For Quick Alerts
ALLOW NOTIFICATIONS  
For Daily Alerts

ಬೆಣ್ಣೆ ಹಾಕಿದ ಚಹಾ ಕುಡಿದರೆ 8 ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು!

|

ಟಿಬೇಟಿಯನ್ನರ ನೆಚ್ಚಿನ ಬೆಣ್ಣೆ-ಟೀ ಅಂದರೇನು? ಟಿಬೆಟ್ ದೇಶದಲ್ಲಿ ಪ್ರಾರಂಭವಾದ ಈ ಟಿಬೇಟನ್ ಬಟರ್ ಟೀ ಅಥವಾ ಅವರ ಭಾಷೆಯಲ್ಲಿ ಹೇಳುವಂತೆ 'ಪೋ ಚಾ' ಹಿಮಾಲಯದ ತಪ್ಪಲಿನಲ್ಲಿರುವ ಭೂತಾನ್, ನೇಪಾಳ, ಭಾರತದ ಉತ್ತರಪೂರ್ವ ರಾಜ್ಯಗಳು ಮೊದಲಾದವುಗಳಲ್ಲಿ ಸೇವಿಸಲ್ಪಡುವ ಜನಪ್ರಿಯ ಪೇಯವಾಗಿದೆ. ಇಂದಿನ ಲೇಖನದಲ್ಲಿ ಇ ಪೋ ಚಾ ವನ್ನು ತಯಾರಿಸುವುದು ಹೇಗೆ ಹಾಗೂ ಇದರ ಸೇವನೆಯಿಂದ ತೂಕ ಇಳಿಸುವ ನಿಟ್ಟಿನಲ್ಲಿ ಯಾವ ಬಗೆಯ ಸಹಾಯ ಲಭಿಸಲಿದೆ ಎಂಬುದನ್ನು ವಿವರಿಸಲಾಗಿದೆ.

ವಾಸ್ತವವಾಗಿ ಬೆಣ್ಣೆ ತೂಕ ಹೆಚ್ಚಿಸುವ ಆಹಾರವಾಗಿದ್ದರೂ ಇದನ್ನು ಬಿಸಿಯಾದ ಟೀ ಜೊತೆಗೆ ಬೆರೆಸಿ ಕುಡಿದಾಗ ತೂಕ ಇಳಿಸುವಲ್ಲಿ ನೆರವಾಗುವುದು ಮಾತ್ರ ಅಚ್ಚರಿ ಮೂಡಿಸುತ್ತದೆ. ಈ ಆರೋಗ್ಯಕರ ಕೊಬ್ಬು ಹೊಟ್ಟೆಯನ್ನು ಹೆಚ್ಚು ಹೊತ್ತಿನವರೆಗೆ ತುಂಬಿರುವ ಭಾವನೆ ಮೂಡಿಸುತ್ತದೆ ಹಾಗೂ ಈ ಮೂಲಕ ಅನಗತ್ಯ ಆಹಾರ ಸೇವನೆಯಿಂದ ತಪ್ಪಿಸುತ್ತದೆ.

ಬೆಣ್ಣೆ ಹಾಕಿದ ಟೀಯಲ್ಲಿ ಹೆಚ್ಚಿನ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿದ್ದು ಇವು ಜೀವಕೋಶಗಳ ಸವೆತವನ್ನು ತಡೆಯುತ್ತವೆ ಹಾಗೂ ತಾರುಣ್ಯ ಮತ್ತು ಆರೋಗ್ಯವನ್ನು ಬಹುಕಾಲದವರೆಗೆ ಉಳಿಸಿಕೊಳ್ಳಲು ನೆರವಾಗುತ್ತವೆ. ಅಲ್ಲದೇ ಇಂದು ಹೆಚ್ಚು ಹೆಚ್ಚು ಜನರು ಪುರಾತನ ಜನರ ಆಹಾರಕ್ರಮವನ್ನು ಅನುಸರಿಸುವತ್ತ (paleo diet) ಒಲವು ತೋರುತ್ತಿದ್ದಾರೆ. ಈ ಆಹಾರಕ್ರಮದ ಮೂಲಕ ಹೆಚ್ಚಿನ ಪ್ರೋಟೀನು ಲಭಿಸುತ್ತಿದ್ದರೂ ತೂಕ ಮಾತ್ರ ಇಳಿಯುತ್ತದೆ.

Butter Tea

ಬೆಣ್ಣೆ ಹಾಕಿದ ಟೀ ತಯಾರಿಸುವ ಸಾಂಪ್ರಾದಾಯಿಕ ವಿಧಾನ ಯಾವುದು?

