of 12 different Yoga poses that can be performed while chanting 12 different mantras; however, that isn't necessary, it just adds a spiritual element to the whole workout. The asana has immense health benefits - it improves blood circulation and aids in digestion and weight loss.
X
Desktop Bottom Promotion