ಟಿಬೆಟ್ ನಲ್ಲಿ ಈ ಸಾಂಪ್ರಾದಾಯಿಕ ವಿಧಾನವನ್ನೇ ಇಂದಿಗೂ ಬಳಸಲಾಗುತ್ತಿದ್ದು ಸಾಮಾನ್ಯ ಟೀ ತಯಾರಿಸುವುದಕ್ಕಿಂತಲೂ ಹೆಚ್ಚು ಸಮಯ ತಗಲುತ್ತದೆ. ಈ ಭಾಗದಲ್ಲಿ ದೊರಕುವ ವಿಶಿಷ್ಟವಾದ ಕಪ್ಪು ಟೀ ಎಲೆಗಳನ್ನು ಕತ್ತರಿಸಿ ನುಜ್ಜುಗುಜ್ಜಾಗಿಸಿ ಬಳಿಕ ಇದನ್ನು ನೀರಿನಲ್ಲಿ ಕೆಲವಾರು ಘಂಟೆಗಳ ಕಾಲ ಕುದಿಸಲಾಗುತ್ತದೆ. ಬಳಿಕ ಈ ನೀರನ್ನು ಟೀ ತಯಾರಿಸಲು ಬಳಸಲಾಗುತ್ತದೆ. ಕುಡಿಯುವ ಸಮಯದಲ್ಲಿ ಇದಕ್ಕೆ ಹೆಣ್ಣು ಯಾಕ್ ಪ್ರಾಣಿಯ ದಪ್ಪನೆಯ ಹಾಲು ಮತ್ತು ಬೆಣ್ಣೆಯನ್ನು ಬೆರೆಸಿ ಕುಡಿಯಲಾಗುತ್ತದೆ. ಬೆಣ್ಣೆ ಬೆರೆಸಿದ ಟೀ ಸೇವನೆಯ ಪ್ರಯೋಜನಗಳೇನು? ಇಲ್ಲಿವೆ ಪ್ರಮುಖ ಎಂಟು ಪ್ರಯೋಜನಗಳ ವಿವರಗಳು:

1.ತೂಕದಲ್ಲಿ ಇಳಿಕೆ: ಬೆಣ್ಣೆ ಸೇವಿಸಿಯೂ ತೂಕ ಇಳಿಸಿಕೊಳ್ಳುವುದು ಒಂದು ಅಚ್ಚರಿಯ ವಿಷಯವಾಗಿದೆ. ಆದರೂ ಬೆಣ್ಣೆ ಬೆರೆಸಿದ ಟೀ ಕುಡಿಯುವ ಮೂಲಕ ತೂಕ ಖಂಡಿತವಾಗಿಯೂ ಇಳಿಯುತ್ತದೆ. ಅತಿ ಹೆಚ್ಚಲ್ಲದ ಪ್ರಮಾಣದಲ್ಲಿ ಈ ಟೀಯನ್ನು ನಿಯಮಿತವಾಗಿ ಸೇವಿಸಿದಾಗ ಇದು ಹಸಿವನ್ನು ನಿಗ್ರಹಿಸಿ ಹೆಚ್ಚಿನ ಕೊಬ್ಬನ್ನು ಕರಗುವಂತೆ ಮಾಡುತ್ತದೆ. ಅಲ್ಲದೇ ಈ ಟೀ ಯಲ್ಲಿರುವ ಕೆಫೀನ್ ಒಂದು ಬಗೆಯ ಪ್ರಚೋದಕದಂತೆ ಕೆಲಸ ನಿರ್ವಹಿಸುತ್ತದೆ ಹಾಗೂ ಜೀವ ರಾಸಾಯನಿಕ ಕ್ರಿಯೆಯನ್ನು ಹಸಿವಾಗದಂತೆಯೇ ಚುರುಕುಗೊಳಿಸುತ್ತದೆ. ಬೆಣ್ಣೆಯಲ್ಲಿರುವ ಕೊಬ್ಬು ಹೊಟ್ಟೆಯನ್ನು ಹೆಚ್ಚು ಹೊತ್ತಿನವರೆಗೆ ತುಂಬಿರುವ ಭಾವನೆ ಮೂಡಿಸುತ್ತದೆ.

2. ಶಕ್ತಿಯನ್ನು ವೃದ್ಧಿಸುತ್ತದೆ
ಈ ಟೀಯಲ್ಲಿ ಹೆಚ್ಚಿನ ಪ್ರಮಾಣದ ಕೆಫೇನ್ ಇದ್ದು ಇದರ ಸೇವನೆಯಿಂದ ಹೆಚ್ಚಿನ ಶಕ್ತಿ ಲಭಿಸುತ್ತದೆ. ಕೆಫೀನ್ ದೇಹದ ಚಟುವಟಿಕೆಗಳಿಗೆ ಈ ಹೆಚ್ಚಿನ ಚುರುಕುತನ ದೊರಕುವಂತೆ ಮಾಡುವುದಲ್ಲದೇ ಆರೋಗ್ಯಕರ ಕೊಬ್ಬು ಈ ಕೆಲಸಗಳಿಗೆ ಅಗತ್ಯವಾದ ಶಕ್ತಿ ಮತ್ತು ಹುರುಪನ್ನು ನೀಡಲು ನೆರವಾಗುತ್ತದೆ.

3. ಮೆದುಳಿನ ಆರೋಗ್ಯಕ್ಕೂ ಒಳ್ಳೆಯದು
ಬೆಣ್ಣೆ ಹಾಕಿದ ಟೀ ಯಲ್ಲಿ ಸಮೃದ್ಧವಾದ ಆಂಟಿ ಆಕ್ಸಿಡೆಂಟುಗಳಿವೆ ಹಾಗೂ ಇವು ಮೆದುಳಿಗೆ ಘಾಸಿ ಎಸಗುವ ಕ್ಯಾನ್ಸರ್ ಕಾರಕ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ದ ಹೋರಾಡುತ್ತವೆ ಹಾಗೂ ಈಗಾಗಲೇ ಘಾಸಿಗೊಂಡಿರುವ ಜೀವಕೋಶಗಳ ಮರುಹುಟ್ಟಿಗೆ ನೆರವಾಗುತ್ತವೆ. ತನ್ಮೂಲಕ ಸ್ಮರಣಶಕ್ತಿ ಕುಂದುವಿಕೆ, ಅಲ್ಜೀಮರ್ಸ್ ಕಾಯಿಲೆ ಮೊದಲಾದವುಗಳಿಂದ ರಕ್ಷಿಸುತ್ತದೆ. ಅಲ್ಲದೇ ಈ ಟೀ ಸೇವನೆಯಿಂದ ಮೆದುಳಿನ ಕ್ಷಮತೆ ಹೆಚ್ಚುತ್ತದೆ ಹಾಗೂ ಏಕಾಗ್ರತೆ ಪಡೆಯಲು ಹಾಗೂ ಹೆಚ್ಚಿನ ಗಮನ ನೀಡಲು ಸಾಧ್ಯವಾಗುತ್ತದೆ.

4. ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ
ಈ ಟೀಯಲ್ಲಿರುವ ಇನ್ನೊಂದು ಅತ್ಯುತ್ತಮ ಪ್ರಯೋಜನವೆಂದರೆ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವುದಾಗಿದೆ. ತನ್ಮೂಲಕ ಅಜೀರ್ಣತೆ (dyspepsia), ಹೊಟ್ಟೆಯುಬ್ಬರಿಕೆ ಮೊದಲಾದ ತೊಂದರೆಗಳನ್ನು ನಿವಾರಿಸಲು ಸಾಧ್ಯವಾಗುತ್ತದೆ. ಅಲ್ಲದೇ ಈ ಟೀ ಸೇವನೆಯಿಂದ ಹೊಟ್ಟೆ ಮತ್ತು ಕರುಳುಗಳಲ್ಲಿರುವ ಆಮ್ಲೀಯ ದ್ರವದ ಆಮ್ಲೀಯತೆಯನ್ನು ಸರಿಪಡಿಸುವ ಮೂಲಕ ಆಮ್ಲೀಯತೆಯಿಂದ ಎದುರಾಗುವ ಹೊಟ್ಟೆಯುರಿ, ಹುಳಿತೇಗು (gastroesophageal reflux disease (GERD), ಎದೆಯುರಿ ಮೊದಲಾದವುಗಳು ಆವರಿಸುವ ಸಾಧ್ಯತೆ ಕಡಿಮೆಯಾಗುತ್ತದೆ.

5. ಹೃದಯದ ಆರೋಗ್ಯವನ್ನು ಉತ್ತಮಗೊಳಿಸುತ್ತದೆ
ಅಧಿಕ ಕೊಲೆಸ್ಟ್ರಾಲ್ ಹೃದಯದ ಆರೋಗ್ಯಕ್ಕೆ ಕೆಟ್ಟದ್ದು ಹಾಗೂ ಕೊಲೆಸ್ಟ್ರಾಲ್ ಸಂಗ್ರಹ ಹೃದಯದ ಕಾಯಿಲೆಗಳಿಗೆ ಆಹ್ವಾನ ಎಂದು ನಮ್ಮೆಲ್ಲರಿಗೆ ಗೊತ್ತು. ಆದರೆ ಬೆಣ್ಣೆ ಬೆರೆಸಿದ ಟೀ ಕುಡಿಯುವ ಮೂಲಕ ಇದು ಹೃದಯದ ಮೇಲೆ ಯಾವುದೇ ಕೆಟ್ಟ ಪರಿಣಾಮವನ್ನುಂಟುಮಾಡುವುದಿಲ್ಲ. ಏಕೆಂದರೆ ಇದರಲ್ಲಿರುವ ಲಿನೋಲಿಕ್ ಆಮ್ಲ ಹೃದಯಸ್ನೇಹಿಯಾಗಿರುವ ಜೊತೆಗೇ ಈಗಾಗಲೇ ಸಂಗ್ರಹಗೊಂಡಿರುವ ಕೆಟ್ಟ ಕೊಲೆಸ್ಟ್ರಾಲ್ ಕಣಗಳನ್ನು ಸಡಿಲಿಸಿ ನಿವಾರಿಸಲೂ ನೆರವಾಗುವ ಮೂಲಕ ಹೃದಯದ ತೊಂದರೆಗಳ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.

6. ಮಲಬದ್ದತೆಯಿಂದ ರಕ್ಷಿಸುತ್ತದೆ
ಮಲಬದ್ಧತೆ ಎದುರಾದರೆ ಏನು ಮಾಡುವಿರಿ? ಸುಲಭ ಉತ್ತರವೆಂದರೆ ಹೆಚ್ಚು ನೀರು ಕುಡಿಯುವುದು ಹಾಗೂ ನಾರು ಹೆಚ್ಚಿರುವ ಆಹಾರಗಳನ್ನು ಸೇವಿಸುವುದು, ಅಲ್ಲವೇ? ಆದರೆ ತಜ್ಞರ ಪ್ರಕಾರ ಜೀರ್ಣಾಂಗಗಳ ಸಮರ್ಥ ಕಾರ್ಯನಿರ್ವಹಣೆಗೆ ನಮ್ಮ ಆಹಾರದಲ್ಲಿ ಸಾಕಷ್ಟು ಆರೋಗ್ಯಕರ ಕೊಬ್ಬುಗಳೂ ಇರಬೇಕು. ಪ್ರತಿ ಬಾರಿ ಆರೋಗ್ಯಕರ ಕೊಬ್ಬನ್ನು ಸೇವಿಸಿದಾಗ ನಮ್ಮ ಪಿತ್ತಕೋಶ ಪಿತ್ತರಸವನ್ನು ಉತ್ಪಾದಿಸುತ್ತದೆ. ಪಿತ್ತರಸ ಜೀರ್ಣಗೊಂಡ ಆಹಾರ ಕರುಳುಗಳ ಒಳಗೆ ಚಲಿಸಲು ಅಗತ್ಯವಾದ ಜಾರುವಿಕೆಯನ್ನು ನೀಡುತ್ತದೆ ಹಾಗೂ ಕರುಳುಗಳ ಗೋಡೆಗಳ ಸಂಕುಚನದಿಂದ ಆಹಾರ ಮುಂದೆ ಸಾಗಲು (peristalsis) ಸುಲಭವಾಗುತ್ತದೆ.

7. ಮಧ್ಯಾಹ್ನದ ಊಟಕ್ಕೂ ಮುನ್ನ ಹಸಿವಾದರೆ ಬೆಣ್ಣೆ ಟೀ ಸೇವಿಸಿ
ನಮ್ಮಲ್ಲಿ ಹೆಚ್ಚಿನವರ ಕೆಲಸ ಕಾರ್ಯಗಳು ಹಗಲಿನ ಪ್ರಾರಂಭದಿಂದ ತೊಡಗಿ ಮದ್ಯಾಹ್ನದವರೆಗೆ ಗರಿಷ್ಟವಾಗಿರುತ್ತದೆ ಹಾಗೂ ಈ ಮೂಲಕ ಜೀವರಾಸಾಯನಿಕ ಕ್ರಿಯೆಯೂ ಚುರುಕಾಗಿಯೇ ಇರುತ್ತದೆ. ಪರಿಣಾಮವಾಗಿ ಬೆಳಗ್ಗಿನ ಉಪಾಹಾರ ಸೇವಿಸಿದ್ದರೂ ಮದ್ಯಾಹ್ನಕ್ಕೂ ಮುನ್ನವೇ ಹಸಿವಾಗತೊಡಗುತ್ತದೆ. ಈ ಸಮಯವನ್ನೇ ಹೊಂಚು ಹಾಕುತ್ತಿರುವ ಸಿದ್ದ ಆಹಾರಗಳು ಬ್ರಂಚ್ ಎಂಬ ಹೆಸರಿನಲ್ಲಿ ಅನಗತ್ಯ ಆಹಾರವನ್ನು ಒದಗಿಸಲು ತುದಿಗಾಲಿನಲ್ಲಿ ನಿಂತಿರುತ್ತವೆ. ಆದರೆ ಈ ಪ್ರಲೋಭನೆಗೆ ಒಳಗಾಗದೇ ಬೆಣ್ಣೆ ಬೆರೆಸಿದ ಟೀ ಕುಡಿಯುವುದು ಉತ್ತಮ ಆಯ್ಕೆಯಾಗಿದೆ. ಇದರಲ್ಲಿರುವ ಬೆಣ್ಣೆ ರಕ್ತದಲ್ಲಿರುವ ಸಕ್ಕರೆಯ ಮಟ್ಟಗಳನ್ನು ಸಮತೋಲನದಲ್ಲಿರಿಸುತ್ತದೆ ಹಾಗೂ ಹಸಿವಾಗುವುದನ್ನು ತಡೆಯುತ್ತದೆ.

8. ಆಂಟಿ ಆಕ್ಸಿಡೆಂಟುಗಳಿಂದ ಸಮೃದ್ದವಾಗಿದೆ
ಕಾಫಿ ಮತ್ತು ಟೀ ಗಳಲ್ಲಿ ಆಂಟಿ ಆಕ್ಸಿಡೆಂಟುಗಳು ಸಮೃದ್ದವಾಗಿವೆ. ಬೆಣ್ಣೆಯಲ್ಲಿ ಅಲ್ಪ ಪ್ರಮಾಣದ ಹಾಲಿನ ಪ್ರೋಟೀನ್ ಇದ್ದು ಇದು ಆಂಟಿ ಆಕ್ಸಿಡೆಂಟುಗಳನ್ನು ದೇಹ ಹೀರಿಕೊಳ್ಳಲು ಯಾವುದೇ ಅಡ್ಡಿಯುಂಟುಮಾಡುವುದಿಲ್ಲ. ಯಾವಾಗ ಕಾಫಿ ಟೀ ಕುಡಿಯಲು ಮನ ಹಾತೊರೆಯುತ್ತದೆಯೋ ಆಗ ಕೊಂಚ ಪ್ರಮಾಣದ ಬೆಣ್ಣೆ ಬೆರೆಸುವ ಮೂಲಕ ಟೀ ಕಾಫಿಯಲ್ಲಿರುವ ಆಂಟಿ ಆಕ್ಸಿಡೆಂಟುಗಳನ್ನು ದೇಹ ಪಡೆದುಕೊಳ್ಳಲು ನೆರವಾಗುತ್ತದೆ ಹಾಗೂ ಇನ್ನೊಂದು ಒಳ್ಳೆಯ ಅಂಶವೆಂದರೆ ಕೆಲವು ಆಂಟಿ ಆಕ್ಸಿಡೆಂಟುಗಳು ಕೊಬ್ಬಿನಲ್ಲಿ ಕರಗುತ್ತವೆ ಹಾಗೂ ಸಾಮಾನ್ಯವಾಗಿ ಲಭಿಸದೇ ಹೋಗುವ ಈ ಆಂಟಿ ಆಕ್ಸಿಡೆಂಟುಗಳನ್ನೂ ದೇಹ ಕೊಬ್ಬಿನ ಜೊತೆಯಲ್ಲಿ ಪಡೆಯುವಂತಾಗುತ್ತದೆ. ಒಂದು ವೇಳೆ ಈ ಮಾಹಿತಿ ನಿಮಗೆ ಉಪಯುಕ್ತವೆಂದು ಕಂಡುಬಂದರೆ ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಇದರ ಕೊಂಡಿಯನ್ನು ಹಂಚಿಕೊಳ್ಳುವ ಮೂಲಕ ಹೆಚ್ಚು ಜನರಿಗೆ ಪ್ರಯೋಜನವಾಗಲು ನೆರವಾಗಿ.

English summary

These Are The 8 Health Benefits Of Butter Tea

Butter tea is also known to be high in antioxidants, which will reduce the cell damage and keep you young and healthy from inside out. More and more people are opting for the paleo diet, as you can receive an ample amount of protein and still lose weight.
X
Desktop Bottom Promotion